Friday, December 26, 2008

ದೇವರು ಮತ್ತು ನಂಬಿಕೆ.

ಈ ಕತೆ ಅಪ್ಪ ಹೇಳಿದ್ದು ಅಂತ ನನ್ನ ನೆನಪು. ಪಾಂಡವರು ಜೂಜಿನಲ್ಲಿ ಸೋತು, ಕರಾರಿನ ಪ್ರಕಾರ ವನವಾಸದಲ್ಲಿರುವಾಗ, ಪ್ರತಿದಿನ ಪೂಜೆ ಮಾಡುತ್ತಿದ್ದರಂತೆ. ಈ ಪೂಜಾ ಸಮಯದಲ್ಲಿ ಭೀಮ ಮಾತ್ರ ನಾಪತ್ತೆ. ಭೀಮನ ಈ ಚರ್ಯೆ ಧರ್ಮರಾಯನಿಗೆ ಸರಿ ಕಾಣಿಸದೆ “ನೀನು ಪೂಜೆ ಮಾಡ್ತಾ ಇಲ್ಲ. ಏನೇ ಕಷ್ಟ ಬಂದರೂ ದೇವರ ಮೇಲಿನ ನಂಬಿಕೆ ಬಿಡಬಾರದು, ಪೂಜೇನೂ ಬಿಡ್ಬಾರದು” ಎಂದು ಭೀಮನಿಗೆ ಭರ್ಜರಿ ಉಪದೇಶ ಮಾಡಿದ. “ನಾನೂ ದಿನಾ ಪೂಜೆ ಮಾಡ್ತೀನಲ್ಲ” ಎಂದು ಭೀಮ ಪ್ರತ್ಯುತ್ತರ ಕೊಟ್ಟ. ಉಳಿದೆಲ್ಲ ಪಾಂಡವರಿಗೂ ಎಲಾ! ಅನ್ನಿಸಿತು. “ಎಲ್ಲಿ? ಯಾವಾಗ ನಿನ್ನ ಪೂಜೆ?” ಬನ್ನಿ ತೋರಿಸ್ತೀನಿ ಎಂದು ಭೀಮ ತುಸು ದೂರದಲ್ಲಿದ್ದ ಒಂದು ಮರದ ಹತ್ತಿರ ಅವರನ್ನು ಕರೆದೊಯ್ದ. ಮರದ ಬುಡದಲ್ಲಿ ವಕ್ರ-ಪಕ್ರವಾಗಿದ್ದ ಒಂದು ಕಲ್ಲು. ಅದರ ಮೇಲೆ,ಅತ್ತಿತ್ತ ಒಂದಿಷ್ಟು ಸೊಪ್ಪಿನ ರಾಶಿ. “ನೋಡಿ. ದಿನಾ ಇಲ್ಲಿಗೆ ಬಂದು ಇಲ್ಲಷ್ಟು ಸೊಪ್ಪು ಏರಿಸಿ ಹೋಗ್ತೇನೆ. ಇದೇ ನನ್ನ ಪೂಜೆ.” ಭೀಮ ಹೇಳಿದ್ದು ಕೇಳಿ ಪಾಂಡವರು ಕಂಗಾಲಾದರು. “ ಇದ್ಯಾವ ಸೀಮೆ ಪೂಜೇನೋ? ಒಂದು ಶಿಸ್ತಿಲ್ಲ, ನೀತಿ, ನಿಯಮ ಇಲ್ಲ” ಎಂದು ಧರ್ಮರಾಯ ತಕರಾರು ಮಾಡಿದ. ಉಳಿದವರೂ ತಲೆಯಾಡಿಸಿ ಸಮ್ಮತಿ ಸೂಚಿಸಿದರು. “ನಿಂಗೆ ದೇವರ ಮೇಲೆ ನಂಬ್ಕೇನೇ ಇಲ್ಲ ಅಂತ ಕಾಣುತ್ತೆ” ಅಂತಲೂ ಧರ್ಮರಾಯ ಅಂದ. ಭೀಮನಿಗೆ ಯಥಾಪ್ರಕಾರ ರೇಗಿಹೋಯಿತು. ಕೂಡಲೇ ತನ್ನ ಗದೆ ಮೇಲೆಸೆದು, “ಓ ದೇವರೇ!ನನ್ನ ಪೂಜೆಯ ಬಗ್ಗೆ, ನನ್ನ ಭಕ್ತಿಯ ಬಗ್ಗೆ ನಿನಗೆ ನಂಬಿಕೆಯಿರದಿದ್ದರೆ ಮೇಲೆಸೆದ ಗದೆ ನನ್ನ ತಲೆ ಮೇಲೆ ಬಿದ್ದು ತಲೆಯೊಡೆದು ನಾನು ಸಾಯಲಿ” ಎಂದು ಘೋಷಿಸಿ ಗದೆಯ ಕೆಳಗೆ ನಿಂತ. ಉಳಿದ ಪಾಂಡವರು ದಿಗ್ಭ್ರಮೆಯಾಗುವಂತೆ,ಮೇಲೆಸೆದ ಗದೆ ಕೆಳಕ್ಕೆ ಬರದೆ ಅವನ ತಲೆಯ ಮೇಲೆ ನಿಂತುಬಿಟ್ಟಿತು.
***ಶ್ರೀಶಂ ಅವರ ದೇವರೆಂಬ ದೇವರು ಬ್ಲಾಗ್ ಲೇಖನ ಓದಿ ಈ ಕತೆ ನೆನಪಾಯಿತು. (http://shreeshum.blogspot.com/). ಕತೆಯ ನೀತಿ ನಿಮಗೆ ಹೊಳೆದಷ್ಟು.

Thursday, December 18, 2008

ಇರುವೆ ಮತ್ತು ಇರುವಿಕೆ..

ಮಾಡಲು ಬೇರೇನೂ ತೋಚದಿದ್ದರೆ ಲ್ಯಾಪ್ ಟ್ಯಾಪ್ ಎದಿರು ಕೂತು ಏನಾದರೂ ಬರೆಯಲು ಯತ್ನಿಸುವುದು ಇತ್ತೀಚಿನ ಹವ್ಯಾಸ. ನನ್ನ ಬರವಣಿಗೆಗೆ ಸಮನಾದ ಬರವಣಿಗೆ ಯಾರದ್ದೂ ಇಲ್ಲ ಎಂಬ, ಎಲ್ಲ ಬರಹಗಾರರಿಗೂ ಇರುವ ಹಮ್ಮು ನನಗೂ ಇದೆ. ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಇವತ್ತು ಹಾಗೆ ಟೀಕೆ ಮಾಡೋಣವೇ ಅಥವಾ ಒಂದು ಲೇಖನ ಬರೆಯುವುದೇ ಎಂಬ ಗೊಂದಲದಲ್ಲಿ ಲ್ಯಾಪ್ ಟ್ಯಾಪ್ ನ ಸ್ಕ್ರೀನ್ ನೋಡುತ್ತಾ ಕೂತಿದ್ದೆ. ಪುಟ್ಟದೊಂದು ಇರುವೆ ಅಲ್ಲಿ ಹರಿದಾಡುತ್ತಿತ್ತು. ಮೇಲೆ, ಕೆಳಗೆ, ಹಿಂದೆ ಮುಂದೆ. ಅದರ ಉದ್ದೇಶ ಏನು ಎಂಬುದು ಹೊಳೆಯಲಿಲ್ಲ. ನನಗೆ ತಿಳಿದಂತೆ ಇರುವೆಗಳು ಆಹಾರ ಸಂಗ್ರಹಕ್ಕಾಗಿ ಮಾತ್ರ ಓಡಾಟ ಮಾಡುತ್ತವೆ. ನಮ್ಮ ಹಾಗೆ ಸಿನಿಮಾ ನೋಡಲು, ಪೇಟೆ ತಿರುಗಲು ಅವು ಹೋಗುವುದಿಲ್ಲ ಅಂತ ನನ್ನ ನಂಬಿಕೆ. ಹಾಗಾದರೆ ಇದಕ್ಕೆ ಇಲ್ಲೇನು ಕೆಲಸ? ಹೋಗಲಿ, ತಾನು ಇರುವುದು ಲ್ಯಾಪ್ ಟ್ಯಾಪ್ ನ ಸ್ಕ್ರೀನ್ ಮೇಲೆ ಎಂಬುದಾದರೂ ಇದಕ್ಕೆ ಗೊತ್ತ? ಲ್ಯಾಪ್ ಟ್ಯಾಪ್ ಅಂದರೆ ಗೊತ್ತ? ನನಗೆ ವಿಚಿತ್ರವಾದ ಯೋಚನೆಗಳು ಬರತೊಡಗಿದವು. ಅದೆಲ್ಲ ಹಾಳಾಗಲಿ, ಅದಕ್ಕೆ ತಾನು ಇದ್ದೇನೆ ಎಂಬುದಾದರೂ ಗೊತ್ತ? ತಾನು ಹುಟ್ಟಿದ್ದೇನೆ, ಬದುಕುತ್ತಿದ್ದೇನೆ, ಸಾಯುತ್ತೇನೆ ಎಂಬುದೆಲ್ಲ ಗೊತ್ತ? ಬಹುಷಃ ಮನುಷ್ಯನನ್ನು ಬಿಟ್ಟರೆ, ಬೇರಾವ ಜೀವ ಜಾತಿಗಳೂ ತಮ್ಮ ಹುಟ್ಟು , ಬದುಕು, ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತೋರುತ್ತೆ. ಇವೆಲ್ಲ ಒಂದಕ್ಕೊಂದು ಸಂಬಂಧವಿರುವ, ಆದರೆ ಬೇರೆಬೇರೆಯಾದ ಸ್ಥಿತಿಗಳು ಎಂದು ಅವಕ್ಕೆ ತಿಳಿದಿಲ್ಲವೇನೋ! ಹಾಗಾಗಿ ಅವು ನಿರಾತಂಕದಲ್ಲಿ ಬದುಕುತ್ತವೆ. ನಮಗೋ..ಹುಟ್ಟಿದ ಮೇಲೆ ಬದುಕಬೇಕು ಎಂಬ ಚಿಂತೆ. ಹೀಗೇ ಬದುಕಬೇಕು ಎಂಬ ಚಿಂತೆ. ನನ್ನವರೂ ಹೀಗೇ ಬದುಕಬೇಕು, ನನಗಾಗದವರು ಹಾಗೆ ಬದುಕಬೇಕು ಎಂಬ ಚಿಂತೆ. ಆಮೇಲೆ ಅಯ್ಯೋ ಸಾಯಬೇಕಲ್ಲ ಎಂಬ ಚಿಂತೆ. ಹೇಗೆ ಸಾಯುತ್ತೇವೊ ಎಂಬ ಚಿಂತೆ. ಸತ್ತಮೇಲೆ ಏನಾಗುತ್ತಪ್ಪ ಎಂಬ ಚಿಂತೆ. ನನಗೆ ತಲೆ ಕೆಟ್ಟು ಹೋಯಿತು. ಅಲ್ಲಾ! ಈ ಇರುವೆಯ ಹಾಗೆ ಸುಮ್ಮನೆ ಹುಟ್ಟಿ, ಸುಮ್ಮನೆ ಬದುಕಿ, ಸುಮ್ಮನೆ ಸಾಯಲು ಏನು ಧಾಡಿ? ನನ್ನ ಇರುವಿಕೆಗೂ ಈ ಇರುವೆಗೂ ಯಾಕೆ ವ್ಯತ್ಯಾಸ?

