Wednesday, August 31, 2016

ಒಂದು ಪದ್ಯ.


ಕುಮಾರವ್ಯಾಸ ಮಹಾಕವಿ ರೂಪಕ ಚಕ್ರವರ್ತಿ.ರೂಪಕ,ಹೋಲಿಕೆಗಳ ಮೂಲಕ ಕಾವ್ಯವನ್ನು ಕಟ್ಟುವ ಅವನ ಸಾಮರ್ಥ್ಯ ಬೆರಗು ಹುಟ್ಟಿಸುತ್ತದೆ.ಕವಿಯೊಬ್ಬನ ಕಾವ್ಯಶಕ್ತಿಯನ್ನು ರೂಪಕ ನಿರ್ಮಾಣದಲ್ಲಿ ಮಾತ್ರ ಅಳೆಯದೆ ರೂಪಕರಹಿತವಾದ,ಹೋಲಿಕೆರಹಿತವಾದ ಚಿತ್ರಣಗಳಲ್ಲೂ ಗಮನಿಸಬೇಕು.ಅಲ್ಲಿ ಯಶಸ್ವಿಯಾಗುವ ಕವಿಯದು ನಿಜವಾದ ಸಾಧನೆ.
ಅಂತಹ ಒಂದು ಪದ್ಯದ ವಿಶ್ಲೇಷಣೆ ಈ ಲೇಖನದ ಆಶಯ.
ದ್ರೋಣ ಪರ್ವ,ಸಂಧಿ ೧೮,ಪದ್ಯ ೩೫
ಮುಂದೆಹೋಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನುನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ
ದ್ರೋಣಪರ್ವದ ಕೊನೆಯ ದಿನದ ಯುದ್ಧದಲ್ಲಿ ಭೀಮಾರ್ಜುನಸಹಿತ ಪಾಂಡವಸೇನೆ ದ್ರೋಣರನ್ನು ಮುತ್ತಿದಾಗ, ದ್ರೋಣರು ಮಾಡಿದ ಯುದ್ಧದ ಪರಿಣಾಮ ಇಲ್ಲಿ ಚಿತ್ರಿತವಾಗಿದೆ.
ಮುಂದೆಹೋಗುವತಿಬಳರು ಹಾರಿತು ಹಿಂದಣವರನು:ಎಲ್ಲರಿಗಿಂತ ಮುಂದೆ ಇದ್ದ ಯೋಧರು ದ್ರೋಣರ ಬಾಣದ ಘಾತದಿಂದ ಪಾರಾಗಲು ಅವರ ಹಿಂದೆ ಬರುತ್ತಿದ್ದವರ ಹಿಂದೆ ಹಾರಿದರು. ಹಾರಿದರು ಎಂಬ ಪದಪ್ರಯೋಗವನ್ನು ಗಮನಿಸಬೇಕು.ಅವರು ನಡೆದು ಅಥವ ಓಡಿ ಹಿಂದಾಗಲಿಲ್ಲ.ಅದಕ್ಕೆ ಅವಕಾಶವಿರಲಿಲ್ಲ.ಆದ್ದರಿಂದ ಹಾರಿ ಹಿಂದೆ ನಿಂತರು.
ಹಿಂದೆ ನಿಲುವರು ಮುಂದಣವರಾಸೆಯಲಿ:ಇಲ್ಲಿಯವರೆಗೂ ಹಿಂದೆ ಇದ್ದವರು ಈಗ ನೋಡಿದರೆ ದ್ರೋಣರ ಎದುರೇ ಬಂದುಬಿಟ್ಟಿದ್ದಾರೆ.ಹಾಗೆ ಮುಂದಾದವರು ಭಯಪಟ್ಟು ತಾವು ಹಿಂದೆ ಹೋದರೆ ಉಳಿಯಬಹುದು ಎಂಬಾಸೆಯಿಂದ ತಮ್ಮ ಹಿಂದೆ ಇದ್ದವರ ಹಿಂದೆ ಹೋಗಿ ನಿಂತರು.
