Saturday, December 18, 2010

ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ.

"ಅರಿಯದ ಮುಗ್ಧ ಕನ್ಯೆ ಕುಂತಿಯಿಂದಾದ ಅಪರಾಧವಲ್ಲದ ಅಪರಾಧ!" ಎಂಬ ಅಭಿಪ್ರಾಯವನ್ನು ನನ್ನ "ವಂಶವನರುಹಿ ಕೊಂದನು" ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ  ತೇಜಸ್ವಿನಿ ಹೆಗಡೆ ವ್ಯಕ್ತಪಡಿಸಿದ್ದು, ಮತ್ತು "ಮನದದನಿ" ಬ್ಲಾಗಿನಲ್ಲಿ ಪ್ರಕಟವಾದ ಲೇಖನವೊಂದು( http://manadadani.blogspot.com/2010/09/blog-post_21.html)ಈ ಲೇಖನ ಬರೆಯಲು ಪ್ರೇರಣೆ. ಕರ್ಣನಿಗೆ ಸಂಬಂಧಿಸಿದಂತೆ ಕುಂತಿ ವರ್ತಿಸುವ ಮೂರು ಸನ್ನಿವೇಶಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದು. ಕುಂತಿಯದು ಅಪರಾಧವೇ ಅಲ್ಲವೇ ಅಥವಾ ಅವಳ ವರ್ತನೆ ತಪ್ಪೇ ಸರಿಯೇ ಇವುಗಳ ಬಗ್ಗೆ ತೀರ್ಮಾನ ಕೊಡುವ ಉದ್ದೇಶವೂ ಈ ಲೇಖನಕ್ಕಿಲ್ಲ.
ನಾನು ಆರಿಸಿಕೊಂಡದ್ದು ಕುಮಾರವ್ಯಾಸ ಭಾರತದ ಮೂರು ಸನ್ನಿವೇಶಗಳು.
೧) ಕರ್ಣನ ಜನನ. (ಆದಿಪರ್ವ-೩ - ೧೪,೧೫,೧೭,೨೧,೨೨)
೨)ವಿದ್ಯಾ ಪ್ರದರ್ಶನ. (ಆ.ಪ.-೭ - ೫೩)
೩)ಕರ್ಣ ಭೇದನ (ಉ.ಪ. ೧೧ - ೨೭,೩೧,೩೫)
ಕರ್ಣನ ಜನನ:
"ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹನೆಂದು ಬಂದಳು
ಗಗನನದಿಯಲಿ ಮಿಂದುಟ್ಟಳು ಲೋಹಿತಾಂಬರವ |
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸಗಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ||"
ಮಂತ್ರೋಪದೇಶಿತಳಾದ ಕುಂತಿ ಬೊಂಬೆಯಾಟಕೆ ಮಗುವನ್ನು ತರಲೆಂದು ಮಂತ್ರ ಪ್ರಯೋಗಕ್ಕೆ ಸಿದ್ಧವಾಗುತ್ತಾಳೆ. ಬೊಂಬೆಯಾಟಕ್ಕೆ ಮಗುವನ್ನೇ ತರುವೆ ಎಂಬುದು ಸಹಜವಾಗಿ  "ಮಗುವುತನ" ಹೌದು. ಆದರೆ ಕುಂತಿಯ ಮಟ್ಟಿಗೆ ಇಲ್ಲಿ ಅದನ್ನು ಅನ್ವಯಿಸುವುದು  ಎಷ್ಟು ಸಮರ್ಥನೀಯ? ಆಕೆಯ ವರ್ತನೆ ಗಮನಿಸಿ."ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ." ಅಂದರೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಕುಂತಿಗಿತ್ತು. ಮತ್ತು ಸೂರ್ಯನನ್ನು ಅಹ್ವಾನಿಸುವ ವಿಧಾನ ಹೇಗೆ ಎಂಬುದೂ ತಿಳಿದಿತ್ತು. ಅಂದರೆ ಅವಳದ್ದು "ಮಗುವುತನ"ದ ಮುಗ್ಧತೆ ಅಲ್ಲ, ಒಂದೋ ಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಅಥವಾ ನಿಜವಾಗಿ ಮಗುವನ್ನು ಪಡೆವ ಆಸೆ. ಕನ್ಯೆ ಎಂದು ತಿಳಿದೂ ಮಗುವನ್ನು ಪಡೆವ ಆಸೆ ಇತ್ತು ಅಥವಾಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಇತ್ತು ಎಂದೇ ಭಾವಿಸಬೇಕಾಗುತ್ತದೆ. ದೂರ್ವಾಸನ ಶಕ್ತಿ ಗೊತ್ತಿದ್ದೂ ಪರೀಕ್ಷಿಸ ಹೊರಡುವ ಕುಂತಿಯ ವರ್ತನೆ  ವಿವೇಕವೇ?
 "ಮಗುವುತನದಲಿ" ಎಂಬ ಕುಮಾರವ್ಯಾಸನ ಹೇಳಿಕೆಯನ್ನು ಸಮರ್ಥಿಸುವ ಯಾವ ವಿವರಗಳೂ ಸನ್ನಿವೇಶದ ಚಿತ್ರಣದಲ್ಲಿ ಇಲ್ಲ. ನನ್ನ ಈ ಹೇಳಿಕೆಗೆ ಪೂರಕವಾಗಿ ಈ ಚಿತ್ರಣಗಳನ್ನು ಗಮನಿಸಿ.
"ಇಂದು ಕುಂತೀಭೋಜನೊಡೆತನ
ಬೆಂದುಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ||"
ದೂರ್ವಾಸಮುನಿ ನೃಪ ಮಂದಿರಕ್ಕೆ ಬಂದಾಗ, ಕುಂತೀಭೋಜ ಅವರನ್ನು ಆದರಿಸಿ ಸತ್ಕರಿಸಲು ಮರೆತಾಗ, ಕುಂತಿ ದೂರ್ವಾಸನ ಚರಣಗಳಲ್ಲಿ ಹೊರಳಿ  ಶಾಪವನ್ನು ನಿಲ್ಲಿಸುತ್ತಾಳೆ. ಮುಂದೆ "ಮುನಿಯನುಪಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ"
ಅಂದರೆ ಕುಂತಿಗೆ ದೂರ್ವಾಸ ಮುನಿಯ ಶಕ್ತಿಯ ಬಗೆ ತಿಳಿದಿತ್ತು. ಮತ್ತು ಅವರ ಕೋಪವನ್ನು ನಿಯಂತ್ರಿಸಬೇಕು ಎಂಬ ವಿವೇಕವೂ, ಪ್ರಬುದ್ಧತೆಯೂ ಇತ್ತು. ಅವಳ ಉಪಾಚಾರಕ್ಕೆ ಮೆಚ್ಚಿದ ದೂರ್ವಾಸ ಮಂತ್ರೋಪದೇಶ ಮಾಡುವಾಗ ಹೇಳುವ ಎಚ್ಚರಿಕೆಯ ಮಾತುಗಳನ್ನು ಗಮನಿಸಿ:
"ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗಳನಿವು ಸಿದ್ಧಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು|
ಮಗನು ಜನಿಸುವನೆಂದು......"
ದೂರ್ವಾಸ ಹೇಳುವ "ಸಿದ್ಧಪ್ರಯೋಗ" "ಮಗನು ಜನಿಸುವ" ಎಂಬುದು ಕುಂತಿಗೆ ಅರ್ಥವಾಗದಷ್ಟು ಅಪ್ರಬುದ್ಧಳಾಗಿದ್ದಳು ಎಂದು ನಾವು ಭಾವಿಸಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ದುರ್ವಾಸನನ್ನು ಉಪಚರಿಸಿದ ರೀತಿ ಅದಕ್ಕೆ ಅಸ್ಪದ ಕೊಡುವುದಿಲ್ಲ. ದೂರ್ವಾಸನನ್ನು ಉಪಚರಿಸುವಾಗ ಆಕೆ ವಿವೇಕಿಯೂ,ಪ್ರಬುದ್ಧೆಯೂ ಆಗಿದ್ದಳು ಮತ್ತು ಅನಂತರ ಅವಳು ಮುಗ್ಧಳಾದಳು ಎಂದು ಭಾವಿಸುವುದು  ಕಥೆಯ ಚಲನೆಗೆ ವಿರುದ್ಧವಾಗುತ್ತದೆ.
***
ಸೂರ್ಯ ಕರ್ಣನನ್ನು ದಯಪಾಲಿಸಿದ ಅನಂತರ ಕುಂತಿಯ ವರ್ತನೆಯನ್ನು,ವಿಚಾರವನ್ನು ಗಮನಿಸಿ.
"ಕುಲದಸಿರಿ ತಪ್ಪುವುದಲಾ ಸಾ
ಕಿಳುಹಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ||"
