Sunday, December 7, 2008

ಎರಡು ಹಳೆಯ ನೆನಪುಗಳು..

ಘಟನೆ ಒಂದು.
ನೆನಪಿಸಿಕೊಳ್ಳಿ. ಡಿಸೆಂಬರ್ ೨೪, ೧೯೯೯. ನೇಪಾಳದ ಖಟ್ಮಂಡುವಿನಿಂದ ದೆಹಲಿಗೆ ಹೊರಟ, ಸುಮಾರು ೧೫೦ ಪ್ರಯಾಣಿಕರಿದ್ದ ಫ್ಲೈಟ್ ನಂ. ೮೧೪. ಹೊರಟ ಕೆಲವೇ ಕ್ಷಣಗಳಲ್ಲಿ ಈ ವಿಮಾನವನ್ನು ಐವರು ಪಾಕಿಸ್ತಾನೀಯರು ಅಪಹರಿಸಿದರು. ಅವರ ಬೇಡಿಕೆ: ಭಾರತದಲ್ಲಿ ಆಗ ಬಂದಿಗಳಾಗಿದ್ದ ಮೂವರು ಉಗ್ರರನ್ನು ಬಿಡುಗಡೆ ಮಾಡಬೇಕು. ಈ ವಿಮಾನ ಅಮೃತಸರ, ಅಲ್ಲಿಂದ ಲಾಹೋರಿಗೆ ಹೋಯಿತು. ಲಾಹೋರಿನಲ್ಲಿ ಇಳಿಯಲು ಪಾಕಿಸ್ತಾನ ಮೊದಲು ನಿರಾಕರಿಸಿದರೂ, ವಿಮಾನದಲ್ಲಿ ಇಂಧನ ಇರದ ಕಾರಣ ಇಳಿಯಲು ಅನುಮತಿ ನೀಡಲೇಬೇಕಾಯಿತು. ಅಲ್ಲಿಂದ ವಿಮಾನ ದುಬೈಗೆ ಹಾರಿತು. ಅಲ್ಲಿಂದಲೂ ಹಾರಿ ಅಫಘಾನಿಸ್ತಾನದ ಕಂದಹಾರ್ ಸೇರಿತು. ಆಗ ಅಲ್ಲಿ ತಾಲಿಬಾನ್ ಸರ್ಕಾರವಿತ್ತು. ತನ್ನ ಸೈನಿಕರನ್ನು ನುಗ್ಗಿಸುತ್ತೇವೆಂಬ ಭಾರತ ಸರ್ಕಾರದ ಬೇಡಿಕೆಯನ್ನು ತಾಲಿಬಾನ್ ಸರಕಾರ ನಿರಾಕರಿಸಿ, ತನ್ನ ಸೈನಿಕರನ್ನು ಅಲ್ಲಿ ನಿಯೋಜಿಸಿತು. ಹಾಗೆ ನಿಯೋಜಿಸಿದ್ದು ಅಪಹರಣಕಾರರ ರಕ್ಷಣೆಗೆ !
ಇತ್ತ ದೆಹಲಿಯಲ್ಲಿ ಪ್ರಯಾಣಿಕರ ಬಂಧುಗಳು ಪ್ರದರ್ಶನ ನಡೆಸಿದರು. ಇದಕ್ಕೆ ಟಿವಿ ಮಾಧ್ಯಮದವರ ವ್ಯಾಪಕ ಪ್ರಚಾರ. ಎಲ್ಲರ ಬೇಡಿಕೆಯೂ ಒಂದೇ. ಅಪಹರಣಕಾರರು ಕೇಳುವ ಉಗ್ರರನ್ನು ಬಿಡುಗಡೆ ಮಾಡಿ ಪ್ರಯಾಣಿಕರ ಜೀವ ಉಳಿಸಿ. ಸರಕಾರ ಚುರುಕಾಗಿಲ್ಲ ಎಂಬ ಆರೋಪ ಬೇರೆ. ಆಗ ಬಿ.ಜೆ.