Friday, December 12, 2008

ಸಂತರು ಮತ್ತು ಕಾಡು

**ನನಗೆ ಕುತೂಹಲ. ನಮ್ಮ ದೇಶದ ಎಲ್ಲ ಸಂತರೂ ಯಾಕೆ ತಮ್ಮ ಸಾಧನೆಗೆ ಕಾಡು ಹೊಕ್ಕರು? ಕಾಡಲ್ಲದಿದ್ದರೆ ಹಿಮಾಲಯ. ಒಟ್ಟಿನಲ್ಲಿ ಜನರಿಲ್ಲದ ತಾಣ. ಅಲ್ಲಿ ತಾವಾರಿಸಿಕೊಂಡ ಗುರುಗಳ ಜತೆ ಕೂತು ಏನು ಮಾತಾಡಿರಬಹುದು? ಆ ಗುರುಗಳೂ ಜನರಿಂದ ಕಳಚಿಕೊಳ್ಳಲೆಂದೇ ಅಲ್ಲಿ ಬಂದವರಾದ ಕಾರಣ, ಅವರೂ ಬಹಳ ಮಾತನಾಡಿರಲಿಕ್ಕಿಲ್ಲ. ಅಂದರೆ ಈ ಸಂತರು ತಮ್ಮ ಜತೆಗೆ ತಾವು ಕೂತರು. ಹಾಗೆ ಕೂತು ಸುಮ್ಮನೆ ಪ್ರಕೃತಿಯನ್ನು ಗಮನಿಸಿದರೇ? ಸುಮ್ಮನೆ ಒಂದು ಊಹೆ ಮಾಡುವಾ. ನಾನೊಂದು ಕಡೆ ಒಬ್ಬನೇ ಕೂತಿದ್ದೇನೆ. ಸ್ವಲ್ಪ ದೂರದಲ್ಲಿ ನನ್ನ ಹಾಗೇ ಮತ್ತೊಬ್ಬ ಕೂತಿದ್ದಾನೆ. ನಾನು ಇಲ್ಲಿಂದ ಎಲ್ಲೂ ಹೋಗುವವನಲ್ಲ. ನನ್ನ ಹಾಗೇ ಅವನೂ ಕೂಡ. ಹೀಗೇ ಕೆಲವು ಕಾಲ ಕಳೆದರೆ, ನನಗೂ ತಿಳಿಯದ ಹಾಗೆ ಆ ಮತ್ತೊಬ್ಬನ ಬಗ್ಗೆ ಕುತೂಹಲ ಚಿಗುರುತ್ತದೆ. ತುಸು ಮಾತನಾಡುವಾ ಅನಿಸುತ್ತೆ. ಅವನ ಬಗ್ಗೆ ತಿಳಿವ ತವಕ ಮೂಡುತ್ತದೆ. ಅವನಿಗೂ ಹಾಗೇ ಆಗಿರಬೇಕಲ್ಲ! ಮೊದಲೊಂದು ನಗು. ಅಮೇಲೆ ಪುಟ್ಟ ಪುಟ್ಟ ಪರಿಚಯದ ಮಾತುಗಳು. ಹೀಗೇ ತುಸು ಕಾಲ ಕಳೆದರೆ ನಿಮ್ಮ ಎಲ್ಲ ವಿವರಗಳೂ ಅವನಿಗೆ ತಿಳಿದಿರುತ್ತೆ; ಅವನ ವಿವರಗಳು ನಿಮಗೆ. ಇನ್ನೂ ಕೆಲಕಾಲ ಕಳೆದರೆ ಪರಸ್ಪರ ಆತ್ಮೀಯತೆ. ಬಹುಷಃ ಈ ಸಂತರಿಗೆ ಇದೇ ಆಗಿರಬಹುದೇ? ಪ್ರಕೃತಿಯ ಜತೆ ಮಾತ್ರ ಇದ್ದ ಅವರ ಒಳಗು ಪ್ರಕೃತಿಯೂ, ಪ್ರಕೃತಿಯ ಒಳಗು ಇವರೂ ಆಗಿರಬಹುದೇ? ಬಹುದೇನು.. ನಿಸ್ಸಂಶಯವಾಗಿ ಆಗಿರಲೇಬೇಕು. ಹಾಗಾಗಿ ಅವರು ಸಂತರಾದರು. ಇಡಿಯ ಜಗತ್ತೇ ಅವರಾದರು. ದ್ವೈತ ಅಳಿಯಿತು;ಅದ್ವೈತ ಉಳಿಯಿತು. ಈಗವರಿಗೆ ಬೇರೆಯವರು ಎಂಬುವವರೇ ಇಲ್ಲ. ಅವರೇ ಎಲ್ಲರೂ; ಎಲ್ಲವೂ ಅವರೇ.
**ನನಗೆ ಕುತೂಹಲ. ಪ್ರವಚನ ಕೇಳುವುದರಿಂದ, ಓದುವುದರಿಂದ , ನಾವು ಸಂತರಾಗಲು ಸಾಧ್ಯವೇ? ಪ್ರಕೃತಿಯ ಜತೆ ಮಾತನಾಡಲೆಂದು ಅವರಾರಿಸಿಕೊಂಡ ಮೌನತಾಣದಲ್ಲಿ ಗುಡಿಕಟ್ಟಿ, ಅವರದೇ ಮೂರ್ತಿಯಿಟ್ಟು ಪೂಜೆಮಾಡುವುದರಿಂದ ನಾವು ಬದಲಾಗಲು ಸಾಧ್ಯವೇ? ನಾವೂ ಅವರಂತಾಗಲು ಯತ್ನಿಸುವ ಬದಲು ಯಾಕೆ ನಾವು ಅವರನ್ನ ನಮ್ಮಂತಾಗಿಸಲು ಯತ್ನಿಸುತ್ತೇವೆ? ಅವರು ಬದುಕಿದ ಪರಿಯನ್ನು ಗ್ರಹಿಸಿ, ಅಳವಡಿಸಿಕೊಳ್ಳುವ ಬದಲು ಯಾಕೆ ಅವರ ಸಾಧನೆಯನ್ನು ವೈಭವೀಕರಿಸಲು ಮಾತ್ರ ಬಯಸುತ್ತೇವೆ? ಈ ಸಂತರು ಬದುಕಿದ್ದ ಜಾಗವನ್ನು ಮುಂಚಿನಂತೆಯೇ ಇಟ್ಟು , ಅಲ್ಲಿ ಬರುವವರಿಗೆ ಸಂತರು ಅನುಭವಿಸಿದ ಮೌನದ ಅನುಭವ ಆಗುವಂತೆ ಯಾಕೆ ಮಾಡಬಾರದು?
**ಕತ್ತಲಲ್ಲಿ ಒಬ್ಬರೇ ಕೂತರೆ ದೆವ್ವ ಕಾಣುವಂತೆ, ಒಂಟಿಯಾಗಿ ಮೌನದಲ್ಲಿ ಕೂತರೆ, ಬಹುಷಃ, ನಮಗೆ ಕಾಣುವ ನಾವು ದೆವ್ವ ಅನಿಸಬಹುದು. ನಮ್ಮ ಪ್ರಪಂಚ ಮಾತಲ್ಲಿ ಕಟ್ಟಿದ್ದು. ಮಾತಿನಾಚೆಯ ಮೌನದ ಪ್ರಪಂಚ ನಮಗೆ ಅಪರಿಚಿತವಾದ್ದು. ಹಾಗಾಗಿ ಸಂತರು ಮೌನದಲ್ಲಿ ಕಂಡದ್ದು ನಮಗೆ ಕಾಣುವುದಿಲ್ಲ. ಅವರು ಕಂಡದ್ದು ನಮ್ಮ ಮಾತಿನ ಪ್ರಪಂಚದಲ್ಲಿ ಇದ್ದರೆ ತಾನೇ? ಅವರ ಮೌನವನ್ನು ಮಾತಿನಲ್ಲಿ ಕಟ್ಟಲು ನೋಡುತ್ತೇವೆ. ಮಾತೆಂದರೆ ಭಜನೆ.ಮಂತ್ರ. ತಪಸ್ಸು ನೀಡಿದ ಶಕ್ತಿಯಿಲ್ಲದ ಈ ಎಲ್ಲವೂ ಕೇವಲ ಶಬ್ದಗಳಾಗುತ್ತವೆ. ಅರ್ಥ ಕಳಕೊಂಡ ಶಬ್ದಗಳಲ್ಲಿ ನಮ್ಮ ಬದುಕು ಬದುಕುತ್ತದೆ.
**ಆದರೆ ಇದನ್ನೊಪ್ಪಲು ನಮಗೆ ಮನಸ್ಸಿಲ್ಲ. ಹಾಗಾಗಿ ನಾವು ಹೇಳುತ್ತಿರುವುದನ್ನು ಸಂತರು ಹೇಳಿದ್ದಾರೆ ಎಂದು, ವೇದ , ಉಪನಿಷತ್ ಗಳು ಹೇಳಿವೆ ಎಂದು ಅವುಗಳನ್ನು ಓದದೆಯೂ, ಘೋಷಿಸುತ್ತೇವೆ. ನಿಧಾನವಾಗಿ, ಸಂತರು ಕಂಡಿದ್ದನ್ನು ನಾವು ಕಾಣುವ ಬದಲು, ನಾವು ಕಾಣುತ್ತಿರುವುದೇ ಸಂತರು ಕಂಡಿದ್ದಾಗುತ್ತದೆ. ಸಂತರಿಗೆ ತನ್ನ ಗುಟ್ಟು ಬಿಟ್ಟುಕೊಟ್ಟ ಮೌನದ ಕಾಡಿನಲ್ಲಿ ಗುಡಿ ಏಳುತ್ತದೆ. ಹೊತ್ತುಹೊತ್ತಿಗೆ ಯಂತ್ರ ಬಡಿವ ಗಂಟೆಯ ಸದ್ದು ಕೇಳುತ್ತದೆ. ಬರುವವರ ಅಗತ್ಯದ ನೆವದಲ್ಲಿ ಭೋಜನಶಾಲೆ, ವಸತಿಗೃಹ, ಸ್ವಲ್ಪ ದೂರದಲ್ಲಿ ಹೋಟೆಲು,( ಇನ್ನೂ ಸ್ವಲ್ಪ ದೂರದಲ್ಲಿ ಒಂದು ಬಾರ್ ಕೂಡ?) ನಿರ್ಮಾಣಗೊಳ್ಳುತ್ತವೆ. ಇಲ್ಲಿಗೆ ಬಂದರೆ ಒಳಗಿನ ಗದ್ದಲ ಇನ್ನಿಷ್ಟು ಸೊಕ್ಕುತ್ತದೆ. ನಿಜದ ಬದಲು ನೆರಳೇ ವಿಜೃಂಭಿಸುತ್ತದೆ.
**ನೆರಳನ್ನು ಬಿಟ್ಟು ನಿಜವನ್ನು ಎಲ್ಲಿ ಹುಡುಕುವುದು?

Sunday, December 7, 2008

ಎರಡು ಹಳೆಯ ನೆನಪುಗಳು..

ಘಟನೆ ಒಂದು.
ನೆನಪಿಸಿಕೊಳ್ಳಿ. ಡಿಸೆಂಬರ್ ೨೪, ೧೯೯೯. ನೇಪಾಳದ ಖಟ್ಮಂಡುವಿನಿಂದ ದೆಹಲಿಗೆ ಹೊರಟ, ಸುಮಾರು ೧೫೦ ಪ್ರಯಾಣಿಕರಿದ್ದ ಫ್ಲೈಟ್ ನಂ. ೮೧೪. ಹೊರಟ ಕೆಲವೇ ಕ್ಷಣಗಳಲ್ಲಿ ಈ ವಿಮಾನವನ್ನು ಐವರು ಪಾಕಿಸ್ತಾನೀಯರು ಅಪಹರಿಸಿದರು. ಅವರ ಬೇಡಿಕೆ: ಭಾರತದಲ್ಲಿ ಆಗ ಬಂದಿಗಳಾಗಿದ್ದ ಮೂವರು ಉಗ್ರರನ್ನು ಬಿಡುಗಡೆ ಮಾಡಬೇಕು. ಈ ವಿಮಾನ ಅಮೃತಸರ, ಅಲ್ಲಿಂದ ಲಾಹೋರಿಗೆ ಹೋಯಿತು. ಲಾಹೋರಿನಲ್ಲಿ ಇಳಿಯಲು ಪಾಕಿಸ್ತಾನ ಮೊದಲು ನಿರಾಕರಿಸಿದರೂ, ವಿಮಾನದಲ್ಲಿ ಇಂಧನ ಇರದ ಕಾರಣ ಇಳಿಯಲು ಅನುಮತಿ ನೀಡಲೇಬೇಕಾಯಿತು. ಅಲ್ಲಿಂದ ವಿಮಾನ ದುಬೈಗೆ ಹಾರಿತು. ಅಲ್ಲಿಂದಲೂ ಹಾರಿ ಅಫಘಾನಿಸ್ತಾನದ ಕಂದಹಾರ್ ಸೇರಿತು. ಆಗ ಅಲ್ಲಿ ತಾಲಿಬಾನ್ ಸರ್ಕಾರವಿತ್ತು. ತನ್ನ ಸೈನಿಕರನ್ನು ನುಗ್ಗಿಸುತ್ತೇವೆಂಬ ಭಾರತ ಸರ್ಕಾರದ ಬೇಡಿಕೆಯನ್ನು ತಾಲಿಬಾನ್ ಸರಕಾರ ನಿರಾಕರಿಸಿ, ತನ್ನ ಸೈನಿಕರನ್ನು ಅಲ್ಲಿ ನಿಯೋಜಿಸಿತು. ಹಾಗೆ ನಿಯೋಜಿಸಿದ್ದು ಅಪಹರಣಕಾರರ ರಕ್ಷಣೆಗೆ !
ಇತ್ತ ದೆಹಲಿಯಲ್ಲಿ ಪ್ರಯಾಣಿಕರ ಬಂಧುಗಳು ಪ್ರದರ್ಶನ ನಡೆಸಿದರು. ಇದಕ್ಕೆ ಟಿವಿ ಮಾಧ್ಯಮದವರ ವ್ಯಾಪಕ ಪ್ರಚಾರ. ಎಲ್ಲರ ಬೇಡಿಕೆಯೂ ಒಂದೇ. ಅಪಹರಣಕಾರರು ಕೇಳುವ ಉಗ್ರರನ್ನು ಬಿಡುಗಡೆ ಮಾಡಿ ಪ್ರಯಾಣಿಕರ ಜೀವ ಉಳಿಸಿ. ಸರಕಾರ ಚುರುಕಾಗಿಲ್ಲ ಎಂಬ ಆರೋಪ ಬೇರೆ. ಆಗ ಬಿ.ಜೆ.ಪಿ. ಸರಕಾರವಿತ್ತು. ಎಲ್ಲ ರಾಜಕೀಯ ಪಕ್ಷಗಳೂ ಇಲ್ಲಿ ರಾಜಕೀಯವಾಗಿ ಏನು ಲಾಭವಿದೆ ಎಂದು ಲೆಕ್ಕ ಹಾಕುತ್ತ ಕೂತವು. ಉಗ್ರರನ್ನು ಬಿಡುಗಡೆ ಮಾಡಲು ಉಗ್ರರ ಒತ್ತಡಕ್ಕಿಂತ ಪ್ರಯಾಣಿಕರ ಬಂಧುಗಳ, ರಾಜಕೀಯ ಪಕ್ಷಗಳ, ಒತ್ತಡವೇ ಜಾಸ್ತಿಯಾಯಿತು. ಮಾಧ್ಯಮದ ಅವ್ಯಾಹತ ಟೀಕೆ. ಕೊನೆಗೆ ಖುದ್ದು ಆಗಿನ ವಿದೇಶಾಂಗ ಮಂತ್ರಿಯಾಗಿದ್ದ ಜಸವಂತ್ ಸಿಂಗರು ಈ ಮೂವರು ಉಗ್ರರನ್ನು ಒಪ್ಪಿಸಿ ಪ್ರಯಾಣಿಕರನ್ನು ಉಗ್ರರ ಸೆರೆಯಿಂದ ಬಿಡಿಸಿದರು. ಆ ಕೂಡಲೇ ಉಗ್ರರ ಎದುರು ಸರಕಾರ ಸೋತಿತು ಎಂಬ ದೂಷಣೆ ಶುರುವಾಯಿತು. ನಮ್ಮ ಬಂಧುಗಳು ಮಡಿದರೂ ಸಹಿಸುತ್ತೇವೆ, ಉಗ್ರರನ್ನು ಬಿಡುವುದು ಬೇಡ ಎಂದು ಯಾವುದೇ ಪ್ರದರ್ಶನಕಾರರು ಹೇಳಲಿಲ್ಲ. ಉಗ್ರರನ್ನು ಬಿಟ್ಟರೆ ಮುಂದೇನು ಅಪಾಯವಾಗಬಹುದು ಎಂದು ಯಾವ ರಾಜಕಾರಣಿಯೂ ಎಚ್ಚರಿಸಲಿಲ್ಲ. ಆ ಸನ್ನಿವೇಶದಲ್ಲಿ ಎಲ್ಲರೂ ಕೇವಲ ವೈಯಕ್ತಿಕ ನೆಲೆಯಲ್ಲಿ ಯೋಚಿಸುತ್ತಿದ್ದರು. ದೇಶದ ಅಸ್ತಿತ್ವ ಗೌಣವಾಗಿತ್ತು.( ನಾನೇ ಬಂಧುಗಳಲ್ಲಿ ಒಬ್ಬನಾಗಿದ್ದಿದ್ದರೂ ಬಹುಶಃ ಉಗ್ರರನ್ನು ಬಿಡುವ ಬೇಡಿಕೆಯನ್ನೇ ಇಡುತ್ತಿದ್ದೆನೇನೋ. ಯಾಕೆಂದರೆ ನಮಗೆ ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಹಿತ ಮುಖ್ಯ. ಇಡೀ ಕಾಶ್ಮೀರವೇ ಪಾಕಿಗೆ ಹೋದರೂ ನಮಗೆ ಬೇಸರವಿಲ್ಲ. ನಮ್ಮ ಸೈಟಿನ ಎರಡಡಿ ಜಾಗವನ್ನು ರಸ್ತೆಗಾಗಿ ಸರಕಾರ ವಶಪಡಿಸಿಕೊಂಡರೆ ಅದರ ವಿರುದ್ಧವಾಗಿ ಆ ಕೂಡಲೆ ಒಂದು ತಕರಾರನ್ನು ನ್ಯಾಯಾಲಯದಲ್ಲಿ ದಾಖಲಿಸುತ್ತೇವೆ.)

ಘಟನೆ ಎರಡು.
ರಜಕ್ಕೆಂದು ದೆಹಲಿಯಿಂದ ಊರಿನತ್ತ ರೈಲಿನಲ್ಲಿ ಹೊರಟಿದ್ದೆವು. ಸುಮಾರು ೪೫ ಗಂಟೆಗಳ ಪ್ರಯಾಣ. ರೈಲೇ ಮನೆ.ಸಹಪ್ರಯಾಣಿಕರೇ ಬಂಧುಗಳು. ನನ್ನೆದುರು ಸುಮಾರು ೨೬-೨೭ ವಯಸ್ಸಾಗಿರಬಹುದಾದ ಹುಡುಗನೊಬ್ಬ ಕೂತಿದ್ದ. ಅವನ ದಿರಿಸು ನೋಡಿಯೇ ಸೈನಿಕ ಎಂದು ಊಹಿಸಬಹುದಿತ್ತು. ಅವನ ಮುಖದಲ್ಲಿ ಮ್ಲಾನತೆ. ಆ ಕಡೆಯಿಂದ ವರ್ಷಕ್ಕೊಮ್ಮೆ ಊರಿಗೆ ಬರುವ ಎಲ್ಲರಿಗೂ ಒಂದು ರೀತಿಯ ಸಂಭ್ರಮ ಇರುತ್ತದೆ. ಇವನ ಮ್ಲಾನತೆ ಕಂಡು ನನಗೆ ಕೆಟ್ಟ ಕುತೂಹಲ ಶುರುವಾಯಿತು. ಮಾತನಾಡಿಸಿದೆ. ಮೊದಲು ಹಿಂದಿಯಲ್ಲಿ ಅವನಿಗೆ ಕನ್ನಡ ಬರುತ್ತಾ ಎಂದು ವಿಚಾರಿಸಿದೆ. ಬರುತ್ತೆ. ಅವನು ನಮ್ಮ ಬಳ್ಳಾರಿಯ ಹುಡುಗನೇ. ( ಕರ್ನಾಟಕದಲ್ಲಿಯೇ ಇರುವವರಿಗೆ ಬಳ್ಳಾರಿ ಬೇರೆ ಊರು; ದೆಹಲಿಯಲ್ಲಿ ಇರುವವರಿಗೆ ಕರ್ನಾಟಕದ ಎಲ್ಲ ಊರುಗಳೂ ನಮ್ಮ ಊರು! ವಿದೇಶಕ್ಕೆ ಹೋದವರಿಗೆ ಭಾರತ ನಮ್ಮ ಊರು! ಬಹುಶಃ ಭೂಲೋಕವನ್ನು ಬಿಟ್ಟು ಹೊರಟರೆ ಈ ಭೂಲೋಕವೇ ನಮ್ಮ ಊರಾಗುತ್ತೋ ಏನೋ! )
ಆ ವಯಸ್ಸಿನ ಹುಡುಗರಿಗೆ ಸಹಜವಾಗಿರುವ ಲವಲವಿಕೆ ಅವನಲ್ಲಿ ಕಾಣಲಿಲ್ಲ. ಮಾತನಾಡಲೂ ಅಷ್ಟೇನೂ ಆಸಕ್ತಿಯಿಲ್ಲದವನಂತೆ ಕಂಡ. ನನಗೆ ಅವನ ಈ ಮೌನವನ್ನು ಕೆದಕಲು ಮುಜುಗರವಾಗತೊಡಗಿತು. ಆದರೆ ಕುತೂಹಲ ಬಿಡಲೊಲ್ಲದು. ಚಾಯ್…ಚಾಯ್..ಎಂದು ಕೂಗುತ್ತ ಬಂದವನಿಗೆ ಎರಡು ಟೀ ಕೊಡಲು ಕೇಳಿ ನಿಮಗೊಂದು ಎಂದೆ. ಅವನು ಪುಣ್ಯಕ್ಕೆ ತಗೊಂಡ. ಮಾತು ಶುರುವಾಯಿತು. “ನೀವು ಸೈನ್ಯದಲ್ಲಿದ್ದೀರಾ? ನೋಡಿದರೆ ಹಾಗೆ ಕಾಣುತ್ತೆ.” “ಹೌದು.” “ನನಗೆ ಸೈನಿಕರೆಂದರೆ ತುಂಬ ಗೌರವ.” ಸೈನಿಕರನ್ನು ಗೌರವಿಸುವುದು ಎಂದರೆ ಏನು ಎಂದು ಆ ಕ್ಷಣಕ್ಕೆ ನನಗೂ ಗೊತ್ತಿರಲಿಲ್ಲ. ಅವನು ಏನೂ ಮಾತಾಡಲಿಲ್ಲ. ನನ್ನನ್ನೇ ದಿಟ್ಟಿಸಿದ. ಬಹುಷಃ ನನ್ನ ಮಾತಿನ ನಿಜ ಅಳೆಯುತ್ತಿರಬಹುದು. ಆ ಮಾತು ನಾನು ಆಡಬಾರದಿತ್ತು ಅನಿಸಿ ಮುಜಗರವಾಯಿತು. ಮೌನ ಅಸಹನೀಯವಾಗತೊಡಗಿತು. ಏನಾದರೂ ಮಾತನಾಡಬೇಕು. “ನೀವು ತುಂಬ ಬಳಲಿದಂತೆ ಕಾಣುತ್ತಿದ್ದೀರಿ. ಆರೋಗ್ಯ ಸರಿ ಇಲ್ಲವಾ?” “ಸ್ವಲ್ಪ ಸುಸ್ತಿರಬಹುದು. ಲೇಹ್ ನಿಂದ ಪ್ರಯಾಣ ಶುರುಮಾಡಿದ್ದು.” “ ಓ! ಲೇಹ್! ಹಿಮಾಲಯ! ತುಂಬ ಹಿಮ ಮುಚ್ಚಿರುವ ಊರಂತೆ. ಅಲ್ಲಿಯ ಪರ್ವತ ಸಮೂಹ ನೋಡಲು ತುಂಬ ಮೋಹಕವಂತೆ!” ನಾನು ಉದ್ವೇಗದಿಂದ ಹೇಳಿದೆ. ಒಂದು ವರ್ಷದ ಹಿಂದೆ ಕುಫ್ರಿ ನೋಡಲು ಹೋಗಿದ್ದಾಗ ಆ ಅಭಿಪ್ರಾಯ ಕೇಳಿದ್ದೆ. “ಇರಬಹುದು. ಗಡಿ ಕಾಯುವ, ಪ್ರತಿ ನಿಮಿಷವೂ ವೈರಿಗಳ ಗುಂಡಿನ ದಾಳಿಯ ನಿರೀಕ್ಷೆಯ ಆತಂಕದಲ್ಲಿರುವವರಿಗೆ ಹಿಮಮುಚ್ಚಿದ ಸೌಂದರ್ಯ ಕಾಣುವುದಿಲ್ಲ. ನಮ್ಮ ಕಣ್ಣು ಹುಡುಕುವುದು, ನೋಡುವುದು ಈ ಹಿಮದ ನಡುವೆ ಯಾರಾದರೂ ವೈರಿಗಳ ಚಲನವಲನ ಮಾತ್ರ.” ಎದೆಗೆ ಗುದ್ದಿದಂತಾಯಿತು. ಲೇಹ್ ನ ಮತ್ತೊಂದು ರೂಪವನ್ನು ಅವನು ಪರಿಚಯಿಸುತ್ತಿದ್ದ. ಸಾವರಿಸಿಕೊಂಡು, ಆ ಸುದ್ದಿಯನ್ನೇ ಬಿಟ್ಟು, “ ನಿಮ್ಮ ಊರಲ್ಲಿ ನಿಮ್ಮವರು ಯಾರು ಯಾರು ಇದ್ದಾರೆ?” ಎಂದು ಕೇಳಿದೆ. “ನನ್ನಪ್ಪ ನನಗೆ ನಾಲ್ಕು ವರ್ಷವಾಗಿದ್ದಾಗಲೇ ಹೋದರಂತೆ. ಅಮ್ಮ ಕೂಲಿ ನಾಲಿ ಮಾಡಿ ನನ್ನ ಬೆಳೆಸಿದ್ದು. ಓದು ತಲೆಗೆ ಹತ್ತಲಿಲ್ಲ. ಹಾಗಾಗಿ ಸೈನ್ಯ ಸೇರಿದೆ.” “ಈಗ ಅಮ್ಮನನ್ನು ಕಾಣಲು ಹೋಗುತ್ತಿದ್ದೀರಿ ಅನ್ನಿ. ಅಮ್ಮ ಮದುವೆಗೆಂದು ಒಂದು ಹುಡುಗಿಯನ್ನೂ ನೋಡಿರಬಹುದು.” ಮಾತಿನ ಬಿಗುವನ್ನು ಸಡಿಲಗೊಳಿಸಲೆಂದು ಕೊನೆಯ ವಾಕ್ಯ ಸೇರಿಸಿ ನಕ್ಕೆ. ಅವನ ಮ್ಲಾನತೆ ಹಾಗೇ ಇತ್ತು. “ ಅಮ್ಮ ಒಂದು ತಿಂಗಳ ಹಿಂದೆ ತೀರಿಕೊಂಡಳು. ನನಗಾಗ ಬರಲಾಗಲಿಲ್ಲ. ಸುದ್ದಿಯೂ ತಡವಾಗಿ ಮುಟ್ಟಿತು. ರಜೆ ಕೂಡಾ ಸಿಗಲಿಲ್ಲ. ರಜೆ ಸಿಕ್ಕದ್ದರೂ ತಕ್ಷಣ ಬರೋದಕ್ಕೆ ಆಗ್ತಿರಲಿಲ್ಲ. ಮತ್ತೆ ಊರಲ್ಲಿ ನನ್ನವರು ಯಾರೂ ಇಲ್ಲ. ಅಮ್ಮ ಇದ್ದ ಜಾಗ ಎಂದು ನೋಡಲು ಹೋಗುತ್ತಿದ್ದೇನೆ.” ಅವನ ದನಿಯಲ್ಲಿ ಸಣ್ಣ ಕಂಪನವಿತ್ತು. ಕಿಟಕಿಯ ಹೊರಗಿನ ಬಿರು ಬಿಸಿಲು ನೋಡುತ್ತಾ ಮೌನಿಯಾದ. ಕಣ್ಣಲ್ಲಿ ಹನಿ ಇತ್ತೇ?
ಆ ಕ್ಷಣದಲ್ಲಿ ಇಡೀ ಜೀವನದರ್ಥ ಹಳಿಯ ಮೇಲುರುಳುತ್ತಿದ್ದ ರೈಲಿನ ಚಕ್ರ ಹುಟ್ಟಿಸುತ್ತಿದ್ದ ಗಡಗಡಕ್.. ಗಡಗಡಕ್.. ಸದ್ದಾಗಿಹೋಯಿತು.

