Sunday, January 15, 2012

ಕಾವ್ಯಾರ್ಥ..     ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ. ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು. ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ. ಕಾರಣ ಗೊತ್ತಿಲ್ಲ.ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ,ನವ್ಯ ಬುದ್ಧಿಜೀವಿಗಳಿಗೇ ಹಾಗೆ ಎಂದು ನನ್ನನ್ನು ಬುದ್ಧಿಜೀವಿಗಳ ಗುಂಪಿಗೆ ಸೇರಿಸಿದ. ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ.
     ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ. ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂಬ ಮಾತು ತುಂಬಾ ಹಿಂದಿನಿಂದಲೂ ಇದೆ.ನಾನು ಎಮ್... ಓದುತ್ತಿದ್ದಾಗಲೂ ನನ್ನ ಕೆಲ ಅಧ್ಯಾಪಕರು ಹಾಗೇ ಹೇಳುತ್ತಿದ್ದರು. ಆಗೆಲ್ಲ ನಾನು ಮತ್ತು ದೇವನೂರು ಮಹಾದೇವ ನವ್ಯ ಕಾವ್ಯವನ್ನು ಸಮರ್ಥಿಸುವುದೇ ನಮ್ಮ ಜೀವನದ ಪರಮ ಗುರಿ ಎಂಬ ರೀತಿಯಲ್ಲಿ ನವ್ಯಕಾವ್ಯದ ಪರ ವಕಾಲತ್ತು ವಹಿಸುತ್ತಿದ್ದೆವು.ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಕಾವ್ಯಅಥವಾ ಸಾಹಿತ್ಯ ಅರ್ಥವಾಗುವುದು ಅಂದರೇನು?
     ಸಾಹಿತಿ ಬರೆದದ್ದು ನಮ್ಮ ಸಂವೇದನೆಯನ್ನು ತಾಗುವುದು ಎಂಬುದನ್ನು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ?ಸಾಹಿತಿಯ ಕಾಣ್ಕೆ,ದರ್ಶನ ಅಥವಾ ಅನುಭವ ಇವು ನಮಗೆ ಗ್ರಾಹ್ಯವಾಗುವುದು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ? ಇವೆರೆಡೂ ಹೇಳಿಕೆಗಳನ್ನು ಈ ಲೇಖನದ ಮಟ್ಟಿಗೆ ಒಪ್ಪಿ ಮುಂದುವರೆಯುತ್ತೇನೆ.
