Wednesday, April 1, 2009

ಕೊತ್ತಂಬರಿ ಕಟ್ಟು ಮತ್ತು ಮಸಾಲೆ ದೋಸೆ

***ತರಕಾರಿ ಅಂಗಡಿಯಿಂದ ಹೊರಬರುವಾಗ , ಅಲ್ಲೇ ಮರದ ಕೆಳಗೆ ಕೊತ್ತಂಬರಿ ಕಟ್ಟುಗಳ ಗುಡ್ಡೆಯ ಹಿಂದೆ ಕೂತ ಸರಿಸುಮಾರು ಎಪ್ಪತ್ತರ ವಯಸ್ಸಿನ ಆ ಮುದುಕಿಯ ಹತ್ತಿರ ಎರಡು ಕಟ್ಟು ತಗೊಳ್ತಿದ್ದೆ. ಅದು ಲಾಗಾಯ್ತಿನಿಂದ ಬಂದ ಅಭ್ಯಾಸ. ಈ ಊರಿಗೆ ನಾನು ಬಂದು ನಾಲ್ಕು ವರ್ಷಗಳಾಗಿವೆ. ಅವತ್ತಿಂದಲೂ ಅವಳು ಹೀಗೇ, ಇಲ್ಲಿ, ಕೊತ್ತಂಬರಿ ಕಟ್ಟುಗಳ ರಾಶಿಯ ಹಿಂದೆ, ಒಂದು ಚೌಕಳಿ ಸೀರೆ ಉಟ್ಟು ಕೂತಿರುತ್ತಾಳೆ. ಅವಳನ್ನು ಕಂಡು ನನಗೆ ಯಾಕೆ ಪಾಪ! ಅನ್ನಿಸ್ತು ಅಂತ ಗೊತ್ತಿಲ್ಲ. ನನ್ನ ಕಂಡಕೂಡಲೇ ಎರಡು ಕಟ್ಟು ಆರಿಸುತ್ತ, ನಾನು ಕೇಳ್ದಿದ್ರೂ, ಅವಳಾಗಿಯೇ ರೇಟು ಏರೋಗಿದೆ ಅಯ್ಯಾವ್ರೇ ಎಂದೋ, ಈಗ ಸ್ವಲ್ಪ ಸಸ್ತಾ ಆಗಿದೆ ಎಂದೋ ಗೊಣಗುಟ್ಟುತ್ತಿದ್ದಳು. ಅಲ್ಲಮ್ಮಾ, ಒಂದು ಕಟ್ಟು ಮಾರಾಟ ಆದ್ರೆ ನಿಂಗೆ ಏನು ಲಾಭ ಬರುತ್ತೆ ಎಂದು ಒಮ್ಮೆ ಕುತೂಹಲದಿಂದ ಕೇಳಿದ್ದೆ. ಇಪ್ಪತ್ತು ಪೈಸೆ ಎಂದಿದ್ದ್ಲು. ಸುಮ್ಮನೆ ಲೆಕ್ಕ ಹಾಕಿ ನೋಡಿದೆ. ಇನ್ನೂರು ಕಟ್ಟು ವ್ಯಾಪಾರವಾದ್ರೂ ಅವ್ಳಿಗೆ ಆಗೋ ಲಾಭ ಬರೀ ಇಪ್ಪತ್ತು ರೂಪಾಯಿ. ಅಷ್ಟಕ್ಕಾಗಿ ಮಳೆ, ಬಿಸ್ಲು, ಚಳಿ ಅಂತ ನೋಡ್ದೆ, ದಿನವಿಡಿ ಕೂರೋದು ಊಹಿಸಿಯೇ ನಂಗೆ ಮರುಕ ಬಂದಿತ್ತು. ಹಾಗಾಗಿ ತರಕಾರಿ ಜತೆ ಎರಡು ಕಟ್ಟು ನಾನು ಯಾವಾಗ್ಲೂ ತಗೊಳ್ಳೋದಾಗಿತ್ತು. ನಂಗೆ ಕೊತ್ತಂಬರಿ ಸೊಪ್ಪು ಬೇಕಿತ್ತೋ ಇಲ್ವೋ ಎಂಬುದನ್ನ ನಾನು ಎಂದೂ ಯೋಚ್ನೇನೆ ಮಾಡ್ತಿರ್ಲಿಲ್ಲ. ನನ್ನ ಹೆಂಡತಿಗೆ ಈ ಕಟ್ಟು ಬಾಡದಂತೆ ಇಡುವ ಚಿರಿಪಿರಿ. ಒಂದೇ ತನ್ನಿ, ಸಾಕು ಎಂದು ಪ್ರತಿ ಬಾರಿಯೂ ಅವಳು ಹೇಳ್ತಿದ್ಲು. ಸರಿ ಅಂತಿದ್ದೆ.
****ಇವತ್ತು ಅವ್ಳ ಗುಡ್ದೆ ಹತ್ರ ಹೋದೆ. ಅಲ್ಲಿ ಒಬ್ಬಾಕೆ, ಭರ್ಜರಿ ಸೀರೆ ಉಟ್ಟು ಕೊತ್ತಂಬರಿ ಸೊಪ್ಪು ಆರಿಸ್ತಾ ಇದ್ಲು. ಅವ್ರ ವ್ಯಾಪಾರ ಮುಗೀಲಿ ಅಂತ ನಾನು ಸುಮ್ಮನೆ ನಿಂತೆ. ಅವರ ಮಾತುಕತೆ ಕಿವಿಗೆ ಬೀಳತೊಡಗಿತು.
“ಹ್ಯಾಗಮ್ಮ ಕಟ್ಟಿಗೆ?” “ಐದ್ರೂಪಾಯ್ಗೆ ಮೂರ್ ಕಟ್ಟು.” “ಏನೇ ಇದು..ಈ ರೇಟು. ಮನಸ್ಸಿಗೆ ಬಂದ ರೇಟ್ ಹೇಳ್ತಿದೀಯಾ.” “ಅಯ್ಯಯ್ಯೋ..ನಂಗೇ ನೂರ್ ಕಟ್ಟಿಗೆ ನೂರೈವತ್ ರೂಪಾಯ್ ಬಿದ್ದಿದೆ, ನೀವೇ ಹೇಳಿ.ಯಾವ ರೇಟಿಗೆ ಕೊಡ್ಳಿ ಅಂತ.” “ಅಯ್ಯೋ.. ನಂಗೆಲ್ಲ ಗೊತ್ತಿದೆ..ಸುಮ್ನೆ ಐದ್ರೂಪಾಯ್ಗೆ ನಾಕ್ ಕಟ್ಟು ಕೊಡು.” “ಬರಲ್ಲವ್ವ.. ಹೊಟ್ಟೆ ಮ್ಯಾಲೆ ಹೊಡೀಬೇಡಿ” “ಏನೂ ಆಗಲ್ಲ..ತಗೋ..ನಾವು ದಿನಾ ತಗೋಳರಲ್ವಾ..” ಭರ್ಜರಿ ಸೀರೆಯ ಹೆಂಗಸು ನಾಲ್ಕು ಕಟ್ಟು ಚೀಲಕ್ಕೆ ತುಂಬಿಸುತ್ತ ಐದು ರೂಪಾಯಿ ಹಾಕಿ, ಬರಲ್ಲವ್ವ…ಬರಲ್ಲವ್ವ..ಎಂಬ ಮುದುಕಿಯ ಮಾತು ಅವ್ಳಿಗೇ ಬಿಟ್ಟು ಹೊರಟೇ ಹೋದ್ಲು. ಅವಳ ಕೈಯಲ್ಲಿರುವ ಕಟ್ಟನ್ನು ಈ ಮುದುಕಿಗೆ ಕಸಿಯಲು ಸಾಧ್ಯವೇ? “ನೋಡೀ ಅಯ್ಯಾ..ಈ ಥರಾ ಮಾಡಿದ್ರೆ ನಾವು ಹ್ಯಾಗೆ ಬದುಕೋದು..ನಿಮಗೂ ಮೂರ್ ಕಟ್ಟು ಕೊಡ್ಲಾ?” “ಬೇಡಮ್ಮ..ಎರಡೇ ಸಾಕು” “ಎರ್ಡ್ ಕಟ್ಟಾದ್ರೆ ನಾಕ್ರುಪಾಯ್ ಅಗ್ತದೆಯಲ್ಲಾ ಸಾಮಿ…” “ಆಗ್ಲಿ ಬಿಡು..