Monday, August 9, 2010

ದೇವರೆಂಬ ಮಾಯೆ



ಹನೂರು ಎಂಬುದು ಹನೂರಿನ ಹೆಸರು. ಸಾಗರದಿಂದ ಜೋಗಕ್ಕೆ ಹೋಗುವ ಹೆದ್ದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಹೋದರೆ, ಈ ದಾರಿಯಿಂದಲೇ ಹುಟ್ಟಿತೆಂಬಂತೆ ಕಾಣುವ ಇಳುಕಲಾದ ಮಣ್ಣಿನ ದಾರಿಯೊಂದು ಎರಡು ಗುಡ್ಡಗಳ ನಡುವೆ ಇದೆ. ಇಳುಕಲು ಹಾದಿಯಲ್ಲಿ ಒಂದಿಪ್ಪತ್ತು ಹೆಜ್ಜೆ ನಡೆದರೆ ಬಲಬದಿಯ ಗುಡ್ಡವನ್ನೇರುವ ಶಿಥಿಲವಾಗಿರುವ ಕಲ್ಲಿನ ಮೆಟ್ಟಿಲುಗಳು ಕಾಣುತ್ತವೆ. ಇದೇ ಊರಿನ ಆರಂಭ. ಹಾಗೇ ಮಣ್ಣಿನ ರಸ್ತೆಯಲ್ಲಿ ಮುಂದುವರಿದರೆ ರಸ್ತೆಯ ಎಡಬದಿಗೆ ಸಾಲಾಗಿ ಮನೆಗಳು. ಬಲಗಡೆಗೆ ತೋಟ. ಈ ರಸ್ತೆ ಸುಮಾರು ಎರಡು ಕಿ.ಮಿ. ಸಾಗಿ ಶಿರಸಿಗೆ ಹೋಗುವ ಟಾರು ರಸ್ತೆಯನ್ನು ಸೇರುತ್ತದೆ. ಸೇರುವ ಮುನ್ನ ಪ್ರಾರಂಭದ ಇಳುಕಲಿಗೆ ಸಮನಾದ ಏರಿದೆ. ಆಕಾಶದಿಂದ ನೋಡಿದರೆ ಊರು ಒಂದು ಗುಂಡಿಯಲ್ಲಿ ಇರುವ ಹಾಗೆ ಕಾಣಬಹುದು. ನೋಡಿದವರು ಯಾರೂ ಇಲ್ಲ.

ಶಿಥಿಲವಾದ ಕಲ್ಲಿನ ಮೆಟ್ಟಿಲುಗಳ ಮೇಲೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಊರಿನ ಆರಂಭದಲ್ಲಿರುವ ಗುಡ್ಡವನ್ನು ಏರಿ. ನೂರು ನೂರಿಪ್ಪತ್ತು ಮೆಟ್ಟಿಲುಗಳಿರಬಹುದು. ಅಷ್ಟೆ. ಅಷ್ಟು ಏರಿದರೆ ಯಾರೋ ಅರ್ಧ ಗುಡ್ಡವನ್ನು ಕಡಿದಂತೆ ಮಟ್ಟಸವಾದ ತುಸು ವಿಸ್ತಾರವಾದ ಜಾಗ ಕಾಣುತ್ತದೆ. ಈ ಜಾಗದ ನಡುವೆ ಒಂದು ಕಪ್ಪು ಶಿಲೆಗಳ ಕಟ್ಟಡ. ಸುಮಾರು ಹದಿನೈದು ಅಡಿ ಉದ್ದ ಅಗಲದ ಚಚ್ಚೌಕದ ರಚನೆ. ನಾಲ್ಕೂ ಮೂಲೆಯಲ್ಲಿ ನಾಲ್ಕು ದಪ್ಪ ಕಲ್ಲಿನ ಕಂಬಗಳು. ಇವುಗಳ ನಡುವೆ ಐದಡಿಗೊಂದರಂತೆ ಕಲ್ಲಿನ ಕಂಬಗಳು. ಮೇಲೂ ಕಲ್ಲಿನ ಮುಚ್ಚಿಗೆ. ಕಟ್ಟಡದ ಸರಿಯಾಗಿ ಮಧ್ಯಭಾಗದಲ್ಲಿ ಉತ್ತರಕ್ಕೆ ಮುಖ ಮಾಡಿರುವ ಕಪ್ಪು ಶಿಲೆಯ ಹನುಮನ ಮೂರ್ತಿ. ಮೂಲೆಯಲ್ಲಿ ಚಕ್ರಗಳು ನೆಲಕ್ಕೆ ಹೂತಿರುವ ಒಂದು ಒರಟು ಕೆತ್ತನೆಯ ಕಲ್ಲಿನ ರಥ. ಈಶಾನ್ಯ ದಿಕ್ಕಿನಲ್ಲಿ ಒಂದು ಪುಟ್ಟ ಹೊಂಡ. ಕಿರುಬೆರಳು ಗಾತ್ರದಲ್ಲಿ ನೀರು ಈ ಹೊಂಡದಿಂದ ಹರಿದು ಗುಡ್ಡವನ್ನಿಳಿದು ಆ ಬದಿ ಇರುವ ಕೆರೆಯನ್ನು ಸೇರುತ್ತದೆ. ಈ ನೀರಿನ ಸೆಲೆ ಎಂದೂ ಬತ್ತಿದ್ದಿಲ್ಲ. ಊರಿನ ಬಾವಿಗಳು ಬತ್ತುವಂತಾದಗಲೂ ಈ ಹೊಂಡದಿಂದ ಹೀಗೇ ನೀರು ಹರಿಯುತ್ತದೆ. ರಾಮಶರದಿಂದ ನಿರ್ಮಾಣವಾದ ಕಾರಣ ಇದು ಎಂದೂ ಬತ್ತದು ಎಂದು ಅರ್ಚಕ ರಾಮಚಂದ್ರಭಟ್ಟರು ಹೇಳುತ್ತಾರೆ. ಈ ಊರಿಗೆ ಹನೂರು ಎಂಬ ಹೆಸರು ಬರಲೂ ಈ ಮೂರ್ತಿಯೇ ಕಾರಣ ಎಂಬುದು ಅವರ ನಂಬಿಕೆ. ಹನುಮನೂರು ಹನುಮೂರು ಆಗಿ ಅಲ್ಲಿಂದ ಹನೂರು ಆಗಿದೆ ಎಂಬ ಅವರ ವಿವರಣೆ ಸುಳ್ಳು ಎನ್ನುವ ಯಾವ ದಾಖಲೆಯೂ ಇಲ್ಲ. ತುಂಬ ಹಿಂದಿನಿಂದಲೂ ಈ ಗುಡಿ ಇತ್ತು. ಪೂಜೆ ಮಾತ್ರ ಇರಲಿಲ್ಲ. ಪಟೇಲರಿಗೆ ಹನುಮ ಕನಸಲ್ಲಿ ಕಂಡು ತನಗೆ ನಿತ್ಯಪೂಜೆಗೆ ವ್ಯವಸ್ಥೆ ಮಾಡದಿದ್ದರೆ ಊರಿಗೆ ಉಳಿಗಾಲವಿಲ್ಲ ಎಂದು ಹೇಳಿದ್ದರಿಂದ ತಮಗೆ ಅರ್ಧ ಎಕರೆ ಜಮೀನು ಬರೆದುಕೊಡುವ ಭರವಸೆ ಕೊಟ್ಟು, ಹನುಮಂತ ದೇವರ ಅರ್ಚನೆಗೆಂದೇ ಈ ಊರಿಗೆ ಕರೆದುತಂದರು. ಹೇಳಿದಂತೆ ತಮ್ಮ ಹೆಸರಿಗೆ ಜಮೀನು ಬರೆದುಕೊಟ್ಟ ಮಹಾನುಭಾವರು. ಇವತ್ತು ಹನುಮ ದೇವರು ಪೂಜೆ ಕಾಣುತ್ತಿರುವುದು, ತಮ್ಮ ಸಂಸಾರ ಅನ್ನ ಕಾಣುತ್ತಿರುವುದು ಪಟೇಲರ ಕೃಪೆಯಿಂದ ಎಂದು ಯಾರಿಗಾದರೂ ರಾಮಚಂದ್ರಭಟ್ಟರು ಹೇಳುವಾಗ, ಅವರ ಧ್ವನಿಯಲ್ಲಿಯೇ ಪಟೇಲರ ಬಗೆಗಿನ ಅವರ ಗೌರವ ಎದ್ದು ಕಾಣುತ್ತದೆ. ಈ ದೇವಸ್ಥಾನದ ಬಗೆಗೆ ಭಟ್ಟರು ಶ್ರಧ್ಧೆಯಿಂದ ಹೇಳುವುದು ಕೇಳಿ.

ಈ ದೇವಸ್ಥಾನವನ್ನು ಸ್ವತಃ ರಾಮನೇ ತನ್ನ ಸೇವಕ ಹಾಗೂ ಭಕ್ತ ಹನುಮನಿಗಾಗಿ ಕಟ್ಟಿಸಿದ. ಇದಕ್ಕೆ ಬೇಕಾದ ಕಲ್ಲನ್ನ ಸ್ವತಃ ಹನುಮನೇ ಎಲ್ಲಿಂದಲೋ ತಂದ. ಈ ಜಾತಿಯ ಕಲ್ಲು ಇಲ್ಲಿ ಹತ್ತಿರದಲ್ಲಿ ಎಲ್ಲಿಯಾದರೂ ಉಂಟಾ? ಹೇಳಿ ನೋಡುವಾ! ಈ ಗಾತ್ರದ ಕಲ್ಲನ್ನು ಈ ಗುಡ್ಡದ ಮೇಲೆ ತಂದು ಹೀಗೆ ಜೋಡಿಸುವುದು ಮನುಷ್ಯರಿಗೆ ಸಾಧ್ಯವಾ? ಸರಿಯಾದ ಮಾತು. ಆ ಜಾತಿಯ ಕಲ್ಲು ಔಷಧಿಗೆ ಬೇಕು ಅಂದರೂ ಸಮೀಪದಲ್ಲಿ ಎಲ್ಲೂ ಸಿಗುವುದಿಲ್ಲ. ಈ ಮಾತಿಗೆ ಉತ್ತರ ಹೇಳಲಾಗದೆ  ಅಲ್ಲ ಭಟ್ರೇ! ಆ ರಾಮ ಹೋಗಿ ಹೋಗಿ ಇಲ್ಯಾಕೆ ಅವನಿಗೆ ಗುಡಿ ಕಟ್ಟಿಸಿದ್ದು? ಅಯೋಧ್ಯೆಯ ಹತ್ತಿರವೇ ಅಲ್ವಾ ಕಟ್ಟಬೇಕಾದ್ದು? ಈ ಕೊಂಪೆ ರಾಮನಿಗೆ ಕಂಡದ್ದಾದರೂ ಹ್ಯಾಗೆ? ಎಂದು ಕೀಟಲೆ ಮಾಡುವ ಊರಿನ ಪರಮ ನಾಸ್ತಿಕ ಗೋವಿಂದನಿಗೂ ಉತ್ತರ ಉಂಟು. ರಾಮ ಸೀತಾಪಹರಣದ ಅನಂತರ ಸೀತೆಯನ್ನು ಹುಡುಕುತ್ತ ಈ ದಾರಿಯಲ್ಲಿಯೇ ಅಲ್ವಾ ಹೋಗಿದ್ದು? ಅಲ್ಲ ಎಂದು ಹೇಳಲು ಗೋವಿಂದನ ಬಳಿ ಏನೂ ಆಧಾರಗಳಿಲ್ಲ. ಭಟ್ಟರ ಈ ಮಾತುಗಳನ್ನು ಯಾರ‍್ಯಾರು ನಂಬುತ್ತಾರೋ ಗೊತ್ತಿಲ್ಲ. ಆದರೆ ಈ ದೇವಸ್ಥಾನಕ್ಕೆ, ಊರಿಗೆ ಒಂದು ಪೌರಾಣಿಕ ಅಸ್ತಿತ್ವವನ್ನೂ ಈ ಐತಿಹ್ಯದ ಮೂಲಕ ಭಟ್ಟರು ಕೊಡಿಸಿದ್ದಾರೆ. ಭಟ್ಟರಿಗಂತೂ ಇದರ ಬಗ್ಗೆ ಲವಲೇಶವೂ ಸಂಶಯವಿಲ್ಲ. ಭಟ್ಟರು ಹೇಳಿದ್ದರ ಬಗ್ಗೆ ನಂಬಿಕೆ ಇರದಿದ್ದರೂ ಊರಿನವರು ತಮ್ಮಲ್ಲಿಗೆ ಬಂದ ನೆಂಟರಿಗೆ ಇದೇ ಕತೆಯನ್ನು ಇನ್ನೂ ರಸವತ್ತಾಗಿ ಹೇಳುತ್ತಾರೆ. ಗುಡ್ಡ ಹತ್ತಿಸುತ್ತಾರೆ. ಕೆಲವರು ಭಕ್ತಿಯಿಂದಲೂ, ಕೆಲವರು ದಾಕ್ಷಿಣ್ಣ್ಯದಿಂದಲೂ ದೇವರಿಗೆ ನಮಸ್ಕರಿಸುತ್ತಾರೆ.

