Thursday, November 11, 2010

"ಎನ್ನೊಡಲನಾಂ ತವಿಪೆಂ"

ನನ್ನ ಹಿಂದಿನ ಲೇಖನದಲ್ಲಿ ಕರ್ಣಭೇದನ ಪ್ರಸಂಗವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯ ಬಗೆಗೆ ಬರೆದಿದ್ದೆ. ಈ ಲೇಖನದಲ್ಲಿ ಈ ಪ್ರಸಂಗವನ್ನು ಕನ್ನಡದ ಆದಿಕವಿ ಎನ್ನಿಸಿಕೊಂಡ ಪಂಪ ಚಿತ್ರಿಸಿದ ರೀತಿಯ ಬಗೆಗೆ ಬರೆಯುತ್ತಿದ್ದೇನೆ.
ಇಲ್ಲಿ ಪೀಠಿಕೆಯಾಗಿ ಒಂದೆರಡು ಮಾತುಗಳನ್ನು ಹೇಳಬೇಕು. ವ್ಯಾಸರಿಗೆ ಮಹಾಭಾರತ ಇಡೀ ಜಗತ್ತಿನ ಕಥೆ, ಕೇವಲ ಕುರು-ಪಾಂಡವರ ಕಥೆಯಲ್ಲ. ಅದರಲ್ಲಿ ಬರುವ ಉಪಕಥೆಗಳು ಕುರು ಪಾಂಡವರ ಕಥೆಯಷ್ಟೇ,ಅಥವಾ ಅದಕ್ಕಿಂತಲೂ, ಗಾತ್ರದಲ್ಲಿ,ಸತ್ವದಲ್ಲಿ ವಿಸ್ತಾರ, ಮಹತ್ವವುಳ್ಳದ್ದು. ಅದ್ದರಿಂದ ಅದಕ್ಕೆ ಐದನೆಯ ವೇದ ಎಂದು ಕರೆದರು. ಜಗತ್ತಿನ ಕಥೆಯಾದ ಈ ಜಯವೆಂಬ ಭಾರತವನ್ನು ಕುಮಾರವ್ಯಾಸ  ಕುಗ್ಗಿಸಿಕೊಂಡ. ಅವನಿಗೆ ಜಗತ್ತಿನ ಕಥೆ ಹೇಳುವುದು ಉದ್ದೇಶವೇ ಆಗಿರಲಿಲ್ಲ. ಅವನ ಉದ್ದೇಶ ಕೃಷ್ಣನ ಕಥೆ ಹೇಳುವುದು.
"ತಿಳಿಯ ಹೇಳುವೆ ಕೃಷ್ಣ ಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ" -(ಆ.ಪ.-೧-೧೩)
ಇಳೆಯ ಜಾಣರು ಮತ್ತು ಕೃಷ್ಣ ಮೆಚ್ಚಲಿ ಎಂದು ತಾನು ಈ ಕಥೆ ಹೇಳುತ್ತೇನೆ ಎಂಬುದು ಅವನ ಘೋಷಣೆ. ಅಂದರೆ ಅವನು ಭಾರತದ ಕಥೆಯನ್ನು ಕೃಷ್ಣನ ಕೇಂದ್ರದಲ್ಲಿ ನೋಡಿದ,ಕೃಷ್ಣನ ಲೀಲೆ ಎಂಬಂತೆ ನೋಡಿದ.
