Sunday, January 4, 2009

ಹುಟ್ಟು ಸಾವಿನ ಚಕ್ರ

ಕನಸು ಕಾಣುವ ಮನಸ್ಸು ಇರುವವರೆಗೂ, ಇರುವವರಿಗೂ ಸಾವಿನ ಭಯವಿಲ್ಲ. ಸಾವೆಂದರೆ ನಮ್ಮದೆಂದು ನಾವು ನಂಬಿದ ಎಲ್ಲವನ್ನೂ ನಿಸ್ಸಹಾಯಕತೆಯ ಒಂದು ಕ್ಷಣದಲ್ಲಿ, ಅರ್ಘ್ಯ ಬಿಡುವಂತೆ ಬಿಡುವ ಕ್ರಿಯೆ. ಇಷ್ಟು ದಿನ ನನ್ನದಾಗಿದೆ ಎಂದು ನಂಬಿದ್ದೆಲ್ಲವನ್ನು ಮೊಗೆದಲ್ಲಿಗೇ ಬಿಡುವ ಪ್ರಕ್ರಿಯೆ.
*********************
ಹುಟ್ಟಿನಿಂದ ಆರಂಭವಾಗುವ ನಮ್ಮ ಜೀವನ ಸಾವಿನಲ್ಲಿ ಮುಕ್ತಾಯ ಕಾಣುತ್ತದೆ. ಈ ನಡುವಿನ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ: ಬೇಕಾದ್ದು; ಬೇಡವಾದ್ದು. ನಮ್ಮ ನಿಯಂತ್ರಣಕ್ಕೊಳಪಟ್ಟಿದ್ದು: ನಿಯಂತ್ರಣಕ್ಕತೀತವಾದದ್ದು. ಇವೆಲ್ಲವನ್ನೂ ಖುಷಿಯಿಂದಲೋ, ಸಂಕಟದಿಂದಲೋ ಅನುಭವಿಸಬೇಕು. ಅನಿವಾರ್ಯ. ಇವನ್ನೆಲ್ಲ ಅನುಭವಿಸುವವರು ಸಂಸಾರಿಗಳಂತೆ. ಅನುಭವಗಳಿಗೆ ನಿರ್ಲಿಪ್ತತೆಯಲ್ಲಿ ಒಡ್ಡಿಕೊಳ್ಳುವವರು ಸಂತರಂತೆ; ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವವರು ಸಿದ್ಧಪುರುಷರಂತೆ. ನಾವು ಇನ್ನೂ ಸಂಸಾರಿಗಳೇ. ನಮ್ಮ ನಿಮ್ಮ ಸಂಕಟಪರಿಹಾರಕ್ಕೆ ಹೋಮ ಹವನಾದಿಗಳಿವೆ, ಪೂಜೆ ಪುನಸ್ಕಾರಗಳಿವೆ. ಇವೆಲ್ಲ ಬೇಡ ಅಂದರೆ ಮನಸ್ಸನ್ನು ಹದಗೊಳಿಸಲು ಆಧುನಿಕ ಗುರುಗಳಿದ್ದಾರೆ. ವಾರವೋ, ತಿಂಗಳೋ ಅಲ್ಲಿದ್ದು, ಎರಡು ಮೂರು ಸಾವಿರ ಹುಡಿ ಹಾರಿಸಿ ಬಂದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುವಂತೆ ಮಾಡುವವರವರು. ಹಾಗಂತ ಅವರು ಹೇಳಿಕೊಳ್ಳುತ್ತಾರೆ. ಸರಿ, ಶಾಂತಿಯೇನೋ ಸಿಕ್ಕೇಬಿಟ್ಟಿತು ಎಂದು ಕೊಳ್ಳುವಾ. ಅದರೆ ಸಾವು? ಸಾವನ್ನೂ ಪರಿಹರಿಸಲು ಸಾಧ್ಯವೇ? ಹೋಗಲಿ ಸಾವಿನ ಭಯವನ್ನು ಪರಿಹರಿಸಲು ಸಾಧ್ಯವೇ? ಸಾವೆಂದರೆ ಏನು? ಅದರ ಭಯದಿಂದ ಬಿಡುಗಡೆ ಹೇಗೆ?