ನಿಂದುದು ಪಾರ್ಥಪರಿಯಂತ: ಹೀಗೆ ಹಿಂದೆ ಹಿಂದೆ ಹೋಗುತ್ತ ಪಾರ್ಥ ನಿಂತಲ್ಲಿಯವರೆಗೂ ಹೋಗಿ,ಅವನ ಹಿಂದೆ ನಿಂತರು.ಹೀಗೆ ಇಡೀ ಸೈನ್ಯ ಪಾರ್ಥನ ಹಿಂದೆ ಅವನ ರಕ್ಷಣೆಯನ್ನು ನಿರೀಕ್ಷಿಸಿ ನಿಂತಿತು.ಆದರೆ...
ಅಂದು ಪಾರ್ಥನು ಕೃಷ್ಣಬಲದಲಿ ನಿಂದನು: ಅವತ್ತು ಪಾರ್ಥನು ಕೃಷ್ಣನ ಬಲವಿರುವ ಕಾರಣದಿಂದ ಅಲ್ಲಿ ನಿಂತನು.ಪಾರ್ಥನೂ ಕೂಡ ದ್ರೋಣರರೆದುರು ನಿಂತಿದ್ದು ಕೃಷ್ಣನ ಬಲದಿಂದ.ಇಲ್ಲವಾದರೆ ಅವನಿಗೂ ನಿಲ್ಲಲು ಆಗುತ್ತಿರಲಿಲ್ಲ.
ಈ ಪದ್ಯದ ಸೂಕ್ಷ್ಮವಾದ ಧ್ವನಿಯನ್ನು ಗುರುತಿಸಬೇಕು.ಪಾಂಡವ ಸೇನೆಯ ಯೋಧರಿಗೆ ಅರ್ಜುನ ತಮಗೆ ಆಶ್ರಯ ನೀಡಬಲ್ಲವ ಎಂಬ ನಂಬಿಕೆ ಇದೆ. ಅದರೆ ಅರ್ಜುನನಿಗೆ ಆ ಶಕ್ತಿ ಇರುವುದು ಕೃಷ್ಣನ ಅಭಯ,ರಕ್ಷಣೆ ಇರುವುದರಿಂದ. ಶಸ್ತ್ರಧಾರಿಗಳಾದವರು ಶಸ್ತ್ರಧಾರಿಯಾದವನ ಎದುರು ನಿಲ್ಲಲಾರದೆ,ಶಸ್ತ್ರವನ್ನು ಹಿಡಿಯದವನ ರಕ್ಷಣೆಯಲ್ಲಿ ನಿಲ್ಲುತ್ತಿದ್ದಾರೆ ಎಂಬುದನ್ನು ಚಿತ್ರಿಸುವ ಮೂಲಕ,ಕುಮಾರವ್ಯಾಸ ಕೃಷ್ಣನ ಸಾಮರ್ಥ್ಯವನ್ನು,ಯುದ್ಧರಂಗದಲ್ಲಿ ನಡೆದ ಸಹಜವಾದ ಒಂದು ಕ್ರಿಯೆಯ ವರ್ಣನೆಯ ಮೂಲಕ ಧ್ವನಿಸುತ್ತಿದ್ದಾನೆ.ಜೊತೆಗೆ ದ್ರೋಣನ ಅವತ್ತಿನ ಶೌರ್ಯ, ಅರ್ಜುನನನ್ನೂ ಸೇರಿದಂತೆ ಪಾಂಡವಸೈನ್ಯದ ಭೀತಿ, ಮತ್ತು ಅರ್ಜುನ ಸಹಿತ ಪಾಂಡವಸೇನೆಗಿರುವ ಕೃಷ್ಣನ ರಕ್ಷಣೆ ಈ ಮೂರೂ ಅಂಶಗಳು ಇಲ್ಲಿ  ವ್ಯಕ್ತವಾಗಿವೆ.ಇಲ್ಲಿ ಕುಮಾರವ್ಯಾಸ ತನ್ನ ಪ್ರಬಲ ಅಸ್ತ್ರವಾದ ರೂಪಕವನ್ನು ಬಳಸಿಲ್ಲ ಎಂಬುದೂ ಗಮನಾರ್ಹ.ಒಂದೂ ರೂಪಕ ಬಳಸದೆ ಆತ ಹುಟ್ಟಿಸುವ ಧ್ವನಿಶಕ್ತಿ ಅಪೂರ್ವವಾದದ್ದು.  

