Saturday, December 18, 2010

ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ.

"ಅರಿಯದ ಮುಗ್ಧ ಕನ್ಯೆ ಕುಂತಿಯಿಂದಾದ ಅಪರಾಧವಲ್ಲದ ಅಪರಾಧ!" ಎಂಬ ಅಭಿಪ್ರಾಯವನ್ನು ನನ್ನ "ವಂಶವನರುಹಿ ಕೊಂದನು" ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ  ತೇಜಸ್ವಿನಿ ಹೆಗಡೆ ವ್ಯಕ್ತಪಡಿಸಿದ್ದು, ಮತ್ತು "ಮನದದನಿ" ಬ್ಲಾಗಿನಲ್ಲಿ ಪ್ರಕಟವಾದ ಲೇಖನವೊಂದು( http://manadadani.blogspot.com/2010/09/blog-post_21.html)ಈ ಲೇಖನ ಬರೆಯಲು ಪ್ರೇರಣೆ. ಕರ್ಣನಿಗೆ ಸಂಬಂಧಿಸಿದಂತೆ ಕುಂತಿ ವರ್ತಿಸುವ ಮೂರು ಸನ್ನಿವೇಶಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದು. ಕುಂತಿಯದು ಅಪರಾಧವೇ ಅಲ್ಲವೇ ಅಥವಾ ಅವಳ ವರ್ತನೆ ತಪ್ಪೇ ಸರಿಯೇ ಇವುಗಳ ಬಗ್ಗೆ ತೀರ್ಮಾನ ಕೊಡುವ ಉದ್ದೇಶವೂ ಈ ಲೇಖನಕ್ಕಿಲ್ಲ.
ನಾನು ಆರಿಸಿಕೊಂಡದ್ದು ಕುಮಾರವ್ಯಾಸ ಭಾರತದ ಮೂರು ಸನ್ನಿವೇಶಗಳು.
೧) ಕರ್ಣನ ಜನನ. (ಆದಿಪರ್ವ-೩ - ೧೪,೧೫,೧೭,೨೧,೨೨)
೨)ವಿದ್ಯಾ ಪ್ರದರ್ಶನ. (ಆ.ಪ.-೭ - ೫೩)
೩)ಕರ್ಣ ಭೇದನ (ಉ.ಪ. ೧೧ - ೨೭,೩೧,೩೫)
ಕರ್ಣನ ಜನನ:
"ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹನೆಂದು ಬಂದಳು
ಗಗನನದಿಯಲಿ ಮಿಂದುಟ್ಟಳು ಲೋಹಿತಾಂಬರವ |
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸಗಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ||"
ಮಂತ್ರೋಪದೇಶಿತಳಾದ ಕುಂತಿ ಬೊಂಬೆಯಾಟಕೆ ಮಗುವನ್ನು ತರಲೆಂದು ಮಂತ್ರ ಪ್ರಯೋಗಕ್ಕೆ ಸಿದ್ಧವಾಗುತ್ತಾಳೆ. ಬೊಂಬೆಯಾಟಕ್ಕೆ ಮಗುವನ್ನೇ ತರುವೆ ಎಂಬುದು ಸಹಜವಾಗಿ  "ಮಗುವುತನ" ಹೌದು. ಆದರೆ ಕುಂತಿಯ ಮಟ್ಟಿಗೆ ಇಲ್ಲಿ ಅದನ್ನು ಅನ್ವಯಿಸುವುದು  ಎಷ್ಟು ಸಮರ್ಥನೀಯ? ಆಕೆಯ ವರ್ತನೆ ಗಮನಿಸಿ."ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ." ಅಂದರೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಕುಂತಿಗಿತ್ತು. ಮತ್ತು ಸೂರ್ಯನನ್ನು ಅಹ್ವಾನಿಸುವ ವಿಧಾನ ಹೇಗೆ ಎಂಬುದೂ ತಿಳಿದಿತ್ತು. ಅಂದರೆ ಅವಳದ್ದು "ಮಗುವುತನ"ದ ಮುಗ್ಧತೆ ಅಲ್ಲ, ಒಂದೋ ಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಅಥವಾ ನಿಜವಾಗಿ ಮಗುವನ್ನು ಪಡೆವ ಆಸೆ. ಕನ್ಯೆ ಎಂದು ತಿಳಿದೂ ಮಗುವನ್ನು ಪಡೆವ ಆಸೆ ಇತ್ತು ಅಥವಾಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಇತ್ತು ಎಂದೇ ಭಾವಿಸಬೇಕಾಗುತ್ತದೆ. ದೂರ್ವಾಸನ ಶಕ್ತಿ ಗೊತ್ತಿದ್ದೂ ಪರೀಕ್ಷಿಸ ಹೊರಡುವ ಕುಂತಿಯ ವರ್ತನೆ  ವಿವೇಕವೇ?
 "ಮಗುವುತನದಲಿ" ಎಂಬ ಕುಮಾರವ್ಯಾಸನ ಹೇಳಿಕೆಯನ್ನು ಸಮರ್ಥಿಸುವ ಯಾವ ವಿವರಗಳೂ ಸನ್ನಿವೇಶದ ಚಿತ್ರಣದಲ್ಲಿ ಇಲ್ಲ. ನನ್ನ ಈ ಹೇಳಿಕೆಗೆ ಪೂರಕವಾಗಿ ಈ ಚಿತ್ರಣಗಳನ್ನು ಗಮನಿಸಿ.
"ಇಂದು ಕುಂತೀಭೋಜನೊಡೆತನ
ಬೆಂದುಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ||"
ದೂರ್ವಾಸಮುನಿ ನೃಪ ಮಂದಿರಕ್ಕೆ ಬಂದಾಗ, ಕುಂತೀಭೋಜ ಅವರನ್ನು ಆದರಿಸಿ ಸತ್ಕರಿಸಲು ಮರೆತಾಗ, ಕುಂತಿ ದೂರ್ವಾಸನ ಚರಣಗಳಲ್ಲಿ ಹೊರಳಿ  ಶಾಪವನ್ನು ನಿಲ್ಲಿಸುತ್ತಾಳೆ. ಮುಂದೆ "ಮುನಿಯನುಪಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ"
ಅಂದರೆ ಕುಂತಿಗೆ ದೂರ್ವಾಸ ಮುನಿಯ ಶಕ್ತಿಯ ಬಗೆ ತಿಳಿದಿತ್ತು. ಮತ್ತು ಅವರ ಕೋಪವನ್ನು ನಿಯಂತ್ರಿಸಬೇಕು ಎಂಬ ವಿವೇಕವೂ, ಪ್ರಬುದ್ಧತೆಯೂ ಇತ್ತು. ಅವಳ ಉಪಾಚಾರಕ್ಕೆ ಮೆಚ್ಚಿದ ದೂರ್ವಾಸ ಮಂತ್ರೋಪದೇಶ ಮಾಡುವಾಗ ಹೇಳುವ ಎಚ್ಚರಿಕೆಯ ಮಾತುಗಳನ್ನು ಗಮನಿಸಿ:
"ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗಳನಿವು ಸಿದ್ಧಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು|
ಮಗನು ಜನಿಸುವನೆಂದು......"
ದೂರ್ವಾಸ ಹೇಳುವ "ಸಿದ್ಧಪ್ರಯೋಗ" "ಮಗನು ಜನಿಸುವ" ಎಂಬುದು ಕುಂತಿಗೆ ಅರ್ಥವಾಗದಷ್ಟು ಅಪ್ರಬುದ್ಧಳಾಗಿದ್ದಳು ಎಂದು ನಾವು ಭಾವಿಸಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ದುರ್ವಾಸನನ್ನು ಉಪಚರಿಸಿದ ರೀತಿ ಅದಕ್ಕೆ ಅಸ್ಪದ ಕೊಡುವುದಿಲ್ಲ. ದೂರ್ವಾಸನನ್ನು ಉಪಚರಿಸುವಾಗ ಆಕೆ ವಿವೇಕಿಯೂ,ಪ್ರಬುದ್ಧೆಯೂ ಆಗಿದ್ದಳು ಮತ್ತು ಅನಂತರ ಅವಳು ಮುಗ್ಧಳಾದಳು ಎಂದು ಭಾವಿಸುವುದು  ಕಥೆಯ ಚಲನೆಗೆ ವಿರುದ್ಧವಾಗುತ್ತದೆ.
***
ಸೂರ್ಯ ಕರ್ಣನನ್ನು ದಯಪಾಲಿಸಿದ ಅನಂತರ ಕುಂತಿಯ ವರ್ತನೆಯನ್ನು,ವಿಚಾರವನ್ನು ಗಮನಿಸಿ.
"ಕುಲದಸಿರಿ ತಪ್ಪುವುದಲಾ ಸಾ
ಕಿಳುಹಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ||"
"ಬೊಂಬೆಯಾಟಕೆ ಮಗನನೇ ತಹನೆಂದು" ತೀರ್ಮಾನಿಸುವಾಗ ಇರದ ಜನದಪವಾದದ ಭೀತಿ ಈಗ ಬಂದಿದೆ. ಮಂತ್ರಪ್ರಯೋಗದಿಂದ ಮಗ ಬಂದರೆ ಅಪವಾದ ಬರುತ್ತದೆ ಎಂದು ಕುಂತಿಗೆ ಪ್ರಯೋಗಕ್ಕಿಂತ ಮುಂಚೆ ತಿಳಿಯದಷ್ಟು ಮೌಢ್ಯವಿತ್ತೇ?
ಗಂಗೆಯಲ್ಲಿ ಕುಂತಿಯನ್ನು ಹಾಕುವಾಗಲೂ ಕುಂತಿ ಹೇಳುವುದನ್ನು ಗಮನಿಸಿ:
"ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ......."
"ಬಲ್ಲಂದದಲಿ ಕಂದನ ಕಾಯಿ"ಎನ್ನುವುದು ಸಹಜ ಮಾತೃತ್ವದ ಭಾವನೆ,ಆಸೆ. ಕಂದನನ್ನು ಕೊಂದರೂ ಅಡ್ಡಿಯಿಲ್ಲ ಎಂಬ ಭಾವನೆ!? ಅಪವಾದ ಭೀತಿಯಿಂದ ಮಗುವನ್ನು ನೀರಿಗೆ ಹಾಕುವುದನ್ನು ಸರಿ ಅಂತ ಭಾವಿಸೋಣ. ಕೊಲ್ಲೆನುತ ಎಂಬ ಸೂಚನೆಯನ್ನು ಹೇಗೆ ಅರ್ಥೈಸುವುದು? ಸಮರ್ಥಿಸುವುದು?
ಆದ್ದರಿಂದ ಕುಂತಿ ಮುಗ್ಧೆಯಾಗಿರಲಿಲ್ಲ, ಮಂತ್ರಪ್ರಯೋಗಕ್ಕೆ ಸಿದ್ಧವಾದದ್ದು ಕುತೂಹಲ ಮತ್ತು ಅವಿವೇಕಿತನದಿಂದ ಎಂದೇ ಭಾವಿಸಬೇಕಾಗುತ್ತದೆ. ಪೂರ್ವಾಪರ ವಿವೇಚಿಸದೆ ವರ್ತಿಸಿದ್ದು ಕುಂತಿಯ ತಪ್ಪಲ್ಲವೇ?
*****
ವಿದ್ಯಾ ಪ್ರದರ್ಶನ.
 ಈ ಸನ್ನಿವೇಶವನ್ನು ಕುಮಾರವ್ಯಾಸ ತುಂಬಾ ಸಂಕ್ಷಿಪ್ತವಾಗಿಸಿದ್ದಾನೆ.  ಅರ್ಜುನನೆದುರು ಬಂದವ ತನ್ನ ಮಗನಿರಬಹುದು ಎಂಬ ಅನುಮಾನ ಕುಂತಿಗೆ ಬರುತ್ತದೆ. ಆದರೆ ಆಕೆ ಮೂರ್ಛೆ ಹೋಗುತ್ತಾಳೆ. ಕುಂತಿ ಇಲ್ಲಿ ತನ್ನ ಮಗನ ಬಗ್ಗೆ ಯಾಕೆ ಮಾತಾಡಲಿಲ್ಲ ಎಂಬುದರ ಬಗೆಗೆ ಕುಮಾರವ್ಯಾಸನಿಗೂ ಉತ್ತರ ಕೊಡುವುದು ತೊಡಕಾಗಿ ಕಂಡು, ಕುಂತಿಗೆ ಹಾಗಾಗಲು ಕಾರಣ ವಿಷ್ಣುಮಾಯೆ ಎಂದುಬಿಡುತ್ತಾನೆ. "ವಿಷ್ಣುಮಾಯೆಯ ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ ತನ್ನ ತಾನೇ ಮರುಗಿ ಮೂರ್ಛಾಪನ್ನೆಯಾದಳು ಕುಂತಿ"
(ಮುಂದುವರಿಯುವುದು)
 

Thursday, November 11, 2010

"ಎನ್ನೊಡಲನಾಂ ತವಿಪೆಂ"

ನನ್ನ ಹಿಂದಿನ ಲೇಖನದಲ್ಲಿ ಕರ್ಣಭೇದನ ಪ್ರಸಂಗವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯ ಬಗೆಗೆ ಬರೆದಿದ್ದೆ. ಈ ಲೇಖನದಲ್ಲಿ ಈ ಪ್ರಸಂಗವನ್ನು ಕನ್ನಡದ ಆದಿಕವಿ ಎನ್ನಿಸಿಕೊಂಡ ಪಂಪ ಚಿತ್ರಿಸಿದ ರೀತಿಯ ಬಗೆಗೆ ಬರೆಯುತ್ತಿದ್ದೇನೆ.
ಇಲ್ಲಿ ಪೀಠಿಕೆಯಾಗಿ ಒಂದೆರಡು ಮಾತುಗಳನ್ನು ಹೇಳಬೇಕು. ವ್ಯಾಸರಿಗೆ ಮಹಾಭಾರತ ಇಡೀ ಜಗತ್ತಿನ ಕಥೆ, ಕೇವಲ ಕುರು-ಪಾಂಡವರ ಕಥೆಯಲ್ಲ. ಅದರಲ್ಲಿ ಬರುವ ಉಪಕಥೆಗಳು ಕುರು ಪಾಂಡವರ ಕಥೆಯಷ್ಟೇ,ಅಥವಾ ಅದಕ್ಕಿಂತಲೂ, ಗಾತ್ರದಲ್ಲಿ,ಸತ್ವದಲ್ಲಿ ವಿಸ್ತಾರ, ಮಹತ್ವವುಳ್ಳದ್ದು. ಅದ್ದರಿಂದ ಅದಕ್ಕೆ ಐದನೆಯ ವೇದ ಎಂದು ಕರೆದರು. ಜಗತ್ತಿನ ಕಥೆಯಾದ ಈ ಜಯವೆಂಬ ಭಾರತವನ್ನು ಕುಮಾರವ್ಯಾಸ  ಕುಗ್ಗಿಸಿಕೊಂಡ. ಅವನಿಗೆ ಜಗತ್ತಿನ ಕಥೆ ಹೇಳುವುದು ಉದ್ದೇಶವೇ ಆಗಿರಲಿಲ್ಲ. ಅವನ ಉದ್ದೇಶ ಕೃಷ್ಣನ ಕಥೆ ಹೇಳುವುದು.
"ತಿಳಿಯ ಹೇಳುವೆ ಕೃಷ್ಣ ಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ" -(ಆ.ಪ.-೧-೧೩)
ಇಳೆಯ ಜಾಣರು ಮತ್ತು ಕೃಷ್ಣ ಮೆಚ್ಚಲಿ ಎಂದು ತಾನು ಈ ಕಥೆ ಹೇಳುತ್ತೇನೆ ಎಂಬುದು ಅವನ ಘೋಷಣೆ. ಅಂದರೆ ಅವನು ಭಾರತದ ಕಥೆಯನ್ನು ಕೃಷ್ಣನ ಕೇಂದ್ರದಲ್ಲಿ ನೋಡಿದ,ಕೃಷ್ಣನ ಲೀಲೆ ಎಂಬಂತೆ ನೋಡಿದ.
"ವಿಕ್ರಮಾರ್ಜುನ ವಿಜಯ" ಎಂಬ ಪಂಪ ಭಾರತ ಈ ಕೃತಿಗಿಂತ ಸರಿಸುಮಾರು ೬೦೦ ವರ್ಷಗಳ ಹಿಂದಿನದು. . ಕುಮಾರವ್ಯಾಸನ ಭಾಷೆ ನಡುಗನ್ನಡ. ಪಂಪನದು ಹಳೆಗನ್ನಡ. ಭಾವ ಅರ್ಥವಾಗುವುದು ಕಷ್ಟವಲ್ಲವಾದರೂ ಭಾಷೆ ನಮಗೆ ಬಳಕೆಯಲ್ಲಿ ಇಲ್ಲದ್ದು.( ಕುಮಾರವ್ಯಾಸನ ಭಾಷೆ ತುಂಬಾ ಸರಳ, ನಾವು ಬಳಸುವ ಭಾಷೆಗೆ ಸಮೀಪದ್ದು ಎನಿಸಿದರೂ ಆ ಭಾಷೆಯಲ್ಲಿ ಆತ ಬಲಿಯುವ ಭಾವ ಬಹಳ ಸಂಕೀರ್ಣವಾದದ್ದು. ಕೆಲವು ಉದಾಹರಣೆಗಳು:(ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಿಸಿ) "ಪಡುವಣ ಶೈಲ ವಿಪುಲ ಸ್ತಂಭ ದೀಪಿಕೆಯಂತೆ ರವಿ ಮೆರೆದ"(ಭೀ.ಪ.-೧೦-೪೨), " ಹಿಂಗದಿನ್ನೂ ದ್ವಾಪರದ ಸರ್ವಾಂಗವೀ ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ ಸಂಗಡಿಸಿತಧರೋತ್ತರದ ಸಮರಂಗ"(ಕ.ಪ.-೧೭-೫೨), "ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆಯಾರಲಿ ಹರಿವುದೈ" (ಸ.ಪ.- ೧೩-೪). ಇದೇ ಒಂದು ದೀರ್ಘ ಲೇಖನವಾಗಿಬಿಡಬಹುದು.ಇಷ್ಟು ಸಾಕು.)
ಪಂಪನಿಗೆ ಈ ಕಥೆ ಜಗತ್ತಿನ ಕಥೆಯೂ ಅಲ್ಲ,ಕೃಷ್ಣನ ಕಥೆಯೂ ಅಲ್ಲ. ಈ ಕಥೆಯ ಮೂಲಕವಾಗಿ ಅರ್ಜುನನನ್ನು ವೈಭವೀಕರಿಸುವುದು ಅವನ ಉದ್ದೇಶ. ಅರ್ಜುನನ ಮೂಲಕವಾಗಿ ಈ ಕಥೆಯನ್ನು ನಿರೂಪಿಸುವುದು ಅವನ ಗುರಿ. ಇದಕ್ಕೆ ಕಾರಣವೂ ಇದೆ. ಅವನೇ ಹೇಳುವಂತೆ "ಈ ಕಥೆಯೊಳ್ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್". ತನ್ನ ರಾಜನಾದ,ತನಗೆ ಅಶ್ರಯವನ್ನಿತ್ತ ಅರಿಕೇಸರಿಯನ್ನು ಅರ್ಜುನನ ಜೊತೆ ಸಮೀಕರಿಸಿ ಬರೆಯುತ್ತಾನೆ. ಹಾಗಾಗಿ ಅವನ ಕಥೆಯ ನಾಯಕ ಅರ್ಜುನ. (ವ್ಯಾಸರಿಗೆ ಕಥೆಯೇ ನಾಯಕ ಪಾತ್ರವಾಯಿತು. ಕುಮಾರವ್ಯಾಸನಿಗೆ ಕೃಷ್ಣ ನಾಯಕನಾದ.)
****
ಸಂಧಿ ವಿಫಲವಾದ ಅನಂತರ ಹೊರಟ ಕೃಷ್ಣ ಕರ್ಣನನ್ನು ರಥಕ್ಕೇರಿಸಿಕೊಂಡು ಸ್ವಲ್ಪ ದೂರ ಹೋದ ಅನಂತರ ರಥವನ್ನು ನಿಲ್ಲಿಸಿ ಕರ್ಣನನ್ನುದ್ದೇಶಿಸಿ ಹೇಳುತ್ತಾನೆ:
"ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ |
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್ ||
ಸೋದರರೆಯ್ದೆ ಮೈದುನನೆನಾಂ ಪೆಱತೇಂ ಪಡೆಮಾತೋ ನಿನ್ನದೀ |
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ || (ನವಮಾಶ್ವಾಸ-೬೪)
ಕರ್ಣನಿಗೆ ಜನ್ಮವೃತ್ತಾಂತ ತಿಳಿಸುವ ರೀತಿ, ಪ್ರಲೋಭನೆ ಒಡ್ಡುವ ರೀತಿ ಕುಮಾರವ್ಯಾಸ ಮತ್ತು ಪಂಪರಲ್ಲಿ ಸರಿಸುಮಾರು ಒಂದೇ ರೀತಿಯಿದೆ. ಇಲ್ಲಿಂದ ಮುಂದೆ ಪಂಪ ಒಂದು ಸಣ್ಣ ಬದಲಾವಣೆ ಮಾಡಿದ್ದಾನೆ.
"ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಱಿಯಱಿವೆನಾಂ ಸಹದೇವಂ ||
ಪನ್ನಗಕೇತು ದಿನೇಶಂ |
ನಿನ್ನಂಬಿಕೆ ಕುಂತಿಯಿಂತಿವರ್ ನೆಱೆ ಬಲ್ಲರ್ || (ಆ-೯, ೬೬)
(ಪದವಿಭಾಗ:ನಿನ್ನ ಉತ್ಪತ್ತಿಯನ್ ಇಂತೆಂದು ಎನ್ನರುಂ ಅಣಂ ಅರಿಯರ್ ಅರಿವೆನ್ ಆಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನ ಅಂಬಿಕೆ ಕುಂತಿ ಇವರ್ ನೆರೆ ಬಲ್ಲರ್. ಸರಳಾನುವಾದ: ನಿನ್ನ ಹುಟ್ಟು ಈ ರೀತಿ ಎಂಬುದು ಯಾರಿಗೂ ತಿಳಿದಿಲ್ಲ. ನಾನು,ಸಹದೇವ, ದುರ್ಯೊಧನ, ಸೂರ್ಯ ಮತ್ತು ಕುಂತಿ-ಇಷ್ಟು ಜನರಿಗೆ ಮಾತ್ರ ಗೊತ್ತು.)
ದುರ್ಯೋಧನ ಮತ್ತು ಸಹದೇವ ಇವರಿಗೂ ಗೊತ್ತಿತ್ತು ಎಂದು ಕೃಷ್ಣ ಹೇಳಿದ ಅಂಶವನ್ನು ಗಮನಿಸಬೇಕು.
ದುರ್ಯೋಧನನಿಗೆ ಇದು ಹೇಗೆ ತಿಳಿಯಿತು ಎಂಬುದನ್ನು ಕೃಷ್ಣನ ಮೂಲಕ ಪಂಪ ಹೇಳಿಸುವದನ್ನು ನೋಡಿ.
ಒಮ್ಮೆ ದುರ್ಯೊಧನ ಕರ್ಣ ಇಬ್ಬರೂ ಗಂಗಾನದಿತೀರದಲ್ಲಿ ಬೇಟೆಯಾಡಿದ ಅನಂತರ ಸಮೀಪದ ಸತ್ಯಂತಪರೆಂಬ ಮುನಿಯ ಆಶ್ರಮಕ್ಕೆ ಹೋಗುತ್ತಾರೆ. ಇಬ್ಬರೂ ಮುನಿಗಳಿಗೆ ನಮಸ್ಕರಿಸುತ್ತಾರೆ. ಇಬ್ಬರಿಗೂ ಹರಸಿದ ಮುನಿಗಳು ಕೂರಲು ಆಸನವನ್ನ ಮೊದಲು ಕರ್ಣನಿಗೆ ನೀಡುತ್ತಾರೆ. ಇದು ದುರ್ಯೋಧನನಿಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಅವನು ಕರ್ಣನನ್ನು ಮೊದಲು ಹೊರಗೆ ಕಳುಹಿಸಿ "ಆನಿರೆ ನೀಮಿದೇಕೆ ದಯೆಗೆಯ್ದಿರೋ ಮೀಂಗುಲಿಗಂಗೆ" ಎಂದು ಮುನಿವರ್ಯರನ್ನು ಕೇಳುತ್ತಾನೆ.( ಮೀಂಗುಲಿಗಂಗೆ= ಬೆಸ್ತರ ಕುಲದವನು ಎಂಬ ಪ್ರಯೋಗವನ್ನು ಗಮನಿಸಿ. ದುರ್ಯೋಧನ ಮೀಂಗುಲಿಗ ಎಂದು ತನ್ನನ್ನು ಸಂಬೋಧಿಸಿದ ಎಂಬುದು ಕರ್ಣನಿಗೆ ತಿಳಿದರೆ ಕೌರವನ ಬಗ್ಗೆ ಅವನಿಗೆ ಸಂಶಯ ಬರಬಹುದು.ತನ್ನನ್ನು ಕೌರವ ಈ ರೀತಿ ಭಾವಿಸಿದ್ದಾನೆ ಎಂದು ತಿಳಿದರೆ ಕರ್ಣನ ಮನಸ್ಸು ಖಿನ್ನವಾಗಲು ಬಲವಾದ ಮಾನಸಿಕ ಕಾರಣವೊಂದು ಸಿಕ್ಕಂತಾಗುತ್ತದೆ.) ಮುನಿಗಳಿಂದ ಈತ ಪಾಂಡವರ ಹಿರಿಯ ಎಂಬುದನ್ನು ತಿಳಿದು ಕೌರವ ಆಡುವ ಮಾತು ಕೇಳಿ :"ಪಾಟಿಸುವೆನೊಯ್ಯನೆ ಮುಳ್ಳೊಳ್ಳೆ ಮುಳ್ಳನ್"( ಮುಳ್ಳನ್ನು ಮುಳ್ಳಿಂದ ಕೀಳುತ್ತೇನೆ.)ಕೃಷ್ಣ ಈ ಮಾತನ್ನು ಹೇಳಲು ಕಾರಣ ಕರ್ಣನಿಗೆ ಪಾಂಡವರ ಬಗ್ಗೆ ಮೃದು ಧೋರಣೆ ಬಂದರೆ ಸಾಲದು,ಕೌರವನ  ಬಗ್ಗೆ ಅನುಮಾನ ಬರಬೇಕು. ದುರ್ಯೋಧನ ಈ ರೀತಿಯ ಮಾತನ್ನು ಅಂದ ಎಂದು ಕೃಷ್ಣ ತಿಳಿಸಿದಾಗ ಕರ್ಣನ ಮೇಲೆ ಆಗುವ ಪರಿಣಾಮ ಗ್ರಹಿಸಿ. ಕೌರವನಿಗೆ ಪಾಂಡವರು ಮುಳ್ಳು.ಗೊತ್ತಿರುವ ವಿಚಾರ. ತಾನೂ ಕೂಡ ಮುಳ್ಳು. ಇಲ್ಲಿಯವರೆಗೂ ಇದು ತಿಳಿದಿರಲಿಲ್ಲ. ಆತನ ಆಪ್ತತೆ ಸೋಗು. ಅಪ್ತತೆ ಬರಿಯ ನಟನೆ.ನಿಜವಾಗಿ ಇರುವುದು  ಈ ದುರುದ್ದೇಶ. ಹೀಗೆ ಕರ್ಣನಿಗೆ ಅನಿಸಿದ ಕ್ಷಣವೇ ತನ್ನನ್ನು ಈ ರೀತಿ ಬಳಸಿಕೊಳ್ಳಲು ಹೊಂಚುತ್ತಿರುವ ಕೌರವನ ಪರವಾಗಿ ಹೋರಾಡುವ ಬದಲು ಸಾಯುವುದು ಸೂಕ್ತ, ತನ್ನ ಸಾವೇ ಎಲ್ಲದರ ಪರಿಹಾರ ಅನಿಸಬಹುದು. ಕೃಷ್ಣನಿಗೆ ಬೇಕಾದದ್ದು ಅದೇ. ಲೌಕಿಕವಾಗಿ ಪಾಂಡವರನ್ನು ಒಪ್ಪದೆ,ಆದರೆ ಮಾನಸಿಕವಾಗಿ ಒಪ್ಪಿ, ಜೊತೆಜೊತೆಗೇ ಲೌಕಿಕವಾಗಿ ಕೌರವನನ್ನು ತ್ಯಜಿಸದೆ, ಅದರೆ ಮಾನಸಿಕವಾಗಿ ತ್ಯಜಿಸಲು ಹಿನ್ನೆಲೆಯಾಗಿ ಬೇಕಾದ ಬಲವತ್ತರವಾದ  ನೆಲೆಯೊಂದನ್ನು ಈ ಚಿತ್ರಣದ ಮೂಲಕ ಪಂಪ ಕಟ್ಟುತ್ತಾನೆ.
***
ದುರ್ಯೊಧನನಿಗೆ ಗೊತ್ತಿದೆ ಎಂಬ ಅಂಶವನ್ನುಕೃಷ್ಣನ ಮೂಲಕ  ಪಂಪ ಹೇಳಿಸಿದ್ದಕ್ಕೆ ಬಹುಷಃ ಕಾರಣ: ೧) ಕುಲವನ್ನ ಕೃಷ್ಣ ತಿಳಿಸಿದರೂ  ಅದನ್ನು ಅಷ್ಟು ಸುಲಭವಾಗಿ ನಂಬಿ, ಕೌರವನಿಗೆ ಮೋಸ ಮಾಡುವಷ್ಟು ಲಘುವ್ಯಕ್ತಿತ್ವ ಕರ್ಣನದಲ್ಲ. ೨) ಹಾಗೆ ನಂಬಿದರೂ ಕೌರವನ ಬಗ್ಗೆ ಅವನ ಗೌರವ,ವಿಶ್ವಾಸ ಬದಲಾಗುವುದಿಲ್ಲ.
 ಆದರೆ ಕಥೆಯ ಪ್ರಕಾರ ಕರ್ಣ ರಣದಲ್ಲಿ ತನ್ನೊಡಲನ್ನು ಸಮರ್ಪಿಸುವ ನಿಲುವು ತೆಗೆದುಕೊಳ್ಳುತ್ತಾನೆ. ಪಾಂಡವರು ತಮ್ಮಂದಿರು ಎಂದು ತಿಳಿದ ಮಾತ್ರಕ್ಕೆ ತನ್ನನ್ನು ಸಾಕಿದ,ಸಲಹಿದ,ಘನತೆ ಗೌರವ ನೀಡಿದ, ಸಮಾನನಂತೆ ತನ್ನನ್ನು ಕಂಡ ಕೌರವನ ಪರವಾಗಿ ಪ್ರಾಮಾಣಿಕವಾಗಿ ಹೋರಾಡುವ ನಿರ್ಧಾರವನ್ನು ತ್ಯಜಿಸಿ "ಎನ್ನೊಡಲನಾಂ ತವಿಪೆಂ ರಣರಂಗ ಭೂಮಿಯೊಳ್" ಎಂದು ತೀರ್ಮಾನಿಸಲು ಪಾಂಡವರು ತಮ್ಮಂದಿರು ಎಂಬೊಂದೇ ಕಾರಣ ತುಂಬಾ ದುರ್ಬಲವಾಗುತ್ತದೆ ಮತ್ತು ಕರ್ಣನಂತಹ ವ್ಯಕ್ತಿತ್ವವುಳ್ಳವನಿಗೆ ಇದು ಶೋಭೆ ತರುವ ಸಂಗತಿಯಲ್ಲ ಎಂದು ಪಂಪನಿಗೆ ಅನ್ನಿಸಿರಬೇಕು.ಕರ್ಣ ಅಂತಹ ತೀರ್ಮಾನಕ್ಕೆ ಬರಲು ಮಾನಸಿಕವಾದ ಬಲವಾದ ಬೇರೆ ಯಾವುದಾದರೂ ಕಾರಣ ಇರಬೇಕು ಎಂದು ಪಂಪನಿಗೆ ಅನ್ನಿಸಿರಬೇಕು.(ಕೃಷ್ಣನಿಗೂ ಕೂಡ).
ದುರುದ್ದೇಶದಿಂದ ದುರ್ಯೊಧನ, ತಾನು ಪಾಂಡವರ ಹಿರಿಯ ಎಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿದ,ತನ್ನನ್ನು  ಸಾಕಿ,ಸಲಹಿ  ಅತ್ಯಂತ ಆಪ್ತನಂತೆ ಕಂಡ ಎಂಬ ಅನುಮಾನ ಕರ್ಣನಿಗೆ ಬಂದರೆ ಅದು ಸಹಜ. ಅವನ ಆಪ್ತತೆ ಸಹಜವಲ್ಲ,ಗುರಿಯೊಂದರ ಈಡೇರಿಕೆಗಾಗಿ ನಟಿಸಿದ ಆಪ್ತತೆ ಎಂದು ಕರ್ಣನಿಗೆ ಅನಿಸಿದರೆ ಮಾತ್ರ ಆತ ಪಾಂಡವರನ್ನು ಒಪ್ಪದೆ ಕೌರವನನ್ನೂ ನಂಬದೆ "ಎನ್ನೊಡಲನಾಂ ತವಿಪೆಂ" ಎಂದು ಹೇಳಲು ಸಾಧ್ಯ.  ಮುಂದೆ ಆತ ಕುಂತಿಗೆ ಮಾತು ಕೊಡುವುದು ಅಸಹಜ ಅನಿಸುವುದಿಲ್ಲ, ಇದರದೇ ಮುಂದಿನ ಭಾಗವಾಗುತ್ತದೆ.
ಪಂಪ ಈ ಸನ್ನಿವೇಶವನ್ನು ನಿರ್ವಹಿಸಿದ ರೀತಿ ಪಾತ್ರಗಳ ಮಾನಸಿಕ ಸ್ಥಿತಿ,ತುಮುಲಗಳನ್ನು ಆತ ಗ್ರಹಿಸುವ ಕಲಾವಂತಿಕೆಗೆ ಸಾಕ್ಷಿಯಾಗುತ್ತದೆ.

