ಕಾಲ ಅಭೌತಿಕವಾದದ್ದು. ಅದು ಅನುಭವಾತೀತ. ಕಾಲದಲ್ಲಿ ನಾವು ಬೇರೆಲ್ಲವನ್ನೂ ಅನುಭವಿಸಬಹುದೇ ಹೊರತು ಕಾಲವನ್ನೇ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ.ಇಡೀ ಜಗತ್ತಿನ ಅಸ್ತಿತ್ವ ಕಾಲ ಮತ್ತು ದೇಶದ(Time and Space) ನೆಯ್ಗೆಯಲ್ಲಿದೆ. ದೇಶವನ್ನು ಉದ್ದ, ಅಗಲ, ಎತ್ತರ ಎಂಬ ಮೂರು ಆಯಾಮಗಳ ಮೂಲಕ ಗ್ರಹಿಸಿ ಅಳೆಯಬಹುದಾದಂತೆ, ಏಕಮುಖೀ ಚಲನೆಯುಳ್ಳ, ನಾಲ್ಕನೆಯ ಆಯಾಮವಾದ ಕಾಲವನ್ನು ನೇರವಾಗಿ ಅಳೆಯಲಾರೆವು. ನಡೆಯುತ್ತಿರುವ ಒಂದು ಘಟನೆಯನ್ನು, ಅಥವಾ ಎರಡು ಘಟನೆಗಳ ನಡುವಿನ ಅಂತರವನ್ನು ಗ್ರಹಿಸಲು ಕಾಲವನ್ನು ಬಳಸಬಹುದೇ ಹೊರತು ನೇರವಾಗಿ ಕಾಲವನ್ನು-ದೇಶವನ್ನು ಅಳೆಯುವಂತೆ- ಅಳೆಯಲು ಸಾಧ್ಯವಿಲ್ಲ. ದೇಶಕ್ಕಿರುವಂತೆ ಕಾಲಕ್ಕೆ ಪೂರ್ವಸ್ಥಿತಿ ಇಲ್ಲ. ಉದಾಹರಣೆಗೆ, ಐದು ನಿಮಿಷದಿಂದಲೂ ಪೂಜೆ ನಡೀತಿದೆ ಅನ್ನುವಾಗ, ಗ್ರಹಿಕೆಗೆ ಸಿಗುವುದು ನಡೆಯುತ್ತಿರುವ ಪೂಜೆಯೇ ಹೊರತು ಕಾಲವಲ್ಲ. ಆದರೆ ಕಾಲದ ಮೂಲಕವಾಗಿ ಆರಂಭ, ಅಂತ್ಯ ಮತ್ತು ಚಲನೆಯನ್ನು ನಾವು ಅಳೆಯುತ್ತೇವೆ. ಹಾಗಾಗಿ ಕಾಲ ಒಂದು ಮಾಪಕವಾಗಿ ಅಗತ್ಯವಿದೆ.
ಕಾಲವನ್ನು ವಿವಿಧ ನಾಗರೀಕತೆಗಳು ವಿವಿಧ ರೀತಿಯಲ್ಲಿ ಅಳೆದಿವೆ. ವೇದದಲ್ಲಿ ಕಾಲವನ್ನು ಅದರ ಅತಿ ಸೂಕ್ಷ್ಮತೆಯಿಂದ ಪ್ರಾರಂಭಿಸಿ, ಅದರ ಅತಿ ಸ್ಥೂಲದವರೆಗೂ ಗುರುತಿಸಿದ್ದಾರೆ.