     ಸಾಹಿತ್ಯದ ಮಾಧ್ಯಮ ಭಾಷೆ. ನಮ್ಮ ದಿನಬಳಕೆಯ ಸಂವಹನದ ಮಾಧ್ಯಮವೂ ಭಾಷೆ.ದಿನಬಳಕೆಯಲ್ಲಿ ಭಾಷೆ ಹೆಚ್ಚು  ವಾಚ್ಯವಾಗಿಯೂ,ಸಾಹಿತ್ಯದ ಬಳಕೆಯಲ್ಲಿ ಹೆಚ್ಚು ಧ್ವನ್ಯಾತ್ಮಕವಾಗಿಯೂ ಕೆಲಸ ಮಾಡುತ್ತದೆ.ವಾಚ್ಯಾರ್ಥಕ್ಕೆ ಸಂಬಂಧಿಸಿದಂತೆ ಭಾಷೆಯ ಈ ಎರಡು ರೀತಿಯ ಬಳಕೆಯಲ್ಲು ವ್ಯತ್ಯಾಸವಿಲ್ಲ. ಸಹಜವಾದ ಮಾತಿಗಿರುವಂತೆ ಸಾಹಿತ್ಯದ ಭಾಷೆಗೂ ವಾಚ್ಯಾರ್ಥವಿರಲೇಬೇಕು,ಇರುತ್ತದೆ. ಹಾಗಾದರೆ ಮಾತು ಸಾಹಿತ್ಯವಾಗಲು ಈ ವಾಚ್ಯಾರ್ಥವನ್ನು ಮೀರಿದ ಮತ್ತೊಂದು ಅರ್ಥ ಸ್ಫುರಿಸಬೇಕು. ಅಂದರೆ, ಸಾಹಿತ್ಯ ಅರ್ಥವಾಗುವುದು ಅಂದರೆ ಈ ವಾಚ್ಯಾರ್ಥ ಮತ್ತು ಅದನ್ನು ಮೀರಿದ ಮತ್ತೊಂದು ಅರ್ಥ ಎರಡೂ ಅರ್ಥವಾಗುವುದು.ಒಂದೆರೆಡು ಉದಾಹರಣೆಯ ಮೂಲಕ ನನ್ನ ಹೇಳಿಕೆಯನ್ನು ವಿಸ್ತರಿಸುತ್ತೇನೆ.
     "ಗಂಗೆಯಲಿ ತೇಲಿ ಬಂದನು ಕರ್ಣ,ರಾಧೇಯ,ಸಾಯಿಸಿಲಕಲ್ಲದೇ ಬರಳು ಕುಂತಿ". ಅಡಿಗರ ಭೂಮಿಗೀತ ಕವನದ ಒಂದು ಸಾಲು ಇದು.ಕರ್ಣ ಕುಂತಿಯ ಕತೆ ಗೊತ್ತಿರುವ ನಮಗೆ ಇದರ ವಾಚ್ಯಾರ್ಥ ಸುಲಭವಾಗಿ ಹೊಳೆಯುತ್ತದೆ. ಹುಟ್ಟಿದ ಕೂಡಲೇ ಗಂಗೆಯಲ್ಲಿ ಕರ್ಣನನ್ನು ತೇಲಿಬಿಟ್ಟ ಕುಂತಿ ಮತ್ತವನನ್ನು ಭೇಟಿಯಾಗುವುದು ಅವನ ಬಳಿ ಮಾತು ಪಡೆಯಲು. ಹೀಗೆ ಕುಂತಿ ಪಡೆದ ಮಾತು ಕರ್ಣನ ಸಾವಿಗೂ ಕಾರಣವಾಗುತ್ತದೆ.
     ಕುಂತಿ ತನ್ನ ಮಗನ ಪ್ರಾಣವನ್ನೇ ತನ್ನುಳಿದ ಮಕ್ಕಳ ಉಳಿವಿಗಾಗಿ ಕೇಳುವುದು ಹೇಗೆ ಸಾಧ್ಯ? ಇದು ಸೂಕ್ಷ್ಮವಾಗಿ ತಾಯ್ತನವನ್ನು ಅಗೌರವಿಸಿದಂತಲ್ಲವೇ? ಅದ್ದರಿಂದ  ರಾಧೇಯ ಎಂಬ ಪದಪ್ರಯೋಗ ಮಾಡುವ ಮೂಲಕ ತೇಲಿಬಿಟ್ಟಾಗ ಕರ್ಣನಾಗಿದ್ದವ ಮತ್ತೆ ಕುಂತಿ ಕಂಡಾಗ  ರಾಧೆಯ ಮಗ ರಾಧೇಯನಾಗಿದ್ದ, ಆತ ಕೌಂತೇಯ ಆಗಿರಲೇ ಇಲ್ಲ,ಆದ್ದರಿಂದ ಕುಂತಿಗೆ ನೈತಿಕ ಸಂಕಟ ಎದುರಾಗಲಿಲ್ಲ ಅಥವಾ ಎದುರಾದರೂ ತನ್ನ ಮಗ ಎಂದು ಒಪ್ಪಿ ಬಿಡುವಷ್ಟು ಪ್ರಬಲವಾಗಿರಲಿಲ್ಲ ಎಂಬೆಲ್ಲ ಧ್ವನಿ ಹುಟ್ಟಿಸುತ್ತಾರೆ. ಗಂಗೆಯಲಿ ತೇಲಿ ಬಂದನು ಕರ್ಣ ಸಾಯಿಸಿಲಿಕಲ್ಲದೇ ಬರಳು ಕುಂತಿ ಎಂದು ಬರೆದಿದ್ದರೆ ವಾಚ್ಯಾರ್ಥದಲ್ಲಿ ಬಹಳ ಬದಲಾವಣೆಯೇನೂ ಆಗುತ್ತಿರಲಿಲ್ಲ. ಮಗನನ್ನೇ ಸಾಯಿಸಲು ಬರುವ ಕುಂತಿ ಎಂಬುದು ತುಸು ಕಾವ್ಯದ ಓಟಕ್ಕೆ ಧಕ್ಕೆ ತರುತ್ತಿತ್ತು. ಈಗ
ರಾಧೇಯ ಎಂಬುದರ ಮೂಲಕವಾಗಿ  ಆತ ಕುಂತಿಯ ಮಗ ಆಗಿರಲಿಲ್ಲ, ರಾಧೆಯ ಮಗನಾಗಿದ್ದ,ಆದ್ದರಿಂದ ಪ್ರಾಣ ಪಡೆವ ಮಾತು ಪಡೆಯಲು ಕುಂತಿಗೆ ಹಿಂಸೆಯಾಗಲಿಲ್ಲ ಎಂಬ ಅರ್ಥ ಧ್ವನಿಸುವಂತೆ ಮಾಡುತ್ತಾರೆ. ಇಡೀ ಭೂಮಿಗೀತ ಕವನದ ಕೇಂದ್ರವಾಗಿರುವ ಪರಕೀಯತೆಯ ಹಿನ್ನೆಲೆಯಲ್ಲಿ ಇದರ ಅರ್ಥ ಇನ್ನಷ್ಟು ವಿಸ್ತಾರ ಪಡೆಯುತ್ತದೆ. (ರಾಧೆಯ ಮಗನಾಗಿದ್ದ ಕರ್ಣನಿಗೆ ಕುಂತಿ ಪರಕೀಯಳಾಗಿದ್ದಳು. ತಾನು ಕುಂತಿಯ ಮಗ ಎಂದು ತಿಳಿದ ಕ್ಷಣದಿಂದ ಅವನು ರಾಧೆಗೂ ಪರಕೀಯನಾಗಿಬಿಡುತ್ತಾನೆ.)
ಭಾಷೆ ವಿವರಗಳನ್ನು ಚಿತ್ರಿಸುವಾಗ ಅರ್ಥವಾಗುವುದು ಸುಲಭ. ಭಾಷೆಯನ್ನು ನಾವು ದಿನನಿತ್ಯ ಹಾಗೆಯೇ ಬಳಸುತ್ತೇವೆ. ವಿವರಗಳ ಮೂಲಕ ಸನ್ನಿವೇಶವನ್ನು ಕಟ್ಟುವುದು ಗದ್ಯದ ಸಹಜತೆ,ಸ್ವರೂಪ. ವಿವರಗಳೇ ಇಲ್ಲದ ಕಥೆ ಕಾದಂಬರಿಗಳು ಇರುವುದು ಬಲು ಅಪರೂಪ.(ಇದ್ದರೂ ಅವು ಮತ್ತೆಅರ್ಥವಾಗದ ನವ್ಯಕಥೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ.)ಯಾವುದೇ ವಿವರಣೆಯ ವಾಚ್ಯಾರ್ಥ ಸುಲಭವಾಗಿ ಆಗುವುದರಿಂದ ನಮಗೆ ಅದು ಅರ್ಥವಾಯಿತು ಅನಿಸುತ್ತದೆ. ಈ ರೀತಿಯ ವಿವರಣಾತ್ಮಕ ಚಿತ್ರಣದ ಮೂಲಕವಾಗಿ ಮತ್ತೊಂದನ್ನು ಧ್ವನಿಸುತ್ತಿರುವುದು ನಮಗೆ ಅರ್ಥವಾಗದಿದ್ದರೂ ವಿವರಣಾತ್ಮಕವಾದ ಚಿತ್ರಣ ಅರ್ಥವಾಗಿರುವ ಕಾರಣ ಅದು ಅರ್ಥವಾಯಿತು ಎಂದು ಭಾವಿಸುತ್ತೇವೆ. ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ ಮೊದಲಾದ ಕಾದಂಬರಿಗಳ ಧ್ವನ್ಯಾರ್ಥ ಅರ್ಥವಾಗದವರಿಗೂ ಅವುಗಳ ವಾಚ್ಯಾರ್ಥ ಅರ್ಥವಾಗುವುದರಿಂದ ಓದಲು ತೊಂದರೆಯಾಗುವುದಿಲ್ಲ. ಬೇಂದ್ರೆಯವರ ಬೆಳಗು ಕವನದ ಧ್ವನಿಸೂಕ್ಷ್ಮತೆ ಗ್ರಹಿಕೆಯಾಗದಿದ್ದರೂ ಆ ಕವನಗ ಸೊಗಸಾದ ವಾಚ್ಯಾರ್ಥದ ಕಾರಣ ಅರ್ಥವೇ ಆಗುತ್ತಿಲ್ಲ ಎಂದು ಅನಿಸುವುದಿಲ್ಲ. 