Saturday, October 30, 2010

ವಂಶವನರುಹಿ ಕೊಂದನು..

.
ತನ್ನ ಹುಟ್ಟಿನ ಮಾಹಿತಿಯನ್ನು ಕೃಷ್ಣನಿಂದ ತಿಳಿದ ಸಂದರ್ಭವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯನ್ನು ವಿವರಿಸಿ,ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.
ಸಂಧಾನದ ಪ್ರಯತ್ನ ವಿಫಲವಾದ ಅನಂತರ,ಕೌರವನ ಸಭೆಯಿಂದ ಹೊರಟ ಕೃಷ್ಣ ಕರ್ಣನನ್ನು ಕರೆದು ರಥವೇರಿಸಿಕೊಳ್ಳುತ್ತಾನೆ."ಮೈದುನತನದ ಸರಸವನೆಸಗಿ ರಥದೊಳು ದನುಜರಿಪು ಕುಳ್ಳಿರಿಸಿದನು ಪೀಠದಲಿ".ಕರ್ಣನಿಗೆ ಭಯ, ವಿಸ್ಮಯ, ಗಾಬರಿ. " ಎನಗೆ ನಿಮ್ಮಡಿಗಳಲಿ ಸಮಸೇವನೆಯೇ ದೇವ ಮುರಾರಿಯಂಜುವೆ"  " ವಂಶವಿಹೀನನು ನಿಮ್ಮಡಿಗಳೊಡನೆ ಸಮಾನಿಸುವರೇ " ಎಂದಾಗ ಕೃಷ್ಣ ಅವನಿಗೆ ಅವನ ಜನ್ಮದ ವಿವರಣೆ ನೀಡುತ್ತಾನೆ."ಲಲನೆ ಪಡೆದೀಯೈದು ಮಂತ್ರಗಳಲಿ ಮೊದಲಿಗ ನೀನು". ನೀನು ಎಲ್ಲರಿಗೂ ಹಿರಿಯ.ನೀನೊಪ್ಪಿದರೆ ಈ ಯುದ್ಧವನ್ನು ತಪ್ಪಿಸಬಹುದು."ಪಾಂಡವರಲೈವರ ಮೊದಲಿಗನು ನೀನಿರಲು ಧರಣಿಯ ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು". ಅಷ್ಟೇ ಅಲ್ಲ ಅವನಿಗೆ ಪ್ರಲೋಭನೆ ಒಡ್ಡುತ್ತಾನೆ. "ನಿನಗೆ ಕಿಂಕರವೆರಡು ಸಂತತಿ" "ಎಡದ ಮೈಯಲಿ ಕೌರವೇಂದ್ರರ ಗಡಣ ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳುಪ್ಪುವ ಕಡು ವಿಲಾಸವ ಬಿಸುಟು ಕುರುಪತಿ ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ" ತಾನು ಕುಲವಿಹೀನ ಎಂಬ ಕೀಳರಿಮೆಯಿಂದ ಬಳಲುತ್ತಿದ್ದ ಕರ್ಣ ಈ ಆಹ್ವಾನವನ್ನು ಒಪ್ಪಿದ್ದರೆ ಆತನಿಗೆ ಕುಲವೂ ಸಿಗುತ್ತಿತ್ತು, ಅಧಿಕಾರವೂ ಸಿಗುತ್ತಿತ್ತು. ಆದರೆ ಹಾಗಾಗುವುದಿಲ್ಲ. ಕರ್ಣನ ಪ್ರತಿಕ್ರಿಯೆ ಗಮನಿಸಿ.ಕರ್ಣನ ಕಂಠ ಬಿಗಿಯಿತು. ಕಣ್ಣೀರು ಉಕ್ಕಿತು."ಕೊರಳಸೆರೆ ಹಿಗ್ಗಿದವು ದೃಗುಜಲ ಉರವಣಿಸಿ ಕಡು ನೊಂದನಕಟಾ ಕುರುಪತಿಗೆ ಕೇಡಾದುದೆಂದನು ಮನದೊಳಗೆ" ಸತ್ಕುಲಜಾತನಾದ ತನಗೆ ಇಲ್ಲಿಯವರೆಗೂ ಬಂದ ಕಷ್ಟಗಳ ನೆನದು ದುಃಖವಾದದ್ದಲ್ಲ,...ಅಯ್ಯೋ.! ಕುರುಪತಿಗೆ ಕೇಡಾಯಿತಲ್ಲ! ಎಂದು.ಅಧಿಕಾರ ಸಿಗುತ್ತದೆ ಎಂಬ ಸಂತೋಷವಿಲ್ಲ. ಗೆಳೆಯನಿಗೆ ಅನ್ಯಾಯವಾಯಿತಲ್ಲ ಎಂಬುದು ಅವನ ಮೊದಲ ಪ್ರತಿಕ್ರಿಯೆ. ಕರ್ಣನಿಗೆ ಅವನ ವಂಶ ತಿಳಿದರೆ ಕೌರವನಿಗೆ ಹೇಗೆ ಅನ್ಯಾಯವಾಗುತ್ತದೆ? "ಕಾದಿ ಗೆಲುವೊಡೆ ಪಾಂಡು ಸುತರು ಸಹೋದರರು ಕೊಲಲಿಲ್ಲ ಕೊಲ್ಲದೆ ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ."  ವಂಶ ತಿಳಿದ ಅನಂತರ, ಸಹೋದರರಾದ ಪಾಂಡವರನ್ನು ಕೊಲ್ಲುವ ಹಾಗಿಲ್ಲ. ಕೊಲ್ಲದಿದ್ದರೆ ಕೌರವನಿಗೆ ಅವನಿ ಇಲ್ಲ. ಇಲ್ಲಿ "ಕೊಲ್ಲದೆ ಕಾದೆನಾದೊಡೆ" ಎಂಬ ಪ್ರಯೋಗ ಗಮನಿಸಬೇಕು.ಕಾದು ಎಂಬ ಪದಕ್ಕೆ ಕಾಳಗ ಮಾಡು ಎಂಬ ಅರ್ಥವಲ್ಲದೆ ಕಾಪಾಡು ಎಂಬ ಅರ್ಥವೂ ಇದೆ. ಆದ್ದರಿಂದ ಈ ಹೇಳಿಕೆಯನ್ನು ಪಾಂಡವರನ್ನು ಕೊಲ್ಲದೆ ಯುದ್ಧ ಮಾಡಿದರೆ ಎಂಬಂತೆಯೂ, ಹಾಗೆಯೇ ಪಾಂಡವರನ್ನು ಕೊಲ್ಲದೆ ರಕ್ಷಿಸಿದರೆ ಎಂಬಂತೆಯೂ ಅರ್ಥ ಮಾಡಬಹುದು. ಯಾವರೀತಿಯಲ್ಲಿ ಕರ್ಣ ವರ್ತಿಸಿದರೂ "ಕೌರವಂಗವನಿಯಲಿ ಹೊಗಲಿಲ್ಲ." ಕೌರವನಿಗೆ ಕೇಡಾಗುತ್ತದೆ ಎಂದು ಕರ್ಣನಿಗೆ ಅನ್ನಿಸಲು ಇದು ಕಾರಣ.
 ಕರ್ಣನ ಮುಂದಿನ ಪ್ರತಿಕ್ರಿಯೆ: "ತನ್ನ ವಂಶವನರುಹಿ ಕೊಂದನು". ವಂಶ ತಿಳಿಯಿತು ಎಂಬ ಸಂಭ್ರಮವಿಲ್ಲ, ಬದಲಿಗೆ ಆದದ್ದು ಚಿಂತೆ.  ವಂಶವನ್ನರುಹಿ ಯಾರನ್ನು ಕೊಂದ? ವಂಶ ತಿಳಿದರೆ ಕರ್ಣ ಯಾಕೆ ಸಾಯಬೇಕು? ಯಾಕೆಂದರೆ ಇನ್ನು ಮುಂದೆ ಕರ್ಣನಿಗೆ ಅರ್ಜುನ ವೈರಿಯಲ್ಲ,ತಮ್ಮ. "ವಿಜಯನಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ". ತಮ್ಮ ಎಂದು ತಿಳಿದೂ ಕರ್ಣ ಹೇಗೆ ಕೊಲ್ಲಬಲ್ಲ? ಹಾಗಂತ ತಾನು ಅರ್ಜುನನನ್ನು ಕೊಲ್ಲದಿದ್ದರೆ ಅರ್ಜುನ ಅಂತೂ ತನ್ನನ್ನು ಬಿಡುವವನಲ್ಲ. ಹಾಗಾಗಿ ಸಾವು ನಿಶ್ಚಿತ. ಕರ್ಣನ ಮಟ್ಟಿಗೆ ತನ್ನ ಹುಟ್ಟಿನ ಬಗೆಗಿನ ಅರಿವು ಸಾವಿನ ಕಾರಣವಾಗುತ್ತಿದೆ ಎಂಬ ಧ್ವನಿಯನ್ನು ತುಂಬಾ ಸರಳವಾದ "ವಂಶವನರುಹಿ ಕೊಂದನು" ಎಂಬ ಹೇಳಿಕೆಯ ಮೂಲಕ ಕುಮಾರವ್ಯಾಸ ಸೂಚಿಸುತ್ತಾನೆ.
(ಕೌರವ ಮತ್ತು ಕರ್ಣ ಇವರದು ಬಹಳ ಆಪ್ತವಾದ ಸ್ನೇಹ ಎಂಬುದು ನಮಗೆ ಗೊತ್ತು.  ಸ್ನೇಹದ ತೀವ್ರತೆಯಿಂದಾಗಿಯೇ ಕರ್ಣನ ಮೊದಲ ಪ್ರತಿಕ್ರಿಯೆ " ಕುರುಪತಿಗೆ ಕೇಡಾದುದು".
 ಇವರಿಬ್ಬರ ಸ್ನೇಹದ ಬಗ್ಗೆ ಬೇರೆಯವರಿಗೂ ಯಾವ ಭಾವನೆಯಿತ್ತು ಎಂಬುದರ ಸೊಗಸಾದ ಚಿತ್ರಣ ಇಲ್ಲಿದೆ; ಕರ್ಣನ ಮರಣಾನಂತರ ಕೃಪ ಹೇಳುವ ಮಾತು:
"ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹು ವಿಕ್ರಮವ ||
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ || ---ಶಲ್ಯಪರ್ವ, ೧-೧೬.)
ಯಾರೇನು ಹೇಳಿದರೂ, ತಾನು ಯಾವ ವಂಶಜನಾದರೂ ಅರ್ಜುನನನ್ನು ಕೊಲ್ಲುತ್ತೇನೆ ಎಂದು ಕರ್ಣ ತೀರ್ಮಾನಿಸದೆ ತನ್ನ ಸಾವನ್ನು ಯಾಕೆ ನಿಶ್ಚಯಿಸಿದ? ಆತ ಕೃಷ್ಣನಿಗೆ ಹೇಳುವ ಮಾತನ್ನು ಗಮನಿಸಿ: "ಹಲವು ಮಾತೇನಖಿಳ ಜನಕೆನ್ನುಳಿವು ಸೊಗಸದು". ಕೌರವನನ್ನು ಹೊರತುಪಡಿಸಿ ಉಳಿದೆಲ್ಲರಿಂದಲೂ ಸದಾ ಅವಮಾನವನ್ನು ಅನುಭವಿಸುತ್ತಿದ್ದ,ಭರ್ತ್ಸನವನ್ನೇ ಕೇಳುತ್ತಿದ್ದ ಕರ್ಣನಿಗೆ ಅನ್ನಿಸಿತ್ತು: ಯಾರಿಗೂ ತನ್ನ ಬದುಕು ಇಷ್ಟವಿಲ್ಲ. ಹಾಗಾಗಿ ತನಗೂ ಬದುಕು ಬೇಡ. (ಉಳಿವು= ಬದುಕು, ಜೀವನ). ಕೃಷ್ಣ ವಂಶವನ್ನು ತಿಳಿಸಿದಾಗ ತಾನು ಬದುಕುವುದು ಕೃಷ್ಣನಿಗೂ ಇಷ್ಟವಿಲ್ಲ ಎಂದು ಕರ್ಣನಿಗೆ ಅನಿಸಿರಬೇಕು. ತನ್ನ ಸಾವು ಕೃಷ್ಣನ ಗುರಿಯಾಗಿರುವುದರಿಂದಲೇ "ವಂಶವನರುಹಿ ಕೊಂದನು". ಎಂದು ಕರ್ಣನಿಗೆ ಅನ್ನಿಸುತ್ತದೆ. ತನ್ನ ಸಾವನ್ನು ನಿಶ್ಚಯಿಸಿಕೊಂಡ ಬಳಿಕ ಕರ್ಣ ಕೃಷ್ಣನಿಗೆ ಭರವಸೆ ಕೊಡುತ್ತಾನೆ: "ಪತಿಯವಸರಕ್ಕೆ ಶರೀರವನು ನೂಕುವೆನು ನಿನ್ನಯ ವೀರರೈವರ ನೋಯಿಸೆನು "(ಕಾದಿ ಕೊಲುವೊಡೆ) ಪಾಂಡುಸುತರು ಸಹೋದರರು ಎಂಬ ಭಾವನೆ ,ತನ್ನ ಸಾವನ್ನು ನಿಶ್ಚಯಿಸಿದ ಅನಂತರ ಬದಲಾಗುತ್ತದೆ. "ನಿನ್ನಯ ವೀರರೈವರು" ಎನ್ನುತ್ತಾನೆ. ಆ ಐವರ ಮಾತ್ರ ನಿನ್ನವರು, ನಾನು ಅದೇ ವಂಶಜನಾದರೂ ನಿನ್ನವನಲ್ಲ ಎಂಬ ಧ್ವನಿಯನ್ನೂ ಗಮನಿಸಬಹುದು.ಕೌರವ ಸತ್ತು ತಾನುಳಿದರೂ ತನಗೆ ಆಪ್ತರಿಲ್ಲ. ಯಾಕೆಂದರೆ "ಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ." ಪಾಂಡವರು ತಮ್ಮಂದಿರು ಎಂದಾದರೂ ಕೌರವನಷ್ಟು ಆಪ್ತರಾಗಲು ಸಾಧ್ಯವಿಲ್ಲ. ಹುಟ್ಟಿನ ಸಂಬಂಧಕ್ಕಿಂತ ಒಡನಾಟದ ಸಂಬಂಧ ಹೆಚ್ಚು ಎಂಬುದನ್ನು ಕರ್ಣ ನಂಬುತ್ತಾನೆ. ಅತ್ತ ಪಾಂಡವರಿಗೂ ಆಪ್ತನಾಗದೆ ಇತ್ತ ಕೌರವನಿಗೂ ನ್ಯಾಯ ಕೊಡದೆ ಬದುಕುವ ಬದಲು ಸಾಯುವುದೇ ಲೇಸು ಎಂದು ಕರ್ಣ ತೀರ್ಮಾನಿಸುತ್ತಾನೆ."ಪತಿಯವಸರಕ್ಕೆ ಶರೀರವನು ನೂಕುವೆನು"ಎಂದು ತೀರ್ಮಾನಿಸುತ್ತಾನೆ.
***ಕುಮಾರವ್ಯಾಸ ಭಾರತವನ್ನು ಮತ್ತೆ ಮತ್ತೆ ಓದುತ್ತೇನೆ. ಆಗೆಲ್ಲ ನನಗೆ ಎದುರಾಗುವ ಅನೇಕ ಪ್ರಶ್ನೆಗಳಿವೆ.  ಯಾಕೆ ಕೃಷ್ಣ ಕರ್ಣನಿಗೆ ಅವನ ಕುಲವನ್ನು ತಿಳಿಸಿದ? ಅದೂ ಸಂಧಿಯ ಪ್ರಯತ್ನ ವಿಫಲವಾದ ಅನಂತರ?
ಕರ್ಣ ಅರ್ಜುನನನ್ನು ಕೊಲ್ಲಬಹುದು ಎಂಬ ಅನುಮಾನವಿತ್ತೇ? ಭೀಷ್ಮ,ದ್ರೋಣ ಇವರು ಕೌರವನ ಪಕ್ಷವಾದರೂ ಅವರ ಮನಸ್ಸು ಪಾಂಡವರ ಕಡೆಗೆ ಎಂಬುದು ತಿಳಿದಿತ್ತು. ಹಾಗಾಗಿ ಅವರನ್ನು ಗೆಲ್ಲುವ ಬಗ್ಗೆ ಅನುಮಾನವಿಲ್ಲ. ಆದರೆ ಕರ್ಣ ಹಾಗಲ್ಲ. ಅವನು ಪಕ್ಕಾ ಪಾಂಡವವಿರೋಧಿ. ಅವನನ್ನು ಈ ತಂತ್ರದಿಂದ ಮಾತ್ರ ಮಣಿಸಬಹುದು ಎಂದು ತರ್ಕಿಸಿದನೇ? ಅಥವಾ ಕೃಷ್ಣನಿಗೆ ಅರ್ಜುನನ ಶೌರ್ಯದ ಬಗ್ಗೆ ಅನುಮಾನವಿತ್ತೇ?(ಮಹಾಭಾರತದ ಯುದ್ಧದಲ್ಲಿ ಭೀಷ್ಮ,ದ್ರೋಣ, ಕರ್ಣ, ಜಯದ್ರಥ ಎಲ್ಲರನ್ನೂ ಅರ್ಜುನ ಗೆದ್ದದ್ದು ಕೃಷ್ಣನ ತಂತ್ರಗಾರಿಕೆಯಿಂದ ಎಂಬ ಅಂಶವನ್ನೂ ಗಮನಿಸಬಹುದು.) ಸಂಧಿಪ್ರಯತ್ನಕ್ಕಿಂತ ಮೊದಲೇ ಕರ್ಣನಿಗೆ ಅವನ ಕುಲ ತಿಳಿಸಿದರೆ, ಅಕಸ್ಮಾತ್ ಕರ್ಣ ಕೌರವನಿಗೆ ಪಾಂಡವರಿಗೆ ಐದು ಗ್ರಾಮಗಳನ್ನು ಕೊಟ್ಟುಬಿಡು ಎಂದು ಹೇಳಿದರೆ..ಕೌರವ ಹಾಗೇ ಮಾಡಿದರೆ....ಈ ಅನುಮಾನವೂ ಕೃಷ್ಣನಿಗೆ ಇತ್ತೇ? ಹಾಗಾಗಿ ಸಂಧಿಯ ಅನಂತರ, ಇನ್ನು ಯುದ್ಧ ತಪ್ಪಲಾರದು ಎಂದು ಖಾತ್ರಿಯಾದ ಅನಂತರವೇ ವಂಶ ತಿಳಿಸಿದನೇ?

Saturday, October 23, 2010

ಕಾಲ ಪರಿಮಾಣ.

