Sunday, January 15, 2012

ಕಾವ್ಯಾರ್ಥ..



     ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ. ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು. ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ. ಕಾರಣ ಗೊತ್ತಿಲ್ಲ.ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ,ನವ್ಯ ಬುದ್ಧಿಜೀವಿಗಳಿಗೇ ಹಾಗೆ ಎಂದು ನನ್ನನ್ನು ಬುದ್ಧಿಜೀವಿಗಳ ಗುಂಪಿಗೆ ಸೇರಿಸಿದ. ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ.
     ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ. ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂಬ ಮಾತು ತುಂಬಾ ಹಿಂದಿನಿಂದಲೂ ಇದೆ.ನಾನು ಎಮ್... ಓದುತ್ತಿದ್ದಾಗಲೂ ನನ್ನ ಕೆಲ ಅಧ್ಯಾಪಕರು ಹಾಗೇ ಹೇಳುತ್ತಿದ್ದರು. ಆಗೆಲ್ಲ ನಾನು ಮತ್ತು ದೇವನೂರು ಮಹಾದೇವ ನವ್ಯ ಕಾವ್ಯವನ್ನು ಸಮರ್ಥಿಸುವುದೇ ನಮ್ಮ ಜೀವನದ ಪರಮ ಗುರಿ ಎಂಬ ರೀತಿಯಲ್ಲಿ ನವ್ಯಕಾವ್ಯದ ಪರ ವಕಾಲತ್ತು ವಹಿಸುತ್ತಿದ್ದೆವು.ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಕಾವ್ಯಅಥವಾ ಸಾಹಿತ್ಯ ಅರ್ಥವಾಗುವುದು ಅಂದರೇನು?
     ಸಾಹಿತಿ ಬರೆದದ್ದು ನಮ್ಮ ಸಂವೇದನೆಯನ್ನು ತಾಗುವುದು ಎಂಬುದನ್ನು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ?ಸಾಹಿತಿಯ ಕಾಣ್ಕೆ,ದರ್ಶನ ಅಥವಾ ಅನುಭವ ಇವು ನಮಗೆ ಗ್ರಾಹ್ಯವಾಗುವುದು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ? ಇವೆರೆಡೂ ಹೇಳಿಕೆಗಳನ್ನು ಈ ಲೇಖನದ ಮಟ್ಟಿಗೆ ಒಪ್ಪಿ ಮುಂದುವರೆಯುತ್ತೇನೆ.
     ಸಾಹಿತ್ಯದ ಮಾಧ್ಯಮ ಭಾಷೆ. ನಮ್ಮ ದಿನಬಳಕೆಯ ಸಂವಹನದ ಮಾಧ್ಯಮವೂ ಭಾಷೆ.ದಿನಬಳಕೆಯಲ್ಲಿ ಭಾಷೆ ಹೆಚ್ಚು  ವಾಚ್ಯವಾಗಿಯೂ,ಸಾಹಿತ್ಯದ ಬಳಕೆಯಲ್ಲಿ ಹೆಚ್ಚು ಧ್ವನ್ಯಾತ್ಮಕವಾಗಿಯೂ ಕೆಲಸ ಮಾಡುತ್ತದೆ.ವಾಚ್ಯಾರ್ಥಕ್ಕೆ ಸಂಬಂಧಿಸಿದಂತೆ ಭಾಷೆಯ ಈ ಎರಡು ರೀತಿಯ ಬಳಕೆಯಲ್ಲು ವ್ಯತ್ಯಾಸವಿಲ್ಲ. ಸಹಜವಾದ ಮಾತಿಗಿರುವಂತೆ ಸಾಹಿತ್ಯದ ಭಾಷೆಗೂ ವಾಚ್ಯಾರ್ಥವಿರಲೇಬೇಕು,ಇರುತ್ತದೆ. ಹಾಗಾದರೆ ಮಾತು ಸಾಹಿತ್ಯವಾಗಲು ಈ ವಾಚ್ಯಾರ್ಥವನ್ನು ಮೀರಿದ ಮತ್ತೊಂದು ಅರ್ಥ ಸ್ಫುರಿಸಬೇಕು. ಅಂದರೆ, ಸಾಹಿತ್ಯ ಅರ್ಥವಾಗುವುದು ಅಂದರೆ ಈ ವಾಚ್ಯಾರ್ಥ ಮತ್ತು ಅದನ್ನು ಮೀರಿದ ಮತ್ತೊಂದು ಅರ್ಥ ಎರಡೂ ಅರ್ಥವಾಗುವುದು.ಒಂದೆರೆಡು ಉದಾಹರಣೆಯ ಮೂಲಕ ನನ್ನ ಹೇಳಿಕೆಯನ್ನು ವಿಸ್ತರಿಸುತ್ತೇನೆ.
     "ಗಂಗೆಯಲಿ ತೇಲಿ ಬಂದನು ಕರ್ಣ,ರಾಧೇಯ,ಸಾಯಿಸಿಲಕಲ್ಲದೇ ಬರಳು ಕುಂತಿ". ಅಡಿಗರ ಭೂಮಿಗೀತ ಕವನದ ಒಂದು ಸಾಲು ಇದು.ಕರ್ಣ ಕುಂತಿಯ ಕತೆ ಗೊತ್ತಿರುವ ನಮಗೆ ಇದರ ವಾಚ್ಯಾರ್ಥ ಸುಲಭವಾಗಿ ಹೊಳೆಯುತ್ತದೆ. ಹುಟ್ಟಿದ ಕೂಡಲೇ ಗಂಗೆಯಲ್ಲಿ ಕರ್ಣನನ್ನು ತೇಲಿಬಿಟ್ಟ ಕುಂತಿ ಮತ್ತವನನ್ನು ಭೇಟಿಯಾಗುವುದು ಅವನ ಬಳಿ ಮಾತು ಪಡೆಯಲು. ಹೀಗೆ ಕುಂತಿ ಪಡೆದ ಮಾತು ಕರ್ಣನ ಸಾವಿಗೂ ಕಾರಣವಾಗುತ್ತದೆ.
     ಕುಂತಿ ತನ್ನ ಮಗನ ಪ್ರಾಣವನ್ನೇ ತನ್ನುಳಿದ ಮಕ್ಕಳ ಉಳಿವಿಗಾಗಿ ಕೇಳುವುದು ಹೇಗೆ ಸಾಧ್ಯ? ಇದು ಸೂಕ್ಷ್ಮವಾಗಿ ತಾಯ್ತನವನ್ನು ಅಗೌರವಿಸಿದಂತಲ್ಲವೇ? ಅದ್ದರಿಂದ  ರಾಧೇಯ ಎಂಬ ಪದಪ್ರಯೋಗ ಮಾಡುವ ಮೂಲಕ ತೇಲಿಬಿಟ್ಟಾಗ ಕರ್ಣನಾಗಿದ್ದವ ಮತ್ತೆ ಕುಂತಿ ಕಂಡಾಗ  ರಾಧೆಯ ಮಗ ರಾಧೇಯನಾಗಿದ್ದ, ಆತ ಕೌಂತೇಯ ಆಗಿರಲೇ ಇಲ್ಲ,ಆದ್ದರಿಂದ ಕುಂತಿಗೆ ನೈತಿಕ ಸಂಕಟ ಎದುರಾಗಲಿಲ್ಲ ಅಥವಾ ಎದುರಾದರೂ ತನ್ನ ಮಗ ಎಂದು ಒಪ್ಪಿ ಬಿಡುವಷ್ಟು ಪ್ರಬಲವಾಗಿರಲಿಲ್ಲ ಎಂಬೆಲ್ಲ ಧ್ವನಿ ಹುಟ್ಟಿಸುತ್ತಾರೆ. ಗಂಗೆಯಲಿ ತೇಲಿ ಬಂದನು ಕರ್ಣ ಸಾಯಿಸಿಲಿಕಲ್ಲದೇ ಬರಳು ಕುಂತಿ ಎಂದು ಬರೆದಿದ್ದರೆ ವಾಚ್ಯಾರ್ಥದಲ್ಲಿ ಬಹಳ ಬದಲಾವಣೆಯೇನೂ ಆಗುತ್ತಿರಲಿಲ್ಲ. ಮಗನನ್ನೇ ಸಾಯಿಸಲು ಬರುವ ಕುಂತಿ ಎಂಬುದು ತುಸು ಕಾವ್ಯದ ಓಟಕ್ಕೆ ಧಕ್ಕೆ ತರುತ್ತಿತ್ತು. ಈಗ