ತಗೊಂಡು ಹೋದ್ರೆ ಮನೇಲಿ ಸುಮ್ನೆ ದಂಡ ಆಗುತ್ತೆ.” ಮುದುಕೀ ಹತ್ರ ಚೌಕಾಶಿ ಮಾಡ್ತಿದ್ದ ಸುಮಾರು ಜನ್ರನ್ನ ನಾನು ನೋಡಿದ್ರೂ, ಈ ಹೆಂಗ್ಸಿನ ನೆನಪು ಯಾಕೋ ಉಳೀತು. ಹಾಗೆ ಉಳೀಲಿಕ್ಕೆ ಅವ್ರುಟ್ಟಿದ್ದ ಭರ್ಜರಿ ಸೀರೇನೇ ಕಾರಣ ಇರ್ಬಹುದು. ಇದಾದ ಅನಂತರ, ಪ್ರತಿಬಾರಿ ಕಟ್ಟು ಕೊಳ್ಳುವಾಗಲೂ ಭರ್ಜರಿ ಸೀರೆಯ ನೆನಪೂ, ಮುದುಕಿಯ ದೀನ ದನಿಯೂ ನೆನಪಾಗುತ್ತಿತ್ತು. ಕೆಲವೊಮ್ಮೆ ಸಣ್ಣ ಘಟನೆ ಕೂಡ ಯಾಕೆ ನೆನಪಲ್ಲಿ ಉಳೀತದೆ ಅನ್ನೋದಕ್ಕೆ ತಾರ್ಕಿಕವಾದ ಯಾವ ಕಾರಣವೂ ಇರಲ್ಲವೇನೋ.
****
ಆ ದಿನ ಪೇಟೆ ಕೆಲಸ ಮುಗಿಸಿ ಮನೆಗೆ ಹೊರಡಲೆಂದು ನನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವಾಗ, ನನ್ನ ಬೆನ್ನಿಗೆ ಒಂದು ಗುದ್ದು ಬಿತ್ತು. ಅದರ ಜೊತೆ “ಏನೋ..ನೀನಿಲ್ಲಿ?” ಎಂಬ ಅಶ್ಚರ್ಯಮಿಶ್ರಿತ ಪ್ರಶ್ನೆ. ಯಾರಪ್ಪಾ ಎಂದು ತಿರುಗಿ ನೋಡಿದರೆ ವಿಮಲ ತನ್ನ ದಂತಪಂಕ್ತಿಯನ್ನು ಪೂರ್ಣ ಪ್ರದರ್ಶಿಸುತ್ತ ನಿಂತಿದ್ದಳು. “ಏನೇ..ನೀನಿಲ್ಲಿ” ಎಂದು ನಾನೂ ಚಕಿತನಾಗಿ ಕೇಳಿದೆ. ವಿಮಲ ನನ್ಗೆ ದೂರದ ಸಂಬಂಧಿ. ಹ್ಯಾಗೆ ಅನ್ನೋದು ನಂಗೂ ಗೊತ್ತಿಲ್ಲ. ಒಟ್ಟಿಗೇ ಓದುತ್ತ ಇದ್ದ ಕಾರಣ ನೆಂಟಸ್ತನಕ್ಕಿಂತ ಬಳಕೆಯ ಸಲಿಗೆ ಜಾಸ್ತಿ ಇತ್ತು. ಅವಳನ್ನು ಕಾಣದೆ ಆರೆಂಟು ವರ್ಷಗಳೆ ಆಗಿದ್ದವು. “ಆ ಸಂಘ ಈ ಸಂಘ ಅಂತ ಓಡಾಡ್ತಾ, ಏನೇನೋ ಚಟುವಟಿಕೆ ಮಾಡ್ತಾಳಪ್ಪಾ” ಅಂತ ಕೆಲವರು ಮೆಚ್ಚುಗೆಯಲ್ಲಿ,ಕೆಲವರು ವ್ಯಂಗದಲ್ಲಿ ಹೇಳೋದು ಕೇಳಿದ್ದೆ. ನೀನು ಜಯ ತಾನೇ? ಅಂತ ಅವಳು, ನೀನು ವಿಮ್ಲ ತಾನೇ ಅಂತ ನಾನೂ ಕೇಳಿ ಪರಸ್ಪರರ ಪರಿಚಯ ಪಕ್ಕಾ ಮಾಡಿಕೊಂಡೆವು. ಧಿಡೀರಂತ ಹೀಗೆ ರಸ್ತೆಯಲ್ಲಿ ಕಂಡವಳ ಜತೆ ಏನು ಮಾತಾಡುವುದು ಎಂಬುದೇ ತೋಚಲಿಲ್ಲ. ಏಳು ಮನೆಗೆ ಹೋಗೋಣ ಅಂದೆ. ಇವತ್ತಿಲ್ಲ ಮಾರಾಯಾ..ಈಗ ನಾನು ಅರ್ಜೆಂಟಾಗಿ ಶಿಮೊಗ್ಗ ಹೊರಟೀದೀನಿ…ಏಳು..ಜ್ಯೂಸ್ ಕುಡೀಯೂವಾ..ಇಬ್ಬರೂ ಹೋಟೆಲ್ ಹೊಕ್ಕು ಮಹಡಿಯೇರಿ ಕೂತೆವು. ಆಗ ಮತ್ತೆ ಆಕೆ ಕಂಡಳು.