ಕಾಲ ಅಭೌತಿಕವಾದದ್ದು. ಅದು ಅನುಭವಾತೀತ. ಕಾಲದಲ್ಲಿ ನಾವು ಬೇರೆಲ್ಲವನ್ನೂ ಅನುಭವಿಸಬಹುದೇ ಹೊರತು ಕಾಲವನ್ನೇ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ.ಇಡೀ ಜಗತ್ತಿನ ಅಸ್ತಿತ್ವ ಕಾಲ ಮತ್ತು ದೇಶದ(Time and Space) ನೆಯ್ಗೆಯಲ್ಲಿದೆ. ದೇಶವನ್ನು  ಉದ್ದ, ಅಗಲ, ಎತ್ತರ ಎಂಬ ಮೂರು ಆಯಾಮಗಳ ಮೂಲಕ ಗ್ರಹಿಸಿ ಅಳೆಯಬಹುದಾದಂತೆ, ಏಕಮುಖೀ ಚಲನೆಯುಳ್ಳ, ನಾಲ್ಕನೆಯ ಆಯಾಮವಾದ ಕಾಲವನ್ನು ನೇರವಾಗಿ ಅಳೆಯಲಾರೆವು. ನಡೆಯುತ್ತಿರುವ ಒಂದು ಘಟನೆಯನ್ನು, ಅಥವಾ ಎರಡು ಘಟನೆಗಳ ನಡುವಿನ ಅಂತರವನ್ನು ಗ್ರಹಿಸಲು ಕಾಲವನ್ನು ಬಳಸಬಹುದೇ ಹೊರತು ನೇರವಾಗಿ ಕಾಲವನ್ನು-ದೇಶವನ್ನು ಅಳೆಯುವಂತೆ- ಅಳೆಯಲು ಸಾಧ್ಯವಿಲ್ಲ. ದೇಶಕ್ಕಿರುವಂತೆ ಕಾಲಕ್ಕೆ ಪೂರ್ವಸ್ಥಿತಿ ಇಲ್ಲ. ಉದಾಹರಣೆಗೆ, ಐದು ನಿಮಿಷದಿಂದಲೂ ಪೂಜೆ ನಡೀತಿದೆ ಅನ್ನುವಾಗ, ಗ್ರಹಿಕೆಗೆ ಸಿಗುವುದು ನಡೆಯುತ್ತಿರುವ ಪೂಜೆಯೇ ಹೊರತು ಕಾಲವಲ್ಲ. ಆದರೆ ಕಾಲದ ಮೂಲಕವಾಗಿ ಆರಂಭ, ಅಂತ್ಯ ಮತ್ತು ಚಲನೆಯನ್ನು ನಾವು ಅಳೆಯುತ್ತೇವೆ. ಹಾಗಾಗಿ ಕಾಲ ಒಂದು ಮಾಪಕವಾಗಿ ಅಗತ್ಯವಿದೆ.
ಕಾಲವನ್ನು ವಿವಿಧ ನಾಗರೀಕತೆಗಳು ವಿವಿಧ ರೀತಿಯಲ್ಲಿ ಅಳೆದಿವೆ. ವೇದದಲ್ಲಿ ಕಾಲವನ್ನು ಅದರ ಅತಿ ಸೂಕ್ಷ್ಮತೆಯಿಂದ ಪ್ರಾರಂಭಿಸಿ, ಅದರ ಅತಿ ಸ್ಥೂಲದವರೆಗೂ ಗುರುತಿಸಿದ್ದಾರೆ.
ಅಣು, ಪರಮಾಣು ಮತ್ತು ತ್ರಸರೇಣು ಎಂಬ ಕಾಲದ ಅಳತೆಯ ಮೊದಲ ಮೂರು ಕಲ್ಪನೆಗಳ ನಿರ್ದಿಷ್ಟ ವಿವರಣೆ ಸಿಗುತ್ತಿಲ್ಲ. ಎರಡು ಅಣುಗಳು ಸೇರಿ ಒಂದು ಪರಮಾಣು, ಇಂತಹ ಮೂರು ಪರಮಾಣು ಸೇರಿದರೆ ಒಂದು ತ್ರಸರೇಣು ಎಂಬ ವಿವರವಿದೆ. ಆದರೆ ಒಂದು ಅಣುವಿನಷ್ಟು ಕಾಲ ಎಂದರೆಷ್ಟು ಎಂಬ ವಿವರ ಸಿಗುವುದಿಲ್ಲ. ಇಂತಹ ೩ ತ್ರಸರೇಣು ಒಂದು ತ್ರುಟಿಗೆ ಸಮ. ಇದು  ೧/೧೬೫೭.೫ ಸೆಕಂಡುಗಳಿಗೆ ಸಮ. ಆದುದರಿಂದ ನಮ್ಮ ಕಾಲ ಗಣನೆಯನ್ನು ಇಲ್ಲಿಂದ ಪ್ರಾರಂಭಿಸಬಹುದು.
೧) ೩ ತ್ರಸರೇಣು = ೧ ತ್ರುಟಿ.
೨) ೧೦೦ ತ್ರುಟಿ  = ೧ ವೇಧಾ
೩) ೩ ವೇಧಾ   = ೧ ಲವ
೪) ೩ ಲವಗಳು = ಒಂದು ನಿಮೇಷ.(=ಒಮ್ಮೆ ಕಣ್ಣು ಮುಚ್ಚಿ ತೆರೆಯಲು ತಗುಲುವ ಕಾಲ.)
೫) ೩ ನಿಮೇಷಗಳು = ೧ ಕ್ಷಣ.
೬) ೫ ಕ್ಷಣಗಳು = ೧ ಕಷ್ಟಸ್( ಸರಿಸುಮಾರು ೮ ಸೆಕೆಂಡುಗಳು.)
೭) ೧೫ ಕಷ್ಟಸ್ = ೧ ಲಘು
೮) ೧೫ ಲಘುಗಳು = ೧ ದಂಡ ಅಥವಾ ೧ ನಾಡಿಕಾ
೯) ೨ ನಾಡಿಕಾಗಳು = ೧ ಮುಹೂರ್ತ
೧೦) ೬/೭ ಮುಹೂರ್ತಗಳು = ೧ ಯಾಮ ಅಥವಾ ಪ್ರಹರ
೧೧) ೪ ಯಾಮಗಳು+ ೪ ಯಾಮಗಳು = ೧ ಹಗಲು + ೧ ರಾತ್ರಿ =ಒಂದುದಿನ.
೧೨) ೧೫ ದಿನಗಳು = ೧ ಪಕ್ಷ
೧೩) ೨ ಪಕ್ಷಗಳು = ೧ ಮಾಸ
೧೪) ೨ ಮಾಸಗಳು = ೧ ಋತು
೧೫) ೩ ಋತುಗಳು = ೧ ಆಯನ
೧೬) ೨ ಆಯನಗಳು = ೧ ವರ್ಷ/ ಸಂವತ್ಸರ.
೧೭) ೪೩೨೦೦೦ ವರ್ಷಗಳು = ೧ ಚರಣ ಅಥವಾ ಪಾದ
೧೮) ೧೦ ಚರಣ = ೧ ಮಹಾಯುಗ =೪೩೨೦೦೦೦ ವರ್ಷಗಳು.
[ ಟಿಪ್ಪಣಿ: ೧ ಮಹಾಯುಗದಲ್ಲಿ ೪ ಯುಗಗಳಿವೆ.ಒಂದು ಪಾದದ ಕಲಿಯುಗ(೪೩೨೦೦೦ ವರ್ಷಗಳು) +ಎರಡು ಪಾದಗಳ ದ್ವಾಪರ ಯುಗ (೮೬೪೦೦೦ ವರ್ಷಗಳು) +ಮೂರು ಪಾದಗಳ ತ್ರೇತಾಯುಗ (೧೨೯೬೦೦೦ ವರ್ಷಗಳು) +ನಾಲ್ಕು ಪಾದಗಳ ಕೃತಯುಗ (೧೭೨೮೦೦೦ ವರ್ಷಗಳು.)]
ಇಲ್ಲಿಯವರೆಗಿನ ಕಾಲದ ವಿಭಾಗವನ್ನು ಸೂಕ್ಷ್ಮದ ಗುಂಪಿಗೆ ಸೇರಿಸಬಹುದು.೪೩೨೦೦೦೦ ವರ್ಷಗಳು ಹ್ಯಾಗೆ ಸೂಕ್ಷ್ಮ ಮಾರಾಯರೆ?ನಿಮಗೆ ಏನಾಗಿದೆ ಎಂದು ಕೇಳಬೇಡಿ. ಇನ್ನೂ ಮುಂದೆ ಹೋಗುವಾ.ಬನ್ನಿ.
 ೧೦೦೦ ಮಹಾಯುಗಗಳು = ೧ ಕಲ್ಪ = ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ರಾತ್ರಿ ಕೂಡ ೧ ಕಲ್ಪಕ್ಕೆ ಸಮ.
೬೦ ಕಲ್ಪಗಳು = ಬ್ರಹ್ಮನ ಒಂದು ತಿಂಗಳು.
೧೨ ತಿಂಗಳು =ಬ್ರಹ್ಮನ ಒಂದು ವರ್ಷ
೧೦೦ ವರ್ಷಗಳು= ಬ್ರಹ್ಮನ ಆಯುಷ್ಯ.ಇದನ್ನು ಪರ ಅಥವಾ ಮಹಾಕಲ್ಪ ಎಂದೂ ಕರೆಯುತ್ತಾರೆ. ಇದು ೩೧೧೦೪೦೦೦೦೦೦೦೦೦೦ ಮಾನವ ವರ್ಷಗಳಿಗೆ ಸಮ.
ಒಂದು ಮಹಾಯುಗ ಇದರ ೧.೮೮೮೯ % ಗೆ ಸಮವಾಗುವುದರಿಂದ ಅದನ್ನು ಕಾಲವಿಭಾಗದಲ್ಲಿ ಸೂಕ್ಷ್ಮಕ್ಕೆ ಸೇರಿಸಿದ್ದು!
ಉತ್ಸಾಹಿಗಳು ಬ್ರಹ್ಮನ ಆಯುಷ್ಯದಲ್ಲಿ ಎಷ್ಟು ತ್ರುಟಿಗಳಿವೆ ಎಂದು ಲೆಕ್ಕ ಹಾಕಲು ಪ್ರಯತ್ನಿಸಬಹುದು. ಆ ಬ್ರಹ್ಮನು ಅವರಿಗೆ ಒಳ್ಳೆಯದು ಮಾಡಲಿ.
(ಅಡಿ ಟಿಪ್ಪಣಿ: ಇದಲ್ಲದೆ ಈ ಕಾಲದಲ್ಲಿ ಒಳವಿಭಾಗಗಳಾಗಿ ಮನ್ವಂತರ, ಸಂಧ್ಯ,ಸಂಧ್ಯಾಂಶಗಳಿವೆ. ಕೋರಿಕೆ ಬಂದರೆ ಅದರ ಬಗ್ಗೆ ಬರೆದರಾಯಿತು.ಸಧ್ಯಕ್ಕಿಷ್ಟು ಸಾಕು.)
(ಆಧಾರ;೧. "ಪುರಾಣ ನಾಮ ಚೂಡಾಮಣಿ" ೨. " A Concise Encyclopaedia of Hinduism")

Wednesday, October 20, 2010

ಮತ್ತೆ ಅಕ್ಷೌಹಿಣಿ..

 ಮಹಾಭಾರತದ ಯುದ್ಧದಲ್ಲಿ ಉತ್ತರ ಭಾರತದ ಎಲ್ಲ ರಾಜರ ಸೈನ್ಯವೂ ಸೇರಿ ೧೮ ಅಕ್ಷೌಹಿಣಿ ಆಗಿತ್ತು.(ನನ್ನ ಹಿಂದಿನ ಲೇಖನದಲ್ಲಿ ಅಕ್ಷೋಹಿಣಿ ಎಂದು ತಪ್ಪಾಗಿ ಬರೆದಿದ್ದೆ. ಅದು ಅಕ್ಷೌಹಿಣಿ ಎಂದಾಗಬೇಕು.ತಪ್ಪಿಗೆ ಕ್ಷಮೆ ಕೋರುತ್ತೇನೆ.) ಒಂದು ಅಕ್ಷೌಹಿಣಿ ಅಂದರೆ ಲೆಕ್ಕ ಗೊತ್ತಾಯಿತು.ಸರಿ.ಆದರೆ ಎಷ್ಟೊ ಪುಟುಗೋಸಿ ರಾಜರ ಬಳಿ ಅಕ್ಷೌಹಿಣಿ ಸೈನ್ಯ ಇರದಿದ್ದರೆ ಹ್ಯಾಗೆ ಎಣಿಕೆ ಎಂಬ ಅನುಮಾನ ಬಂತು. ಈ ಅನುಮಾನಗಳೇ ಹಾಗೆ.ಹನುಮಂತನ ಬಾಲದ ತರಹ.ಬಟ್ಟೆ ತೋರಿದಷ್ಟೂ ಬೆಳೆಯುತ್ತದೆ! ಅದಕ್ಕೂ ಉತ್ತರ ಸಿಕ್ಕಿತು!
ಕುತೂಹಲವಿದ್ದರೆ ಮುಂದೆ ಓದಿ.
೧ ರಥ + ೧ ಆನೆ + ೩ ಕುದುರೆ + ೫ ಕಾಲಾಳು = ೧ ಪತ್ತಿ
೩ ಪತ್ತಿ = ೧ ಸೇನಾಮುಖ.
೩ ಸೇನಾಮುಖ = ೧ ಗುಲ್ಮ
೩ ಗುಲ್ಮ = ೧ ಗಣ
೩ ಗಣ =೧ ವಾಹಿನಿ
೩ ವಾಹಿನಿ =೧ ಪೃತನಾ
೩ ಪೃತನಾ = ೧ ಚಮೂ
೩ ಚಮೂ = ೧ ಅನೀಕಿನಿ
 ೧೦ ಅನೀಕಿನಿ = ೧ ಅಕ್ಷೌಹಿಣಿ.
ಸರಿ. ಆದರೆ ಈಗ ಮತ್ತೊಂದು ಅನುಮಾನ ಶುರುವಾಗಿದೆ. ಒಂದು ವೇಳೆ ಒಬ್ಬ ಚಿಲ್ರೆ ರಾಜನ ಸೈನ್ಯದಲ್ಲಿ ೫ ರಥ, ೮ ಆನೆ, ೧೫ ಕುದುರೆ ಮತ್ತು ೫೦೦ ಕಾಲಾಳುಗಳಿದ್ದರೆ ಅದನ್ನು ಏನೆಂದು ಕರಿಯೋದು?

Tuesday, September 28, 2010

ಅಕ್ಷೋಹಿಣಿ.

ಕಪಿಗಳ ಸೈನ್ಯದ ಎಣಿಕೆ ಮುಗಿದ ಅನಂತರ ನನಗೆ ಮಹಾಭಾರತದ ಕಾಲದ ಸೈನ್ಯದ ಎಣಿಕೆಯ ಬಗ್ಗೆ ಕುತೂಹಲ ಹುಟ್ಟಿತು. ದ್ವಾಪರ ಯುಗದಲ್ಲಿ ಸೈನ್ಯವನ್ನು  ಅಕ್ಷೋಹಿಣಿಯ ಲೆಕ್ಕದಲ್ಲಿ ಎಣಿಸುತ್ತಿದ್ದರು. ಕುರುಕ್ಷೇತ್ರದ ಯುದ್ಧದಲ್ಲಿ ಒಟ್ಟು ೧೮ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತಂತೆ.  ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಕಾಲಾಳುಗಳು ಸೇರಿದರೆ ಒಂದು ಅಕ್ಷೋಹಿಣಿ ಆಗುತ್ತದೆ. ಇಂತಹ ೧೮ ಅಕ್ಷೋಹಿಣಿ ಅಂದರೆ ೩೯೩೬೬೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು,೧೧೮೦೯೮೦ ಕುದುರೆಗಳು ಮತ್ತು ೧೯೬೮೩೦೦ ಕಾಲಾಳುಗಳು ಆದಂತಾಯಿತು. ಇದ್ದರೂ ಇರಬಹುದು.ಕಪಿಗಳ ಸಂಖ್ಯೆಗೆ ಹೋಲಿಸಿದರೆ ಇದು ತೀರ ಹೆಚ್ಚಲ್ಲ.

Thursday, September 16, 2010

ಕಪಿಸೇನೆ.

ಸೀತಾದೇವಿಯನ್ನು ಬಿಡಿಸಲು ರಾಮನಿಗೆ ರಾವಣನ ಜೊತೆ ಯುದ್ಧ ಅನಿವಾರ್ಯವಾಯಿತು. ಈ ಯುದ್ಧಕ್ಕೆ ರಾಮನ ಸಹಾಯಕ್ಕೆ ಬಂದದ್ದು ಸುಗ್ರೀವನ ಕಪಿಸೇನೆ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಎಷ್ಟು? ಮಾಡಲೇನೂ ಮಹತ್ಕಾರ್ಯ ಇಲ್ಲದ ನನಗೆ ಉತ್ತರ ಹುಡುಕುವ ಕುತೂಹಲ ಹುಟ್ಟಿತು. ಉತ್ತರ ಸಿಕ್ಕಿತು ಕೂಡ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಒಂದು ಕೋಟಿ ಮಹೌಘ. ಸರಿ..ಒಂದು ಮಹೌಘ ಎಂದರೆಷ್ಟು? ಅದನ್ನೂ ಹುಡುಕಿದ್ದಾಯಿತು. ಎಣಿಸಿಕೊಳ್ಳಿ.
೧ ಲಕ್ಷ ಕೋಟಿ= ೧ ಶಂಖ.                 ೧೦೦೦೦೦೦೦೦೦೦೦೦
೧ ಲಕ್ಷ ಶಂಖ.=೧ ಮಹಾಶಂಖ.          *೧೦೦೦೦೦೦೦೦೦೦೦೦
೧ ಲಕ್ಷಮಹಾಶಂಖ=೧ ಬೃಂದ            *೧೦೦೦೦೦೦೦೦೦೦೦೦
೧ ಲಕ್ಷ ಬೃಂದ= ೧ ಮಹಾ ಬೃಂದ        *೧೦೦೦೦೦೦೦೦೦೦೦೦
೧ ಲಕ್ಷ ಮಹಾ ಬೃಂದ=ಒಂದು ಪದ್ಮ     *೧೦೦೦೦೦೦೦೦೦೦೦೦
೧ ಲಕ್ಷ ಪದ್ಮ= ೧ ಮಹಾಪದ್ಮ             *೧೦೦೦೦೦೦೦೦೦೦೦೦
೧ ಲಕ್ಷ ಮಹಾಪದ್ಮ= ೧ ಖರ್ವ            *೧೦೦೦೦೦೦೦೦೦೦೦೦
೧ ಲಕ್ಷ ಖರ್ವ= ೧ ಮಹಾಖರ್ವ           *೧೦೦೦೦೦೦೦೦೦೦೦೦
೧ ಲಕ್ಷ ಮಹಾಖರ್ವ=೧ ಸಮುದ್ರ         *೧೦೦೦೦೦೦೦೦೦೦೦೦
೧ ಲಕ್ಷ ಸಮುದ್ರ=೧ ಔಘ                 *೧೦೦೦೦೦೦೦೦೦೦೦೦
೧ ಲಕ್ಷ ಔಘ= ೧ ಮಹೌಘ.               *೧೦೦೦೦೦೦೦೦೦೦೦೦
ಅಂದರೆ ಒಂದರ ಮುಂದೆ ೧೩೨ ಸೊನ್ನೆಗಳನ್ನು ಹಾಕಿದರೆ ಒಂದು ಮಹೌಘ ಆಗುತ್ತದೆ. ಇಂತಹ ಒಂದು ಕೋಟಿಯಷ್ಟು ಸಂಖ್ಯೆಯ ಕಪಿಗಳು ಸೈನ್ಯದಲ್ಲಿದ್ದುವಂತೆ. ಒಂದು ಕೋಟಿ ಮಹೌಘವೆಂದರೆ ಇನ್ನೆಷ್ಟು ಸೊನ್ನೆಗಳು ಬೇಕು? ನಿಮಗೇ ಬಿಟ್ಟಿದ್ದೇನೆ.
(ವಿ.ಸೂ. ಅಕಸ್ಮಾತ್ ಮೊದಲಿನ ಸಂಖ್ಯೆಯಲ್ಲಿ ಸೊನ್ನೆಗಳ ಲೆಕ್ಕ ತಪ್ಪಿದ್ದರೆ ತಿದ್ದಿಕೊಳ್ಳಿ. ನನಗೆ ಶೂನ್ಯವೆಂದರೆ ಬಲು ಪ್ರೀತಿ! ಗಣಿತದಲ್ಲಿ ನನ್ನ ಮೇಷ್ಟ್ರು ಅದನ್ನೇ ನನಗೆ ಪ್ರೀತಿಯಿಂದ ಕೊಡುತ್ತಿದ್ದರು!)

Wednesday, September 8, 2010

ಸರಿ-ತಪ್ಪು,ಲಾಭ-ನಷ್ಟ

.
ಸರಿ -ತಪ್ಪು ಮತ್ತು ಲಾಭ- ನಷ್ಟ ಇವು ನಮ್ಮ ಯೋಚನೆ,ಕ್ರಿಯೆಗಳನ್ನು ಸದಾ ನಿಯಂತ್ರಿಸುವ,ಪ್ರಚೋದಿಸುವ ತತ್ವಗಳು. ಸರಿ ಮತ್ತು ತಪ್ಪು ನೀತಿಯ ವಲಯಕ್ಕೆ ಸಂಬಂಧಿಸಿದ್ದು. ಲಾಭ, ನಷ್ಟ  ವ್ಯಾವಹಾರಿಕ ವಲಯಕ್ಕೆ ಸಂಬಂಧಿಸಿದ್ದು.  ಲಾಭವೂ ಆಗಬೇಕು ಮತ್ತು ಅದು ಸರಿಯಾದ ಮಾರ್ಗವೂ ಆಗಿರಬೇಕು ಎಂದು ಅಪೇಕ್ಷೆಪಟ್ಟು ಅದನ್ನು ಪಾಲಿಸುವವರು ನೈತಿಕವಾಗಿ ಹಾಗೂ ವ್ಯಾವಹಾರಿಕವಾಗಿ ಉತ್ತಮರು.  ನಷ್ಟವಾದರೂ ಚಿಂತೆಯಿಲ್ಲ ಸರಿಯಾದದ್ದನ್ನು ಮಾಡುತ್ತೇನೆ ಎನ್ನುವವರು ನೈತಿಕವಾಗಿ ಉತ್ತಮರು,ವ್ಯಾವಹಾರಿಕವಾಗಿ ದಡ್ಡರು. ಇವರ ಜೊತೆ  ತುಂಬ ಭರವಸೆಯಿಂದ ವ್ಯವಹರಿಸಬಹುದು. ತಪ್ಪು ಎಂದು ಗೊತ್ತಿದ್ದೂ ಕೇವಲ ಲಾಭಕ್ಕಾಗಿ ಮಾಡುವುದು ನಯವಂಚನೆ.ಇವರು ನೈತಿಕವಾಗಿ ಅಧಮರು,ವ್ಯಾವಹಾರಿಕವಾಗಿ ಪರಮ ಸ್ವಾರ್ಥಿಗಳು ಮತ್ತು ಬುದ್ಧಿವಂತರು. ಇವರ ಜೊತೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು. ಇವರು ಯಾವಾಗ ಹೇಗೆ ಎಂಬುದು ತಿಳಿಯುವುದಿಲ್ಲ. ಇನ್ನು ತಪ್ಪನ್ನೂ ಮಾಡುತ್ತಾ ನಷ್ಟ ಅನುಭವಿಸುವವರು ಮೂರ್ಖರು.ಒಂದೋ ಇವರಿಗೆ ತಿಳಿ ಹೇಳಬೇಕು ಅಥವಾ ಇವರಿಂದ ದೂರವಿರಬೇಕು.
*****
ಸಾಮಾನ್ಯವಾಗಿ, ಯಾವುದೇ ಸಂಗತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆ ಸಂಗತಿ ನಮಗೆ ಸಂಬಂಧಿಸಿದ್ದು ಅಲ್ಲವಾದರೆ ನಾವು ಸರಿ-ತಪ್ಪುಗಳ ತತ್ತ್ವವನ್ನು ಬಳಸುತ್ತೇವೆ. ನಮಗೆ ಸಂಬಂಧಿಸಿದ ಸಂಗತಿಯಾದರೆ ಸರಿ-ತಪ್ಪುಗಳ ಬದಲು ಲಾಭ-ನಷ್ಟದ ತತ್ವ ಬಳಸುತ್ತೇವೆ. ಉದಾಹರಣೆಗೆ ವಿದ್ಯುತ್ ನಿಗಮದ ನೌಕರರು ಮುಷ್ಕರ ಮಾಡಿದರೆ ಬ್ಯಾಂಕ್ ನೌಕರರು "ಇವರಿಗೆ ಎಷ್ಟು ಸವಲತ್ತು ಕೊಟ್ಟರೂ ಸಾಲಲ್ಲ!ಹೀಗಾದರೆ ದೇಶ ಉದ್ಧಾರವಾದಂತಯೇ!" ಎಂದು ಟೀಕಿಸುತ್ತಾರೆ. ಆದರೆ ಅದೇ ಉದ್ದೇಶಕ್ಕಾಗಿ ಅವರೂ ಮುಷ್ಕರ ಮಾಡುತ್ತಾರೆ. ಆವಾಗ ಮೇಲಿನಂತೆ ಟೀಕೆ ಮಾಡುವ ಸರದಿ ವಿದ್ಯುತ್ ನೌಕರರದು.ನಮ್ಮೆಲ್ಲ ತೀರ್ಮಾನಗಳು ವ್ಯಕ್ತಿನಿಷ್ಟತೆಯಲ್ಲಿ ತೀರ್ಮಾನವಾಗುತ್ತದೆಯೇ ಹೊರತು ವಸ್ತುನಿಷ್ಠತೆಯಲ್ಲಿ ಅಲ್ಲ. ನೈತಿಕ ನಷ್ಟಕ್ಕಿಂತ ಆರ್ಥಿಕ ಲಾಭವೇ ಹೆಚ್ಚು ಮುಖ್ಯವಾದದ್ದು ಅಥವಾ/ಹಾಗೂ ಈ ವ್ಯವಸ್ಥೆ ಹಾಳಾಗಿದೆ ಮತ್ತು ಹೀಗೆ ಹಾಳಾಗಲು ನನ್ನೊಬ್ಬನನ್ನು ಬಿಟ್ಟು ಉಳಿದೆಲ್ಲರು/ಉಳಿದೆಲ್ಲವೂ ಕಾರಣ ಎಂಬ ಒಳನಂಬಿಕೆಯೇ ಈ ಪ್ರವೃತ್ತಿಯ ಕಾರಣವಿರಬಹುದೇ?

Saturday, September 4, 2010

ಕೌರವಶತನಾಮಾವಳಿ


 ತುಂಬಾ ವರ್ಷಗಳ ಹಿಂದಿನ ಘಟನೆ.ಸಾಗರದ ಸಮೀಪದ ಶಿರುವಂತೆಯಲ್ಲಿ ಒಂದು ತಾಳಮದ್ದಲೆ. ಶೇಣಿ,ಆನಂದ ಮಾಸ್ತರ,ದೇರಾಜೆ,ಸಾಮಗ ಮೊದಲಾದ ಆಗಿನ ಕಾಲದ ಘಟಾನುಘಟಿ ಅರ್ಥಧಾರಿಗಳು. ಪ್ರಸಂಗ ಸರಿಯಾಗಿ ನೆನಪಿಗೆ ಬರುತ್ತಿಲ್ಲ.ಶೇಣಿಯವರಿಗೆ ಪ್ರಶ್ನೆ ಕೇಳಿ ಎಲ್ಲರನ್ನೂ ಸೋಲಿಸುವ ತವಕ.  ಯಾವುದೋ ಸಂದರ್ಭದ ಸಂವಾದದಲ್ಲಿ ಅನಂದಮಾಸ್ತರರು "ನೂರು ಜನ ಕೌರವರು.."ಎಂದು ಹೇಳಿದ್ದೇ ತಡ ಶೇಣಿಯವರು,ಅನಂದಮಾಸ್ತರರನ್ನು ಸಿಕ್ಕಿಸಲು "ಯಾವ ನೂರು ಜನ? ಹೆಸರು ಗೊತ್ತ?"ಎಂಬ ಕೊಂಕು ಪ್ರಶ್ನೆಯನ್ನು ಎಸೆದರು.ಸಭೆ ಸ್ತಬ್ಧವಾಯಿತು. ಸ್ವತಃ ಧೃತರಾಷ್ಟ್ರನಿಗೂ,ಗಾಂಧಾರಿಗೂ ಬಹುಷಃ ತಮ್ಮ ನೂರು ಮಕ್ಕಳ ಹೆಸರು ಗೊತ್ತಿತ್ತೋ ಇಲ್ಲವೋ! ಅನಂದ ಮಾಸ್ತರರು ಅಳುಕಲಿಲ್ಲ.ಒಮ್ಮೆ ನಕ್ಕರು."ನೂರುಜನರ ಹೆಸರು ಬೇಕಾ? ಕೇಳಿ"ಎಂದವರೇ ದುರ್ಯೊಧನ,ಯುಯುತ್ಸು,ದುಶ್ಯಾಸನ....ಇತ್ಯಾದಿ ಶತ ನಾಮ ಪಠಿಸಿದರು.ಅನಂದಮಾಸ್ತರರ ಮಾತು ಬಲು ಚುರುಕು. ಅವರು ಮಾತನಾಡುವಾಗ ಒಂದು ಪದಕ್ಕೂ ಮತ್ತೊಂದು ಪದಕ್ಕೂ ಅಂತರ ತುಂಬಾ ಕಡಿಮೆ.ನೂರು ಕೌರವರ ಹೆಸರನ್ನು ಯಾವ ರಭಸದಲ್ಲಿ ಹೇಳಿದರೆಂದರೆ ಡಬ್ಬದಲ್ಲಿ ಕಲ್ಲು ಹಾಕಿ ಗಡಗಡ ಅಲ್ಲಾಡಿಸಿದಂತಾಯಿತು! ಶೇಣಿಯವರನ್ನೂ ಸೇರಿದಂತೆ ಯಾರಿಗೂ ಮೊದಲ ನಾಲ್ಕಾರು ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಏನು ಎಂಬುದು ತಿಳಿಯಲಿಲ್ಲ."ತಿಳಿಯತಲ್ಲ   ನೂರುಜನರ ಹೆಸರು" ಎಂದು ಶೇಣಿಯವರನ್ನು ಕೇಳಿ ತಮ್ಮ ಅರ್ಥ ಮುಂದುವರೆಸಿದರು.
ಯಾಕೋ ಇವತ್ತು ಆ ಘಟನೆ ನೆನಪಾಯಿತು.ನನಗೂ ಕುತೂಹಲ. ನೂರು ಕೌರವರ ಹೆಸರು ಏನಿರಬಹುದು?ನಮ್ಮ ಸ್ಥಳೀಯ ತಾಳಮದ್ದಲೆ ಕಲಾವಿದ ಗೊರಮನೆ ಮಂಜುನಾಥ ಅವರನ್ನು ವಿಚಾರಿಸಿದೆ. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸಿದ್ದೇನೆ.ನಮ್ಮ ತಲೆಯಲ್ಲಿ ನಾವು ತುಂಬಿಕೊಂಡಿರುವ,ನಮಗೆ ಬೇಕಿಲ್ಲದ ಮಾಹಿತಿಗಳ ಗುಂಡಿಗೆ ಇದನ್ನೂ ತುಂಬಿಸಿಕೊಳ್ಳೋಣ.
೧.ದುರ್ಯೋಧನ ೨.ಯುಯುತ್ಸು ೩.ದುಶ್ಯಾಸನ ೪.ದುಸ್ಸಹ ೫.ದುಶ್ಯಲ ೬.ಜಲಸಂಧ ೭.ಸಮ ೮.ಸಹ ೯.ವಿಂದ ೧೦.ಅನುವಿಂದ ೧೧.ದುರ್ಧರ್ಷ ೧೨.ಸುಬಾಹು ೧೩.ದುಷ್ಟ್ರಧರ್ಷಣ ೧೪.ದುರ್ಮರ್ಷಣ ೧೫.ದುರ್ಮುಖ ೧೬.ದುಷ್ಕರ್ಣ ೧೭.ಕರ್ಣ ೧೮.ವಿವಿಶಂತಿ ೧೯.ವಿಕರ್ಣ ೨೦.ಶಲ ೨೧.ಸತ್ವ ೨೨.ಸುಲೋಚನ ೨೩.ಚಿತ್ರ ೨೪.ಉಪಚಿತ್ರ ೨೫.ಚಿತ್ರಾಕ್ಷ ೨೬.ಚಾರುಚಿತ್ರ ಶರಾಸನ ೨೭.ದುರ್ಮದ ೨೮.ದುರ್ವಿಗಾಹ ೨೯.ವಿವಿತ್ಸು ೩೦.ವಿಕಟಾನನ ೩೧.ಊರ್ಣನಾಭ ೩೨.ಸುನಾಭ ೩೩.ನಂದ ೩೪.ಉಪನಂದ ೩೫.ಚಿತ್ರಬಾಣ ೩೬.ಚಿತ್ರವರ್ಮ ೩೭.ಸುವರ್ಮ ೩೮.ದುರ್ವಿರೋಚನ ೩೯.ಅಯೋಬಾಹು ೪೦.ಚಿತ್ರಾಂಗ ೪೧.ಚಿತ್ರಕುಂಡಲ ೪೨.ಭೀಮವೇಗ ೪೩.ಭೀಮಬಲ ೪೪.ಬಲಾಕಿ ೪೫.ಬಲವರ್ಧನ ೪೬.ಉಗ್ರಾಯುಧ ೪೭.ಸುಷೇಣ ೪೮.ಕುಂಡೋದರ ೪೯.ಮಹೋದರ ೫೦.ಚಿತ್ರಾಯುಧ ೫೧.ನಿಷಂಗೀ ೫೨.ಪಾಶೀ ೫೩.ವೃಂದಾರಕ ೫೪.ದೃಢವರ್ಮ ೫೫.ದೃಢಕ್ಷತ್ರ ೫೬. ಸೋಮಕೀರ್ತಿ ೫೭.ಅನೂದರ ೫೮. ದೃಢಸಂಧ ೫೯. ಜರಾಸಂಧ ೬೦. ಸತ್ಯಸಂಧ ೬೧.ಸದಃಸುವಾಕ್ ೬೨.ಉಗ್ರಶ್ರವಸ ೬೩.ಉಗ್ರಸೇನ ೬೪.ಸೇನಾನೀ ೬೫.ದುಷ್ಪರಾಜಯ ೬೬.ಅಪರಾಜಿತ ೬೭.ಪಂಡಿತಕ ೬೮.ವಿಶಾಲಾಕ್ಷ ೬೯.ದುರಾಧರ ೭೦.ದೃಢಹಸ್ತ ೭೧.ಸುಹಸ್ತ ೭೨.ವಾತವೇಗ ೭೩.ಸುವರ್ಚಸ ೭೪.ಆದಿತ್ಯಕೇತು ೭೫.ಬಹ್ವಾಶೀ ೭೬.ನಾಗದತ್ತ ೭೭.ಅಗ್ರಯಾಯೀ ೭೮.ಕವಚೀ ೭೯.ಕ್ರಥನ ೮೦.ದಂಡೀ ೮೧.ದಂಡಧಾರ ೮೨.ಧನುರ್ಗ್ರಹ ೮೩.ಉಗ್ರ ೮೪.ಭೀಮರಥ ೮೫.ವೀರಬಾಹು ೮೬.ಅಲೋಲುಪ ೮೭.ಅಭಯ ೮೮.ರೌದ್ರಕರ್ಮಾ ೮೯.ದ್ರುಢರಥಾಶ್ರಯ ೯೦.ಅನಾಧೃಷ್ಯ ೯೧.ಕುಂಡಭೇದೀ ೯೨.ವಿರಾವೀ ೯೩.ಪ್ರಮಥ ೯೪.ಪ್ರಮಾಥೀ ೯೫.ದೀರ್ಘರೋಮ ೯೬.ದೀರ್ಘಬಾಹು ೯೭.ವ್ಯೂಢೋರು ೯೮.ಕನಕಧ್ವಜ ೯೯.ಕುಂಡಾಶೀ ೧೦೦.ವಿರಸಜ .
ನೂರೊಂದನೆಯವಳು ದುಶ್ಯಲಾ. 
(ನೋಡಿ:ವ್ಯಾಸಭಾರತದ ಆದಿಪರ್ವ-೧೧೭ನೆಯ ಅಧ್ಯಾಯ.)
 

