Monday, December 1, 2008

ನನ್ನೊಳಗಿಳಿವ ತವಕ

ನಾನು ಒಂಟಿಯಾಗಿಯೇ ಹೊರಟೆ. ಸುಮ್ಮನೆ ಒಂಟಿಯಾಗಿ ಇರಬೇಕು ಎಂಬ ತೀರ್ಮಾನ ಮಾಡಿಯೇ ಹೊರಟಿದ್ದು. ಮಾತುಗಳಿಂದ, ಮಾತು ನಿರ್ಮಿಸಿದ ಶಬ್ದಜಗತ್ತಿನಿಂದ ತುಸು ತಪ್ಪಿಸಿಕೊಳ್ಳುವ ತವಕ. ಮಾತಿನಾಚೆಗೆ, ವಿವರಣೆಗಳಾಚೆಗೆ ಇರುವ ನನ್ನೊಳಗಿಳಿವ ತವಕ. ನನ್ನ ಸುತ್ತ ಮಾತಿರುವಾಗ ಮಾತು ಸೃಸ್ಟಿಸುವ ಜಗತ್ತು ಮಾತ್ರ ನನ್ನ ಸುತ್ತು ಇರುತ್ತದೆ. ಮಾತಿನಾಚೆಯ ಜಗತ್ತು ಇರುವುದು ಮಾತು ಇರದಲ್ಲಿ ತಾನೇ? ಹಾಗಾಗಿ….
** ಹಸಿವಾದರೆ ತಿನ್ನಲೆಂದು ಒಂದೆರಡು ಬಿಸ್ಕಿಟ್ ಪ್ಯಾಕ್, ಕುಡಿಯಲು ಒಂದು ಬಾಟಲು ನೀರು. ಇಷ್ಟು ಮಾತ್ರ ಜೊತೆಗೆ. ಈಗ ಹೊರಟ ಜಾಗಕ್ಕೆ ನಾನು ಇಲ್ಲಿಯವರೆಗೆ ಹೋಗಿಯೂ ಇರಲಿಲ್ಲ. ಅದಕ್ಕೆ ಏನು ಹೆಸರು ಎಂಬುದೂ ಗೊತ್ತಿಲ್ಲ. ದಟ್ಟ ಕಾಡಿನ ನಡುವೆ ಬಸ್ಸು ಸುಮಾರು ದೂರ ಕ್ರಮಿಸಿದ ಮೇಲೆ ನಾನು ಇಲ್ಲಿಯೇ ಇಳೀತೀನಿ ಎಂದು ಕಂಡಕ್ಟರಿಗೆ ಹೇಳಿದೆ. ‘ಇಲ್ಲಿ ಯಾವ ಊರೂ ಇಲ್ವಲ್ಲ. ನೀವು ಇಳಿಯೋ ಊರು ಇನ್ನೂ ಮುಂದಿದೆ.’ ಗೊತ್ತಾಗದೆ ನಾನು ಇಳಿಯುತ್ತಿದ್ದೇನೆ ಎಂದು ಅವನು ಭಾವಿಸಿದ್ದಿರಬೇಕು. ಅವನ ಸರ್ವೀಸಿನಲ್ಲಿಯೇ ಹೀಗೆ ದಟ್ಟ ಕಾಡಿನ ಮಧ್ಯೆ ಯಾರೂ ಇಳಿದಿರಲಿಲ್ಲವೇನೋ! ‘ಇಲ್ಲಿಯೇ ನಾನು ಇಳೀತೀನಿ’. ಮತ್ತೆ ಹೇಳಿದೆ. ಸೀಟಿ ಹೊಡೆದು ಬಸ್ ನಿಲ್ಲಿಸಿದ. ಇಳಿವ ಮುನ್ನ ಬಸ್ ಸಾಯಂಕಾಲ ಆರಕ್ಕೆ ವಾಪಸ್ ಬರುವುದನ್ನು ಕೇಳಿ ಖಚಿತಪಡಿಸಿಕೊಂಡೆ. ಆ ಘಾಟಿಯಲ್ಲಿ ಗೊಂಯ್ಯೋ ಎಂಬ ಬಸ್ಸಿನ ವಿಕಾರವಾದ ಶಬ್ದ ನಿಧಾನ ಕ್ಷೀಣವಾಗುತ್ತಾ ಕಾಡಿನ ಮೌನದಲ್ಲಿ ಹೂತುಹೋಯಿತು. ಒಂದಿಪ್ಪತ್ತು ಅಡಿ ಅಗಲದ ಟಾರೆಲ್ಲ ಕಿತ್ತ ರಸ್ತೆ. ಇಕ್ಕೆಲದಲ್ಲೂ ಭೂತಾಕಾರದ ಮರಗಳು. ಆ ಮರಗಳ ಬುಡದ ಸಂದುಗಳಲ್ಲಿ ಬೆಳೆದಿದ್ದ ದಟ್ಟ ಗಿಡಗಳ ಹಸಿರು. ಹಕ್ಕಿಗಳ ಕೂಗು. ಮಂಗನ ಕೂಗು. ಗಿಡಮರಗಳ ಸಂದಲ್ಲಿ ಚಲಿಸುವ ಗಾಳಿ ಉಂಟುಮಾಡುವ ಸದ್ದು. ಆ ಇಡೀ ಸನ್ನಿವೇಶದಲ್ಲಿ ನಾನು ಅಸಂಗತನಂತೆ ನಿಂತಿದ್ದೆ. ನಾನು ಎಲ್ಲಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ. ಇಂತಲ್ಲಿಗೇ ಹೋಗಬೇಕು ಎಂದು ಹೊರಟವರಿಗೆ ತಾವು ಎಲ್ಲಿದ್ದೇವೆ ಎಂಬುದು ತಿಳಿದಿರಬೇಕು. ಹಾಗೆ ಹೊರಡದ ನಾನು ಎಲ್ಲಿದ್ದರೆ ನನಗೇನು?
**ಕಾಲೇಜು ಹುಡುಗನಂತೆ ಬೆನ್ನಿಗೆ ಚೀಲ ಏರಿಸಿ ಸುಹಾನಾ ಸಫರ್.. ಎಂದು ತುಸು ದೊಡ್ಡದಾಗಿಯೇ ಹಾಡುತ್ತಾ , ಕಡಿದಾದ ಈ ಗುಡ್ಡವನ್ನೇರಲು ಎಲ್ಲಿ ಜಾಗ ಎಂದು ಹುಡುಕುತ್ತಾ ನಡೆಯತೊಡಗಿದೆ. ನನಗೇ ಕೆಟ್ಟದಾಗಿ ಕೇಳಿಸುತ್ತಿದ್ದ ನನ್ನ ಹಾಡುಗಾರಿಕೆ ನಿಲ್ಲಿಸಲಿಲ್ಲ. ಯಾಕೆ ನಿಲ್ಲಿಸಲಿ? ನಾನು ಮತ್ತು ನಾನು ಮಾತ್ರ ಇದ್ದಲ್ಲಿ ಏನು ಹಂಗು? ಈಗ ಏನಾದರೂ ನನ್ನ ಜೊತೆ ನನ್ನ ಪರಮ ಗೆಳೆಯನಿದ್ದಿದ್ದರೂ ‘ನಿನ್ನ ಹಾಡು ನಿಲ್ಲಿಸು ಮಾರಾಯಾ’ ಎಂದು ನಯವಾಗಿಯೋ, ‘ಮುಚ್ಚಯ್ಯಾ ಬಾಯಿ’ ಎಂದು ಗದರಿಸಿಯೋ ನನ್ನ ಹಾಡುಗಾರಿಕೆಗೆ ಕಡಿವಾಣ ಹಾಕುತ್ತಿದ್ದ. ಅಥವಾ ಅವನಿದ್ದಾನೆ ಎಂಬ ಅರಿವು ನನ್ನ ಹಾಡುವ ಆಸೆಗೆ ಕಡಿವಾಣ ಹಾಕುತ್ತಿತ್ತು. ನಿಜವಾದ ಸ್ವಾತಂತ್ರ್ಯ ಇರುವುದು ಒಂಟಿತನದಲ್ಲಿ; ಉಳಿದಂತೆ ಇರಬೇಕಾದದ್ದು ಜವಾಬ್ದಾರಿಸಹಿತ ಸ್ವಾತಂತ್ರ್ಯ.
