Wednesday, September 30, 2009

ಒಂದು ಅನೀತಿ ಕತೆ.

ಪ್ರತಿನಿತ್ಯ ಸಾಯಂಕಾಲ,ಸೂರ್ಯ ಮುಳುಗುವುದು ತಪ್ಪಿದರೂ ತಪ್ಪಬಹುದು, ಆದರೆ ಆ ಹತ್ತು ಜನ ಊರ ಹೊರಗಿನ ಗಾಳಿ ಮರದ ಕೆಳಗಡೆ ಸೇರುವುದು ತಪ್ಪುವುದಿಲ್ಲ. ಅಲ್ಲಿ ಕೂತು ಇಡೀ ಪ್ರಪಂಚ ಸುತ್ತಾಡುತ್ತಾರೆ. ಹತ್ತು ಜನರೂ ಏಕಕಾಲಕ್ಕೆ ಹತ್ತು ವಿಷಯಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಯಾರಿಗೂ ತಮ್ಮ ಮಾತುಗಳನ್ನು ಬೇರೆಯವರು ಕೇಳಲೇಬೇಕು ಎಂಬ ಜರೂರತ್ತಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಎಲ್ಲ ಬಡ ಬಡ ಎದ್ದು ಹೊರಡುತ್ತಾರೆ.ಅವರವರ ತಾಪತ್ರಯಗಳು ಮತ್ತೆ ಬೆನ್ನೇರುತ್ತವೆ.
ಆ ದಿನವೂ ಹೀಗೇ ಸೇರಿದವರು ಮಾತಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಅಂದ.”ಅಲ್ಲ..ನಾವು ಯಾರಿಗೂ ಏನೂ ಕೆಟ್ಟದು ಮಾಡಿಲ್ಲ. ನಮ್ ಪಾಡಿಗೆ ನಾವಿದೀವಿ. ಅದ್ರೂ ನಮ್ಮನ್ನ ಪೋಲಿಹುಡುಗ್ರು ಅಂತಾರಲ್ಲ..” ಸಮಾಜದ ಬಗ್ಗೆಯೋ,ಪ್ರಪಂಚದ ಯಾವುದೋ ಸಮಸ್ಯೆಯ ಬಗ್ಗೆಯೋ ಆಗಿದ್ದರೆ ಉಳಿದ ಯಾರಿಗೂ ಇವನ ಮಾತು ಕೇಳುತ್ತಲೇ ಇರಲಿಲ್ಲವೇನೋ! ಅದ್ರೆ ಪೋಲಿಹುಡುಗ್ರು..ಬಹುವಚನ ಪ್ರಯೋಗ..”ಯಾರಯ್ಯ ಹಾಗಂದೋರು?” “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ?” “ಒದಿಯೋದು ಅಂದ್ರೆ ಒದಿಯೋದು ಅಲ್ಲಪ್ಪಾ…” ಏನೋ ವಿವರಣೆ ನೀಡತೊಡಗಿದ. ಇಷ್ಟು ದಿನಗಳಲ್ಲಿ ಎಂದೂ ಕಾಣದಿದ್ದ ಏಕತೆ ಇಂದು ಕಂಡಿತು. “ಅವ್ರು ಹೇಳೋದೆ ಸತ್ಯ ಇರ್ಬಹುದು. ನಾವು ಒಳ್ಳೇರು ಅನ್ನೋದಕ್ಕೆ ಏನ್ರಯ್ಯ ಸಾಕ್ಷಿ ಇದೆ?” ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ?” ಇನ್ಯಾರದೋ ತಕರಾರು. ಎಲ್ಲರೂ ತಾವು ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ಚಿಂತಿಸುತ್ತಾ ಮೌನವಾದರು.ಅವರಿಗೂ ನಿಜವಾಗಿ ಗೊತ್ತಾಗಲಿಲ್ಲ. ಯಾರನ್ನಾದರೂ ಕೇಳುವ ಅಂದರೆ, ಅವರು ನೀವು ಒಳ್ಳೇರಲ್ಲ ಕಣ್ರೋ ಎಂದರೆ?