ಪಿ. ಸರಕಾರವಿತ್ತು. ಎಲ್ಲ ರಾಜಕೀಯ ಪಕ್ಷಗಳೂ ಇಲ್ಲಿ ರಾಜಕೀಯವಾಗಿ ಏನು ಲಾಭವಿದೆ ಎಂದು ಲೆಕ್ಕ ಹಾಕುತ್ತ ಕೂತವು. ಉಗ್ರರನ್ನು ಬಿಡುಗಡೆ ಮಾಡಲು ಉಗ್ರರ ಒತ್ತಡಕ್ಕಿಂತ ಪ್ರಯಾಣಿಕರ ಬಂಧುಗಳ, ರಾಜಕೀಯ ಪಕ್ಷಗಳ, ಒತ್ತಡವೇ ಜಾಸ್ತಿಯಾಯಿತು. ಮಾಧ್ಯಮದ ಅವ್ಯಾಹತ ಟೀಕೆ. ಕೊನೆಗೆ ಖುದ್ದು ಆಗಿನ ವಿದೇಶಾಂಗ ಮಂತ್ರಿಯಾಗಿದ್ದ ಜಸವಂತ್ ಸಿಂಗರು ಈ ಮೂವರು ಉಗ್ರರನ್ನು ಒಪ್ಪಿಸಿ ಪ್ರಯಾಣಿಕರನ್ನು ಉಗ್ರರ ಸೆರೆಯಿಂದ ಬಿಡಿಸಿದರು. ಆ ಕೂಡಲೇ ಉಗ್ರರ ಎದುರು ಸರಕಾರ ಸೋತಿತು ಎಂಬ ದೂಷಣೆ ಶುರುವಾಯಿತು. ನಮ್ಮ ಬಂಧುಗಳು ಮಡಿದರೂ ಸಹಿಸುತ್ತೇವೆ, ಉಗ್ರರನ್ನು ಬಿಡುವುದು ಬೇಡ ಎಂದು ಯಾವುದೇ ಪ್ರದರ್ಶನಕಾರರು ಹೇಳಲಿಲ್ಲ. ಉಗ್ರರನ್ನು ಬಿಟ್ಟರೆ ಮುಂದೇನು ಅಪಾಯವಾಗಬಹುದು ಎಂದು ಯಾವ ರಾಜಕಾರಣಿಯೂ ಎಚ್ಚರಿಸಲಿಲ್ಲ. ಆ ಸನ್ನಿವೇಶದಲ್ಲಿ ಎಲ್ಲರೂ ಕೇವಲ ವೈಯಕ್ತಿಕ ನೆಲೆಯಲ್ಲಿ ಯೋಚಿಸುತ್ತಿದ್ದರು. ದೇಶದ ಅಸ್ತಿತ್ವ ಗೌಣವಾಗಿತ್ತು.( ನಾನೇ ಬಂಧುಗಳಲ್ಲಿ ಒಬ್ಬನಾಗಿದ್ದಿದ್ದರೂ ಬಹುಶಃ ಉಗ್ರರನ್ನು ಬಿಡುವ ಬೇಡಿಕೆಯನ್ನೇ ಇಡುತ್ತಿದ್ದೆನೇನೋ. ಯಾಕೆಂದರೆ ನಮಗೆ ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಹಿತ ಮುಖ್ಯ. ಇಡೀ ಕಾಶ್ಮೀರವೇ ಪಾಕಿಗೆ ಹೋದರೂ ನಮಗೆ ಬೇಸರವಿಲ್ಲ. ನಮ್ಮ ಸೈಟಿನ ಎರಡಡಿ ಜಾಗವನ್ನು ರಸ್ತೆಗಾಗಿ ಸರಕಾರ ವಶಪಡಿಸಿಕೊಂಡರೆ ಅದರ ವಿರುದ್ಧವಾಗಿ ಆ ಕೂಡಲೆ ಒಂದು ತಕರಾರನ್ನು ನ್ಯಾಯಾಲಯದಲ್ಲಿ ದಾಖಲಿಸುತ್ತೇವೆ.)