**ಕಾಡು ಹೊಕ್ಕೆ. ಪೊದೆ, ಗಿಡಗಳ ಸಂದಲ್ಲಿ ಬಾಗುತ್ತ, ಕೆಲವೊಮ್ಮೆ ತೆವಳುತ್ತ ಸ್ವಲ್ಪ ದೂರ ಸಾಗಿ ನಿಂತೆ. ನಾಗರೀಕತೆಯ ಕೊನೆಯ ಸಂಪರ್ಕವಾದ ಟಾರು ರಸ್ತೆಯೂ ಈಗ ಕಾಣುತ್ತಿರಲಿಲ್ಲ. ದೊಡ್ಡದಾದ ಮರದ ಬೇರೊಂದರ ಮೇಲೆ ಕೂತು, ಚೀಲ ಕಳಚಿದೆ. ಒಣಗಿದೆಲೆಗಳ ನಡುವೆ ಹರಿದಾಡುವ ಯಾವುದೋ ಪ್ರಾಣಿ, ಮರದಿಂದ ಮರಕ್ಕೆ ಹಾರುತ್ತಿದ್ದ ಹಕ್ಕಿಗಳು, ಮಂಗ, (ಇದ್ಯಾವುದು ಹೊಸ ಜಾತಿಯ ಮಂಗ ಎಂದು ನನ್ನ ನೋಡಿದವೇ?) ಎಲ್ಲೋ ಕೂಗುತ್ತಿದ್ದ ಹಕ್ಕಿ-ಇವೆಲ್ಲ ಅಲ್ಲಿಯ ದಟ್ಟ ಮೌನವನ್ನು ಕಂಪಿಸುವಂತೆ ಮಾಡುತ್ತಿದ್ದವು. ಮರಕ್ಕೊರಗಿ, ಕಣ್ಮುಚ್ಚಿ, ಈ ಕ್ಷಣವನ್ನು ಗ್ರಹಿಸಲು ಪ್ರಯತ್ನಿಸಿದೆ. ಏನೂ ವಿವರಣೆಗಳನ್ನು ಕೊಟ್ಟುಕೊಳ್ಳದೆ ಸುಮ್ಮನೆ ಒಳಗಾಗಲು ಕಾಯುವುದು. ಏನಿದು? ನನ್ನ ಹೊರಗಿರುವ ಈ ಇಡೀ ಪ್ರಕೃತಿಗೂ ನನಗೂ ಏನು ಸಂಬಂಧ? ನಾನು ಯೋಚಿಸಿದಷ್ಟು, ಊಹಿಸಿದಷ್ಟು ಸಂಬಂಧ ಮಾತ್ರವೇ? ಪ್ರಕೃತಿ ತಣ್ಣಗೆ ತನ್ನ ಪಾಡಿಗೆ ತಾನು ಇತ್ತು. ಅದು ‘ಇರುವುದು’ ನನಗೆ ತಿಳಿದಿರುವಂತೆ ನಾನು ‘ಇರುವುದು’ ಅದಕ್ಕೆ ತಿಳಿದಿದೆಯೇ? ನನಗದನ್ನು ತಿಳಿವ ಕಾತುರ ಇರುವಂತೆ ಅದಕ್ಕೂ ಇದೆಯೇ? ನನ್ನ ಯೋಚನೆಯ ಮೂಲಕ ನಾನು ತಿಳಿದುಕೊಂಡಿದ್ದ ‘ನಾನು’, ಬೇರೆಯವರ ಮಾತಿನ ಮೂಲಕ ನಾನು ತಿಳಿದುಕೊಂಡಿದ್ದ ‘ನಾನು’, ಈ ಪ್ರಕೃತಿಗೆ ಪರಿಚಯ ಇರಲು ಸಾಧ್ಯವೇ ಇರಲಿಲ್ಲ. ನಾನು ಪ್ರಕೃತಿ ನನ್ನಿಂದ ಬೇರೆ ಎಂದು ಭಾವಿಸಿ ಸಂಬಂಧ ಹುಡುಕುತ್ತಿದ್ದೇನೆ. ಕೊಳೆಯುತ್ತಿರುವ ಉದುರಿದ ಎಲೆಗಳು, ಒಣಗುತ್ತಿರುವ ಮರದ ತುಂಡು, ಮರದ ಬೊಡ್ಡೆಯ ಮೇಲೆ ಬೆಳೆಯುತ್ತಿದ್ದ ಸಸ್ಯ, ಮರಕ್ಕಪ್ಪಿಕೊಂಡಿದ್ದ ಹೂ ಬಿಟ್ಟ ಬಳ್ಳಿ, ಇವಕ್ಕಿಂತ ನಾನು ಬೇರೆ ಎಂದು ಪ್ರಕೃತಿ ಗುರುತಿಸುವಂತೆ ತೋರಲಿಲ್ಲ. ಆದರೆ ನಾನು ಇವಲ್ಲ ಎಂದು ಇದಕ್ಕೆ ಹೇಗೆ ಹೇಳಲಿ? ನಾನು ಇವೆಲ್ಲಕ್ಕು ಮೀರಿರುವ ಮನುಷ್ಯ ಎಂದು ಹೇಳಿದರೆ ಅದಕ್ಕೆ ತಿಳಿದೀತೆ? ಪ್ರಕೃತಿಯ ಭಾಷೆಯೇ ಬೇರೆ. ಅದಕ್ಕರ್ಥವಾಗುವ ಭಾಷೆ ಯಾವುದು?