ಅಣು, ಪರಮಾಣು ಮತ್ತು ತ್ರಸರೇಣು ಎಂಬ ಕಾಲದ ಅಳತೆಯ ಮೊದಲ ಮೂರು ಕಲ್ಪನೆಗಳ ನಿರ್ದಿಷ್ಟ ವಿವರಣೆ ಸಿಗುತ್ತಿಲ್ಲ. ಎರಡು ಅಣುಗಳು ಸೇರಿ ಒಂದು ಪರಮಾಣು, ಇಂತಹ ಮೂರು ಪರಮಾಣು ಸೇರಿದರೆ ಒಂದು ತ್ರಸರೇಣು ಎಂಬ ವಿವರವಿದೆ. ಆದರೆ ಒಂದು ಅಣುವಿನಷ್ಟು ಕಾಲ ಎಂದರೆಷ್ಟು ಎಂಬ ವಿವರ ಸಿಗುವುದಿಲ್ಲ. ಇಂತಹ ೩ ತ್ರಸರೇಣು ಒಂದು ತ್ರುಟಿಗೆ ಸಮ. ಇದು ೧/೧೬೫೭.೫ ಸೆಕಂಡುಗಳಿಗೆ ಸಮ. ಆದುದರಿಂದ ನಮ್ಮ ಕಾಲ ಗಣನೆಯನ್ನು ಇಲ್ಲಿಂದ ಪ್ರಾರಂಭಿಸಬಹುದು.
೧) ೩ ತ್ರಸರೇಣು = ೧ ತ್ರುಟಿ.
೨) ೧೦೦ ತ್ರುಟಿ = ೧ ವೇಧಾ
೩) ೩ ವೇಧಾ = ೧ ಲವ
೪) ೩ ಲವಗಳು = ಒಂದು ನಿಮೇಷ.(=ಒಮ್ಮೆ ಕಣ್ಣು ಮುಚ್ಚಿ ತೆರೆಯಲು ತಗುಲುವ ಕಾಲ.)
೫) ೩ ನಿಮೇಷಗಳು = ೧ ಕ್ಷಣ.
೬) ೫ ಕ್ಷಣಗಳು = ೧ ಕಷ್ಟಸ್( ಸರಿಸುಮಾರು ೮ ಸೆಕೆಂಡುಗಳು.)
೭) ೧೫ ಕಷ್ಟಸ್ = ೧ ಲಘು
೮) ೧೫ ಲಘುಗಳು = ೧ ದಂಡ ಅಥವಾ ೧ ನಾಡಿಕಾ
೯) ೨ ನಾಡಿಕಾಗಳು = ೧ ಮುಹೂರ್ತ
೧೦) ೬/೭ ಮುಹೂರ್ತಗಳು = ೧ ಯಾಮ ಅಥವಾ ಪ್ರಹರ
೧೧) ೪ ಯಾಮಗಳು+ ೪ ಯಾಮಗಳು = ೧ ಹಗಲು + ೧ ರಾತ್ರಿ =ಒಂದುದಿನ.
೧೨) ೧೫ ದಿನಗಳು = ೧ ಪಕ್ಷ
೧೩) ೨ ಪಕ್ಷಗಳು = ೧ ಮಾಸ
೧೪) ೨ ಮಾಸಗಳು = ೧ ಋತು
೧೫) ೩ ಋತುಗಳು = ೧ ಆಯನ
೧೬) ೨ ಆಯನಗಳು = ೧ ವರ್ಷ/ ಸಂವತ್ಸರ.
೧೭) ೪೩೨೦೦೦ ವರ್ಷಗಳು = ೧ ಚರಣ ಅಥವಾ ಪಾದ
೧೮) ೧೦ ಚರಣ = ೧ ಮಹಾಯುಗ =೪೩೨೦೦೦೦ ವರ್ಷಗಳು.
[ ಟಿಪ್ಪಣಿ: ೧ ಮಹಾಯುಗದಲ್ಲಿ ೪ ಯುಗಗಳಿವೆ.ಒಂದು ಪಾದದ ಕಲಿಯುಗ(೪೩೨೦೦೦ ವರ್ಷಗಳು) +ಎರಡು ಪಾದಗಳ ದ್ವಾಪರ ಯುಗ (೮೬೪೦೦೦ ವರ್ಷಗಳು) +ಮೂರು ಪಾದಗಳ ತ್ರೇತಾಯುಗ (೧೨೯೬೦೦೦ ವರ್ಷಗಳು) +ನಾಲ್ಕು ಪಾದಗಳ ಕೃತಯುಗ (೧೭೨೮೦೦೦ ವರ್ಷಗಳು.)]