Monday, August 9, 2010

ದೇವರೆಂಬ ಮಾಯೆಹನೂರು ಎಂಬುದು ಹನೂರಿನ ಹೆಸರು. ಸಾಗರದಿಂದ ಜೋಗಕ್ಕೆ ಹೋಗುವ ಹೆದ್ದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಹೋದರೆ, ಈ ದಾರಿಯಿಂದಲೇ ಹುಟ್ಟಿತೆಂಬಂತೆ ಕಾಣುವ ಇಳುಕಲಾದ ಮಣ್ಣಿನ ದಾರಿಯೊಂದು ಎರಡು ಗುಡ್ಡಗಳ ನಡುವೆ ಇದೆ. ಇಳುಕಲು ಹಾದಿಯಲ್ಲಿ ಒಂದಿಪ್ಪತ್ತು ಹೆಜ್ಜೆ ನಡೆದರೆ ಬಲಬದಿಯ ಗುಡ್ಡವನ್ನೇರುವ ಶಿಥಿಲವಾಗಿರುವ ಕಲ್ಲಿನ ಮೆಟ್ಟಿಲುಗಳು ಕಾಣುತ್ತವೆ. ಇದೇ ಊರಿನ ಆರಂಭ. ಹಾಗೇ ಮಣ್ಣಿನ ರಸ್ತೆಯಲ್ಲಿ ಮುಂದುವರಿದರೆ ರಸ್ತೆಯ ಎಡಬದಿಗೆ ಸಾಲಾಗಿ ಮನೆಗಳು. ಬಲಗಡೆಗೆ ತೋಟ. ಈ ರಸ್ತೆ ಸುಮಾರು ಎರಡು ಕಿ.ಮಿ. ಸಾಗಿ ಶಿರಸಿಗೆ ಹೋಗುವ ಟಾರು ರಸ್ತೆಯನ್ನು ಸೇರುತ್ತದೆ. ಸೇರುವ ಮುನ್ನ ಪ್ರಾರಂಭದ ಇಳುಕಲಿಗೆ ಸಮನಾದ ಏರಿದೆ. ಆಕಾಶದಿಂದ ನೋಡಿದರೆ ಊರು ಒಂದು ಗುಂಡಿಯಲ್ಲಿ ಇರುವ ಹಾಗೆ ಕಾಣಬಹುದು. ನೋಡಿದವರು ಯಾರೂ ಇಲ್ಲ.

ಶಿಥಿಲವಾದ ಕಲ್ಲಿನ ಮೆಟ್ಟಿಲುಗಳ ಮೇಲೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಊರಿನ ಆರಂಭದಲ್ಲಿರುವ ಗುಡ್ಡವನ್ನು ಏರಿ. ನೂರು ನೂರಿಪ್ಪತ್ತು ಮೆಟ್ಟಿಲುಗಳಿರಬಹುದು. ಅಷ್ಟೆ. ಅಷ್ಟು ಏರಿದರೆ ಯಾರೋ ಅರ್ಧ ಗುಡ್ಡವನ್ನು ಕಡಿದಂತೆ ಮಟ್ಟಸವಾದ ತುಸು ವಿಸ್ತಾರವಾದ ಜಾಗ ಕಾಣುತ್ತದೆ. ಈ ಜಾಗದ ನಡುವೆ ಒಂದು ಕಪ್ಪು ಶಿಲೆಗಳ ಕಟ್ಟಡ. ಸುಮಾರು ಹದಿನೈದು ಅಡಿ ಉದ್ದ ಅಗಲದ ಚಚ್ಚೌಕದ ರಚನೆ. ನಾಲ್ಕೂ ಮೂಲೆಯಲ್ಲಿ ನಾಲ್ಕು ದಪ್ಪ ಕಲ್ಲಿನ ಕಂಬಗಳು. ಇವುಗಳ ನಡುವೆ ಐದಡಿಗೊಂದರಂತೆ ಕಲ್ಲಿನ ಕಂಬಗಳು. ಮೇಲೂ ಕಲ್ಲಿನ ಮುಚ್ಚಿಗೆ. ಕಟ್ಟಡದ ಸರಿಯಾಗಿ ಮಧ್ಯಭಾಗದಲ್ಲಿ ಉತ್ತರಕ್ಕೆ ಮುಖ ಮಾಡಿರುವ ಕಪ್ಪು ಶಿಲೆಯ ಹನುಮನ ಮೂರ್ತಿ. ಮೂಲೆಯಲ್ಲಿ ಚಕ್ರಗಳು ನೆಲಕ್ಕೆ ಹೂತಿರುವ ಒಂದು ಒರಟು ಕೆತ್ತನೆಯ ಕಲ್ಲಿನ ರಥ. ಈಶಾನ್ಯ ದಿಕ್ಕಿನಲ್ಲಿ ಒಂದು ಪುಟ್ಟ ಹೊಂಡ. ಕಿರುಬೆರಳು ಗಾತ್ರದಲ್ಲಿ ನೀರು ಈ ಹೊಂಡದಿಂದ ಹರಿದು ಗುಡ್ಡವನ್ನಿಳಿದು ಆ ಬದಿ ಇರುವ ಕೆರೆಯನ್ನು ಸೇರುತ್ತದೆ. ಈ ನೀರಿನ ಸೆಲೆ ಎಂದೂ ಬತ್ತಿದ್ದಿಲ್ಲ. ಊರಿನ ಬಾವಿಗಳು ಬತ್ತುವಂತಾದಗಲೂ ಈ ಹೊಂಡದಿಂದ ಹೀಗೇ ನೀರು ಹರಿಯುತ್ತದೆ. ರಾಮಶರದಿಂದ ನಿರ್ಮಾಣವಾದ ಕಾರಣ ಇದು ಎಂದೂ ಬತ್ತದು ಎಂದು ಅರ್ಚಕ ರಾಮಚಂದ್ರಭಟ್ಟರು ಹೇಳುತ್ತಾರೆ. ಈ ಊರಿಗೆ ಹನೂರು ಎಂಬ ಹೆಸರು ಬರಲೂ ಈ ಮೂರ್ತಿಯೇ ಕಾರಣ ಎಂಬುದು ಅವರ ನಂಬಿಕೆ. ಹನುಮನೂರು ಹನುಮೂರು ಆಗಿ ಅಲ್ಲಿಂದ ಹನೂರು ಆಗಿದೆ ಎಂಬ ಅವರ ವಿವರಣೆ ಸುಳ್ಳು ಎನ್ನುವ ಯಾವ ದಾಖಲೆಯೂ ಇಲ್ಲ. ತುಂಬ ಹಿಂದಿನಿಂದಲೂ ಈ ಗುಡಿ ಇತ್ತು. ಪೂಜೆ ಮಾತ್ರ ಇರಲಿಲ್ಲ. ಪಟೇಲರಿಗೆ ಹನುಮ ಕನಸಲ್ಲಿ ಕಂಡು ತನಗೆ ನಿತ್ಯಪೂಜೆಗೆ ವ್ಯವಸ್ಥೆ ಮಾಡದಿದ್ದರೆ ಊರಿಗೆ ಉಳಿಗಾಲವಿಲ್ಲ ಎಂದು ಹೇಳಿದ್ದರಿಂದ ತಮಗೆ ಅರ್ಧ ಎಕರೆ ಜಮೀನು ಬರೆದುಕೊಡುವ ಭರವಸೆ ಕೊಟ್ಟು, ಹನುಮಂತ ದೇವರ ಅರ್ಚನೆಗೆಂದೇ ಈ ಊರಿಗೆ ಕರೆದುತಂದರು. ಹೇಳಿದಂತೆ ತಮ್ಮ ಹೆಸರಿಗೆ ಜಮೀನು ಬರೆದುಕೊಟ್ಟ ಮಹಾನುಭಾವರು. ಇವತ್ತು ಹನುಮ ದೇವರು ಪೂಜೆ ಕಾಣುತ್ತಿರುವುದು, ತಮ್ಮ ಸಂಸಾರ ಅನ್ನ ಕಾಣುತ್ತಿರುವುದು ಪಟೇಲರ ಕೃಪೆಯಿಂದ ಎಂದು ಯಾರಿಗಾದರೂ ರಾಮಚಂದ್ರಭಟ್ಟರು ಹೇಳುವಾಗ, ಅವರ ಧ್ವನಿಯಲ್ಲಿಯೇ ಪಟೇಲರ ಬಗೆಗಿನ ಅವರ ಗೌರವ ಎದ್ದು ಕಾಣುತ್ತದೆ. ಈ ದೇವಸ್ಥಾನದ ಬಗೆಗೆ ಭಟ್ಟರು ಶ್ರಧ್ಧೆಯಿಂದ ಹೇಳುವುದು ಕೇಳಿ.

ಈ ದೇವಸ್ಥಾನವನ್ನು ಸ್ವತಃ ರಾಮನೇ ತನ್ನ ಸೇವಕ ಹಾಗೂ ಭಕ್ತ ಹನುಮನಿಗಾಗಿ ಕಟ್ಟಿಸಿದ. ಇದಕ್ಕೆ ಬೇಕಾದ ಕಲ್ಲನ್ನ ಸ್ವತಃ ಹನುಮನೇ ಎಲ್ಲಿಂದಲೋ ತಂದ. ಈ ಜಾತಿಯ ಕಲ್ಲು ಇಲ್ಲಿ ಹತ್ತಿರದಲ್ಲಿ ಎಲ್ಲಿಯಾದರೂ ಉಂಟಾ? ಹೇಳಿ ನೋಡುವಾ! ಈ ಗಾತ್ರದ ಕಲ್ಲನ್ನು ಈ ಗುಡ್ಡದ ಮೇಲೆ ತಂದು ಹೀಗೆ ಜೋಡಿಸುವುದು ಮನುಷ್ಯರಿಗೆ ಸಾಧ್ಯವಾ? ಸರಿಯಾದ ಮಾತು. ಆ ಜಾತಿಯ ಕಲ್ಲು ಔಷಧಿಗೆ ಬೇಕು ಅಂದರೂ ಸಮೀಪದಲ್ಲಿ ಎಲ್ಲೂ ಸಿಗುವುದಿಲ್ಲ. ಈ ಮಾತಿಗೆ ಉತ್ತರ ಹೇಳಲಾಗದೆ  ಅಲ್ಲ ಭಟ್ರೇ! ಆ ರಾಮ ಹೋಗಿ ಹೋಗಿ ಇಲ್ಯಾಕೆ ಅವನಿಗೆ ಗುಡಿ ಕಟ್ಟಿಸಿದ್ದು? ಅಯೋಧ್ಯೆಯ ಹತ್ತಿರವೇ ಅಲ್ವಾ ಕಟ್ಟಬೇಕಾದ್ದು? ಈ ಕೊಂಪೆ ರಾಮನಿಗೆ ಕಂಡದ್ದಾದರೂ ಹ್ಯಾಗೆ? ಎಂದು ಕೀಟಲೆ ಮಾಡುವ ಊರಿನ ಪರಮ ನಾಸ್ತಿಕ ಗೋವಿಂದನಿಗೂ ಉತ್ತರ ಉಂಟು. ರಾಮ ಸೀತಾಪಹರಣದ ಅನಂತರ ಸೀತೆಯನ್ನು ಹುಡುಕುತ್ತ ಈ ದಾರಿಯಲ್ಲಿಯೇ ಅಲ್ವಾ ಹೋಗಿದ್ದು? ಅಲ್ಲ ಎಂದು ಹೇಳಲು ಗೋವಿಂದನ ಬಳಿ ಏನೂ ಆಧಾರಗಳಿಲ್ಲ. ಭಟ್ಟರ ಈ ಮಾತುಗಳನ್ನು ಯಾರ‍್ಯಾರು ನಂಬುತ್ತಾರೋ ಗೊತ್ತಿಲ್ಲ. ಆದರೆ ಈ ದೇವಸ್ಥಾನಕ್ಕೆ, ಊರಿಗೆ ಒಂದು ಪೌರಾಣಿಕ ಅಸ್ತಿತ್ವವನ್ನೂ ಈ ಐತಿಹ್ಯದ ಮೂಲಕ ಭಟ್ಟರು ಕೊಡಿಸಿದ್ದಾರೆ. ಭಟ್ಟರಿಗಂತೂ ಇದರ ಬಗ್ಗೆ ಲವಲೇಶವೂ ಸಂಶಯವಿಲ್ಲ. ಭಟ್ಟರು ಹೇಳಿದ್ದರ ಬಗ್ಗೆ ನಂಬಿಕೆ ಇರದಿದ್ದರೂ ಊರಿನವರು ತಮ್ಮಲ್ಲಿಗೆ ಬಂದ ನೆಂಟರಿಗೆ ಇದೇ ಕತೆಯನ್ನು ಇನ್ನೂ ರಸವತ್ತಾಗಿ ಹೇಳುತ್ತಾರೆ. ಗುಡ್ಡ ಹತ್ತಿಸುತ್ತಾರೆ. ಕೆಲವರು ಭಕ್ತಿಯಿಂದಲೂ, ಕೆಲವರು ದಾಕ್ಷಿಣ್ಣ್ಯದಿಂದಲೂ ದೇವರಿಗೆ ನಮಸ್ಕರಿಸುತ್ತಾರೆ.

ಇದೇ ಶ್ರಧ್ಧೆಯಿಂದ ಭಟ್ಟರು ನಿತ್ಯಪೂಜೆ ಮಾಡುತ್ತಾರೆ. ಬೆಳಗ್ಗೆ ಐದಕ್ಕೇ ಎದ್ದು ನಿತ್ಯವಿಧಿಗಳನ್ನು ಮುಗಿಸಿ, ಮಂತ್ರ ಹೇಳುತ್ತಾ ತಣ್ಣೀರಲ್ಲಿ ಮಿಂದು ,ಮಡಿಯುಟ್ಟು ಹೂ, ತುಳಸಿ, ದೂರ್ವೆ ಕೊಯ್ದು, ಮನೆಯ ದೇವರ ಪೂಜೆ ಮುಗಿಸಿ, ಒಂದು ದೊಡ್ಡ ಹರಿವಾಣದಲ್ಲಿ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಒಪ್ಪವಾಗಿ ಜೋಡಿಸಿಕೊಂಡು ದೇವಸ್ಥಾನದತ್ತ ಹೊರಡುತ್ತಾರೆ. ಈಗ ಸರಿಯಾಗಿ ಏಳು ಗಂಟೆ. ಸೂರ್ಯ ಹುಟ್ಟುವುದು ತುಸು ಹಿಂದು ಮುಂದಾಗಬಹುದು, ಭಟ್ಟರ ಟೈಮ್ ತಪ್ಪದು ಎಂಬುದು ಜನಜನಿತ ನುಡಿ. ಭಟ್ಟರು ಹೋಗುವುದರೊಳಗೆ ಗೌರಮ್ಮ ಪ್ರಾಂಗಣವನ್ನು ಗುಡಿಸಿ, ಗುಡಿಯ ಸುತ್ತಲೂ ಇರುವ ಗಿಡಗಳಿಗೆ ಅಲ್ಲಿಯೇ ಇರುವ ಹೊಂಡದಿಂದ ಒಂದೊಂದೇ ಚೆಂಬು ನೀರು ತಂದು ಹಾಕಿ, ಆ ಗಿಡಗಳಲ್ಲಿ ಬಿಟ್ಟಿರುವ ಹೂ ಕೊಯ್ದು ಇಟ್ಟಿರುವಳು. ಗೌರಮ್ಮ ವಿಧವೆ. ಅವಳು ಯಾವಾಗಿಂದ ವಿಧವೆ ಎಂಬುದು ಬೇರೆಯವರಿಗೆ ಹಾಗಿರಲಿ, ಸ್ವತಃ ಆಕೆಗೂ ತಿಳಿದಿಲ್ಲವೇನೋ. ಸದಾ ಕೆಂಪು ಸೀರೆ ಸುತ್ತಿ ಅದನ್ನೇ ಬೋಳು ತಲೆಯ ಮೇಲೆ ಹೊದ್ದಿರುವ ರೂಪವಲ್ಲದೆ, ಬೇರೆಯದಾದ ಒಂದು ರೂಪ ಅವಳಿಗೆ ಇದ್ದಿರಬಹುದಾದ ಕಲ್ಪನೆಯೂ ಯಾರಿಗೂ ಇರಲಿಲ್ಲ. ತೀರಾ ಹಿರಿತಲೆಗಳನ್ನು ಕೇಳಿದರೆ, ಅವಳ ಮದುವೆಯ ದಿನ ಭರ್ಜರಿ ಮಳೆ ಬಂದಿತ್ತು, ಮಾರನೆಯ ದಿನವೇ ಅವಳ ಗಂಡ ಹಾವು ಕಚ್ಚಿ ಸತ್ತುಹೋದ, ಈಕೆ ಮತ್ತೆ ತವರಿಗೇ ಬಂದಳು, ಯಾವ ಜನ್ಮದ ಶಾಪವೋ ಎಂಬಷ್ಟು ವಿವರಗಳು ಸಿಗುತ್ತವೆ. ಅವಳು ಹೇಗಿದ್ದಳು ಎಂಬುದರ ಬಗ್ಗೆ ನೆನಪನ್ನು ಎಷ್ಟು ಕೆರೆದುಕೊಂಡರೂ ಅವರಿಗೂ ಗೊತ್ತಿಲ್ಲ. ಅವತ್ತಿಂದಲೂ ಗುಡಿಯ ಪ್ರಾಂಗಣ ಗುಡಿಸುವ, ಗಿಡಕ್ಕೆ ನೀರು ಹಾಕುವ ಕೆಲಸ ಅವಳಾಗಿಯೇ ವಹಿಸಿಕೊಂಡಿದ್ದಳು.

ಊರಿನ ಜನವಲ್ಲದೆ ಈ ದೇವಸ್ಥಾನಕ್ಕೆ ಬೇರೆಯವರು ಬಂದದ್ದಿಲ್ಲ. ಭಟ್ಟರ ಬಾಯಿಯಿಂದ ಬರುವ ಐತಿಹ್ಯ ಬಿಟ್ಟರೆ ಬೇರೇನೂ ವಿಶೇಷತೆಯೂ ಈ ಗುಡಿಯಲ್ಲಿ ಯಾರಿಗೂ ಕಾಣುವುದಿಲ್ಲ. ಭಟ್ಟರು ಮತ್ತು ಗೌರಮ್ಮನನ್ನು ಬಿಟ್ಟರೆ ಗುಡಿಗೆ ನಿತ್ಯ ಬಂದು ಹೋಗುವವರು ಯಾರೂ ಇಲ್ಲ. ಊರಿನ ಜನರಿಗೆ ಹಾಗಂತ ಭಕ್ತಿಯಿಲ್ಲ ಅಂತಲ್ಲ. ದಾರಿಯಲ್ಲಿ ಹೋಗುವವರು ಮೆಟ್ಟಿಲು ಬುಡದಲ್ಲಿ ನಿಂತು ಚಪ್ಪಲಿ ಕಳಚಿ, ಕೈ ಮುಗಿಯುವಾಗ ಭಕ್ತಿ ಭಾವ ಮುಖದಲ್ಲಿ ಕಂಡೇ ಕಾಣುತ್ತದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗುಡ್ಡವನ್ನೇರಿ, ಗುಡಿಗೆ ಪ್ರದಕ್ಷಿಣೆ ಹಾಕಿ, ತೆಂಗಿನಕಾಯಿ ನೈವೇದ್ಯ ಮಾಡಿಸಿಕೊಂಡು ಹೋಗುವ ಸಂಪ್ರದಾಯ ಇದ್ದೇ ಇದೆ. ಆ ದಿನ ಭಟ್ಟರಿಗೆ ದಕ್ಷಿಣೆ ತುಸು ಜಾಸ್ತಿ ಸಿಗುತ್ತದೆ. ಅವರೇನೂ ಅದಕ್ಕಾಗಿ ಕಾಯುವವರಲ್ಲ. ಅವರ ಶ್ರಧ್ಧೆ ಯಾವಾಗಲೂ ಒಂದೇ ಮಟ್ಟದ್ದು. ಪರೀಕ್ಷೆಯ ಸಂದರ್ಭದಲ್ಲಿ ಹುಡುಗ ಹುಡುಗಿಯರ ಭಕ್ತಿ ಜಾಸ್ತಿಯಾಗುತ್ತದೆ. ಅವರೇನೂ ದಕ್ಷಿಣೆ ಕೊಡುವವರಲ್ಲವಾದರೂ ಭಟ್ಟರು ತುಂಬ ಶ್ರಧ್ಧೆಯಿಂದ ಪೂಜೆಮಾಡಿ, ಬಾಯಿ ತುಂಬ ಆಶೀರ್ವಾದ ಮಾಡುತ್ತಾರೆ. ಅವರ ಆಶೀರ್ವಾದಕ್ಕೆ ವರಬಲವೇನಾದರೂ ಇದ್ದಿದ್ದರೆ ಈ ಊರಲ್ಲಿ ಯಾರೂ ಫೇಲೇ ಆಗುತ್ತಿರಲಿಲ್ಲ. ಹಾಗೆ ಫೇಲಾದವರಿಗೂ ಅವರು ಸಾಂತ್ವನ ಹೇಳುತ್ತಾರೆ. ರಾಮನಂಥ ದೇವರೇ ಅನುಭವಿಸಿದ ಕಷ್ಟಗಳನ್ನು ವಿವರಿಸಿ ಉತ್ಸಾಹ ತುಂಬುತ್ತಾರೆ. ಇವರ ಆಶೀರ್ವಾದದ ಫಲವೋ, ದೇವರಿಗೆ ಪೂಜೆ ಮಾಡಿಸಿದ ಫಲವೋ, ಸ್ವಂತ ಪರಿಶ್ರಮದ ಫಲವೋ ಈ ಊರಿನ ಕೆಲವರು ಓದಿ ಬೆಂಗಳೂರು, ಮೈಸೂರು, ಅಮೇರಿಕಗಳಲ್ಲಿ ಒಳ್ಳೆಯ ನೌಕರಿ ಸೇರಿದ್ದಾರೆ. ಅವರು ಆಗೀಗ ಊರಿಗೆ ಬಂದಾಗ ಈ ಗುಡ್ಡವನ್ನೇರುತ್ತಾರೆ. ಮೈ ಸವರುವ ತಣ್ಣನೆಯ ಗಾಳಿಗೆ, ಕಣ್ತುಂಬುವ ಹಸಿರಿಗೆ ಒಡ್ಡಿಕೊಳ್ಳುತ್ತಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಭಟ್ಟರನ್ನು ಕಂಡು ಮುದ್ದಾಮಾಗಿ ಒಂದು ಪೂಜೆ ಮಾಡಿಸುತ್ತಾರೆ. ತಮ್ಮ ಆಢ್ಯತೆ ಪ್ರದರ್ಶಿಸಲು ನೂರರ ನೋಟನ್ನೆ ದಕ್ಷಿಣೆಗೆ ಹಾಕುವುದೂ ಉಂಟು. ಒಮ್ಮೆ ಅಮೆರಿಕದಿಂದ ಬಂದ ಹರಿ ಐನೂರರ ನೋಟು ಹಾಕಿದಾಗ, ಭಟ್ಟರು ಅಯ್ಯೋ! ಇದು ನನ್ನ ಯೋಗ್ಯತೆಗೆ ಮೀರಿದ್ದು ಮಾರಾಯ ಎಂದು ಹುಂಡಿಗೆ ಹಾಕಿದ್ದರು. ಹಾಗೆ ಯಾರಾದರೂ ಬಲವಾದ ದಕ್ಷಿಣೆ ಕೊಟ್ಟಾಗ ಗುಡ್ಡದಿಂದ ಮೇಲೇರುವ ಮೆಟ್ಟಿಲನ್ನ ಸರಿಯಾಗಿ ಕಟ್ಟಿದ್ದರೆ ಒಳ್ಳೆಯದು ಎಂಬ ಮಾತನ್ನು ಆಡುತ್ತಾರೆ. ಕೈ ತುಂಬ ಸಂಬಳ ಎಣಿಸುವ ಯಾರಾದರೂ ಮನಸ್ಸು ಮಾಡಿಯಾರು ಎಂಬುದು ಭಟ್ಟರ ಆಸೆ. ದೂರದೂರಲ್ಲಿ ಇರುವ ಅವರಿಗೆ ಈ ಗುಡಿ ಇದ್ದರೆಷ್ಟು ಹೋದರೆಷ್ಟು? ಊರೇ ಹೋದರೂ ಅವರಿಗೆ ಚಿಂತೆಯಾಗುವುದಿಲ್ಲ. ಇನ್ನು,  ಮನೆಯ ಮೆಟ್ಟಿಲನ್ನೆ ರಿಪೇರಿ ಮಾಡಲು ದಿನ ಮುಂದೂಡುವ ಈ ಊರಿನ ಜನರಿಂದ ಅದು ಎಂದು ಆಗುತ್ತದೋ ಆಂಜನೇಯನೇ ಬಲ್ಲ.