Monday, August 15, 2016

ಸುಪ್ರತೀಕ.


ಸುಪ್ರತೀಕ ಗಜ ಯುದ್ಧಕ್ಕೈದಿದ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.ಆ ಸೊಗಸನ್ನು ಈ ಲೇಖನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.(ದ್ರೋಣ ಪರ್ವ,ಸಂಧಿ-೩)
ಸುಪ್ರತೀಕ ಎಂಬುದು ಭಗದತ್ತನ ಆನೆಯ ಹೆಸರು. ಭಗದತ್ತ ಪ್ರಾಗ್ಜ್ಯೋತಿಷಪುರದ ರಾಜ. ನರಕಾಸುರನ ಮಗ. ಮಹಾಭಾರತದ ಯುದ್ಧದಲ್ಲಿ ಈತ ಕೌರವನ ಪರವಾಗಿದ್ದ.
ಇವನ ಆನೆ ಹೇಗಿತ್ತು ಎಂಬ ಚಿತ್ರಣದೊಂದಿಗೆ ವಿವರಣೆಯನ್ನು ಶುರುಮಾಡಬಹುದು.
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಲ ಕುಲ
ದಿಗಿಭವೆಂಟೊಂದಾಯ್ತೋ ಕೈಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ|| (ದ್ರೋ.ಪ, ಸಂ೩, ಪ-೯)
ಯುದ್ಧಕ್ಕೆ ತಯಾರಾದ ಆನೆ ಹೇಗೆ ಕಾಣುತ್ತಿತ್ತು?
೧]ಜಗತ್ತಿನ ನಿದ್ರೆ ಅಂದರೆ ಪ್ರಳಯವಾಗಿ ಇನ್ನೂ ಯಾವುದೇ ಸೃಷ್ಟಿ ಆಗಿರದಿದ್ದ ಕಾಲ.ಅಂತಹ ಸಮಯದಲ್ಲಿ ದಂಡುಗಟ್ಟಿದ ಮೋಡಗಳಂತೆ.
೨] ಅಷ್ಟದಿಗ್ಗಜಗಳು ಒಂದಾದಂತೆ
(ಐರಾವತ,ಪುಂಡರೀಕ,ವಾಮನ,ಕುಮುದ,ಅಂಜನ,ಪುಷ್ಪದಂತ,ಸಾರ್ವಭೌಮ,ಸುಪ್ರತೀಕ.)
೩] ಆಕಾಶಕ್ಕೆ ಕೈ ಮತ್ತು ಕಾಲು ಹುಟ್ಟಿದಂತೆ.