ಇಲ್ಲಿಯವರೆಗಿನ ಕಾಲದ ವಿಭಾಗವನ್ನು ಸೂಕ್ಷ್ಮದ ಗುಂಪಿಗೆ ಸೇರಿಸಬಹುದು.೪೩೨೦೦೦೦ ವರ್ಷಗಳು ಹ್ಯಾಗೆ ಸೂಕ್ಷ್ಮ ಮಾರಾಯರೆ?ನಿಮಗೆ ಏನಾಗಿದೆ ಎಂದು ಕೇಳಬೇಡಿ. ಇನ್ನೂ ಮುಂದೆ ಹೋಗುವಾ.ಬನ್ನಿ.
೧೦೦೦ ಮಹಾಯುಗಗಳು = ೧ ಕಲ್ಪ = ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ರಾತ್ರಿ ಕೂಡ ೧ ಕಲ್ಪಕ್ಕೆ ಸಮ.
೬೦ ಕಲ್ಪಗಳು = ಬ್ರಹ್ಮನ ಒಂದು ತಿಂಗಳು.
೧೨ ತಿಂಗಳು =ಬ್ರಹ್ಮನ ಒಂದು ವರ್ಷ
೧೦೦ ವರ್ಷಗಳು= ಬ್ರಹ್ಮನ ಆಯುಷ್ಯ.ಇದನ್ನು ಪರ ಅಥವಾ ಮಹಾಕಲ್ಪ ಎಂದೂ ಕರೆಯುತ್ತಾರೆ. ಇದು ೩೧೧೦೪೦೦೦೦೦೦೦೦೦೦ ಮಾನವ ವರ್ಷಗಳಿಗೆ ಸಮ.
ಒಂದು ಮಹಾಯುಗ ಇದರ ೧.೮೮೮೯ % ಗೆ ಸಮವಾಗುವುದರಿಂದ ಅದನ್ನು ಕಾಲವಿಭಾಗದಲ್ಲಿ ಸೂಕ್ಷ್ಮಕ್ಕೆ ಸೇರಿಸಿದ್ದು!
ಉತ್ಸಾಹಿಗಳು ಬ್ರಹ್ಮನ ಆಯುಷ್ಯದಲ್ಲಿ ಎಷ್ಟು ತ್ರುಟಿಗಳಿವೆ ಎಂದು ಲೆಕ್ಕ ಹಾಕಲು ಪ್ರಯತ್ನಿಸಬಹುದು. ಆ ಬ್ರಹ್ಮನು ಅವರಿಗೆ ಒಳ್ಳೆಯದು ಮಾಡಲಿ.
(ಅಡಿ ಟಿಪ್ಪಣಿ: ಇದಲ್ಲದೆ ಈ ಕಾಲದಲ್ಲಿ ಒಳವಿಭಾಗಗಳಾಗಿ ಮನ್ವಂತರ, ಸಂಧ್ಯ,ಸಂಧ್ಯಾಂಶಗಳಿವೆ. ಕೋರಿಕೆ ಬಂದರೆ ಅದರ ಬಗ್ಗೆ ಬರೆದರಾಯಿತು.ಸಧ್ಯಕ್ಕಿಷ್ಟು ಸಾಕು.)
