Monday, February 21, 2011

ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ. (ಕಂತು-೨)ಈಗ ಕರ್ಣಭೇದನದ ಪ್ರಸಂಗವನ್ನು ವಿಶ್ಲೇಷಿಸುವಾ. ತನ್ನ ತಾಯಿ ಎಂದು ತಿಳಿದ ಅನಂತರ ಕರ್ಣ ಕುಂತಿಯನ್ನು ಮೊದಲ ಬಾರಿಗೆ ಭೇಟಿಯಾಗುವುದು, ತಾಯಿ ಮೊದಲ ಬಾರಿಗೆ ಮಗನ ಬಳಿ ಮಾತನಾಡುವುದು, ಹಾಗೆ ಮಾತನಾಡುವ ಉದ್ದೇಶ ಮಗನ ಸಾವನ್ನು ನಿಶ್ಚಯಿಸುವ ಸಂಗತಿಯೇ ಆಗಿರುವುದು ಈ ಸನ್ನಿವೇಶದ ಸಾರಾಂಶ. ಇಡಿಯ ಸನ್ನಿವೇಶವನ್ನು ಹೇಗೆ ಚಿತ್ರಿಸಲಾಗಿದೆ ಎಂಬುದಕ್ಕಿಂತ ಮುಖ್ಯವಾಗಿ ಕುಂತಿಯ ವರ್ತನೆಯನ್ನು ವಿಶ್ಲೇಷಿಸುವಷ್ಟರ ಮಟ್ಟಿಗೆ ಈ ಲೇಖನದ ಆಶಯ ಸೀಮಿತವಾಗಿದೆ.
****
ಸಂಧಿಯ ಪ್ರಯತ್ನ ವಿಫಲವಾದ ಅನಂತರ, ಕೃಷ್ಣ ವಿದುರನ ಮನೆಯಲ್ಲಿದ್ದ ಕುಂತಿಗೆ ಕರ್ಣನನ್ನು ಬೇಡಿಕೋ ಎಂಬ ಸಲಹೆಯನ್ನೀಯುತ್ತಾನೆ.
“ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು|
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ||” (ಉ.ಪ.-೯-೨೭)
ಕೃಷ್ಣನ ಮಾತಿನಲ್ಲಿ ಗಮನಿಸಬೇಕಾದ ಮೂರು ಅಂಶಗಳು:-೧. ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿದೆ,೨. ಕರ್ಣನನ್ನು ಬೇಡು,೩. ಮುರವೈರಿ ಹರುಷದಲಿ ಮರಳಿದನು.ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿರುವುದರಿಂದ,ಅವರ ಸಾವನ್ನು ಕೌರವ ಬಯಸುತ್ತಾನೆ ಮತ್ತು ಅದಕ್ಕೆ ಕರ್ಣನ ಸಹಾಯವನ್ನು ನಿರೀಕ್ಷಿಸುತ್ತಾನೆ.ಹಾಗಾಗಿ ಕೃಷ್ಣ ಏನನ್ನು ಬೇಡಲು ಹೇಳಿರಬಹುದು ಎಂಬುದರ ಬಗ್ಗೆ ಅನುಮಾನವೇ ಇಲ್ಲ.ಕೃಷ್ಣ ಹರುಷದಿಂದ ಮರಳಿದ ಎಂದಾದರೆ ಕುಂತಿ ಕೃಷ್ಣ ಹೇಳಿದ್ದಕ್ಕೆಲ್ಲ ಒಪ್ಪಿರಲೇ ಬೇಕು. ಸುಲಭವಾಗಿ ಊಹಿಸಬಹುದಾದ ವಿಷಯ. ಆದರೆ ಕುಂತಿ ಏನನ್ನೂ ಹೇಳದೆ ಕೃಷ್ಣ ಹೇಳಿದ್ದನ್ನು ಒಪ್ಪಿದ್ದು ಹೇಗೆ? ಕೃಷ್ಣ,ಅವನೂ ನನ್ನ ಮಗ ಎಂಬ ಮಾತು ಬರಲಿಲ್ಲವೇ?  ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಯ ಮನಸ್ಸಿನಲ್ಲಿ ಹುಟ್ಟಿರಬಹುದಾದ ತಳಮಳವನ್ನು ಕುಮಾರವ್ಯಾಸ ಯಾಕೆ ಚಿತ್ರಿಸಲಿಲ್ಲ? ಈ ಭಾವಾತ್ಮಕ ಬಿಕ್ಕಟ್ಟನ್ನು ನಿರ್ವಹಿಸುವ ಶಕ್ತಿ ಇಲ್ಲದೆ ಬಿಟ್ಟನೇ? ಅಥವಾ ಭಾವಾತ್ಮಕ ಬಿಕ್ಕಟ್ಟನ್ನು ಗ್ರಹಿಸುವಷ್ಟು ಸೂಕ್ಷ್ಮಸಂವೇದಿ ಆತನಾಗಿರಲಿಲ್ಲವೇ? ಆದರೆ ಇತರ ಸಂದರ್ಭಗಳಲ್ಲಿ ವ್ಯಕ್ತವಾದ ಆತನ ಕಾವ್ಯಚಿತ್ರಣ ಸಾಮರ್ಥ್ಯ ನನ್ನ ಈ ಯೋಚನೆಯಲ್ಲಿ ಏನೋ ತಪ್ಪಿದೆ ಎಂದು ನನಗೆ ಅನಿಸುವಂತೆ ಮಾಡುತ್ತಿತ್ತು. ಮತ್ತೆ ಮತ್ತೆ ಓದುತ್ತಿದ್ದೆ,ಯೋಚಿಸುತ್ತಿದ್ದೆ. ಒಮ್ಮೆ ಅನಿಸಿತು: ಕವಿ ಉದ್ದೇಶಪೂರ್ವಕವಾಗಿ ಕುಂತಿಯ ಭಾವನೆಗಳನ್ನು ಚಿತ್ರಿಸಲಿಲ್ಲ. ಯಾಕೆಂದರೆ ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಗೆ ಕೃಷ್ಣನ ಸೂಚನೆಯನ್ನು ಪಾಲಿಸಬೇಕು ಎಂಬುದನ್ನು ಬಿಟ್ಟರೆ ಬೇರೆ ಭಾವನೆಗಳೇ ಇರಲಿಲ್ಲ. ಅವಳಲ್ಲಿ ಭಾವನಾತ್ಮಕ ಬಿಕ್ಕಟ್ಟು ಹುಟ್ಟಿರಲೇ ಇಲ್ಲ. ಅವಳಿಗೆ ಕರ್ಣನ ಬಗೆಗೆ ತಾಯ್ತನದ ಭಾವನೆ ಉದ್ದೀಪನಗೊಳ್ಳಲಿಲ್ಲ. ಹುಟ್ಟಿದಕೂಡಲೇ ತ್ಯಜಿಸಿದ್ದವನ ಬಳಿ ಈಗ ನಿಂತು ನಾನು ನಿನ್ನ ತಾಯಿ ಎಂದು ತಿಳಿಸಿ ಹೇಗೆ ಬೇಡಲಿ ಎಂಬ ಭಾವನೆ ಬರಲಿಲ್ಲ. ಬಂದಿದ್ದರೆ ಭಾವಾತ್ಮಕ ಬಿಕ್ಕಟ್ಟು ಎದುರಾಗುತ್ತಿತ್ತು. ಯಾಕೆ ಬರಲಿಲ್ಲ? ಕರ್ಣನನ್ನು ತ್ಯಜಿಸುವಾಗ ಆಕೆ ಗಂಗೆಗೆ ಹೇಳಿದ್ದೇನು?“ಕಂದನ ಕಾಯಿ ಮೇಣ್ ಕೊಲ್ಲೆನುತ” (ನನ್ನ ಹಿಂದಿನ ಲೇಖನದಲ್ಲಿ ಈ ಬಗ್ಗೆ ವಿವರಣೆಯಿದೆ.) ಗಂಗೆ ಕಾದು ಕೊಟ್ಟಳು. ಕುಂತಿಗುಳಿದದ್ದು ಕೊಲ್ಲುವುದು. ಕರ್ಣ ಮಗ ಎಂಬ ಭಾವನೆಯೇ ಇಲ್ಲದಿರುವಾಗ ಭಾವನಾತ್ಮಕ ಬಿಕ್ಕಟ್ಟು ಹೇಗೆ ಬಂದೀತು?  ಇದನ್ನು ಧ್ವನಿಸುವ ಉದ್ದೇಶದಿಂದಲೇ ಕವಿ ಹೀಗೆ ಚಿತ್ರಿಸಿದ್ದಾನೆ. ಕವಿ ಬರೆದಿದ್ದರ ಮೂಲಕ ನಾವು ಗ್ರಹಿಸುವಷ್ಟೇ ಸೂಕ್ಷ್ಮವಾಗಿ, ಬರೆಯದೇ ಬಿಟ್ಟಿದ್ದರ ಮೂಲಕವೂ ಗ್ರಹಿಸಬೇಕಾಗುತ್ತದೆ!