ವರ್ಷಕ್ಕೊಮ್ಮೆ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಊರಿನ ಜನರೆಲ್ಲ ಇಂತಿಷ್ಟು ಎಂದು ವರಾಡ ಕೊಡುತ್ತಾರೆ. ಎಲ್ಲ ಜಾತಿಯವರೂ ಸೇರುತ್ತಾರೆ. ಗುಡಿಯ ಸುತ್ತಲಿನ ಜಾಗವನ್ನು ಸಗಣಿ ಹಾಕಿ ಸಾರಿಸಿ, ಗುಡಿಯನ್ನು, ರಥವನ್ನು ತೊಳೆದು ತೋರಣ ಬಿಗಿಯುತ್ತಾರೆ. ರಥ ಎಳೆಯುವ ಸಂಪ್ರದಾಯ ಇದೆ. ಹುಗಿದು ಹೋಗಿರುವ ಆ ಕಲ್ಲಿನ ರಥವನ್ನು ಎಳೆಯಲು ಸಾಧ್ಯವುಂಟೇ? ರಥದಲ್ಲಿ ಉತ್ಸವಮೂರ್ತಿಯನ್ನು ಕೂರಿಸಿ, ರಥಕ್ಕೆ ಹಗ್ಗ ಕಟ್ಟಿ ಎಳೆಯುವ ಶಾಸ್ತ್ರ ಪೂರೈಸುತ್ತಾರೆ. ಆಗ ಜೈ ಹನುಮಾನ್ ಕೀ, ಜೈ ರಾಮಚಂದ್ರಕೀ ಎಂಬೆಲ್ಲ ಭಕ್ತಿಭರಿತ ಉದ್ಗಾರ ಕೇಳಿಬರುತ್ತದೆ. ಕೆಲವು ಹುಡುಗರು ಉತ್ಸಾಹದಲ್ಲಿ ಜೈ ಮಹಾತ್ಮಾ ಗಾಂಧೀಕೀ ಎಂದೂ ಕೂಗಿ ದೊಡ್ಡವರಿಂದ ಬೈಸಿಕೊಳ್ಳುತ್ತಾರೆ. ಅನಂತರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತು ಗುಡಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆಮೇಲೆ ಶಂಖ, ಜಾಗಟೆಗಳ ಕಿವಿಯೊಡೆಯುವ ಸದ್ದಿನ ಜತೆಗೆ ಮಂಗಳಾರತಿ. ಪ್ರಸಾದ ಸ್ವೀಕರಿಸಿದ ಅನಂತರ ಊಟ. ಲಿಂಗ, ಜಾತಿ, ವರ್ಗಕ್ಕನುಗುಣವಾಗಿ ಪಂಕ್ತಿ. ಯಾವುದೇ ತಕರಾರಿಲ್ಲ. ಈ ದಿನ ಇಡೀ ಊರಿಗೆ ಊರೇ ಇಲ್ಲಿ ಸೇರಿರುತ್ತದೆ. ಗುಡ್ಡ ಏರಲಾರದ ಕೆಲವು ಹಳೆ ತಲೆಗಳು ಮಾತ್ರ ಮನೆಯಲ್ಲಿಯೇ ಕೂರುತ್ತಾರೆ. ಮಹಾಮಂಗಳಾರತಿಯ ಸಮಯದ ಶಬ್ದ ಕೇಳಿ ಕೂತಲ್ಲೇ ಭಕ್ತಿಯಿಂದ ನಮಸ್ಕರಿಸುತ್ತಾರೆ. ಊಟದ ಪ್ರಸಾದವಂತೂ ಅವರಿಗಾಗಿಯೇ ಗುಡಿಯಿಂದ ಬರುತ್ತದೆ.
$$$$$$$$$$$$$$

ಎಷ್ಟೋ ವರ್ಷದಿಂದ ಇದನ್ನು ನೋಡುತ್ತ, ಮಾಡುತ್ತ ಬಂದಿದ್ದ ಭಟ್ಟರಿಗೆ ಈ ಬಾರಿಯ ರಥೋತ್ಸವದ ದಿನ, ಮರುದಿನ ತುಸು ಜಾಸ್ತಿಯೇ ಸುಸ್ತಾದಂತೆ    ಅನಿಸಿತು. ಇತ್ತೀಚೆಗೆ ಮುಂಚಿನಂತೆ ಮೆಟ್ಟಿಲು ಹತ್ತಲಾಗುವುದಿಲ್ಲ. ಉಸಿರು ಹಿಡಿಯುತ್ತದೆ. ಬಳಲಿಕೆಯಾಗಿ ಹತ್ತು ಗಳಿಗೆ ಕೂರುವ ಅನ್ನಿಸುತ್ತದೆ. ಕೈಯಲ್ಲಿ ಹಿಡಿದ ಹರಿವಾಣ ಭಾರ ಎನಿಸುತ್ತದೆ. ತಮಗೂ ಎಪ್ಪತ್ತರ ಸಮೀಪ ಬಂತು. ಇನ್ನು ಈ ಪೂಜಾ ಕಾರ್ಯವನ್ನು ಮಗ ಶಂಭುವಿಗೆ ವಹಿಸುವುದು ಸೂಕ್ತ. ಈ ಬಾರಿ ಮಗ ಊರಿಗೆ ಬಂದಾಗ ಈ ಬಗ್ಗೆ ಮಾತನಾಡಬೇಕು. ಹನುಮ ದೇವರಿಗೆ ನಡೆವ ಪೂಜೆಯಲ್ಲಿ ವ್ಯತ್ಯಯ ಆಗಬಾರದಲ್ಲ. ಅವ ಪೂಜೆ ಮಾಡಿದರೂ ತಾವು ದೇವರ ಸನ್ನಿಧಿಗೆ ಹೋಗಬಾರದು ಎಂದೇನೂ ಇಲ್ಲವಲ್ಲ ಎಂದು ತೀರ್ಮಾನಿಸಿಕೊಂಡರು.

ಶಂಭು ಚುರುಕು ಹುಡುಗ. ಸಿದ್ದಾಪುರದ ಸಂಸ್ಕ?ತ ಶಾಲೆಯಲ್ಲಿ ವೇದ, ಪ್ರಯೋಗಗಳನ್ನು ಶ್ರಧ್ಧೆಯಿಂದ ಕಲಿತಿದ್ದ. ತನ್ನ ಜೊತೆ ಆಡಿ ಬೆಳೆದ ಊರಿನ ಹುಡುಗರು ಇಂಗ್ಲಿಷ್ ಕಲಿತು, ಪಟ್ಟಣ ಸೇರಿ ನೌಕರಿಯಲ್ಲಿ ದುಡ್ಡು ಬಾಚುವುದು ಕಂಡು ಒಮ್ಮೊಮ್ಮೆ ಖಿನ್ನನಾಗುತ್ತಿದ್ದ. ತನ್ನನ್ನು ಪೇಟೆಯ ಶಾಲೆಗೆ ಸೇರಿಸದೆ ಇಲ್ಲಿ ತಂದು ಬಿಟ್ಟಿದ್ದಕ್ಕೆ ತುಂಬ ಬೇಸರಪಟ್ಟಿದ್ದ. ತಾನು ಕಲಿತ ಶಾಲೆಯಲ್ಲಿಯೇ ಈಗ ಪಾಠ ಹೇಳುತ್ತ, ಶಾರದಾಂಬೆಯ ಪೂಜೆ ಮಾಡುತ್ತ ತನಗೂ ಒಂದಲ್ಲ ಒಂದು ದಿನ ಒಳ್ಳೆಯ ದಿನಗಳು ಬರುತ್ತವೆ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಳ್ಳುತ್ತಿದ್ದ. ತಾನು ಬೆಂಗಳೂರು ಸೇರಿದರೆ ಹೇಗೆ ಎಂದು ಬಹಳ ಬಾರಿ ಯೋಚಿಸಿದ್ದ. ಕಳೆದ ಬಾರಿ ಹರಿ ಅಮೆರಿಕದಿಂದ ಊರಿಗೆ ಬಂದಿದ್ದಾಗ, ಇಬ್ಬರೂ ಹನುಮನ ಗುಡಿಯ ಬಳಿ ಕೂತು ದಿಕ್ಕು ದೆಸೆಯಿಲ್ಲದೆ ಹರಟುತ್ತಿರುವಾಗ, ಇದ್ದಕ್ಕಿದ್ದಂತೆ ಹರಿ ಹೇಳಿದ ಮಾತು ತಲೆಯಲ್ಲಿ ಗುಂಗಿಹುಳುವಾಗಿತ್ತು. ಈ ಕೊಂಪೆಯಲ್ಲಿ ಏನಿದೆ ಅಂತ ಇರ‍್ತೀಯೋ? ನಿನಗೆ ತಿಳಿದಿರುವದರ ಕಾಲು ಭಾಗವೂ ತಿಳಿದಿರದ ಎಷ್ಟು ಜನ ಬೆಂಗಳೂರಲ್ಲಿ ಜುಂ ಅಂತ ಇದಾರೆ ಗೊತ್ತಾ? ನೀನಿಲ್ಲಿ ಒಂದು ವರ್ಷ ದುಡಿವ ದುಡ್ಡು ಅಲ್ಲಿ ಒಂದು ದಿನದಲ್ಲಿ ಆರತಿ ತಟ್ಟೆಗೆ ಬೀಳುತ್ತೆ. ಇನ್ನು ದೇವರ ವಿಷಯ_ಎಲ್ಲಾ ಕಡೆ ಇರೋ ದೇವರೂ ಒಂದೇ ಅಲ್ವಾ? ಇದೇ ಪೂಜೆ ಅಲ್ಲಿ ಮಾಡು ಅಷ್ಟೆ. ಈ ಬಾರಿ ಊರಿಗೆ ಹೋದಾಗ ಅಪ್ಪಯ್ಯನ ಬಳಿ ಈ ವಿಷಯ ಪ್ರಸ್ತಾಪ ಮಾಡಬೇಕು. ತೀರ್ಮಾನ ದಿನದಿನಕ್ಕೂ ಗಟ್ಟಿಯಾಗುತ್ತ ಬಂತು.
#######
ಹನುಮನಿಗೆ ನಮಸ್ಕರಿಸಿ, ಪಶ್ಚಿಮಕ್ಕೆ ಮುಖ ಮಾಡಿ ಮುಳುಗುವ ಸೂರ್ಯನ ಬದಲಾಗುವ ಬಣ್ಣ ನೋಡುತ್ತ ಕುಳಿತ ಆ ಕ್ಷಣದಲ್ಲಿ ಈ ದಿನ ಅಪ್ಪಯ್ಯನಿಗೆ ತನ್ನ ಯೋಜನೆ ತಿಳಿಸುವುದೇ ಸರಿ ಎಂಬ ನಿರ್ಧಾರ ಮಾಡಿ ಶಂಭು ಮೆಟ್ಟಿಲಿಳಿಯತೊಡಗಿದ. ತಾನು ಈ ಊರಲ್ಲಿ ಸಾವಿರ ವರ್ಷ ಪೂಜೆ ಮಾಡುತ್ತ ಕೂತರೂ ಉಧ್ಧಾರವಾಗುವುದಿಲ್ಲ. ತನ್ನ ಉಧ್ಧಾರ ಊರು ಬಿಡುವುದರಿಂದ ಮಾತ್ರ. ತನ್ನ ಈ ನಿರ್ಧಾರದಿಂದ ಶಂಭುವಿಗೆ ವಿಚಿತ್ರ ಉಮೇದು ಬಂದಿತ್ತು. ಆತ ಓಡುತ್ತಲೇ ಮೆಟ್ಟಿಲಿಳಿದ. ಅಪ್ಪನನ್ನು ಒಪ್ಪಿಸಿ ಬೆಂಗಳೂರಿಗೆ ಹೋಗಬೇಕೆಂಬ ನಿರ್ಧಾರ ಗುಡ್ಡದ ಬುಡ ಮುಟ್ಟುವ ವೇಳೆಗೆ ಅಪ್ಪ ಒಪ್ಪದಿದ್ದರೂ ಹೋಗುವುದೇ ಸರಿ ಎಂದು ಬದಲಾಗಿಬಿಟ್ಟಿತ್ತು.

ರಾಮಚಂದ್ರಭಟ್ಟರು ಹೆಂಡತಿ ತೀರಿಕೊಂಡ ದಿನದಿಂದ ರಾತ್ರಿಯ ಊಟ ಬಿಟ್ಟುಬಿಟ್ಟಿದ್ದಾರೆ. ಬಾಳೆಹಣ್ಣು ಇದ್ದರೆ ಎರಡು ಹಣ್ಣು ತಿಂದು ಒಂದು ಲೋಟ ಹಾಲು ಕುಡಿಯುತ್ತಾರೆ. ಹಣ್ಣಿರದಿದ್ದರೆ ಬರಿಯ ಹಾಲು ಮಾತ್ರ. ಹಾಗಾಗಿ ರಾತ್ರಿ ಅವರ ಮನೆಯಲ್ಲಿ ಒಲೆ ಉರಿಯುವುದು ಹಾಲು ಕಾಯಿಸಲು ಮಾತ್ರ. ಶಂಭು ಬಂದಾಗ, ಅವನು ರಾತ್ರಿ ಇರುತ್ತಾನೆ ಎಂದಾದರೆ ಮಧ್ಯಾಹ್ನವೇ ತುಸು ಹೆಚ್ಚು ಅನ್ನ ತಯಾರಾಗುತ್ತದೆ. ಶಂಭು ಹಾಲು ಕಾಯಿಸಿ ಅಪ್ಪನಿಗೆ ಕೊಟ್ಟು ಅನಂತರ ತಾನೇ ಬಡಿಸಿಕೊಂಡು ಊಟ ಮುಗಿಸಿ, ನೆಲ ಒರೆಸಿ, ಪಾತ್ರೆ ತೊಳೆದು, ಶಂಕರಮಠದಿಂದ ತಂದ ವೇದಕ್ಕೆ ಸಂಬಂಧಿಸಿದ ಪುಸ್ತಕ ಓದಲು ಕೂರುತ್ತಾನೆ. ರಾಮಚಂದ್ರಭಟ್ಟರು ಜಗಲಿಯಲ್ಲಿ ಕೂತು ಏನಾದರೂ ಶ್ಲೋಕ ಪಠಿಸುತ್ತಾರೆ. ಶಂಭು ತೊಳೆದ ಪಾತ್ರೆ ಜೋಡಿಸಿಡುವ ವೇಳೆ ಒಳಗೆ ಬಂದರೆ ಶಂಭುವಿನ ಬಳಿ ಮಾತನಾಡುವುದಿದೆ ಎಂದರ್ಥ. ಈ ದಿನ ಅವರು ಹಾಗೆ ಒಳಬಂದು ಚಾಪೆ ಹಾಸಿ ಕೂತರು. ಹ್ಯಾಗೆ ತನ್ನ ತೀರ್ಮಾನದ ಸುದ್ದಿ ಎತ್ತುವುದು ಎಂದು ಒಳಗೊಳಗೇ ಯೋಚಿಸುತ್ತಿದ್ದ ಶಂಭುವಿಗೆ ದಾರಿ ಕಂಡಿತು. ಯಥಾಪ್ರಕಾರ ತನ್ನ ಮದುವೆಯ ಸುದ್ದಿ ಪ್ರಸ್ತಾಪ ಮಾಡಬಹುದು. ಮಾಣಿ, ನನಗೂ ವಯಸ್ಸಾಯಿತು. ನಿನ್ನ ವಯಸ್ಸಿನ ಹರಿ, ಶ್ರೀಪಾದ ಅವರಿಗೆ ಮದುವೆಯಾಗಿದೆ. ಒಳ್ಳೊಳ್ಳೆ ಜಾತಕ ಬರ್ತಿವೆ. ಮಾಡ್ಕೋತೀಯಾ? ಈ ಬಾರಿ ಹೀಗೆ ಹೇಳಿದ ಕೂಡಲೇ ತನ್ನ ಯೋಜನೆ ಹೇಳಿಬಿಡುವುದು. ಶಂಭು ಈ ಬಾರಿ ಅಪ್ಪನ ಮಾತಿಗಾಗಿ ತವಕದಿಂದ ಕಾದ. ತಾನು ಹೇಳಬೇಕೆಂದುಕೊಂಡಿದ್ದನ್ನು ಮನಸ್ಸಲ್ಲೇ ಪಠಿಸಿಕೊಂಡ.
ನನಗೂ ವರ್ಷವಾಯಿತು. ಮುಂಚಿನ ಕಸುವು ಮೈಗಿಲ್ಲ. ಪೂಜೆಗೆ ಆ ಗುಡ್ಡ ಹತ್ತುವುದು ದಿನದಿನಕ್ಕೂ ತ್ರಾಸಾಗುತ್ತೆ. ಇಷ್ಟು ವರ್ಷ ದೇವರು ನಡೆಸಿದ. ಇನ್ನು ನೀನು ವಹಿಸಿಕೋಬೇಕು. ಮಠ ಬಿಟ್ಟು ಬಾ. ನಿನಗೆ ಮನಸ್ಸಿದ್ದರೆ ಮದುವೆ ಮಾಡಿಕೋ. ನಿನ್ನಿಷ್ಟ. ಅದಕ್ಕೆ ನನ್ನ ಒತ್ತಾಯವಿಲ್ಲ. ಹಣೇಲಿ ಬರೆದಾಗ ಆಗುತ್ತೆ. ಇವಿಷ್ಟನ್ನು ತಡೆತಡೆದು ಅಪ್ಪ ಹೇಳುವಾಗ ಅವನ ದನಿ ನಡುಗುತ್ತಿತ್ತೇ? ಇಷ್ಟು ವರ್ಷ ಇದೇ ಜೀವನವೆಂಬಂತೆ ಮಾಡುತ್ತಿದ್ದ ಪೂಜೆ ಇನ್ನು ಮಾಡಲಾಗುವುದಿಲ್ಲ ಎಂಬ ಕೊರಗೇ? ನಿನ್ನೆಯಿಂದ ತಯಾರಾಗಿಸಿಕೊಂಡಿದ್ದ ಮಾತುಗಳನ್ನು ಈಗ ಆಡುವುದು ಸರಿಯೇ? ಮದುವೆಯ ಪ್ರಸ್ತಾಪ ಮಾತ್ರವಾಗಿದ್ದರೆ ಸುಲಭವಾಗಿ ಹೇಳಿಬಿಡಬಹುದಿತ್ತು. ಈಗ? ಶಂಭು ಮೌನಿಯಾದ. ವಿಚಾರಮಾಡಿ ನಾಳೆ ಹೇಳು. ಮುಂದಾದರೂ ಈ ಪೂಜೆಯ ಜವಾಬ್ದಾರಿ ನಿಂದೇ ತಾನೇ.ಕೃಷ್ಣ, ಗೋವಿಂದ ಎನ್ನುತ್ತಾ ರಾಮಚಂದ್ರಭಟ್ಟರು ಎದ್ದು ಜಗಲಿಯಲ್ಲಿ ಹಾಸಿಕೊಂಡ ಚಾಪೆಯ ಮೇಲೆ ಮಲಗಿದರು. ದೀಪವಾರಿಸಿ ಶಂಭು ಕವಿದ ಕತ್ತಲಲ್ಲಿ ಮುಂದಿನ ದಾರಿ ಹುಡುಕುತ್ತ ಕೂತೇ ಇದ್ದ.

ಇವತ್ತು ನೀನೇ ಪೂಜೆ ಮಾಡಿ ಬರ್ತಿಯೇನೋ? ಎಂದು ಬೆಳಗ್ಗೆ ಅಪ್ಪ ಕೇಳಿದಾಗ ಶಂಭುವಿನ ಹಿಂದಿನ ರಾತ್ರಿಯ ಗೊಂದಲ ಹಾಗೇ ಇತ್ತು. ಎಷ್ಟು ದಿನ ಆಗುತ್ತೋ ಅಷ್ಟು ದಿನ ಮಾಡಪ್ಪ. ನಿನಗೂ ತುಸು ನೆಮ್ಮದಿ.  ಅದೂ ಸರಿ ಅನ್ನು. ಅನ್ನುತ್ತ ರಾಮಚಂದ್ರಭಟ್ಟರು ಪೂಜಾ ಸಾಮಗ್ರಿ ಹಿಡಿದು ಗುಡಿಯತ್ತ ಮಂತ್ರ ಪಠಿಸುತ್ತ ನಡೆದರು. ನಿಧಾನ ಮೆಟ್ಟಿಲು ಹತ್ತಲು ಶುರುಮಾಡಿದರು. ದಿನಕ್ಕಿಂತ ಹೆಚ್ಚು ಬಳಲಿಕೆಯಾದಂತನಿಸಿ ಕೂತರು. ನಾಳೆಯಿಂದಲೇ ಶಂಭುವಿಗೆ ಪೂಜೆ ವಹಿಸಿಬಿಡುವುದು ವಾಸಿ. ಇಲ್ಲಿಯೇ ಇದ್ದರೆ ತಾನು ಮದುವೆಯ ಪ್ರಸ್ತಾಪ ಪದೇಪದೇ ಮಾಡಬಹುದು ಎಂಬ ಭಯ ಅವನಿಗೆ ಇರಬಹುದು. ಅವನಿಷ್ಟದಂತೇ ಆಗಲಿ. ಅಭ್ಯಾಸಬಲದಿಂದ ಮಂತ್ರ ಪಠಿಸುತ್ತಿದ್ದರೂ ಮನಸ್ಸು ಎಂದಿನಂತೆ ಮಂತ್ರದ ಜೊತೆಗಿರಲಿಲ್ಲ. ಹೀಗೇ ಕೂತರೆ ಪೂಜೆಗೆ ತಡವಾಗುತ್ತೆ ಎಂದು ಏದುಸಿರು ಬಿಡುತ್ತಾ ಗುಡಿ ತಲುಪಿದರು. ತನ್ನ ಕೆಲಸ ಮುಗಿಸಿ ಕೂತಿದ್ದ ಗೌರಮ್ಮ ಯಾಕೋ ಇವತ್ತು ಭಾಳ ತಡ ಎಂದಳು. ವಯಸ್ಸಾಯಿತಲ್ಲ. ಗುಡ್ಡ ಹತ್ತುವುದು ತುಸು ನಿಧಾನವಾಗುತ್ತೆ. ಏನೋ! ನಿನ್ನೆಗಿಂತ ಇವತ್ತು ವಯಸ್ಸು ಎಷ್ಟು ವರ್ಷ ಹೆಚ್ಚಾಯಿತೋ? ಅವಳ ಮಾತಿಗೆ ಏನೂ ಉತ್ತರಿಸದೆ ಹೊಂಡದಿಂದ ನೀರು ಮಗೆದು ಕೈಕಾಲುಮುಖ ತೊಳೆದು ಪೂಜೆ ಮುಗಿಸಿ ಗೌರಮ್ಮನಿಗೆ ಪ್ರಸಾದ ಕೊಟ್ಟು ಕಂಭ ಒರಗಿ ಕೂತರು. ಪ್ರತಿದಿನ ಪೂಜೆ ಮುಗಿಸಿ ಹೀಗೆ ತುಸು ಹೊತ್ತು ಕೂರುವುದು ಅವರ ಅಭ್ಯಾಸ. ಗೌರಮ್ಮ ಕಾಯುತ್ತಾಳೆ. ಅನಂತರ ಇಬ್ಬರೂ ಧರ್ಮಕರ್ಮಗಳ ಬಗ್ಗೆ ಮಾತಾಡುತ್ತಾ ಗುಡ್ಡ ಇಳಿದು ಮನೆ ಸೇರುತ್ತಾರೆ. ಈ ದಿನವೂ ಗೌರಮ್ಮ ಭಟ್ಟರು ಹೊರಡಲಿ ಎಂದು ಮಟ್ಟಿಲ ಮೇಲೆ ಕೂತು ಕಾದಳು. ಎರಡೂ ಬದಿಗೂ ಹಸಿರು ಹೊದ್ದ ಬೆಟ್ಟ. ಬೈತಲೆಯಂತೆ ಕೆಂಪು ಮಣ್ಣಿನ ಬೀದಿ. ಚಂಡೆ ತೂಗಿಸುವ ಅಡಿಕೆಯ ಮರಗಳು. ಪ್ರತಿಬಾರಿ ಅಲ್ಲಿ ಕೂತಾಗಲೂ ಅವಳು ಪರವಶಳಾಗುತ್ತಾಳೆ. ಬದುಕಿನಲ್ಲಿ ತಾನು ಕಳೆದುಕೊಂಡ ಹಸಿರನ್ನು ಇಲ್ಲಿ ಮರಳಿ ಪಡೆಯಲು ಯತ್ನಿಸುವಂತೆ ಗೌರಮ್ಮ ಅವನ್ನೇ ನೋಡುತ್ತ ಕೂರುತ್ತಾಳೆ. ಬೋಳು ನೆತ್ತಿಗೆ ಹೊದ್ದ ಕೆಂಪು ಸೀರೆಯನ್ನು ದಾಟಿ ಸೂರ್ಯನ ಬಿಸಿಲು ನೆತ್ತಿಯನ್ನು ಕಾಯಿಸತೊಡಗಿದಾಗ ಗೌರಮ್ಮ ಈ ಲೋಕಕ್ಕೆ ಬಂದಳು. ನೋಡಿದರೆ ಇನ್ನೂ ಭಟ್ಟರು ಅದೇ ಭಂಗಿಯಲ್ಲಿ ಕಂಭ ಒರಗಿ ಕೂತೇ ಇದ್ದಾರೆ. ಇವತ್ತು ಮನೆಗೆ ಹೋಗುವ ವಿಚಾರ ಇಲ್ವಾ? ಏಳು! ಹೋಗುವಾ ಎಂದು ಎದ್ದು ನಿಂತಳು. ಅದೇ ಮೌನದಲ್ಲಿ ಭಟ್ಟರು ದೇವರನ್ನೇ ನೋಡುತ್ತಿದ್ದರು. ಇವಳ ಮಾತಿಗೆ ಏನೂ ಪ್ರತಿಕ್ರಿಯೆ ಬರಲಿಲ್ಲ. ಆ ಕಲ್ಲಿನ ಕಂಭದಿಂದ ಮೂಡಿದ ಮೂರ್ತಿಯಂತೆ ಕಂಡರು. ಗೌರಮ್ಮನಿಗೆ ಏನೋ ಅನುಮಾನ ಬಂದು ಎದೆ ಧಸಕ್ಕೆಂದಿತು. ದೇವರೇ ಈಗ ತಾನೇ ತನಗನಿಸಿದ್ದು ಪರಮ ಸುಳ್ಳಾಗಲಪ್ಪ ಎಂದು ಆಶಿಸಿದಳು. ವಿಧವೆಯಾದ ದಿನದಿಂದ ಇವತ್ತಿನವರೆಗೂ ಆಕೆ ಗುಡಿಯ ಜಗಲಿ ಹೊಕ್ಕಿರಲಿಲ್ಲ. ದಶಕಗಳ ರೂಢಿ ಹಿಂದೆಳೆದರೂ, ಈಗ ಧುತ್ತೆಂದು ರೂಢಿಗೆ ಹೊರತಾದ ವಾಸ್ತವ ಎದುರಿತ್ತು. ದೇವರೇ ದೇವರೇ ಅನ್ನುತ್ತಾ ಜಗಲಿಯೇರಿ, ಭಟ್ಟರೆದುರು ನಿಂತು ರಾಮಚಂದ್ರ ರಾಮಚಂದ್ರ ಎಂದು ಕೂಗಿದಳು. ಭಟ್ಟರು ಮಿಸುಕಾಡಲಿಲ್ಲ. ಏಳೋ ಎಂದು ಕಂಪಿಸುವ ದನಿಯಲ್ಲಿ ಹೇಳುತ್ತಾ ಜೀವನದಲ್ಲಿ ಮೊದಲ ಬಾರಿ ಪುರುಷನ ಭುಜ ಹಿಡಿದು ಅಲ್ಲಾಡಿಸಿದಳು. ದೇವರಿಗೆ ನಮಸ್ಕರಿಸುವ ಭಂಗಿಯಲ್ಲಿ ಭಟ್ಟರ ದೇಹ ಉರುಳಿಕೊಂಡಿತು.