********
ಜೀವನವನ್ನು ಸರಳ ರೇಖೆಗೆ ಹೋಲಿಸಿದರೆ, ಅರಂಭದ ಬಿಂದು ಹುಟ್ಟು. ಕೊನೆಯ ಬಿಂದು ಸಾವು. ಹುಟ್ಟಿನ ಹಿಂದೆ ಏನು? ಸಾವಿನ ಮುಂದೆ ಏನು? ಗೊತ್ತಿಲ್ಲ. ಗೊತ್ತಿರುವವರು ಇರಬಹುದು. ಅದೂ ಗೊತ್ತಿಲ್ಲ. ನಾವು ಊಹಿಸಬಹುದು. ಇದನ್ನು ಊಹಿಸಲು ಸರಳ ಉಪಾಯ ಒಂದಿದೆ. ಜೀವನವನ್ನು ಸರಳರೇಖೆಯಲ್ಲ, ವೃತ್ತ ಎಂದು ಕಲ್ಪಿಸಿಕೊಳ್ಳೋಣ. ಹುಟ್ಟಿನ ಬಿಂದುವಿನಿಂದ ಹೊರಟು ರೇಖೆಯನ್ನು ವಕ್ರವಾಗಿಸುತ್ತಾ, ವೃತ್ತವಾಗಿಸುತ್ತ ಬರೋಣ. ವೃತ್ತ ಪೂರ್ಣವಾಗಲು ರೇಖೆ ಹೊರಟ ಬಿಂದುವಿಗೇ ಬಂದು ಸೇರಬೇಕು. ವೃತ್ತ ಪೂರ್‍ಣವಾದರೆ ಬದುಕು ಪೂರ್ಣವಾದಂತೆ ತಾನೇ? ಅಂದರೆ ಹುಟ್ಟು ಮತ್ತು ಸಾವು ಒಂದೇ ಬಿಂದುವಿನಲ್ಲಿದೆ; ಹುಟ್ಟೇ ಸಾವಾಗಿದೆ ಅನ್ನಿ ಅಥವಾ ಸಾವೇ ಹುಟ್ಟಾಗಿದೆ ಅನ್ನಿ. ಈ ವೃತ್ತದ ಪರಿಧಿರೇಖೆಯ ಮೇಲೆ ನಾವು ಎಲ್ಲಿ ನಿಂತು ನೋಡಿದರೂ ನಮ್ಮ ಮುಂದೆ ಹಿಂದೆ ಸಾವಿದೆ; ಹುಟ್ಟಿದೆ. ಹಾಗೇ ನಿರಂತರ ಜೀವನವಿದೆ. ನೋಡಿದರೆ ಹುಟ್ಟು ಮತ್ತು ಸಾವಿನ ನಡುವೆ ಸಂಭವಿಸುವ ಘಟನೆಗಳು ಜೀವನವಾಗುವ ಬದಲು, ಕಾಲದ ನಿರಂತರೆತೆಯಲ್ಲಿ ಹುಟ್ಟು ಮತ್ತು ಸಾವು ಕೂಡ ಜೀವನದ ಘಟನೆಗಳಾಗಿವೆ. ಅಂದರೆ ಯಾವುದೋ ಮೂಲಸತ್ ನಿರಂತರ ಹುಟ್ಟುತ್ತ, ಸಾಯುತ್ತ ಚಕ್ರವಾಗಿದೆ. ಹುಟ್ಟಿ ಸಾಯುವುದು ಯಾವುದು? ಈ ಮೂಲ ಸತ್ ಏನು? ಹುಟ್ಟಿ ಸಾಯುವ ನಮ್ಮ ದೇಹದ ಮೂಲಕವಾಗಿಯೇ ಹೇಗೆ ಹುಟ್ಟದ ಸಾಯದ ಮೂಲ ಸತ್ ಅನ್ನು ಪಡೆಯುವುದು?.........(ಮುಂದುವರಿಯುವುದು)

6 comments:

Unknown said...

begane munduvareyali
kutuhala ide

ಶಾಂತಲಾ ಭಂಡಿ (ಸನ್ನಿಧಿ) said...