ರಾಧೇಯ ಎಂಬುದರ ಮೂಲಕವಾಗಿ  ಆತ ಕುಂತಿಯ ಮಗ ಆಗಿರಲಿಲ್ಲ, ರಾಧೆಯ ಮಗನಾಗಿದ್ದ,ಆದ್ದರಿಂದ ಪ್ರಾಣ ಪಡೆವ ಮಾತು ಪಡೆಯಲು ಕುಂತಿಗೆ ಹಿಂಸೆಯಾಗಲಿಲ್ಲ ಎಂಬ ಅರ್ಥ ಧ್ವನಿಸುವಂತೆ ಮಾಡುತ್ತಾರೆ. ಇಡೀ ಭೂಮಿಗೀತ ಕವನದ ಕೇಂದ್ರವಾಗಿರುವ ಪರಕೀಯತೆಯ ಹಿನ್ನೆಲೆಯಲ್ಲಿ ಇದರ ಅರ್ಥ ಇನ್ನಷ್ಟು ವಿಸ್ತಾರ ಪಡೆಯುತ್ತದೆ. (ರಾಧೆಯ ಮಗನಾಗಿದ್ದ ಕರ್ಣನಿಗೆ ಕುಂತಿ ಪರಕೀಯಳಾಗಿದ್ದಳು. ತಾನು ಕುಂತಿಯ ಮಗ ಎಂದು ತಿಳಿದ ಕ್ಷಣದಿಂದ ಅವನು ರಾಧೆಗೂ ಪರಕೀಯನಾಗಿಬಿಡುತ್ತಾನೆ.)
ಭಾಷೆ ವಿವರಗಳನ್ನು ಚಿತ್ರಿಸುವಾಗ ಅರ್ಥವಾಗುವುದು ಸುಲಭ. ಭಾಷೆಯನ್ನು ನಾವು ದಿನನಿತ್ಯ ಹಾಗೆಯೇ ಬಳಸುತ್ತೇವೆ. ವಿವರಗಳ ಮೂಲಕ ಸನ್ನಿವೇಶವನ್ನು ಕಟ್ಟುವುದು ಗದ್ಯದ ಸಹಜತೆ,ಸ್ವರೂಪ. ವಿವರಗಳೇ ಇಲ್ಲದ ಕಥೆ ಕಾದಂಬರಿಗಳು ಇರುವುದು ಬಲು ಅಪರೂಪ.(ಇದ್ದರೂ ಅವು ಮತ್ತೆಅರ್ಥವಾಗದ ನವ್ಯಕಥೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ.)ಯಾವುದೇ ವಿವರಣೆಯ ವಾಚ್ಯಾರ್ಥ ಸುಲಭವಾಗಿ ಆಗುವುದರಿಂದ ನಮಗೆ ಅದು ಅರ್ಥವಾಯಿತು ಅನಿಸುತ್ತದೆ. ಈ ರೀತಿಯ ವಿವರಣಾತ್ಮಕ ಚಿತ್ರಣದ ಮೂಲಕವಾಗಿ ಮತ್ತೊಂದನ್ನು ಧ್ವನಿಸುತ್ತಿರುವುದು ನಮಗೆ ಅರ್ಥವಾಗದಿದ್ದರೂ ವಿವರಣಾತ್ಮಕವಾದ ಚಿತ್ರಣ ಅರ್ಥವಾಗಿರುವ ಕಾರಣ ಅದು ಅರ್ಥವಾಯಿತು ಎಂದು ಭಾವಿಸುತ್ತೇವೆ. ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ ಮೊದಲಾದ ಕಾದಂಬರಿಗಳ ಧ್ವನ್ಯಾರ್ಥ ಅರ್ಥವಾಗದವರಿಗೂ ಅವುಗಳ ವಾಚ್ಯಾರ್ಥ ಅರ್ಥವಾಗುವುದರಿಂದ ಓದಲು ತೊಂದರೆಯಾಗುವುದಿಲ್ಲ. ಬೇಂದ್ರೆಯವರ ಬೆಳಗು ಕವನದ ಧ್ವನಿಸೂಕ್ಷ್ಮತೆ ಗ್ರಹಿಕೆಯಾಗದಿದ್ದರೂ ಆ ಕವನಗ ಸೊಗಸಾದ ವಾಚ್ಯಾರ್ಥದ ಕಾರಣ ಅರ್ಥವೇ ಆಗುತ್ತಿಲ್ಲ ಎಂದು ಅನಿಸುವುದಿಲ್ಲ. 
ಆದರೆ ನವ್ಯಕಾವ್ಯ ವಿವರಣೆಯನ್ನು ಮುಖ್ಯವಾಗಿಸಿಕೊಳ್ಳದೆ ಹೆಚ್ಚು ರೂಪಕವಾಗಿ, ರೂಪಕಗಳ ನಡುವಿನ ಸಂಬಂಧದ ಮೂಲಕವಾಗಿ ಅರ್ಥ ಕಟ್ಟುವ ವಿಧಾನ ಬಳಸಿದ್ದರಿಂದ ಅರ್ಥವಾಗುವುದು ಕಷ್ಟವಾಯಿತು. ಮೊದಲಿಗೆ ರೂಪಕ ಅರ್ಥವಾಗಬೇಕು.ಅನಂತರ ಒಂದು ರೂಪಕ ಮತ್ತೊಂದು ರೂಪಕದೊಡನೆ ಪಡೆಯುವ ಸಂಬಂಧ ಅರ್ಥವಾಗಬೇಕು.ಅನಂತರ ಈ ರೀತಿಯ ಸಂಬಂಧ ಸೃಷ್ಟಿಸುವ ಧ್ವನಿ ಅರ್ಥವಾಗಬೇಕು. ಇವಿಷ್ಟು ತುಂಬಾ ಸರಳವಾಗಿ ಸಹಜವಾಗಿ ಆಗಬೇಕು. ತಾರ್ಕಿಕ ಬೆಳವಣಿಗೆ ಸಾಹಿತ್ಯ ಅರ್ಥವಾಗುವಲ್ಲಿ ಸಹಕಾರಿ. ನವ್ಯಕಾವ್ಯದಲ್ಲಿ ಈ ರೀತಿಯ ಸಹಜ ತಾರ್ಕಿಕ ಬೆಳವಣಿಗೆ ಇರದೆ ರೂಪಕಗಳ,ಅಥವಾ ವಿವರಣೆಗಳ ಅತಾರ್ಕಿಕ ಜೋಡಣೆಯ ಮೂಲಕ ತಾರ್ಕಿಕ ಅರ್ಥ ಹೊರಡಿಸುವ ಕಸಬುದಾರಿಕೆಯ ಕಾರಣದಿಂದ ಅರ್ಥವಾಗುವುದು ಕಷ್ಟ ಅನಿಸಬಹುದು. ಮೂರು ಉದಾಹರಣೆಗಳು:
೧. ಬಾನಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
    ಹತ್ತಿಬಿಲ್ಲಿನ ಕಸದ ಕತ್ತಲೆಯಲಿ
    ಗಂಟೆ ಎಷ್ಟೆಂದು ಕೇಳಿದರೇನ ಹೇಳಲಿ
    ಎಷ್ಟೊಂದು ಗಡಿಯಾರ ಅಂಗಡಿಯಲಿ.
೨. ಕಾಡು ಮರಗಳ ಮಧ್ಯೆ ಮನೆ
    ಸಿಮೆಂಟು ಬಿರುಕಿನಲ್ಲಿ ಹುಲ್ಲು
    ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ
    ಸೊಪ್ಪು.
೩. ಡಾಕ್ಟರರು ನರ್ಸುಗಳು ಹೆರಿಗೆ ಮನೆಯೊಳಹೊರಗೆ
    ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
    ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
    ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಕ್ರಿಯೆಯಲ್ಲಿ       
    ಪಾರಂಗತ
(ನನ್ನ ನೆನಪನ್ನು ನಂಬಿ ಈ ಸಾಲುಗಳನ್ನು ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಮತ್ತು ಸರಿಮಾಡಿಕೊಂಡು ಓದಿ)



