ಇದೇ ಶ್ರಧ್ಧೆಯಿಂದ ಭಟ್ಟರು ನಿತ್ಯಪೂಜೆ ಮಾಡುತ್ತಾರೆ. ಬೆಳಗ್ಗೆ ಐದಕ್ಕೇ ಎದ್ದು ನಿತ್ಯವಿಧಿಗಳನ್ನು ಮುಗಿಸಿ, ಮಂತ್ರ ಹೇಳುತ್ತಾ ತಣ್ಣೀರಲ್ಲಿ ಮಿಂದು ,ಮಡಿಯುಟ್ಟು ಹೂ, ತುಳಸಿ, ದೂರ್ವೆ ಕೊಯ್ದು, ಮನೆಯ ದೇವರ ಪೂಜೆ ಮುಗಿಸಿ, ಒಂದು ದೊಡ್ಡ ಹರಿವಾಣದಲ್ಲಿ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಒಪ್ಪವಾಗಿ ಜೋಡಿಸಿಕೊಂಡು ದೇವಸ್ಥಾನದತ್ತ ಹೊರಡುತ್ತಾರೆ. ಈಗ ಸರಿಯಾಗಿ ಏಳು ಗಂಟೆ. ಸೂರ್ಯ ಹುಟ್ಟುವುದು ತುಸು ಹಿಂದು ಮುಂದಾಗಬಹುದು, ಭಟ್ಟರ ಟೈಮ್ ತಪ್ಪದು ಎಂಬುದು ಜನಜನಿತ ನುಡಿ. ಭಟ್ಟರು ಹೋಗುವುದರೊಳಗೆ ಗೌರಮ್ಮ ಪ್ರಾಂಗಣವನ್ನು ಗುಡಿಸಿ, ಗುಡಿಯ ಸುತ್ತಲೂ ಇರುವ ಗಿಡಗಳಿಗೆ ಅಲ್ಲಿಯೇ ಇರುವ ಹೊಂಡದಿಂದ ಒಂದೊಂದೇ ಚೆಂಬು ನೀರು ತಂದು ಹಾಕಿ, ಆ ಗಿಡಗಳಲ್ಲಿ ಬಿಟ್ಟಿರುವ ಹೂ ಕೊಯ್ದು ಇಟ್ಟಿರುವಳು. ಗೌರಮ್ಮ ವಿಧವೆ. ಅವಳು ಯಾವಾಗಿಂದ ವಿಧವೆ ಎಂಬುದು ಬೇರೆಯವರಿಗೆ ಹಾಗಿರಲಿ, ಸ್ವತಃ ಆಕೆಗೂ ತಿಳಿದಿಲ್ಲವೇನೋ. ಸದಾ ಕೆಂಪು ಸೀರೆ ಸುತ್ತಿ ಅದನ್ನೇ ಬೋಳು ತಲೆಯ ಮೇಲೆ ಹೊದ್ದಿರುವ ರೂಪವಲ್ಲದೆ, ಬೇರೆಯದಾದ ಒಂದು ರೂಪ ಅವಳಿಗೆ ಇದ್ದಿರಬಹುದಾದ ಕಲ್ಪನೆಯೂ ಯಾರಿಗೂ ಇರಲಿಲ್ಲ. ತೀರಾ ಹಿರಿತಲೆಗಳನ್ನು ಕೇಳಿದರೆ, ಅವಳ ಮದುವೆಯ ದಿನ ಭರ್ಜರಿ ಮಳೆ ಬಂದಿತ್ತು, ಮಾರನೆಯ ದಿನವೇ ಅವಳ ಗಂಡ ಹಾವು ಕಚ್ಚಿ ಸತ್ತುಹೋದ, ಈಕೆ ಮತ್ತೆ ತವರಿಗೇ ಬಂದಳು, ಯಾವ ಜನ್ಮದ ಶಾಪವೋ ಎಂಬಷ್ಟು ವಿವರಗಳು ಸಿಗುತ್ತವೆ. ಅವಳು ಹೇಗಿದ್ದಳು ಎಂಬುದರ ಬಗ್ಗೆ ನೆನಪನ್ನು ಎಷ್ಟು ಕೆರೆದುಕೊಂಡರೂ ಅವರಿಗೂ ಗೊತ್ತಿಲ್ಲ. ಅವತ್ತಿಂದಲೂ ಗುಡಿಯ ಪ್ರಾಂಗಣ ಗುಡಿಸುವ, ಗಿಡಕ್ಕೆ ನೀರು ಹಾಕುವ ಕೆಲಸ ಅವಳಾಗಿಯೇ ವಹಿಸಿಕೊಂಡಿದ್ದಳು.

ಊರಿನ ಜನವಲ್ಲದೆ ಈ ದೇವಸ್ಥಾನಕ್ಕೆ ಬೇರೆಯವರು ಬಂದದ್ದಿಲ್ಲ. ಭಟ್ಟರ ಬಾಯಿಯಿಂದ ಬರುವ ಐತಿಹ್ಯ ಬಿಟ್ಟರೆ ಬೇರೇನೂ ವಿಶೇಷತೆಯೂ ಈ ಗುಡಿಯಲ್ಲಿ ಯಾರಿಗೂ ಕಾಣುವುದಿಲ್ಲ. ಭಟ್ಟರು ಮತ್ತು ಗೌರಮ್ಮನನ್ನು ಬಿಟ್ಟರೆ ಗುಡಿಗೆ ನಿತ್ಯ ಬಂದು ಹೋಗುವವರು ಯಾರೂ ಇಲ್ಲ. ಊರಿನ ಜನರಿಗೆ ಹಾಗಂತ ಭಕ್ತಿಯಿಲ್ಲ ಅಂತಲ್ಲ. ದಾರಿಯಲ್ಲಿ ಹೋಗುವವರು ಮೆಟ್ಟಿಲು ಬುಡದಲ್ಲಿ ನಿಂತು ಚಪ್ಪಲಿ ಕಳಚಿ, ಕೈ ಮುಗಿಯುವಾಗ ಭಕ್ತಿ ಭಾವ ಮುಖದಲ್ಲಿ ಕಂಡೇ ಕಾಣುತ್ತದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗುಡ್ಡವನ್ನೇರಿ, ಗುಡಿಗೆ ಪ್ರದಕ್ಷಿಣೆ ಹಾಕಿ, ತೆಂಗಿನಕಾಯಿ ನೈವೇದ್ಯ ಮಾಡಿಸಿಕೊಂಡು ಹೋಗುವ ಸಂಪ್ರದಾಯ ಇದ್ದೇ ಇದೆ. ಆ ದಿನ ಭಟ್ಟರಿಗೆ ದಕ್ಷಿಣೆ ತುಸು ಜಾಸ್ತಿ ಸಿಗುತ್ತದೆ. ಅವರೇನೂ ಅದಕ್ಕಾಗಿ ಕಾಯುವವರಲ್ಲ. ಅವರ ಶ್ರಧ್ಧೆ ಯಾವಾಗಲೂ ಒಂದೇ ಮಟ್ಟದ್ದು. ಪರೀಕ್ಷೆಯ ಸಂದರ್ಭದಲ್ಲಿ ಹುಡುಗ ಹುಡುಗಿಯರ ಭಕ್ತಿ ಜಾಸ್ತಿಯಾಗುತ್ತದೆ. ಅವರೇನೂ ದಕ್ಷಿಣೆ ಕೊಡುವವರಲ್ಲವಾದರೂ ಭಟ್ಟರು ತುಂಬ ಶ್ರಧ್ಧೆಯಿಂದ ಪೂಜೆಮಾಡಿ, ಬಾಯಿ ತುಂಬ ಆಶೀರ್ವಾದ ಮಾಡುತ್ತಾರೆ. ಅವರ ಆಶೀರ್ವಾದಕ್ಕೆ ವರಬಲವೇನಾದರೂ ಇದ್ದಿದ್ದರೆ ಈ ಊರಲ್ಲಿ ಯಾರೂ ಫೇಲೇ ಆಗುತ್ತಿರಲಿಲ್ಲ. ಹಾಗೆ ಫೇಲಾದವರಿಗೂ ಅವರು ಸಾಂತ್ವನ ಹೇಳುತ್ತಾರೆ. ರಾಮನಂಥ ದೇವರೇ ಅನುಭವಿಸಿದ ಕಷ್ಟಗಳನ್ನು ವಿವರಿಸಿ ಉತ್ಸಾಹ ತುಂಬುತ್ತಾರೆ. ಇವರ ಆಶೀರ್ವಾದದ ಫಲವೋ, ದೇವರಿಗೆ ಪೂಜೆ ಮಾಡಿಸಿದ ಫಲವೋ, ಸ್ವಂತ ಪರಿಶ್ರಮದ ಫಲವೋ ಈ ಊರಿನ ಕೆಲವರು ಓದಿ ಬೆಂಗಳೂರು, ಮೈಸೂರು, ಅಮೇರಿಕಗಳಲ್ಲಿ ಒಳ್ಳೆಯ ನೌಕರಿ ಸೇರಿದ್ದಾರೆ. ಅವರು ಆಗೀಗ ಊರಿಗೆ ಬಂದಾಗ ಈ ಗುಡ್ಡವನ್ನೇರುತ್ತಾರೆ. ಮೈ ಸವರುವ ತಣ್ಣನೆಯ ಗಾಳಿಗೆ, ಕಣ್ತುಂಬುವ ಹಸಿರಿಗೆ ಒಡ್ಡಿಕೊಳ್ಳುತ್ತಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಭಟ್ಟರನ್ನು ಕಂಡು ಮುದ್ದಾಮಾಗಿ ಒಂದು ಪೂಜೆ ಮಾಡಿಸುತ್ತಾರೆ. ತಮ್ಮ ಆಢ್ಯತೆ ಪ್ರದರ್ಶಿಸಲು ನೂರರ ನೋಟನ್ನೆ ದಕ್ಷಿಣೆಗೆ ಹಾಕುವುದೂ ಉಂಟು. ಒಮ್ಮೆ ಅಮೆರಿಕದಿಂದ ಬಂದ ಹರಿ ಐನೂರರ ನೋಟು ಹಾಕಿದಾಗ, ಭಟ್ಟರು ಅಯ್ಯೋ! ಇದು ನನ್ನ ಯೋಗ್ಯತೆಗೆ ಮೀರಿದ್ದು ಮಾರಾಯ ಎಂದು ಹುಂಡಿಗೆ ಹಾಕಿದ್ದರು. ಹಾಗೆ ಯಾರಾದರೂ ಬಲವಾದ ದಕ್ಷಿಣೆ ಕೊಟ್ಟಾಗ ಗುಡ್ಡದಿಂದ ಮೇಲೇರುವ ಮೆಟ್ಟಿಲನ್ನ ಸರಿಯಾಗಿ ಕಟ್ಟಿದ್ದರೆ ಒಳ್ಳೆಯದು ಎಂಬ ಮಾತನ್ನು ಆಡುತ್ತಾರೆ. ಕೈ ತುಂಬ ಸಂಬಳ ಎಣಿಸುವ ಯಾರಾದರೂ ಮನಸ್ಸು ಮಾಡಿಯಾರು ಎಂಬುದು ಭಟ್ಟರ ಆಸೆ. ದೂರದೂರಲ್ಲಿ ಇರುವ ಅವರಿಗೆ ಈ ಗುಡಿ ಇದ್ದರೆಷ್ಟು ಹೋದರೆಷ್ಟು? ಊರೇ ಹೋದರೂ ಅವರಿಗೆ ಚಿಂತೆಯಾಗುವುದಿಲ್ಲ. ಇನ್ನು,  ಮನೆಯ ಮೆಟ್ಟಿಲನ್ನೆ ರಿಪೇರಿ ಮಾಡಲು ದಿನ ಮುಂದೂಡುವ ಈ ಊರಿನ ಜನರಿಂದ ಅದು ಎಂದು ಆಗುತ್ತದೋ ಆಂಜನೇಯನೇ ಬಲ್ಲ.

ವರ್ಷಕ್ಕೊಮ್ಮೆ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಊರಿನ ಜನರೆಲ್ಲ ಇಂತಿಷ್ಟು ಎಂದು ವರಾಡ ಕೊಡುತ್ತಾರೆ. ಎಲ್ಲ ಜಾತಿಯವರೂ ಸೇರುತ್ತಾರೆ. ಗುಡಿಯ ಸುತ್ತಲಿನ ಜಾಗವನ್ನು ಸಗಣಿ ಹಾಕಿ ಸಾರಿಸಿ, ಗುಡಿಯನ್ನು, ರಥವನ್ನು ತೊಳೆದು ತೋರಣ ಬಿಗಿಯುತ್ತಾರೆ. ರಥ ಎಳೆಯುವ ಸಂಪ್ರದಾಯ ಇದೆ. ಹುಗಿದು ಹೋಗಿರುವ ಆ ಕಲ್ಲಿನ ರಥವನ್ನು ಎಳೆಯಲು ಸಾಧ್ಯವುಂಟೇ? ರಥದಲ್ಲಿ ಉತ್ಸವಮೂರ್ತಿಯನ್ನು ಕೂರಿಸಿ, ರಥಕ್ಕೆ ಹಗ್ಗ ಕಟ್ಟಿ ಎಳೆಯುವ ಶಾಸ್ತ್ರ ಪೂರೈಸುತ್ತಾರೆ. ಆಗ ಜೈ ಹನುಮಾನ್ ಕೀ, ಜೈ ರಾಮಚಂದ್ರಕೀ ಎಂಬೆಲ್ಲ ಭಕ್ತಿಭರಿತ ಉದ್ಗಾರ ಕೇಳಿಬರುತ್ತದೆ. ಕೆಲವು ಹುಡುಗರು ಉತ್ಸಾಹದಲ್ಲಿ ಜೈ ಮಹಾತ್ಮಾ ಗಾಂಧೀಕೀ ಎಂದೂ ಕೂಗಿ ದೊಡ್ಡವರಿಂದ ಬೈಸಿಕೊಳ್ಳುತ್ತಾರೆ. ಅನಂತರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತು ಗುಡಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆಮೇಲೆ ಶಂಖ, ಜಾಗಟೆಗಳ ಕಿವಿಯೊಡೆಯುವ ಸದ್ದಿನ ಜತೆಗೆ ಮಂಗಳಾರತಿ. ಪ್ರಸಾದ ಸ್ವೀಕರಿಸಿದ ಅನಂತರ ಊಟ. ಲಿಂಗ, ಜಾತಿ, ವರ್ಗಕ್ಕನುಗುಣವಾಗಿ ಪಂಕ್ತಿ. ಯಾವುದೇ ತಕರಾರಿಲ್ಲ. ಈ ದಿನ ಇಡೀ ಊರಿಗೆ ಊರೇ ಇಲ್ಲಿ ಸೇರಿರುತ್ತದೆ. ಗುಡ್ಡ ಏರಲಾರದ ಕೆಲವು ಹಳೆ ತಲೆಗಳು ಮಾತ್ರ ಮನೆಯಲ್ಲಿಯೇ ಕೂರುತ್ತಾರೆ. ಮಹಾಮಂಗಳಾರತಿಯ ಸಮಯದ ಶಬ್ದ ಕೇಳಿ ಕೂತಲ್ಲೇ ಭಕ್ತಿಯಿಂದ ನಮಸ್ಕರಿಸುತ್ತಾರೆ. ಊಟದ ಪ್ರಸಾದವಂತೂ ಅವರಿಗಾಗಿಯೇ ಗುಡಿಯಿಂದ ಬರುತ್ತದೆ.
$$$$$$$$$$$$$$

ಎಷ್ಟೋ ವರ್ಷದಿಂದ ಇದನ್ನು ನೋಡುತ್ತ, ಮಾಡುತ್ತ ಬಂದಿದ್ದ ಭಟ್ಟರಿಗೆ ಈ ಬಾರಿಯ ರಥೋತ್ಸವದ ದಿನ, ಮರುದಿನ ತುಸು ಜಾಸ್ತಿಯೇ ಸುಸ್ತಾದಂತೆ    ಅನಿಸಿತು. ಇತ್ತೀಚೆಗೆ ಮುಂಚಿನಂತೆ ಮೆಟ್ಟಿಲು ಹತ್ತಲಾಗುವುದಿಲ್ಲ. ಉಸಿರು ಹಿಡಿಯುತ್ತದೆ. ಬಳಲಿಕೆಯಾಗಿ ಹತ್ತು ಗಳಿಗೆ ಕೂರುವ ಅನ್ನಿಸುತ್ತದೆ. ಕೈಯಲ್ಲಿ ಹಿಡಿದ ಹರಿವಾಣ ಭಾರ ಎನಿಸುತ್ತದೆ. ತಮಗೂ ಎಪ್ಪತ್ತರ ಸಮೀಪ ಬಂತು. ಇನ್ನು ಈ ಪೂಜಾ ಕಾರ್ಯವನ್ನು ಮಗ ಶಂಭುವಿಗೆ ವಹಿಸುವುದು ಸೂಕ್ತ. ಈ ಬಾರಿ ಮಗ ಊರಿಗೆ ಬಂದಾಗ ಈ ಬಗ್ಗೆ ಮಾತನಾಡಬೇಕು. ಹನುಮ ದೇವರಿಗೆ ನಡೆವ ಪೂಜೆಯಲ್ಲಿ ವ್ಯತ್ಯಯ ಆಗಬಾರದಲ್ಲ. ಅವ ಪೂಜೆ ಮಾಡಿದರೂ ತಾವು ದೇವರ ಸನ್ನಿಧಿಗೆ ಹೋಗಬಾರದು ಎಂದೇನೂ ಇಲ್ಲವಲ್ಲ ಎಂದು ತೀರ್ಮಾನಿಸಿಕೊಂಡರು.

ಶಂಭು ಚುರುಕು ಹುಡುಗ. ಸಿದ್ದಾಪುರದ ಸಂಸ್ಕ?ತ ಶಾಲೆಯಲ್ಲಿ ವೇದ, ಪ್ರಯೋಗಗಳನ್ನು ಶ್ರಧ್ಧೆಯಿಂದ ಕಲಿತಿದ್ದ. ತನ್ನ ಜೊತೆ ಆಡಿ ಬೆಳೆದ ಊರಿನ ಹುಡುಗರು ಇಂಗ್ಲಿಷ್ ಕಲಿತು, ಪಟ್ಟಣ ಸೇರಿ ನೌಕರಿಯಲ್ಲಿ ದುಡ್ಡು ಬಾಚುವುದು ಕಂಡು ಒಮ್ಮೊಮ್ಮೆ ಖಿನ್ನನಾಗುತ್ತಿದ್ದ. ತನ್ನನ್ನು ಪೇಟೆಯ ಶಾಲೆಗೆ ಸೇರಿಸದೆ ಇಲ್ಲಿ ತಂದು ಬಿಟ್ಟಿದ್ದಕ್ಕೆ ತುಂಬ ಬೇಸರಪಟ್ಟಿದ್ದ. ತಾನು ಕಲಿತ ಶಾಲೆಯಲ್ಲಿಯೇ ಈಗ ಪಾಠ ಹೇಳುತ್ತ, ಶಾರದಾಂಬೆಯ ಪೂಜೆ ಮಾಡುತ್ತ ತನಗೂ ಒಂದಲ್ಲ ಒಂದು ದಿನ ಒಳ್ಳೆಯ ದಿನಗಳು ಬರುತ್ತವೆ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಳ್ಳುತ್ತಿದ್ದ. ತಾನು ಬೆಂಗಳೂರು ಸೇರಿದರೆ ಹೇಗೆ ಎಂದು ಬಹಳ ಬಾರಿ ಯೋಚಿಸಿದ್ದ. ಕಳೆದ ಬಾರಿ ಹರಿ ಅಮೆರಿಕದಿಂದ ಊರಿಗೆ ಬಂದಿದ್ದಾಗ, ಇಬ್ಬರೂ ಹನುಮನ ಗುಡಿಯ ಬಳಿ ಕೂತು ದಿಕ್ಕು ದೆಸೆಯಿಲ್ಲದೆ ಹರಟುತ್ತಿರುವಾಗ, ಇದ್ದಕ್ಕಿದ್ದಂತೆ ಹರಿ ಹೇಳಿದ ಮಾತು ತಲೆಯಲ್ಲಿ ಗುಂಗಿಹುಳುವಾಗಿತ್ತು. ಈ ಕೊಂಪೆಯಲ್ಲಿ ಏನಿದೆ ಅಂತ ಇರ‍್ತೀಯೋ? ನಿನಗೆ ತಿಳಿದಿರುವದರ ಕಾಲು ಭಾಗವೂ ತಿಳಿದಿರದ ಎಷ್ಟು ಜನ ಬೆಂಗಳೂರಲ್ಲಿ ಜುಂ ಅಂತ ಇದಾರೆ ಗೊತ್ತಾ? ನೀನಿಲ್ಲಿ ಒಂದು ವರ್ಷ ದುಡಿವ ದುಡ್ಡು ಅಲ್ಲಿ ಒಂದು ದಿನದಲ್ಲಿ ಆರತಿ ತಟ್ಟೆಗೆ ಬೀಳುತ್ತೆ. ಇನ್ನು ದೇವರ ವಿಷಯ_ಎಲ್ಲಾ ಕಡೆ ಇರೋ ದೇವರೂ ಒಂದೇ ಅಲ್ವಾ? ಇದೇ ಪೂಜೆ ಅಲ್ಲಿ ಮಾಡು ಅಷ್ಟೆ. ಈ ಬಾರಿ ಊರಿಗೆ ಹೋದಾಗ ಅಪ್ಪಯ್ಯನ ಬಳಿ ಈ ವಿಷಯ ಪ್ರಸ್ತಾಪ ಮಾಡಬೇಕು. ತೀರ್ಮಾನ ದಿನದಿನಕ್ಕೂ ಗಟ್ಟಿಯಾಗುತ್ತ ಬಂತು.
#######
ಹನುಮನಿಗೆ ನಮಸ್ಕರಿಸಿ, ಪಶ್ಚಿಮಕ್ಕೆ ಮುಖ ಮಾಡಿ ಮುಳುಗುವ ಸೂರ್ಯನ ಬದಲಾಗುವ ಬಣ್ಣ ನೋಡುತ್ತ ಕುಳಿತ ಆ ಕ್ಷಣದಲ್ಲಿ ಈ ದಿನ ಅಪ್ಪಯ್ಯನಿಗೆ ತನ್ನ ಯೋಜನೆ ತಿಳಿಸುವುದೇ ಸರಿ ಎಂಬ ನಿರ್ಧಾರ ಮಾಡಿ ಶಂಭು ಮೆಟ್ಟಿಲಿಳಿಯತೊಡಗಿದ. ತಾನು ಈ ಊರಲ್ಲಿ ಸಾವಿರ ವರ್ಷ ಪೂಜೆ ಮಾಡುತ್ತ ಕೂತರೂ ಉಧ್ಧಾರವಾಗುವುದಿಲ್ಲ. ತನ್ನ ಉಧ್ಧಾರ ಊರು ಬಿಡುವುದರಿಂದ ಮಾತ್ರ. ತನ್ನ ಈ ನಿರ್ಧಾರದಿಂದ ಶಂಭುವಿಗೆ ವಿಚಿತ್ರ ಉಮೇದು ಬಂದಿತ್ತು. ಆತ ಓಡುತ್ತಲೇ ಮೆಟ್ಟಿಲಿಳಿದ. ಅಪ್ಪನನ್ನು ಒಪ್ಪಿಸಿ ಬೆಂಗಳೂರಿಗೆ ಹೋಗಬೇಕೆಂಬ ನಿರ್ಧಾರ ಗುಡ್ಡದ ಬುಡ ಮುಟ್ಟುವ ವೇಳೆಗೆ ಅಪ್ಪ ಒಪ್ಪದಿದ್ದರೂ ಹೋಗುವುದೇ ಸರಿ ಎಂದು ಬದಲಾಗಿಬಿಟ್ಟಿತ್ತು.

ರಾಮಚಂದ್ರಭಟ್ಟರು ಹೆಂಡತಿ ತೀರಿಕೊಂಡ ದಿನದಿಂದ ರಾತ್ರಿಯ ಊಟ ಬಿಟ್ಟುಬಿಟ್ಟಿದ್ದಾರೆ. ಬಾಳೆಹಣ್ಣು ಇದ್ದರೆ ಎರಡು ಹಣ್ಣು ತಿಂದು ಒಂದು ಲೋಟ ಹಾಲು ಕುಡಿಯುತ್ತಾರೆ. ಹಣ್ಣಿರದಿದ್ದರೆ ಬರಿಯ ಹಾಲು ಮಾತ್ರ. ಹಾಗಾಗಿ ರಾತ್ರಿ ಅವರ ಮನೆಯಲ್ಲಿ ಒಲೆ ಉರಿಯುವುದು ಹಾಲು ಕಾಯಿಸಲು ಮಾತ್ರ. ಶಂಭು ಬಂದಾಗ, ಅವನು ರಾತ್ರಿ ಇರುತ್ತಾನೆ ಎಂದಾದರೆ ಮಧ್ಯಾಹ್ನವೇ ತುಸು ಹೆಚ್ಚು ಅನ್ನ ತಯಾರಾಗುತ್ತದೆ. ಶಂಭು ಹಾಲು ಕಾಯಿಸಿ ಅಪ್ಪನಿಗೆ ಕೊಟ್ಟು ಅನಂತರ ತಾನೇ ಬಡಿಸಿಕೊಂಡು ಊಟ ಮುಗಿಸಿ, ನೆಲ ಒರೆಸಿ, ಪಾತ್ರೆ ತೊಳೆದು, ಶಂಕರಮಠದಿಂದ ತಂದ ವೇದಕ್ಕೆ ಸಂಬಂಧಿಸಿದ ಪುಸ್ತಕ ಓದಲು ಕೂರುತ್ತಾನೆ. ರಾಮಚಂದ್ರಭಟ್ಟರು ಜಗಲಿಯಲ್ಲಿ ಕೂತು ಏನಾದರೂ ಶ್ಲೋಕ ಪಠಿಸುತ್ತಾರೆ. ಶಂಭು ತೊಳೆದ ಪಾತ್ರೆ ಜೋಡಿಸಿಡುವ ವೇಳೆ ಒಳಗೆ ಬಂದರೆ ಶಂಭುವಿನ ಬಳಿ ಮಾತನಾಡುವುದಿದೆ ಎಂದರ್ಥ. ಈ ದಿನ ಅವರು ಹಾಗೆ ಒಳಬಂದು ಚಾಪೆ ಹಾಸಿ ಕೂತರು. ಹ್ಯಾಗೆ ತನ್ನ ತೀರ್ಮಾನದ ಸುದ್ದಿ ಎತ್ತುವುದು ಎಂದು ಒಳಗೊಳಗೇ ಯೋಚಿಸುತ್ತಿದ್ದ ಶಂಭುವಿಗೆ ದಾರಿ ಕಂಡಿತು. ಯಥಾಪ್ರಕಾರ ತನ್ನ ಮದುವೆಯ ಸುದ್ದಿ ಪ್ರಸ್ತಾಪ ಮಾಡಬಹುದು. ಮಾಣಿ, ನನಗೂ ವಯಸ್ಸಾಯಿತು. ನಿನ್ನ ವಯಸ್ಸಿನ ಹರಿ, ಶ್ರೀಪಾದ ಅವರಿಗೆ ಮದುವೆಯಾಗಿದೆ. ಒಳ್ಳೊಳ್ಳೆ ಜಾತಕ ಬರ್ತಿವೆ. ಮಾಡ್ಕೋತೀಯಾ? ಈ ಬಾರಿ ಹೀಗೆ ಹೇಳಿದ ಕೂಡಲೇ ತನ್ನ ಯೋಜನೆ ಹೇಳಿಬಿಡುವುದು. ಶಂಭು ಈ ಬಾರಿ ಅಪ್ಪನ ಮಾತಿಗಾಗಿ ತವಕದಿಂದ ಕಾದ. ತಾನು ಹೇಳಬೇಕೆಂದುಕೊಂಡಿದ್ದನ್ನು ಮನಸ್ಸಲ್ಲೇ ಪಠಿಸಿಕೊಂಡ.
ನನಗೂ ವರ್ಷವಾಯಿತು. ಮುಂಚಿನ ಕಸುವು ಮೈಗಿಲ್ಲ. ಪೂಜೆಗೆ ಆ ಗುಡ್ಡ ಹತ್ತುವುದು ದಿನದಿನಕ್ಕೂ ತ್ರಾಸಾಗುತ್ತೆ. ಇಷ್ಟು ವರ್ಷ ದೇವರು ನಡೆಸಿದ. ಇನ್ನು ನೀನು ವಹಿಸಿಕೋಬೇಕು. ಮಠ ಬಿಟ್ಟು ಬಾ. ನಿನಗೆ ಮನಸ್ಸಿದ್ದರೆ ಮದುವೆ ಮಾಡಿಕೋ. ನಿನ್ನಿಷ್ಟ. ಅದಕ್ಕೆ ನನ್ನ ಒತ್ತಾಯವಿಲ್ಲ. ಹಣೇಲಿ ಬರೆದಾಗ ಆಗುತ್ತೆ. ಇವಿಷ್ಟನ್ನು ತಡೆತಡೆದು ಅಪ್ಪ ಹೇಳುವಾಗ ಅವನ ದನಿ ನಡುಗುತ್ತಿತ್ತೇ? ಇಷ್ಟು ವರ್ಷ ಇದೇ ಜೀವನವೆಂಬಂತೆ ಮಾಡುತ್ತಿದ್ದ ಪೂಜೆ ಇನ್ನು ಮಾಡಲಾಗುವುದಿಲ್ಲ ಎಂಬ ಕೊರಗೇ? ನಿನ್ನೆಯಿಂದ ತಯಾರಾಗಿಸಿಕೊಂಡಿದ್ದ ಮಾತುಗಳನ್ನು ಈಗ ಆಡುವುದು ಸರಿಯೇ? ಮದುವೆಯ ಪ್ರಸ್ತಾಪ ಮಾತ್ರವಾಗಿದ್ದರೆ ಸುಲಭವಾಗಿ ಹೇಳಿಬಿಡಬಹುದಿತ್ತು. ಈಗ? ಶಂಭು ಮೌನಿಯಾದ. ವಿಚಾರಮಾಡಿ ನಾಳೆ ಹೇಳು. ಮುಂದಾದರೂ ಈ ಪೂಜೆಯ ಜವಾಬ್ದಾರಿ ನಿಂದೇ ತಾನೇ.ಕೃಷ್ಣ, ಗೋವಿಂದ ಎನ್ನುತ್ತಾ ರಾಮಚಂದ್ರಭಟ್ಟರು ಎದ್ದು ಜಗಲಿಯಲ್ಲಿ ಹಾಸಿಕೊಂಡ ಚಾಪೆಯ ಮೇಲೆ ಮಲಗಿದರು. ದೀಪವಾರಿಸಿ ಶಂಭು ಕವಿದ ಕತ್ತಲಲ್ಲಿ ಮುಂದಿನ ದಾರಿ ಹುಡುಕುತ್ತ ಕೂತೇ ಇದ್ದ.

ಇವತ್ತು ನೀನೇ ಪೂಜೆ ಮಾಡಿ ಬರ್ತಿಯೇನೋ? ಎಂದು ಬೆಳಗ್ಗೆ ಅಪ್ಪ ಕೇಳಿದಾಗ ಶಂಭುವಿನ ಹಿಂದಿನ ರಾತ್ರಿಯ ಗೊಂದಲ ಹಾಗೇ ಇತ್ತು. ಎಷ್ಟು ದಿನ ಆಗುತ್ತೋ ಅಷ್ಟು ದಿನ ಮಾಡಪ್ಪ. ನಿನಗೂ ತುಸು ನೆಮ್ಮದಿ.  ಅದೂ ಸರಿ ಅನ್ನು. ಅನ್ನುತ್ತ ರಾಮಚಂದ್ರಭಟ್ಟರು ಪೂಜಾ ಸಾಮಗ್ರಿ ಹಿಡಿದು ಗುಡಿಯತ್ತ ಮಂತ್ರ ಪಠಿಸುತ್ತ ನಡೆದರು. ನಿಧಾನ ಮೆಟ್ಟಿಲು ಹತ್ತಲು ಶುರುಮಾಡಿದರು. ದಿನಕ್ಕಿಂತ ಹೆಚ್ಚು ಬಳಲಿಕೆಯಾದಂತನಿಸಿ ಕೂತರು. ನಾಳೆಯಿಂದಲೇ ಶಂಭುವಿಗೆ ಪೂಜೆ ವಹಿಸಿಬಿಡುವುದು ವಾಸಿ. ಇಲ್ಲಿಯೇ ಇದ್ದರೆ ತಾನು ಮದುವೆಯ ಪ್ರಸ್ತಾಪ ಪದೇಪದೇ ಮಾಡಬಹುದು ಎಂಬ ಭಯ ಅವನಿಗೆ ಇರಬಹುದು. ಅವನಿಷ್ಟದಂತೇ ಆಗಲಿ. ಅಭ್ಯಾಸಬಲದಿಂದ ಮಂತ್ರ ಪಠಿಸುತ್ತಿದ್ದರೂ ಮನಸ್ಸು ಎಂದಿನಂತೆ ಮಂತ್ರದ ಜೊತೆಗಿರಲಿಲ್ಲ. ಹೀಗೇ ಕೂತರೆ ಪೂಜೆಗೆ ತಡವಾಗುತ್ತೆ ಎಂದು ಏದುಸಿರು ಬಿಡುತ್ತಾ ಗುಡಿ ತಲುಪಿದರು. ತನ್ನ ಕೆಲಸ ಮುಗಿಸಿ ಕೂತಿದ್ದ ಗೌರಮ್ಮ ಯಾಕೋ ಇವತ್ತು ಭಾಳ ತಡ ಎಂದಳು. ವಯಸ್ಸಾಯಿತಲ್ಲ. ಗುಡ್ಡ ಹತ್ತುವುದು ತುಸು ನಿಧಾನವಾಗುತ್ತೆ. ಏನೋ! ನಿನ್ನೆಗಿಂತ ಇವತ್ತು ವಯಸ್ಸು ಎಷ್ಟು ವರ್ಷ ಹೆಚ್ಚಾಯಿತೋ? ಅವಳ ಮಾತಿಗೆ ಏನೂ ಉತ್ತರಿಸದೆ ಹೊಂಡದಿಂದ ನೀರು ಮಗೆದು ಕೈಕಾಲುಮುಖ ತೊಳೆದು ಪೂಜೆ ಮುಗಿಸಿ ಗೌರಮ್ಮನಿಗೆ ಪ್ರಸಾದ ಕೊಟ್ಟು ಕಂಭ ಒರಗಿ ಕೂತರು. ಪ್ರತಿದಿನ ಪೂಜೆ ಮುಗಿಸಿ ಹೀಗೆ ತುಸು ಹೊತ್ತು ಕೂರುವುದು ಅವರ ಅಭ್ಯಾಸ. ಗೌರಮ್ಮ ಕಾಯುತ್ತಾಳೆ. ಅನಂತರ ಇಬ್ಬರೂ ಧರ್ಮಕರ್ಮಗಳ ಬಗ್ಗೆ ಮಾತಾಡುತ್ತಾ ಗುಡ್ಡ ಇಳಿದು ಮನೆ ಸೇರುತ್ತಾರೆ. ಈ ದಿನವೂ ಗೌರಮ್ಮ ಭಟ್ಟರು ಹೊರಡಲಿ ಎಂದು ಮಟ್ಟಿಲ ಮೇಲೆ ಕೂತು ಕಾದಳು. ಎರಡೂ ಬದಿಗೂ ಹಸಿರು ಹೊದ್ದ ಬೆಟ್ಟ. ಬೈತಲೆಯಂತೆ ಕೆಂಪು ಮಣ್ಣಿನ ಬೀದಿ. ಚಂಡೆ ತೂಗಿಸುವ ಅಡಿಕೆಯ ಮರಗಳು. ಪ್ರತಿಬಾರಿ ಅಲ್ಲಿ ಕೂತಾಗಲೂ ಅವಳು ಪರವಶಳಾಗುತ್ತಾಳೆ. ಬದುಕಿನಲ್ಲಿ ತಾನು ಕಳೆದುಕೊಂಡ ಹಸಿರನ್ನು ಇಲ್ಲಿ ಮರಳಿ ಪಡೆಯಲು ಯತ್ನಿಸುವಂತೆ ಗೌರಮ್ಮ ಅವನ್ನೇ ನೋಡುತ್ತ ಕೂರುತ್ತಾಳೆ. ಬೋಳು ನೆತ್ತಿಗೆ ಹೊದ್ದ ಕೆಂಪು ಸೀರೆಯನ್ನು ದಾಟಿ ಸೂರ್ಯನ ಬಿಸಿಲು ನೆತ್ತಿಯನ್ನು ಕಾಯಿಸತೊಡಗಿದಾಗ ಗೌರಮ್ಮ ಈ ಲೋಕಕ್ಕೆ ಬಂದಳು. ನೋಡಿದರೆ ಇನ್ನೂ ಭಟ್ಟರು ಅದೇ ಭಂಗಿಯಲ್ಲಿ ಕಂಭ ಒರಗಿ ಕೂತೇ ಇದ್ದಾರೆ. ಇವತ್ತು ಮನೆಗೆ ಹೋಗುವ ವಿಚಾರ ಇಲ್ವಾ? ಏಳು! ಹೋಗುವಾ ಎಂದು ಎದ್ದು ನಿಂತಳು. ಅದೇ ಮೌನದಲ್ಲಿ ಭಟ್ಟರು ದೇವರನ್ನೇ ನೋಡುತ್ತಿದ್ದರು. ಇವಳ ಮಾತಿಗೆ ಏನೂ ಪ್ರತಿಕ್ರಿಯೆ ಬರಲಿಲ್ಲ. ಆ ಕಲ್ಲಿನ ಕಂಭದಿಂದ ಮೂಡಿದ ಮೂರ್ತಿಯಂತೆ ಕಂಡರು. ಗೌರಮ್ಮನಿಗೆ ಏನೋ ಅನುಮಾನ ಬಂದು ಎದೆ ಧಸಕ್ಕೆಂದಿತು. ದೇವರೇ ಈಗ ತಾನೇ ತನಗನಿಸಿದ್ದು ಪರಮ ಸುಳ್ಳಾಗಲಪ್ಪ ಎಂದು ಆಶಿಸಿದಳು. ವಿಧವೆಯಾದ ದಿನದಿಂದ ಇವತ್ತಿನವರೆಗೂ ಆಕೆ ಗುಡಿಯ ಜಗಲಿ ಹೊಕ್ಕಿರಲಿಲ್ಲ. ದಶಕಗಳ ರೂಢಿ ಹಿಂದೆಳೆದರೂ, ಈಗ ಧುತ್ತೆಂದು ರೂಢಿಗೆ ಹೊರತಾದ ವಾಸ್ತವ ಎದುರಿತ್ತು. ದೇವರೇ ದೇವರೇ ಅನ್ನುತ್ತಾ ಜಗಲಿಯೇರಿ, ಭಟ್ಟರೆದುರು ನಿಂತು ರಾಮಚಂದ್ರ ರಾಮಚಂದ್ರ ಎಂದು ಕೂಗಿದಳು. ಭಟ್ಟರು ಮಿಸುಕಾಡಲಿಲ್ಲ. ಏಳೋ ಎಂದು ಕಂಪಿಸುವ ದನಿಯಲ್ಲಿ ಹೇಳುತ್ತಾ ಜೀವನದಲ್ಲಿ ಮೊದಲ ಬಾರಿ ಪುರುಷನ ಭುಜ ಹಿಡಿದು ಅಲ್ಲಾಡಿಸಿದಳು. ದೇವರಿಗೆ ನಮಸ್ಕರಿಸುವ ಭಂಗಿಯಲ್ಲಿ ಭಟ್ಟರ ದೇಹ ಉರುಳಿಕೊಂಡಿತು.

ಗೌರಮ್ಮ ಹೇಗೆ ಮೆಟ್ಟಿಲಿಳಿದಳು, ಹೇಗೆ ಶಂಭುವಿನ ಮನೆ ತಲುಪಿದಳು ಎಂಬುದು ಅವಳಿಗೂ ಗೊತ್ತಾಗಲಿಲ್ಲ. ನಿನ್ನಪ್ಪ ದೇವರ ಸನ್ನಿಧಿಯಲ್ಲೀ.....ಎಂದಿಷ್ಟು ಹೇಳುವಷ್ಟರಲ್ಲಿ ಬವಳಿ ಬಂದು ಎಚ್ಚರ ತಪ್ಪಿದಳು. ಪೂಜೆ ಮುಗಿಸಿ ಅಪ್ಪ ಬಂದ ಕೂಡಲೇ, ಜೊತೆಗೆ ಕೂತು, ತಿಂಡಿ ತಿನ್ನುವಾಗ ತನ್ನ ಯೋಜನೆ ಹೇಳುವ ತಯಾರಿಯಲ್ಲಿದ್ದ ಶಂಭುವಿಗೆ ಉರುಳಿಬಿದ್ದ ಗೌರಮ್ಮನನ್ನು ಕಂಡು ದಿಗಿಲಾಯಿತು. ಇವಳ ಪ್ರಾಣವೇ ಹೋಯಿತಾ ಎಂಬ ಗಾಬರಿಯಲ್ಲಿ ಮುಖಕ್ಕೆ ನೀರು ಚಿಮುಕಿಸಿದ. ಎತ್ತಿ ತಂದು ಜಗಲಿಯ ಚಾಪೆಯಲ್ಲಿ ಮಲಗಿಸಿದ. ಇದನ್ನು ಕುತೂಹಲದಿಂದ ನೋಡುತ್ತ ರಸ್ತೆಯಲ್ಲಿ ನಿಂತಿದ್ದ ಪಟೇಲರ ಮೊಮ್ಮಗನನ್ನು ಹೋಗೋ ಅಜ್ಜನಿಗೆ ಹೇಳೋ ಎಂದು ಓಡಿಸಿದ. ಗಾಬರಿಯಲ್ಲಿ ಪಟೇಲರು ಭಟ್ಟರ ಮನೆಯ ಮೆಟ್ಟಲೇರುವುದಕ್ಕೂ ಗೌರಮ್ಮ ಎಚ್ಚರಾಗುವುದಕ್ಕೂ ಸರಿಯಾಯಿತು. ಪುಣ್ಯಾತ್ಮನಪ್ಪ! ನನ್ನ ಬಳಿಯೇ ಇರಲಿ ಎಂದು ಕರೆಸಿಕೊಂಡೇಬಿಟ್ಟ. ನಾನು ಪಾಪಿ. ಯಾವಾಗ ಕಣ್ಬಿಟ್ಟು ಕರೆಸಿಕೊಳ್ತಾನೋ. ಗೌರಮ್ಮನ ಹಲುಬುವಿಕೆ ಪಟೇಲರಿಗೆ, ಶಂಭುವಿಗೆ ಅರ್ಥವಾಗಲು ತುಸು ಹೊತ್ತೇ ಬೇಕಾಯಿತು. ಅರ್ಥವಾಗುತ್ತಲೇ ಶಂಭು ಧಗ್ಗೆಂದು ಎದ್ದು ನಿಂತ. ಒಂದೇ ಉಸಿರಿಗೆ ಗುಡಿ ತಲುಪಿದ. ಅಪ್ಪನ ದೇಹ ನಮಸ್ಕರಿಸುವ ಭಂಗಿಯಲ್ಲೆ ಇತ್ತು. ಗೌರಜ್ಜಿ ಸುಳ್ಳು ಹೇಳುವವಳಲ್ಲ ಎಂಬುದು ಖಚಿತವಿದ್ದರೂ, ಯಾವುದೋ ಆಸೆ ಅವಳು ಹೇಳಿದ್ದು ಸುಳ್ಳಾಗಲಿ ಎಂದು ಬಯಸಿತ್ತು.  ಆಸೆ ಭ್ರಮೆಯೆನಿಸಿದ ಆ ಕ್ಷಣ ಶಂಭು ಕುಸಿದು ತಾನೂ ಕಂಬಕ್ಕೊರಗಿದ.

ಗಾಳಿಯೇ ಹೇಳಿತೋ ಎಂಬಂತೆ ಮನೆಮನೆಗೂ ಸುದ್ದಿ ಮುಟ್ಟಿತು. ಆ ಊರಿನ ಎಲ್ಲ ಜನರು, ಭಟ್ಟರನ್ನು ಬಲ್ಲ ಹತ್ತಿರದ ಊರಿನವರು, ಭಟ್ಟರ ಗುಣಗಾನ ಮಾಡುತ್ತ, ಪೂಜೆ ಮುಗಿಸಿ ದೇವರ ಸನ್ನಿಧಿಯಲ್ಲೇ ಪ್ರಾಣ ಬಿಟ್ಟ ಕಾರಣ ಖಂಡಿತವಾಗಿ ಸ್ವರ್ಗಕ್ಕೇ ಹೋಗುವವರು ಎಂದು ಪರಸ್ಪರ ಖಚಿತಪಡಿಸಿಕೊಳ್ಳುತ್ತ ಬಂದು ಸೇರಿದರು. ಮುಂದಿನ ಕಾರ್ಯಗಳೆಲ್ಲ ಸಾಂಗವಾಗಿ ಪಟೇಲರ ನೇತೃತ್ವದಲ್ಲಿ ನಡೆದು ಭಟ್ಟರ ಭೌತಿಕ ದೇಹ ಪಂಚಭೂತಗಳಲ್ಲಿ ವಿಲೀನವಾಯಿತು.


ಹರಿ ಅಮೆರಿಕದಿಂದ ಬಂದ ವಿಷಯ ತಿಳಿದ ಶ್ರೀಪಾದ ತಾನೂ ರಜೆ ಹಾಕಿ ಊರಿಗೆ ಹೊರಡುವ ತೀರ್ಮಾನ ಮಾಡಿದ. ಭಟ್ಟರು ತೀರಿಕೊಂಡ ಸುದ್ದಿ ತಿಳಿದಾಗ, ಬರಬೇಕು ಎಂಬ ಅವನ ಬಯಕೆ ,ಅವನು ಯಾವುದೋ ಊರಲ್ಲಿ ಇದ್ದ ಕಾರಣ ಈಡೇರಿರಲಿಲ್ಲ. ಹರಿಯನ್ನು ಕಂಡ ಹಾಗೂ ಆಯಿತು, ಶಂಭುವಿನ ಜತೆಯೂ ನಾಲ್ಕು ಆಪ್ತ ಮಾತುಗಳನ್ನಾಡಿದಂತಾಯಿತು. ತಾನು ಮತ್ತು ಹರಿ ಮಾತ್ರ ಶಂಭುವಿನ ಆಪ್ತರು. ಅಪ್ಪನ ಸಾವಿನ ಅನಂತರ ಒಂಟಿಯಾಗಿರುವ ಶಂಭುವಿಗೆ ತುಸುವಾದರೂ ಸಮಾಧಾನವಾಗಬಹುದು.
###########
ಮೂವರೂ ಗುಡಿಯೆದುರು ಕೂತಿದ್ದರು. ಚಳಿಗಾಲದ ದಿನಗಳು. ಐದಕ್ಕೆಲ್ಲ ಸೂರ್ಯ ಮುಳುಗುವ ತಯಾರಿ ನಡೆಸಿದ್ದ. ಯಾರು ಮುಂಚೆ ಮಾತು ಶುರುಮಾಡಬೇಕು? ಯಾವ ಮಾತಿಂದ? ಯಾವಾಗಲು ಹರಿ ತನ್ನ ಅಮೆರಿಕದ ಯಾವುದೋ ಅನುಭವ ಹೇಳಲು ಶುರುಮಾಡುತ್ತಿದ್ದ. ಹುಟ್ಟಿದ ನದಿ ತನ್ನ ಪಾತ್ರ ತಾನೇ ಹುಡುಕುವಂತೆ, ಅನಂತರ ಅವರ ಹರಟೆ ಎಲ್ಲೆಲ್ಲಿಯೋ ಸಾಗುತ್ತಿತ್ತು. ಶಂಭುವಿನ ಅಪ್ಪನ ಸಾವು ಈಗ ಅವರ ನಡುವೆ ಕೂತು, ಏನು ಮಾತಾಡಿದರೆ ಹೇಗೋ ಎಂಬ ವಿಚಿತ್ರ ಶಂಕೆಹುಟ್ಟಿಸಿತ್ತು. ಯಾವ ಮಾತೂ ಈ ಮೌನದಷ್ಟು ಹಿಂಸೆ ಕೊಡಲಾರದು, ಇನ್ನು ತಡೆಯುವುದು ಸಾಧ್ಯವೇ ಇಲ್ಲ ಎಂಬ ಒತ್ತಡದಲ್ಲಿ ಶ್ರೀಪಾದ ಶಂಭುವಿನತ್ತ ತಿರುಗಿ ಮುಂದೇನು ಅಂತ ಪ್ರಶ್ನೆ ಮಾಡಿದ. ಶಂಭು ಏನೂ ಮಾತಾಡಲಿಲ್ಲ.
ಅಂದ್ರೆ ವಾಪಸು ಸಿದ್ದಾಪುರಕ್ಕೆ ಹೋಗ್ತೀಯೋ ಅಥ್ವಾ ಊರಲ್ಲೆ ಉಳಿದು ನಿನ್ನಪ್ಪ ಇಲ್ಲೀವರೆಗೆ ಮಾಡಿದ್ದನ್ನು ನೀನು ಮಾಡಕ್ಕೆ ಶುರುಮಾಡ್ತೀಯಾ ಅಂತ ಶ್ರೀಪಾದ ಬಿಡಿಸಿ ಕೇಳಿದ. ತಾನು ಬೆಂಗಳೂರಿಗೆ ಹೋಗಬೇಕೆಂದು ತೀರ್ಮಾನಿಸಿದ್ದು, ಆ ದಿನವೇ ಅಪ್ಪ ನೀನು ಬಂದು ಪೂಜಾಕಾರ್ಯ ವಹಿಸ್ಕೋ ಎಂದದ್ದು, ಎಷ್ಟು ದಿನ ಆಗುತ್ತೋ ಅಷ್ಟು ದಿನ ನೀನೇ ಮಾಡು ಎಂದು ತಾನು ಹೇಳಿದ್ದು, ಆ ದಿನವೇ ಪೂಜೆ ಮುಗಿಸಿದ ಅಪ್ಪ ತೀರಿಕೊಂಡದ್ದು ಇವನ್ನೆಲ್ಲ ಶಂಭು ಹೇಳಿ, ಆ ದಿನ ತಾನೇ ಪೂಜೆಗೆ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ. ತಾನು ತಪ್ಪು ಮಾಡಿದೆ. ಎಂದು ಕಂಪಿಸುವ ದನಿಯಲ್ಲಿ ಹೇಳಿ, ಈಗ ಹೇಳು. ಇದ್ನ ಬಿಟ್ಟು ಎಲ್ಲಿ ಹೋಗಲಿ? ಇದ್ರ ವಿರುಧ್ಧ ಹೋಗೋದು ಅಂದ್ರೆ ಕೊನೆಗಾಲದ ಅಪ್ಪನ ಆಸೆ ವಿರುಧ್ಧ ಹೋದಹಾಗೆ ಅಲ್ವಾ? ಅಪ್ಪನ ಆತ್ಮಕ್ಕೂ ಕೊರಗು ಹಚ್ಚಿದ ಹಾಗೆ ಆಗಲ್ವಾ? ಎಂದ.
ತಾನು ಬೆಂಗಳೂರಿಗೆ ಹೋಗುವ ತೀರ್ಮಾನ ಮಾಡಿದ್ದು ಅಪ್ಪನ ಸೂಕ್ಷ್ಮಕ್ಕೆ ತಿಳಿದು ಅಪ್ಪ ಸಾಯುವ ಸಂಕಲ್ಪ ಮಾಡಿದರು ಎಂಬ ಅನುಮಾನ, ಅನಿಸಿಕೆ ಶಂಭುವಿನ ಮನಸ್ಸಲ್ಲಿ ಕೂತುಬಿಟ್ಟಿತ್ತು. ತನ್ನ ತೀರ್ಮಾನವೇ ಅಪ್ಪನನ್ನು ಕೊಂದಿತೇ ಎಂಬ ಅನುಮಾನ ವಿಚಿತ್ರವಾಗಿ ಅವನ ಮನಸ್ಸನ್ನು ಅಲ್ಲಾಡಿಸುತ್ತಿತ್ತು. ಅದನ್ನೂ ಈಗ ಹೇಳಿದ.

ಶ್ರೀಪಾದನಿಗೆ ದೊಡ್ಡ ನಗು ಬಂತು. ತಾನು ಹಾಗೆ ನಕ್ಕದ್ದು ತಪ್ಪು ಅಂತ ಕೂಡಲೇ ಅನಿಸಿ, ತನ್ನ ನಗು ಶಂಭುವಿನಲ್ಲಿ ಏನು ಪ್ರತಿಕ್ರಿಯೆ ಹುಟ್ಟಿಸಿತು ಎಂಬ ಆತಂಕದಲ್ಲಿ ಅವನ ಮುಖವನ್ನೆ ನೋಡಿದ. ಅವನು ನಕ್ಕಿದ್ದು ನೋಡಿ, ಗೊಂದಲಗೊಂಡು, ತಾನು ತೀರ ಭಾವುಕತೆಯಲ್ಲಿ ಮಾತನಾಡಿದನೇ ಎಂದು ಶಂಭುವೂ ಅವನ ಮುಖ ನೋಡುತ್ತಿದ್ದ. ಯಾಕೋ ನಕ್ಕಿದ್ದು? ಶಂಭು ಮೃದುವಾಗಿ ಕೇಳಿದಾಗ, ಶ್ರೀಪಾದನ ಆತಂಕ ಇಳಿಯಿತು.
ನಿನ್ನ ಯೋಚನೆಯ ಧಾಟಿ ಕಂಡು ನಗು ಬಂತು. ತಪ್ಪು ತಿಳೀಬೇಡ. ನಿನ್ನ ಅನಿಸಿಕೆಗೂ ಅಪ್ಪ ಸತ್ತಿದ್ದಕ್ಕೂ ಸಂಬಂಧವಿದೆ ಅಂತ ನನಗಂತೂ ಅನ್ನಿಸಲ್ಲ. ಹಾರ‍್ಟ್ ಫೈಲೂರ್ ಅಲ್ವಾ? ನೀನೇ ಪೂಜೆಗೆ ಹೋಗಿ, ಆಗ ಅಪ್ಪ ಸತ್ತಿದ್ರೆ, ಅಪ್ಪನ ಪೂಜೆ ತಪ್ಪಿಸ್ದೆ, ಹಾಗಾಗಿ ಸತ್ರು ಅಂತ ಕಾರಣ ಹುಡುಕ್ತಿದ್ದೆ. ಈ ಎರಡು ಘಟನೇಗೂ ಸಂಬಂಧ ಕಲ್ಪಿಸೋದು ತಪ್ಪು.
ಆದ್ರೂ ನನಗೇನೋ........... ಶಂಭು ಅರ್ಧಕ್ಕೇ ಮಾತು ನಿಲ್ಲಿಸಿದ.
ಸುಮ್ನೆ ಕಲ್ಪನೆ ಮಾಡು. ಗುಡ್ಡ ಇಳಿವಾಗ ಅಕಸ್ಮಾತ್ ನಾನು ಕಾಲು ಜಾರಿ ಬಿದ್ರೆ ನಾವಿಲ್ಲಿ ಸೇರಿದ್ದೆ ಕಾರಣ ಅಂತ ಹೇಳೋದು ಸರೀನಾ? ನಡಿಯೋದೆಲ್ಲಕ್ಕೂ ನಾವೇ ಕಾರಣ ಅನ್ನೋದು ಒಂದು ರೀತೀಲಿ ಅಹಂಕಾರ, ಮತ್ತೊಂದು ರೀತೀಲಿ ಮೂರ್ಖತನ.  ಎಲ್ಲದಕ್ಕೂ ಮನಸ್ಸು ಕಾರಣ ಹುಡುಕೋದು ಅದರ ದೌರ್ಬಲ್ಯ. ಅಥ್ವಾ ಎಲ್ಲ ಕಾರ್ಯವನ್ನೂ ಹಿಂದಿನ ಯಾವುದೋ ಒಂದು ಕಾರ್ಯದ ಜತೆ ಹೊಂದ್ಸಿ ನಿರಂತರತೇನ ಉಳಿಸ್ಕೋಬೇಕು ಅನ್ನೋದು. ಅಷ್ಟೆ.
ಆದ್ರೆ ನೀನು ಇಲ್ಲಿ ಬರ‍್ಲಿಲ್ಲ ಅಂತಿಟ್ಕೊಂಡ್ರೆ ನೀನು ಬೀಳ್ತಿರಲಿಲ್ಲ ಅನ್ನೋದು ಅಷ್ಟೇ ಸತ್ಯ ಅಲ್ವಾ?
ನಾನು ಇಲ್ಲಿಗೆ ಬಂದದ್ದೂ ಬಿದ್ದಿದ್ದರ ಒಂದು ಕಾರಣ ಅಂತಾದರೆ ಇಲ್ಲಿಗೆ ಬಂದಿದ್ದರ ಕಾರಣ, ಆ ಕಾರಣದ ಕಾರಣ ಹೀಗೆ ಹೋಗಿ ಹೋಗಿ ನಮ್ಮ ಹುಟ್ಟೇ ಕಾರಣ ಅನ್ಬೇಕಾಗುತ್ತೆ. ಮತ್ತೆ ನಮ್ಮ ಹುಟ್ಟಿಗೆ ಹಿಂದಿನ ಜನ್ಮದ ಕರ್ಮ ಕಾರಣ ಅಂತ ನಿನ್ನ ಧರ್ಮಶಾಸ್ತ್ರ ಹೇಳುತ್ತಲ್ಲ. ಹೀಗೆ ಹಿಂದೆ ಹಿಂದೆ ಹೋಗ್ತ ಇದ್ರೆ ನಾವು ಎಲ್ಲಿಗೆ ಮುಟ್ತೀವಿ?
ಮೂವರೂ ಕಕ್ಕಾಬಿಕ್ಕಿಯಾಗಿ ಕೂತರು. ಮುಂದೇನು ಎಂದು ವಿಚಾರ ಮಾಡಲು  ಹೊರಟವರು ಹಿಂದೆ ಎಲ್ಲೋ ಹೋಗಿಬಿಟ್ಟಿದ್ದೇವಲ್ಲ! ಒಂದಕ್ಕೊಂದು ಕೊಕ್ಕೊಡುತ್ತ ಸಾಗುವ ಘಟನೆಗಳ ಸರಪಳಿಯಲ್ಲಿ ಯಾವುದು ಕಾರ್ಯ? ಯಾವುದು ಕಾರಣ?
 ಈ ನಿರಂತರತೆಯ ಬಯಕೆ ಇಲ್ದಿದ್ರೆ ಮುಂದೇನು ಅಂತ ನಾವು ಕೇಳೋ ಅಗತ್ಯ ಎಲ್ಲಿದೆ? ಹಿಂದೇನೋ ಆಗಿದ್ದನ್ನು ಈಗ ಇಟ್ಕೊಂಡು ಮುಂದಿನ ಬಗ್ಗೆ ಯಾಕೆ ಯೋಚ್ನೆ?  ನಮ್ಮ ಈಗಿನ ತೀರ್ಮಾನ ಈಗಂತೂ ಕಾರ್ಯಾನೇ ಹೊರತು ಕಾರಣ ಅಲ್ಲ. ಅದು ಕಾರಣ ಆಗೋದು ಮುಂದಿನ ಕಾರ್ಯ ಆದಮೇಲೇ ತಾನೇ? ಏನಾಗಬಹುದು ಅಂತ ನಾವು ಊಹಿಸಬಹುದೇ ಹೊರತು ಖಚಿತವಾಗಿ ಹೇಳಕ್ಕೆ ಆಗಲ್ಲ. ಹಾಗಾಗಿ ಈಗ ಶಂಭು ಇಲ್ಲೇ ಇರಬೇಕೋ ಅಥ್ವಾ ಹೊರಡಬೇಕೋ ಎಂಬಷ್ಟರ ಬಗ್ಗೆ ಮಾತ್ರ ಮಾತಾಡುವ. ಹರಿ ಹೇಳಿದ.
ಹ್ಯಾಗ್ರಯ್ಯ ಹೊರಡೋದು? ತೋಟ ಏನ್ ಮಾಡೋದು? ಮನೆ?
ಅದೆಲ್ಲಿಂದ ನಿಮ್ಗೆ ಬಂದಿತ್ತೋ ಅವರಿಗೇ ವಾಪಸು ಮಾಡು.ಶ್ರೀಪಾದ ಹೇಳಿದ.
 ಸರಿ. ತೋಟ ವಾಪಸು ಕೊಡುವಾ. ಪೂಜೆ? ಪಟೇಲ್ರೇ, ನೀವೇ ಪೂಜೆ ಮಾಡಿ ಅನ್ನೋದೇ? ಇಷ್ಟು ವರ್ಷ ಅಪ್ಪನ ಶ್ರಧ್ಧೆಗೆ ಏನೂ ಬೆಲೆ ಇಲ್ವಾ? ಈ ದೇವರ ಬಗ್ಗೆ ನನಗೆ ಅಪ್ಪನಿಗೆ ಇದ್ದಷ್ಟು ನಂಬಿಕೆ ಇರದಿದ್ರೂ ಎಲ್ಲ ಬಿಡುವಷ್ಟು ಧೈರ್ಯ ಕೂಡ ಇಲ್ಲ.
ಸರಿ, ತೋಟ ಮನೆ ನೋಡ್ಕೊಂಡು, ಪೂಜೆ ಮಾಡ್ತಾ ಇರಲ್ಲ. ಎಲ್ಲಿದೆ ಸಮಸ್ಯೆ?  ಆದ್ರೆ ದಿನಕ್ಕೆ ನಾಲ್ಕು ಜನ ಕೂಡ ಬರದ ಈ ಗುಡಿ ಪೂಜೆ ಮಾಡ್ತಾ ಎಷ್ಟು ದಿನ ಇರೋದು? ಅಪ್ಪನಿಗೆ ಈ ದೇವರ ಪೂಜೆಯೇ ಬದುಕಾಗಿತ್ತು. ನಂಗೆ ಹೆಚ್ಚೆಂದರೆ ಇದು ಬದುಕಿನ ಒಂದು ಅಂಗ ಅನ್ನಿಸ್ಬಹುದು... ... ನಂಗೇನೂ ತೋಚ್ತಾ ಇಲ್ಲ. ಶಂಭು ಉಳಿದಿಬ್ಬರ ಮುಖ ನೋಡುತ್ತಾ ಹೇಳಿದ.
ಇದೊಳ್ಳೇ ತರ‍್ಲೆ ಆಯ್ತಪ್ಪ. ಇರೋಕಾಗಲ್ಲ. ಹೋಗೋ ಮನಸ್ಸಿಲ್ಲ......ನಿನ್ನ ಪ್ರಕಾರ ನೀನು ಇಲ್ಲೇ ಇರ‍್ಬೇಕು, ಜನ ಬರ‍್ಬೇಕು. ಇದೊಂದು ಪುಣ್ಯ ಕ್ಷೇತ್ರ ಆಗ್ಬೇಕಷ್ಟೇ. ಇದ್ನ ಯಾರಯ್ಯಾ ಹಾಗೆ ಮಾಡೋರು? ಹರಿ ಹೇಳಿದ.
ನಾವೇ ಯಾಕೆ ಮಾಡ್ಬಾರದು?ಶ್ರೀಪಾದ ಹೇಳುತ್ತಾ ಎದ್ದ. ಅವನ ಈ ಮಾತು ಕೇಳಿ ಇಬ್ಬರೂ ಹಾಗಂದ್ರೆ ಏನು ಅನ್ನುವಂತೆ ಅವನ ಮುಖ ನೋಡಿದರು.ಈ ಗುಡೀನ ಶ್ರೀರಾಮ ಕಟ್ಟಿಸ್ದ ಅನ್ನೊ ದಾಖಲೆ ಇದ್ಯಾ? ಅದ್ರೆ ರಾಮಚಂದ್ರಭಟ್ಟರು ಹಾಗೆ ನಂಬ್ತಾ, ಹೇಳ್ತಾ ಈ ಜಾಗಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೊಟ್ಟಿದ್ದರು. ಈ ಗುಡಿಗೆ ರಾಮಾಯಣದ ಸಂಬಂಧ ಹುಡುಕಿದ್ದರು. ನೀನು ಹೇಳಿದ್ಯಲ್ಲ ಈಗ್ತಾನೆ ಪುಣ್ಯಕ್ಷೇತ್ರ ಆಗ್ಬೇಕಷ್ಟೇ ಅಂತ ಅದ್ನೆ ಅವರು ಮಾಡೋ ಪ್ರಯತ್ನ ಮಾಡಿದ್ದು.  ಇಲ್ಲಿ ಬರೋ ಊರಿನ  ಜನ್ರಿಗೆ ಭಕ್ತಿ, ಶ್ರಧ್ಧೆ ಇರ‍್ಬೇಕು ಅಂತ ಅವರು ಹಾಗೆ ಹೇಳಿದ್ದೋ ಏನೋ. ಆದ್ರೆ ಈಗ ಜನಕ್ಕೆ ಭಕ್ತಿ, ಶ್ರಧ್ಧೆ ಬೇಡ. ಅವರಿಗೆ ರಾಮಾಯಣ ಕೂಡ ಬೇಡ. ಈಗಿನ ಅವರ ಲೌಕಿಕಕ್ಕೆ ಒದಗೋ ಅಂತಹ, ಹೊಂದೋ ಅಂತಹ ಕಾರಣ ಇದ್ರೆ ಆಸಕ್ತಿ ತೋರಿಸ್ತಾರೆ. ಈಗ, ಇವತ್ತೇ ನನಗೆ ಲಾಭ ಇದೆ ಅನ್ನೋ ನಂಬಿಕೆ ಬರ‍್ಬೇಕು. ಅವರಿವರಿರ‍್ಲಿ, ನಮಗೆ ಈ ಗುಡೀ ಬಗ್ಗೆ ಎಲ್ರಯ್ಯಾ ಇದೆ ಶ್ರಧ್ಧೆ? ಶಂಭು ಹೇಳಿದ್ದು ಸರಿ. ಜನ ಬರ‍್ಬೇಕು, ಬರೋ ಹಾಗೆ ಮಾಡ್ಬೇಕು.ಶ್ರೀಪಾದನ ಅಭಿಪ್ರಾಯ ಸರಿ ಅಂತ ಉಳಿದಿಬ್ಬರಿಗೂ ಅನಿಸಿದರೂ, ಮುಂದೇನು ಅನ್ನೋದು ತಿಳೀಲಿಲ್ಲ. ಶ್ರೀಪಾದನೇ ಹೇಳಲಿ ಎಂಬಂತೆ ಅವನ ಮುಖ ನೋಡಿದರು. ಶ್ರೀಪಾದ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ ರಥದ ಎದುರು ನಿಂತ. ಇಲ್ಲಿರುವ ಏನನ್ನು ವೈಭವೀಕರಿಸಿದರೆ ಜನ ಆಕರ್ಷಿತರಾಗಬಹುದು? ಗುಡಿಯ ಒರಟಾದ ಕಂಬಗಳು. ರಥದ ಕೆತ್ತನೆಯಲ್ಲೂ ನಾಜೂಕಿಲ್ಲ. ಅದನ್ನು ನೋಡಲು ಯಾರೂ ಇಲ್ಲಿಗೆ ಬರಲಾರರು. ಬಂದರೂ ಎಲ್ಲೋ ಕಲೆಯ ಬಗ್ಗೆ ಆಸಕ್ತಿ ಇರುವ ನಾಕಾರು ಮಂದಿ.  ಶ್ರೀಪಾದ ಹೊಂಡದ ಬಳಿ ನಿಂತ. ಈ ಹೊಂಡದಿಂದಲೇ ಗೌರಜ್ಜಿ ನಿತ್ಯ ಗಿಡಗಳಿಗೆ ನೀರು ಹಾಕುತ್ತಿದ್ದಳು. ದೇವರ ಅಭಿಷೇಕಕ್ಕು ಇದೇ ನೀರು. ಎಂಥ ಬಿರು ಬೇಸಗೆಯಲ್ಲೂ ಈ ಹೊಂಡದ ನೀರು ಬತ್ತಿದ್ದಿಲ್ಲ. ಕಿರುಬೆರಳ ಗಾತ್ರದ ನೀರು ಸದಾ ಹರಿಯುತ್ತದೆ. ಶ್ರೀಪಾದ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು ಕಣ್ರೋ ಎಂದ. ಶ್ರೀಪಾದನ ಹಿಂದೆಯೇ ಒಡಾಡುತ್ತಿದ್ದ ಇಬ್ಬರೂ ಏನೆಂಬಂತೆ ಅವನನ್ನು ನೋಡಿದರು.
ಈ ಜಾಗಕ್ಕೆ ನಿನ್ನಪ್ಪ ಧಾರ್ಮಿಕವಾದ ಒಂದು ಮಹತ್ವ ಪ್ರಚುರಪಡಿಸಿದ್ದರು. ನಾವೀಗ ಅದನ್ನು ಬಳಸಿಕೊಂಡು ಲೌಕಿಕಲಾಭಕ್ಕೂ ಒದಗುವ ಮಹತ್ವವಿದೆ ಅನ್ನೋ ಪ್ರಚಾರ ಮಾಡ್ಬೇಕು. ಈ ಹೊಂಡದ ನೀರನ್ನು ತೀರ್ಥವಾಗಿ ಪರಿವರ್ತಿಸಬೇಕು.ಸಕಲ ಪಾಪ ನಾಶಕ, ಆರೋಗ್ಯದಾಯಕ, ಪುಣ್ಯಪ್ರದಾಯಕ ಎಂಬುದೇ ಇದರ ಮಹತ್ವ.
ಹಾಗೆ ಮಾಡೋದು ತಪ್ಪಲ್ಲವಾ? ಶಂಭು ಹೇಳಿದ.
ಯಾಕೆ ತಪ್ಪು? ಇದರ ಬಗ್ಗೆ ಊರಿನ ಜನ ಏನು ಅಂದುಕೊಂಡಿದ್ದಾರೋ ಅದನ್ನೇ ನಾವು ಬೇರೆಯವರಿಗೂ ಗೊತ್ತಾಗೋಹಾಗೆ ಮಾಡೋದು. ಇದು ಸುಳ್ಳು ಅಂತ ನೀನು ಅನ್ನೋದಾದ್ರೆ ಈ ಕಲ್ಲಿನ ಮೂರ್ತಿನ ಯಾಕೆ ದೇವರು ಅಂತ ತಿಳೀಬೇಕು? ನೀನು ಇದರ ಪೂಜೆ ಪುನಸ್ಕಾರ ಅಂತ ಯಾಕೆ ಒದ್ದಾಡಬೇಕು?  ನೀನು ನಂಬಿರೋದನ್ನೇ ಪ್ರಚಾರ ಮಾಡ್ಬೇಕು ಅಂದಿದ್ದು. ಅದರ ವಿಚಾರ ನನಗೆ ಬಿಡಿ. ಆದ್ರೆ ಒಂದ್ಮಾತು. ನಾವಿಲ್ಲಿ ಇವತ್ತು ಏನೂ ಮಾತಾಡಿಲ್ಲ ತಿಳೀತಾ?ಅವನ ಈ ಮಾತು ಇಡೀ ಸನ್ನಿವೇಶಕ್ಕೆ ಒಂದು ಗೂಢತೆಯನ್ನು ಸೃಷ್ಟಿಸಿತು. ಇಬ್ಬರೂ ತಲೆಯಾಡಿಸಿದರು.
###########
ಶಂಭುವಿಗೆ ತಳಮಳ ಶುರುವಾಗಿತ್ತು. ಈ ಹೊಂಡದ ನೀರು ತೀರ್ಥ ಎಂದು ಪ್ರಚಾರ ಮಾಡುವುದು ಮೋಸವಲ್ಲವೇ? ಜನರಿಗೆ ಭ್ರಮೆ ಹುಟ್ಟಿಸುವುದು ಸರಿಯೇ? ಭ್ರಮೆ ಎಂದಾದರೆ ತಾನು ಈ ಗುಡಿಯನ್ನು ಗುಡಿ ಎಂದು ನಂಬಿದ್ದು, ಈ ಕಲ್ಲಿನ ಮೂರ್ತಿಯನ್ನು ದೇವರು ಎಂದು ನಂಬಿದ್ದು, ತಾನು ಹೇಳುವ ಮಂತ್ರವನ್ನು ಮಂತ್ರ ಎಂದು ನಂಬಿದ್ದು ಎಲ್ಲವೂ ಭ್ರಮೆಯೇ ಇರಬಹುದಲ್ಲ? ನಾನು ಇದ್ದೇನೆ, ನಾನು ಶಂಭು ಅನ್ನೋದು ಕೂಡ ಭ್ರಮೆಯೇ ಇರಬಹುದು. ನಂಬಿದ್ದೇ ವಾಸ್ತವವೇ? ಯಾವುದು ಸರಿ? ಯಾವುದು ತಪ್ಪು? ಯಾವುದು ಪುಣ್ಯ? ಯಾವುದು ಪಾಪ? ಮಲಗಿದ್ದವ ವಿಚಿತ್ರ ಆತಂಕದಲ್ಲಿ ಎದ್ದು ಕುಳಿತ.  ಮನೆಯ ಹೊರಗೆ ಬಂದ. ಅಂಗಳದ ತಂಪು ಗಾಳಿಗೆ ಮೈಯೊಡ್ಡಿದಾಗ ಹಿತವೆನಿಸಿತು. ಲೆಕ್ಕಕ್ಕೆ ಸಿಗದಷ್ಟು ನಕ್ಷತ್ರಗಳು. ಬೂದಿ ಚೆಲ್ಲಿದಂತೆ ಕಾಣುವ ಆಕಾಶಗಂಗೆ. ಸಪ್ತರ್ಷಿ ಮಂಡಲ. ವೃಷಭ ರಾಶಿ. ಇಡೀ ಬದುಕೇ ಒಂದು ನಂಬಿಕೆ ಎಂದಾಕ್ಷಣದಲ್ಲಿ ಅನಿಸಿತು. ಯಾರೋ ಮಾಡಿದ ತೀರ್ಮಾನಗಳನ್ನು ಒಪ್ಪುತ್ತ ಹೋಗುವುದೇ ಸುಖ. ಅಪ್ಪ ಹಾಗೇ ಇದ್ದ. ಅಪ್ಪನ ಅಪ್ಪನೂ ಹಾಗೇ ಇದ್ದನೋ ಏನೋ. ಶ್ರೀಪಾದ ಹೇಳಿದಂತೆ ಮಾಡುವುದು. ಏನಾಗುತ್ತೋ ಆಗಲಿ. ಈಗ ಹಿತವೆನಿಸಿತು. ಒಳಬಂದು ಮಲಗುವ ಬದಲು ಅಲ್ಲೇ, ಜಗಲಿಯಲ್ಲಿ ಒರಗಿ ನಕ್ಷತ್ರಗಳನ್ನು ವೀಕ್ಷಿಸತೊಡಗಿದ. ಯಾವಾಗಲೋ ನಿದ್ದೆ ಆವರಿಸಿತು.
$$$$$$$$$$$$
ಇನ್ನುಳಿದ ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಿದರೆ ಸಾಕು. ಒಂದು ದಿನ ಬೆಳಗ್ಗೆ ಟಿವಿಯವರು ಹನೂರಿಗೆ ಬಂದಿಳಿದರು. ಗುಡಿಯ ಸುತ್ತಮುತ್ತ, ರಥದ ಅತ್ತಿತ್ತ, ಹೊಂಡದೆದುರು, ಕೆರೆಯಬಳಿ ನಿಂತು ಚಿತ್ರ ತೆಗೆದರು. ಸುದ್ದಿ ಊರಿನ ತುಂಬ ಹರಡಿ ಊರಿನ ಜನ ತಮ್ಮ ಕೆಲಸ ಮರೆತು ಇಲ್ಲಿ ಸೇರಿದರು. ಕ್ಯಾಮರಾದವನ ಹಿಂದೆಮುಂದೆ ತಾವೂ ಓಡಾಡಿದರು. ತಮ್ಮ ಚಿತ್ರವೂ ಬೀಳಲಿ ಎಂದು ಆಸೆಪಟ್ಟರು. ಗುಡ್ಡ ಏರಲಾಗದೆ ಬುಡದಲ್ಲಿಯೇ ಕೂತಿದ್ದ ಪಟೇಲರ ಬಳಿ ಟೀವಿಯವರು ಗುಡಿಯ ಬಗ್ಗೆ ನಾಲ್ಕು ಮಾತಾಡಲು ಹೇಳಿದರು. ಪಟೇಲರತ್ತ ಕ್ಯಾಮರಾ ತಿರುಗಿದ ಕೂಡಲೇ ಅವರ ಬಳಿ ನಿಂತ ಎಲ್ಲರೂ ಹಲ್ಲಷ್ಟೂ ಕಾಣುವಂತೆ ನಗಲು ಯತ್ನಿಸಿದರು. ಪಟೇಲರು ಕಷ್ಟಪಟ್ಟು ಈ ಗುಡಿ ರಾಮಾಯಣದ ಕಾಲದಿಂದಲೂ ಇದೆ. ತಮ್ಮೂರನ್ನು ಕಾಯಿತ್ತಿರುವುದು ಈ ದೇವರೇ. ಈ ದೇವರನ್ನು ನಂಬಿದವರಿಗೆ ಬಯಸಿದ್ದು ಸಿಕ್ಕಿದೆ. ಎಲ್ಲರಿಗೂ ಒಳ್ಳೇದಾಗಲಿ ಎಂದರು. ಗೌರಜ್ಜಿ ಹೊಂಡದಿಂದ ನೀರು ತಂದು ಗಿಡಕ್ಕೆ ಹಾಕುತ್ತಿರುವ ದೃಶ್ಯದ ಚಿತ್ರಣ ನಡೆಯಿತು. ಶಂಭು ಪೂಜೆ ಮಾಡುವ, ಮಂತ್ರ ಹೇಳುತ್ತ ಅಭಿಷೇಕ ಮಾಡುವ ಚಿತ್ರಣ ಆಯಿತು. ಇದು ಯಾರು ಯಾಕೆ ಮಾಡಿದರು ಎಂಬುದು ಯಾರಿಗೂ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಊಹಿಸಿದರು.
ಇಷ್ಟಾದ ಹದಿನೈದು ದಿನಕ್ಕೆ  ಹನೂರಿನ ಬಗ್ಗೆ ಟಿವಿಯಲ್ಲಿ ಸಾಕ್ಷ್ಯಚಿತ್ರವೊಂದು ಬಂತು. ಹನೂರೆಂದರೆ ಹನುಮನ ಹುಟ್ಟಿದೂರು, ಅಲ್ಲಿರುವ ಗುಡಿ ರಾಮ ಕಟ್ಟಿಸಿದ್ದು, ಹೊಂಡದ ನೀರು ರಾಮತೀರ್ಥ. ಈ ನೀರಿಗೆ ವಿಶೇಷ ಶಕ್ತಿಯನ್ನು ಶ್ರೀರಾಮ ದಯಪಾಲಿಸಿದ್ದಾನೆ. ಹನುಮನಿಗೆ ಅಭಿಷೇಕ ಮಾಡಿದ ನೀರು ತೀರ್ಥವಾಗುತ್ತದೆ. ಅದಕ್ಕೆ ಪಾಪ ಪರಿಹರಿಸುವ, ರೋಗ ವಾಸಿ ಮಾಡುವ ಅದ್ಭುತ ಗುಣವಿದೆ. ಈ ಹೊಂಡದ ನೀರು ಹರಿವ ಪ್ರಮಾಣ ಮಳೆಗಾಲದಲ್ಲೂ ಬೇಸಗೆಯಲ್ಲೂ ಒಂದೇ ರೀತಿ. ಹರಿದ ನೀರು ಸೇರುವ ಕಳಗಿನ ಕೆರೆಯ ನೀರಲ್ಲಿ ಮಿಂದರೆ ಚರ್ಮರೋಗಗಳೆಲ್ಲ ವಾಸಿಯಾಗುತ್ತವೆ. ಈ ಕೆರೆಯ ನೀರು ಸಂಚಿತಕರ್ಮನಾಶಕ. ಗುಡಿ, ರಥ, ಹೊಂಡ, ಕೆರೆಗಳನ್ನು ತೋರಿಸುತ್ತಾ ಈ ವಿವರಣೆಗಳೆಲ್ಲ ಬಂದವು. ಗೌರಜ್ಜಿ, ಪಟೇಲರನ್ನು ತೋರಿಸುತ್ತಾ ಇವರಿಗೆ ನೂರು ವರ್ಷ ದಾಟದ್ದರೂ ಹೀಗೆ ಇರಲು ತೀರ್ಥವೇ ಕಾರಣ ಎಂಬ ವಿವರಣೆಯೂ ಇತ್ತು. ಹನೂರಿನ ಜನ ಬೆಚ್ಚಿಬಿದ್ದರು. ತಮ್ಮ ಊರಿನ ವಿಷಯ ತಮಗೇ ತಿಳಿಯದೇ ಹೋಯಿತಲ್ಲ! ಭಟ್ಟರು ಹೇಳುತ್ತಿದ್ದದು ಸುಳ್ಳಲ್ಲ ಹಾಗಾದರೆ! ಛೇ ಇಷ್ಟು ದಿನ ತಾವು ಎಷ್ಟು ಪುಣ್ಯ ಕಳೆದುಕೊಂಡೆವಪ್ಪ! ಇನ್ನಾದರೂ...  ಆ ದಿನ ಗುಡಿಗೆ ಊರಿನ ಬಹಳ ಜನ ಬಂದರು. ತೀರ್ಥವನ್ನು ಶ್ರಧ್ಧೆಯಿಂದ ಸೇವಿಸಿದರು. ಏನೋ ವಿಶೇಷವಿರುವಂತೆ ಅನಿಸಿತು. ನನಗೆ ಇದು ಮುಂಚಿಂದಲೂ ಗೊತ್ತಿತ್ತು, ಹೇಳಿದರೆ ಯಾರೂ ನಂಬಲ್ಲ ಎಂದು ಸುಮ್ಮನಿದ್ದೆ ಎಂದು ಎಲ್ಲರೂ ಮಾತಾಡಿಕೊಂಡರು. ಈ ಹಠಾತ್ ಬದಲಾವಣೆ ಕಂಡು ಶಂಭು ಚಕಿತಗೊಂಡ. ಒಂದು ಪ್ರಚಾರ ಏನೆಲ್ಲ ಮಾಡಬಹುದು ಎಂಬುದನ್ನು ಕಂಡು ವಿಸ್ಮಿತನಾದ. ಈ ಪ್ರಚಾರದ ಕಾರಣ ಯಾರು ಎಂಬುದು ಅವನಿಗೆ, ಹರಿಗೆ ಮಾತ್ರ ಗೊತ್ತಿತ್ತು.
$$$$$$$$$
ಇವೆಲ್ಲ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಹನೂರನ್ನು ಬಂದು ನೋಡಿ. ಗುಡಿಯಿರುವ ಬೆಟ್ಟದ ಬುಡದವರೆಗೂ ಟಾರುರಸ್ತೆ. ಸಿಮೆಂಟಿನ ಮೆಟ್ಟಿಲು ಭಟ್ಟರ ಆತ್ಮಕ್ಕೆ ತೃಪ್ತಿ ನೀಡಿದೆ. ಗುಡಿಯ ಸುತ್ತಲೂ ಕಡಪ ಕಲ್ಲಿನ ಅಂಗಳ. ಮೂಲ ರಥದ ರೂಪ, ಗಾತ್ರವನ್ನು ಹೋಲುವ ಮರದ ರಥ ಸಿದ್ಧವಾಗುತ್ತಿದೆ. ಊರವರೆಲ್ಲ ಸೇರಿ ಕೆರೆಯ ಹೂಳು ತೆಗೆದು ನೀರು ಶುಧ್ಧವಾಗಿದೆ. ಸುತ್ತಲೂ ಪಾವಟಿಗೆ. ಬಂದವರು ಮೀಯದೇ ದೇವರ ದರ್ಶನ ಪಡೆಯಬಾರದಲ್ಲ! ಏನೇನು ಸೇವೆ ಮಾಡಬಹುದು, ಅದರ ದರ ಏನು ಎಂಬ ವಿವರವುಳ್ಳ ದೊಡ್ಡ ಪಟ್ಟಿ ನೇತು ಹಾಕಿದ್ದಾರೆ. ಮೂಲೆಯಲ್ಲಿ ಹನೂರಿನ ಸ್ತ್ರೀ ಶಕ್ತಿ ಸಂಘದವರ ತೆಂಗಿನಕಾಯಿ, ಕುಂಕುಮ, ಕರ್ಪೂರ, ಊದುಬತ್ತಿ ಅಂಗಡಿ. ಇಲ್ಲಿ ಹರಳಿನ ಸರವೂ ಸಿಗುತ್ತದೆ. ಹನುಮನ ಫೋಟೋ ಸಿಗುತ್ತದೆ. ಬಸ್ಸಿಳಿವ ಜಾಗದಲ್ಲೂ ಹತ್ತಾರು ಅಂಗಡಿಗಳು. ಟೀ,ಕಾಫಿ,ಮಸಾಲೆ ಮಂಡಕ್ಕಿ ಸಿಗುವ ಎರಡು ಹೊಟೆಲ್. ಇವರಿಗೆ ಪರುಸೊತ್ತಿಲ್ಲದಿಷ್ಟು ವ್ಯಾಪಾರ. ಈ ವ್ಯಾಪಾರದ ಗಡಿಬಿಡಿಯಲ್ಲಿ ಅವರಿಗೆ ಹನುಮನಿಗೆ ನಮಸ್ಕರಿಸುವುದೂ ನೆನಪಾಗುವುದಿಲ್ಲ. ಹೊಸದಾಗಿ  ಒಂದು ಬಸ್ ನಿಲ್ದಾಣ ಆಗಿದೆ.  ಪ್ರತಿದಿನ ನೂರಾರು ಕಾರುಗಳಲ್ಲಿ ಬರುವ ಜನ. ಗಣೇಶ ಕಂಪೆನಿಯವರು ದಿನಕ್ಕೆ ಹತ್ತು ಬಸ್ಸು ಸಾಗರದಿಂದ ಬಿಟ್ಟಿದ್ದಾರೆ. ಅದರಲ್ಲಿ ಬಂದಿಳಿವ ಜನ. ಅವರ ಅವಸರ, ಭಕ್ತಿ, ಶ್ರಧ್ಧೆಗಳನ್ನು ನೋಡಿಯೇ ತಿಳಿಯಬೇಕು. ಪಾಪ ಆದಷ್ಟೂ ಬೇಗ ಪರಿಹಾರವಾಗಬೇಕು, ಆರೋಗ್ಯ ಬೇಗ ಸುಧಾರಿಸಬೇಕು ಎಂಬ ಆಸೆ. ಬಂದವರಿಗೆ ಬಾಟಲಲ್ಲಿ ತೀರ್ಥ ಕೊಡುವ ವ್ಯವಸ್ಥೆ ಕೂಡ ಆಗಿದೆ. ಈಗಲೂ ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ. ಹರಕೆ ಕಟ್ಟಿಕೊಂಡು ೧೦೧ ರೂ. ಪಾವತಿಸಿದವರಿಗೆ ಮಾತ್ರ ರಥ ಎಳೆಯುವ ಅವಕಾಶ. ಊರಿನ ಜನ ರಥದ ಹಿಂದೆ ಜೈಗುಟ್ಟುತ್ತಾ ಹೋಗುತ್ತಾರೆ. ಇನ್ನು ಶಂಭು, ಪಾಪ! ಅವನಿಗೆ ಮನೆಗೆ ಬರಲೂ ಬಿಡುವು ಸಿಗದು. ಸಹಾಯಕ್ಕೆಂದು ಒಬ್ಬ ಮರಿಭಟ್ಟ ಬಂದಿದ್ದಾನೆ. ಶಂಭುವಿಗೆ ಶ್ರೀಪಾದನ ತಂಗಿಯ ಜತೆಯೇ ಮದುವೆಯಾಗಿದೆ. ಮನೆ, ತೋಟದ ಹೊಣೆಗಾರಿಕೆ ಅವಳದೇ. ಇಲ್ರ್ಲೆಂದು ಊರಿದೆ ಎಂಬುದು ಗಮನಕ್ಕೇ ಬಾರದಷ್ಟು ಶಾಂತವಾಗಿದ್ದ ಊರಲ್ಲಿ ದಿನವೂ ಜಾತ್ರೆ. ವಯಸ್ಸಾಯಿತೋ ಎಂದೋ ಅಥವಾ ಈ ಗದ್ದಲಕ್ಕೆ ಹೆದರಿಯೋ ಗೌರಜ್ಜಿ ಗುಡಿಗೆ ಬರುವುದೇ ಬಿಟ್ಟಿದ್ದಾಳೆ. ಮನೆಯಲ್ಲಿಯೇ ಕೂತು ಮಾಡುವ ಅವಳ ನಮಸ್ಕಾರ ಅಷ್ಟೆಲ್ಲ ಜನರನ್ನು ದಾಟಿ ಹನುಮನಿಗೆ ಮುಟ್ಟುತ್ತಿದೆಯೋ ಇಲ್ಲವೋ ಯಾರು ಬಲ್ಲರು?
###########

ತೀರ್ಥಕ್ಕೆ ಅಪಾರ ಬೇಡಿಕೆಯಿರುವುದರಿಂದ ಕೊಡಗಟ್ಟಲೆ ನೀರಿಂದ ಅಭಿಷೇಕ ಮಾಡಿಸಿಕೊಳ್ಳುವ ಹನುಮ ಅನಂತರ ಯಾರೋ ಹರಕೆ ತೀರಿಸಲು ಕೊಟ್ಟ ಮುಖವಾಡ, ಮೈವಾಡವನ್ನು ಧರಿಸುತ್ತಾನೆ. ಮೂರ್ತಿಯಿರುವ ಜಾಗಕ್ಕೆ ಸರಿಯಾಗಿ ವಿದ್ದ್ಯುದ್ದೀಪದ ಬೆಳಕು ಬೀಳುವಾಗ ಫಳಫಳ ಹೊಳೆಯುತ್ತಾನೆ. ಈ ಎಲ್ಲ ಮಾಯೆಯಿಂದ ತನ್ನನ್ನು ಶ್ರೀರಾಮನೇ ಪಾರು ಮಾಡಬೇಕು ಎಂಬಂತೆ ಮುಂಚಿನಂತೇ ನಿಶ್ಚಲನಾಗಿ, ನಿರ್ಭಾವುಕನಾಗಿ ಉತ್ತರಕ್ಕೆ ನೋಡುತ್ತ ನಿಂತಿದ್ದಾನೆ.  
                  