"ವಿಕ್ರಮಾರ್ಜುನ ವಿಜಯ" ಎಂಬ ಪಂಪ ಭಾರತ ಈ ಕೃತಿಗಿಂತ ಸರಿಸುಮಾರು ೬೦೦ ವರ್ಷಗಳ ಹಿಂದಿನದು. . ಕುಮಾರವ್ಯಾಸನ ಭಾಷೆ ನಡುಗನ್ನಡ. ಪಂಪನದು ಹಳೆಗನ್ನಡ. ಭಾವ ಅರ್ಥವಾಗುವುದು ಕಷ್ಟವಲ್ಲವಾದರೂ ಭಾಷೆ ನಮಗೆ ಬಳಕೆಯಲ್ಲಿ ಇಲ್ಲದ್ದು.( ಕುಮಾರವ್ಯಾಸನ ಭಾಷೆ ತುಂಬಾ ಸರಳ, ನಾವು ಬಳಸುವ ಭಾಷೆಗೆ ಸಮೀಪದ್ದು ಎನಿಸಿದರೂ ಆ ಭಾಷೆಯಲ್ಲಿ ಆತ ಬಲಿಯುವ ಭಾವ ಬಹಳ ಸಂಕೀರ್ಣವಾದದ್ದು. ಕೆಲವು ಉದಾಹರಣೆಗಳು:(ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಿಸಿ) "ಪಡುವಣ ಶೈಲ ವಿಪುಲ ಸ್ತಂಭ ದೀಪಿಕೆಯಂತೆ ರವಿ ಮೆರೆದ"(ಭೀ.ಪ.-೧೦-೪೨), " ಹಿಂಗದಿನ್ನೂ ದ್ವಾಪರದ ಸರ್ವಾಂಗವೀ ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ ಸಂಗಡಿಸಿತಧರೋತ್ತರದ ಸಮರಂಗ"(ಕ.ಪ.-೧೭-೫೨), "ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆಯಾರಲಿ ಹರಿವುದೈ" (ಸ.ಪ.- ೧೩-೪). ಇದೇ ಒಂದು ದೀರ್ಘ ಲೇಖನವಾಗಿಬಿಡಬಹುದು.ಇಷ್ಟು ಸಾಕು.)
ಪಂಪನಿಗೆ ಈ ಕಥೆ ಜಗತ್ತಿನ ಕಥೆಯೂ ಅಲ್ಲ,ಕೃಷ್ಣನ ಕಥೆಯೂ ಅಲ್ಲ. ಈ ಕಥೆಯ ಮೂಲಕವಾಗಿ ಅರ್ಜುನನನ್ನು ವೈಭವೀಕರಿಸುವುದು ಅವನ ಉದ್ದೇಶ. ಅರ್ಜುನನ ಮೂಲಕವಾಗಿ ಈ ಕಥೆಯನ್ನು ನಿರೂಪಿಸುವುದು ಅವನ ಗುರಿ. ಇದಕ್ಕೆ ಕಾರಣವೂ ಇದೆ. ಅವನೇ ಹೇಳುವಂತೆ "ಈ ಕಥೆಯೊಳ್ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್". ತನ್ನ ರಾಜನಾದ,ತನಗೆ ಅಶ್ರಯವನ್ನಿತ್ತ ಅರಿಕೇಸರಿಯನ್ನು ಅರ್ಜುನನ ಜೊತೆ ಸಮೀಕರಿಸಿ ಬರೆಯುತ್ತಾನೆ. ಹಾಗಾಗಿ ಅವನ ಕಥೆಯ ನಾಯಕ ಅರ್ಜುನ. (ವ್ಯಾಸರಿಗೆ ಕಥೆಯೇ ನಾಯಕ ಪಾತ್ರವಾಯಿತು. ಕುಮಾರವ್ಯಾಸನಿಗೆ ಕೃಷ್ಣ ನಾಯಕನಾದ.)
****
ಸಂಧಿ ವಿಫಲವಾದ ಅನಂತರ ಹೊರಟ ಕೃಷ್ಣ ಕರ್ಣನನ್ನು ರಥಕ್ಕೇರಿಸಿಕೊಂಡು ಸ್ವಲ್ಪ ದೂರ ಹೋದ ಅನಂತರ ರಥವನ್ನು ನಿಲ್ಲಿಸಿ ಕರ್ಣನನ್ನುದ್ದೇಶಿಸಿ ಹೇಳುತ್ತಾನೆ:
"ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ |
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್ ||
ಸೋದರರೆಯ್ದೆ ಮೈದುನನೆನಾಂ ಪೆಱತೇಂ ಪಡೆಮಾತೋ ನಿನ್ನದೀ |
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ || (ನವಮಾಶ್ವಾಸ-೬೪)
ಕರ್ಣನಿಗೆ ಜನ್ಮವೃತ್ತಾಂತ ತಿಳಿಸುವ ರೀತಿ, ಪ್ರಲೋಭನೆ ಒಡ್ಡುವ ರೀತಿ ಕುಮಾರವ್ಯಾಸ ಮತ್ತು ಪಂಪರಲ್ಲಿ ಸರಿಸುಮಾರು ಒಂದೇ ರೀತಿಯಿದೆ. ಇಲ್ಲಿಂದ ಮುಂದೆ ಪಂಪ ಒಂದು ಸಣ್ಣ ಬದಲಾವಣೆ ಮಾಡಿದ್ದಾನೆ.
"ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಱಿಯಱಿವೆನಾಂ ಸಹದೇವಂ ||
ಪನ್ನಗಕೇತು ದಿನೇಶಂ |
ನಿನ್ನಂಬಿಕೆ ಕುಂತಿಯಿಂತಿವರ್ ನೆಱೆ ಬಲ್ಲರ್ || (ಆ-೯, ೬೬)
(ಪದವಿಭಾಗ:ನಿನ್ನ ಉತ್ಪತ್ತಿಯನ್ ಇಂತೆಂದು ಎನ್ನರುಂ ಅಣಂ ಅರಿಯರ್ ಅರಿವೆನ್ ಆಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನ ಅಂಬಿಕೆ ಕುಂತಿ ಇವರ್ ನೆರೆ ಬಲ್ಲರ್. ಸರಳಾನುವಾದ: ನಿನ್ನ ಹುಟ್ಟು ಈ ರೀತಿ ಎಂಬುದು ಯಾರಿಗೂ ತಿಳಿದಿಲ್ಲ. ನಾನು,ಸಹದೇವ, ದುರ್ಯೊಧನ, ಸೂರ್ಯ ಮತ್ತು ಕುಂತಿ-ಇಷ್ಟು ಜನರಿಗೆ ಮಾತ್ರ ಗೊತ್ತು.)
ದುರ್ಯೋಧನ ಮತ್ತು ಸಹದೇವ ಇವರಿಗೂ ಗೊತ್ತಿತ್ತು ಎಂದು ಕೃಷ್ಣ ಹೇಳಿದ ಅಂಶವನ್ನು ಗಮನಿಸಬೇಕು.
ದುರ್ಯೋಧನನಿಗೆ ಇದು ಹೇಗೆ ತಿಳಿಯಿತು ಎಂಬುದನ್ನು ಕೃಷ್ಣನ ಮೂಲಕ ಪಂಪ ಹೇಳಿಸುವದನ್ನು ನೋಡಿ.
ಒಮ್ಮೆ ದುರ್ಯೊಧನ ಕರ್ಣ ಇಬ್ಬರೂ ಗಂಗಾನದಿತೀರದಲ್ಲಿ ಬೇಟೆಯಾಡಿದ ಅನಂತರ ಸಮೀಪದ ಸತ್ಯಂತಪರೆಂಬ ಮುನಿಯ ಆಶ್ರಮಕ್ಕೆ ಹೋಗುತ್ತಾರೆ. ಇಬ್ಬರೂ ಮುನಿಗಳಿಗೆ ನಮಸ್ಕರಿಸುತ್ತಾರೆ. ಇಬ್ಬರಿಗೂ ಹರಸಿದ ಮುನಿಗಳು ಕೂರಲು ಆಸನವನ್ನ ಮೊದಲು ಕರ್ಣನಿಗೆ ನೀಡುತ್ತಾರೆ. ಇದು ದುರ್ಯೋಧನನಿಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಅವನು ಕರ್ಣನನ್ನು ಮೊದಲು ಹೊರಗೆ ಕಳುಹಿಸಿ "ಆನಿರೆ ನೀಮಿದೇಕೆ ದಯೆಗೆಯ್ದಿರೋ ಮೀಂಗುಲಿಗಂಗೆ" ಎಂದು ಮುನಿವರ್ಯರನ್ನು ಕೇಳುತ್ತಾನೆ.( ಮೀಂಗುಲಿಗಂಗೆ= ಬೆಸ್ತರ ಕುಲದವನು ಎಂಬ ಪ್ರಯೋಗವನ್ನು ಗಮನಿಸಿ. ದುರ್ಯೋಧನ ಮೀಂಗುಲಿಗ ಎಂದು ತನ್ನನ್ನು ಸಂಬೋಧಿಸಿದ ಎಂಬುದು ಕರ್ಣನಿಗೆ ತಿಳಿದರೆ ಕೌರವನ ಬಗ್ಗೆ ಅವನಿಗೆ ಸಂಶಯ ಬರಬಹುದು.