Thursday, September 16, 2010

ಕಪಿಸೇನೆ.

ಸೀತಾದೇವಿಯನ್ನು ಬಿಡಿಸಲು ರಾಮನಿಗೆ ರಾವಣನ ಜೊತೆ ಯುದ್ಧ ಅನಿವಾರ್ಯವಾಯಿತು. ಈ ಯುದ್ಧಕ್ಕೆ ರಾಮನ ಸಹಾಯಕ್ಕೆ ಬಂದದ್ದು ಸುಗ್ರೀವನ ಕಪಿಸೇನೆ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಎಷ್ಟು? ಮಾಡಲೇನೂ ಮಹತ್ಕಾರ್ಯ ಇಲ್ಲದ ನನಗೆ ಉತ್ತರ ಹುಡುಕುವ ಕುತೂಹಲ ಹುಟ್ಟಿತು. ಉತ್ತರ ಸಿಕ್ಕಿತು ಕೂಡ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಒಂದು ಕೋಟಿ ಮಹೌಘ. ಸರಿ..ಒಂದು ಮಹೌಘ ಎಂದರೆಷ್ಟು? ಅದನ್ನೂ ಹುಡುಕಿದ್ದಾಯಿತು. ಎಣಿಸಿಕೊಳ್ಳಿ.
೧ ಲಕ್ಷ ಕೋಟಿ= ೧ ಶಂಖ.                 ೧೦೦೦೦೦೦೦೦೦೦೦೦
೧ ಲಕ್ಷ ಶಂಖ.=೧ ಮಹಾಶಂಖ.          *೧೦೦೦೦೦೦೦೦೦೦೦೦
೧ ಲಕ್ಷಮಹಾಶಂಖ=೧ ಬೃಂದ            *೧೦೦೦೦೦೦೦೦೦೦೦೦
೧ ಲಕ್ಷ ಬೃಂದ= ೧ ಮಹಾ ಬೃಂದ        *೧೦೦೦೦೦೦೦೦೦೦೦೦
೧ ಲಕ್ಷ ಮಹಾ ಬೃಂದ=ಒಂದು ಪದ್ಮ     *೧೦೦೦೦೦೦೦೦೦೦೦೦
೧ ಲಕ್ಷ ಪದ್ಮ= ೧ ಮಹಾಪದ್ಮ             *೧೦೦೦೦೦೦೦೦೦೦೦೦
೧ ಲಕ್ಷ ಮಹಾಪದ್ಮ= ೧ ಖರ್ವ            *೧೦೦೦೦೦೦೦೦೦೦೦೦
೧ ಲಕ್ಷ ಖರ್ವ= ೧ ಮಹಾಖರ್ವ           *೧೦೦೦೦೦೦೦೦೦೦೦೦
೧ ಲಕ್ಷ ಮಹಾಖರ್ವ=೧ ಸಮುದ್ರ         *೧೦೦೦೦೦೦೦೦೦೦೦೦
೧ ಲಕ್ಷ ಸಮುದ್ರ=೧ ಔಘ                 *೧೦೦೦೦೦೦೦೦೦೦೦೦
೧ ಲಕ್ಷ ಔಘ= ೧ ಮಹೌಘ.               *೧೦೦೦೦೦೦೦೦೦೦೦೦
ಅಂದರೆ ಒಂದರ ಮುಂದೆ ೧೩೨ ಸೊನ್ನೆಗಳನ್ನು ಹಾಕಿದರೆ ಒಂದು ಮಹೌಘ ಆಗುತ್ತದೆ. ಇಂತಹ ಒಂದು ಕೋಟಿಯಷ್ಟು ಸಂಖ್ಯೆಯ ಕಪಿಗಳು ಸೈನ್ಯದಲ್ಲಿದ್ದುವಂತೆ. ಒಂದು ಕೋಟಿ ಮಹೌಘವೆಂದರೆ ಇನ್ನೆಷ್ಟು ಸೊನ್ನೆಗಳು ಬೇಕು? ನಿಮಗೇ ಬಿಟ್ಟಿದ್ದೇನೆ.
(ವಿ.ಸೂ. ಅಕಸ್ಮಾತ್ ಮೊದಲಿನ ಸಂಖ್ಯೆಯಲ್ಲಿ ಸೊನ್ನೆಗಳ ಲೆಕ್ಕ ತಪ್ಪಿದ್ದರೆ ತಿದ್ದಿಕೊಳ್ಳಿ. ನನಗೆ ಶೂನ್ಯವೆಂದರೆ ಬಲು ಪ್ರೀತಿ! ಗಣಿತದಲ್ಲಿ ನನ್ನ ಮೇಷ್ಟ್ರು ಅದನ್ನೇ ನನಗೆ ಪ್ರೀತಿಯಿಂದ ಕೊಡುತ್ತಿದ್ದರು!)

12 comments:

V.R.BHAT said...

ಆಸಕ್ತರಿಗೆ ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು ಮೃತ್ಯುಂಜಯ ಹೊಸಮನೆಯವ್ರೇ !

*•▬●๋•کhŕểể●๋•▬• * said...

ಅದಕ್ಕೆ ಹೋಲಿಸಿದರೆ ಈಗಿನ ಭಾರತದ ಜನಸಂಖ್ಯೆ ಏನೂ ದೊಡ್ಡದಲ್ಲ ...[:P][;)]

g.mruthyunjaya said...

ಉತ್ಪ್ರೇಕ್ಷೆಯೆಂದರೆ ಇದಪ್ಪ! ಅಷ್ಟು ಕಪಿಗಳು ಲಂಕೆಗೆ ಹೋದರೆ ಯುದ್ಧ ಮಾಡುವುದಿರಲಿ; ಅಲ್ಲಿ ನಿಲ್ಲಲಿಕ್ಕೂಜಾಗ ಸಾಕಾಗದು!

Ashok.V.Shetty, Kodlady said...

Upayukta lekhana sir..chennagide

Mruthyunjaya said...

jemjaya,
ಸುಮ್ಮನೆ ಲೆಕ್ಕ ಹಾಕಿದೆ. ಒಂದು ಚದುರ ಮೀಟರ್ ಜಾಗದಲ್ಲಿ ಹತ್ತು ಕಪಿಗಳನ್ನು ಕೂರಿಸಿದೆ. ಅಲ್ಲಿಗೆ ಒಂದು ಚ.ಕಿಮೀ. ಜಾಗದಲ್ಲಿ ೧೦೦೦೦ ಕಪಿಗಳು ಕೂತವು. ಒಂದು ಲಕ್ಷ ಕಪಿಗಳು ಕೂರಲು ೧೦ ಚ.ಕಿ.ಮೀ ಜಾಗ ಬೇಕಾಯಿತು. ಒಂದು ಕೋಟಿ ಕಪಿಗಳಿಗೆ ೧೦೦೦ ಚ.ಕಿ.ಮೀ ಜಾಗ ಬೇಕಾಯಿತು. ಇಂತಹ ಒಂದು ಲಕ್ಷ ಕೋಟಿ ಕಪಿಗಳಿಗೆ ೧೦ ಕೋಟಿ ಚ.ಕಿಮೀ ಜಾಗ ಬೇಕು. ಈಗಿನ್ನೂ ಶಂಖಕ್ಕೆ ಬಂದೆವು. ಅಷ್ಟೆ.ನನಗೆ ತಲೆಯೇ ಕೆಟ್ಟು ಹೋಗಿದೆ. ಇಲ್ಲಿಂದ ಮಹೌಘಕ್ಕೆ ನೀವೇ ಯಾರಾದರೂ ಕಪಿಗಳನ್ನು ಕೊಂಡೊಯ್ಯಿರಿ! ಜಾಗವೆಲ್ಲಾದರೂ ಇದ್ದರೆ! ಎಣಿಸಹೋಗಿ ನಾನು ಮಂಗ ಆದೆನಲ್ರೀ!

Shiv said...

ಆಸಕ್ತದಾಯಕವಾದ ಬರಹಗಳು..
ಕಪಿಗಳ ಗಣತಿ ಚೆನ್ನಾಗಿದೆ !

Aravind GJ said...

ಮಾಹಿತಿಯ ಮೂಲವನ್ನು ತಿಳಿಯಲು ಆಸಕ್ತನಾಗಿದ್ದೇನೆ!!

Digwas Bellemane said...

ಮಾಹಿತಿ ತು೦ಬ ಚೆನ್ನಾಗಿದೆ

ಈಶ್ವರ said...

ಹೌದು, ಯಕ್ಷಗಾನ ಹಾಡಲ್ಲೂ ಕೂಡ ಎಪ್ಪತ್ತೇಳು ಕೋಟಿ ಕಾಪಿ ನಾಯಕರು ಅಂತ ಇದೆ , ನಾಯಕರೇ ಅಷ್ಟಿದ್ರೆ ಕಪಿಗಳು ಇರ್ಲೇಬೇಕಲ್ವೇ?

mitaxar said...

ನಿಮ್ಮ ಈ ಹುಡುಕಾಟ ಶ್ಲಾಘನೀಯ.
ಒಳ್ಳೆಯ ಮಾಹಿತಿ ನೀಡಿದಿರಿ.....

Vishnu Priya said...

ಇಲ್ಲಿ ಹೇಳಿದ ‘ಮಹೌಘ’ ಎನ್ನುವ ಸಂಖ್ಯಯ ಕುರಿತಾದ ವಿವರ ವಾಲ್ಮೀಕಿ ರಾಮಾಯಣದಲ್ಲೇ (ಯುದ್ಧಕಾಂಡ ೩೮.೩೩-೩೬) ಕಾಣಸಿಗುತ್ತದೆ. ಅಲ್ಲಿ ಈ ರೀತಿಯ ವಿವರಣೆ ಇದೆ:

‘ಶತಂ ಶತಸಹಸ್ರಾಣಾಂ ಕೋಟಿ ಮಾಹುರ್ಮನೀಶಿಣಃ । ಶತಂ ಕೋಟಿಸಹಸ್ರಾಣಾಂ ಶಞ್ಖ ಇತ್ಯಭಿಧೀಯತೇ ।

ಶತಂ ಶಞ್ಖು ಸಹಸ್ರಾಣಾಂ ಮಹಾ ಶಞ್ಖು ಇತಿ ಸ್ಮ್ರತಮ್ । ಮಹಾಶಞ್ಖುಸಹಸ್ರಾಣಾಂ ಶತಂ ವೃಂದಮಿತಿ ಸ್ಮ್ರತಮ್ ।

ಶತ ವೃಂದ ಸಹಸ್ರಾಣಾಂ ಮಹಾವೃಂದಮಿತಿ ಸ್ಮ್ರತಮ್ । ಮಹಾವೃಂದ ಸಹಸ್ರಾಣಾಂ ಶತಂ ಪದ್ಮಿತಿ ಸ್ಮ್ರತಮ್ ।

ಶತಂ ಪದ್ಮಸಹಸ್ರಾಣಾಂ ಮಹಾಪದ್ಮಮಿತಿ ಸ್ಮ್ರತಮ್ । ಮಹಾಪದ್ಮ ಸಹಸ್ರಾಣಾಂ ಶತಂ ಖರ್ವಮಿಹೋಚ್ಯತೇ ।

ಶತಂ ಖರ್ವ ಸಹಸ್ರಾಣಾಂ ಮಹಾಖರ್ವಮಿತಿ ಸ್ಮ್ರತಮ್ । ಮಹಾಖರ್ವಸಹಸ್ರಾಣಾಂ ಸಮುದ್ರಮಭಿಧೀಯತೇ ।

ಶತಂ ಸಮುದ್ರಸಹಸ್ರಮೋಘ ಇತ್ಯಭಿಧೀಯತೇ । ಶತಮೋಘಸಹಸ್ರಾಣಾಂ ಮಹೌಘ ಇತಿ ವಿಶ್ರುತಃ’

Vishnu Priya said...
This comment has been removed by the author.