ಘಟನೆ ಎರಡು.
ರಜಕ್ಕೆಂದು ದೆಹಲಿಯಿಂದ ಊರಿನತ್ತ ರೈಲಿನಲ್ಲಿ ಹೊರಟಿದ್ದೆವು. ಸುಮಾರು ೪೫ ಗಂಟೆಗಳ ಪ್ರಯಾಣ. ರೈಲೇ ಮನೆ.ಸಹಪ್ರಯಾಣಿಕರೇ ಬಂಧುಗಳು. ನನ್ನೆದುರು ಸುಮಾರು ೨೬-೨೭ ವಯಸ್ಸಾಗಿರಬಹುದಾದ ಹುಡುಗನೊಬ್ಬ ಕೂತಿದ್ದ. ಅವನ ದಿರಿಸು ನೋಡಿಯೇ ಸೈನಿಕ ಎಂದು ಊಹಿಸಬಹುದಿತ್ತು. ಅವನ ಮುಖದಲ್ಲಿ ಮ್ಲಾನತೆ. ಆ ಕಡೆಯಿಂದ ವರ್ಷಕ್ಕೊಮ್ಮೆ ಊರಿಗೆ ಬರುವ ಎಲ್ಲರಿಗೂ ಒಂದು ರೀತಿಯ ಸಂಭ್ರಮ ಇರುತ್ತದೆ. ಇವನ ಮ್ಲಾನತೆ ಕಂಡು ನನಗೆ ಕೆಟ್ಟ ಕುತೂಹಲ ಶುರುವಾಯಿತು. ಮಾತನಾಡಿಸಿದೆ. ಮೊದಲು ಹಿಂದಿಯಲ್ಲಿ ಅವನಿಗೆ ಕನ್ನಡ ಬರುತ್ತಾ ಎಂದು ವಿಚಾರಿಸಿದೆ. ಬರುತ್ತೆ. ಅವನು ನಮ್ಮ ಬಳ್ಳಾರಿಯ ಹುಡುಗನೇ. ( ಕರ್ನಾಟಕದಲ್ಲಿಯೇ ಇರುವವರಿಗೆ ಬಳ್ಳಾರಿ ಬೇರೆ ಊರು; ದೆಹಲಿಯಲ್ಲಿ ಇರುವವರಿಗೆ ಕರ್ನಾಟಕದ ಎಲ್ಲ ಊರುಗಳೂ ನಮ್ಮ ಊರು! ವಿದೇಶಕ್ಕೆ ಹೋದವರಿಗೆ ಭಾರತ ನಮ್ಮ ಊರು! ಬಹುಶಃ ಭೂಲೋಕವನ್ನು ಬಿಟ್ಟು ಹೊರಟರೆ ಈ ಭೂಲೋಕವೇ ನಮ್ಮ ಊರಾಗುತ್ತೋ ಏನೋ! )
ಆ ವಯಸ್ಸಿನ ಹುಡುಗರಿಗೆ ಸಹಜವಾಗಿರುವ ಲವಲವಿಕೆ ಅವನಲ್ಲಿ ಕಾಣಲಿಲ್ಲ. ಮಾತನಾಡಲೂ ಅಷ್ಟೇನೂ ಆಸಕ್ತಿಯಿಲ್ಲದವನಂತೆ ಕಂಡ. ನನಗೆ ಅವನ ಈ ಮೌನವನ್ನು ಕೆದಕಲು ಮುಜುಗರವಾಗತೊಡಗಿತು. ಆದರೆ ಕುತೂಹಲ ಬಿಡಲೊಲ್ಲದು. ಚಾಯ್…ಚಾಯ್..