Friday, December 12, 2008

ಸಂತರು ಮತ್ತು ಕಾಡು

**ನನಗೆ ಕುತೂಹಲ. ನಮ್ಮ ದೇಶದ ಎಲ್ಲ ಸಂತರೂ ಯಾಕೆ ತಮ್ಮ ಸಾಧನೆಗೆ ಕಾಡು ಹೊಕ್ಕರು? ಕಾಡಲ್ಲದಿದ್ದರೆ ಹಿಮಾಲಯ. ಒಟ್ಟಿನಲ್ಲಿ ಜನರಿಲ್ಲದ ತಾಣ. ಅಲ್ಲಿ ತಾವಾರಿಸಿಕೊಂಡ ಗುರುಗಳ ಜತೆ ಕೂತು ಏನು ಮಾತಾಡಿರಬಹುದು? ಆ ಗುರುಗಳೂ ಜನರಿಂದ ಕಳಚಿಕೊಳ್ಳಲೆಂದೇ ಅಲ್ಲಿ ಬಂದವರಾದ ಕಾರಣ, ಅವರೂ ಬಹಳ ಮಾತನಾಡಿರಲಿಕ್ಕಿಲ್ಲ. ಅಂದರೆ ಈ ಸಂತರು ತಮ್ಮ ಜತೆಗೆ ತಾವು ಕೂತರು. ಹಾಗೆ ಕೂತು ಸುಮ್ಮನೆ ಪ್ರಕೃತಿಯನ್ನು ಗಮನಿಸಿದರೇ? ಸುಮ್ಮನೆ ಒಂದು ಊಹೆ ಮಾಡುವಾ. ನಾನೊಂದು ಕಡೆ ಒಬ್ಬನೇ ಕೂತಿದ್ದೇನೆ. ಸ್ವಲ್ಪ ದೂರದಲ್ಲಿ ನನ್ನ ಹಾಗೇ ಮತ್ತೊಬ್ಬ ಕೂತಿದ್ದಾನೆ. ನಾನು ಇಲ್ಲಿಂದ ಎಲ್ಲೂ ಹೋಗುವವನಲ್ಲ. ನನ್ನ ಹಾಗೇ ಅವನೂ ಕೂಡ. ಹೀಗೇ ಕೆಲವು ಕಾಲ ಕಳೆದರೆ, ನನಗೂ ತಿಳಿಯದ ಹಾಗೆ ಆ ಮತ್ತೊಬ್ಬನ ಬಗ್ಗೆ ಕುತೂಹಲ ಚಿಗುರುತ್ತದೆ. ತುಸು ಮಾತನಾಡುವಾ ಅನಿಸುತ್ತೆ. ಅವನ ಬಗ್ಗೆ ತಿಳಿವ ತವಕ ಮೂಡುತ್ತದೆ. ಅವನಿಗೂ ಹಾಗೇ ಆಗಿರಬೇಕಲ್ಲ! ಮೊದಲೊಂದು ನಗು. ಅಮೇಲೆ ಪುಟ್ಟ ಪುಟ್ಟ ಪರಿಚಯದ ಮಾತುಗಳು. ಹೀಗೇ ತುಸು ಕಾಲ ಕಳೆದರೆ ನಿಮ್ಮ ಎಲ್ಲ ವಿವರಗಳೂ ಅವನಿಗೆ ತಿಳಿದಿರುತ್ತೆ; ಅವನ ವಿವರಗಳು ನಿಮಗೆ. ಇನ್ನೂ ಕೆಲಕಾಲ ಕಳೆದರೆ ಪರಸ್ಪರ ಆತ್ಮೀಯತೆ. ಬಹುಷಃ ಈ ಸಂತರಿಗೆ ಇದೇ ಆಗಿರಬಹುದೇ? ಪ್ರಕೃತಿಯ ಜತೆ ಮಾತ್ರ ಇದ್ದ ಅವರ ಒಳಗು ಪ್ರಕೃತಿಯೂ, ಪ್ರಕೃತಿಯ ಒಳಗು ಇವರೂ ಆಗಿರಬಹುದೇ? ಬಹುದೇನು.. ನಿಸ್ಸಂಶಯವಾಗಿ ಆಗಿರಲೇಬೇಕು. ಹಾಗಾಗಿ ಅವರು ಸಂತರಾದರು. ಇಡಿಯ ಜಗತ್ತೇ ಅವರಾದರು. ದ್ವೈತ ಅಳಿಯಿತು;ಅದ್ವೈತ ಉಳಿಯಿತು. ಈಗವರಿಗೆ ಬೇರೆಯವರು ಎಂಬುವವರೇ ಇಲ್ಲ. ಅವರೇ ಎಲ್ಲರೂ; ಎಲ್ಲವೂ ಅವರೇ.
**ನನಗೆ ಕುತೂಹಲ. ಪ್ರವಚನ ಕೇಳುವುದರಿಂದ, ಓದುವುದರಿಂದ , ನಾವು ಸಂತರಾಗಲು ಸಾಧ್ಯವೇ? ಪ್ರಕೃತಿಯ ಜತೆ ಮಾತನಾಡಲೆಂದು ಅವರಾರಿಸಿಕೊಂಡ ಮೌನತಾಣದಲ್ಲಿ ಗುಡಿಕಟ್ಟಿ, ಅವರದೇ ಮೂರ್ತಿಯಿಟ್ಟು ಪೂಜೆಮಾಡುವುದರಿಂದ ನಾವು ಬದಲಾಗಲು ಸಾಧ್ಯವೇ? ನಾವೂ ಅವರಂತಾಗಲು ಯತ್ನಿಸುವ ಬದಲು ಯಾಕೆ ನಾವು ಅವರನ್ನ ನಮ್ಮಂತಾಗಿಸಲು ಯತ್ನಿಸುತ್ತೇವೆ? ಅವರು ಬದುಕಿದ ಪರಿಯನ್ನು ಗ್ರಹಿಸಿ, ಅಳವಡಿಸಿಕೊಳ್ಳುವ ಬದಲು ಯಾಕೆ ಅವರ ಸಾಧನೆಯನ್ನು ವೈಭವೀಕರಿಸಲು ಮಾತ್ರ ಬಯಸುತ್ತೇವೆ? ಈ ಸಂತರು ಬದುಕಿದ್ದ ಜಾಗವನ್ನು ಮುಂಚಿನಂತೆಯೇ ಇಟ್ಟು , ಅಲ್ಲಿ ಬರುವವರಿಗೆ ಸಂತರು ಅನುಭವಿಸಿದ ಮೌನದ ಅನುಭವ ಆಗುವಂತೆ ಯಾಕೆ ಮಾಡಬಾರದು?
**ಕತ್ತಲಲ್ಲಿ ಒಬ್ಬರೇ ಕೂತರೆ ದೆವ್ವ ಕಾಣುವಂತೆ, ಒಂಟಿಯಾಗಿ ಮೌನದಲ್ಲಿ ಕೂತರೆ, ಬಹುಷಃ, ನಮಗೆ ಕಾಣುವ ನಾವು ದೆವ್ವ ಅನಿಸಬಹುದು. ನಮ್ಮ ಪ್ರಪಂಚ ಮಾತಲ್ಲಿ ಕಟ್ಟಿದ್ದು. ಮಾತಿನಾಚೆಯ ಮೌನದ ಪ್ರಪಂಚ ನಮಗೆ ಅಪರಿಚಿತವಾದ್ದು. ಹಾಗಾಗಿ ಸಂತರು ಮೌನದಲ್ಲಿ ಕಂಡದ್ದು ನಮಗೆ ಕಾಣುವುದಿಲ್ಲ. ಅವರು ಕಂಡದ್ದು ನಮ್ಮ ಮಾತಿನ ಪ್ರಪಂಚದಲ್ಲಿ ಇದ್ದರೆ ತಾನೇ? ಅವರ ಮೌನವನ್ನು ಮಾತಿನಲ್ಲಿ ಕಟ್ಟಲು ನೋಡುತ್ತೇವೆ. ಮಾತೆಂದರೆ ಭಜನೆ.ಮಂತ್ರ. ತಪಸ್ಸು ನೀಡಿದ ಶಕ್ತಿಯಿಲ್ಲದ ಈ ಎಲ್ಲವೂ ಕೇವಲ ಶಬ್ದಗಳಾಗುತ್ತವೆ. ಅರ್ಥ ಕಳಕೊಂಡ ಶಬ್ದಗಳಲ್ಲಿ ನಮ್ಮ ಬದುಕು ಬದುಕುತ್ತದೆ.
**ಆದರೆ ಇದನ್ನೊಪ್ಪಲು ನಮಗೆ ಮನಸ್ಸಿಲ್ಲ. ಹಾಗಾಗಿ ನಾವು ಹೇಳುತ್ತಿರುವುದನ್ನು ಸಂತರು ಹೇಳಿದ್ದಾರೆ ಎಂದು, ವೇದ , ಉಪನಿಷತ್ ಗಳು ಹೇಳಿವೆ ಎಂದು ಅವುಗಳನ್ನು ಓದದೆಯೂ, ಘೋಷಿಸುತ್ತೇವೆ. ನಿಧಾನವಾಗಿ, ಸಂತರು ಕಂಡಿದ್ದನ್ನು ನಾವು ಕಾಣುವ ಬದಲು, ನಾವು ಕಾಣುತ್ತಿರುವುದೇ ಸಂತರು ಕಂಡಿದ್ದಾಗುತ್ತದೆ. ಸಂತರಿಗೆ ತನ್ನ ಗುಟ್ಟು ಬಿಟ್ಟುಕೊಟ್ಟ ಮೌನದ ಕಾಡಿನಲ್ಲಿ ಗುಡಿ ಏಳುತ್ತದೆ. ಹೊತ್ತುಹೊತ್ತಿಗೆ ಯಂತ್ರ ಬಡಿವ ಗಂಟೆಯ ಸದ್ದು ಕೇಳುತ್ತದೆ. ಬರುವವರ ಅಗತ್ಯದ ನೆವದಲ್ಲಿ ಭೋಜನಶಾಲೆ, ವಸತಿಗೃಹ, ಸ್ವಲ್ಪ ದೂರದಲ್ಲಿ ಹೋಟೆಲು,( ಇನ್ನೂ ಸ್ವಲ್ಪ ದೂರದಲ್ಲಿ ಒಂದು ಬಾರ್ ಕೂಡ?) ನಿರ್ಮಾಣಗೊಳ್ಳುತ್ತವೆ. ಇಲ್ಲಿಗೆ ಬಂದರೆ ಒಳಗಿನ ಗದ್ದಲ ಇನ್ನಿಷ್ಟು ಸೊಕ್ಕುತ್ತದೆ. ನಿಜದ ಬದಲು ನೆರಳೇ ವಿಜೃಂಭಿಸುತ್ತದೆ.
**ನೆರಳನ್ನು ಬಿಟ್ಟು ನಿಜವನ್ನು ಎಲ್ಲಿ ಹುಡುಕುವುದು?