ಅವರಲ್ಲೇ ಹಿರಿಯವನಾದವನು ಹೇಳಿದ. “ಒಂದ್ಕೆಲ್ಸ ಮಾಡುವಾ. ನಾವೀಗ ಹತ್ ಜನ ಇದೀವಿ. ನಮ್ ಗುಂಪಲ್ಲೇ ನಮ್ ನಮ್ಗೆ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ಸುತ್ತೆ ಅಂತ ಪರೀಕ್ಷೆ ಮಾಡೋಣ. ಒಂದ್ ಚೀಟೀಲಿ ಎಲ್ರೂ ಅವ್ರಿಗೆ ಈ ಗುಂಪಲ್ಲಿ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ನೊದನ್ನು ಬರೀಬೇಕು. ಗುಂಪಲ್ಲಿ ಅವ್ನೂ ಸೇರೋದ್ರಿಂದ ಅವ್ನಿಗೆ ಅವ್ನು ತಾನು ಒಳ್ಳೇನೋ ಒಳ್ಳೇನಲ್ವಾ ಅನ್ನೋದನ್ನೂ ಬರೀಬೇಕು.ಆಯ್ತಾ?” ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು.
ಒಬ್ಬ ಯೋಚಿಸಿದ: “ತಾನು ನಿಜವಾಗಿ ಅಷ್ಟು ಒಳ್ಳೇನಲ್ಲ. ಕೆಲವು ಕೆಟ್ಟ ಗುಣಗಳು ತನ್ನಲ್ಲಿವೆ. ಸರಿ..ಹಾಗಂತ ನನ್ನ ನಾನೇ ಕೆಟ್ಟವ ಅಂತ ಬರೆದ್ರೆ ಸರಿಯಾಗಲ್ಲ. ಆದ್ರಿಂದ ತಾನು ಒಳ್ಳೇನಂತಲೇ ಬರೀಬೇಕು. ಉಳಿದೋರಲ್ಲಿ ಕೆಟ್ ಗುಣಾನೂ ಇದೆ,ಒಳ್ಳೇ ಗುಣಾನೂ ಇದೆ. ಅದ್ರೆ ಅವ್ರನ್ನ ಒಳ್ಳೇರು ಅಂತ ನಾನು ಬರೆದ್ರೆ, ಅವ್ರು ನನ್ನ ಒಳ್ಳೇನು ಅಂತ ಬರೀದಿದ್ರೆ ನಂಗೆ ನನ್ ಓಟು ಮಾತ್ರ.ಒಟ್ಟಲ್ಲಿ ನಾನು ಕೆಟ್ಟೋನು ಅಂತ ಆಗ್ತೀನಲ್ಲ. ಆದ್ರಿಂದ ಅವ್ರೆಲ್ಲ ಕೆಟ್ಟೋರು ಅಂತ ಬರೀತೀನಿ” ಹಾಗೇ ಬರೆದ.
ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು.
ಗುಂಪಿಗೆ ಬಂದ ನೂರು ಓಟಲ್ಲಿ ಹತ್ರಲ್ಲಿ ಮಾತ್ರ ಒಳ್ಳೇರು ಅಂತ, ಉಳಿದ ತೊಂಬತ್ರಲ್ಲಿ ಕೆಟ್ಟೋರು ಅಂತ ಇತ್ತು.
ಎಲ್ರೂ ಬೆಪ್ಪಾಗಿ ಕೂತ್ರು.
(ಈ ಕತೆ ನೀತಿ ಏನು ಅಂತ ನಂಗೊತ್ತಿಲ್ಲ. ಆದ್ರೆ ಗುಂಪಲ್ಲಿ ಸುಮ್ನೆ ನಿಂತು ಮಾತು ಆಲ್ಸಿ. ಏನ್ ನೀತಿ ಅಂತ ನಿಮ್ಗಾದ್ರೂ ಹೊಳೀಬಹುದು.)