ಎಂದು ಕೂಗುತ್ತ ಬಂದವನಿಗೆ ಎರಡು ಟೀ ಕೊಡಲು ಕೇಳಿ ನಿಮಗೊಂದು ಎಂದೆ. ಅವನು ಪುಣ್ಯಕ್ಕೆ ತಗೊಂಡ. ಮಾತು ಶುರುವಾಯಿತು. “ನೀವು ಸೈನ್ಯದಲ್ಲಿದ್ದೀರಾ? ನೋಡಿದರೆ ಹಾಗೆ ಕಾಣುತ್ತೆ.” “ಹೌದು.” “ನನಗೆ ಸೈನಿಕರೆಂದರೆ ತುಂಬ ಗೌರವ.” ಸೈನಿಕರನ್ನು ಗೌರವಿಸುವುದು ಎಂದರೆ ಏನು ಎಂದು ಆ ಕ್ಷಣಕ್ಕೆ ನನಗೂ ಗೊತ್ತಿರಲಿಲ್ಲ. ಅವನು ಏನೂ ಮಾತಾಡಲಿಲ್ಲ. ನನ್ನನ್ನೇ ದಿಟ್ಟಿಸಿದ. ಬಹುಷಃ ನನ್ನ ಮಾತಿನ ನಿಜ ಅಳೆಯುತ್ತಿರಬಹುದು. ಆ ಮಾತು ನಾನು ಆಡಬಾರದಿತ್ತು ಅನಿಸಿ ಮುಜಗರವಾಯಿತು. ಮೌನ ಅಸಹನೀಯವಾಗತೊಡಗಿತು. ಏನಾದರೂ ಮಾತನಾಡಬೇಕು. “ನೀವು ತುಂಬ ಬಳಲಿದಂತೆ ಕಾಣುತ್ತಿದ್ದೀರಿ. ಆರೋಗ್ಯ ಸರಿ ಇಲ್ಲವಾ?” “ಸ್ವಲ್ಪ ಸುಸ್ತಿರಬಹುದು. ಲೇಹ್ ನಿಂದ ಪ್ರಯಾಣ ಶುರುಮಾಡಿದ್ದು.” “ ಓ! ಲೇಹ್! ಹಿಮಾಲಯ! ತುಂಬ ಹಿಮ ಮುಚ್ಚಿರುವ ಊರಂತೆ. ಅಲ್ಲಿಯ ಪರ್ವತ ಸಮೂಹ ನೋಡಲು ತುಂಬ ಮೋಹಕವಂತೆ!” ನಾನು ಉದ್ವೇಗದಿಂದ ಹೇಳಿದೆ. ಒಂದು ವರ್ಷದ ಹಿಂದೆ ಕುಫ್ರಿ ನೋಡಲು ಹೋಗಿದ್ದಾಗ ಆ ಅಭಿಪ್ರಾಯ ಕೇಳಿದ್ದೆ. “ಇರಬಹುದು. ಗಡಿ ಕಾಯುವ, ಪ್ರತಿ ನಿಮಿಷವೂ ವೈರಿಗಳ ಗುಂಡಿನ ದಾಳಿಯ ನಿರೀಕ್ಷೆಯ ಆತಂಕದಲ್ಲಿರುವವರಿಗೆ ಹಿಮಮುಚ್ಚಿದ ಸೌಂದರ್ಯ ಕಾಣುವುದಿಲ್ಲ. ನಮ್ಮ ಕಣ್ಣು ಹುಡುಕುವುದು, ನೋಡುವುದು ಈ ಹಿಮದ ನಡುವೆ ಯಾರಾದರೂ ವೈರಿಗಳ ಚಲನವಲನ ಮಾತ್ರ.” ಎದೆಗೆ ಗುದ್ದಿದಂತಾಯಿತು. ಲೇಹ್ ನ ಮತ್ತೊಂದು ರೂಪವನ್ನು ಅವನು ಪರಿಚಯಿಸುತ್ತಿದ್ದ. ಸಾವರಿಸಿಕೊಂಡು, ಆ ಸುದ್ದಿಯನ್ನೇ ಬಿಟ್ಟು, “ ನಿಮ್ಮ ಊರಲ್ಲಿ ನಿಮ್ಮವರು ಯಾರು ಯಾರು ಇದ್ದಾರೆ?” ಎಂದು ಕೇಳಿದೆ. “ನನ್ನಪ್ಪ ನನಗೆ ನಾಲ್ಕು ವರ್ಷವಾಗಿದ್ದಾಗಲೇ ಹೋದರಂತೆ. ಅಮ್ಮ ಕೂಲಿ ನಾಲಿ ಮಾಡಿ ನನ್ನ ಬೆಳೆಸಿದ್ದು. ಓದು ತಲೆಗೆ ಹತ್ತಲಿಲ್ಲ. ಹಾಗಾಗಿ ಸೈನ್ಯ ಸೇರಿದೆ.” “ಈಗ ಅಮ್ಮನನ್ನು ಕಾಣಲು ಹೋಗುತ್ತಿದ್ದೀರಿ ಅನ್ನಿ. ಅಮ್ಮ ಮದುವೆಗೆಂದು ಒಂದು ಹುಡುಗಿಯನ್ನೂ ನೋಡಿರಬಹುದು.” ಮಾತಿನ ಬಿಗುವನ್ನು ಸಡಿಲಗೊಳಿಸಲೆಂದು ಕೊನೆಯ ವಾಕ್ಯ ಸೇರಿಸಿ ನಕ್ಕೆ. ಅವನ ಮ್ಲಾನತೆ ಹಾಗೇ ಇತ್ತು. “ ಅಮ್ಮ ಒಂದು ತಿಂಗಳ ಹಿಂದೆ ತೀರಿಕೊಂಡಳು. ನನಗಾಗ ಬರಲಾಗಲಿಲ್ಲ. ಸುದ್ದಿಯೂ ತಡವಾಗಿ ಮುಟ್ಟಿತು. ರಜೆ ಕೂಡಾ ಸಿಗಲಿಲ್ಲ. ರಜೆ ಸಿಕ್ಕದ್ದರೂ ತಕ್ಷಣ ಬರೋದಕ್ಕೆ ಆಗ್ತಿರಲಿಲ್ಲ. ಮತ್ತೆ ಊರಲ್ಲಿ ನನ್ನವರು ಯಾರೂ ಇಲ್ಲ. ಅಮ್ಮ ಇದ್ದ ಜಾಗ ಎಂದು ನೋಡಲು ಹೋಗುತ್ತಿದ್ದೇನೆ.” ಅವನ ದನಿಯಲ್ಲಿ ಸಣ್ಣ ಕಂಪನವಿತ್ತು. ಕಿಟಕಿಯ ಹೊರಗಿನ ಬಿರು ಬಿಸಿಲು ನೋಡುತ್ತಾ ಮೌನಿಯಾದ. ಕಣ್ಣಲ್ಲಿ ಹನಿ ಇತ್ತೇ?
ಆ ಕ್ಷಣದಲ್ಲಿ ಇಡೀ ಜೀವನದರ್ಥ ಹಳಿಯ ಮೇಲುರುಳುತ್ತಿದ್ದ ರೈಲಿನ ಚಕ್ರ ಹುಟ್ಟಿಸುತ್ತಿದ್ದ ಗಡಗಡಕ್.. ಗಡಗಡಕ್.. ಸದ್ದಾಗಿಹೋಯಿತು.

4 comments:

Unknown said...

ha chennagide

ಮೃತ್ಯುಂಜಯ ಹೊಸಮನೆ said...

publish madakkinta munchene odidyaa?

Ittigecement said...

tumbaa bejaaraayitu.. nimma baravanige chennaagide...

ರಾಜೇಶ್ ನಾಯ್ಕ said...

ಎರಡನೆಯ ನೆನಪಂತೂ ಬಹಳ ಕಾಡಿದೆ. ಓದಿದಾಗ ಒಂಥರಾ ಕೆಟ್ಟದು ಅನಿಸತೊಡಗಿತು. ಸೈನಿಕರ ಪಾಡು ನಾಯಿಗೂ ಬೇಡ.