ಇಲ್ಲಿ ಕುಮಾರವ್ಯಾಸನ ಹೋಲಿಕೆಯ ಶಕ್ತಿಯನ್ನು ಗಮನಿಸಬೇಕು.ಮೊದಲಿಗೆ ಮೋಡದ ಹೋಲಿಕೆ. ಆದರೆ ಮೋಡಕ್ಕೆ ನಿಖರವಾದ ಆಕಾರವಿಲ್ಲ.ಆದ್ದರಿಂದ ಮೋಡ ಮೂರ್ತವಾದ,ನಿಖರ ಆಕಾರವಿರುವ ಆನೆಯನ್ನು ಸಮೀಕರಿಸಲಾರದು ಎಂಬ ಕಾರಣದಿಂದ ಎಂಟು ಆನೆಗಳೂ ಸೇರಿದಂತೆ ಎಂಬ ಮತ್ತೊಂದು ಹೋಲಿಕೆ ಕೊಡುತ್ತಾನೆ. ಈ ಆನೆಗಳು ಒಗ್ಗೂಡಿದರೆ ಬರುವ ಗಾತ್ರ ಸುಪ್ರತೀಕ ಒಂದರಲ್ಲಿಯೇ ಇತ್ತು. ಆದರೆ ಸುಪ್ರತೀಕದ ಗಾತ್ರಕ್ಕೆ ಆ ಹೋಲಿಕೆಯೂ ಸಾಕಾಗದು ಅನಿಸಿ ಆಕಾಶಕ್ಕೆ ಕೈಕಾಲ್ ಮೂಡಿದೆ ಎಂದು ಹೇಳಿದ್ದಾನೆ. ಗಾತ್ರದಲ್ಲಿ ಆಕಾಶವನ್ನು ಮೀರಿಸುವ ಏನೂ ಇರಲು ಸಾಧ್ಯವಿಲ್ಲ.ಈ ಗಜ ಅಂತಹ ಗಾತ್ರವನ್ನು ಹೊಂದಿದೆ.
***ಜಲಪ್ರಳಯ ಕಾಲದ ಮೋಡಕ್ಕೆ ಹೋಲಿಸುವ ಮೂಲಕ ಈ ಗಜ ಮುಂದೆ ಯುದ್ಧದಲ್ಲಿ ಪ್ರಳಯಕಾಲದಲ್ಲಿ ಆಗುವ ನಾಶಕ್ಕೆ ಸಮನಾದುದನ್ನೂ ಮಾಡುತ್ತದೆ ಎಂಬುದೂ ಸೂಚಿತವಾಗುತ್ತದೆ.***
ಇದು ಆನೆಯ ಭೌತಿಕ ರೂಪದ ಚಿತ್ರಣ.ಇಲ್ಲಿ ಆನೆಯ ದೈಹಿಕ ಗಾತ್ರದ ಚಿತ್ರಣ ಮಾತ್ರ ಆಗಿದೆ.ಆದರೆ ಅದರ ಬಲ ಯಾವ ಪ್ರಮಾಣದ್ದು ಎಂಬುದು ಸೂಚಿತವಾಗಿಲ್ಲ.ಎಂಟು ಆನೆಗಳು ಸೇರಿದಂತೆ ಕಾಣುವುದು ಗಾತ್ರಕ್ಕೆ ಮಾತ್ರ ಹೋಲಿಕೆಯಲ್ಲ,ಬಲಕ್ಕೂ ಹೌದು ಎಂಬುದನ್ನು,ಎರಡನೆಯ ಭಾಗದಲ್ಲಿ, ಈ ಬಲ ಉಂಟುಮಾಡಿದ ಪರಿಣಾಮವನ್ನು ಚಿತ್ರಿಸುವ ಮೂಲಕ ವ್ಯಕ್ತಪಡಿಸಿದ್ದಾನೆ.ಪೂರ್ವ ದಿಕ್ಕಿನ ಕಾಲನ್ನು ನೆಲಕ್ಕಿಟ್ಟಾಗ ಅದರ ಪದಹತಿಗೆ ಭೂಮಿ ಪಶ್ಚಿಮದಿಕ್ಕಿನಲ್ಲಿ ಮೇಲೆದ್ದಿತು.(ತಕ್ಕಡಿಯನ್ನು ಕಲ್ಪಿಸಿಕೊಳ್ಳಬಹುದು).ಪಶ್ಚಿಮದಿಕ್ಕಿನ ಪಾದವನ್ನೂರಿದಾಗ ಪೂರ್ವ ದಿಕ್ಕಿನ ಭೂಮಿ ಮೇಲೆದ್ದಿತು.ಒಂದು ಹೆಜ್ಜೆಯನ್ನು ಸುಮ್ಮನೆ ಇಟ್ಟರೆ, ಈ ಆನೆಯನ್ನೂ ಸೇರಿದಂತೆ ಅಪಾರ ಚರಾಚರಗಳನ್ನು ಹೊತ್ತ ಭೂಮಿಯ ಮೇಲೆ ಈ ಪರಿಣಾಮ ಆಗಬೇಕಿದ್ದರೆ ಆ ಬಲ ಯಾವ ಮಟ್ಟದ್ದಿರಬಹುದು ಎಂದು ನಾವು ಊಹಿಸಬಹುದು.