ತನ್ನನ್ನು ಕೌರವ ಈ ರೀತಿ ಭಾವಿಸಿದ್ದಾನೆ ಎಂದು ತಿಳಿದರೆ ಕರ್ಣನ ಮನಸ್ಸು ಖಿನ್ನವಾಗಲು ಬಲವಾದ ಮಾನಸಿಕ ಕಾರಣವೊಂದು ಸಿಕ್ಕಂತಾಗುತ್ತದೆ.) ಮುನಿಗಳಿಂದ ಈತ ಪಾಂಡವರ ಹಿರಿಯ ಎಂಬುದನ್ನು ತಿಳಿದು ಕೌರವ ಆಡುವ ಮಾತು ಕೇಳಿ :"ಪಾಟಿಸುವೆನೊಯ್ಯನೆ ಮುಳ್ಳೊಳ್ಳೆ ಮುಳ್ಳನ್"( ಮುಳ್ಳನ್ನು ಮುಳ್ಳಿಂದ ಕೀಳುತ್ತೇನೆ.)ಕೃಷ್ಣ ಈ ಮಾತನ್ನು ಹೇಳಲು ಕಾರಣ ಕರ್ಣನಿಗೆ ಪಾಂಡವರ ಬಗ್ಗೆ ಮೃದು ಧೋರಣೆ ಬಂದರೆ ಸಾಲದು,ಕೌರವನ  ಬಗ್ಗೆ ಅನುಮಾನ ಬರಬೇಕು. ದುರ್ಯೋಧನ ಈ ರೀತಿಯ ಮಾತನ್ನು ಅಂದ ಎಂದು ಕೃಷ್ಣ ತಿಳಿಸಿದಾಗ ಕರ್ಣನ ಮೇಲೆ ಆಗುವ ಪರಿಣಾಮ ಗ್ರಹಿಸಿ. ಕೌರವನಿಗೆ ಪಾಂಡವರು ಮುಳ್ಳು.ಗೊತ್ತಿರುವ ವಿಚಾರ. ತಾನೂ ಕೂಡ ಮುಳ್ಳು. ಇಲ್ಲಿಯವರೆಗೂ ಇದು ತಿಳಿದಿರಲಿಲ್ಲ. ಆತನ ಆಪ್ತತೆ ಸೋಗು. ಅಪ್ತತೆ ಬರಿಯ ನಟನೆ.ನಿಜವಾಗಿ ಇರುವುದು  ಈ ದುರುದ್ದೇಶ. ಹೀಗೆ ಕರ್ಣನಿಗೆ ಅನಿಸಿದ ಕ್ಷಣವೇ ತನ್ನನ್ನು ಈ ರೀತಿ ಬಳಸಿಕೊಳ್ಳಲು ಹೊಂಚುತ್ತಿರುವ ಕೌರವನ ಪರವಾಗಿ ಹೋರಾಡುವ ಬದಲು ಸಾಯುವುದು ಸೂಕ್ತ, ತನ್ನ ಸಾವೇ ಎಲ್ಲದರ ಪರಿಹಾರ ಅನಿಸಬಹುದು. ಕೃಷ್ಣನಿಗೆ ಬೇಕಾದದ್ದು ಅದೇ. ಲೌಕಿಕವಾಗಿ ಪಾಂಡವರನ್ನು ಒಪ್ಪದೆ,ಆದರೆ ಮಾನಸಿಕವಾಗಿ ಒಪ್ಪಿ, ಜೊತೆಜೊತೆಗೇ ಲೌಕಿಕವಾಗಿ ಕೌರವನನ್ನು ತ್ಯಜಿಸದೆ, ಅದರೆ ಮಾನಸಿಕವಾಗಿ ತ್ಯಜಿಸಲು ಹಿನ್ನೆಲೆಯಾಗಿ ಬೇಕಾದ ಬಲವತ್ತರವಾದ  ನೆಲೆಯೊಂದನ್ನು ಈ ಚಿತ್ರಣದ ಮೂಲಕ ಪಂಪ ಕಟ್ಟುತ್ತಾನೆ.
***
ದುರ್ಯೊಧನನಿಗೆ ಗೊತ್ತಿದೆ ಎಂಬ ಅಂಶವನ್ನುಕೃಷ್ಣನ ಮೂಲಕ  ಪಂಪ ಹೇಳಿಸಿದ್ದಕ್ಕೆ ಬಹುಷಃ ಕಾರಣ: ೧) ಕುಲವನ್ನ ಕೃಷ್ಣ ತಿಳಿಸಿದರೂ  ಅದನ್ನು ಅಷ್ಟು ಸುಲಭವಾಗಿ ನಂಬಿ, ಕೌರವನಿಗೆ ಮೋಸ ಮಾಡುವಷ್ಟು ಲಘುವ್ಯಕ್ತಿತ್ವ ಕರ್ಣನದಲ್ಲ. ೨) ಹಾಗೆ ನಂಬಿದರೂ ಕೌರವನ ಬಗ್ಗೆ ಅವನ ಗೌರವ,ವಿಶ್ವಾಸ ಬದಲಾಗುವುದಿಲ್ಲ.