2 comments:

ಮನಸ್ವಿ said...

ಎನಪಾ.. ದಿನದಿಂದ ದಿನಕ್ಕೆ ಬರವಣಿಗೆ ಓಘ ಜಾಸ್ತಿ ಆಗ್ತಾ ಇದ್ದಂಗೆ ಕಾಣ್ತು...!
"ನನಗೆ ಕುತೂಹಲ. ಪ್ರವಚನ ಕೇಳುವುದರಿಂದ, ಓದುವುದರಿಂದ , ನಾವು ಸಂತರಾಗಲು ಸಾಧ್ಯವೇ?" ಪ್ರವಚನ ಕೇಳಿದವರೆಲ್ಲಾ ಸಂತರಾಗಬೇಕು ಎನ್ನುವುದೇನಿಲ್ಲ ;)
"ಹೊತ್ತುಹೊತ್ತಿಗೆ ಯಂತ್ರ ಬಡಿವ ಗಂಟೆಯ ಸದ್ದು ಕೇಳುತ್ತದೆ. ಬರುವವರ ಅಗತ್ಯದ ನೆವದಲ್ಲಿ ಭೋಜನಶಾಲೆ, ವಸತಿಗೃಹ, ಸ್ವಲ್ಪ ದೂರದಲ್ಲಿ ಹೋಟೆಲು,( ಇನ್ನೂ ಸ್ವಲ್ಪ ದೂರದಲ್ಲಿ ಒಂದು ಬಾರ್ ಕೂಡ?) ನಿರ್ಮಾಣಗೊಳ್ಳುತ್ತವೆ. "
ಈ ಸಾಲು ಸ್ಪಲ್ಪ ವಿವಾದಾಸ್ಪದ ಆಗ ಚಾನ್ಸ್ ಇದ್ದು ಹುಷಾರಾಗಿರು...! ಅಂದ ಹಾಗೆ ಯಂತ್ರ ಬಡಿವ ಗಂಟೆ ಸದ್ದು ಊಟದ ಸಮಯ ತಿಳಿಸಲೋ ಅಥವಾ ಮಂಗಳಾರತಿಯ ಸಮಯದ್ದೋ ಗೊತ್ತಾಗಲಿಲ್ಲ?

Unknown said...

ಉತ್ತರ ಸಿಗದು ಎಂದೂ ಗೊತ್ತಿದ್ದರೂ ಹುಡುಕುತ್ತಿರುವ ವೀರರು ನಾವು. ಒಂದು ಭೀಕರ ಬರಗಾಲ, ಒಂದು ಭೀಕರ ಯುದ್ಧ, ಒಂದು ಮಹಾಕ್ರಾಂತಿ ಮುಂತಾದ ಯಾವುದಾದರೂ ಒಂದು ಇದಕ್ಕೆ ಉತ್ತರ ಕೊಡಬಲ್ಲದು
ಎಲ್ಲರೂ ಹುಡುಕಹೊರಟವರು ಅಂತಹದ್ದರಲ್ಲಿ ಹಾ ನನಗೆ ಸಿಕ್ಕಿತು ಅಂತ ಅಂದುಕೊಳ್ಳುವವನು ಸಮಾಧಾನಿ. ನನಗೆ ಸಿಕ್ಕಿತು ಅದನ್ನು ನಿನಗೆ ತೋರಿಸುತ್ತೇನೆ ಹಣ ಕೊಡು ಎನ್ನುವವನು ಬುದ್ಧಿವಂತ.