Wednesday, June 29, 2011

ಕಾವ್ಯ ಧ್ವನಿ



ಒಂದು ಪದ ಅಥವಾ ಒಂದು ಪದಗುಚ್ಛ ಕಾವ್ಯದ ಧ್ವನಿಶಕ್ತಿಯನ್ನು ವಿಸ್ತರಿಸುವ ಅನೇಕ ಉದಾಹರಣೆಗಳು ಇವೆ. ಕಾವ್ಯ ಅರ್ಥವಾಗುವುದು ಅಂದರೆ ನಿರ್ದಿಷ್ಟ ಸನ್ನಿವೇಶದಲ್ಲಿ ಉಪಯೋಗಿಸಿದ ಪದಗಳ ಅರ್ಥವಾಗುವುದು ಮತ್ತು ಆ ಸನ್ನಿವೇಶದ ವಾಚ್ಯಾರ್ಥವಾಗುವುದು ಮಾತ್ರವಲ್ಲ. ಜೊತೆಗೇ  ಪದಗಳ ಬಳಕೆಯಲ್ಲಿ, ಸಂಯೋಜನೆಯಲ್ಲಿ ವಾಚ್ಯಾರ್ಥವನ್ನು ಮೀರುವ,ಸನ್ನಿವೇಶದ ಸೂಕ್ಷ್ಮತೆಯನ್ನು ವಿಸ್ತರಿಸುವ ಒಂದು ಹೊಳಹನ್ನು ಗ್ರಹಿಸುವುದು. ಈ ಹೊಳಹು ಆ ಸನ್ನಿವೇಶಕ್ಕೆ ಪೂರಕವಾಗಿದ್ದು ಕಾವ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದೆರಡು ಸನ್ನಿವೇಶಗಳನ್ನು ಕುರಿತು ನಾನು ಬರೆಯುತ್ತಿದ್ದೇನೆ.  ಪ್ರತಿ ಬಾರಿ ಓದಿದಾಗಲೂ ಕುಮಾರವ್ಯಾಸನ ಭಾರತ ಮತ್ತು ಅಡಿಗರ ಕಾವ್ಯ ನನಗೆ ಹೊಸದೆಂಬಂತೆ ಕಾಣುತ್ತವೆ.ಅಲ್ಲಿಂದ ಆರಿಸಿದ ಉದಾಹರಣೆಗಳಿವು. ನಾನು ಕಾವ್ಯವನ್ನು ಗ್ರಹಿಸಿದ ರೀತಿ ತಪ್ಪೂ ಇರಬಹುದು ಎಂಬ ಎಚ್ಚರವೂ ನನಗಿದೆ. ಇದರ ನಿರ್ಧಾರ ಓದುಗರದ್ದು.
*****
ಅಭಿಮನ್ಯು ಚಕ್ರವ್ಯೂಹ ಭೇದನಕ್ಕಾಗಿ ಹೊರಟು ನಿಂತಾಗ, ಆತನ ಸಾರಥಿಯು ಕರ್ಣ, ದ್ರೋಣ,ಕೃಪ, ಜಯದ್ರಥ ಮುಂತಾದವರ ಜೊತೆ ಸಂಗರ ಅಭಿಮನ್ಯುವಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಾನೆ.ಸಾರಥಿ ಆಡುವ ಮಾತು:"ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು" (ಬಲುಹು=ಸಾಮರ್ಥ್ಯ, ಅಂಘೈಸು=ಒಪ್ಪು,ಸಮ್ಮತಿಸು). ಇದಕ್ಕೆ ಪ್ರತಿಯಾಗಿ ಅಭಿಮನ್ಯು ಕೊಡುವ ಉತ್ತರ:
"ಬವರವಾದರೆ ಹರನ ವದನಕೆ
ಬೆವರ ತಹೆನವಗೆಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ" (ಕು.ವ್ಯಾ.-ದ್ರೋ.ಪ.-೪-೫೬)
(ಇದರ ಸರಳ ರೂಪಾಂತರ ಹೀಗೆ: ಬವರವಾದರೆ ಹರನ ವದನಕೆ ಬೆವರ ತಹೆ, ಅವಗೆಡಿಸಿದರೆ ವಾಸವನ ಸದೆವೆ, ಹೊಕ್ಕಡೆ ಅಹುದು ಎನಿಸುವೆನು ಭಾರ್ಗವನ, ಜವನ ಜವಗೆಡಿಸುವೆನು, ಸಾಕಿನ್ನು ಅವರು ಇವರಲಿ ಏನು ಅರ್ಜುನನು ಮಾಧವನು ಮುನಿದೊಡೆ ಗೆಲುವೆನು ಅಂಜದೆ ರಥವ ಹರಿಸೆಂದ)(ಬವರ=ಯುದ್ಧ,ವಾಸವ=ಇಂದ್ರ,ಭಾರ್ಗವ= ಪರಶುರಾಮ,ಜವ=ಯಮ)
ಅಭಿಮನ್ಯುವಂತಹ ಬಿಸಿರಕ್ತದವೀರ ಆಡಬಹುದಾದ ಸಹಜವಾದ ಮಾತಿದು. ನನಗೆ ಅದ್ಭುತವೆನಿಸಿದ್ದು ಬವರವಾದರೆ ಹರನ ವದನಕೆ ಬೆವರ ತಹೆ ಎಂಬ ಹೇಳಿಕೆ.ಇದನ್ನು ವಿಶ್ಲೇಷಿಸುವಾ.

ಹರನ ವದನಕ್ಕೂ ಉಳಿದವರ ವದನಕ್ಕೂ ಒಂದು ಅಂತರವಿದೆ. ಹರನ ವದನದಲ್ಲಿ ಮೂರನೆಯ ಕಣ್ಣುಂಟು ಮತ್ತು ಈ ಕಣ್ಣಿನಲ್ಲಿ ಶಕ್ತಿ ಕಾವಿನ ರೂಪದಲ್ಲಿದೆ. ಈ ಕಾವು ಕ್ಷಣಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನು ಸುಡಬಲ್ಲದು. ಉಳಿದ ಯಾರ ವದನದಲ್ಲೂ ಇಂತಹ ವಿಶೇಷತೆ ಇಲ್ಲ. ಜವನ ವದನದಲ್ಲೂ ಇಲ್ಲ. ಇಡೀ ಜಗತ್ತನ್ನು ಕ್ಷಣದಲ್ಲಿ ದಹಿಸಬಲ್ಲ ಕಾವಿರುವ ಕಣ್ಣು ವದನದಲ್ಲಿ ಇರುವಾಗಲೂ ಶಿವನ ಮುಖ ಬೆವರುವುದಿಲ್ಲ.ಕಾವು ಅತಿಯಾದಾಗ ಮುಖ ಬೆವರುವುದು ಸಹಜ.ಅಂತಹ ಕಾವಿಗೂ ಬೆವರದ ಮುಖವನ್ನು ತನ್ನ ಯುದ್ಧದ ಕಾವಿನಲ್ಲಿ  ಬೆವರುವಂತೆ ಮಾಡುತ್ತೇನೆ ಎಂಬ ಮಾತನ್ನು ಅಭಿಮನ್ಯು ಆಡಿದಾಗ ವ್ಯಕ್ತವಾಗುವುದು ಕವಿಯ ಪ್ರತಿಭೆ.ಬವರವಾದರೆ ಜವನ ವದನಕೆ ಬೆವರ ತಹೆನು...............ಶಿವನ ಜವಗೆಡಿಸುವೆನು ಎಂದು ಹೇಳಿದ್ದರೂ ಛಂದಸ್ಸು ತಪ್ಪುತ್ತಿರಲಿಲ್ಲ,ವಾಚ್ಯಾರ್ಥ ಬದಲಾಗುತ್ತಿರಲಿಲ್ಲ,ಆದರೆ ಈ ಧ್ವನಿ ಮಾತ್ರ ಇರುತ್ತಿರಲಿಲ್ಲ.

ಈ ರೀತಿ ಪದಗಳ ಬಳಕೆಯಲ್ಲಿಯೇ ವಿಶೇಷತೆಯನ್ನು ವ್ಯಕ್ತಪಡಿಸಿದ ಕೆಲವು ಉದಾಹರಣೆಗಳನ್ನು ಗಮನಿಸಿ.

ಭೀಷ್ಮ ಶರಶಯ್ಯಾಗತನಾದ ದಿನದ ಸೂರ್ಯಾಸ್ತವನ್ನು ಕುಮಾರವ್ಯಾಸ ವರ್ಣಿಸುವುದು ಹೀಗೆ: "ಪಡುವಣ ಶೈಲ ವಿಪುಲಸ್ತಂಭದೀಪಿಕೆಯಂತೆ ರವಿ ಮೆರೆದ"(ಭೀ.ಪ-೧೦-೪೨).   ("ಪಡುವಣ ಶೈಲ ವಿಪುಲಸ್ತಂಭದೀಪಿಕೆ"ಎಂಬುದೇ  ಒಂದು ಅದ್ಭುತ ರೂಪಕ). ಇಲ್ಲಿ ಮೆರೆದ ಎಂಬ ಪ್ರಯೋಗವನ್ನು ಗಮನಿಸಿ. ಸೂರ್ಯ ಅಸ್ತಮಿಸಲಿಲ್ಲ,ಮೆರೆಯುತ್ತಾನೆ. ಭೀಷ್ಮ ಸಾಯಲಿಲ್ಲ,ಶರಮಂಚದಲ್ಲಿ ಮೆರೆಯುತ್ತಿದ್ದಾನೆ.ಭೀಷ್ಮನ ಇಡೀ ಬದುಕಿನ ವೈಭವವನ್ನು ಈ ಒಂದು ಪದದ ಮೂಲಕ ಕುಮಾರವ್ಯಾಸ ಚಿತ್ರಿಸುತ್ತಾನೆ.ಮೆರೆದ ಎಂಬ ಪದದ ಬದಲು ಬೇರೆ ಯಾವ ಪದಪ್ರಯೋಗವಾಗಿದ್ದರೂ ಇಂತಹ ಧ್ವನಿ ಹೊರಡುತ್ತಿರಲಿಲ್ಲ.

ಭೀಷ್ಮ ಶರಶಯ್ಯೆ ಸೇರಿದ ದಿನದ ರವಿಯನ್ನು ಕುಮಾರವ್ಯಾಸ ಮೆರೆಸಿದರೆ ದ್ರೋಣನ ಮರಣದ ದಿನದ ಸೂರ್ಯಾಸ್ತವನ್ನು ಚಿತ್ರಿಸಿದ ರೀತಿಯನ್ನು ಗಮನಿಸಿ."ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ"(ದ್ರೊ.ಪ.-೧೯-೫೫).ದ್ರೋಣನ ಸಾವಿನ ಚಿತ್ರಣದ ಹಿನ್ನೆಲೆಯಲ್ಲಿ (ಆಸಕ್ತರು ದ್ರೋಣಪರ್ವದ ಹದಿನೆಂಟನೆಯ ಸಂಧಿಯ ೬೬ ಮತ್ತು ೬೭ ನೆಯ ಪದ್ಯಗಳನ್ನು ಓದಬಹುದು). ಈ ವರ್ಣನೆಯನ್ನು ಗ್ರಹಿಸಿ. ಮಗ ಸತ್ತ ಸುದ್ದಿ ಕೇಳಿಯೂ ಯುದ್ಧ ಮಾಡುತ್ತಿರುವ ದ್ರೋಣ ತನ್ನ ಬಗೆಗಿನ ಭೀಮನ ವ್ಯಂಗಭರಿತ ಟೀಕೆಯಿಂದ ನೊಂದು ಸಾಕೀ ದೇಹವೆಂದು ವಿರಾಗದಲ್ಲಿ  ಯುದ್ಧವಿಮುಖನಾಗುತ್ತಾನೆ. ರವಿ ಕೂಡ ವಿರಾಗದಲ್ಲಿ ಮುಸುಡ(=ಮುಖ) ತಿರುಹುತ್ತಾನೆ. ರವಿ ಅಂಬರವನ್ನು ಬೀಳ್ಕೊಡುತ್ತಾನೆ. ಅಂಬರ ಎಂಬ ಪದಕ್ಕೆ ಆಕಾಶ ಎಂಬ ಜನಜನಿತ ಅರ್ಥವಲ್ಲದೆ ಬಟ್ಟೆ,ಅರಿವೆ ಎಂಬ ಅರ್ಥವೂ ಉಂಟು. ದೇಹವನ್ನು ಅತ್ಮದ ಬಟ್ಟೆ ಎನ್ನುತ್ತಾರೆ. ರವಿ ಆಕಾಶವನ್ನು ಬೀಳ್ಕೊಟ್ಟರೆ ದ್ರೋಣ ದೇಹವನ್ನು ಬೀಳ್ಕೊಡುತ್ತಾನೆ. ಸೂರ್ಯಾಸ್ತವನ್ನು ವಾಚ್ಯಾರ್ಥದಲ್ಲಿ ವರ್ಣಿಸುತ್ತಲೇ  ದ್ರೋಣನ ಸಾವಿನ ಸನ್ನಿವೇಶಕ್ಕೆ ಹೊಸ ಹೊಳಹನ್ನು ಕುಮಾರವ್ಯಾಸ ಕೊಡುತ್ತಾನೆ.

ಇನ್ನು ಕರ್ಣನ ಸಾವಿನ ದಿನದ ಸೂರ್ಯಾಸ್ತವನ್ನು ಗಮನಿಸಿ.
.........ಬಿಸುಟನಂಬುಜ ಮಿತ್ರನಂಬರವ|| (ಕ.ಪ-೨೭-೩೦)
ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ|
ಅಮಳ ಚಕ್ರಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ||(ಕ.ಪ.-೨೭-೩೧)

ಇಲ್ಲಿ ಸೂರ್ಯನನ್ನು ಅಂಬುಜ ಮಿತ್ರ ಎಂದು ಸೂಚಿಸಿರುವುದನ್ನು ಗಮನಿಸಿ. ಅಂಬುಜಮಿತ್ರನಾದ ರವಿ ಅಂಬುಜವನ್ನು ಬಿಟ್ಟು ಅಸ್ತಮಿಸುತ್ತಾನೆ. ಕರ್ಣ ಮತ್ತು ಸುಯೋಧನನ ಸ್ನೇಹದ ಹಿನ್ನೆಲೆಯಲ್ಲಿ ಈ ಹೋಲಿಕೆ ನೀಡುವ ಧ್ವನಿಯ ಬಗ್ಗೆ ಮತ್ತೆ ವಿಸ್ತಾರವಾಗಿ ಬರೆಯುವುದು ಅನಗತ್ಯ. ೩೧ನೆಯ ಪದ್ಯದಲ್ಲಿ ಒಂದರ ಜತೆ ಮತ್ತೊಂದನ್ನು ಜೋಡಿಯಾಗಿಸುವ ಮೂಲಕ ಕರ್ಣ ಸುಯೋಧನರ ಜೋಡಿತನದ ಚಿತ್ರಣವನ್ನು ಸೂಚಿಸುವ ಪರಿ ಬೆರಗು ಹುಟ್ಟಿಸುತ್ತದೆ.

ಅಡಿಗರ ಕಾವ್ಯದಲ್ಲಿ ಬರುವ ಇಂತಹ ಕೆಲವು ಚಿತ್ರಣಗಳ ಬಗೆಗೂ ಬರೆವ ಯೋಚನೆಯಿತ್ತು. ಈ ಲೇಖನವೇ ಸಾಕಷ್ಟು ಉದ್ದವಾಯಿತು. ಅಡಿಗರ ಬಗ್ಗೆ ಇನ್ನೊಮ್ಮೆ..ಎಂದಾದರೂ.                                                                              

























Monday, June 6, 2011

ವೇದೀಯ ಗಣಿತ- ಒಂಭತ್ತರ ಮಾಯಾಲೋಕ.




    ಗಣಿತವೆಂದರೆ ಮೊದಲಿಂದಲೂ ನನಗೆ ಕುತೂಹಲ,ಜೊತೆಗೆ ಭಯ. ಎರಡರ ಬೆಲೆ ಯಾಕೆ ಎರಡೇ ಆಗಿರಬೇಕು?
 ನಾಲ್ಕು ಯಾಕೆ ಆಗಬಾರದು? ಈ ತರಹದ ಕುತೂಹಲ. ಒಂದು ಹೆಜ್ಜೆ ತಪ್ಪಿದರೆ ಇಡಿ ದಾರಿಯನ್ನೇ ಬದಲಾಯಿಸುವ
 ಗಣಿತದ ಪರಿ ಭಯಕ್ಕೆ ಕಾರಣ. ಲೆಕ್ಕ ಬಿಡಿಸುವಾಗ + ಹಾಕುವಲ್ಲಿ ಹಾಕಿದರೆ ಅಷ್ಟೇ ಸಾಕು ಲೆಕ್ಕದ ದಿಕ್ಕೇ ಬದಲಾಗಿ 
ಎಲ್ಲೋ ತಲುಪಿ ಕಕ್ಕಾಬಿಕ್ಕಿಯಾಗುತ್ತೇವೆ. ಈ ಭಯದಿಂದಾಗಿ ಕೆಲವೊಮ್ಮೆ ಸರಿಯಾಗಿ ಬಿಡಿಸಿದ್ದ ಲೆಕ್ಕವನ್ನೂ ಮತ್ತೆ ತಿದ್ದಿ
 ತಪ್ಪು ಮಾಡಿದ ಉದಾಹರಣೆಗಳುಂಟು.ನಮ್ಮ ಗಣಿತದ ಮೇಲಿನ ಭಯವನ್ನು ಹೋಗಲಾಡಿಸಲು ಒಂಭತ್ತರ
 ವಿಶೇಷತೆಯನ್ನು ಆಗ ಹೇಳಿಕೊಟ್ಟಿದ್ದರು. ಕೆಲವು ಉದಾಹರಣೆಗಳು:
      1. 9 ರಿಂದ ಯಾವುದೆ ಅಂಕೆಯನ್ನು ಗುಣಿಸಿ ಬಂದ ಉತ್ತರದ ಅಂಕೆಗಳನ್ನು ಕೂಡಿದರೆ ಬರುವುದು ಒಂಭತ್ತೇ.
      2. 9 ರಿಂದ ಮತ್ತು 9ರಿಂದ ಕೊನೆಗೊಳ್ಳುವ ಸಂಖ್ಯೆಯಿಂದ ಯಾವುದೇ ಸಂಖ್ಯೆಯನ್ನು ಗುಣಿಸಿದರೆ ಬರುವ
 ಉತ್ತರದಲ್ಲಿನ ಅಂಕೆಗಳ ಮೊತ್ತ 9 ಆಗಿರುತ್ತದೆ ಮತ್ತು ಸರಣಿ ಸಂಖ್ಯೆಯಾದಲ್ಲಿ ಸರಣಿ ಉತ್ತರಗಳ ಸಂಖ್ಯೆಯ
 ಕೊನೆಯ ಅಂಕೆ ಹಿಂದಿನ ಕೊನೆಯ ಅಂಕೆಗಿಂತ ಒಂದು ಕಡಿಮೆಯಾಗಿರುತ್ತದೆ. ಉದಾ:
9*21=189 (1+8+9=18>1+8=9)
9*22=198
9*23=207
9*2546=22914(2+2+9+1+4=18=1+8=9)
9*2547=22923
9*2548=252252
99*23=2277
99*24=2376
99*25=2475...ಹೀಗೆ..
       3. ಸರಣಿ ಸಂಖ್ಯೆಯನ್ನು ಕೊನೆಯ ಅಂಕೆ 9 ಆಗಿರುವ ಯಾವುದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಸರಣಿ
 ಉತ್ತರದ ಸಂಖ್ಯೆಯ ಕೊನೆಯ ಅಂಕೆ ಹಿಂದಿನ ಕೊನೆಯ ಅಂಕೆಗಿಂತ ಒಂದು ಕಡಿಮೆಯಾಗಿರುತ್ತದೆ. ಉದಾ:
49*52=2548
69*53=3657
459*2342=1074978
459*2343=1075437
459*2344=1075896
6789*12516=84971124
6789*12517=84977913…..ಹೀಗೇ..
     ಇತ್ತೀಚೆಗೆ ವೇದಗಣಿತ ಹಿಡಿದು ಕೂತೆ. ಕುಮಾರವ್ಯಾಸ,ಪಂಪರನ್ನು ಓದಿ ಓದಿ, ಕಣ್ಣು ಬಿಟ್ಟಿರುವಾಗ,ಮುಚ್ಚಿರುವಾಗ
 ಯಾವಾಗಲೂ ಕೃಷ್ಣ,ಕರ್ಣ,ಕುಂತಿ ಇವರೇ ಕಾಣತೊಡಗಿದ್ದರು. ಎಷ್ಟು ದಿನ ಇವರ ಮುಖವನ್ನೇ ನೋಡುತ್ತಾ ಇರಲು
 ಸಾಧ್ಯ? ಹಾಗಾಗಿ ಮುಖವಿರದ ಗಣಿತದ ಅಂಕಿಗಳತ್ತ ಗಮನ ಹರಿಸಿದೆ. ಇಲ್ಲಿ ನನಗೆ ಅಂಕೆ ಒಂಭತ್ತರ ಇನ್ನಷ್ಟು
 ಮಾಯೆಯ ಮುಖಗಳು ಕಂಡವು. ಒಂಭತ್ತೆಂದರೆ ಮಾಯಾವಿ ಕೃಷ್ಣನಂತೆ ಅನಿಸಿತು!( ನೋಡಿ ಮತ್ತೆ ಕೃಷ್ಣ ಬಂದ.)
    9ರಿಂದ ಅಥವಾ 99, 999, 9999 ಇತ್ಯಾದಿ ಸಂಖ್ಯೆಗಳಿಂದ ಅಷ್ಟೆ ಅಂಕೆಗಳಿರುವ ಸಂಖ್ಯೆಗಳನ್ನು ಗುಣಿಸುವುದು
 ತುಂಬಾ ಸುಲಭ. 48ನ್ನು 99ರಿಂದ, 567ನ್ನು 999ರಿಂದ, 4893ನ್ನು 9999ರಿಂದ ಗುಣಿಸುವಾ. ನಮ್ಮ ಕಲಿಕಾ 
ವಿಧಾನದಲ್ಲಿ ಇದನ್ನು ಗುಣಿಸುವುದು:


48*99               567*999             4893*9999
  432                  6993                       29997
396                  5994                       89991
------               4995                       79992
4752             --------                     39996
-------              566433                 ------------                                    
                                                 48925107                      
                                          
  ಈ ರೀತಿಯ ಲೆಕ್ಕಗಳನ್ನು ಬಿಡಿಸಲು ವೇದ ಒಂದು ಸರಳ ಉಪಾಯ ಹೇಳಿದೆ. ಗುಣಿಸಬೇಕಾದ ಎರಡು ಸಂಖ್ಯೆಗಳಲ್ಲಿ
 ಮೊದಲ ಸಂಖ್ಯೆಯ ಕೊನೆಯ ಅಂಕೆಯನ್ನು 10ರಿಂದ ಉಳಿದ ಅಂಕೆಗಳನ್ನು 9ರಿಂದ ಕಳೆಯಿರಿ.
4893*9999=/5107. ಬಂದ ಉತ್ತರದ ಎಲ್ಲ ಅಂಕೆಗಳನ್ನು 9ರಿಂದ ಕಳೆಯಿರಿ=4892. ಈ ಉತ್ತರದ ಮುಂದೆ ಮುಂಚೆ
 ಬಂದ ಉತ್ತರ ಬರೆಯಿರಿ=48925107. ಉತ್ತರ ಬಂತಲ್ಲ!
   7452*9999=7451/2548.    39758642*99999999=3975864160241358.
   ಇಷ್ಟನ್ನು ಕಲಿತ ಅನಂತರ ವೇದ ಈ ರೀತಿಯ ಗುಣಾಕಾರಕ್ಕೆ ಉತ್ತರ ಕಂಡು ಹಿಡಿಯುವ ಇನ್ನೂ ಸರಳ ವಿಧಾನವನ್ನು
 ಹೇಳುತ್ತದೆ. 39758642*99999999 ಎಂಬ ಲೆಕ್ಕವನ್ನೇ ನೋಡೋಣ. ಇಲ್ಲಿ ಮೊದಲ ಸಂಖ್ಯೆಯಲ್ಲಿ ಒಂದನ್ನು ಕಳೆದು
 ಉತ್ತರ ಬರೆದುಕೊಳ್ಳಿ. 39758642-1=39758641/ ಹೀಗೆ ಬಂದ ಉತ್ತರದ ಅಂಕೆಗಳನ್ನು 9ರಿಂದ ಕಳೆಯುತ್ತ ಬನ್ನಿ. 39758641/60241358. ಉತ್ತರ ಬಂತಲ್ಲ! ಅದೂ ಒಂದೇ ಸಾಲಲ್ಲಿ! ಗುಣಾಕಾರದ ಲೆಕ್ಕದಲ್ಲಿ ಗುಣಿಸುವ ರಗಳೆಯೇ ಇಲ್ಲ.
ಕೂಡುವುದು ಮತ್ತೆ ಕಳೆಯುವುದು.
  987465321789*999999999999=987465321788012534678211.
  845693215879654*999999999999999=845693215879653154306784120346
  ನೀವೇ ಇನ್ನಷ್ಟು ಲೆಕ್ಕ ಬಿಡಿಸಿ ಪರೀಕ್ಷಿಸಿ. (ಮುಂಚೆ ಸೂಚಿಸಿದ ನಿಯಮದಂತೆ ಈ ಎಲ್ಲ ಲೆಕ್ಕಗಳ ಉತ್ತರದ ಅಂಕೆಗಳ 
ಮೊತ್ತ 9 ಆಗಿದೆ)
ಇನ್ನಷ್ಟು ಇನ್ನೊಮ್ಮೆ.
                

Monday, February 21, 2011

ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ. (ಕಂತು-೨)



ಈಗ ಕರ್ಣಭೇದನದ ಪ್ರಸಂಗವನ್ನು ವಿಶ್ಲೇಷಿಸುವಾ. ತನ್ನ ತಾಯಿ ಎಂದು ತಿಳಿದ ಅನಂತರ ಕರ್ಣ ಕುಂತಿಯನ್ನು ಮೊದಲ ಬಾರಿಗೆ ಭೇಟಿಯಾಗುವುದು, ತಾಯಿ ಮೊದಲ ಬಾರಿಗೆ ಮಗನ ಬಳಿ ಮಾತನಾಡುವುದು, ಹಾಗೆ ಮಾತನಾಡುವ ಉದ್ದೇಶ ಮಗನ ಸಾವನ್ನು ನಿಶ್ಚಯಿಸುವ ಸಂಗತಿಯೇ ಆಗಿರುವುದು ಈ ಸನ್ನಿವೇಶದ ಸಾರಾಂಶ. ಇಡಿಯ ಸನ್ನಿವೇಶವನ್ನು ಹೇಗೆ ಚಿತ್ರಿಸಲಾಗಿದೆ ಎಂಬುದಕ್ಕಿಂತ ಮುಖ್ಯವಾಗಿ ಕುಂತಿಯ ವರ್ತನೆಯನ್ನು ವಿಶ್ಲೇಷಿಸುವಷ್ಟರ ಮಟ್ಟಿಗೆ ಈ ಲೇಖನದ ಆಶಯ ಸೀಮಿತವಾಗಿದೆ.
****
ಸಂಧಿಯ ಪ್ರಯತ್ನ ವಿಫಲವಾದ ಅನಂತರ, ಕೃಷ್ಣ ವಿದುರನ ಮನೆಯಲ್ಲಿದ್ದ ಕುಂತಿಗೆ ಕರ್ಣನನ್ನು ಬೇಡಿಕೋ ಎಂಬ ಸಲಹೆಯನ್ನೀಯುತ್ತಾನೆ.
“ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು|
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ||” (ಉ.ಪ.-೯-೨೭)
ಕೃಷ್ಣನ ಮಾತಿನಲ್ಲಿ ಗಮನಿಸಬೇಕಾದ ಮೂರು ಅಂಶಗಳು:-೧. ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿದೆ,೨. ಕರ್ಣನನ್ನು ಬೇಡು,೩. ಮುರವೈರಿ ಹರುಷದಲಿ ಮರಳಿದನು.ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿರುವುದರಿಂದ,ಅವರ ಸಾವನ್ನು ಕೌರವ ಬಯಸುತ್ತಾನೆ ಮತ್ತು ಅದಕ್ಕೆ ಕರ್ಣನ ಸಹಾಯವನ್ನು ನಿರೀಕ್ಷಿಸುತ್ತಾನೆ.ಹಾಗಾಗಿ ಕೃಷ್ಣ ಏನನ್ನು ಬೇಡಲು ಹೇಳಿರಬಹುದು ಎಂಬುದರ ಬಗ್ಗೆ ಅನುಮಾನವೇ ಇಲ್ಲ.ಕೃಷ್ಣ ಹರುಷದಿಂದ ಮರಳಿದ ಎಂದಾದರೆ ಕುಂತಿ ಕೃಷ್ಣ ಹೇಳಿದ್ದಕ್ಕೆಲ್ಲ ಒಪ್ಪಿರಲೇ ಬೇಕು. ಸುಲಭವಾಗಿ ಊಹಿಸಬಹುದಾದ ವಿಷಯ. ಆದರೆ ಕುಂತಿ ಏನನ್ನೂ ಹೇಳದೆ ಕೃಷ್ಣ ಹೇಳಿದ್ದನ್ನು ಒಪ್ಪಿದ್ದು ಹೇಗೆ? ಕೃಷ್ಣ,ಅವನೂ ನನ್ನ ಮಗ ಎಂಬ ಮಾತು ಬರಲಿಲ್ಲವೇ?  ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಯ ಮನಸ್ಸಿನಲ್ಲಿ ಹುಟ್ಟಿರಬಹುದಾದ ತಳಮಳವನ್ನು ಕುಮಾರವ್ಯಾಸ ಯಾಕೆ ಚಿತ್ರಿಸಲಿಲ್ಲ? ಈ ಭಾವಾತ್ಮಕ ಬಿಕ್ಕಟ್ಟನ್ನು ನಿರ್ವಹಿಸುವ ಶಕ್ತಿ ಇಲ್ಲದೆ ಬಿಟ್ಟನೇ? ಅಥವಾ ಭಾವಾತ್ಮಕ ಬಿಕ್ಕಟ್ಟನ್ನು ಗ್ರಹಿಸುವಷ್ಟು ಸೂಕ್ಷ್ಮಸಂವೇದಿ ಆತನಾಗಿರಲಿಲ್ಲವೇ? ಆದರೆ ಇತರ ಸಂದರ್ಭಗಳಲ್ಲಿ ವ್ಯಕ್ತವಾದ ಆತನ ಕಾವ್ಯಚಿತ್ರಣ ಸಾಮರ್ಥ್ಯ ನನ್ನ ಈ ಯೋಚನೆಯಲ್ಲಿ ಏನೋ ತಪ್ಪಿದೆ ಎಂದು ನನಗೆ ಅನಿಸುವಂತೆ ಮಾಡುತ್ತಿತ್ತು. ಮತ್ತೆ ಮತ್ತೆ ಓದುತ್ತಿದ್ದೆ,ಯೋಚಿಸುತ್ತಿದ್ದೆ. ಒಮ್ಮೆ ಅನಿಸಿತು: ಕವಿ ಉದ್ದೇಶಪೂರ್ವಕವಾಗಿ ಕುಂತಿಯ ಭಾವನೆಗಳನ್ನು ಚಿತ್ರಿಸಲಿಲ್ಲ. ಯಾಕೆಂದರೆ ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಗೆ ಕೃಷ್ಣನ ಸೂಚನೆಯನ್ನು ಪಾಲಿಸಬೇಕು ಎಂಬುದನ್ನು ಬಿಟ್ಟರೆ ಬೇರೆ ಭಾವನೆಗಳೇ ಇರಲಿಲ್ಲ. ಅವಳಲ್ಲಿ ಭಾವನಾತ್ಮಕ ಬಿಕ್ಕಟ್ಟು ಹುಟ್ಟಿರಲೇ ಇಲ್ಲ. ಅವಳಿಗೆ ಕರ್ಣನ ಬಗೆಗೆ ತಾಯ್ತನದ ಭಾವನೆ ಉದ್ದೀಪನಗೊಳ್ಳಲಿಲ್ಲ. ಹುಟ್ಟಿದಕೂಡಲೇ ತ್ಯಜಿಸಿದ್ದವನ ಬಳಿ ಈಗ ನಿಂತು ನಾನು ನಿನ್ನ ತಾಯಿ ಎಂದು ತಿಳಿಸಿ ಹೇಗೆ ಬೇಡಲಿ ಎಂಬ ಭಾವನೆ ಬರಲಿಲ್ಲ. ಬಂದಿದ್ದರೆ ಭಾವಾತ್ಮಕ ಬಿಕ್ಕಟ್ಟು ಎದುರಾಗುತ್ತಿತ್ತು. ಯಾಕೆ ಬರಲಿಲ್ಲ? ಕರ್ಣನನ್ನು ತ್ಯಜಿಸುವಾಗ ಆಕೆ ಗಂಗೆಗೆ ಹೇಳಿದ್ದೇನು?“ಕಂದನ ಕಾಯಿ ಮೇಣ್ ಕೊಲ್ಲೆನುತ” (ನನ್ನ ಹಿಂದಿನ ಲೇಖನದಲ್ಲಿ ಈ ಬಗ್ಗೆ ವಿವರಣೆಯಿದೆ.) ಗಂಗೆ ಕಾದು ಕೊಟ್ಟಳು. ಕುಂತಿಗುಳಿದದ್ದು ಕೊಲ್ಲುವುದು. ಕರ್ಣ ಮಗ ಎಂಬ ಭಾವನೆಯೇ ಇಲ್ಲದಿರುವಾಗ ಭಾವನಾತ್ಮಕ ಬಿಕ್ಕಟ್ಟು ಹೇಗೆ ಬಂದೀತು?  ಇದನ್ನು ಧ್ವನಿಸುವ ಉದ್ದೇಶದಿಂದಲೇ ಕವಿ ಹೀಗೆ ಚಿತ್ರಿಸಿದ್ದಾನೆ. ಕವಿ ಬರೆದಿದ್ದರ ಮೂಲಕ ನಾವು ಗ್ರಹಿಸುವಷ್ಟೇ ಸೂಕ್ಷ್ಮವಾಗಿ, ಬರೆಯದೇ ಬಿಟ್ಟಿದ್ದರ ಮೂಲಕವೂ ಗ್ರಹಿಸಬೇಕಾಗುತ್ತದೆ!
