Tuesday, September 15, 2015

ಒಂದು ಪ್ರತಿಮೆ


ಅಡಿಗರು ತಮ್ಮ ಭೂಮಿಗೀತ ಕವನದಲ್ಲಿ ಬಳಸಿರುವ ಒಂದು ಪ್ರತಿಮೆಯ ವಿವರಣೆ ಈ ಲೇಖನದ ಆಶಯ. ಈ ಪ್ರತಿಮೆಯ ಧ್ವನಿಗ್ರಹಿಕೆ ಮಾತ್ರ ನನ್ನ ಉದ್ದೇಶವೇ ಹೊರತು ಇವು ಕವನದಲ್ಲಿ ಹೇಗೆ ಸಂಗತವಾಗಿವೆ ಎಂಬುದಲ್ಲ. ಕವನವನ್ನು ಒಟ್ಟಂದದಲ್ಲಿ ಗ್ರಹಿಸುವಲ್ಲಿ ಆ ಸಾಂಗತ್ಯ ಹೊಳೆಯುತ್ತದೆ. 
************
"ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ, ಸಾಯಿಸಲಿಕಲ್ಲದೇ ಬರಳು ಕುಂತಿ."( ಭೂಮಿಗೀತ-೮೨ನೆಯ ಸಾಲು)
ಅಡಿಗರು ಪೂರ್ವಕೃತಿಗಳ ಘಟನೆಗಳನ್ನು ಪ್ರತಿಮೆಯಾಗಿ ಕೆಲವು ಕಡೆ ಬಳಸಿದ್ದಾರೆ. ಈ ವಿಧಾನ ತುಂಬಾ ವಿವರವಾಗಿ ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ,ಧ್ವನಿಪೂರ್ವಕವಾಗಿ ಹೇಳುತ್ತದೆ. ಅದರೆ ಪ್ರತಿಮೆಯ ಧ್ವನಿಯನ್ನು ಗ್ರಹಿಸಲು ನಮಗೆ ಮುಂಚಿತವಾಗಿಯೇ  ಘಟನೆಯ ವಿವರ ತಿಳಿದಿರಬೇಕಾಗುತ್ತದೆ. ಇದು ಅಂತಹ ಪ್ರತಿಮೆಗಳಲ್ಲಿ ಒಂದು. ಮಹಾಭಾರತದ ಎರಡು ಘಟನೆಗಳನ್ನುಇಲ್ಲಿ ಪ್ರತಿಮೆಯಾಗಿ ಬಳಸಿಕೊಳ್ಳಲಾಗಿದೆ.
೧.ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ
೨.ಸಾಯಿಸಲಿಕಲ್ಲದೇ ಬರಳು ಕುಂತಿ.
ಮಂತ್ರಪರೀಕ್ಷೆಯ ತವಕದಲ್ಲಿ  ಕನ್ಯೆಯಾಗಿರುವ ಕುಂತಿ ಕರ್ಣನಿಗೆ ಜನ್ಮ ನೀಡುತ್ತಾಳೆ. ಅಪವಾದ ಬರುತ್ತದೆ ಎಂಬ ಭಯದಿಂದ ಮಗುವನ್ನು ಗಂಗೆಯಲ್ಲಿ ತೇಲಿಬಿಡುತ್ತಾಳೆ. ಈ ಮಗು,ಕರ್ಣ,ಸೂತನಾದ ಅಧಿರಥನಿಗೆ ಸಿಗುತ್ತದೆ. ಅವನ ಪತ್ನಿ ರಾಧೆ ಈ ಮಗುವನ್ನು ಸಾಕುತ್ತಾಳೆ. ರಾಧೆಯ ಮಗ ರಾಧೇಯ ಆಗಿ ಬೆಳೆಯುತ್ತದೆ.