ಇಂತಹ ಆನೆ ಯುದ್ಧಕ್ಕೆ ಹೊರಟಿತು. ಇದರ ಯುದ್ಧ ತುಂಬಾ ಭೀಕರ ವಾದದ್ದು.ಪಾಂಡವಸೇನೆಯಲ್ಲಿ ಯಾರಿಗೂ ಅದನ್ನು ನಿಯಂತ್ರಿಸಲು ಆಗುವುದಿಲ್ಲ.ಭೀಮ ತನ್ನ ಗದೆ ಹಿಡಿದು ಎದುರಾಗುತ್ತಾನೆ. ಆನೆ ಯುದ್ಧ ಮಾಡುವ ಪರಿಯ ವರ್ಣನೆ ನೋಡಿ.
“ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರ
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ || ದ್ರೋ.ಪ,ಸಂ ೩,ಪ-೧೭||
ಶತ್ರುಬಲವನ್ನು ಅರೆಯಿತು.ಸಾವಿನ ಒಡೆಯನಾದ ಯಮನನ್ನು ಸಾಕಿತು.(ಯಮನನ್ನು ಸಾಕುವುದು ಎಂದರೆ ಆತನಿಗೆ ಕೆಲಸ ನೀಡುವುದು.ಅಂದರೆ ಜನರನ್ನು ಕೊಂದು ಆತನ ಆಲಯಕ್ಕೆ ಕಳಿಸುವುದು.)ಮಹಾಸಂಹಾರದ ಮಂತ್ರವನ್ನು ಬರೆಯಿತು. ಯುದ್ಧಕ್ಕೆ ಬರಲು ಒಪ್ಪದ ವೀರರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯಿತು. ಪರಬಲದವರು ಬೆವರಿ ನೆನೆದರು. ಎದುರು ಬಂದ ವೀರರು ದಿಕ್ಕಾಪಾಲಾಗಿ ಓಡಿದರು.ದ್ರುಪದನು ಓಡಿಯೇ ಹೋದ.ಭೀಮ ಪಕ್ಕಕ್ಕೆ ಹಾರಿಕೊಂಡ.ಹಾಗೆ ಮಾಡಲಾಗದೆ ಅದಕ್ಕೆ ಸಿಕ್ಕಿದವರ ದೇಹ ಮತ್ತು ಉಸಿರಿನ ಸಂಬಂಧ ಅಳಿಯಿತು.(“ಹಿಡಿಹಿಡಿಯಲೋಡಿದನು ದ್ರುಪದನು ಸಿಡಿದು ಕೆಲಸಾರಿದನು ಪವನಜನೊಡಲುಸರ ಸಂಬಂಧವಳಿದುದು ಸಿಲುಕಿದನಿಬರಿಗೆ” ಪ-೨೫.)