 ಆದರೆ ಕಥೆಯ ಪ್ರಕಾರ ಕರ್ಣ ರಣದಲ್ಲಿ ತನ್ನೊಡಲನ್ನು ಸಮರ್ಪಿಸುವ ನಿಲುವು ತೆಗೆದುಕೊಳ್ಳುತ್ತಾನೆ. ಪಾಂಡವರು ತಮ್ಮಂದಿರು ಎಂದು ತಿಳಿದ ಮಾತ್ರಕ್ಕೆ ತನ್ನನ್ನು ಸಾಕಿದ,ಸಲಹಿದ,ಘನತೆ ಗೌರವ ನೀಡಿದ, ಸಮಾನನಂತೆ ತನ್ನನ್ನು ಕಂಡ ಕೌರವನ ಪರವಾಗಿ ಪ್ರಾಮಾಣಿಕವಾಗಿ ಹೋರಾಡುವ ನಿರ್ಧಾರವನ್ನು ತ್ಯಜಿಸಿ "ಎನ್ನೊಡಲನಾಂ ತವಿಪೆಂ ರಣರಂಗ ಭೂಮಿಯೊಳ್" ಎಂದು ತೀರ್ಮಾನಿಸಲು ಪಾಂಡವರು ತಮ್ಮಂದಿರು ಎಂಬೊಂದೇ ಕಾರಣ ತುಂಬಾ ದುರ್ಬಲವಾಗುತ್ತದೆ ಮತ್ತು ಕರ್ಣನಂತಹ ವ್ಯಕ್ತಿತ್ವವುಳ್ಳವನಿಗೆ ಇದು ಶೋಭೆ ತರುವ ಸಂಗತಿಯಲ್ಲ ಎಂದು ಪಂಪನಿಗೆ ಅನ್ನಿಸಿರಬೇಕು.ಕರ್ಣ ಅಂತಹ ತೀರ್ಮಾನಕ್ಕೆ ಬರಲು ಮಾನಸಿಕವಾದ ಬಲವಾದ ಬೇರೆ ಯಾವುದಾದರೂ ಕಾರಣ ಇರಬೇಕು ಎಂದು ಪಂಪನಿಗೆ ಅನ್ನಿಸಿರಬೇಕು.(ಕೃಷ್ಣನಿಗೂ ಕೂಡ).
ದುರುದ್ದೇಶದಿಂದ ದುರ್ಯೊಧನ, ತಾನು ಪಾಂಡವರ ಹಿರಿಯ ಎಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿದ,ತನ್ನನ್ನು  ಸಾಕಿ,ಸಲಹಿ  ಅತ್ಯಂತ ಆಪ್ತನಂತೆ ಕಂಡ ಎಂಬ ಅನುಮಾನ ಕರ್ಣನಿಗೆ ಬಂದರೆ ಅದು ಸಹಜ. ಅವನ ಆಪ್ತತೆ ಸಹಜವಲ್ಲ,ಗುರಿಯೊಂದರ ಈಡೇರಿಕೆಗಾಗಿ ನಟಿಸಿದ ಆಪ್ತತೆ ಎಂದು ಕರ್ಣನಿಗೆ ಅನಿಸಿದರೆ ಮಾತ್ರ ಆತ ಪಾಂಡವರನ್ನು ಒಪ್ಪದೆ ಕೌರವನನ್ನೂ ನಂಬದೆ "ಎನ್ನೊಡಲನಾಂ ತವಿಪೆಂ" ಎಂದು ಹೇಳಲು ಸಾಧ್ಯ.  ಮುಂದೆ ಆತ ಕುಂತಿಗೆ ಮಾತು ಕೊಡುವುದು ಅಸಹಜ ಅನಿಸುವುದಿಲ್ಲ, ಇದರದೇ ಮುಂದಿನ ಭಾಗವಾಗುತ್ತದೆ.
ಪಂಪ ಈ ಸನ್ನಿವೇಶವನ್ನು ನಿರ್ವಹಿಸಿದ ರೀತಿ ಪಾತ್ರಗಳ ಮಾನಸಿಕ ಸ್ಥಿತಿ,ತುಮುಲಗಳನ್ನು ಆತ ಗ್ರಹಿಸುವ ಕಲಾವಂತಿಕೆಗೆ ಸಾಕ್ಷಿಯಾಗುತ್ತದೆ.