**ವಿವರಣೆಗಳಿಲ್ಲದೆ, ಸುಮ್ಮನೆ ಏನನ್ನೂ ಗ್ರಹಿಸಲು ಯಾಕೆ ಆಗುತ್ತಿಲ್ಲ? ಅನುಭವಗಳು ವಿವರಣೆಗಳಾಗುವ ಬದಲು, ವಿವರಣೆಗಳೇ ಅನುಭವದ ವೇಷ ಧರಿಸಿವೆಯೇ? ಕಾಲ ನಿಂತಂತೆ, ನಿಂತಲ್ಲಿಯೇ ಕಳೆಯುತ್ತಿರುವಂತೆ ತೋರಿತು. ಇಲ್ಲಿ ಬಂದು ದಿನಗಳೆ ಕಳೆದವೇ? ನಾನು ಬೇಕಂತಲೇ ವಾಚ್ ತಂದಿರಲಿಲ್ಲ. ಈಗ ಗಂಟೆ ಎಷ್ಟಿರಬಹುದು? ತಲೆ ಎತ್ತಿ ನೋಡಿದರೆ ವಿಶಾಲವಾದ ಕೊಂಬೆಗಳು ಮಾತ್ರ ಕಂಡವು. ಸೂರ್ಯ ಅದರ ಮೇಲೆ ಎಲ್ಲೋ ಇರಬಹುದು. ಹೀಗೆ ಸೂರ್ಯನನ್ನು ಹುಡುಕದೆ ತುಂಬಾ ದಿನಗಳೇ ಕಳೆದಿದ್ದವು. ಅಗತ್ಯವೇ ಬಂದಿರಲಿಲ್ಲ. ಅಲ್ಲಿಯ ದಟ್ಟ ಮೌನದ ಶಬ್ದ ನನ್ನೊಳಗೆ ಹೊಕ್ಕು ನನ್ನ ಅಲ್ಲಾಡಿಸತೊಡಗಿತು. ಈ ಕಾಡಿನ ದಟ್ಟ ಮೌನ, ಯಾವುದನ್ನೂ ವಿಶೇಷವಾಗಿ ಗುರುತಿಸದ ಅದರ ನಿರಾಸಕ್ತಿ, ಬಗೆದಷ್ಟು ಮಾತ್ರ ದಕ್ಕುವ ಅದರ ಗುಟ್ಟು. ಮಾತಿನಾಚೆಗೆ ನನ್ನ ದೂಡತೊಡಗಿತು. ಮಾತಿನಾಚೆಗೆ ನನಗೆ ನಾನು ಅಪರಿಚಿತನಾಗತೊಡಗಿದ್ದೆ. ನನ್ನ ಅಸ್ತಿತ್ವಕ್ಕೆ ಬೇರೆಯವರ ಮಾತುಗಳೆ ಅನ್ನವೇ? ಮಾತ ಕೇಳುವ, ಮಾತನಾಡುವ ತವಕ ಒತ್ತಿ ಬಂತು. ನಮ್ಮ ಗುರುತೂ ನಮಗಾಗುವುದು ಮಾತಿನ ಮೂಲಕವಾ ಎಂಬ ಅನುಮಾನ ಶುರುವಾಯಿತು. ಛೇ..ಯಾರಾದರೂ ಜೊತೆಗಿರಬೇಕಿತ್ತು ಅನ್ನಿಸತೊಡಗಿತು. ನನ್ನ ಜೊತೆ ನಾನೇ ಇರುವುದು ಹಿಂಸೆ ನೀಡತೊಡಗಿತು. ನಾನು ಇರುವುದನ್ನು ಬೇರೆಯವರು ಗುರುತಿಸದಿದ್ದರೆ ನನ್ನ ಇರುವಿಕೆ ನನಗೂ ತಿಳಿಯುವುದಿಲ್ಲವೇ? ಇನ್ನೂ ಇಲ್ಲೇ ಇದ್ದರೆ ನಿಂತಲ್ಲಿಯೇ ನಾನು ಕಳೆದು ಹೋಗಬಹುದು. ಭಯ. ಆತಂಕ. ತಲ್ಲಣ. ಆ ಟಾರು ರಸ್ತೆ ಸೇರಿದರೆ ಸ್ವಲ್ಪ ನೆಮ್ಮದಿ ಸಿಕ್ಕೀತು. ದೂರದಲ್ಲಿ ಎಲ್ಲೋ ಬಸ್ಸಿನ ಶಬ್ದಮಾಧುರ್ಯ ಕೇಳಿದಂತಾಯಿತು. ಆ ಶಬ್ದಮೂಲದಿಂದ ನನ್ನ ಜಗತ್ತು ಚಿಮ್ಮಬಹುದು. ನಾನು ನನಗೆ ಮತ್ತೆ ಸಿಗಬಹುದು. ಕಾತರದಿಂದ ಎದ್ದು ನಿಂತೆ. ವಾಪಸು ಹೊರಡುವ ಆಸೆ. ಸುತ್ತೆಲ್ಲ ಕಣ್ಣು ಹಾಯಿಸಿದೆ. ಭೂತಾಕಾರದ ಮರಗಳು. ಆ ಮರಗಳ ಬುಡದ ಸಂದುಗಳಲ್ಲಿ ಬೆಳೆದಿದ್ದ ದಟ್ಟ ಗಿಡಗಳ ಹಸಿರು. ಹಕ್ಕಿಗಳ ಕೂಗು. ಮಂಗನ ಕೂಗು. ಗಿಡಮರಗಳ ಸಂದಲ್ಲಿ ಚಲಿಸುವ ಗಾಳಿ ಉಂಟುಮಾಡುವ ಸದ್ದು. ****ಎಲ್ಲಿದ್ದೇನೆ ನಾನು? ನಾನು ಯಾವ ದಿಕ್ಕಿಂದ ಬಂದೆ?

2 comments:

Unknown said...

ಜನರೊಂದಿಗಿದ್ದಾಗ ಒಂಟಿಯಯನ್ನಾಗಿಸಿಯೂ ಒಂಟಿಯಾಗಿದ್ದಾಗ ಜನರೊಂದಿಗಿರಿಸುವಂತೆಯೂ ಮಾಡುವ ಮೌನದ ಶಕ್ತಿ ಶಕ್ತಿಯೇ. ಆದರೆ ನನ್ನ ಮಟ್ಟಕ್ಕೆ ಮೌನ ಎಂಬುದು ಇಲ್ಲದ್ದು. ನಿಶ್ಯಬ್ಧ ಎಂದಂತೆ. ಅದು ಬಾಹ್ಯಾಕಾಶದಲ್ಲಿ ಸಿಗಬಹುದೇನೋ?
ತಲ್ಲೀನಗೊಳಿಸಿತು ಮೌನದ ಮಾತು.

ಮೃತ್ಯುಂಜಯ ಹೊಸಮನೆ said...

ಬಾಹ್ಯಾಕಾಶದಲ್ಲಿ ಸಿಗಬಹುದಾದ ಮೌನ ಹೊರರಂಗದ್ದು. ನಾವು ಜರೂರಾಗಿ ಹುಡುಕಬೇಕಾದ್ದು ಅಂತರಂಗದ್ದು. ಅಂತಹ ಮೌನದಲ್ಲಿ ಮಾತ್ರ “ನಾನು” ಅಂತ ನಾನಂದುಕೊಂಡಿರುವ ನಾನಲ್ಲದ “ನಾನು” ಸಿಗಬಹುದೇ? ಸಿಕ್ಕಾಪಟ್ಟೆ ಗೊಂದಲವಾಗ್ತಿದೆ? ಮೌನವೇ ಹಾಗೋ! ಮಾತಿಗಿರುವ ಹಾಗೆ ಅದಕ್ಕೆ ಅರ್ಥಛಾಯೆ ಇಲ್ಲ. ತೀರ ಅಪರಿಚಿತವಾದ ಅವಕಾಶದಲ್ಲಿ ನಮ್ಮ ಜೊತೆ ನಾವು ಉಳಿವ ಅನಿವಾರ್ಯತೆ ಬರಬಹುದು. ಆಗ ನಮ್ಮ ನಾವೇ ತಿಳಿಯಬಹುದೇನೋ. ಆದರೆ ನಾವು ಎಲ್ಲಿಯೂ ಇಂತಹ ಅಪರಿಚಿತತೆಯ ಒಳಗೆ ಹೊಗುವುದೇ ಇಲ್ಲವಲ್ಲ.