ಮೃತ್ಯು ಅವರೆ...
ನಮಸ್ಕಾರ.
"ಹುಟ್ಟು ಸಾವಿನ ಚಕ್ರ" ತುಂಬ ಕುತೂಹಲಕಾರಿಯಾಗಿದೆ.
ಜೀವನ ಚಕ್ರವನ್ನು ನೀವು ವಿವರಿಸಿದ ರೀತಿ ತುಂಬ ಇಷ್ಟವಾಯಿತು. ಮುಂಬರುವ ಬರಹಕ್ಕಾಗಿ ಕಾಯುತ್ತಿದ್ದೇನೆ.

ಮನಸ್ವಿ said...

ಹ್ಮ್.. ಮುಂದುವರೆಯಲಿ.. ಹುಟ್ಟು ಸಾವಿನ ರಹಸ್ಯ ಬಿಚ್ಚಿಡುವ ಪ್ರಯತ್ನ.. ಬರೆದಿಟ್ಟಾಗಿದೆಯಲ್ವಾ Ms-wordನಲ್ಲಿ ಮುಂದಿನ ಭಾಗವನ್ನು! ಇನ್ನೇಕೆ ಕಾಯಿಸುತ್ತೀಯ.. ಬೇಗನೆ ಅಪ್ಲೋಡ್ ಮಾಡು.. ಅರ್ದಂಬರ್ದ ಓದಿ ಚನ್ನಾಗಿದೆ ಚನ್ನಾಗಿಲ್ಲ ಎಂದು ನಾನು ಹೇಳುವುದಿಲ್ಲ... ;) ಅದು ಸರಿಯೂ ಅಲ್ಲ ಅಲ್ವಾ.. ಮುಂದಿನ ಭಾಗ ಇನ್ನೂ ಚನ್ನಾಗಿ ಬರೆಯಬಹುದು ಅಥವಾ ಇದಕ್ಕಿಂತಲೂ ಕೆಟ್ಟದಾಗಿ ಬರೆದಿರಬಹುದು! ಕುತೂಹಲವಂತೂ ಇದೆ ಕಾಯ್ತಾ ಇದೀನಿ.....

Anonymous said...

bahala chennagide....bega munduvarisi....kayutta iruva nimma abhimani

haage summane nanna blogannu omme nOdi:

www.haagesummane.wordpress.com

Anonymous said...

bahala chennagide....bega munduvarisi....kayutta iruva nimma abhimani

haage summane nanna blogannu omme nOdi:

www.haagesummane.wordpress.com

Gowtham said...

ಕಾಲದ ನಿರಂತರೆತೆಯಲ್ಲಿ ಹುಟ್ಟು ಮತ್ತು ಸಾವು ಕೂಡ ಜೀವನದ ಘಟನೆಗಳಾಗಿವೆ. ಸರಿ. ಆದರೆ, ಓರ್ವ ವ್ಯಕ್ತಿಯ ಜೀವನಕ್ಕೆ ಹುಟ್ಟು ಸಾವು ಒಮ್ಮೆ ಮಾತ್ರ ಅಲ್ಲವೇ, ಹಾಗಾಗಿ ಅವನಿಗೆ ಅದು ಸರಳರೇಖೆಯೇ ತಾನೇ?

ಪುನರಪಿ ಜನನಂ ಪುನರಪಿ ಮರಣಂ?