ಗೌರಮ್ಮ ಹೇಗೆ ಮೆಟ್ಟಿಲಿಳಿದಳು, ಹೇಗೆ ಶಂಭುವಿನ ಮನೆ ತಲುಪಿದಳು ಎಂಬುದು ಅವಳಿಗೂ ಗೊತ್ತಾಗಲಿಲ್ಲ. ನಿನ್ನಪ್ಪ ದೇವರ ಸನ್ನಿಧಿಯಲ್ಲೀ.....ಎಂದಿಷ್ಟು ಹೇಳುವಷ್ಟರಲ್ಲಿ ಬವಳಿ ಬಂದು ಎಚ್ಚರ ತಪ್ಪಿದಳು. ಪೂಜೆ ಮುಗಿಸಿ ಅಪ್ಪ ಬಂದ ಕೂಡಲೇ, ಜೊತೆಗೆ ಕೂತು, ತಿಂಡಿ ತಿನ್ನುವಾಗ ತನ್ನ ಯೋಜನೆ ಹೇಳುವ ತಯಾರಿಯಲ್ಲಿದ್ದ ಶಂಭುವಿಗೆ ಉರುಳಿಬಿದ್ದ ಗೌರಮ್ಮನನ್ನು ಕಂಡು ದಿಗಿಲಾಯಿತು. ಇವಳ ಪ್ರಾಣವೇ ಹೋಯಿತಾ ಎಂಬ ಗಾಬರಿಯಲ್ಲಿ ಮುಖಕ್ಕೆ ನೀರು ಚಿಮುಕಿಸಿದ. ಎತ್ತಿ ತಂದು ಜಗಲಿಯ ಚಾಪೆಯಲ್ಲಿ ಮಲಗಿಸಿದ. ಇದನ್ನು ಕುತೂಹಲದಿಂದ ನೋಡುತ್ತ ರಸ್ತೆಯಲ್ಲಿ ನಿಂತಿದ್ದ ಪಟೇಲರ ಮೊಮ್ಮಗನನ್ನು ಹೋಗೋ ಅಜ್ಜನಿಗೆ ಹೇಳೋ ಎಂದು ಓಡಿಸಿದ. ಗಾಬರಿಯಲ್ಲಿ ಪಟೇಲರು ಭಟ್ಟರ ಮನೆಯ ಮೆಟ್ಟಲೇರುವುದಕ್ಕೂ ಗೌರಮ್ಮ ಎಚ್ಚರಾಗುವುದಕ್ಕೂ ಸರಿಯಾಯಿತು. ಪುಣ್ಯಾತ್ಮನಪ್ಪ! ನನ್ನ ಬಳಿಯೇ ಇರಲಿ ಎಂದು ಕರೆಸಿಕೊಂಡೇಬಿಟ್ಟ. ನಾನು ಪಾಪಿ. ಯಾವಾಗ ಕಣ್ಬಿಟ್ಟು ಕರೆಸಿಕೊಳ್ತಾನೋ. ಗೌರಮ್ಮನ ಹಲುಬುವಿಕೆ ಪಟೇಲರಿಗೆ, ಶಂಭುವಿಗೆ ಅರ್ಥವಾಗಲು ತುಸು ಹೊತ್ತೇ ಬೇಕಾಯಿತು. ಅರ್ಥವಾಗುತ್ತಲೇ ಶಂಭು ಧಗ್ಗೆಂದು ಎದ್ದು ನಿಂತ. ಒಂದೇ ಉಸಿರಿಗೆ ಗುಡಿ ತಲುಪಿದ. ಅಪ್ಪನ ದೇಹ ನಮಸ್ಕರಿಸುವ ಭಂಗಿಯಲ್ಲೆ ಇತ್ತು. ಗೌರಜ್ಜಿ ಸುಳ್ಳು ಹೇಳುವವಳಲ್ಲ ಎಂಬುದು ಖಚಿತವಿದ್ದರೂ, ಯಾವುದೋ ಆಸೆ ಅವಳು ಹೇಳಿದ್ದು ಸುಳ್ಳಾಗಲಿ ಎಂದು ಬಯಸಿತ್ತು.  ಆಸೆ ಭ್ರಮೆಯೆನಿಸಿದ ಆ ಕ್ಷಣ ಶಂಭು ಕುಸಿದು ತಾನೂ ಕಂಬಕ್ಕೊರಗಿದ.

ಗಾಳಿಯೇ ಹೇಳಿತೋ ಎಂಬಂತೆ ಮನೆಮನೆಗೂ ಸುದ್ದಿ ಮುಟ್ಟಿತು. ಆ ಊರಿನ ಎಲ್ಲ ಜನರು, ಭಟ್ಟರನ್ನು ಬಲ್ಲ ಹತ್ತಿರದ ಊರಿನವರು, ಭಟ್ಟರ ಗುಣಗಾನ ಮಾಡುತ್ತ, ಪೂಜೆ ಮುಗಿಸಿ ದೇವರ ಸನ್ನಿಧಿಯಲ್ಲೇ ಪ್ರಾಣ ಬಿಟ್ಟ ಕಾರಣ ಖಂಡಿತವಾಗಿ ಸ್ವರ್ಗಕ್ಕೇ ಹೋಗುವವರು ಎಂದು ಪರಸ್ಪರ ಖಚಿತಪಡಿಸಿಕೊಳ್ಳುತ್ತ ಬಂದು ಸೇರಿದರು. ಮುಂದಿನ ಕಾರ್ಯಗಳೆಲ್ಲ ಸಾಂಗವಾಗಿ ಪಟೇಲರ ನೇತೃತ್ವದಲ್ಲಿ ನಡೆದು ಭಟ್ಟರ ಭೌತಿಕ ದೇಹ ಪಂಚಭೂತಗಳಲ್ಲಿ ವಿಲೀನವಾಯಿತು.


ಹರಿ ಅಮೆರಿಕದಿಂದ ಬಂದ ವಿಷಯ ತಿಳಿದ ಶ್ರೀಪಾದ ತಾನೂ ರಜೆ ಹಾಕಿ ಊರಿಗೆ ಹೊರಡುವ ತೀರ್ಮಾನ ಮಾಡಿದ. ಭಟ್ಟರು ತೀರಿಕೊಂಡ ಸುದ್ದಿ ತಿಳಿದಾಗ, ಬರಬೇಕು ಎಂಬ ಅವನ ಬಯಕೆ ,ಅವನು ಯಾವುದೋ ಊರಲ್ಲಿ ಇದ್ದ ಕಾರಣ ಈಡೇರಿರಲಿಲ್ಲ. ಹರಿಯನ್ನು ಕಂಡ ಹಾಗೂ ಆಯಿತು, ಶಂಭುವಿನ ಜತೆಯೂ ನಾಲ್ಕು ಆಪ್ತ ಮಾತುಗಳನ್ನಾಡಿದಂತಾಯಿತು. ತಾನು ಮತ್ತು ಹರಿ ಮಾತ್ರ ಶಂಭುವಿನ ಆಪ್ತರು. ಅಪ್ಪನ ಸಾವಿನ ಅನಂತರ ಒಂಟಿಯಾಗಿರುವ ಶಂಭುವಿಗೆ ತುಸುವಾದರೂ ಸಮಾಧಾನವಾಗಬಹುದು.
###########
ಮೂವರೂ ಗುಡಿಯೆದುರು ಕೂತಿದ್ದರು. ಚಳಿಗಾಲದ ದಿನಗಳು. ಐದಕ್ಕೆಲ್ಲ ಸೂರ್ಯ ಮುಳುಗುವ ತಯಾರಿ ನಡೆಸಿದ್ದ. ಯಾರು ಮುಂಚೆ ಮಾತು ಶುರುಮಾಡಬೇಕು? ಯಾವ ಮಾತಿಂದ? ಯಾವಾಗಲು ಹರಿ ತನ್ನ ಅಮೆರಿಕದ ಯಾವುದೋ ಅನುಭವ ಹೇಳಲು ಶುರುಮಾಡುತ್ತಿದ್ದ. ಹುಟ್ಟಿದ ನದಿ ತನ್ನ ಪಾತ್ರ ತಾನೇ ಹುಡುಕುವಂತೆ, ಅನಂತರ ಅವರ ಹರಟೆ ಎಲ್ಲೆಲ್ಲಿಯೋ ಸಾಗುತ್ತಿತ್ತು. ಶಂಭುವಿನ ಅಪ್ಪನ ಸಾವು ಈಗ ಅವರ ನಡುವೆ ಕೂತು, ಏನು ಮಾತಾಡಿದರೆ ಹೇಗೋ ಎಂಬ ವಿಚಿತ್ರ ಶಂಕೆಹುಟ್ಟಿಸಿತ್ತು. ಯಾವ ಮಾತೂ ಈ ಮೌನದಷ್ಟು ಹಿಂಸೆ ಕೊಡಲಾರದು, ಇನ್ನು ತಡೆಯುವುದು ಸಾಧ್ಯವೇ ಇಲ್ಲ ಎಂಬ ಒತ್ತಡದಲ್ಲಿ ಶ್ರೀಪಾದ ಶಂಭುವಿನತ್ತ ತಿರುಗಿ ಮುಂದೇನು ಅಂತ ಪ್ರಶ್ನೆ ಮಾಡಿದ. ಶಂಭು ಏನೂ ಮಾತಾಡಲಿಲ್ಲ.
ಅಂದ್ರೆ ವಾಪಸು ಸಿದ್ದಾಪುರಕ್ಕೆ ಹೋಗ್ತೀಯೋ ಅಥ್ವಾ ಊರಲ್ಲೆ ಉಳಿದು ನಿನ್ನಪ್ಪ ಇಲ್ಲೀವರೆಗೆ ಮಾಡಿದ್ದನ್ನು ನೀನು ಮಾಡಕ್ಕೆ ಶುರುಮಾಡ್ತೀಯಾ ಅಂತ ಶ್ರೀಪಾದ ಬಿಡಿಸಿ ಕೇಳಿದ. ತಾನು ಬೆಂಗಳೂರಿಗೆ ಹೋಗಬೇಕೆಂದು ತೀರ್ಮಾನಿಸಿದ್ದು, ಆ ದಿನವೇ ಅಪ್ಪ ನೀನು ಬಂದು ಪೂಜಾಕಾರ್ಯ ವಹಿಸ್ಕೋ ಎಂದದ್ದು, ಎಷ್ಟು ದಿನ ಆಗುತ್ತೋ ಅಷ್ಟು ದಿನ ನೀನೇ ಮಾಡು ಎಂದು ತಾನು ಹೇಳಿದ್ದು, ಆ ದಿನವೇ ಪೂಜೆ ಮುಗಿಸಿದ ಅಪ್ಪ ತೀರಿಕೊಂಡದ್ದು ಇವನ್ನೆಲ್ಲ ಶಂಭು ಹೇಳಿ, ಆ ದಿನ ತಾನೇ ಪೂಜೆಗೆ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ. ತಾನು ತಪ್ಪು ಮಾಡಿದೆ. ಎಂದು ಕಂಪಿಸುವ ದನಿಯಲ್ಲಿ ಹೇಳಿ, ಈಗ ಹೇಳು. ಇದ್ನ ಬಿಟ್ಟು ಎಲ್ಲಿ ಹೋಗಲಿ? ಇದ್ರ ವಿರುಧ್ಧ ಹೋಗೋದು ಅಂದ್ರೆ ಕೊನೆಗಾಲದ ಅಪ್ಪನ ಆಸೆ ವಿರುಧ್ಧ ಹೋದಹಾಗೆ ಅಲ್ವಾ? ಅಪ್ಪನ ಆತ್ಮಕ್ಕೂ ಕೊರಗು ಹಚ್ಚಿದ ಹಾಗೆ ಆಗಲ್ವಾ? ಎಂದ.
ತಾನು ಬೆಂಗಳೂರಿಗೆ ಹೋಗುವ ತೀರ್ಮಾನ ಮಾಡಿದ್ದು ಅಪ್ಪನ ಸೂಕ್ಷ್ಮಕ್ಕೆ ತಿಳಿದು ಅಪ್ಪ ಸಾಯುವ ಸಂಕಲ್ಪ ಮಾಡಿದರು ಎಂಬ ಅನುಮಾನ, ಅನಿಸಿಕೆ ಶಂಭುವಿನ ಮನಸ್ಸಲ್ಲಿ ಕೂತುಬಿಟ್ಟಿತ್ತು. ತನ್ನ ತೀರ್ಮಾನವೇ ಅಪ್ಪನನ್ನು ಕೊಂದಿತೇ ಎಂಬ ಅನುಮಾನ ವಿಚಿತ್ರವಾಗಿ ಅವನ ಮನಸ್ಸನ್ನು ಅಲ್ಲಾಡಿಸುತ್ತಿತ್ತು. ಅದನ್ನೂ ಈಗ ಹೇಳಿದ.