"ಬೊಂಬೆಯಾಟಕೆ ಮಗನನೇ ತಹನೆಂದು" ತೀರ್ಮಾನಿಸುವಾಗ ಇರದ ಜನದಪವಾದದ ಭೀತಿ ಈಗ ಬಂದಿದೆ. ಮಂತ್ರಪ್ರಯೋಗದಿಂದ ಮಗ ಬಂದರೆ ಅಪವಾದ ಬರುತ್ತದೆ ಎಂದು ಕುಂತಿಗೆ ಪ್ರಯೋಗಕ್ಕಿಂತ ಮುಂಚೆ ತಿಳಿಯದಷ್ಟು ಮೌಢ್ಯವಿತ್ತೇ?
ಗಂಗೆಯಲ್ಲಿ ಕುಂತಿಯನ್ನು ಹಾಕುವಾಗಲೂ ಕುಂತಿ ಹೇಳುವುದನ್ನು ಗಮನಿಸಿ:
"ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ......."
"ಬಲ್ಲಂದದಲಿ ಕಂದನ ಕಾಯಿ"ಎನ್ನುವುದು ಸಹಜ ಮಾತೃತ್ವದ ಭಾವನೆ,ಆಸೆ. ಕಂದನನ್ನು ಕೊಂದರೂ ಅಡ್ಡಿಯಿಲ್ಲ ಎಂಬ ಭಾವನೆ!? ಅಪವಾದ ಭೀತಿಯಿಂದ ಮಗುವನ್ನು ನೀರಿಗೆ ಹಾಕುವುದನ್ನು ಸರಿ ಅಂತ ಭಾವಿಸೋಣ. ಕೊಲ್ಲೆನುತ ಎಂಬ ಸೂಚನೆಯನ್ನು ಹೇಗೆ ಅರ್ಥೈಸುವುದು? ಸಮರ್ಥಿಸುವುದು?
ಆದ್ದರಿಂದ ಕುಂತಿ ಮುಗ್ಧೆಯಾಗಿರಲಿಲ್ಲ, ಮಂತ್ರಪ್ರಯೋಗಕ್ಕೆ ಸಿದ್ಧವಾದದ್ದು ಕುತೂಹಲ ಮತ್ತು ಅವಿವೇಕಿತನದಿಂದ ಎಂದೇ ಭಾವಿಸಬೇಕಾಗುತ್ತದೆ. ಪೂರ್ವಾಪರ ವಿವೇಚಿಸದೆ ವರ್ತಿಸಿದ್ದು ಕುಂತಿಯ ತಪ್ಪಲ್ಲವೇ?
*****
ವಿದ್ಯಾ ಪ್ರದರ್ಶನ.
 ಈ ಸನ್ನಿವೇಶವನ್ನು ಕುಮಾರವ್ಯಾಸ ತುಂಬಾ ಸಂಕ್ಷಿಪ್ತವಾಗಿಸಿದ್ದಾನೆ.  ಅರ್ಜುನನೆದುರು ಬಂದವ ತನ್ನ ಮಗನಿರಬಹುದು ಎಂಬ ಅನುಮಾನ ಕುಂತಿಗೆ ಬರುತ್ತದೆ. ಆದರೆ ಆಕೆ ಮೂರ್ಛೆ ಹೋಗುತ್ತಾಳೆ. ಕುಂತಿ ಇಲ್ಲಿ ತನ್ನ ಮಗನ ಬಗ್ಗೆ ಯಾಕೆ ಮಾತಾಡಲಿಲ್ಲ ಎಂಬುದರ ಬಗೆಗೆ ಕುಮಾರವ್ಯಾಸನಿಗೂ ಉತ್ತರ ಕೊಡುವುದು ತೊಡಕಾಗಿ ಕಂಡು, ಕುಂತಿಗೆ ಹಾಗಾಗಲು ಕಾರಣ ವಿಷ್ಣುಮಾಯೆ ಎಂದುಬಿಡುತ್ತಾನೆ. "ವಿಷ್ಣುಮಾಯೆಯ ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ ತನ್ನ ತಾನೇ ಮರುಗಿ ಮೂರ್ಛಾಪನ್ನೆಯಾದಳು ಕುಂತಿ"
(ಮುಂದುವರಿಯುವುದು)




 

3 comments:

sunaath said...

ಹೊಸಮನೆಯವರೆ,
ವಿಶ್ಲೇಷಣೆ ಸ್ವಾರಸ್ಯಕರವಾಗಿದೆ. ಮುಂದಿನ ಕಂತಿಗಾಗಿ ಕಾತುರತೆಯಿಂದ ಕಾಯುತ್ತಿದ್ದೇನೆ.

Subrahmanya said...

ನೀವು ಹೇಳುತ್ತಿರುವ ರೀತಿಗೆ, ತಿಳಿಯುವ ಕುತೂಹಲ ಹೆಚ್ಚುತ್ತಿದೆ. ದಯವಿಟ್ಟು ಬರೆಯಿರಿ.

V.R.BHAT said...

ಬಹಳ ಆಸಕ್ತಿ ಕೆರಳಿಸುವ ಲೇಖನ, ಕುತೂಹಲ ನಿಮಗಲ್ಲ ನಮಗಾಗಿದೆ ಈಗ! ಹೀಗಾಗಿ ಬೇಗನೇ ಮುಂದಿನ ಕಂತು ಪ್ರಕಟವಾಗಲಿ, ಹೊಸ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು.