Saturday, February 7, 2009

ವರ್ಗವಾಗುವ ಸಮಯ.

ಈಗ ವರ್ಗವಾಗುವ ಸಮಯ.
ನಿಮಗೀ ಬಾರಿ ವರ್ಗವುಂಟಂತಲ್ಲ..ಯಾವ ಊರು ?
ಎಲ್ಲ ಕೇಳುವರು.
ನನಗೂ ಬಂದಿತ್ತು ಸುದ್ದಿ ಚೂರು.
ಬಲ್ಲವರು ಯಾರು ?

ಮಡದಿಗೆ ತುಂಬ ಚಿಂತೆ. ಆಕೆಯೋ....ತುಸು ಭೀರು.
ಯಾವ ಊರು? ಯಾವಭಾಷೆ? ಅತ್ತ ಇತ್ತೆಲ್ಲ ಯಾರು ಯಾರು?
ಸಿಕ್ಕೀತೇ ಸರಿಯಾದ ಸೂರು?

ಮಗಳ ಚಿಂತೆಯೇ ಬೇರೆ. ಶಾಲೆಯಿರಬಹುದೇ ಅಲ್ಲಿ?
ಪಾಠ ನಡೆಯುವುದೇ? ಚೆನ್ನಾಗಿತ್ತು ಇಲ್ಲಿ.
ಇದೇ ಚರ್ಚೆ ಅವಳ ಗುಂಪಲ್ಲಿ.
***
ವರ್ಗವಾಯಿತು ನೋಡಿ ಎಷ್ಟೊಂದು ಸಂಮಾನ!
ನಾವು ತೆರಳುವೆವೆಂದು ಎಲ್ಲರಿಗೂ ದುಃಖ ದುಮ್ಮಾನ.
ಬನ್ನಿ ನಮ್ಮ ಮನೆಗೆ..ಎಲ್ಲರದೂ ಆಹ್ವಾನ.
(ಕರೆದೇ ಇರಲಿಲ್ಲ ಇಷ್ಟುದಿನ!)
ಎಷ್ಟೊಂದು ಪರಿಚಿತರ ಜೊತೆಗೆ ಈಗ ಮಿಲನ !
ಹೊರಡುವೀ ವೇಳೆ ಸ್ನೇಹದನುಸಂಧಾನ.

ಹೊರಟ ದಿನ. ಖಾಲಿಮನೆ . ಮನದ ತುಂಬೆಲ್ಲ ನೆನಪು ಬುತ್ತಿ.
ತೀರಿತು ಈ ಊರಿನ ಋಣ. ಮುಂದಿನೂರಿಗೆ ಪಯಣ.
***
ಹೊಸ ಊರು. ಹೊಸ ಭಾಷೆ. ಹೊಸ ಜನ.
ಬೇರೂರುವುದು ನಿಧಾನ.ಮೊದಲಷ್ಟು ದಿನ ಆತಂಕ, ಬಿಗಿತ
ಆಮೇಲೆ ಹಿಂದಿನಂತೆಯೇ ಚಲನೆ ಸುರಳೀತ.
ಹಕ್ಕಿ ಕಟ್ಟುವುದು ಹೊಸ ಗೂಡು.ಬದುಕಿಗದು ಸಹಜ ನೋಡು.

ಅತ್ತಿತ್ತಲವರ ಕಂಡು ಮೊದಲು ಮುಗುಳು ನಗೆ.
ಆಮೇಲೆ ತಿಳಿ ಮಾತು. ಕೇಳುವರು ನಮ್ಮ ಮನವನಿಟ್ಟು.
ಹೊಸ ಕನಸುಗಳ ಮೊಟ್ಟೆ. ಇದು ಜೀವನದ ಬಗೆ.
ಚಿಗುರುವುದು ಗಿಡ ರಾಶಿ ಹೂವ ಬಿಟ್ಟು.
ಕಳೆಯುವುದು ವರ್ಷ. ಮತ್ತಷ್ಟು ವರ್ಷ.
ಒಂದಿಷ್ಟು ಕಷ್ಟ...ಒಂದಿಷ್ಟು ಹರ್ಷ.
ಇನ್ನೆಲ್ಲ ಪರಿಚಿತ ಎಂಬ ಹೊತ್ತಿಗೆ ಮತ್ತೆ ವರ್ಗವಾಗುವ ಸುದ್ದಿ.
ಹೊಸ ಜಾಗ ಹೊಸ ಬಗೆ
ಬದುಕಿರುವುದೇ ಹಾಗೆ.
***
ಇನ್ನುಳಿದಿದ್ದು ಒಂದೇ ವರ್ಗ. ಇದು ಕೊನೆಯ ಸರ್ಗ.
ಮಡದಿ ಮಕ್ಕಳು ಇಲ್ಲ. ಆಸ್ತಿಪಾಸ್ತಿಗಳಿಲ್ಲ.
ಭಾಷೆ ಭಾವಗಳಿಲ್ಲ.ಊರು ಕೇರಿಗಳಿಲ್ಲ.
ಎಲ್ಲವೂ ವರ್ಜ್ಯ.
***
ಇದು ಸಹಜ ಪಯಣ.ಸ್ವರ್ಗ ಸೇರುವ ಚರಣ.

2 comments:

ಮನಸ್ವಿ said...

ವರ್ಗವಾಗಿ ಊರು ಬಿಡುವ ಮೊದಲೇ ತಮ್ಮ ಮನೆಗೆ ಕರೆದರಲ್ಲಾ ಅದೇ ನಿಮ್ಮ ಪುಣ್ಯ.
ಹೊಸ ಕನಸುಗಳ ಮೊಟ್ಟೆ? ಒಡೆದು ಹೋದೀತು ಜೋಕೆ....
ಹೊಸ ಕನಸುಗಳ ಮೂಟೆ ತುಂಬಿಕೊಂಡು ಬಂದಿದ್ದೀರಾ, ಆ ನಿಮ್ಮ ಕನಸುಗಳಲ್ಲಾ ನನಸಾಗಲಿ

ShruBhanu said...

hummm nanu a time nalli henge feel maDkatha iddidna hange baradde:-) Avr avrige avridde chinthe halavaDa so sariyagiddu....deshavanna sutththa koshavannu odida expieriece thumba sahaya madthu. :)