ಆದರೆ ನವ್ಯಕಾವ್ಯ ವಿವರಣೆಯನ್ನು ಮುಖ್ಯವಾಗಿಸಿಕೊಳ್ಳದೆ ಹೆಚ್ಚು ರೂಪಕವಾಗಿ, ರೂಪಕಗಳ ನಡುವಿನ ಸಂಬಂಧದ ಮೂಲಕವಾಗಿ ಅರ್ಥ ಕಟ್ಟುವ ವಿಧಾನ ಬಳಸಿದ್ದರಿಂದ ಅರ್ಥವಾಗುವುದು ಕಷ್ಟವಾಯಿತು. ಮೊದಲಿಗೆ ರೂಪಕ ಅರ್ಥವಾಗಬೇಕು.ಅನಂತರ ಒಂದು ರೂಪಕ ಮತ್ತೊಂದು ರೂಪಕದೊಡನೆ ಪಡೆಯುವ ಸಂಬಂಧ ಅರ್ಥವಾಗಬೇಕು.ಅನಂತರ ಈ ರೀತಿಯ ಸಂಬಂಧ ಸೃಷ್ಟಿಸುವ ಧ್ವನಿ ಅರ್ಥವಾಗಬೇಕು. ಇವಿಷ್ಟು ತುಂಬಾ ಸರಳವಾಗಿ ಸಹಜವಾಗಿ ಆಗಬೇಕು. ತಾರ್ಕಿಕ ಬೆಳವಣಿಗೆ ಸಾಹಿತ್ಯ ಅರ್ಥವಾಗುವಲ್ಲಿ ಸಹಕಾರಿ. ನವ್ಯಕಾವ್ಯದಲ್ಲಿ ಈ ರೀತಿಯ ಸಹಜ ತಾರ್ಕಿಕ ಬೆಳವಣಿಗೆ ಇರದೆ ರೂಪಕಗಳ,ಅಥವಾ ವಿವರಣೆಗಳ ಅತಾರ್ಕಿಕ ಜೋಡಣೆಯ ಮೂಲಕ ತಾರ್ಕಿಕ ಅರ್ಥ ಹೊರಡಿಸುವ ಕಸಬುದಾರಿಕೆಯ ಕಾರಣದಿಂದ ಅರ್ಥವಾಗುವುದು ಕಷ್ಟ ಅನಿಸಬಹುದು. ಮೂರು ಉದಾಹರಣೆಗಳು:
೧. ಬಾನಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
    ಹತ್ತಿಬಿಲ್ಲಿನ ಕಸದ ಕತ್ತಲೆಯಲಿ
    ಗಂಟೆ ಎಷ್ಟೆಂದು ಕೇಳಿದರೇನ ಹೇಳಲಿ
    ಎಷ್ಟೊಂದು ಗಡಿಯಾರ ಅಂಗಡಿಯಲಿ.
೨. ಕಾಡು ಮರಗಳ ಮಧ್ಯೆ ಮನೆ
    ಸಿಮೆಂಟು ಬಿರುಕಿನಲ್ಲಿ ಹುಲ್ಲು
    ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ
    ಸೊಪ್ಪು.
೩. ಡಾಕ್ಟರರು ನರ್ಸುಗಳು ಹೆರಿಗೆ ಮನೆಯೊಳಹೊರಗೆ
    ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
    ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
    ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಕ್ರಿಯೆಯಲ್ಲಿ       
    ಪಾರಂಗತ
(ನನ್ನ ನೆನಪನ್ನು ನಂಬಿ ಈ ಸಾಲುಗಳನ್ನು ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಮತ್ತು ಸರಿಮಾಡಿಕೊಂಡು ಓದಿ)5 comments:

sunaath said...

ಮೃತ್ಯುಂಜಯರೆ,
(೧)ದೀರ್ಘ ತೆರಪಿನ ನಂತರ ನೀವು ಬರೆದಿದ್ದೀರಿ. ನಿಮ್ಮ ಲೇಖನಗಳನ್ನು ಓದಲು ಕಾತರಿಸುತ್ತಿದ್ದ ನನಗೆ ಇದು ಸಂತೋಷದ ಮೊದಲ ಕಾರಣ.
(೨)ಒಂದು ಅರ್ಥಪೂರ್ಣ ಲೇಖನವನ್ನು ಓದುತ್ತಿರುವದು ಸಂತೋಷಕ್ಕೆ ಎರಡನೆಯ ಕಾರಣ.
(೩)ದೇವನೂರು ಮಹಾದೇವರು ನಿಮ್ಮ ಕ್ಲಾಸ್‍ಮೇಟ್ ಎಂದು ತಿಳಿಯಿತು.
(೪)ತಿಳಿಯದಂತೆ ಯಾರಾದರೂ ಬರೆದರೆ, ನನಗೆ ಅನಿಸುವಂತೆ ಅದಕ್ಕೆ ಒಂದು ಕಾರಣ ಹೀಗಿದ್ದೀತು:
ತಾನು ಬರೆದದ್ದು simplistic ಆಗುವದು ಯಾವುದೇ ಲೇಖಕನಿಗೆ ಬೇಸರದ ವಿಷಯ. ಅದನ್ನು ನಿವಾರಿಸಲು ಆತ ಸಂಕೀರ್ಣ ಶೈಲಿಯನ್ನು ಬಳಸುತ್ತಿರಬಹುದು!

ಸಿಂಧು sindhu said...

ಹಿರಿಯರೆ,
ಆಸಕ್ತಿ ಹುಟ್ಟಿಸುವ ಲೇಖನ.
ನೀವು ಕೇಳಿದ ಮಾತುಗಳು ನಮ್ಮ ಪೀಳಿಗೆಯಲ್ಲೂ ಗಟ್ಟಿಯಾಗೇ ಕೇಳಿಬಂತು.
ನಮ್ಮ ಕಾಲದಲ್ಲಿ "ನವ್ಯ" ಹೋಗಿ ಬರಿಯ ಕಾವ್ಯ ಕವಿತೆಗೇ ಈ ಕಾಂಟೆಕ್ಸ್ಟ್ (ಅರ್ಥವಾಗದ್ದು ಎಂಬುದು) ಬಂದು ಬಿಟ್ಟಿದೆ.
ಎಲ್ಲ ಹಳೆಯ,ಹಿರಿಯ ಕಾವ್ಯ ಕವಿತೆಗಳ ಜೊತೆಗೆ ಇತ್ತೀಚಿನವರೆಗಿನ ಕಾವ್ಯ,ಕವಿತೆ,ಸಾಹಿತ್ಯ ಎಲ್ಲವನ್ನೂ ಇಷ್ಟಪಟ್ಟು ಓದುವ ನನಗೆ, ಈ ಓದಿನಿಂದ ಹುಟ್ಟುವ ಭಾವೋತ್ಕರ್ಷ, ಹೊಸ ಹೊಸ ಆಲೋಚನೆಗಳ ಬಗ್ಗೆಯೇ ಒಲವು. ಯಾವುದೇ ಪಂಥ,ಶೈಲಿ,ಇದ್ದರೂ ಕವಿತೆಯೊಂದರ ಅಂತಃಸತ್ವಕ್ಕೆ ಒಂದು ಕಿಂಡಿ ದೊರಕುವಾಗ ತುಂಬ ಹಿಗ್ಗಾಗಿ ಬಿಡುತ್ತದೆ.
ನನ್ನ ಕೆಲವು ಲಹರಿಗಳನ್ನ ಅಕ್ಷರಕ್ಕಿಳಿಸುವಾಗ ನಾನು ಆರಿಸಿಕೊಂಡು ರೂಪಕಗಳನ್ನೇ ಹೆಣೆದಿದ್ದಿದೆ. ನನ್ನ ಉದ್ದೇಶ ನನ್ನ ಒಳಗುದಿಗೊಂದು ದಾರಿ ಮತ್ತು ತೀರಾ ವಾಚ್ಯವಾಗದೆ ಹೀಗಿರಬಹುದು ಎಂದು ಸೂಚಿಸುವ ಸನ್ನಿವೇಶ. ಆ ಕ್ಷಣದಲ್ಲಿ ನನ್ನ ತಟ್ಟಿ ಹಾಯುವ ಆಲೋಚನೆಗಳನ್ನ ಅಕ್ಷರವಾಗಿಸುವ ತುಡಿತವು ಮುಂದೆ ಹಾಗಿರುವುದೋ ಇಲ್ಲವೋ ಗೊತ್ತಿರುವ ಆಲೋಚನೆಯೂ ಇದಕ್ಕೆ ಕಾರಣವಿರಬಹುದು.