Monday, December 1, 2008

ನನ್ನೊಳಗಿಳಿವ ತವಕ

ನಾನು ಒಂಟಿಯಾಗಿಯೇ ಹೊರಟೆ. ಸುಮ್ಮನೆ ಒಂಟಿಯಾಗಿ ಇರಬೇಕು ಎಂಬ ತೀರ್ಮಾನ ಮಾಡಿಯೇ ಹೊರಟಿದ್ದು. ಮಾತುಗಳಿಂದ, ಮಾತು ನಿರ್ಮಿಸಿದ ಶಬ್ದಜಗತ್ತಿನಿಂದ ತುಸು ತಪ್ಪಿಸಿಕೊಳ್ಳುವ ತವಕ. ಮಾತಿನಾಚೆಗೆ, ವಿವರಣೆಗಳಾಚೆಗೆ ಇರುವ ನನ್ನೊಳಗಿಳಿವ ತವಕ. ನನ್ನ ಸುತ್ತ ಮಾತಿರುವಾಗ ಮಾತು ಸೃಸ್ಟಿಸುವ ಜಗತ್ತು ಮಾತ್ರ ನನ್ನ ಸುತ್ತು ಇರುತ್ತದೆ. ಮಾತಿನಾಚೆಯ ಜಗತ್ತು ಇರುವುದು ಮಾತು ಇರದಲ್ಲಿ ತಾನೇ? ಹಾಗಾಗಿ….
** ಹಸಿವಾದರೆ ತಿನ್ನಲೆಂದು ಒಂದೆರಡು ಬಿಸ್ಕಿಟ್ ಪ್ಯಾಕ್, ಕುಡಿಯಲು ಒಂದು ಬಾಟಲು ನೀರು. ಇಷ್ಟು ಮಾತ್ರ ಜೊತೆಗೆ. ಈಗ ಹೊರಟ ಜಾಗಕ್ಕೆ ನಾನು ಇಲ್ಲಿಯವರೆಗೆ ಹೋಗಿಯೂ ಇರಲಿಲ್ಲ. ಅದಕ್ಕೆ ಏನು ಹೆಸರು ಎಂಬುದೂ ಗೊತ್ತಿಲ್ಲ. ದಟ್ಟ ಕಾಡಿನ ನಡುವೆ ಬಸ್ಸು ಸುಮಾರು ದೂರ ಕ್ರಮಿಸಿದ ಮೇಲೆ ನಾನು ಇಲ್ಲಿಯೇ ಇಳೀತೀನಿ ಎಂದು ಕಂಡಕ್ಟರಿಗೆ ಹೇಳಿದೆ. ‘ಇಲ್ಲಿ ಯಾವ ಊರೂ ಇಲ್ವಲ್ಲ. ನೀವು ಇಳಿಯೋ ಊರು ಇನ್ನೂ ಮುಂದಿದೆ.’ ಗೊತ್ತಾಗದೆ ನಾನು ಇಳಿಯುತ್ತಿದ್ದೇನೆ ಎಂದು ಅವನು ಭಾವಿಸಿದ್ದಿರಬೇಕು. ಅವನ ಸರ್ವೀಸಿನಲ್ಲಿಯೇ ಹೀಗೆ ದಟ್ಟ ಕಾಡಿನ ಮಧ್ಯೆ ಯಾರೂ ಇಳಿದಿರಲಿಲ್ಲವೇನೋ! ‘ಇಲ್ಲಿಯೇ ನಾನು ಇಳೀತೀನಿ’. ಮತ್ತೆ ಹೇಳಿದೆ. ಸೀಟಿ ಹೊಡೆದು ಬಸ್ ನಿಲ್ಲಿಸಿದ. ಇಳಿವ ಮುನ್ನ ಬಸ್ ಸಾಯಂಕಾಲ ಆರಕ್ಕೆ ವಾಪಸ್ ಬರುವುದನ್ನು ಕೇಳಿ ಖಚಿತಪಡಿಸಿಕೊಂಡೆ. ಆ ಘಾಟಿಯಲ್ಲಿ ಗೊಂಯ್ಯೋ ಎಂಬ ಬಸ್ಸಿನ ವಿಕಾರವಾದ ಶಬ್ದ ನಿಧಾನ ಕ್ಷೀಣವಾಗುತ್ತಾ ಕಾಡಿನ ಮೌನದಲ್ಲಿ ಹೂತುಹೋಯಿತು. ಒಂದಿಪ್ಪತ್ತು ಅಡಿ ಅಗಲದ ಟಾರೆಲ್ಲ ಕಿತ್ತ ರಸ್ತೆ. ಇಕ್ಕೆಲದಲ್ಲೂ ಭೂತಾಕಾರದ ಮರಗಳು. ಆ ಮರಗಳ ಬುಡದ ಸಂದುಗಳಲ್ಲಿ ಬೆಳೆದಿದ್ದ ದಟ್ಟ ಗಿಡಗಳ ಹಸಿರು. ಹಕ್ಕಿಗಳ ಕೂಗು. ಮಂಗನ ಕೂಗು. ಗಿಡಮರಗಳ ಸಂದಲ್ಲಿ ಚಲಿಸುವ ಗಾಳಿ ಉಂಟುಮಾಡುವ ಸದ್ದು. ಆ ಇಡೀ ಸನ್ನಿವೇಶದಲ್ಲಿ ನಾನು ಅಸಂಗತನಂತೆ ನಿಂತಿದ್ದೆ. ನಾನು ಎಲ್ಲಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ. ಇಂತಲ್ಲಿಗೇ ಹೋಗಬೇಕು ಎಂದು ಹೊರಟವರಿಗೆ ತಾವು ಎಲ್ಲಿದ್ದೇವೆ ಎಂಬುದು ತಿಳಿದಿರಬೇಕು. ಹಾಗೆ ಹೊರಡದ ನಾನು ಎಲ್ಲಿದ್ದರೆ ನನಗೇನು?
**ಕಾಲೇಜು ಹುಡುಗನಂತೆ ಬೆನ್ನಿಗೆ ಚೀಲ ಏರಿಸಿ ಸುಹಾನಾ ಸಫರ್.. ಎಂದು ತುಸು ದೊಡ್ಡದಾಗಿಯೇ ಹಾಡುತ್ತಾ , ಕಡಿದಾದ ಈ ಗುಡ್ಡವನ್ನೇರಲು ಎಲ್ಲಿ ಜಾಗ ಎಂದು ಹುಡುಕುತ್ತಾ ನಡೆಯತೊಡಗಿದೆ. ನನಗೇ ಕೆಟ್ಟದಾಗಿ ಕೇಳಿಸುತ್ತಿದ್ದ ನನ್ನ ಹಾಡುಗಾರಿಕೆ ನಿಲ್ಲಿಸಲಿಲ್ಲ. ಯಾಕೆ ನಿಲ್ಲಿಸಲಿ? ನಾನು ಮತ್ತು ನಾನು ಮಾತ್ರ ಇದ್ದಲ್ಲಿ ಏನು ಹಂಗು? ಈಗ ಏನಾದರೂ ನನ್ನ ಜೊತೆ ನನ್ನ ಪರಮ ಗೆಳೆಯನಿದ್ದಿದ್ದರೂ ‘ನಿನ್ನ ಹಾಡು ನಿಲ್ಲಿಸು ಮಾರಾಯಾ’ ಎಂದು ನಯವಾಗಿಯೋ, ‘ಮುಚ್ಚಯ್ಯಾ ಬಾಯಿ’ ಎಂದು ಗದರಿಸಿಯೋ ನನ್ನ ಹಾಡುಗಾರಿಕೆಗೆ ಕಡಿವಾಣ ಹಾಕುತ್ತಿದ್ದ. ಅಥವಾ ಅವನಿದ್ದಾನೆ ಎಂಬ ಅರಿವು ನನ್ನ ಹಾಡುವ ಆಸೆಗೆ ಕಡಿವಾಣ ಹಾಕುತ್ತಿತ್ತು. ನಿಜವಾದ ಸ್ವಾತಂತ್ರ್ಯ ಇರುವುದು ಒಂಟಿತನದಲ್ಲಿ; ಉಳಿದಂತೆ ಇರಬೇಕಾದದ್ದು ಜವಾಬ್ದಾರಿಸಹಿತ ಸ್ವಾತಂತ್ರ್ಯ.
**ಕಾಡು ಹೊಕ್ಕೆ. ಪೊದೆ, ಗಿಡಗಳ ಸಂದಲ್ಲಿ ಬಾಗುತ್ತ, ಕೆಲವೊಮ್ಮೆ ತೆವಳುತ್ತ ಸ್ವಲ್ಪ ದೂರ ಸಾಗಿ ನಿಂತೆ. ನಾಗರೀಕತೆಯ ಕೊನೆಯ ಸಂಪರ್ಕವಾದ ಟಾರು ರಸ್ತೆಯೂ ಈಗ ಕಾಣುತ್ತಿರಲಿಲ್ಲ. ದೊಡ್ಡದಾದ ಮರದ ಬೇರೊಂದರ ಮೇಲೆ ಕೂತು, ಚೀಲ ಕಳಚಿದೆ. ಒಣಗಿದೆಲೆಗಳ ನಡುವೆ ಹರಿದಾಡುವ ಯಾವುದೋ ಪ್ರಾಣಿ, ಮರದಿಂದ ಮರಕ್ಕೆ ಹಾರುತ್ತಿದ್ದ ಹಕ್ಕಿಗಳು, ಮಂಗ, (ಇದ್ಯಾವುದು ಹೊಸ ಜಾತಿಯ ಮಂಗ ಎಂದು ನನ್ನ ನೋಡಿದವೇ?) ಎಲ್ಲೋ ಕೂಗುತ್ತಿದ್ದ ಹಕ್ಕಿ-ಇವೆಲ್ಲ ಅಲ್ಲಿಯ ದಟ್ಟ ಮೌನವನ್ನು ಕಂಪಿಸುವಂತೆ ಮಾಡುತ್ತಿದ್ದವು. ಮರಕ್ಕೊರಗಿ, ಕಣ್ಮುಚ್ಚಿ, ಈ ಕ್ಷಣವನ್ನು ಗ್ರಹಿಸಲು ಪ್ರಯತ್ನಿಸಿದೆ. ಏನೂ ವಿವರಣೆಗಳನ್ನು ಕೊಟ್ಟುಕೊಳ್ಳದೆ ಸುಮ್ಮನೆ ಒಳಗಾಗಲು ಕಾಯುವುದು. ಏನಿದು? ನನ್ನ ಹೊರಗಿರುವ ಈ ಇಡೀ ಪ್ರಕೃತಿಗೂ ನನಗೂ ಏನು ಸಂಬಂಧ? ನಾನು ಯೋಚಿಸಿದಷ್ಟು, ಊಹಿಸಿದಷ್ಟು ಸಂಬಂಧ ಮಾತ್ರವೇ? ಪ್ರಕೃತಿ ತಣ್ಣಗೆ ತನ್ನ ಪಾಡಿಗೆ ತಾನು ಇತ್ತು. ಅದು ‘ಇರುವುದು’ ನನಗೆ ತಿಳಿದಿರುವಂತೆ ನಾನು ‘ಇರುವುದು’ ಅದಕ್ಕೆ ತಿಳಿದಿದೆಯೇ? ನನಗದನ್ನು ತಿಳಿವ ಕಾತುರ ಇರುವಂತೆ ಅದಕ್ಕೂ ಇದೆಯೇ? ನನ್ನ ಯೋಚನೆಯ ಮೂಲಕ ನಾನು ತಿಳಿದುಕೊಂಡಿದ್ದ ‘ನಾನು’, ಬೇರೆಯವರ ಮಾತಿನ ಮೂಲಕ ನಾನು ತಿಳಿದುಕೊಂಡಿದ್ದ ‘ನಾನು’, ಈ ಪ್ರಕೃತಿಗೆ ಪರಿಚಯ ಇರಲು ಸಾಧ್ಯವೇ ಇರಲಿಲ್ಲ. ನಾನು ಪ್ರಕೃತಿ ನನ್ನಿಂದ ಬೇರೆ ಎಂದು ಭಾವಿಸಿ ಸಂಬಂಧ ಹುಡುಕುತ್ತಿದ್ದೇನೆ. ಕೊಳೆಯುತ್ತಿರುವ ಉದುರಿದ ಎಲೆಗಳು, ಒಣಗುತ್ತಿರುವ ಮರದ ತುಂಡು, ಮರದ ಬೊಡ್ಡೆಯ ಮೇಲೆ ಬೆಳೆಯುತ್ತಿದ್ದ ಸಸ್ಯ, ಮರಕ್ಕಪ್ಪಿಕೊಂಡಿದ್ದ ಹೂ ಬಿಟ್ಟ ಬಳ್ಳಿ, ಇವಕ್ಕಿಂತ ನಾನು ಬೇರೆ ಎಂದು ಪ್ರಕೃತಿ ಗುರುತಿಸುವಂತೆ ತೋರಲಿಲ್ಲ. ಆದರೆ ನಾನು ಇವಲ್ಲ ಎಂದು ಇದಕ್ಕೆ ಹೇಗೆ ಹೇಳಲಿ? ನಾನು ಇವೆಲ್ಲಕ್ಕು ಮೀರಿರುವ ಮನುಷ್ಯ ಎಂದು ಹೇಳಿದರೆ ಅದಕ್ಕೆ ತಿಳಿದೀತೆ? ಪ್ರಕೃತಿಯ ಭಾಷೆಯೇ ಬೇರೆ. ಅದಕ್ಕರ್ಥವಾಗುವ ಭಾಷೆ ಯಾವುದು?
**ವಿವರಣೆಗಳಿಲ್ಲದೆ, ಸುಮ್ಮನೆ ಏನನ್ನೂ ಗ್ರಹಿಸಲು ಯಾಕೆ ಆಗುತ್ತಿಲ್ಲ? ಅನುಭವಗಳು ವಿವರಣೆಗಳಾಗುವ ಬದಲು, ವಿವರಣೆಗಳೇ ಅನುಭವದ ವೇಷ ಧರಿಸಿವೆಯೇ? ಕಾಲ ನಿಂತಂತೆ, ನಿಂತಲ್ಲಿಯೇ ಕಳೆಯುತ್ತಿರುವಂತೆ ತೋರಿತು. ಇಲ್ಲಿ ಬಂದು ದಿನಗಳೆ ಕಳೆದವೇ? ನಾನು ಬೇಕಂತಲೇ ವಾಚ್ ತಂದಿರಲಿಲ್ಲ. ಈಗ ಗಂಟೆ ಎಷ್ಟಿರಬಹುದು? ತಲೆ ಎತ್ತಿ ನೋಡಿದರೆ ವಿಶಾಲವಾದ ಕೊಂಬೆಗಳು ಮಾತ್ರ ಕಂಡವು. ಸೂರ್ಯ ಅದರ ಮೇಲೆ ಎಲ್ಲೋ ಇರಬಹುದು. ಹೀಗೆ ಸೂರ್ಯನನ್ನು ಹುಡುಕದೆ ತುಂಬಾ ದಿನಗಳೇ ಕಳೆದಿದ್ದವು. ಅಗತ್ಯವೇ ಬಂದಿರಲಿಲ್ಲ. ಅಲ್ಲಿಯ ದಟ್ಟ ಮೌನದ ಶಬ್ದ ನನ್ನೊಳಗೆ ಹೊಕ್ಕು ನನ್ನ ಅಲ್ಲಾಡಿಸತೊಡಗಿತು. ಈ ಕಾಡಿನ ದಟ್ಟ ಮೌನ, ಯಾವುದನ್ನೂ ವಿಶೇಷವಾಗಿ ಗುರುತಿಸದ ಅದರ ನಿರಾಸಕ್ತಿ, ಬಗೆದಷ್ಟು ಮಾತ್ರ ದಕ್ಕುವ ಅದರ ಗುಟ್ಟು. ಮಾತಿನಾಚೆಗೆ ನನ್ನ ದೂಡತೊಡಗಿತು. ಮಾತಿನಾಚೆಗೆ ನನಗೆ ನಾನು ಅಪರಿಚಿತನಾಗತೊಡಗಿದ್ದೆ. ನನ್ನ ಅಸ್ತಿತ್ವಕ್ಕೆ ಬೇರೆಯವರ ಮಾತುಗಳೆ ಅನ್ನವೇ? ಮಾತ ಕೇಳುವ, ಮಾತನಾಡುವ ತವಕ ಒತ್ತಿ ಬಂತು. ನಮ್ಮ ಗುರುತೂ ನಮಗಾಗುವುದು ಮಾತಿನ ಮೂಲಕವಾ ಎಂಬ ಅನುಮಾನ ಶುರುವಾಯಿತು. ಛೇ..ಯಾರಾದರೂ ಜೊತೆಗಿರಬೇಕಿತ್ತು ಅನ್ನಿಸತೊಡಗಿತು. ನನ್ನ ಜೊತೆ ನಾನೇ ಇರುವುದು ಹಿಂಸೆ ನೀಡತೊಡಗಿತು. ನಾನು ಇರುವುದನ್ನು ಬೇರೆಯವರು ಗುರುತಿಸದಿದ್ದರೆ ನನ್ನ ಇರುವಿಕೆ ನನಗೂ ತಿಳಿಯುವುದಿಲ್ಲವೇ? ಇನ್ನೂ ಇಲ್ಲೇ ಇದ್ದರೆ ನಿಂತಲ್ಲಿಯೇ ನಾನು ಕಳೆದು ಹೋಗಬಹುದು. ಭಯ. ಆತಂಕ. ತಲ್ಲಣ. ಆ ಟಾರು ರಸ್ತೆ ಸೇರಿದರೆ ಸ್ವಲ್ಪ ನೆಮ್ಮದಿ ಸಿಕ್ಕೀತು. ದೂರದಲ್ಲಿ ಎಲ್ಲೋ ಬಸ್ಸಿನ ಶಬ್ದಮಾಧುರ್ಯ ಕೇಳಿದಂತಾಯಿತು. ಆ ಶಬ್ದಮೂಲದಿಂದ ನನ್ನ ಜಗತ್ತು ಚಿಮ್ಮಬಹುದು. ನಾನು ನನಗೆ ಮತ್ತೆ ಸಿಗಬಹುದು. ಕಾತರದಿಂದ ಎದ್ದು ನಿಂತೆ. ವಾಪಸು ಹೊರಡುವ ಆಸೆ. ಸುತ್ತೆಲ್ಲ ಕಣ್ಣು ಹಾಯಿಸಿದೆ. ಭೂತಾಕಾರದ ಮರಗಳು. ಆ ಮರಗಳ ಬುಡದ ಸಂದುಗಳಲ್ಲಿ ಬೆಳೆದಿದ್ದ ದಟ್ಟ ಗಿಡಗಳ ಹಸಿರು. ಹಕ್ಕಿಗಳ ಕೂಗು. ಮಂಗನ ಕೂಗು. ಗಿಡಮರಗಳ ಸಂದಲ್ಲಿ ಚಲಿಸುವ ಗಾಳಿ ಉಂಟುಮಾಡುವ ಸದ್ದು. ****ಎಲ್ಲಿದ್ದೇನೆ ನಾನು? ನಾನು ಯಾವ ದಿಕ್ಕಿಂದ ಬಂದೆ?