ಶ್ರೀಪಾದನಿಗೆ ದೊಡ್ಡ ನಗು ಬಂತು. ತಾನು ಹಾಗೆ ನಕ್ಕದ್ದು ತಪ್ಪು ಅಂತ ಕೂಡಲೇ ಅನಿಸಿ, ತನ್ನ ನಗು ಶಂಭುವಿನಲ್ಲಿ ಏನು ಪ್ರತಿಕ್ರಿಯೆ ಹುಟ್ಟಿಸಿತು ಎಂಬ ಆತಂಕದಲ್ಲಿ ಅವನ ಮುಖವನ್ನೆ ನೋಡಿದ. ಅವನು ನಕ್ಕಿದ್ದು ನೋಡಿ, ಗೊಂದಲಗೊಂಡು, ತಾನು ತೀರ ಭಾವುಕತೆಯಲ್ಲಿ ಮಾತನಾಡಿದನೇ ಎಂದು ಶಂಭುವೂ ಅವನ ಮುಖ ನೋಡುತ್ತಿದ್ದ. ಯಾಕೋ ನಕ್ಕಿದ್ದು? ಶಂಭು ಮೃದುವಾಗಿ ಕೇಳಿದಾಗ, ಶ್ರೀಪಾದನ ಆತಂಕ ಇಳಿಯಿತು.
ನಿನ್ನ ಯೋಚನೆಯ ಧಾಟಿ ಕಂಡು ನಗು ಬಂತು. ತಪ್ಪು ತಿಳೀಬೇಡ. ನಿನ್ನ ಅನಿಸಿಕೆಗೂ ಅಪ್ಪ ಸತ್ತಿದ್ದಕ್ಕೂ ಸಂಬಂಧವಿದೆ ಅಂತ ನನಗಂತೂ ಅನ್ನಿಸಲ್ಲ. ಹಾರ‍್ಟ್ ಫೈಲೂರ್ ಅಲ್ವಾ? ನೀನೇ ಪೂಜೆಗೆ ಹೋಗಿ, ಆಗ ಅಪ್ಪ ಸತ್ತಿದ್ರೆ, ಅಪ್ಪನ ಪೂಜೆ ತಪ್ಪಿಸ್ದೆ, ಹಾಗಾಗಿ ಸತ್ರು ಅಂತ ಕಾರಣ ಹುಡುಕ್ತಿದ್ದೆ. ಈ ಎರಡು ಘಟನೇಗೂ ಸಂಬಂಧ ಕಲ್ಪಿಸೋದು ತಪ್ಪು.
ಆದ್ರೂ ನನಗೇನೋ........... ಶಂಭು ಅರ್ಧಕ್ಕೇ ಮಾತು ನಿಲ್ಲಿಸಿದ.
ಸುಮ್ನೆ ಕಲ್ಪನೆ ಮಾಡು. ಗುಡ್ಡ ಇಳಿವಾಗ ಅಕಸ್ಮಾತ್ ನಾನು ಕಾಲು ಜಾರಿ ಬಿದ್ರೆ ನಾವಿಲ್ಲಿ ಸೇರಿದ್ದೆ ಕಾರಣ ಅಂತ ಹೇಳೋದು ಸರೀನಾ? ನಡಿಯೋದೆಲ್ಲಕ್ಕೂ ನಾವೇ ಕಾರಣ ಅನ್ನೋದು ಒಂದು ರೀತೀಲಿ ಅಹಂಕಾರ, ಮತ್ತೊಂದು ರೀತೀಲಿ ಮೂರ್ಖತನ.  ಎಲ್ಲದಕ್ಕೂ ಮನಸ್ಸು ಕಾರಣ ಹುಡುಕೋದು ಅದರ ದೌರ್ಬಲ್ಯ. ಅಥ್ವಾ ಎಲ್ಲ ಕಾರ್ಯವನ್ನೂ ಹಿಂದಿನ ಯಾವುದೋ ಒಂದು ಕಾರ್ಯದ ಜತೆ ಹೊಂದ್ಸಿ ನಿರಂತರತೇನ ಉಳಿಸ್ಕೋಬೇಕು ಅನ್ನೋದು. ಅಷ್ಟೆ.
ಆದ್ರೆ ನೀನು ಇಲ್ಲಿ ಬರ‍್ಲಿಲ್ಲ ಅಂತಿಟ್ಕೊಂಡ್ರೆ ನೀನು ಬೀಳ್ತಿರಲಿಲ್ಲ ಅನ್ನೋದು ಅಷ್ಟೇ ಸತ್ಯ ಅಲ್ವಾ?
ನಾನು ಇಲ್ಲಿಗೆ ಬಂದದ್ದೂ ಬಿದ್ದಿದ್ದರ ಒಂದು ಕಾರಣ ಅಂತಾದರೆ ಇಲ್ಲಿಗೆ ಬಂದಿದ್ದರ ಕಾರಣ, ಆ ಕಾರಣದ ಕಾರಣ ಹೀಗೆ ಹೋಗಿ ಹೋಗಿ ನಮ್ಮ ಹುಟ್ಟೇ ಕಾರಣ ಅನ್ಬೇಕಾಗುತ್ತೆ. ಮತ್ತೆ ನಮ್ಮ ಹುಟ್ಟಿಗೆ ಹಿಂದಿನ ಜನ್ಮದ ಕರ್ಮ ಕಾರಣ ಅಂತ ನಿನ್ನ ಧರ್ಮಶಾಸ್ತ್ರ ಹೇಳುತ್ತಲ್ಲ. ಹೀಗೆ ಹಿಂದೆ ಹಿಂದೆ ಹೋಗ್ತ ಇದ್ರೆ ನಾವು ಎಲ್ಲಿಗೆ ಮುಟ್ತೀವಿ?
ಮೂವರೂ ಕಕ್ಕಾಬಿಕ್ಕಿಯಾಗಿ ಕೂತರು. ಮುಂದೇನು ಎಂದು ವಿಚಾರ ಮಾಡಲು  ಹೊರಟವರು ಹಿಂದೆ ಎಲ್ಲೋ ಹೋಗಿಬಿಟ್ಟಿದ್ದೇವಲ್ಲ! ಒಂದಕ್ಕೊಂದು ಕೊಕ್ಕೊಡುತ್ತ ಸಾಗುವ ಘಟನೆಗಳ ಸರಪಳಿಯಲ್ಲಿ ಯಾವುದು ಕಾರ್ಯ? ಯಾವುದು ಕಾರಣ?
 ಈ ನಿರಂತರತೆಯ ಬಯಕೆ ಇಲ್ದಿದ್ರೆ ಮುಂದೇನು ಅಂತ ನಾವು ಕೇಳೋ ಅಗತ್ಯ ಎಲ್ಲಿದೆ? ಹಿಂದೇನೋ ಆಗಿದ್ದನ್ನು ಈಗ ಇಟ್ಕೊಂಡು ಮುಂದಿನ ಬಗ್ಗೆ ಯಾಕೆ ಯೋಚ್ನೆ?  ನಮ್ಮ ಈಗಿನ ತೀರ್ಮಾನ ಈಗಂತೂ ಕಾರ್ಯಾನೇ ಹೊರತು ಕಾರಣ ಅಲ್ಲ. ಅದು ಕಾರಣ ಆಗೋದು ಮುಂದಿನ ಕಾರ್ಯ ಆದಮೇಲೇ ತಾನೇ? ಏನಾಗಬಹುದು ಅಂತ ನಾವು ಊಹಿಸಬಹುದೇ ಹೊರತು ಖಚಿತವಾಗಿ ಹೇಳಕ್ಕೆ ಆಗಲ್ಲ. ಹಾಗಾಗಿ ಈಗ ಶಂಭು ಇಲ್ಲೇ ಇರಬೇಕೋ ಅಥ್ವಾ ಹೊರಡಬೇಕೋ ಎಂಬಷ್ಟರ ಬಗ್ಗೆ ಮಾತ್ರ ಮಾತಾಡುವ. ಹರಿ ಹೇಳಿದ.
ಹ್ಯಾಗ್ರಯ್ಯ ಹೊರಡೋದು? ತೋಟ ಏನ್ ಮಾಡೋದು? ಮನೆ?
ಅದೆಲ್ಲಿಂದ ನಿಮ್ಗೆ ಬಂದಿತ್ತೋ ಅವರಿಗೇ ವಾಪಸು ಮಾಡು.ಶ್ರೀಪಾದ ಹೇಳಿದ.
 ಸರಿ. ತೋಟ ವಾಪಸು ಕೊಡುವಾ. ಪೂಜೆ? ಪಟೇಲ್ರೇ, ನೀವೇ ಪೂಜೆ ಮಾಡಿ ಅನ್ನೋದೇ? ಇಷ್ಟು ವರ್ಷ ಅಪ್ಪನ ಶ್ರಧ್ಧೆಗೆ ಏನೂ ಬೆಲೆ ಇಲ್ವಾ? ಈ ದೇವರ ಬಗ್ಗೆ ನನಗೆ ಅಪ್ಪನಿಗೆ ಇದ್ದಷ್ಟು ನಂಬಿಕೆ ಇರದಿದ್ರೂ ಎಲ್ಲ ಬಿಡುವಷ್ಟು ಧೈರ್ಯ ಕೂಡ ಇಲ್ಲ.
ಸರಿ, ತೋಟ ಮನೆ ನೋಡ್ಕೊಂಡು, ಪೂಜೆ ಮಾಡ್ತಾ ಇರಲ್ಲ. ಎಲ್ಲಿದೆ ಸಮಸ್ಯೆ?  ಆದ್ರೆ ದಿನಕ್ಕೆ ನಾಲ್ಕು ಜನ ಕೂಡ ಬರದ ಈ ಗುಡಿ ಪೂಜೆ ಮಾಡ್ತಾ ಎಷ್ಟು ದಿನ ಇರೋದು? ಅಪ್ಪನಿಗೆ ಈ ದೇವರ ಪೂಜೆಯೇ ಬದುಕಾಗಿತ್ತು. ನಂಗೆ ಹೆಚ್ಚೆಂದರೆ ಇದು ಬದುಕಿನ ಒಂದು ಅಂಗ ಅನ್ನಿಸ್ಬಹುದು... ... ನಂಗೇನೂ ತೋಚ್ತಾ ಇಲ್ಲ. ಶಂಭು ಉಳಿದಿಬ್ಬರ ಮುಖ ನೋಡುತ್ತಾ ಹೇಳಿದ.
ಇದೊಳ್ಳೇ ತರ‍್ಲೆ ಆಯ್ತಪ್ಪ. ಇರೋಕಾಗಲ್ಲ. ಹೋಗೋ ಮನಸ್ಸಿಲ್ಲ......ನಿನ್ನ ಪ್ರಕಾರ ನೀನು ಇಲ್ಲೇ ಇರ‍್ಬೇಕು, ಜನ ಬರ‍್ಬೇಕು. ಇದೊಂದು ಪುಣ್ಯ ಕ್ಷೇತ್ರ ಆಗ್ಬೇಕಷ್ಟೇ. ಇದ್ನ ಯಾರಯ್ಯಾ ಹಾಗೆ ಮಾಡೋರು? ಹರಿ ಹೇಳಿದ.
ನಾವೇ ಯಾಕೆ ಮಾಡ್ಬಾರದು?ಶ್ರೀಪಾದ ಹೇಳುತ್ತಾ ಎದ್ದ. ಅವನ ಈ ಮಾತು ಕೇಳಿ ಇಬ್ಬರೂ ಹಾಗಂದ್ರೆ ಏನು ಅನ್ನುವಂತೆ ಅವನ ಮುಖ ನೋಡಿದರು.ಈ ಗುಡೀನ ಶ್ರೀರಾಮ ಕಟ್ಟಿಸ್ದ ಅನ್ನೊ ದಾಖಲೆ ಇದ್ಯಾ? ಅದ್ರೆ ರಾಮಚಂದ್ರಭಟ್ಟರು ಹಾಗೆ ನಂಬ್ತಾ, ಹೇಳ್ತಾ ಈ ಜಾಗಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೊಟ್ಟಿದ್ದರು. ಈ ಗುಡಿಗೆ ರಾಮಾಯಣದ ಸಂಬಂಧ ಹುಡುಕಿದ್ದರು. ನೀನು ಹೇಳಿದ್ಯಲ್ಲ ಈಗ್ತಾನೆ ಪುಣ್ಯಕ್ಷೇತ್ರ ಆಗ್ಬೇಕಷ್ಟೇ ಅಂತ ಅದ್ನೆ ಅವರು ಮಾಡೋ ಪ್ರಯತ್ನ ಮಾಡಿದ್ದು.  ಇಲ್ಲಿ ಬರೋ ಊರಿನ  ಜನ್ರಿಗೆ ಭಕ್ತಿ, ಶ್ರಧ್ಧೆ ಇರ‍್ಬೇಕು ಅಂತ ಅವರು ಹಾಗೆ ಹೇಳಿದ್ದೋ ಏನೋ. ಆದ್ರೆ ಈಗ ಜನಕ್ಕೆ ಭಕ್ತಿ, ಶ್ರಧ್ಧೆ ಬೇಡ. ಅವರಿಗೆ ರಾಮಾಯಣ ಕೂಡ ಬೇಡ. ಈಗಿನ ಅವರ ಲೌಕಿಕಕ್ಕೆ ಒದಗೋ ಅಂತಹ, ಹೊಂದೋ ಅಂತಹ ಕಾರಣ ಇದ್ರೆ ಆಸಕ್ತಿ ತೋರಿಸ್ತಾರೆ. ಈಗ, ಇವತ್ತೇ ನನಗೆ ಲಾಭ ಇದೆ ಅನ್ನೋ ನಂಬಿಕೆ ಬರ‍್ಬೇಕು. ಅವರಿವರಿರ‍್ಲಿ, ನಮಗೆ ಈ ಗುಡೀ ಬಗ್ಗೆ ಎಲ್ರಯ್ಯಾ ಇದೆ ಶ್ರಧ್ಧೆ? ಶಂಭು ಹೇಳಿದ್ದು ಸರಿ. ಜನ ಬರ‍್ಬೇಕು, ಬರೋ ಹಾಗೆ ಮಾಡ್ಬೇಕು.ಶ್ರೀಪಾದನ ಅಭಿಪ್ರಾಯ ಸರಿ ಅಂತ ಉಳಿದಿಬ್ಬರಿಗೂ ಅನಿಸಿದರೂ, ಮುಂದೇನು ಅನ್ನೋದು ತಿಳೀಲಿಲ್ಲ. ಶ್ರೀಪಾದನೇ ಹೇಳಲಿ ಎಂಬಂತೆ ಅವನ ಮುಖ ನೋಡಿದರು. ಶ್ರೀಪಾದ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ ರಥದ ಎದುರು ನಿಂತ. ಇಲ್ಲಿರುವ ಏನನ್ನು ವೈಭವೀಕರಿಸಿದರೆ ಜನ ಆಕರ್ಷಿತರಾಗಬಹುದು? ಗುಡಿಯ ಒರಟಾದ ಕಂಬಗಳು. ರಥದ ಕೆತ್ತನೆಯಲ್ಲೂ ನಾಜೂಕಿಲ್ಲ. ಅದನ್ನು ನೋಡಲು ಯಾರೂ ಇಲ್ಲಿಗೆ ಬರಲಾರರು. ಬಂದರೂ ಎಲ್ಲೋ ಕಲೆಯ ಬಗ್ಗೆ ಆಸಕ್ತಿ ಇರುವ ನಾಕಾರು ಮಂದಿ.  ಶ್ರೀಪಾದ ಹೊಂಡದ ಬಳಿ ನಿಂತ. ಈ ಹೊಂಡದಿಂದಲೇ ಗೌರಜ್ಜಿ ನಿತ್ಯ ಗಿಡಗಳಿಗೆ ನೀರು ಹಾಕುತ್ತಿದ್ದಳು. ದೇವರ ಅಭಿಷೇಕಕ್ಕು ಇದೇ ನೀರು. ಎಂಥ ಬಿರು ಬೇಸಗೆಯಲ್ಲೂ ಈ ಹೊಂಡದ ನೀರು ಬತ್ತಿದ್ದಿಲ್ಲ. ಕಿರುಬೆರಳ ಗಾತ್ರದ ನೀರು ಸದಾ ಹರಿಯುತ್ತದೆ. ಶ್ರೀಪಾದ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು ಕಣ್ರೋ ಎಂದ. ಶ್ರೀಪಾದನ ಹಿಂದೆಯೇ ಒಡಾಡುತ್ತಿದ್ದ ಇಬ್ಬರೂ ಏನೆಂಬಂತೆ ಅವನನ್ನು ನೋಡಿದರು.
ಈ ಜಾಗಕ್ಕೆ ನಿನ್ನಪ್ಪ ಧಾರ್ಮಿಕವಾದ ಒಂದು ಮಹತ್ವ ಪ್ರಚುರಪಡಿಸಿದ್ದರು. ನಾವೀಗ ಅದನ್ನು ಬಳಸಿಕೊಂಡು ಲೌಕಿಕಲಾಭಕ್ಕೂ ಒದಗುವ ಮಹತ್ವವಿದೆ ಅನ್ನೋ ಪ್ರಚಾರ ಮಾಡ್ಬೇಕು. ಈ ಹೊಂಡದ ನೀರನ್ನು ತೀರ್ಥವಾಗಿ ಪರಿವರ್ತಿಸಬೇಕು.ಸಕಲ ಪಾಪ ನಾಶಕ, ಆರೋಗ್ಯದಾಯಕ, ಪುಣ್ಯಪ್ರದಾಯಕ ಎಂಬುದೇ ಇದರ ಮಹತ್ವ.
ಹಾಗೆ ಮಾಡೋದು ತಪ್ಪಲ್ಲವಾ? ಶಂಭು ಹೇಳಿದ.
ಯಾಕೆ ತಪ್ಪು? ಇದರ ಬಗ್ಗೆ ಊರಿನ ಜನ ಏನು ಅಂದುಕೊಂಡಿದ್ದಾರೋ ಅದನ್ನೇ ನಾವು ಬೇರೆಯವರಿಗೂ ಗೊತ್ತಾಗೋಹಾಗೆ ಮಾಡೋದು. ಇದು ಸುಳ್ಳು ಅಂತ ನೀನು ಅನ್ನೋದಾದ್ರೆ ಈ ಕಲ್ಲಿನ ಮೂರ್ತಿನ ಯಾಕೆ ದೇವರು ಅಂತ ತಿಳೀಬೇಕು? ನೀನು ಇದರ ಪೂಜೆ ಪುನಸ್ಕಾರ ಅಂತ ಯಾಕೆ ಒದ್ದಾಡಬೇಕು?  ನೀನು ನಂಬಿರೋದನ್ನೇ ಪ್ರಚಾರ ಮಾಡ್ಬೇಕು ಅಂದಿದ್ದು. ಅದರ ವಿಚಾರ ನನಗೆ ಬಿಡಿ. ಆದ್ರೆ ಒಂದ್ಮಾತು. ನಾವಿಲ್ಲಿ ಇವತ್ತು ಏನೂ ಮಾತಾಡಿಲ್ಲ ತಿಳೀತಾ?ಅವನ ಈ ಮಾತು ಇಡೀ ಸನ್ನಿವೇಶಕ್ಕೆ ಒಂದು ಗೂಢತೆಯನ್ನು ಸೃಷ್ಟಿಸಿತು. ಇಬ್ಬರೂ ತಲೆಯಾಡಿಸಿದರು.
###########
ಶಂಭುವಿಗೆ ತಳಮಳ ಶುರುವಾಗಿತ್ತು. ಈ ಹೊಂಡದ ನೀರು ತೀರ್ಥ ಎಂದು ಪ್ರಚಾರ ಮಾಡುವುದು ಮೋಸವಲ್ಲವೇ? ಜನರಿಗೆ ಭ್ರಮೆ ಹುಟ್ಟಿಸುವುದು ಸರಿಯೇ? ಭ್ರಮೆ ಎಂದಾದರೆ ತಾನು ಈ ಗುಡಿಯನ್ನು ಗುಡಿ ಎಂದು ನಂಬಿದ್ದು, ಈ ಕಲ್ಲಿನ ಮೂರ್ತಿಯನ್ನು ದೇವರು ಎಂದು ನಂಬಿದ್ದು, ತಾನು ಹೇಳುವ ಮಂತ್ರವನ್ನು ಮಂತ್ರ ಎಂದು ನಂಬಿದ್ದು ಎಲ್ಲವೂ ಭ್ರಮೆಯೇ ಇರಬಹುದಲ್ಲ? ನಾನು ಇದ್ದೇನೆ, ನಾನು ಶಂಭು ಅನ್ನೋದು ಕೂಡ ಭ್ರಮೆಯೇ ಇರಬಹುದು. ನಂಬಿದ್ದೇ ವಾಸ್ತವವೇ? ಯಾವುದು ಸರಿ? ಯಾವುದು ತಪ್ಪು? ಯಾವುದು ಪುಣ್ಯ? ಯಾವುದು ಪಾಪ? ಮಲಗಿದ್ದವ ವಿಚಿತ್ರ ಆತಂಕದಲ್ಲಿ ಎದ್ದು ಕುಳಿತ.  ಮನೆಯ ಹೊರಗೆ ಬಂದ. ಅಂಗಳದ ತಂಪು ಗಾಳಿಗೆ ಮೈಯೊಡ್ಡಿದಾಗ ಹಿತವೆನಿಸಿತು. ಲೆಕ್ಕಕ್ಕೆ ಸಿಗದಷ್ಟು ನಕ್ಷತ್ರಗಳು. ಬೂದಿ ಚೆಲ್ಲಿದಂತೆ ಕಾಣುವ ಆಕಾಶಗಂಗೆ. ಸಪ್ತರ್ಷಿ ಮಂಡಲ. ವೃಷಭ ರಾಶಿ. ಇಡೀ ಬದುಕೇ ಒಂದು ನಂಬಿಕೆ ಎಂದಾಕ್ಷಣದಲ್ಲಿ ಅನಿಸಿತು. ಯಾರೋ ಮಾಡಿದ ತೀರ್ಮಾನಗಳನ್ನು ಒಪ್ಪುತ್ತ ಹೋಗುವುದೇ ಸುಖ. ಅಪ್ಪ ಹಾಗೇ ಇದ್ದ. ಅಪ್ಪನ ಅಪ್ಪನೂ ಹಾಗೇ ಇದ್ದನೋ ಏನೋ. ಶ್ರೀಪಾದ ಹೇಳಿದಂತೆ ಮಾಡುವುದು. ಏನಾಗುತ್ತೋ ಆಗಲಿ. ಈಗ ಹಿತವೆನಿಸಿತು. ಒಳಬಂದು ಮಲಗುವ ಬದಲು ಅಲ್ಲೇ, ಜಗಲಿಯಲ್ಲಿ ಒರಗಿ ನಕ್ಷತ್ರಗಳನ್ನು ವೀಕ್ಷಿಸತೊಡಗಿದ. ಯಾವಾಗಲೋ ನಿದ್ದೆ ಆವರಿಸಿತು.
$$$$$$$$$$$$
ಇನ್ನುಳಿದ ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಿದರೆ ಸಾಕು. ಒಂದು ದಿನ ಬೆಳಗ್ಗೆ ಟಿವಿಯವರು ಹನೂರಿಗೆ ಬಂದಿಳಿದರು. ಗುಡಿಯ ಸುತ್ತಮುತ್ತ, ರಥದ ಅತ್ತಿತ್ತ, ಹೊಂಡದೆದುರು, ಕೆರೆಯಬಳಿ ನಿಂತು ಚಿತ್ರ ತೆಗೆದರು. ಸುದ್ದಿ ಊರಿನ ತುಂಬ ಹರಡಿ ಊರಿನ ಜನ ತಮ್ಮ ಕೆಲಸ ಮರೆತು ಇಲ್ಲಿ ಸೇರಿದರು. ಕ್ಯಾಮರಾದವನ ಹಿಂದೆಮುಂದೆ ತಾವೂ ಓಡಾಡಿದರು. ತಮ್ಮ ಚಿತ್ರವೂ ಬೀಳಲಿ ಎಂದು ಆಸೆಪಟ್ಟರು. ಗುಡ್ಡ ಏರಲಾಗದೆ ಬುಡದಲ್ಲಿಯೇ ಕೂತಿದ್ದ ಪಟೇಲರ ಬಳಿ ಟೀವಿಯವರು ಗುಡಿಯ ಬಗ್ಗೆ ನಾಲ್ಕು ಮಾತಾಡಲು ಹೇಳಿದರು. ಪಟೇಲರತ್ತ ಕ್ಯಾಮರಾ ತಿರುಗಿದ ಕೂಡಲೇ ಅವರ ಬಳಿ ನಿಂತ ಎಲ್ಲರೂ ಹಲ್ಲಷ್ಟೂ ಕಾಣುವಂತೆ ನಗಲು ಯತ್ನಿಸಿದರು. ಪಟೇಲರು ಕಷ್ಟಪಟ್ಟು ಈ ಗುಡಿ ರಾಮಾಯಣದ ಕಾಲದಿಂದಲೂ ಇದೆ. ತಮ್ಮೂರನ್ನು ಕಾಯಿತ್ತಿರುವುದು ಈ ದೇವರೇ. ಈ ದೇವರನ್ನು ನಂಬಿದವರಿಗೆ ಬಯಸಿದ್ದು ಸಿಕ್ಕಿದೆ. ಎಲ್ಲರಿಗೂ ಒಳ್ಳೇದಾಗಲಿ ಎಂದರು. ಗೌರಜ್ಜಿ ಹೊಂಡದಿಂದ ನೀರು ತಂದು ಗಿಡಕ್ಕೆ ಹಾಕುತ್ತಿರುವ ದೃಶ್ಯದ ಚಿತ್ರಣ ನಡೆಯಿತು. ಶಂಭು ಪೂಜೆ ಮಾಡುವ, ಮಂತ್ರ ಹೇಳುತ್ತ ಅಭಿಷೇಕ ಮಾಡುವ ಚಿತ್ರಣ ಆಯಿತು. ಇದು ಯಾರು ಯಾಕೆ ಮಾಡಿದರು ಎಂಬುದು ಯಾರಿಗೂ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಊಹಿಸಿದರು.
ಇಷ್ಟಾದ ಹದಿನೈದು ದಿನಕ್ಕೆ  ಹನೂರಿನ ಬಗ್ಗೆ ಟಿವಿಯಲ್ಲಿ ಸಾಕ್ಷ್ಯಚಿತ್ರವೊಂದು ಬಂತು. ಹನೂರೆಂದರೆ ಹನುಮನ ಹುಟ್ಟಿದೂರು, ಅಲ್ಲಿರುವ ಗುಡಿ ರಾಮ ಕಟ್ಟಿಸಿದ್ದು, ಹೊಂಡದ ನೀರು ರಾಮತೀರ್ಥ. ಈ ನೀರಿಗೆ ವಿಶೇಷ ಶಕ್ತಿಯನ್ನು ಶ್ರೀರಾಮ ದಯಪಾಲಿಸಿದ್ದಾನೆ. ಹನುಮನಿಗೆ ಅಭಿಷೇಕ ಮಾಡಿದ ನೀರು ತೀರ್ಥವಾಗುತ್ತದೆ. ಅದಕ್ಕೆ ಪಾಪ ಪರಿಹರಿಸುವ, ರೋಗ ವಾಸಿ ಮಾಡುವ ಅದ್ಭುತ ಗುಣವಿದೆ. ಈ ಹೊಂಡದ ನೀರು ಹರಿವ ಪ್ರಮಾಣ ಮಳೆಗಾಲದಲ್ಲೂ ಬೇಸಗೆಯಲ್ಲೂ ಒಂದೇ ರೀತಿ. ಹರಿದ ನೀರು ಸೇರುವ ಕಳಗಿನ ಕೆರೆಯ ನೀರಲ್ಲಿ ಮಿಂದರೆ ಚರ್ಮರೋಗಗಳೆಲ್ಲ ವಾಸಿಯಾಗುತ್ತವೆ. ಈ ಕೆರೆಯ ನೀರು ಸಂಚಿತಕರ್ಮನಾಶಕ. ಗುಡಿ, ರಥ, ಹೊಂಡ, ಕೆರೆಗಳನ್ನು ತೋರಿಸುತ್ತಾ ಈ ವಿವರಣೆಗಳೆಲ್ಲ ಬಂದವು. ಗೌರಜ್ಜಿ, ಪಟೇಲರನ್ನು ತೋರಿಸುತ್ತಾ ಇವರಿಗೆ ನೂರು ವರ್ಷ ದಾಟದ್ದರೂ ಹೀಗೆ ಇರಲು ತೀರ್ಥವೇ ಕಾರಣ ಎಂಬ ವಿವರಣೆಯೂ ಇತ್ತು. ಹನೂರಿನ ಜನ ಬೆಚ್ಚಿಬಿದ್ದರು. ತಮ್ಮ ಊರಿನ ವಿಷಯ ತಮಗೇ ತಿಳಿಯದೇ ಹೋಯಿತಲ್ಲ! ಭಟ್ಟರು ಹೇಳುತ್ತಿದ್ದದು ಸುಳ್ಳಲ್ಲ ಹಾಗಾದರೆ! ಛೇ ಇಷ್ಟು ದಿನ ತಾವು ಎಷ್ಟು ಪುಣ್ಯ ಕಳೆದುಕೊಂಡೆವಪ್ಪ! ಇನ್ನಾದರೂ...  ಆ ದಿನ ಗುಡಿಗೆ ಊರಿನ ಬಹಳ ಜನ ಬಂದರು. ತೀರ್ಥವನ್ನು ಶ್ರಧ್ಧೆಯಿಂದ ಸೇವಿಸಿದರು. ಏನೋ ವಿಶೇಷವಿರುವಂತೆ ಅನಿಸಿತು. ನನಗೆ ಇದು ಮುಂಚಿಂದಲೂ ಗೊತ್ತಿತ್ತು, ಹೇಳಿದರೆ ಯಾರೂ ನಂಬಲ್ಲ ಎಂದು ಸುಮ್ಮನಿದ್ದೆ ಎಂದು ಎಲ್ಲರೂ ಮಾತಾಡಿಕೊಂಡರು. ಈ ಹಠಾತ್ ಬದಲಾವಣೆ ಕಂಡು ಶಂಭು ಚಕಿತಗೊಂಡ. ಒಂದು ಪ್ರಚಾರ ಏನೆಲ್ಲ ಮಾಡಬಹುದು ಎಂಬುದನ್ನು ಕಂಡು ವಿಸ್ಮಿತನಾದ. ಈ ಪ್ರಚಾರದ ಕಾರಣ ಯಾರು ಎಂಬುದು ಅವನಿಗೆ, ಹರಿಗೆ ಮಾತ್ರ ಗೊತ್ತಿತ್ತು.
$$$$$$$$$
ಇವೆಲ್ಲ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಹನೂರನ್ನು ಬಂದು ನೋಡಿ. ಗುಡಿಯಿರುವ ಬೆಟ್ಟದ ಬುಡದವರೆಗೂ ಟಾರುರಸ್ತೆ. ಸಿಮೆಂಟಿನ ಮೆಟ್ಟಿಲು ಭಟ್ಟರ ಆತ್ಮಕ್ಕೆ ತೃಪ್ತಿ ನೀಡಿದೆ. ಗುಡಿಯ ಸುತ್ತಲೂ ಕಡಪ ಕಲ್ಲಿನ ಅಂಗಳ. ಮೂಲ ರಥದ ರೂಪ, ಗಾತ್ರವನ್ನು ಹೋಲುವ ಮರದ ರಥ ಸಿದ್ಧವಾಗುತ್ತಿದೆ. ಊರವರೆಲ್ಲ ಸೇರಿ ಕೆರೆಯ ಹೂಳು ತೆಗೆದು ನೀರು ಶುಧ್ಧವಾಗಿದೆ. ಸುತ್ತಲೂ ಪಾವಟಿಗೆ. ಬಂದವರು ಮೀಯದೇ ದೇವರ ದರ್ಶನ ಪಡೆಯಬಾರದಲ್ಲ! ಏನೇನು ಸೇವೆ ಮಾಡಬಹುದು, ಅದರ ದರ ಏನು ಎಂಬ ವಿವರವುಳ್ಳ ದೊಡ್ಡ ಪಟ್ಟಿ ನೇತು ಹಾಕಿದ್ದಾರೆ. ಮೂಲೆಯಲ್ಲಿ ಹನೂರಿನ ಸ್ತ್ರೀ ಶಕ್ತಿ ಸಂಘದವರ ತೆಂಗಿನಕಾಯಿ, ಕುಂಕುಮ, ಕರ್ಪೂರ, ಊದುಬತ್ತಿ ಅಂಗಡಿ. ಇಲ್ಲಿ ಹರಳಿನ ಸರವೂ ಸಿಗುತ್ತದೆ. ಹನುಮನ ಫೋಟೋ ಸಿಗುತ್ತದೆ. ಬಸ್ಸಿಳಿವ ಜಾಗದಲ್ಲೂ ಹತ್ತಾರು ಅಂಗಡಿಗಳು. ಟೀ,ಕಾಫಿ,ಮಸಾಲೆ ಮಂಡಕ್ಕಿ ಸಿಗುವ ಎರಡು ಹೊಟೆಲ್. ಇವರಿಗೆ ಪರುಸೊತ್ತಿಲ್ಲದಿಷ್ಟು ವ್ಯಾಪಾರ. ಈ ವ್ಯಾಪಾರದ ಗಡಿಬಿಡಿಯಲ್ಲಿ ಅವರಿಗೆ ಹನುಮನಿಗೆ ನಮಸ್ಕರಿಸುವುದೂ ನೆನಪಾಗುವುದಿಲ್ಲ. ಹೊಸದಾಗಿ  ಒಂದು ಬಸ್ ನಿಲ್ದಾಣ ಆಗಿದೆ.  ಪ್ರತಿದಿನ ನೂರಾರು ಕಾರುಗಳಲ್ಲಿ ಬರುವ ಜನ. ಗಣೇಶ ಕಂಪೆನಿಯವರು ದಿನಕ್ಕೆ ಹತ್ತು ಬಸ್ಸು ಸಾಗರದಿಂದ ಬಿಟ್ಟಿದ್ದಾರೆ. ಅದರಲ್ಲಿ ಬಂದಿಳಿವ ಜನ. ಅವರ ಅವಸರ, ಭಕ್ತಿ, ಶ್ರಧ್ಧೆಗಳನ್ನು ನೋಡಿಯೇ ತಿಳಿಯಬೇಕು. ಪಾಪ ಆದಷ್ಟೂ ಬೇಗ ಪರಿಹಾರವಾಗಬೇಕು, ಆರೋಗ್ಯ ಬೇಗ ಸುಧಾರಿಸಬೇಕು ಎಂಬ ಆಸೆ. ಬಂದವರಿಗೆ ಬಾಟಲಲ್ಲಿ ತೀರ್ಥ ಕೊಡುವ ವ್ಯವಸ್ಥೆ ಕೂಡ ಆಗಿದೆ. ಈಗಲೂ ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ. ಹರಕೆ ಕಟ್ಟಿಕೊಂಡು ೧೦೧ ರೂ. ಪಾವತಿಸಿದವರಿಗೆ ಮಾತ್ರ ರಥ ಎಳೆಯುವ ಅವಕಾಶ. ಊರಿನ ಜನ ರಥದ ಹಿಂದೆ ಜೈಗುಟ್ಟುತ್ತಾ ಹೋಗುತ್ತಾರೆ. ಇನ್ನು ಶಂಭು, ಪಾಪ! ಅವನಿಗೆ ಮನೆಗೆ ಬರಲೂ ಬಿಡುವು ಸಿಗದು. ಸಹಾಯಕ್ಕೆಂದು ಒಬ್ಬ ಮರಿಭಟ್ಟ ಬಂದಿದ್ದಾನೆ. ಶಂಭುವಿಗೆ ಶ್ರೀಪಾದನ ತಂಗಿಯ ಜತೆಯೇ ಮದುವೆಯಾಗಿದೆ. ಮನೆ, ತೋಟದ ಹೊಣೆಗಾರಿಕೆ ಅವಳದೇ. ಇಲ್ರ್ಲೆಂದು ಊರಿದೆ ಎಂಬುದು ಗಮನಕ್ಕೇ ಬಾರದಷ್ಟು ಶಾಂತವಾಗಿದ್ದ ಊರಲ್ಲಿ ದಿನವೂ ಜಾತ್ರೆ. ವಯಸ್ಸಾಯಿತೋ ಎಂದೋ ಅಥವಾ ಈ ಗದ್ದಲಕ್ಕೆ ಹೆದರಿಯೋ ಗೌರಜ್ಜಿ ಗುಡಿಗೆ ಬರುವುದೇ ಬಿಟ್ಟಿದ್ದಾಳೆ. ಮನೆಯಲ್ಲಿಯೇ ಕೂತು ಮಾಡುವ ಅವಳ ನಮಸ್ಕಾರ ಅಷ್ಟೆಲ್ಲ ಜನರನ್ನು ದಾಟಿ ಹನುಮನಿಗೆ ಮುಟ್ಟುತ್ತಿದೆಯೋ ಇಲ್ಲವೋ ಯಾರು ಬಲ್ಲರು?
###########

ತೀರ್ಥಕ್ಕೆ ಅಪಾರ ಬೇಡಿಕೆಯಿರುವುದರಿಂದ ಕೊಡಗಟ್ಟಲೆ ನೀರಿಂದ ಅಭಿಷೇಕ ಮಾಡಿಸಿಕೊಳ್ಳುವ ಹನುಮ ಅನಂತರ ಯಾರೋ ಹರಕೆ ತೀರಿಸಲು ಕೊಟ್ಟ ಮುಖವಾಡ, ಮೈವಾಡವನ್ನು ಧರಿಸುತ್ತಾನೆ. ಮೂರ್ತಿಯಿರುವ ಜಾಗಕ್ಕೆ ಸರಿಯಾಗಿ ವಿದ್ದ್ಯುದ್ದೀಪದ ಬೆಳಕು ಬೀಳುವಾಗ ಫಳಫಳ ಹೊಳೆಯುತ್ತಾನೆ. ಈ ಎಲ್ಲ ಮಾಯೆಯಿಂದ ತನ್ನನ್ನು ಶ್ರೀರಾಮನೇ ಪಾರು ಮಾಡಬೇಕು ಎಂಬಂತೆ ಮುಂಚಿನಂತೇ ನಿಶ್ಚಲನಾಗಿ, ನಿರ್ಭಾವುಕನಾಗಿ ಉತ್ತರಕ್ಕೆ ನೋಡುತ್ತ ನಿಂತಿದ್ದಾನೆ.  
                  

ಸಾಗರ.  
೨೯/೦೬/೦೮
೩೦/೦೮/೦೮
 (ಮೈಸೂರಿಂದ ಪ್ರಕಟವಾಗುವ "ಅರುಹು-ಕುರುಹು" ತ್ರೈಮಾಸಿಕದ ಜುಲೈ-ಸಪ್ಟೆಂಬರ್ ೨೦೦೯ರ ಸಂಚಿಕೆಯಲ್ಲಿ ಪ್ರಕಟಗೊಂಡ ಕಥೆ.)  
  
    


 

      

Saturday, August 7, 2010

ಕಲಿವ ಪರಿ.

.

ಶ್ರೀಧರನ ಅಂಗಡಿಯಲ್ಲಿ ಕುಳಿತು ಅವನ ಜೊತೆ ಅದೂ ಇದೂ ಮಾತಾಡುತ್ತಿದ್ದೆ. ಎದುರಿನ ಶಾಲೆ ಬಿಟ್ಟಿತು. ಅಲ್ಲಿಂದ ಇಬ್ಬರು ಹುಡುಗರು ಬೆನ್ನಿನಲ್ಲಿ ಹೊತ್ತ ಚೀಲದ ಭಾರಕ್ಕೆ ತುಸು ಬಾಗಿ ಅಂಗಡಿಯತ್ತ ಬಂದರು.
"ಮೂರು ರೂಪಾಯಿಯ ಪೆನ್ ಇದ್ಯಾ?"
"ಇದೆ"
"ಎರಡು ಕೊಡಿ" ಹತ್ತು ರೂಪಾಯಿ ಕೊಟ್ಟು ಕೇಳಿದರು.
ಎರಡು ಪೆನ್ ಕೊಟ್ಟ ಶ್ರೀಧರ "ಚಿಲ್ಲರೆ ಎಷ್ಟು ವಾಪಾಸು ಕೊಡಲಿ?" ಎಂದು ಕೇಳಿದ.
ಒಬ್ಬರ ಮುಖ ಒಬ್ಬರು ನೋಡಿಕೊಂಡು ಕೊಡಿ ಅಂದರು. ಅವರ ಮುಖ ನೋಡಿದರೆ ಎಷ್ಟು ಚಿಲ್ಲರೆ ಬರಬೇಕು ಎಂಬುದು ಗೊತ್ತಿರುವಂತೆ ತೋರಲಿಲ್ಲ." ಯಾವ ಕ್ಲಾಸು?" ನಾನು ಕೇಳಿದೆ. "ಮೂರು""ಚಿಲ್ಲರೆ ಎಷ್ಟು ಬರ್ಬೇಕು ಗೊತ್ತಿಲ್ವಾ?" ಗೊತ್ತಿಲ್ಲ ಎಂಬಂತೆ ತಲೆಯಾಡಿಸಿದರು.
ನಾವಿಬ್ಬರೂ ಬೆಚ್ಚಿದೆವು. ಮೂರನೆಯ ತರಗತಿಯಲ್ಲಿ ಓದುತ್ತಿರುವ ಇವರಿಗೆ ೧೦-೩-೩ ಎಷ್ಟಾಗುತ್ತದೆ ಗೊತ್ತಿಲ್ಲ! ಅಯ್ಯೋ..ವಿದ್ಯಾಭ್ಯಾಸದ ಮಟ್ಟವೇ ಅನ್ಸಿತು.
ಕೆಲವು ದಿನಗಳ ಹಿಂದೆ ನಡೆದ ಘಟನೆ ನೆನಪಾಯಿತು. ನನ್ನಣ್ಣನ ಪ್ರೆಸ್ಸಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳಿಗೆ ಪ್ರಶ್ನೆ ಕೇಳಿದೆ: ಭೂಮಿಯಲ್ಲಿ ನಿಂತರೆ ಚಂದ್ರನನ್ನು ನೋಡಲು ತಲೆ ಮೇಲೆತ್ತಬೇಕು.ಚಂದ್ರನಲ್ಲಿ ನಿಂತು ಭೂಮಿಯನ್ನು ನೋಡಲು ಏನುಮಾಡಬೇಕು? ಒಂದು ಚಣಕೂಡ ತಡವರಿಸದೆ ಆಕೆ "ತಲೆ ಬಗ್ಗಿಸಿ ನೋಡಬೇಕು" ಅಂದಿದ್ದಳು.ಹ್ಯಾಗೆ ಅಂತ ಕೇಳಿದ್ದಕ್ಕೆ "ನಾವೀಗ ಮರದ ಮೇಲಿರುವ ಹಣ್ಣು ನೋಡಲು ತಲೆ ಎತ್ತಿ ಮೇಲೆ ನೋಡ್ತೀವಿ.ಮರದ ಮೇಲಿಂದ ನೆಲ ನೋಡ್ಲಿಕ್ಕೆ ತಲೆ ಬಗ್ಗಿಸಿ ಕೆಳಗೆ ನೋಡ್ತೀವಲ್ವಾ..ಹಾಗೇ.."ಅಂದಿದ್ಲು. ನಾವೆಲ್ಲಾ ನಕ್ಕು ಸುಮ್ಮನಾಗಿದ್ದೆವು. ಇದೇ ಪ್ರಶ್ನೆಯನ್ನು ನಾನು ನನ್ನ ಗೆಳೆಯನ ಮಗಳೊಬ್ಬಳಿಗೆ ಕೇಳಿದೆ. ಆಕೆ ಹತ್ತನೆಯ ತರಗತಿ ಆಂಗ್ಲ ಮಾಧ್ಯಮದಲ್ಲಿ ಓದಿ,೯೩%ಗೆ ಒಂದು ಅಂಕ ಕಡಿಮೆಯಾಯಿತು ಎಂದು ಒಂದು ದಿನವೆಲ್ಲ ಅತ್ತಿದ್ದಳು.ನಾನು ಪ್ರಶ್ನೆ  ಕೇಳಿದಾಗ ಈಕೆ ಎರಡು ನಿಮಿಷ ಯೋಚಿಸಿ "ತಲೆ ಬಗ್ಗಿಸಿ ಕೆಳಗೆ ನೋಡಬೇಕು" ಎಂದಳು. ನಾನು ಯಾಕೆ ಎಂದೆ. "action and reaction are equal and opposite. ಆದ್ದರಿಂದ ಭೂಮಿಯ ಮೇಲೆ ನಿಂತು ತಲೆ ಎತ್ತಿ ನೋಡಿದ್ದರೆ ಅದರ ವಿರುದ್ಧವಿರುವ ಚಂದ್ರನ ಮೇಲೆ ನಿಂತು ತಲೆ ಬಗ್ಗಿಸಿ ನೋಡಬೇಕು"ಅಂತ ವಿವರಿಸಿದಳು.
ನಾನು ಏನಾದರೂ ಹೇಳಬೇಕಾ?