ಸಾಗರ.  
೨೯/೦೬/೦೮
೩೦/೦೮/೦೮
 (ಮೈಸೂರಿಂದ ಪ್ರಕಟವಾಗುವ "ಅರುಹು-ಕುರುಹು" ತ್ರೈಮಾಸಿಕದ ಜುಲೈ-ಸಪ್ಟೆಂಬರ್ ೨೦೦೯ರ ಸಂಚಿಕೆಯಲ್ಲಿ ಪ್ರಕಟಗೊಂಡ ಕಥೆ.)



  
  
    










 

      

8 comments:

Adarsha said...

english aksharadalli kannada bariyuttiruvudannu kshamisi.. Officenalli kulitu bareyuttiruvudu..

Kate tumba chennagittu.. kateyo, satya kateyo atava nijada katanakavo tiliyadashtu chennagittu.

V.R.BHAT said...

ಹೊಸಮನೆಯವ್ರೆ , ಕಥೆ ಪರವಾಗಿಲ್ಲ ಅನ್ನಿಸಿತು!

V.R.BHAT said...
This comment has been removed by the author.
V.R.BHAT said...

ಹೊಸಮನೆಯವರೇ, ನಿಮ್ಮ ಹೆಸರು ತಿಳಿದಿಲ್ಲದ ಕಾರಣ ಹೀಗೇ ಹೇಳುತ್ತಿದ್ದೇನೆ, ಯಾಕೆ ನಿಮಗೆ ಕೋಪ ಬಂತೇ, ನಾನು ಸ್ವಲ್ಪ ಹಾಗೇ, ಸಾಹಿತ್ಯದಲ್ಲಿ ಅಭಿರುಚಿಯುಳ್ಳ ನಿಮ್ಮಂತವರು ಎಲೆಮರೆಯಲ್ಲಿ ಅಡಗುವುದು ಬೇಡ ಎಂದು ಹುಡುಕಿದ್ದೇನೆ, ತಪ್ಪಿಲ್ಲವಲ್ಲ ? ನನ್ನ ಬ್ಲಾಗಿಗೆ ಸ್ವಾಗತ, ಬನ್ನಿ ನಮ್ಮಲ್ಲಿರುವುದನ್ನು ಹಂಚಿಕೊಳ್ಳೋಣ ಆಗದೇ ?

ಮೃತ್ಯುಂಜಯ ಹೊಸಮನೆ said...

ಕೋಪ ಯಾಕೆ? ನಿಮ್ಮ ಲೇಖನಗಳನ್ನು ದಿನವೂ ಓದುತ್ತೇನೆ. ಬರೆವ ಅಭ್ಯಾಸ ಕಡಿಮೆ. ನನ್ನ ಬ್ಲಾಗಿಗೆ ಬರುತ್ತಿರಿ.ಬರವಣಿಗೆಯಲ್ಲಿರುವ ಕುಂದುಗಳನ್ನು ತಿಳಿಸಿ. ನನ್ನ ಬೆಳವಣಿಗೆಗೆ ಅದು ಅಗತ್ಯ. ಧನ್ಯವಾದಗಳು

Shreepadu said...

ಸುಂದರವಾದ ಕಥೆ.ಕಲಿಯುಗಕ್ಕೆ ಹೆಚ್ಚು ಹೊಂದಿಕೊಳ್ತು

Manjunatha Kollegala said...

ಸೊಗಸಾದ ಕತೆ ಹೊಸಮನೆಯವರೆ. ಕತೆಯ ಆರಂಭದಲ್ಲಿ ಯಾವುದೋ ಕೊಂಪೆಯಾಗಿ ಉಳಿದಿದ್ದ ಹನೂರು ಕೊನೆಯಲ್ಲಿ ಅದರ ಹನುಮನನ್ನೂ ಮೀರಿ ಬೆಳೆಯುವುದು, ಗೌರಮ್ಮ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುವುದು, ಭಟ್ಟರ ಸಾವು ಇವೆಲ್ಲ ಸೇರೆ ಒಂದು ಶಕ್ತ ಆವರಣ ಕಟ್ಟಿಕೊಡುತ್ತವೆ ಕತೆಗೆ. ಒಳದನಿಗಳಿಂದ ಕೂಡಿದ ಕತೆ. ತಮ್ಮ ಬ್ಲಾಗಿನ ಪರಿಚಯವಾದದ್ದು ಸಂತೋಷ

Mruthyunjaya. said...

ನಿಮ್ಮೆಲ್ಲರ ಅಭಿಪ್ರಾಯಕ್ಕಾಗಿ ಧನ್ಯವಾದಗಳು.