Monday, November 24, 2008

ಹೀಗೇ ಸುಮ್ಮನೆ..

ಹೀಗೇ ಸುಮ್ಮನೆ ಸುರಪುರಕ್ಕೆ ಹೊರಟೆ. ಸುದ್ದಳ್ಳಿ ಈಗ ಸುರಪುರವಾಗಿಬಿಟ್ಟಿದೆ. ಹೆಸರಲ್ಲೂ ಹಳ್ಳಿತನವನ್ನುಳಿಸಿಕೊಂಡಿದ್ದ ಅದಕ್ಕೀಗ ಪುರವಾದ ಭಾಗ್ಯ. ಭರ್ಜರಿ ರೂಪಕವಾಗಿರುವ ಸುರಪುರ ಎಂಬ ಹೆಸರಿಗಿಂತ, ಸುದ್ದಳ್ಳಿ ಎಂಬ ಹೆಸರೇ ನನಗೆ ಹಿತವಾದ ಭಾವಕಂಪನವನ್ನುಂಟುಮಾಡುತ್ತದೆ. ತುಂಬ ವರ್ಷಗಳ ಹಿಂದೆ ಸುದ್ದಳ್ಳಿಗೆ ಹೋಗಿದ್ದೆ. ಯಾಕೆ ಎಂಬುದು ನೆನಪಿಗೆ ಬರುತ್ತಿಲ್ಲ. ಸುದ್ದಳ್ಳಿಗೆ ತಿರುಗುವ ಕ್ರಾಸಲ್ಲಿಳಿದು , ಅಲ್ಲಿಯವರೆಗೂ ನಡೆದಿದ್ದೆ. ಮಣ್ಣಿನ ರಸ್ತೆ. ಗದ್ದೆಗಳು. ಬ್ಯಾಣ. ಹಸಿರು ಹೊದ್ದ ಬೆಟ್ಟ. ಮೇಲಿಂದ ಬೀಳುತ್ತಿದ್ದ ತಣ್ಣನೆಯ ನೀರಿಗೆ ತಲೆ ಕೊಟ್ಟು ಮಿಂದು, ಭಕ್ತಿಯಿಂದ ಓಡಾಡಿ , ಶ್ರೀ ಸ್ವಾಮಿಯವರು ತಪಸ್ಸು ಮಾಡಿದ್ದ ಗುಹೆಯಲ್ಲಿ ಇಣುಕಿ ನೋಡಿದ್ದೆ. ಅಲ್ಲಿ ವರ್ಷಗಟ್ಟಲೆ ಸ್ವಾಮಿಯವರು ತಪಸ್ಸು ಮಾಡುತ್ತಿದ್ದರು ಎಂಬುದನ್ನು ಕೇಳಿ ವಿಸ್ಮಯವಾಗಿತ್ತೇ? ಆ ಗುಹೆಯಲ್ಲಿ ವರ್ಷವಿರಲಿ, ಒಂದು ದಿನ ಕಳೆದರೂ ಯಾರಿಗಾದರೂ ಸ್ವಾಮಿತ್ವ ಬರಬಹುದು ಅನಿಸಿತ್ತೋ ಏನೋ!
ಈಗ ಹೊರಟಿದ್ದು ನನ್ನ ಹಳೆಯ ಸ್ಕೂಟಿಯಲ್ಲಿ. ಆಗ ನಡೆದು ಹೋದಷ್ಟೇ ವೇಗವಾಗಿ ಈಗ ಬಹುಶಃ ನಾನು ಸ್ಕೂಟಿಯಲ್ಲಿ ಹೋಗುತ್ತೇನೆ. ಅದೇ ದಾರಿ. ಈಗ ಟಾರಾಗಿದೆ. ಅಲ್ಲಲ್ಲಿ ಕೀಳುತ್ತಲೂ ಇದೆ. ರಸ್ತೆಯ ಪಕ್ಕದ ಬ್ಯಾಣ, ಗದ್ದೆಗಳೆಲ್ಲ ಸೈಟುಗಳಾಗಿವೆ. ಸೈಟುಗಳಲ್ಲಿ ನಾನಾ ನಮೂನೆಯ ವಿನ್ಯಾಸದ, ಬಣ್ಣದ ಮನೆಗಳು. ಪ್ರತಿ ಮನೆಗೂ ಒಂದು ಚೆಂದದ ಹೆಸರು. ಇದೂ ಈಗ ಪುರವಾಗಿದೆ. (ಹಳ್ಳಿಗಳಲ್ಲಿ ಮನೆಗೆ ಹೆಸರಿರುವುದು ಕಡಿಮೆ. ಮನೆತನದ ಹೆಸರು ಅಥವಾ ಮನೆಯ ಯಜಮಾನನ ಹೆಸರೇ ಮನೆಯ ಹೆಸರು. ಮಠದಭಟ್ರಮನೆ. ಹರಿಭಟ್ರಮನೆ, ಮಂಕಾಳೆ ಮನೆ ಹೀಗೆ. ಪುರಗಳಲ್ಲಿ ಮನೆಯ ಹೆಸರಿಂದ ಯಜಮಾನನಿಗೆ ಗುರುತು. “ಓ! ನೀವು ಜಗತಿ ಮನೆಯವರಾ?” ನನ್ನಿಂದಾಗಿ ಮನೆಗೆ ಅಸ್ತಿತ್ವವಲ್ಲ, ಮನೆಯಿಂದಾಗಿ ನನಗೆ ಅಸ್ತಿತ್ವ.) ಮತ್ತೊಂದು ಬದಿಗೆ ಶಾಲೆ. ಒಂದು ಹಾಸ್ಟೆಲ್. ಕಾಡನ್ನು ಸವರಿ ನಿರ್ಮಿಸಿದ, ಅಲ್ಲಲ್ಲಿ ಪುಟ್ಟಪುಟ್ಟ ಗಿಡಗಳೂ ಇರುವ ಪಾರ್ಕ್. ಅಭಿವೃದ್ಧಿಯ ಸೂಚಕವಾದ ಹೆಲಿಪ್ಯಾಡ್. ಮತ್ತೆ ಊರು. ಮನೆಗೊಂದರಂತೆ ಸಾಲಾಗಿ ಅಂಗಡಿಗಳು. ಈ ಅಂಗಡಿಗಳ ಮುಂದೆ ಒಂದಿಷ್ಟು ಹುಡುಗರು ಗುಟ್ಕಾ ಜಗಿಯುತ್ತಾ, ಕೂತಿರುತ್ತಾರೆ. ಕೈಯಲ್ಲಿ ಮೊಬೈಲ್. ವಯಸ್ಸಾದ ಇವರ ಅಪ್ಪಂದಿರು, ಅಮ್ಮಂದಿರು ಗದ್ದೆಯಲ್ಲಿ ಬೆನ್ನು ಬಗ್ಗಿಸಿದ್ದಾರೆ. ಇದು ಎಲ್ಲ ಹಳ್ಳಿಗಳ ದುರಂತ. ಅಥವಾ ಪ್ರಗತಿ ಅಂತಲೂ ಅನ್ನಬಹುದು. ಇಲ್ಲಿ ತಿರುಗಿದರೆ ಇದೀಗ ಸುದ್ದಳ್ಳಿ, ಕ್ಷಮಿಸಿ, ಸುರಪುರ. ನನ್ನ ಸ್ಕೂಟಿ ೪೫ ಕಿ.ಗ್ರಾಂ. ಇರುವ ನನ್ನ ಭಾರ ಹೊರಲೂ ರಗಳೆ ಮಾಡುತ್ತ, ಕೂಗುತ್ತಾ ಅಂತೂ ಏರು ಹತ್ತಿತು. ನೋಡುತ್ತೇನೆ ಅಲ್ಲೊಂದು ಗೇಟು! ಆ ಗೇಟಿನ ಬಳಿ ಒಬ್ಬ ಮುದಿ ಪೋಲೀಸಪ್ಪ! ಕಳ್ಳರು , ಸುಳ್ಳರು, ಗೂಂಡಾಗಳು ಹಾಗಿರಲಿ, ಬಹುಷಃ ಬಡಕಲು ನಾಯಿಮರಿ ಕೂಡ ಹೆದರದ ಆಳ್ತನ. ಆದರೂ ಪೋಲೀಸರೆಂದರೆ ಪೋಲೀಸರೇ! ನೀವು ಅವರಿಗೆ ಹೆದರಿಯಾದರೂ ಗೌರವ ಕೊಡಬೇಕು! ಗೇಟಿನ ಈ ಕಡೆ ನನ್ನ ಸ್ಕೂಟಿ ನಿಲ್ಲಿಸಿದೆ. “ಸ್ಕೂಟಿ ಒಳಗೆ ಹೋಗುತ್ತೆ ಸಾರ್” ಅಂದ. ನನಗೆ ಖುಷಿಯಾಯಿತು. ಸ್ಕೂಟಿ ಒಳಗೆ ಒಯ್ಯಬಹುದು, ಅದಕ್ಕೂ ಮಿಗಿಲಾಗಿ ನನಗೆ ಸಾರ್ ಎಂದು ಅವನು ಕರೆದನಲ್ಲ! “ಮತ್ಯಾಕೆ ಗೇಟು?” “ ದೊಡ್ಡ ವಾಹನಗಳು ಹೋಗ್ಬಾರದು ಅಂತ.” “ಅವು ಯಾಕೆ ಹೋಗ್ಬಾರ್ದು?” “ ಏನೋ, ಉಗ್ರಗಾಮಿಗಳು ಬಂದ್ರೆ ಅಂತಿರ್ಬಹುದು.” ತಲೆ ಪೂರ್ಣ ಕೆಟ್ಟ ಉಗ್ರಗಾಮಿ ಮಾತ್ರ ಇಲ್ಲಿ ಬಂದಾನು. ತಾನು ಇಲ್ಲಿ ಡ್ಯೂಟಿ ಮಾಡುತ್ತಿರುವುದಕ್ಕೆ ಒಂದು ಗಂಭೀರ ಉದ್ದೇಶ ನೀಡಲು ಇವ್ನೇ ಹಾಗೆ ಆರೋಪಿಸಿರಬಹುದು. ಅರ್ಥವಿಲ್ಲದ ನಮ್ಮ ಎಷ್ಟೊ ಕೆಲಸಗಳಿಗೆ ಗಂಭೀರವಾದ ಹಿನ್ನೆಲೆಯೊಂದನ್ನು ಒದಗಿಸಿಕೊಂಡರೆ ಸ್ವಲ್ಪ ಸಮಾಧಾನ.
ತುಸು ಮುಂದೆ ಹೋದಾಗ ದೊಡ್ಡದೊಂದು ಕಟ್ಟಡ ಕಂಡಿತು. ಎಡಪಕ್ಕದಲ್ಲಿ ಮತ್ತೊಂದು ದೊಡ್ಡ ಕಟ್ಟಡ. ತಲೆ ಎತ್ತಿ ನೋಡಿದರೆ ಅಲ್ಲೂ ಒಂದು ಕಟ್ಟಡ. ಎಲಾ ! ಇದ್ಯಾವ ಊರಪ್ಪ? ಇಲ್ಲೇ ಎಲ್ಲೋ ಸುದ್ದಳ್ಳಿ ಇತ್ತಲ್ಲ! ಎಲ್ಲಿ ಬಂದೆ ನಾನು? ಅತ್ತಿತ್ತ ನೋಡಿದೆ. ಶ್ರೀ ಕ್ಷೇತ್ರ ಸುರಪುರ ಎಂಬ ಫಲಕ ಕಂಡಿತು. ಇಲ್ಲಿ ಉಗಳಬಾರದು, ತಂಬಾಕು ಬಳಕೆ ನಿಷೇಧಿಸಿದೆ, ಚಪ್ಪಲಿ ಇಲ್ಲೇ ಬಿಡಿ , ಕೊಳದಲ್ಲಿ ಬಟ್ಟೆ ತೊಳೆಯಬಾರದು ಇತ್ಯಾದಿ ನಾನಾ ಸೂಚಕಗಳು ಕಂಡು ಇದೇ ಸುದ್ದಳ್ಳಿ ಎಂಬುದು ಖಚಿತವಾಯಿತು. ನಮಗೀಗ ಏನನ್ನಾದರೂ ಮಾಡಲು ಸೂಚನೆ ಬೇಕು, ಮಾಡದಿರಲೂ! ಹಿಂದಿನ ಬಾರಿ ಬಂದಿದ್ದಾಗ ನನ್ನೂ ಸೇರಿದಂತೆ ನಾಕೇ ಜನರಿದ್ದೆವು. ಈ ರೀತಿಯ ಬೋರ್ಡುಗಳಿರಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಹೊಂಡ. ಸುರಿವ ನೀರಿನ ಧಾರೆ. ಸೀದಾ ಕೊಳದ ಹತ್ತಿರ ಹೋಗಿದ್ದೆ. ಮೇಲಿಂದ ಸುರಿಯುತ್ತಿದ್ದ ನೀರಿನ ಧಾರೆಗೆ ತಲೆಯೊಡ್ಡಿ ಮಿಂದಿದ್ದೆ. ಈಗ ಆ ಜಾಗದಲ್ಲಿ ಸಣ್ಣದೊಂದು ಮರೆ ನಿರ್ಮಾಣವಾಗಿತ್ತು. ಅಲ್ಲಿ ಮೀಯಲು ಒಂದು ಕ್ಯೂ ಇತ್ತು. ತರಾವರಿ ವಾಹನಗಳು ನಿಂತಿದ್ದವು. ತರಾವರಿ ಜನಗಳ ಸಮೂಹ. ಹಳೆಯ ಅಜ್ಜಿಯಿಂದ ಹಿಡಿದು ಮೊಳಕಾಲವರೆಗೆ ಮಾತ್ರ ಬರುವ ಬಿಗಿ ಚಡ್ಡಿ ಹಾಕಿದ ನವ ತರುಣಿಯರವರೆಗಿನ ವಿಭಿನ್ನ ಸಂಸ್ಕೃತಿಗಳ ಸಂಗಮ. ಈ ಕಟ್ಟಡದ ಹೊರಗೆ ದೊಡ್ಡದಾದ ಬೋರ್ಡೊಂದರಲ್ಲಿ “ಇಲ್ಲಿ ಸ್ವಾಮಿಗಳ ಪ್ರವಚನ ಪುಸ್ತಕಗಳಿಗೆ, ಭಜನೆಯ ಕ್ಯಸೆಟ್ಗಳಿಗೆ, ಫೋಟೋಗಳಿಗೆ, ತೀರ್ಥಕ್ಕಾಗಿ ವಿಚಾರಿಸಿ” ಎಂದು ಬರೆದಿತ್ತು. ಮತ್ತೊಂದು ಬೋರ್ಡಿನಲ್ಲಿ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂದಿತ್ತು. ಕಳೆದುಹೋದರೆ ಎಂಬ ಭಯದಿಂದ ಚಪ್ಪಲಿಯನ್ನು ಸ್ಕೂಟಿಯ ಬಾಕ್ಸಲ್ಲಿಟ್ಟು ಮೆಟ್ಟಿಲು ಏರತೊಡಗಿದೆ. ವಕ್ರ-ಪಕ್ರವಾಗಿದ್ದ ಮೆಟ್ಟಿಲುಗಳ ಬದಲು ನೀಟಾಗಿ ಸಿಮೆಂಟ್ ಮಾಡಿದ್ದ ಮೆಟ್ಟಿಲುಗಳು. ಎರಡೂ ಪಕ್ಕದಲ್ಲಿ ಕಬ್ಬಿಣದ ಸರಳು. ಹಿಂದಿನ ಬಾರಿಯಂತೆ ಈ ಬಾರಿಯೂ ಒಂದೇ ಬಾರಿ ಪೂರ್ಣ ಹತ್ತಿಬಿಡಬೇಕು ಎಂಬ ಹುಮ್ಮಸ್ಸು, ಒಂದೈವತ್ತು ಮೆಟ್ಟಿಲು ಹತ್ತುವಷ್ಟಕ್ಕೆ ಮಾಯವಾಯಿತು. ಒಂದೇ ಬಾರಿಗೆ ಹತ್ತುವ ಬದಲು ನಿಂತು ಸುತ್ತ-ಮುತ್ತ ನೋಡಿದರೆ ಒಳ್ಳೆಯದು ಎಂದು ಸಮರ್ಥಿಸಿಕೊಂಡೆ. ನನ್ನಂತೆ ಎಲ್ಲರೂ. ದಪ್ಪನೆಯ ಅಜ್ಜಿಯೊಬ್ಬಳು ‘ದೇವರ ದರ್ಶನಕ್ಕೆ ಬನ್ನಿ ಅಂದ್ರೆ ಬರಲ್ಲ. ಇವ್ರಿಗೆ ಯಾವಾಗ ಬುದ್ಧಿ ಬರುತ್ತೋ’ ಎಂದು ಗೊಣಗುಟ್ಟುತ್ತಾ ಬಂದಳು. ಬರದವ ಗಂಡನೇ ಇರಬೇಕು! ಸ್ವಲ್ಪ ಶಾಂತಿ ಬಯಸಿ ಆತ ಕೆಳಗೇ ಉಳಿದಿರಬಹುದು! ಹುಡುಗಿಯರಿಬ್ಬರು ಯಾವುದೋ ನಟನನ್ನು ಪ್ರಶಂಸಿಸುತ್ತಾ ಬಂದರು. ನಾನೂ ಮತ್ತೆ ಹತ್ತಲು ಶುರು ಮಾಡಿದೆ. ಅಂತೂ ಗುಡಿ ತಲುಪಿದೆ. ದೇವರ ದರ್ಶನ ನಿಜವಾಗಿಯೂ ಕಷ್ಟಸಾಧ್ಯ. ಮತ್ತೆ ಬೋರ್ಡು. “ಪುರುಷರು ಅಂಗಿಯನ್ನು ಕಳಚಿ ಒಳಬರಬೇಕು.” ಪುಣ್ಯ! ಬರೀ ‘ಅಂಗಿ’ ಅಂತ ಇರಲಿಲ್ಲ. ಇದ್ದಿದ್ದರೆ ಪ್ಯಾಂಟ್ ಟೀ ಶರ್ಟ್ ಹಾಕಿದ್ದ ಹುಡುಗಿಯರಿಗೆ ಪ್ರವೇಶವೇ ಇರಲಿಲ್ಲ. ಯಾಕೀ ನಿಯಮ ಎಂಬುದು ನನಗೆ ಅರ್ಥವಾಗಿಲ್ಲ. ಅಂಗಿ ಹಾಕಿದ್ದರೆ ಭಕ್ತಿ ಬರಲ್ಲವೇ? ದೇವರಿಗೂ ಅಂಗಿಗೂ ವೈರವೇ? ನನ್ನ ಹಿಂದೆ ಬಂದ ಕರಿಯ ಟೊಣಪನೊಬ್ಬ ಬಡಬಡ ಅಂಗಿ ಬಿಚ್ಚಿ ಒಳನುಗ್ಗಿ ಉದ್ದಕ್ಕೆ ಮಲಗಿ ನಮಸ್ಕರಿಸಿದ. ಅವನ ಜನಿವಾರ ಕಪ್ಪುಬಣ್ಣಕ್ಕೆ ತಿರುಗಿತ್ತು. ಕಪ್ಪು ದಾರದಿಂದಲೇ ಮಾಡಿದಂತಿದ್ದ ಜನಿವಾರ. ಆ ಕ್ಷಣದಲ್ಲಿ ನನಗದು ಭಾರತದ ಧಾರ್ಮಿಕತೆಗೆ ಸಂಕೇತದಂತೆ ಕಂಡಿತು. ಹಿಂದಿನ ಸಾರಿ ಬಂದಿದ್ದಾಗ ಈ ಕಟ್ಟಡ ಇರಲಿಲ್ಲ. ಇಲ್ಲೆಲ್ಲೋ ಸ್ವಾಮಿಗಳು ತಪಸ್ಸು ಮಾಡಿದ ಗುಹೆ ಇತ್ತಲ್ಲ.. ಪಕ್ಕವೇ ಕಂಡಿತು. ಇಬ್ಬರು ಅದರ ಮುಂದೆ ಕೂತು ಧ್ಯಾನವಶರಾಗಿದ್ದರು. ನಾನು ಇಣುಕಿ ನೋಡಿದೆ. ಒಂದು ಪೋಟೋ. ನೀಟಾಗಿ ಸಿಮೆಂಟ್ ಮಾಡಿದ ನೆಲ. ಅಲ್ಲಿ ಮುಂಚೆ ಸಿಮೆಂಟ್ ಇರಲಿಲ್ಲ. ಅದರೊಳಗೆ ಕೂತು ವರ್ಷಗಟ್ಟಲೇ ತಪಸ್ಸು ಮಾಡಿರುವ ಸ್ವಾಮಿಗಳ ಬಗ್ಗೆ ಗೌರವ ಉಕ್ಕಿತು. ಏನೇನೂ ಇರದಿದ್ದ ಇಲ್ಲಿಗೆ ಬಂದು ಕೂರಲು ಏನು ಕಾರಣವಿರಬಹುದು? ಜಗತ್ತಿನ ಬಗ್ಗೆ ನಿರಾಸಕ್ತಿ? ಅಥವಾ ತನ್ನ ತಾನು ತಿಳಿಯುವ ಕುತೂಹಲ? ಪಕ್ಕ ನಿಂತಿದ್ದ ಬಿಳಿಯ ಪಂಚೆ ಉಟ್ಟು ಬಿಳಿಯ ಶಲ್ಯ ಹೊದ್ದಿದ್ದ ಹುಡುಗನನ್ನು ಕೇಳಿದೆ. ಪಿಳಿಪಿಳಿ ಕಣ್ಣುಬಿಡುತ್ತಾ ನನ್ನನ್ನು ನೋಡಿದ. ಅವನಿಗೇನು ಗೊತ್ತು? ಅವನು ಅಲ್ಲಿ ಸಂಸ್ಕೃತ, ವೇದ ಕಲಿಯಲು ಬಂದವ. ಪಕ್ಕದಲ್ಲಿ ನಿಂತ ತುಸು ವಯಸ್ಸಾದವರು ‘ದೇವರ ಪ್ರೇರಣೆಯಿಂದ’ ಅಂದರು.
ನನಗದರಲ್ಲಿ ನಂಬಿಕೆ ಬರಲಿಲ್ಲ. ಈಗಿನ ಇರುವಿಕೆಯ ಬಗೆಗಿನ ಅತೃಪ್ತಿ, ಜೊತೆಗೇ ತನ್ನನ್ನು ತಾನು ಅರಿಯುವ ಹಂಬಲ ಆ ಪ್ರೇರಣೆ ಇರಬಹುದು ಎಂಬ ಅನುಮಾನ ನನಗೆ. ನಾವೇ ಹಾಗೆ. ದೊಡ್ಡವರು ನಡೆದ ಹಾದಿಯ ಬಗ್ಗೆ ಚಿಂತಿಸದೆ, ಅವರ ಸಾಧನೆಯನ್ನು ಭಜಿಸುತ್ತಾ, ಅವರ ಫೋಟೋ ಪೂಜಿಸುವ ಮಿತಿಗಿಳಿಯುತ್ತೇವೆ.
ನಾನು ಹೊರಡುವಾಗ ಅಲ್ಲಿಂದ ತೀರ್ಥ ತನ್ನಿ ಎಂದು ನನ್ನಾಕೆ ಹೇಳಿದ್ದಳು. ಅಲ್ಲಿ ವಿಚಾರಿಸಿದೆ. ಒಂದು ಬಾಟಲಿಗೆ ಇಪ್ಪತ್ತು ರೂ. ತೆತ್ತೆ. ವಿಚಿತ್ರ. ಎಲ್ಲಿಂದಲೋ ಹರಿದು ಬರುವ ನೀರು. ಯಾರೋ ಎಲ್ಲ ಲೌಕಿಕ ಸುಖಗಳನ್ನು ತ್ಯಜಿಸಿ , ಇಲ್ಲಿ ಬಂದು ಇದಕ್ಕೊಂದು ಅಲೌಕಿಕತೆ ಇತ್ತರು. ಏನೇನೂ ಪ್ರಯತ್ನ ಪಡದವರು ಇದನ್ನು ಇಪ್ಪತ್ತು ರೂ.ಗೆ ಮಾರುತ್ತಾ ವ್ಯವಹಾರ ನಡೆಸುತ್ತಾರೆ. ಸ್ವಾಮಿಗಳೇ ಇದ್ದಿದ್ದರೆ ಇದನ್ನು ಒಪ್ಪುತ್ತಿದ್ದರಾ? ನನಗನುಮಾನ. ನೀರಿನ ,ಅಲ್ಲ, ತೀರ್ಥದ ಬಾಟಲಿ ಕೈಯಲ್ಲಿ ಹಿಡಿದು ಗುಡಿಯ ಪಕ್ಕದ ಕಾಲು ದಾರಿಯಲ್ಲಿ ಕಾಡಿನತ್ತ ಹೊರಟೆ. ಕಡಿದಾದ ದಾರಿ. ಇಲ್ಲಿ ಮೆಟ್ಟಲಿಲ್ಲ. ದಟ್ಟ ನೆರಳು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಲು ದಾರಿಯೂ ಮಾಯವಾಯಿತು. ಈಗ ನಡೆದದ್ದೇ ದಾರಿ. ಹಾಗೇ ಮರಕ್ಕೊರಗಿ ಕೂತೆ. ಮೌನ. ಮೌನವೆಂದರೆ ಮಾನವಜನ್ಯ ಸದ್ದುಗಳಿಲ್ಲ. ಪ್ರಕೃತಿ ಎಲೆಗಳ ಅಲ್ಲಾಟದಲ್ಲಿ, ಹಕ್ಕಿಗಳ ಕೂಗಲ್ಲಿ, ಮಾತಾಡುತ್ತಿತ್ತು. ಪ್ರಕೃತಿಯ ಈ ಮಾತನ್ನರಿಯಲು ನಮಗೆ ಸಿದ್ಧಿಯಾಗಿರಬೇಕು. ಸಾಧನೆ ಬೇಕು. ಮಾತುಗಳಿಗಿರುವಂತೆ ಇಲ್ಲಿ ಅರ್ಥಪರಂಪರೆ ಇಲ್ಲ. ನಾವು ಗ್ರಹಿಸಿದಂತೆ ಅರ್ಥ;ಗ್ರಹಿಸಿದಷ್ಟು ಅರ್ಥ. ಇದೇ ಹಿತ ಅನಿಸಿತು. ಗಂಟೆ, ಮಂತ್ರ, ಭಜನೆ ಎಲ್ಲಕ್ಕೂ ಅತೀತವಾದ ಏನೋ ಒಂದು ನನ್ನ ಸುತ್ತಲೂ ಇತ್ತು. ಮುಂಚೆ ಹೊರಗೆಲ್ಲೋ ಕೇಳಿದ ಹಕ್ಕಿಯ ಕೂಗು ನಿಧಾನವಾಗಿ ನನ್ನೊಳಗಿಂದಲೇ ಬರುತ್ತಿರುವ ಅನುಭವ. ಮಂಪರು? ನಿದ್ದೆ? ಹಾಗಿರುತ್ತಾ ಎಷ್ಟು ಹೊತ್ತಾಗಿತ್ತೋ! ಯಾರೋ ವಯಸ್ಸಾದವರು-ನನ್ನ ಹಾಗೆಯೇ ಬಂದವರಿರಬಹುದು-“ಇಲ್ಲಿ ಕಾಡು ಕೋಣದ ಕಾಟ ಜಾಸ್ತಿ,ಹುಷಾರು” ಅಂದರು. ಆ ಕ್ಷಣದಲ್ಲಿ ಮತ್ತೆ ನನ್ನ ಹಿಂದಿನ ಜಗತ್ತು ಪ್ರತ್ಯಕ್ಷವಾಯಿತು. ಭಯವಾಗಿ ಎದ್ದು ಇಳಿಯತೊಡಗಿದೆ. ಕೆಳಗೆ ಜನರ ಗದ್ದಲ ನಡೆದೇ ಇತ್ತು. ಬಂದವರಿಗೆ ಬಂದ ಸಂಭ್ರಮ. ಹೊರಟವರಿಗೆ ಹೊರಟ ಸಂಭ್ರಮ. ಅಲ್ಲಿಯೇ ಇರುವವರು ಮಾತ್ರ ಯಾವಾಗಿನಿಂದಲೂ ಹಾಗೇ ಇರುವಂತೆ ಕಂಡಿತು.