ಅದೇ ಭರ್ಜರಿ ಸೀರೆಯುಟ್ಟ, ಮುದುಕಿಯ ಜತೆ ಚೌಕಾಶಿ ಮಾಡಿದ್ದ ಹೆಂಗಸು. ಇವತ್ತು ಅವಳೆದುರು ಬಿಗಿ ಉಡುಪು ತೊಟ್ಟ ತರುಣಿಯೂ ಕೂತಿದ್ಲು. ಮಗಳಿರಬಹುದೇ? ಅವರ ಎದುರಲ್ಲಿ ಮಸಾಲೆ ದೋಸೆ. ತರುಣಿ “ಅಯ್ಯೋ..ಏನೇನೂ ಚೆನಾಗಿಲ್ಲ..ನಂಗ್ಬೇಡಮ್ಮ” ಅಂತ ಅರ್ಧಕ್ಕಿಂತ ಜಾಸ್ತಿ ದೋಸೆಯಿದ್ದ ಪ್ಲೇಟನ್ನು ಬದಿಗೆ ಸರಿಸುತ್ತ ಹೇಳಿದಳು. “ಅಯ್ಯೋ..ಬೇಡಾಂದ್ರೆ ಬಿಡು..ಹೋಗ್ಲಿ..ಐಸ್ ಕ್ರೀಂ ಅದ್ರೂ ತಗೋ..” ಐಸ್ ಕ್ರೀಂ ಬಂತು. ಅದ್ರಲ್ಲಿ ಅರ್ಧ ಉಳೀತು. “ಯಾಕೇ?” “ಅಯ್ಯೋ..ಚೆನಾಗಿಲ್ಲ..ಬೇಡಮ್ಮ” “ಸರಿ ಬಿಡು..ಇಷ್ಟ ಇಲ್ದಿದ್ರೆ ತಿನ್ಬಾರ್ದು.” ನಾನು ಅವರ ಮಾತು ಕೇಳುತ್ತ ಕೂತೆ. ನಾವು ಜ್ಯೂಸ್ ಕುಡಿಯುತ್ತಿರುವಾಗ ಅವರಿಬ್ಬರೂ ಎದ್ದು ಹೋದರು. “ಏನೋ..ಗುರ್ತ್ನೋರಾ?” ನಾನು ಅವರನ್ನೇ ನೋಡ್ತಾ ಕೂತಿದ್ದು ಕಂಡು ವಿಮ್ಲ ಕೇಳಿದ್ಲು. “ಅಲ್ಲ..” ನಾನು ಸಂಕ್ಷಿಪ್ತವಾಗಿ ಕೊತ್ತಂಬರಿ ಕಟ್ಟಿನ ವ್ಯಾಪಾರದ ಸುದ್ದಿ ಹೇಳಿದೆ. ವಿಮಲ ಅವರತ್ತ ನೋಡಿ ಹಣ ಜಾಸ್ತಿ..ವಿವೇಕ ಕಡಿಮೆ.. ಅಂತದ್ಲು.
** ಐಸ್ ಕ್ರೀಂ ಕರಗತೊಡಗಿತ್ತು. ಅರ್ಧ ಉಳಿದಿದ್ದ ದೋಸೆ ನನಗೆ ಮುದುಕಿಯ ಸುಕ್ಕುಗಟ್ಟಿದ ಮುಖದಂತೆ ಕಂಡಿತು. ಪ್ಲೇಟಲ್ಲುಳಿದಿದ್ದ ಪಲ್ಯದಲ್ಲಿ ಕೊತ್ತಂಬರಿ ಸೊಪ್ಪಿನ ಚೂರೂ ಕಂಡಿತು. ವಿಮಲಳಿಗೆ ಹೇಗೆ ಕಂಡೀತೋ..ತಿಳೀಲಿಲ್ಲ.

8 comments:

PARAANJAPE K.N. said...

ನಿಮ್ಮ ಬರಹದೊಳಗಿನ ಅಭಿವ್ಯಕ್ತಿ ಮಾರ್ಮಿಕವಾಗಿದೆ. ಇ೦ಥವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಚೆನ್ನಾಗಿದೆ.
ಹಾಗೆಯೆ ನನ್ನ ಬ್ಲಾಗಿಗೂ ಒಮ್ಮೆ ಬ೦ದು ಓದಿ, ಅಭಿಪ್ರಾಯಿಸಿ ಹೋಗಿ. ನಮಸ್ಕಾರ.
http://www.nirpars.blogspot.com/

Unknown said...

ಮನುಷ್ಯ ಬೆಳೆಯುವುದೇ ಹಾಗೆ. ತರಕಾರಿಗೆ ಚೌಕಾಸಿ-ರೇಮಂಡ್ ಗೆ ಕೇಳಿದಷ್ಟು.
ಹೊಟ್ಟೆ ತುಂಬಿದವನಿಗೆ ಊಟ ಹಸಿದವನಿಗೆ ತಾತ್ಸಾರ.

ಈ ವ್ಯವಸ್ಥೆಯಲ್ಲಿ ನಾವೂ ಭಾಗಿಗಳು. ವಿಮಲಳನ್ನು ಮನೆಗೆ ಕರೆದಂತೆ ಅಥವಾ ಅವಳೊಡನೆ ಹೋಟೆಲಿಗೆ ಹೋದಂತೆ ಕೊತ್ತುಂಬರಿ ಸೊಪ್ಪಿನ ಮುದುಕಿ ಎಷ್ಟೇ ಆಪ್ತಳಾದಳೂ ಮನೆಗೂ ಕರೆದೊಯ್ಯಲಾಗದು ಹಾಗೆಯೇ ಹೊಟೆಲ್ಲಿಗೂ..
ಹೀಗೆ ತ್ಚು.ತ್ಚು.ತ್ಚು ಅನ್ನಬಹುದು.
ಅದಕ್ಕೂ ಮಿಕ್ಕಿ ಅವನ್ನೆಲ್ಲಾ ಮುರಿಯಲುಹೊರಟರೆ ನಮ್ಮ ಬಗ್ಗೆ ಮತ್ಯಾರೋ ಅಯ್ಯೋ..ಪಾಪ ಎನ್ನುವ ಬರಹ ಬರೆಯುವ ಅವಸ್ಥೆ ತಲುಪುವುದು ಖಂಡಿತ
ಅವರವರ ಭಾವಕ್ಕೆ ಅವರವರ ಭಕುತಿಗೆ....

ಮನಸ್ವಿ said...

ಹ್ಮ್.. ಮನಸ್ಸಿಗೆ ನಾಟುವಂತಿದೆ ನಿಮ್ಮ ಬರವಣಿಗೆ.... ಹೊಟೇಲ್ ಗೆ ಹೋಗಿ ಎಲ್ಲವನ್ನು ಆರ್ಡರ್ ಮಾಡಿ ತಿನ್ನದೆ ಬರೋದೆ ಈಗಿನ ಜನರ ಕಯಾಲಿಯಾ? ದುಡ್ಡಿದೆ ಅಂತ ದುಂದು ವೆಚ್ಚ ಮಾಡ್ತಾರೋ ಅರ್ಥಾನೇ ಆಗಲ್ಲ.... ನಿಮ್ಮ ಭಾವನೆ ತುಂಬಿದ ಬರಹ ಕುಷಿ ಕೊಟ್ಟಿತು

g.mruthyunjaya said...

ನನ್ನ ಸಹೋದ್ಯೋಗಿಯೊಬ್ಬರು, ಕ್ಲಬ್ಬಿನಲ್ಲಿ ೧೦೦ ರೂ. ಬುಕ್ ರಮ್ಮಿ ಆಡಿ ಹೊರಬಂದಾಗ, ಮಾರಲೆಂದು ಹಿಡಿಕಟ್ಟು ಹೊತ್ತುಕೊಂಡು ಉರಿಬಿಸಿಲಿನಲ್ಲಿ ನಡೆಯುತ್ತಿದ್ದ ಹೆಂಗಸಿನೊಂದಿಗೆ ಪೊರಕೆಯ ರೇಟಿನ ವಿಚಾರವಾಗಿ ಚೌಕಾಶಿಗಿಳಿದದ್ದು ನನಗೆ ನೆನಪಿದೆ.
ಉರಿಬಿಸಿಲಿನಲ್ಲಿ ಲಟಾರಿ ಸೈಕಲ್ ಮೇಲೆ ಒಂದು ರಾಶಿ ಹಳೆಪೇಪರ್ ಕಟ್ಟು ಇಟ್ಟುಕೊಂಡು ಹೋಗಿ ಹಳೆ ಪೇಪರ್ ಅಂಗಡಿಗೆ ಹಾಕಿ ನಾಲ್ಕು ಕಾಸು ದುಡಿಯುವ ಕಷ್ಟವಾನಿಗೆ, ನಾನು, ಅವನು ಹೇಳಿದ ರೇಟಿಗೆ, ಹಾಕಿದ ತೂಕಕ್ಕೆ ತಿಂಗಳ ಹಳೇಪೇಪರ್ ಕೊಟ್ಟು ಕಳಿಸುತ್ತೇನೆ. ಆದರೆ ಇದನ್ನು ನಮ್ಮ ಪಕ್ಕದಮನೆಯವರಿಗೆ ಗೊತ್ತಾಗದಂತೆ ಮಾಡಬೇಕು. ಯಾಕೆಂದರೆ ಅವರು, ಹೀಗೆ ಪೇಪರ್ ಕೊಳ್ಳುವವರು ತೋರಿಸುವ ತೂಕ ಸರಿಯಾದ್ದಲ್ಲ, ಅವರ ರೇಟು ಅಂಗಡಿಯ ರೇಟಿಗಿಂತ ಕಡಿಮೆ ಎಂದು ಹಳೇ ಪೇಪರನ್ನು ಅಂಗಡಿಗೆ ಹೊತ್ತುಕೊಂಡು ಹೋಗಿ ಕೊಡುವವರು. ವಿದೇಶಗಳಲ್ಲಿ ಹಳೇಪೇಪರ್ ಕೇಳಲು ಮನೆಬಾಗಿಲಿಗೆ ಯಾರೂ ಬರುವುದಿಲ್ಲ. ಹಳೇ ಪೇಪರ್ ತೆಗೆದುಕೊಳ್ಳುವ ಅಂಗಡಿಯೂ ಇಲ್ಲ. ಹಳೇಪೇಪರನ್ನು ಕಸದ ಡಬ್ಬಿಗೇ ಹಾಕಬೇಕಷ್ಟೆ. ಇಲ್ಲಿ ಅದನ್ನೇ ಜೀವನೋಪಾಯವನ್ನಾಗಿಸಿಕೊಂಡ ಒಬ್ಬ ಶ್ರಮಜೀವಿಯಿಂದ ನಾಲ್ಕು ರೂಪಾಯಿ ಕಮ್ಮಿ ತೆಗೆದುಕೊಳ್ಳುವುದರಲ್ಲಿ ನನಗೆ ತಪ್ಪು ಕಾಣುವುದಿಲ್ಲ. ಆದರೆ, ತಪ್ಪು ತೂಕ ಕಮ್ಮಿ ರೇಟಿಗೆ ಮಾಲು ಕೊಟ್ಟು, ಬರಬೇಕಾದ್ದಕ್ಕಿಂತ ಕಮ್ಮಿ ದುಡ್ಡು ಯಾಕೆ ತೆಗೆದುಕೊಳ್ಳಬೇಕೆಂಬುದು ಅವರ ಚಿಂತನೆ.
ಇದೆಲ್ಲ ತುಂಬ ಸಂಕೀರ್ಣ ವಿಚಾರವೆನ್ನಿಸುವುದಿಲ್ಲವೇ?

Gowtham said...