**
ಹಾಗಾಗಿ ಭಾವಾತ್ಮಕವಾದ ದ್ವಂದ್ವ ಇಲ್ಲದೆ ಕುಂತಿ ಕರ್ಣನನ್ನು ಭೇಟಿಯಾಗುತ್ತಾಳೆ. ಕರ್ಣನನ್ನು ಕಂಡ ಕೂಡಲೇ ಕುಂತಿಗೆ ದುಃಖ ಉಕ್ಕುತ್ತದೆ. ಇದು ಯಾತಕ್ಕೆ ಎಂಬ ಚಿತ್ರಣ ಇಲ್ಲ. ಮೊದಲಬಾರಿ ತನ್ನ ಮಗನನ್ನು ಕಂಡ ಕಾರಣದಿಂದ ಇರಬಹುದು ಅಥವಾ ಮಗನಾಗಿದ್ದರೂ ಮಗ ಎಂದು ತಾನು ಭಾವಿಸದವನ ಬಳಿ ಬೇಡುವ ಸ್ಥಿತಿ ಬಂದಿದ್ದಕ್ಕೂ ಇರಬಹುದು. ನಾನು ನಿನ್ನ ತಾಯಿ ಎಂದು ಕುಂತಿ ಕರ್ಣನಿಗೆ ಇಲ್ಲೂ ಹೇಳುವುದಿಲ್ಲ. ಇಲ್ಲೂ ಕೂಡ ಅವಳಲ್ಲಿ ತಾಯ್ತನದ ಭಾವನೆ, ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಬರಲಿಲ್ಲ. ಅಳುವ ಕುಂತಿಗೆ “ಬಿಜಯಂಗೈದ ಹದನನು ವುಸುರಬೇಹುದು ತಾಯೆ” ಎಂದು ಕರ್ಣ ಹೇಳಿದಾಗ ಆಕೆ ಹೇಳುವ ಮೊದಲ ಮಾತು: “ಮಗನೆ ತಮ್ಮಂದಿರನು ಪಾಲಿಸು”. ಪಾಲಿಸು ಎಂಬುದಕ್ಕೆ ಎರಡು ಅರ್ಥವಿದೆ.೧.ರಕ್ಷಿಸು,ಕಾಪಾಡು,೨. ಆಳ್ವಿಕೆ ಮಾಡು. ಕುಂತಿ ಈ ಎರಡೂ ಅರ್ಥದಲ್ಲಿ ಮಾತನ್ನಾಡಿದ್ದಾಳೆ.“ನೀನೋಲಗಿಸುವರೆ ಕುರುಪತಿಯ ನಿನಗವರಿದಿರೆ ಇತ್ತಂಡ ಸೊಗಸು” ಎಂಬ ಮಾತು ನೀನು ಆಳು ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ. ಕರ್ಣ ಇದಕ್ಕೊಪ್ಪುವುದಿಲ್ಲ. ನಯವಾಗಿ ಕುಂತಿಯ ಸಲಹೆಯನ್ನು ತಿರಸ್ಕರಿಸುತ್ತಾನೆ.“ರಾಯನೆನ್ನನು ನೆಚ್ಚಿ ಹೊರೆದನು” ಎಂಬ ಅವನ ಮಾತಿನಲ್ಲಿ ನೀನು ನನ್ನನ್ನು ಹೊರೆಯಲಿಲ್ಲ ಎಂಬ ಸೂಕ್ಷ್ಮಧ್ವನಿಯೂ ಇದೆ. ಕುಂತಿ ನಿಜವಾಗಿ ಬಂದ ಉದ್ದೇಶ ಇದಲ್ಲ ಎಂಬುದು ಅವನಿಗೂ ಗೊತ್ತು.“ಇಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ” ಎನ್ನುತ್ತಾನೆ. ತಾಯ್ತನದ ಭಾವನೆ ಇದ್ದಿದ್ದರೆ ಕುಂತಿ ಇದಲ್ಲದೆ ಬೇರೆ ಕಾರ್ಯವೇನೂ ಇಲ್ಲ ಅನ್ನಬೇಕಿತ್ತು. ಆದರೆ ಆಕೆ ಮೂರು ಭರವಸೆಯನ್ನು ಅಪೇಕ್ಷಿಸುತ್ತಾಳೆ.(ತಮ್ಮಂದಿರನ್ನು ಪಾಲಿಸಬೇಕಾದ  ರೀತಿ.ಪಾಲಿಸು ಪದದ ಮತ್ತೊಂದು ಅರ್ಥ.)
೧.ಆದೊಡೈವರ ಮಕ್ಕಳನು ತಲೆಗಾಯ್ದು ತೋರೈ ೨.ಹೋದ ಬಾಣವ ಮರಳಿ ತೊಡದಿರು.೩.ಮಾದು ಕಳೆ ವೈರವ.