ಇಲ್ಲಿ ಅಡಿಗರು ಉದ್ದೇಶಪೂರ್ವಕವಾಗಿ ಕುಂತಿ ಮಗುವನ್ನು ತ್ಯಜಿಸಿದ ಸೂಚನೆ ಕೊಡುವುದಿಲ್ಲ. ಬರಿದೇ ಗಂಗೆಯಲಿ ತೇಲಿಬಂದನು ಎಂದು ಹೇಳುತ್ತಾರೆ. ಅಡಿಗರು ಅದನ್ನು ಹೇಳಿದ್ದರೆ ಕರ್ಣ ಈ ಸನ್ನಿವೇಶದ ಮಟ್ಟಿಗೆ ಕೌಂತೇಯ ಆಗುತ್ತಿದ್ದ. ಅವನು ಕುಂತಿಯಮಗನಾದರೂ ಕೌಂತೇಯನಾಗಲಿಲ್ಲ,ರಾಧೇಯನಾದ ಎಂಬುದನ್ನು ಧ್ವನಿಸಲು ಕುಂತಿ ತೇಲಿಬಿಟ್ಟ ಸೂಚನೆ ನೀಡದೆ ಬರಿದೆ ತೇಲಿಬಂದನು ಎಂಬ ಪ್ರಯೋಗ ಬಳಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಒಂದುವೇಳೆ ಕೌಂತೇಯ ಎಂಬ ಪ್ರಯೋಗ ಮಾಡಿದ್ದರೆ ಸಾಯಿಸಲಿಕಲ್ಲದೇ ಬರಳು ಕುಂತಿ ಎಂಬ ಮುಂದಿನ ಹೇಳಿಕೆ ದುರ್ಬಲವಾಗುತ್ತಿತ್ತು. ಸಾಯಿಸಲಿಕಲ್ಲದೇ ಬರಳು ಎಂಬ ಹೇಳಿಕೆಯನ್ನು ಬಲಪಡಿಸುವ ಕಾರ್ಯವನ್ನು ಮೊದಲ ಸಾಲಿನಲ್ಲಿ ಅಡಿಗರು ಮಾಡುತ್ತಾರೆ. ಇದು ಪ್ರಭಾವಶಾಲಿ ಅನಿಸುವುದು ಎರಡನೆಯ ಭಾಗವನ್ನು ನಾವು ಗ್ರಹಿಸಿದಾಗ.
ಕೃಷ್ಣನ ಸೂಚನೆಯಂತೆ ಕುಂತಿ ಕರ್ಣನನ್ನು ಮೊದಲ ಭಾರಿ ಭೇಟಿಯಾಗುವುದು ಅವನಿಂದ ತೊಟ್ಟ ಬಾಣವನ್ನು ಮರಳಿ ತೊಡಬಾರದು ಮತ್ತು ತನ್ನ ಐವರು ಮಕ್ಕಳನ್ನು ಕೊಲ್ಲದೆ ಕಾಯಬೇಕು ಎಂಬೆರಡು ಮಾತು ಪಡೆಯಲು. ಮೊದಲ ಮಾತೇ ಮುಂದೆ ಕರ್ಣನ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಕುಂತಿ ಬರುವುದು ಕರ್ಣನ ಸಾವನ್ನು ಬೇಡಿ ಎಂಬ ಎರಡನೆಯ ಸಾಲಿನ ಅರ್ಥವಿವರ ಸ್ಪಷ್ಟವಾಗುತ್ತದೆ.
ಇವೆರಡೂ ಹೇಳಿಕೆಗಳನ್ನು ಒಟ್ಟಿನಲ್ಲಿ ಗ್ರಹಿಸಿದರೆ ಒಂದಕ್ಕೊಂದು ಸಂಗತವಾಗುವ ಸಂಬಂಧ ಸ್ಪಷ್ಟವಾಗುತ್ತದೆ. ಕರ್ಣ ರಾಧೇಯನಾಗಿದ್ದರಿಂದಲೇ ಕುಂತಿಗೆ ಮಾತು ಕೊಡು ಎಂದು ಕೇಳಲು ಸಾಧ್ಯವಾಯಿತು. ಅವನು ಕೌಂತೇಯನಾಗಿದ್ದರೆ ಅವಳಿಗೆ ಈ ಮಾತನ್ನು ಕೇಳಲು ಆಗುತ್ತಿರಲಿಲ್ಲ. ಇಡೀ ಕವನದ ಅರ್ಥವ್ಯಾಪ್ತಿಯನ್ನು ಆವರಿಸುವ ಎರಡನೆಯ ವಾಕ್ಯದ ಧ್ವನಿಯನ್ನು ಬಲಪಡಿಸವುದೇ ಮೊದಲ ವಾಕ್ಯ.  ರಾಧೇಯ ಎಂಬುದರ ಬಳಕೆಯ ಉದ್ದೇಶ ಎರಡನೆಯ ವಾಕ್ಯದ ತೀವ್ರತೆಯನ್ನು ಹೆಚ್ಚಿಸುವುದು.( ಇವು ಇವಳ ಸಹಜ ಸಂತಾನ ಎಂಬ ಕವನದ ಸಾಲಿನ ಹಿನ್ನೆಲೆಯಲ್ಲಿ ಗಮನಿಸಬಹುದು.)