ಇದನ್ನು ನೋಡಿದ್ರೆ ನಂಗೆ ಆಂಧ್ರದ ವರದಕ್ಷಿಣೆ ನೆನಪಾಗುತ್ತೆ. ಅಲ್ಲಿ ತಮ್ಮ ಅಂತಸ್ತಿಗೆ ಸರಿಯಾದವನನ್ನೇ ಹುಡುಕಿ ಅವನ ಆಸ್ತಿಯ ಕಾಲುಭಾಗದಷ್ಟಾದರೂ ಕೊಡ್ತಾರೆ, ತಮ್ಮಷ್ಟು ಶ್ರೀಮಂತ ಅಲ್ಲದಿದ್ದರೆ ಮದುವೆ ಮಾಡಿಕೊಡಲ್ಲ, ಅಪ್ಪಿ ತಪ್ಪಿ ಮಾಡಿಕೊಟ್ರೂ ವರದಕ್ಷಿಣೆ ಕೊಡಲ್ಲ. ಯಾಕೋ ಈ ಕಥೆಗೂ ವರದಕ್ಷಿಣೆ ವಿಚಾರಕ್ಕೂ ಸಾಮ್ಯತೆ ಇದೆ ಅನ್ನುಸ್ತು. :-)

ಮೃತ್ಯುಂಜಯ ಹೊಸಮನೆ said...

ಪ್ರಿಯ ರಾಘು, ಆದಿತ್ಯ, ಪರಾಂಜಪೆ, ಗೌತು,ಜಿಎಂಜಯ: ನಿಮ್ಮ ಅಭಿಪ್ರಾಯಗಳಿಗೆ ವಂದನೆಗಳು.
೧.ನಾನು ಗಮನಿಸಿದಂತೆ ನನ್ನ ವರ್ತನೆಗಳನ್ನು ಬೇರೆಯವರ ಗಮನಿಸುವ ಸಾಧ್ಯತೆಯೂ ಇದೆ.
೨.ನಮ್ಮೆಲ್ಲ ವರ್ತನೆಗಳನ್ನು ನಮ್ಮ ಬಗ್ಗೆ ನಾವೇ ರೂಡಿಸಿಕೊಂಡಿರುವ ಕಲ್ಪನೆಗಳು ಗುಟ್ಟಾಗಿ ನಿರ್ದೇಶಿಸುತ್ತವೆಯೋ ಏನೋ. ಕೊತ್ತಂಬರಿ ಕಟ್ಟು ಮಾರುವವಳ ಜೊತೆಯ ಚೌಕಾಶಿ ನಮ್ಮ ಇಗೋವನ್ನು ಘಾಸಿಗೊಳಿಸಲ್ಲ. ಅದ್ರೆ ಮಸಾಲೆ ದೋಸೆಯ ಬಗ್ಗೆ ಹಾಗೆ ಮಾಡುವುದು ಇಗೋವನ್ನು ಘಾಸಿಗೊಳಿಸುತ್ತೆ. ಅದಕ್ಕಾಗಿ ಹಾಗೆ ವರ್ತನೆ ಇರುತ್ತಾ ಅಂತ.

ShruBhanu said...

ಬರಹ ಚನ್ನಾಗಿ ಬೈಂದು. ಇದು ನಮ್ಮನೆ ಎದ್ರೂ ದಿನ ನದಿಯಂತಹ ಗಟನೆಯೆ ಆದ್ರೆ ಸ್ಪಂದಿಸುವಾಂಟ್‌ತದ್ದು ಮಾತ್ರ ಕೆಲವರಷ್ಟೇ....20 ಪೈಸೆಗೆ ಜಾಸ್ತಿ ಬೆಲೆ ಕೊಡ್ತಾ ಅಂತ ಕುಶಿ ಪಡಕ ಅತ್ವ ದುಡ್ಡಿಗೆ ಬೆಲೆ ನೇ ಇಲ್ದೇ ಹೋದಂಗೆ ಇರ್ತ್ವಾಲ ಅದಕ್ಕೆ ಬೆಸರಿಕೊಳಕ್ಕ ಗೊತಗದಿಲ್ಲೆ.....

Shankar Prasad ಶಂಕರ ಪ್ರಸಾದ said...

ಬರವಣಿಗೆಯ ಶೈಲಿಲ್ ಬಹಳಾ ಸಿಂಪಲ್ ಹಾಗು ಎಫೆಕ್ಟಿವ್ ಆಗಿದೆ ಸಾರ್.
ಕೊತ್ತಂಬರಿ ಸೊಪ್ಪು ಹಾಗು ಮಸಾಲೆ ದೋಸೆ, ಬಹುವಾಗಿ ಮೆಚ್ಚಿಕೊಂಡೆ.

ಕಟ್ಟೆ ಶಂಕ್ರ