ಈ ಮೂರೂ ಬೇಡಿಕೆಗಳು ಪಾಂಡವರೈವರ ಪಕ್ಷಪಾತಿಯಾಗಿರುವುವೇ ಹೊರತು ಕರ್ಣಪಕ್ಷಿಪಾತಿಯಲ್ಲ. ಕರ್ಣನನ್ನು ಕುಂತಿ ಮತ್ತೆ ತ್ಯಜಿಸುತ್ತಾಳೆ.
***
ಈ ಮೂರೂ ಸನ್ನಿವೇಶಗಳಲ್ಲಿ ಕುಂತಿಯ ವರ್ತನೆಯನ್ನು ಗಮನಿಸಿದ ಅನಂತರದ ನನ್ನ ಅನಿಸಿಕೆ: ಕುಂತಿಗೆ ಕರ್ಣನನ್ನು ತ್ಯಜಿಸಿದ್ದರ ಬಗ್ಗೆ ಅಪರಾಧೀ ಭಾವ ಇರಲಿಲ್ಲ.ತ್ಯಜಿಸಿದ್ದು ಅಪರಾಧ,ಆದರೆ ಅನಿವಾರ್ಯವಾಗಿತ್ತು ಎಂದು ನಮಗೆ ಅನಿಸಿದರೂ ಕುಂತಿಗೆ ಹಾಗೆ ಅನಿಸಿತ್ತು ಎಂಬುದನ್ನು ಒಪ್ಪುವುದು ಕಷ್ಟ. ಕುಂತಿಯ ಅವಿವೇಕಜನ್ಯ ಕುತೂಹಲ ಮತ್ತು ಭಯಜನ್ಯ ನಿರಾಕರಣೆ ಕರ್ಣನ ದುರಂತ ಬದುಕಿನ ಕಾರಣವಾಯಿತು ಎಂಬುದಂತೂ ಸತ್ಯ.
***
ಅಡಿಟಿಪ್ಪಣಿ.
೧)ಮುನಿಯ ಶಾಪಕ್ಕೆ ಪಕ್ಕಾದ ಪಾಂಡು ಕುಂತಿ,ಮಾದ್ರಿಯರ ಜೊತೆ ಕಾಡಲ್ಲಿರುವಾಗ ಕುಂತಿ ಮಕ್ಕಳನ್ನು ಪಡೆವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕುಂತಿ ಪಾಂಡುವಿನಿಂದ ಮಕ್ಕಳನ್ನು ಪಡೆವ ಹಾಗಿಲ್ಲ. ಆಗ ಪಾಂಡು ಮುನಿಗಳಿಂದ ಮಂತ್ರೋಪದೇಶ ಪಡೆಯಲು ಕುಂತಿಗೆ ಸೂಚಿಸುತ್ತಾನೆ.
ಈ ಸಂದರ್ಭದಲ್ಲಿ ಕುಂತಿ ತನಗೆ ದೂರ್ವಾಸಮುನಿ ಕೊಟ್ಟ ಐದು ಮಂತ್ರಗಳಿವೆ ಅನ್ನುತ್ತಾಳೆಯೇ ಹೊರತು ಮೊದಲ ಮಂತ್ರದಿಂದ ಮಗನನ್ನು ಪಡೆದ ಸುದ್ದಿ ಹೇಳುವುದಿಲ್ಲ. ನಾಲ್ಕು ಮಂತ್ರಗಳ ಪ್ರಯೋಗದಿಂದ ಐವರು ಮಕ್ಕಳು ಜನಿಸುತ್ತಾರೆ. ಇನ್ನೊಂದು ಮಂತ್ರ ಏನಾಯಿತು ಎಂದು ಪಾಂಡುವೂ ಕೇಳುವುದಿಲ್ಲ!
೨)ಯುದ್ಧದ ಅನಂತರ ಕುರುಕ್ಷೇತ್ರದರ್ಶನದ ವೇಳೆಯಲ್ಲಿ ಕುಂತಿ ಕರ್ಣನ ಶವದ ಮೇಲೆ ಬಿದ್ದು ಹೊರಳಾಡುತ್ತಾಳೆ.“ಮಾಯಾವಿ ಮಧುಸೂದನನೆ ಮರೆಯಿಸಿ ಕೊಂದನ್” ಎನ್ನುತ್ತಾಳೆ. ತನ್ನ ತಪ್ಪನ್ನು ಕೃಷ್ಣನ ಮೇಲೆ ಹೊರಿಸುತ್ತಾಳೆ.