Thursday, September 10, 2009

ನಿಜ..ನಿಜ..ನಿಜ..

****ಎಲ್ಲೋ ಕೇಳಿದ ಮಾತು. ನಿಜಕ್ಕೆ ಮೂರು ಮುಖಗಳಂತೆ. ಮೊದಲನೆಯದು ನಾನು ಕಾಣುವ ಮುಖ. ಎರಡನೆಯದು ಉಳಿದವರೆಲ್ಲ ಕಾಣುವ ಮುಖ. ಸಧ್ಯಕ್ಕೆ ಈ ಎರಡು ಮುಖಗಳು ಸಾಕು;ಮೂರನೆಯ ಮುಖ ಆ ಮೇಲೆ ನೋಡೋಣ. ಯಾವುದೇ ಘಟನೆ ಆರಿಸಿಕೊಳ್ಳಿ. ಏನು ನಡೆದಿದೆ ಎಂಬುದರ ಬಗ್ಗೆ ನಿಮ್ಮ ಯೋಚನೆ ಖಚಿತಪಡಿಸಿಕೊಳ್ಳಿ. ಅದೇ ಘಟನೆಯ ಬಗ್ಗೆ ಬೇರೆ ಯಾರದಾದರೂ ಅಭಿಪ್ರಾಯ ಕೇಳಿ. ಒಂದು ಸಣ್ಣ ವ್ಯತ್ಯಾಸವಾದರೂ ಇರುತ್ತದೆ. ಅದು ಹಾಗಲ್ಲ ಮಾರಾಯಾ...ಎಂದು ನೀವು ನಿಜವನ್ನು ಅವನಿಗೆ ತಿಳಿಸಲು ಹೊರಡುತ್ತೀರಿ. ನೀವು ಹೇಳುವುದನ್ನು-ತಾಳ್ಮೆಯಿದ್ದರೆ-ಅವನು ಕೇಳಿ, ಅದು ಹಾಗಲ್ಲ ಮಾರಾಯಾ..ಎಂದು ತನ್ನ ನಿಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ.
****ಉದಾಹರಣೆಗೆ ದೇವರ ಬಗೆಗಿನ ಚರ್ಚೆಯನ್ನೇ ಗಮನಿಸಿ.[ದೇವರನ್ನು ನಾನು ಆರಿಸಿದ ಕಾರಣ ದೇವರು ನನ್ನ ಬಳಿ ಬಂದು ನಿಮ್ಮ ತಕರಾರಿನ ಮಧ್ಯೆ ನನ್ನ ತೂರಿಸಿದ್ದು ಯಾಕೆ ಎಂದು ಕೇಳುವುದಿಲ್ಲ. ಅಕಸ್ಮಾತ್ತಾಗಿ ಹಾಗೆ ಬಂದರೆ ಅನಾಯಾಸವಾಗಿ ದೇವರನ್ನು ಕಂಡಂತಾಯಿತಲ್ಲ!] ಜಗತ್ತಿಗೆಲ್ಲ ದೇವರು ಒಬ್ಬನೇ ಎಂದು ಎಲ್ಲ ಧರ್ಮಗಳೂ ಘೋಷಿಸುತ್ತವೆ. ನಿಜ. ಆದರೆ ಈ ದೇವರು ಯಾರು? ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು, ಕ್ರಿಶ್ಚಿಯನ್ನರಿಗೆ ಕ್ರಿಸ್ತ/ಶಿಲುಬೆ.ನಮ್ಮ ನಿಮ್ಮಂತವರಿಗೆ ಮನೆಯ ಮೂಲೆಯಲ್ಲಿರುವ ತಲೆತಲಾಂತರದಿಂದ ಪೂಜಿಸುತ್ತ ಬಂದಿರುವ ಒಂದಿಷ್ಟು ಮೂರ್ತಿಗಳು. ದೇವರು ಒಂದೇ ಎಂದು ಹೇಳುತ್ತಲೇ ಅವರವರ ದೇವರ ನಿಜದ ಬಗ್ಗೆ ಚರ್ಚೆ, ಯುದ್ಧ, ಹಿಂಸೆ ನಡೆಯುತ್ತೆ. ಹೌದಾ ಅಲ್ಲವಾ ನೀವೇ ಹೇಳಿ.
****ಮತ್ತೆ ನಿಜದ ಮೂರನೆಯ ಮುಖ : ನಾನು ನೋಡಿರದ, ನೀವೂ ನೋಡಿರದ, ಪ್ರಾಯಶಃ ನೋಡಲು ಹಂಬಲಿಸದ ನಿಜವಾದ "ನಿಜ"