ಮತ್ತೆ ಭೀಮ ಅದಕ್ಕೆದುರಾಗುತ್ತಾನೆ.ಆನೆಯ ಅಕ್ಕಪಕ್ಕ ,ಹಿಂದೆ ಮುಂದೆ ಸಂಚರಿಸುತ್ತ ಭೀಮ ಅದರ ಜತೆ ಕಾದುತ್ತಾನೆ.ಆಗ ಆನೆಯ ಪ್ರತಿಕ್ರಿಯೆಯ ವರ್ಣನೆ:
“ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡುಹಿಂಗೆ ಲಾಗಿಸುತಿರ್ದುದಾ ದಂತಿ ||ಪ-೩೭||
(ಬಲುಕಣಿ=ಬಲ್ಕಣಿ=ಮಹಾ ಪರಾಕ್ರಮಿ)
ಭೀಮ ಪಕ್ಕಕ್ಕೆ ಬಂದಾಗ ಅವನ ನೆರಳು ಕಂಡು ಅದರ ಅಧಾರದಲ್ಲಿ ಭೀಮ ಎಲ್ಲಿರಬಹುದೆಂದು ಊಹಿಸಿ ಅಪ್ಪಳಿಸುವುದು. ಭೀಮ ಸಿಕ್ಕಬಹುದು ಎಂಬಾಸೆಯಲ್ಲಿ ಸೊಂಡಿಲನ್ನು ತೂಗಾಡಿಸುವುದು.ಹಾಗೆ ಮಾಡಿ ಬಳಲುವುದು. ಮುಖವನ್ನೆತ್ತಿ ಭೀಮನ ಮಾತು ಆಲಿಸುವುದು. ತನಗೆ ಹಾಕಿರುವ ಆಭರಣಗಳನ್ನು ಅಲ್ಲಾಡಿಸದೆ,ಕಿವಿಯನ್ನು ಜೋಲಿಸಿ(ಭೀಮನ ಹಜ್ಜೆಯ ಸದ್ದು ಗ್ರಹಿಸಲು) ಮಹಾಪರಾಕ್ರಮಿಯಾದ ಭೀಮನನ್ನು ಹಿಡಿಯಲು ಯೋಜನೆ ರೂಪಿಸುವುದು.
ರುದ್ರಭೀಕರವಾಗಿ ಯುದ್ಧಪ್ರವೃತ್ತವಾದ ಆನೆಯನ್ನು ಗೆಲ್ಲಲು ಭೀಮನಿಗೂ ಆಗುವುದಿಲ್ಲ. ಪಾಂಡವಸೇನೆ ಪರಾಜಿತಗೊಳ್ಳುತ್ತಿರುವುದನ್ನು ಕಂಡ ಕೃಷ್ಣನು ಅರ್ಜುನನನ್ನು ಭಗದತ್ತನೆದುರು ಕರೆತರುತ್ತಾನೆ.ಭೀಮನ ಯುದ್ಧ ಆನೆಯ ಜೊತೆಯಾದರೆ ಅರ್ಜುನ ಆನೆಯ ಮೇಲೆ ಕುಳಿತಿದ್ದ ಭಗದತ್ತನ ಜೊತೆ ಯುದ್ಧಕ್ಕಿಳಿಯುತ್ತಾನೆ.ಅವರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕಡೆಗೆ ಭಗದತ್ತ, “ಕುಡಿ ಕಿರೀಟಿಯ ರಕುತವನು ಹಗೆ ಕೆಡಲಿ ಕೌರವನಾಳಲಿ ಪೊಡವಿಯನು” ಎಂದು ಘೋಷಿಸಿ ವೈಷ್ಣವಾಸ್ತ್ರವನ್ನು ಪ್ರಯೋಗಿಸುತ್ತಾನೆ.
ಆ ಅಸ್ತ್ರ ಹೇಗಿತ್ತು? “ದಿನಪಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ...(ಪ-೫೫), “ಕಾಳೋರಗನ ಕುಡಿನಾಲಗೆ...(ಪ-೫೬),
ಆಗ ಕೃಷ್ಣನು ಆ ಅಸ್ತ್ರ ಮತ್ತು ಅರ್ಜುನನ ನಡುವೆ ನಿಂತು ತನ್ನ ಎದೆಯೊಡ್ಡಿ ಅಸ್ತ್ರವನ್ನು ಸ್ವೀಕರಿಸುತ್ತಾನೆ. ಅಸ್ತ್ರ “ಕೌಸ್ತುಭದ ಮಣಿ ಮರಿಯನಿಳುಹಿದವೊಲು” ಕೃಷ್ಣನ ಕೊರಳಲ್ಲಿ ತೂಗಾಡುತ್ತದೆ.