ಇಲ್ಲೊಂದೆರಡು ಕವಿಸಾಲು ನಿಮ್ಮ ಅವಗಾಹನೆಗಾಗಿ :
ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಕಂಡ ನೋಟ ಸಮುದ್ರದಂಥ ಪ್ರಾಣಿ (ಕೆ-ಎಸ್.ನ - ಮಿತಿ ಮತ್ತು ಅರಿವನ್ನು ಚಿತ್ರಿಸಿದ ಸೊಗಸು)
ಸೂಜಿ ಹಿಂದ ದಾರಧಾಂಗ, ಕೊಳ್ಳದೊಳಗ ಜಾರಿಧಾಂಗ...( ಬೇಂದ್ರೆ - ಒಂದ ಬಾರಿ ನನ್ನಾ ನೋಡಿ..- ಹಂಬಲದ ಸೆಳೆತಕ್ಕೆ)
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ.. ( ನಿಸಾರ ಅಹ್ಮದ್ - ಮತ್ತದೇ ಬೇಸರ - ಹೊಲಕ್ಕೆ ದಾಳಿಯಿಡುವ ಆನೆಗಳ ಹಿಂಡಿನ ರೂಪಕ)
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ, ಏನೊ ತೀಡಲು ಎಲ್ಲೋ ತಾಗಲು.. (ಅಡಿಗರು - ಮೋಹನ ಮುರಲೀ - ಹುದುಗಿಕೊಂಡೇ ಇರುವ ಕಾಳ್ಗಿಚ್ಚಿನ ರೂಪಕದ ಸೊಗಸು)

ಬರೆಯಿರಿ ಇನ್ನಷ್ಟು. ಓದಲಿಕ್ಕೆ ಹಿತವಾಗುತ್ತದೆ.

ಪ್ರೀತಿಯಿಂದ
ಸಿಂಧು

ಈಶ್ವರ said...

ತುಂಬಾ ಅರ್ಥಪೂರ್ಣ ಮತ್ತೆ ಉಪಯುಕ್ತವಾಗಿದೆ ಸರ್. ಇನ್ನೂ ಹೆಚ್ಚಾಗಿ ಬರೆಯಬೇಕು ಎನ್ನುವುದೊಂದು ಪ್ರಾರ್ಥನೆ.

ನಿಮಗೆ ಬಿಡುವಾದಲ್ಲಿ ನನ್ನ ಬ್ಲಾಗ್ ಗೂ ಭೇಟಿಕೊಡಿ.
http://bhavakirana.blogspot.com/

ಶ್ರೀಪಾದು said...

ಯಾವುದೇ ಸಂವಹನ ಮಾಧ್ಯಮದ ಸಾರ್ಥಕತೆ , ಹೇಳುವವ ಏನನ್ನ ಹೇಳಲಿಕ್ಕೆ ಬಯಸುತ್ತಿದ್ದಾನೋ ಅದೇ ಸಂದೇಶ ಕೇಳುಗನಿಗೆ ಅರ್ಥವಾದಾಗ ಮಾತ್ರ ಅಲ್ಲವೇ ??.

g.mruthyunjaya said...

nanage hEgO haage nimagoo aalasya aavarisideye?