Thursday, November 13, 2008

ಮಾತಿನಾಟ

ಮಾತಿನಾಟ

ನೀವು ಕೇಳುವಿರೆಂದು ಮಾತನಾಡಿದೆ ನಾನು
ಎಷ್ಟಿತ್ತು ಅವಕೆ ಅರ್ಥ?
ಇನ್ನು ಮಾತನಾಡುವುದಿಲ್ಲ. ಮಾತೇ ಆಡುತಿರಬೇಕು
ಆಡದಿರೆ ಬರಿಯ ಶಬ್ದಛತ್ರ!

ನಾನು ಆಡುವ ಮಾತು ನಿಮ್ಮಲ್ಲಿ ಮಿನುಗಿದರೆ
ಮಾತಿಗುಳಿದಂತೆ ರೇವು.
ದನಿ ಮರಳಿ ಮತ್ತೆ ನನ್ನನ್ನೇ ಸೇರಿದರೆ
ಅದು ನನ್ನ ಮಾತಿನ ಸಾವು!

ಹೊಳೆದ ಮಾತುಗಳೆಲ್ಲ ಹೊಳೆವ ಮಾತುಗಳಲ್ಲ
ಮಾತಾಗುತಿರಲಿ ರೇಕು!
ಹದ ಮೌನದಲ್ಲಿ ಹೂತ ಮಾತುಗಳೆಲ್ಲ
ಸಹಜ ಚಿಗುರಿದರೆ ಸಾಕು.

Monday, October 20, 2008

ಲೂಸ್ಪದ್ಯ ೪-೫.

ಮಂತ್ರಿಪತ್ನಿಯ ಕೊರಳಲ್ಲಿ ಪರಿಪರಿಯ ಹಾರ - ಬರದ ಪರಿಹಾರ .ರೈತರೊಡಲಲ್ಲಿ ಹಾ .. ಹಾ...ಖಾರ !--ಬರದ ಪರಿಹಾರ !೨.ಕುಡಿದು ನಶೆಯೇರಿ ಗಂಡ ತೂರಾಡುತ ಮನೆಗೆ ಬರಲುಸಿಟ್ಟಲಿ ಹೆಂಡತಿ ಕೈಯಲಿ ಹಿಡಿದಳು ಹಳೆಯದೊಂದು ಬರಲು !

Wednesday, September 24, 2008

ಲೂಸ್ಪದ್ಯ ೨ --೩


ಹುಡುಗ ಹೇಳಿದನು ಮಾತಲ್ಲಿ ಮಧು ತುಂಬಿ
ಹುಡುಗೀ ನಾ ನಿನ್ನ ನಲ್ಲ!.. ನಲ್ಲ!!
ಹುಡುಗಿ ಹೇಳಿದಳು ಕಣ್ಣಂಚಲ್ಲಿ ನಗೆ ಚೆಲ್ಲಿ
ಹುಡುಗಾ ನೀ ನನ್ನ ನಲ್ಲನಲ್ಲ !!

ಭಟ್ಟರ ಮಂತ್ರವು ಕೇಳಿತು ಮೈಕಲಿ ಚೌತಿಯ ದಿನದಂದು.
ಗಣೇಶಾಏನ್ಮಹಾ..ವಿನಾಯಕಾಏನ್ಮಹಾ..ಗಜಾನನಾಏನ್ಮಹಾ
ಕೇಳಿದ ಗಣಪನು ಮೌನದಿ ಕೂತನು ಅರ್ಥವು ಇದಕೇನೆಂದು.!

Tuesday, September 23, 2008

ಸಾವೆಂಬುದು

ನಮಗುಳಿಯುವುದು ಅಗ್ನಿಯುಂಡುಳಿವ ಉಚ್ಚಿಷ್ಟ ಬೂದಿ.
ಸತ್ತವಗೆ ತೆರೆದುಕೊಳ್ಳುವುದು ಊರ್ಧ್ವಲೋಕದ ಹಾದಿ.

ಲೂಸ್ಪದ್ಯ

ಮದುವೆಗೆ ಮೊದಲು ಕನಸನು ಕಾಣುತ
ಕೈ ಕೈ ಹಿಡಿದು ನಡೆದಾಡುವ ಜೋಡಿ!
ಮುಗಿಯಿತು ಮದುವೆ ಕಳೆಯಿತು ವರುಷ
ಕೈ ಕೈ ಹಿಡಿದರು ಹೊಡೆದಾಡಲು ನೋಡಿ!

Thursday, September 11, 2008

ಮಾತು ಮುತ್ತು.


ಆನೆಗೆ ನಡೆದದ್ದೇ ದಾರಿ . ಇರುವೆಗೂ ಕೂಡ..

ಪಾಪ ಕಳೆವಾತುರದಿ ಭಕ್ತ ಜನ ಗುಡಿಯಲ್ಲಿ ! ಲಕ್ಷ್ಮಿ ಕುಣಿಯುತ್ತಾಳೆ ಅರ್ಚಕರ ಮನೆಯಲ್ಲಿ !

ರಾತ್ರಿ ಕಳೆಯಿತು. ಚಂದ್ರ ತೆರಳಿದ. ವಿರಹ ನಿಶೆಗೆ .
ಉಮ್ಮಳದ ಅವಳ ಕಂಬನಿ.
ಇಬ್ಬನಿ !

ಸೂರ್ಯ ಮುಳುಗಿದ.
ಸಿಟ್ಟಲ್ಲಿ ಸಂಧ್ಯೆ ಎಸೆದಳು ಮಲ್ಲಿಗೆಯ ಮಾಲೆ !
ನಭದ ತುಂಬೆಲ್ಲ ಮಿನುಗು ತಾರೆ !

ಕೊರಡೊಣಗಿದರೆ ಕಿಡಿಯೊಂದೇ ಸಾಕದರ
ದಹಿಸಲಿಕೆ !
ಹಸಿ ಕಾಷ್ಠ . ಅಗ್ನಿಯೂ ಭಗ್ನ. ಮಾಯವಾಗುವನು
ಧೂಮದೊಳಗೆ !

Sunday, September 7, 2008

ಕಾವ್ಯ ಹುಟ್ಟುವುದೇ ಹೀಗೆ ....

ಮನಸ್ಸಿನಾಗಸದಲ್ಲಿ ಭಾವಗಳು ಮಿಂಚಾಗಿ ಮಾತು ಹೊಳೆಯುವುದು ರನ್ನದಂತೆ .
ಭಾನುವಿನ ಬೆಳಕಲ್ಲಿ ಉಕ್ಕುವನು ಚಂದಿರನು ಮಾತು ಅರಳುವುದು ಆಗ ಜೊನ್ನದಂತೆ !
ಕವನ ಬೆಳೆಯುವುದು ಭಾಷೆಯೊಡಲೊಳಗೆ ಅದಕನ್ನ ನನ್ನ ಭಾವದ ರಕ್ತಮಾಂಸ .
ಹೊಕ್ಕುಳಿನ ಬಳ್ಳಿ ಕತ್ತರಿಸದಿರೆ ಎಲ್ಲ ಜೀವಕ್ಕೂ ಸಾವು ಕವನಕ್ಕೂ ಬೇಕದರ ತಾವು !
ಕವನ ಮಾತಾಡುವುದಿನ್ನೆನ್ನ ದನಿಯಾಗಿ ನಾನು ಹೊಗುವೆನು ಮತ್ತೆ ಮೌನದೊಳಗೆ
ಪಟ್ಟ ಪಾಡುಗಳೆಲ್ಲ ಎಂದು ಹಾಡಾಗುವುವು? ಕಾಯುವೆನು ನಾನು ನನ್ನ ಜೊತೆಗೆ!