ಇಲ್ಲಿಗೆ ಸುಖಾಂತ್ಯವಾಗಬೇಕಿತ್ತು.ಆದರೆ  ಘಟನೆಗಳು ವ್ಯಕ್ತಿಗಳನ್ನು ಪ್ರಚೋದಿಸುವ ಸಾಧ್ಯತೆಗಳು ಅನಂತ.
ಅಂತಹ ಒಂದು ವಿಕ್ಷಿಪ್ತವಾದ ಘಟನೆ ನಡೆಯುತ್ತದೆ.
“ಕೌತುಕವನಿದಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ||(ಸಂ ೩,ಪ-೬೨)
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾ ಎನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ ||ಪ-೬೪||
ಮಹಾಸ್ತ್ರ ಕೌಸ್ತುಭಮಣಿಯ ಮರಿಯಂತೆ ಕೃಷ್ಣನ ಕೊರಳಲ್ಲಿ ಶೋಭಿತವಾದ ಕೌತುಕ ಕಂಡರೂ ಅರ್ಜುನನಿಗೆ ಕೃಷ್ಣ ಹಾಗೆ ಯಾಕೆ ಮಾಡಿದ,ಆ ಅಸ್ತ್ರದ ಶಕ್ತಿ ಎಂಥದು ಎಂಬುದು ಅರ್ಥವಾಗಲಿಲ್ಲ.ಆತನಿಗೆ ದುಗುಡವಾಯಿತು.ಆತ ಯೋಚಿಸಿದ್ದು ಕೃಷ್ಣನಿಗೆ ಸಾರಥಿತನದ ಬಗ್ಗೆ ಆಲಸ್ಯವಾಯಿತೇ ಎಂದು. ಸಾರಥಿಯಾಗಿ ಮಾತ್ರ ನಾನು ಭಾಗವಹಿಸುವೆ ಎಂದ ಕೃಷ್ಣ ಹೀಗೆ ಮಾಡುವುದಾದರೆ ಕೌರವನ ಬಳಿ ಅವನೇ ಯುದ್ಧ ಮಾಡಲಿ, ತಾನವನ ಸಾರಥಿಯಾಗುತ್ತೇನೆ ಎಂದು ಅರ್ಜುನ ಧನುವನ್ನು ಬಿಸಾಡುತ್ತಾನೆ.ನಾನಿನ್ನು ಯುದ್ಧ ಮಾಡುವವನಲ್ಲ,ನೀನೇ ಆಯುಧ ಹಿಡಿ,ತನಗೆ ವಾಘೆಯನ್ನು ಕೊಡು ಎಂದು ಅರ್ಜುನ ಹೇಳುತ್ತಾನೆ.
ಅರ್ಜುನನ ಈ ಪ್ರತಿಕ್ರಿಯೆ ಕುತೂಹಲಕಾರಿಯಾದದ್ದು.ಅವನಿಗೆ ಕೃಷ್ಣನ ಈ ವರ್ತನೆ ಹಿಡಿಸಿಲ್ಲ ಎಂಬುದು ಮೊದಲನೆಯದು. ಹಿಡಿಸದಿರುವ ಕಾರಣ ತನ್ನ ಶೌರ್ಯದ ಬಗ್ಗೆ ಕೃಷ್ಣನಿಗೆ ಅನುಮಾನವಿದೆ ಮತ್ತು ಅವನ ಈ ವರ್ತನೆ ತನಗೆ ಅವಮಾನಕಾರಿಯಾದದ್ದು ಎಂಬ ಭಾವನೆ.(...ವೈರಿಯ ಕೈದುವನು ನೀ ಗೆಲಿದೆಯಿನ್ನುರೆ ಕಾದುವವರಾವಲ್ಲ.....)