(ಆಧಾರ;೧. "ಪುರಾಣ ನಾಮ ಚೂಡಾಮಣಿ" ೨. " A Concise Encyclopaedia of Hinduism")
12 comments:
ಅಬ್ಬಬ್ಬಾ, ಭಾರತೀಯ ಕಾಲಮಾನವು ಎಷ್ಟು ಸೂಕ್ಷ್ಮ ಮಾನದಿಂದ ಎಂತಹ ದೀರ್ಘ ಮಾನದವರೆಗೆ ಪಸರಿಸಿದೆ ಎನ್ನುವದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ತಿಳಿಸಿದ ನಿಮಗೆ ಧನ್ಯವಾದಗಳು. ಒಂದು ಸಂಶಯ: ಪರಮಾಣು ಇದು ಅಣುವಿಗಿಂತ ಚಿಕ್ಕದಾಗಿರುವದಲ್ಲವೆ? ಹಾಗಿದ್ದಾಗ, ಕೆಲವು ಪರಮಾಣುಗಳು ಕೂಡಿ ಒಂದು ಅಣುವಾಗಬೇಕು. ಇಲ್ಲಿ ವಿರುದ್ಧವಾಗಿ ಹೇಳಲಾಗಿದೆಯಲ್ಲ?
ಸ೦ಗ್ರಹಯೋಗ್ಯ ಲೇಖನಗಳು ತು೦ಬಿವೆ ನಿಮ್ಮ ತಾಣದಲ್ಲಿ. ವ೦ದನೆಗಳು ಸರ್.
ಅನ೦ತ್
ಅದ್ಭುತ ಮಾಹಿತಿ ನೀಡಿದ್ದಕ್ಕಾಗಿ ಅನಂತ ಧನ್ಯವಾದಗಳು.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.
Information chennagi ide...adare....
"The smallest particle of material substance, which has not yet combined with any other similar particles, is called paramanu (a sub-atomic particle of matter)"
A combination of two paramanus constitutes an anu (atom); and three anus (atoms) makes one trasarenu" - Idu sari anta nanage gottiruva hage...
(This information is taken from the Paramahamsa Samhita Bhagavat-puranam: III/XI, which was originally spoken by Sri Sukadeva Goswami 30 years after the start of this current Kali Yuga or exactly 5070 years ago as of 1999 AD)
ಅಣು ಎಂಬುದಕ್ಕೆ ಎರಡು ಅರ್ಥಗಳಿರುವಂತೆ ಭಾವಿಸಿಕೊಳ್ಳಬೇಕಾಗಿದೆ.ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಬಳಕೆಯಲ್ಲಿರುವ ಅಣುವಿನ ಅರ್ಥಕ್ಕೂ ಕಾಲದ ಅಳತೆಯಲ್ಲಿ ಬಳಸಿದ ಅಣುವಿನ ಅರ್ಥಕ್ಕೂ ಅಂತರವಿದೆ. "A Concise Encyclopaedia of Hinduism" ಗ್ರಂಥದಲ್ಲಿ ಅಣುವಿನ ಅರ್ಥವಿವರಣೆ ಈ ರೀತಿಯಿದೆ: "The word is used to indicate a minute unit of time also: 54675000 th part of a muhurtha( of 48 minutes)." ಇದು ೦.೦೦0052674 ಸೆಕೆಂಡಿಗೆ ಸಮ.(ಈ ಲೆಕ್ಕ ಸರಿಯೇ?). ಚಲಿಸುವ ಸೂರ್ಯ (ಬಹುಷಃ) ಭೌತಶಾಸ್ತ್ರದ ಒಂದು ಅಣುವನ್ನು ಕ್ರಮಿಸಲು ತೆಗೆದುಕೊಳ್ಳುವ ಕಾಲ "ಒಂದು ಅಣು" ಎಂದು ಓದಿದ ನೆನಪು. ಎಲ್ಲಿ ಎಂಬುದು ಸಧ್ಯ ನೆನಪಿಗೆ ಬರುತ್ತಿಲ್ಲ. ಇಂತಹ ಎರಡು ಅಣುಗಳನ್ನು ಕ್ರಮಿಸಲು ಬೇಕಾಗುವ ಕಾಲ ಪರಮಾಣು, ಇಂತಹ ಮೂರು ಪರಮಾಣುಗಳನ್ನು ಕ್ರಮಿಸಲು ಬೇಕಾಗುವ ಕಾಲ ತ್ರಸರೇಣು ಎಂದು ವಿವರಿಸಬಹುದೇನೋ! (ಅಣು, ಪರಮಾಣು ಮತ್ತು ತ್ರಸರೇಣುಗಳ ಬಗ್ಗೆ ನಿಖರವಾದ ವಿವರಣೆ ಸಿಗುತ್ತಿಲ್ಲ ಎಂಬ ಅಂಶವನ್ನು ನನ್ನ ಲೇಖನದಲ್ಲಿ ಪ್ರಸ್ತಾಪಿಸಿರುವುದು ಈ ಗೊಂದಲವಿರುವುದರಿಂದಲೇ.)ನಿಘಂಟುವಿನಲ್ಲೂ ಅಣು ಎಂಬುದಕ್ಕೆ ಕಾಲದ ಅತ್ಯಂತ ಸೂಕ್ಷಾಂಶ ಎಂಬ ವಿವರಣೆ ಇದೆ.
ಉಪಯುಕ್ತ ಮಾಹಿತಿ. ಮನ್ವ೦ತರದ ಬಗ್ಗೆಯು ಲೆಖನ ಬರಲಿ.
ಒಳ್ಳೆ ಲೇಖನ.. ಕಾಲದ ಅಳತೆಯ ಬಗ್ಗೆ ಓದಿದಾಗ ಅಧುನಿಕ ವಿಜ್ಞಾನದ ಅಳತೆ ನೆನಪಾಯಿತು..
1. ಮೆಟ್ರಿಕ್ ಅಳತೆಪಟ್ಟಿ
2. ಕಾಲದ ಅಳತೆಪಟ್ಟಿ
ಆಧುನಿಕ ವಿಜ್ಞಾನದ ಕೊನೆಯ ಅಳತೆ
exasecond(31709791984
ವರ್ಷಗಳು) ನಮ್ಮ ಜಗತ್ತಿನ (universe) ಆಯಸ್ಸಿನ ಎರಡುಪಟ್ಟು ದೊಡ್ಡದು. ಆದರೆ ಅದು ಒಂದು ಬ್ರಹ್ಮವರ್ಷಕ್ಕಿಂತ ಚಿಕ್ಕದು!!
ನನ್ನ ಗಣಿತಜ್ಞಾನದ(ಹೇಳಿಕೊಳ್ಳುವಂತದ್ದಲ್ಲ) ಪ್ರಕಾರ ಒಂದು ಬ್ರಹ್ಮ ವರ್ಷ=9902.304 exasecond!!
ನೀವು 'ಕಾಲ'ದ ಬಗ್ಗೆ ನೀಡಿರುವ ಮಾಹಿತಿ ಸ೦ಗ್ರಹ ಯೋಗ್ಯವಾಗಿದೆ. ಧನ್ಯವಾದಗಳು ಸರ್. ನಮ್ಮ ಪುರಾತನರೂ ಎಷ್ಟೆಲ್ಲಾ ಆಳವಾದ ಅಧಯನ ಮಾಡಿದ್ದಾರೆ, ಸೂಕ್ಷ್ಮಾತಿ ಸೂಕ್ಷ್ಮ ಕಾಲಗಣನೆ ಮಾಡಿದ್ದಾರೆ ಎನ್ನುವುದನ್ನು ತಿಳಿದರೇ ಅಚ್ಚರಿಯಾಗುತ್ತದೆ ಅಲ್ಲವೇ?
ಅಬ್ಭಾ!!!!
ಬಹಳ ಉಪಯುಕ್ತ ಸಂಗ್ರಹಯೋಗ್ಯ ಲೇಖನ, ಧನ್ಯವಾದಗಳು
Post a Comment