Saturday, July 31, 2010

ಹೀಗೊಂದು ಕಥಾನಕ.......

ಮಹಾರಾಜರು ತಮ್ಮ ಕೈಗಳನ್ನು ಹಿಂದೆ ಕಟ್ಟಿಕೊಂಡು ಅರಮನೆಯ ಮೊಗಸಾಲೆಯಲ್ಲಿ ಚಿಂತಾಕ್ರಾಂತರಾಗಿ ಅಡ್ಡಾಡುತ್ತಿದ್ದರು. ಅವರ ಹಿಂದೆ, ಕೈಗಳನ್ನು ಮುಂದೆ ಕಟ್ಟಿಕೊಂಡು, ತುಸು ಬಾಗಿ, ವಿಧೇಯತೆಯಿಂದ ಮುಖ್ಯಮಂತ್ರಿಯೂ ಅಡ್ಡಾಡುತ್ತಿದ್ದರು. ಮಹಾರಾಜರು ಯಾಕೆ ಈ ರೀತಿ ಹಿಂದೆ-ಮುಂದೆ ಅಡ್ಡಾಡುತ್ತಿದ್ದಾರೆ ಎಂಬುದು ಅವರ ಚಿಂತೆಯಾಗಿತ್ತು. ಕೊನೆಗೂ ತಡೆಯಲಾಗದೆ "ಮಹಾರಾಜರು ಏನೋ ಮಹತ್ತರವಾದ ಚಿಂತೆಯಲ್ಲಿರುವಂತಿದೆ.ವಿಷಯ ಏನೆಂದು ಹೇಳಿದರೆ ನಾನೂ ಅದರ ಬಗ್ಗೆ ಚಿಂತೆ ಮಾಡಬಹುದು" ಎಂದು ವಿನಂತಿಸಿದರು. ಹ್ಮಂ..ಹ್ಮಂ.."ಎಂದು ಮಹಾರಾಜರು ಹೊರಡಿಸಿದ ಧ್ವನಿಯ ಅರ್ಥ ಏನಿರಬಹುದು ಎಂಬುದು ಮಂತ್ರಿಗಳಿಗೆ ತಿಳಿಯಲಿಲ್ಲ. ಚಿಂತೆ ಮಾಡುತ್ತಿರುವಾಗ ಮಧ್ಯೆ ಯಾರಾದರೂ ಮಾತಾಡುವುದು ಮಹಾರಾಜರಿಗೆ ಹಿಡಿಸುತ್ತಿರಲಿಲ್ಲ. ಆದರೆ ಇವ ಬರೀ ಮುಖ್ಯ ಮಂತ್ರಿಯಲ್ಲ,ಖಾಸ ಹೆಂಡತಿಯ ತಮ್ಮ. ಹಾಗಾಗಿ ಗದರದೆ ಸುಮ್ಮನಾದರು.

"ಅಲ್ಲಯ್ಯಾ..ಹೀಗಾದರೆ ಏನು ಗತಿ?" ಇನ್ನೂ ಎರಡು ಬಾರಿ ಅತ್ತಿತ್ತ ಓಡಾಡಿದ ಅನಂತರ ಮಹಾರಾಜರು ಉದ್ಗರಿಸಿದರು. ಮಂತ್ರಿಗೆ ಏನು ವಿಷಯ ಎಂಬುದು ತಿಳಿಯಲಿಲ್ಲ. ವಿಷಯವನ್ನು ಸಂಪೂರ್ಣ ತಿಳಿಯುವ ಆಸೆಯಿಂದ "ಯಾವುದು ಹೇಗಾದರೆ ಯಾವ ಗತಿ?" ಎಂದು ಕೇಳಿದರು.

"ಬೆಲೆಗಳೆಲ್ಲ ಏರುತ್ತಿವೆಯಂತೆ.."

"ಯಾವುದರ ಬೆಲೆ?"

"ಇನ್ನ್ಯಾವುದಯ್ಯಾ..ದವಸ ಧಾನ್ಯ, ಬೇಳೆ ಕಾಳುಗಳು,ತರಕಾರಿ..."

ಮಂತ್ರಿಗಳಿಗೆ ವಿಷಯ ಇಷ್ಟೇನಾ ಅನಿಸಿತು. ವಾಸ್ತವದಲ್ಲಿ ಅವಕ್ಕೆಲ್ಲ "ಬೆಲೆ" ಎಂಬುದೊಂದು ಇರುತ್ತದೆ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವೆಲ್ಲವೂ ಸಹಜವಾಗಿ,ಸುಲಭವಾಗಿ, ಸುಮ್ಮನೆ ಸಿಗುವ ವಸ್ತುಗಳು ಎಂದು ಭಾವಿಸಿದ್ದರು.ಬೆಲೆ ಏರಿದರೆ ಮಹಾರಾಜರಿಗೆ ಯಾಕೆ ಚಿಂತೆಯಾಗಬೇಕು? ಅದು ಸರಿ,ಮಹಾರಾಜರಿಗೆ ಅದರ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು? ಮಂತ್ರಿಯಾದ ತನಗೆ ತಾನೇ ಎಲ್ಲವೂ ಮೊದಲು ತಿಳಿಯಬೇಕಾದದ್ದು? ಮಂತ್ರಿಗೆ ಈ ಚಿಂತೆ ಶುರುವಾಯಿತು.

"ಯಾರು ನಿಮಗೆ ಈ ವಿಷಯ ಹೇಳಿ ತೊಂದರೆ ಕೊಟ್ಟವರು? ಈ ಕ್ಷಣದಲ್ಲಿ ಅವರ ಶಿರಚ್ಛೇದನ ಮಾಡಿಸುತ್ತೇನೆ"

"ಮಹಾರಾಣಿ"

ಉತ್ತರ ಕೇಳಿ ಮಂತ್ರಿಗಳು ತಣ್ಣಗಾದರು. ಮಹಾರಾಣಿಯವರ ಶಿರಚ್ಛೇದ ಮಾಡಿಸುವುದೇ?ಮಾಡಿದರೆ ತನ್ನ ಕತ್ತಿನ ಮೇಲೆ ಏನುಳಿಯುತ್ತದೆ?

"ಅವರಿಗೆ ಹೇಗೆ ಗೊತ್ತಾಯಿತು?"

"ಅಡುಗೆ ಮಾಡುವವಳು"

"ಸರಿ.ಸಮಸ್ಯೆ ಬಗೆಹರಿಯಿತಲ್ಲ..ಅವಳ ಶಿರಚ್ಛೇದ ಮಾಡಿದರಾಯಿತು ಅನಂತರ ಬೆಲೆಗಳು ಏರಿದರೆ ಯಾರಿಗೂ ತಿಳಿಯುವುದಿಲ್ಲ ತಾನೇ?" ಅಂದರು.

ಮಹಾರಾಜರಿಗೆ ಕನಿಕರ ಬಂತು.ಮಂತ್ರಿಯಿಂದ ಬೇರೇನು ಉತ್ತರ ಸಾಧ್ಯ?ಬೆಳಗಿಂದ ಚಿಂತಿಸುತ್ತಿದ್ದ ಅವರಿಗೇ ಇನ್ನೂ ಉತ್ತರ ಹೊಳೆದಿರಲಿಲ್ಲ.

"ಹಾಗಲ್ಲಯ್ಯಾ..ಬೆಲೆಗಳು ಏರಿ ಬಡವರಿಗೆ ತುಂಬಾ ತೊಂದರೆ ಆಗುತ್ತಿದೆಯಂತೆ.ಅವರಿಗೆಲ್ಲ ಒಬ್ಬ ನಾಯಕ ಹುಟ್ಟಿಕೊಂಡಿದ್ದಾನಂತೆ.ಅವರು ಧರಣಿ,ರಾಸ್ತಾ ರೋಕೋ ಮಾಡುತ್ತಾರಂತೆ..ಅವರೆಲ್ಲ ಒಂದಾಗಿ ನಿಂತರೆ ನನ್ನ ಮಗನ ಪಟ್ಟಾಭಿಷೇಕಕ್ಕೆ ಜನರೆಲ್ಲಯ್ಯಾ ಇರುತ್ತಾರೆ?"

ಸಮಸ್ಯೆ ನಿಜವಾಗಲೂ ಗಂಭೀರವಾಗಿದೆ. ಎಷ್ಟು ಯೋಚಿಸಿದರೂ ಮಂತ್ರಿಗಳಿಗೆ ಬೆಲೆ ಏರಿದ್ದು, ಅಡುಗೆಯವಳು ಮಹಾರಾಣಿಗೆ ಯಾಕೆ ಹೇಳಿದ್ದು..ಮಹಾರಾಣಿಯವರು ಮಹಾರಾಜರಿಗೆ ಯಾಕೆ ಹೇಳಿದ್ದು..ಬೆಲೆ ಏರಿದರೆ ಜನರು ಯಾಕೆ ಒಟ್ಟಾಗಬೇಕು ಎಂಬುದು ತಿಳಿಯಲಿಲ್ಲ. ಒಂದು ಉಪಾಯ ಹೊಳೆಯಿತು.

"ಸ್ವಾಮೀ, ಇದರ ಕಾರಣ ತಿಳಿಯಲು ನಾವೊಂದು ಸಮಿತಿ ಮಾಡುವಾ.ಅವರು ಅದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ಕೊಟ್ಟ ಕೂಡಲೇ ಮುಂದಿನ ಕ್ರಮ ತೆಗೆದುಕೊಂಡರಾಯಿತು."

ಮಹಾರಾಜರಿಗೂ ಇದು ಒಳ್ಳೇ ಉಪಾಯ ಅನಿಸಿತು. ಅಷ್ಟಕ್ಕೂ ಎಲ್ಲ ಸಮಸ್ಯೆಗಳಿಗೂ ತಾವೇ ಚಿಂತಿಸುತ್ತ ಕೂತರೆ ರಾಜ್ಯಭಾರ ಮಾಡುವುದು ಹೇಗೆ?ಕೂಡಲೇ ಒಂದು ಸಮಿತಿ ಮಾಡುವ ಜವಾಬ್ದಾರಿಯನ್ನು ಮಂತ್ರಿಗೇ ವಹಿಸಿ,ಬೆಲೆ ಏರಿಕೆಯ ಕಾರಣವನ್ನು ಒಂದು ವಾರದಲ್ಲಿ ತಮಗೆ ತಿಳಿಸಲು ಸೂಚಿಸಿದರು.

ಅದರಂತೆ ಒಂದು ಸಮಿತಿ ರಚನೆಯಾಯಿತು. ಸಮಿತಿಗೆ ಈ ಕೆಳಕಂಡ ವಿಚಾರಗಳ ಬಗ್ಗೆ ವರದಿ ಕೊಡಲು ಸೂಚಿಸಲಾಯಿತು.

೧.ಅಡುಗೆಯವಳಿಗೆ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು?

೨.ಅವಳು ಅದನ್ನು ಮಹಾರಾಣಿಯವರಿಗೆ ತಿಳಿಸಲು ಕಾರಣಗಳೇನು?

೩.ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

Wednesday, July 28, 2010

ಸ್ವರ್ಗ-ನರಕ

ಸ್ವರ್ಗ-ನರಕ

ಮೂರನೆಯ ಕ್ರಾಸಿನ ಕೊನೆಯಲ್ಲಿ ಮುರುಕು ಗುಡಿಸಲಿದೆ.ಈ ಮುರುಕು ಗುಡಿಸಲು ಯಾರಿದ್ದು?ಗೊತ್ತಿಲ್ಲ. ಎಲ್ಲ ಮನುಷ್ಯರಿಗೂ ಚರಿತ್ರೆ ಇರುವುದಿಲ್ಲ.ಅಲ್ಲಿ ಈ ನಾಯಿಮರಿಯ ವಾಸ. ಅದಕ್ಕೆ ಅಪ್ಪ,ಅಮ್ಮ, ಅಣ್ಣ ಇತ್ಯಾದಿ ಯಾರೂ ಇಲ್ಲ. ಇದೇ ಕ್ರಾಸಿನ ಮತ್ತೊಂದು ತುದಿಯಲ್ಲಿ  "ಸರಕಾರಿ ಹೆಣ್ಣುಮಕ್ಕಳ ಕಿರಿಯ ಪ್ರಾಥಮಿಕ ಶಾಲೆ" ಇದೆ.ಬೆಳಗಿಂದ ಸಾಯಂಕಾಲದವರೆಗೂ ಈ ಮರಿಯೂ ಶಾಲೆಯ ಬಳಿ ಇರುತ್ತಿತ್ತು.ಕಾರಣ: ಪುಟ್ಟ ಹುಡುಗಿಯರು ಅದಕ್ಕೆ ಚೂರುಪಾರು ತಿಂಡಿ,ಬಿಸ್ಕತ್ ಇತ್ಯಾದಿ ಕೊಡುವುದು.ಭಾನುವಾರ ಮಾತ್ರ ಅದಕ್ಕೆ ಪರದಾಟ.ಶಾಲೆಗೆ ರಜಾ:ಮರಿಯ ಹಸಿವಿಗೆ ರಜಾ ಇಲ್ಲ.
ಇಂಥ ಒಂದು ಭಾನುವಾರ ಮರಿ ತನ್ನ ಕ್ಷೇತ್ರವಾದ ಎರಡನೆಯ ಕ್ರಾಸನ್ನು ದಾಟಿ ಮೂರನೆಯ ಕ್ರಾಸು ಸೇರಿತು. ಅಲ್ಲಿ ಪುಟ್ಟ ಮಕ್ಕಳ ಗುಂಪು ಕಾಣಬಹುದು ಎಂಬ ಆಸೆ. ಹಾಗೇ ಮುಂದುವರಿದು ಬರುತ್ತಿರುವಾಗ ದೊಡ್ಡದಾದ ಒಂದು ಮನೆ ಕಂಡಿತು. ಗೇಟಿನ ಹತ್ತಿರ ಒಂದು ಪುಟ್ಟ ಮನೆಯೂ ಅದರಲ್ಲಿ ಈ ಮರಿಗೆ ಅಶ್ಚರ್ಯ ಹುಟ್ಟಿಸುವಂತೆ ಒಂದು ನಾಯಿಮರಿಯೂ ಕಂಡಿತು.ಎಲಾ! ಈ ಮರಿಗೆ ತನ್ನದೇ ಆದ ಒಂದು ಸುಂದರವಾದ ಮನೆ ಉಂಟಲ್ಲ! ಜೊತೆಗೇ ಮೂಲೆಯಲ್ಲಿದ್ದ ಬಟ್ಟಲಲ್ಲಿ ತುಂಬಿಟ್ಟಿದ್ದ ಆಹಾರ! ಅದರೊಳಗಿದ್ದ ಮರಿ ಕಾಲು ಚಾಚಿ ಹಾಯಾಗಿ ಮಲಗಿತ್ತು.ಈ ಮರಿ ಅದನ್ನು ಅಸೂಯೆಯಿಂದ ನೋಡಿತು. "ಎಂತಹ ಭಾಗ್ಯ!ಬೇಕಾದಾಗ ಎದ್ದು ಆಹಾರ ತಿಂದು ಮಲಗಿದರಾಯಿತು.ತನಗೆ ಇಂತಹ ಭಾಗ್ಯ ಇಲ್ಲ."ಎಂದು ಚಿಂತಿಸಿತು ಮರಿ. ತನ್ನ ಬಗ್ಗೆ ತಾನೇ ಮರುಕಪಟ್ಟಿತು. ತುಸು ಹೊತ್ತು ಅಲ್ಲೇ ನೋಡಿ ತನಗೂ ಇಂತಹ ಮನೆ ಸಿಕ್ಕರೆ..ಅದೇ ಸ್ವರ್ಗ ಎಂದು ಅಂದುಕೊಂಡಿತು.ಮನಸ್ಸು ಉದಾಸಗೊಂಡಿತು. ಕಾಲೆಳೆಯುತ್ತಾ ನಿಧಾನವಾಗಿ ತನ್ನ ಮುರುಕು ಗುಡಿಸಲತ್ತ ನಡೆಯಿತು.ಅದಕ್ಕೆ ಈಗ ಆ ಗುಡಿಸಲು ನರಕದಂತೆ ಕಾಣತೊಡಗಿತು.
ಇತ್ತ ದೊಡ್ಡ ಮನೆಯ ಗೇಟಿನ ಬಳಿ ಇದ್ದ ಪುಟ್ಟ ಮನೆಯಲ್ಲಿ ಮಲಗಿದ್ದ ಮರಿ ಕೋರೆಗಣ್ಣಲ್ಲಿ ರಸ್ತೆಯಲ್ಲಿ ಬಂದು,ನಿಂತು ನೋಡಿ ಹೋದ ಮರಿಯನ್ನು ಗಮನಿಸಿತು.ಅದು ಅತ್ತ ಇತ್ತ ಓಡಾಡಿದ್ದು,ತನ್ನತ್ತ ನೋಡಿದ್ದು ಎಲ್ಲವನ್ನೂ ಗಮನಿಸಿತು."ಈ ಮನೆಯಲ್ಲಿ ಕೂಡಿ ಹಾಕಿರುವ ತನ್ನನ್ನು ನೋಡಿ ಆ ಮರಿ ಏನು ಅಂದುಕೊಂಡಿತೋ..ತನ್ನ ಬಗ್ಗೆ ಮರುಕ ಬಂದಿರಬಹುದು.. ಛೆ..ಆ ಮರಿಯದ್ದು ಎಂತಹ ಭಾಗ್ಯ! ಎಲ್ಲಿ ಬೇಕಾದರೂ ಹೋಗಬಹುಗು..ಏನು ಬೇಕಾದರೂ ತಿನ್ನಬಹುದು..ಎಂತಹ ಸ್ವಾತಂತ್ರ್ಯ! ತನಗಿಲ್ಲ..ಹಾಕಿದ್ದನ್ನು ಹಾಕಿದಾಗ ತಿನ್ನ ಬೇಕು..ಮನಸ್ಸು ಬಂದಾಗ ಕೂಗುವಂತೆಯೂ ಇಲ್ಲ....ಆ ಮರಿಯೇ ಪುಣ್ಯ ಮಾಡಿದೆ.. ಸ್ವರ್ಗದಲ್ಲಿದೆ.."ಎಂದು ಚಿಂತಿಸಿತು. ಮನಸ್ಸು ಉದಾಸವಾಯಿತು. ಆ ಮನೆ ಅದಕ್ಕೆ ನರಕದಂತೆ ಕಾಣತೊಡಗಿತು.

Tuesday, July 27, 2010

ಬೇರು

ಬೇರು ಊರದಿರೆ ಮಣ್ಣಲ್ಲಿ ಚಿಗುರೀತೆ ಕೊಂಬೆ
ಬಿಟ್ಟೀತೆ ಹೂವು,ಕಾಯಿ, ಹಣ್ಣು
ಹೀರದಿರೆ ಬೇರು ಮಣ್ಣನಿನೊಳಗಿನ ಸಾರ
ಆಗುವುದು ಗಿಡವು ಮಣ್ಣಲ್ಲಿ ಮಣ್ಣು.

ಕೆಲರು ನೋಡುವರು ಹೂವನ್ನ,ಕೆಲರು ಕಾಯನ್ನ
ಎಲ್ಲರಿಗೂ ಬೇಕು  ಹಣ್ಣು
ಮಣ್ಣಿನೊಳಗಡೆ ಬಗೆದು ನೋಡುವವರಾರು
ಬೇಕದಕೆ ಸೂಕ್ಷ್ಮ ಕಣ್ಣು.

ಹೂವಾಗುವುದು ಸಹಜ,ಕಾಯಾಗುವುದು ಸಹಜ
ಮಾಗಿದರೆ ಸಹಜ ಹಣ್ಣು
ಬಂದು ಮುತ್ತುವುವು ಎಷ್ಟೆಲ್ಲ ಜೀವಗಳು
ಮರ ಬೋಳಾಗುವುದೂ ಸಹಜವೆನ್ನು

ಹೂವಾಗು ನೀ ಗೆಳೆಯ ಕಾಯಾಗು ಹಣ್ಣಾಗು
ನಡೆದಿರಲಿ ಜೀವದಾನ
ಮರೆಯದಿರು ಎಂದೆಂದೂ ಬೇರನ್ನ,ಮಣ್ಣನ್ನ
ಅದಕ್ಕೂ ಇರಲಿ ಸ್ಥಾನಮಾನ.

Friday, July 23, 2010

ಕಂಬಳಿ ಕೊಪ್ಪೆ

ಚಿಕ್ಕವನಿದ್ದಾಗ ಶಾಲೆ ಎಂದರೆ
ಬಳಪ,ಪೆನ್ಸಿಲ್ ತುಂಡು,ಸಂಪಿಗೆ ಹಣ್ಣು
ಸದಾ ತೆರೆದ ಕಣ್ಣು.

ಮಳೆಗಾಲದಲ್ಲಿ ನೀರ ಬುಗ್ಗೆ
ಅಂಗಿಚಡ್ಡಿ ಸದಾ ಒದ್ದೆ
[ಹುಡಿಗೀರ ಲಂಗವೂ]

ಆಗ ಕೊಡೆಗಾಗಿ ಹಠ
ಕೊಡೆ ಕೊಡೆ ಎಂದಪ್ಪನ ಮೇಲೆ ಸಿಟ್ಟು
ಕಳೆಯುತ್ತಿದ್ದೆ ನಾಲ್ಕು ದಿನ ಮಾತು ಬಿಟ್ಟು

ಕಡೆಗೆ ಅಪ್ಪ ಕರಿಕಂಬಳಿ ಕೊಪ್ಪೆ ಮಾಡಿ ಕೊಟ್ಟರು
ಹೊದ್ದರೆ ಬೆಚ್ಚಗಿನಪ್ಪುಗೆ.
ಅತ್ತಿತ್ತ ನೋಟವಿಲ್ಲ. ಎದುರು ಮಾತ್ರ ಕಾಂಬ ರಸ್ತೆ.
ನೇರ ಶಾಲೆಗೆ.

ಮಗಳಿಗೆ ಹೇಳಿದರೆ ನಕ್ಕು ಹೇಳಿದಳು
ಅಪ್ಪ ಈಗಿನ ಕಾಲವೇ ಬೇರೆ
ಈಗೆಲ್ಲ ಬಣ್ಣದ ಕೊಡೆಗಳ ಲೀಲೆ
ಸುತ್ತಮುತ್ತೆಲ್ಲ ಕಾಣುವ ಹಾಗೆ
[ನಾನೂ ಎಲ್ಲರಿಗೂ ಕಾಣಬೇಕು ಹಾಗೇ]

ನನಗೆ ನಾನು ಖರೀದಿಸಿದ ಕೊಡೆಗಿಂತ
ಅಪ್ಪ ಕೊಟ್ಟ ಕರಿಕಂಬಳಿ ಸುಖ
ಒಂಟಿಯಾಗಿ, ಗುಟ್ಟಾಗಿ ಹೊದ್ದು ಕೂರುತ್ತೇನೆ
ನಾನೇ ಆಗ ನನ್ನ ಮುಖ.

Thursday, July 8, 2010

ನಮಸ್ಕಾರ

ಬೇದೂರು ಅದಿತ್ಯನಿಗೆ ಒಂದು ನಮಸ್ಕಾರ ಹೇಳಬೇಕು. ಕಾರಣ ಇಷ್ಟೆ: ನನ್ನ ಬರಹಪ್ಯಾಡ್ನಲ್ಲಿ ಏನೇ ಬರೆದರೂ ಬರೀ ಚೌಕ ಬರತೊಡಗಿತು. ಬಹುಷಃ ನನ್ನ ಲೇಖನಗಳನ್ನು ಪದಕ್ಕಿಳಿಸುವ ಅಗತ್ಯವಿಲ್ಲ ಎಂದು ಗಣಕವೆ ವಿಮರ್ಶಿಸಿರಬಹುದು. ನನ್ನ ಓದುಗರು ನೆಮ್ಮದಿಯಿಂದ ಇದ್ದರು. ಅದಿತ್ಯನಿಗೆ  ಹೀಗಾಗುತ್ತೆ ಮಾರಾಯಾ ಅಂದ ಕೂಡಲೆ ಸರಿಮಾಡಿಕೊಟ್ಟ. ಅದಕ್ಕಾಗಿ ನನ್ನ ನಮಸ್ಕಾರ ಅವನಿಗೆ. ಅವನ ಈ ಅತ್ಯುತ್ಸಾಹದ ಕೆಲಸದಿಂದ ನಿಮಗೆ ಆಗುವ ನೆಮ್ಮದಿ ಭಂಗಕ್ಕೆ ಅವನನ್ನೇ ದೂರಬಹುದು!

Sunday, July 4, 2010

...????

ಬಹಳ ದಿನಗಳಿಂದ ಬರೆದಿಲ್ಲ. ಅಪರೂಪಕ್ಕೆ ನನ್ನ ಬ್ಲಾಗಿಗೆ ಬರುವವರಿಗೆ ನೆಮ್ಮದಿಯಾಗಿದೆ. ಎಲ್ಲ ಆರಾಮಾಗಿದ್ದಾರೆ ಎಂದು ಸುದ್ದಿ. ಅವರು ಆರಾಮಿಗಿರಬೇಕು ಎಂಬುದಕ್ಕಾಗಿ ನಾನು ಬರೆಯದೆ ಬಿಟ್ಟಿದ್ದಲ್ಲ. ನಾನು ಕನ್ನಡದಲ್ಲಿ ಟೈಪಿಸಿ ಬ್ಲಾಗಿಗೆ ಹಾಕಿದರೆ ಅಲ್ಲಿ ಅದು ಯಾವುದೋ ಅವತಾರದಲ್ಲಿ ಕಾಣಿಸುತ್ತೆ. ಹೇಗೆ ಸರಿ ಮಾಡುವುದು? ಇದಾದರೂ ಸರಿಯಾಗಿ ಕನ್ನಡದಂತೆಯೇ ಕಾಣಿಸುತ್ತ? ಹೇಳಿ.