ಅರ್ಜುನನ ಸ್ವಾಭಿಮಾನ, ಕೃಷ್ಣ ಹೀಗೆ ಮಾಡಲು ಏನೋ ಕಾರಣವಿರಬೇಕು ಎಂಬುದನ್ನು ಊಹಿಸಲಾರದಷ್ಟು ಪ್ರಬಲವಾಗಿ ಅಹಂಕಾರರೂಪಿಯಾಗಿತ್ತು ಎಂಬುದು ಎರಡನೆಯದು.(ಈ ಯುದ್ಧದಲ್ಲಿ ಕೃಷ್ಣ ತಾನೇ ನೇರವಾಗಿ ಅಸ್ತ್ರದೆದುರು ನಿಂತ ಸಂದರ್ಭ ಇದೊಂದೇ.ಬೇರೆ ಎಲ್ಲ ಸನ್ನಿವೇಶಗಳಲ್ಲೂ ತಂತ್ರ ಮಾಡಿ ಸಮಸ್ಯೆಯನ್ನು ಪರಿಹರಿಸಿದ್ದಾನೆಯೇ ಹೊರತು ನೇರವಾಗಿ ಭಾಗಿಯಾಗಿ ಅಲ್ಲ.ಉದಾಹರಣೆಗೆ ಜಯದ್ರಥ ವಧೆ,ದ್ರೋಣವಧೆ,ಸರ್ಪಾಸ್ತ್ರ ಪ್ರಸಂಗ ಇತ್ಯಾದಿಗಳನ್ನು ಗಮನಿಸಬಹುದು.)
ಆಗ ಕೃಷ್ಣ ಆ ಅಸ್ತ್ರದ ಶಕ್ತಿಯನ್ನು ಅವನಿಗೆ ವಿವರಿಸುತ್ತಾನೆ.ತಾನಲ್ಲದೆ ಬೇರೆ ಯಾರಿಗೂ ಆ ಅಸ್ತ್ರವನ್ನು ನಿಷೇಧಿಸಲು ಆಗದು,ಆ ಕಾರಣದಿಂದ ತಾನು ಹಾಗೆ ಮಾಡಿದ್ದು ಎಂಬ ಅವನ ವಿವರಣೆ ಅರ್ಜುನನಿಗೆ ಸಮಾಧಾನ ನೀಡುತ್ತದೆ.
ಈ ಚಿತ್ರಣ ಆನೆಯ ಯುದ್ಧದ ವೈಖರಿಯ ಚಿತ್ರಣ ಮಾತ್ರವಾಗದೆ, ಮನುಷ್ಯನ ಅಭಿಮಾನ ಅವನ ವಿವೇಕವನ್ನು ಕ್ಷಣಿಕ ಕಾಲವಾದರೂ ಕುಂಠಿತಗೊಳಿಸಬಹುದು ಎಂಬುದರ ಸೂಚಕವಾಗಿದೆ.
***
ಈ ಪ್ರಸಂಗದಲ್ಲಿ ಕುಮಾರವ್ಯಾಸನ ಕಾವ್ಯಶಕ್ತಿ ಪ್ರಕಟವಾದ ಕೆಲವು ಸಾಲುಗಳು:
೧] ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದವು-ಪ ೨೬
೨] ಹಾವಿನ ಕೊಡನು ದೋಷಿಗೆ ಸುಲಭವೇ-- ಪ ೨೮
೩] ಬೆತ್ತ ಬೆಳದದ್ರಿಯವೊಲಿದ್ದುದು ಮತ್ತಗಜ—ಪ ೩೯
೪] ಸದರವೇ ಉರಿಗೆಂಡವೊರಲೆಯ ಬಾಯ್ಗೆ—ಪ ೬೦
೫] ಚಾಪದ ನಾರಿ ಬೆಸಲಾಗಲಿ—ಪ ೭೩
೬] ಅಪರಜಲಧಿಯೊಳುರಿವ ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗ ಮಂಡಲವಿಳಿದುದಂಬರವ—ಪ ೮೦