**
ಹಾಗಾಗಿ ಭಾವಾತ್ಮಕವಾದ ದ್ವಂದ್ವ ಇಲ್ಲದೆ ಕುಂತಿ ಕರ್ಣನನ್ನು ಭೇಟಿಯಾಗುತ್ತಾಳೆ. ಕರ್ಣನನ್ನು ಕಂಡ ಕೂಡಲೇ ಕುಂತಿಗೆ ದುಃಖ ಉಕ್ಕುತ್ತದೆ. ಇದು ಯಾತಕ್ಕೆ ಎಂಬ ಚಿತ್ರಣ ಇಲ್ಲ. ಮೊದಲಬಾರಿ ತನ್ನ ಮಗನನ್ನು ಕಂಡ ಕಾರಣದಿಂದ ಇರಬಹುದು ಅಥವಾ ಮಗನಾಗಿದ್ದರೂ ಮಗ ಎಂದು ತಾನು ಭಾವಿಸದವನ ಬಳಿ ಬೇಡುವ ಸ್ಥಿತಿ ಬಂದಿದ್ದಕ್ಕೂ ಇರಬಹುದು. ನಾನು ನಿನ್ನ ತಾಯಿ ಎಂದು ಕುಂತಿ ಕರ್ಣನಿಗೆ ಇಲ್ಲೂ ಹೇಳುವುದಿಲ್ಲ. ಇಲ್ಲೂ ಕೂಡ ಅವಳಲ್ಲಿ ತಾಯ್ತನದ ಭಾವನೆ, ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಬರಲಿಲ್ಲ. ಅಳುವ ಕುಂತಿಗೆ “ಬಿಜಯಂಗೈದ ಹದನನು ವುಸುರಬೇಹುದು ತಾಯೆ” ಎಂದು ಕರ್ಣ ಹೇಳಿದಾಗ ಆಕೆ ಹೇಳುವ ಮೊದಲ ಮಾತು: “ಮಗನೆ ತಮ್ಮಂದಿರನು ಪಾಲಿಸು”. ಪಾಲಿಸು ಎಂಬುದಕ್ಕೆ ಎರಡು ಅರ್ಥವಿದೆ.೧.ರಕ್ಷಿಸು,ಕಾಪಾಡು,೨. ಆಳ್ವಿಕೆ ಮಾಡು. ಕುಂತಿ ಈ ಎರಡೂ ಅರ್ಥದಲ್ಲಿ ಮಾತನ್ನಾಡಿದ್ದಾಳೆ.“ನೀನೋಲಗಿಸುವರೆ ಕುರುಪತಿಯ ನಿನಗವರಿದಿರೆ ಇತ್ತಂಡ ಸೊಗಸು” ಎಂಬ ಮಾತು ನೀನು ಆಳು ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ. ಕರ್ಣ ಇದಕ್ಕೊಪ್ಪುವುದಿಲ್ಲ. ನಯವಾಗಿ ಕುಂತಿಯ ಸಲಹೆಯನ್ನು ತಿರಸ್ಕರಿಸುತ್ತಾನೆ.“ರಾಯನೆನ್ನನು ನೆಚ್ಚಿ ಹೊರೆದನು” ಎಂಬ ಅವನ ಮಾತಿನಲ್ಲಿ ನೀನು ನನ್ನನ್ನು ಹೊರೆಯಲಿಲ್ಲ ಎಂಬ ಸೂಕ್ಷ್ಮಧ್ವನಿಯೂ ಇದೆ. ಕುಂತಿ ನಿಜವಾಗಿ ಬಂದ ಉದ್ದೇಶ ಇದಲ್ಲ ಎಂಬುದು ಅವನಿಗೂ ಗೊತ್ತು.“ಇಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ” ಎನ್ನುತ್ತಾನೆ. ತಾಯ್ತನದ ಭಾವನೆ ಇದ್ದಿದ್ದರೆ ಕುಂತಿ ಇದಲ್ಲದೆ ಬೇರೆ ಕಾರ್ಯವೇನೂ ಇಲ್ಲ ಅನ್ನಬೇಕಿತ್ತು. ಆದರೆ ಆಕೆ ಮೂರು ಭರವಸೆಯನ್ನು ಅಪೇಕ್ಷಿಸುತ್ತಾಳೆ.(ತಮ್ಮಂದಿರನ್ನು ಪಾಲಿಸಬೇಕಾದ  ರೀತಿ.ಪಾಲಿಸು ಪದದ ಮತ್ತೊಂದು ಅರ್ಥ.)
೧.ಆದೊಡೈವರ ಮಕ್ಕಳನು ತಲೆಗಾಯ್ದು ತೋರೈ ೨.ಹೋದ ಬಾಣವ ಮರಳಿ ತೊಡದಿರು.೩.ಮಾದು ಕಳೆ ವೈರವ.
ಈ ಮೂರೂ ಬೇಡಿಕೆಗಳು ಪಾಂಡವರೈವರ ಪಕ್ಷಪಾತಿಯಾಗಿರುವುವೇ ಹೊರತು ಕರ್ಣಪಕ್ಷಿಪಾತಿಯಲ್ಲ. ಕರ್ಣನನ್ನು ಕುಂತಿ ಮತ್ತೆ ತ್ಯಜಿಸುತ್ತಾಳೆ.
***
ಈ ಮೂರೂ ಸನ್ನಿವೇಶಗಳಲ್ಲಿ ಕುಂತಿಯ ವರ್ತನೆಯನ್ನು ಗಮನಿಸಿದ ಅನಂತರದ ನನ್ನ ಅನಿಸಿಕೆ: ಕುಂತಿಗೆ ಕರ್ಣನನ್ನು ತ್ಯಜಿಸಿದ್ದರ ಬಗ್ಗೆ ಅಪರಾಧೀ ಭಾವ ಇರಲಿಲ್ಲ.ತ್ಯಜಿಸಿದ್ದು ಅಪರಾಧ,ಆದರೆ ಅನಿವಾರ್ಯವಾಗಿತ್ತು ಎಂದು ನಮಗೆ ಅನಿಸಿದರೂ ಕುಂತಿಗೆ ಹಾಗೆ ಅನಿಸಿತ್ತು ಎಂಬುದನ್ನು ಒಪ್ಪುವುದು ಕಷ್ಟ. ಕುಂತಿಯ ಅವಿವೇಕಜನ್ಯ ಕುತೂಹಲ ಮತ್ತು ಭಯಜನ್ಯ ನಿರಾಕರಣೆ ಕರ್ಣನ ದುರಂತ ಬದುಕಿನ ಕಾರಣವಾಯಿತು ಎಂಬುದಂತೂ ಸತ್ಯ.
***
ಅಡಿಟಿಪ್ಪಣಿ.
೧)ಮುನಿಯ ಶಾಪಕ್ಕೆ ಪಕ್ಕಾದ ಪಾಂಡು ಕುಂತಿ,ಮಾದ್ರಿಯರ ಜೊತೆ ಕಾಡಲ್ಲಿರುವಾಗ ಕುಂತಿ ಮಕ್ಕಳನ್ನು ಪಡೆವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕುಂತಿ ಪಾಂಡುವಿನಿಂದ ಮಕ್ಕಳನ್ನು ಪಡೆವ ಹಾಗಿಲ್ಲ. ಆಗ ಪಾಂಡು ಮುನಿಗಳಿಂದ ಮಂತ್ರೋಪದೇಶ ಪಡೆಯಲು ಕುಂತಿಗೆ ಸೂಚಿಸುತ್ತಾನೆ.
ಈ ಸಂದರ್ಭದಲ್ಲಿ ಕುಂತಿ ತನಗೆ ದೂರ್ವಾಸಮುನಿ ಕೊಟ್ಟ ಐದು ಮಂತ್ರಗಳಿವೆ ಅನ್ನುತ್ತಾಳೆಯೇ ಹೊರತು ಮೊದಲ ಮಂತ್ರದಿಂದ ಮಗನನ್ನು ಪಡೆದ ಸುದ್ದಿ ಹೇಳುವುದಿಲ್ಲ. ನಾಲ್ಕು ಮಂತ್ರಗಳ ಪ್ರಯೋಗದಿಂದ ಐವರು ಮಕ್ಕಳು ಜನಿಸುತ್ತಾರೆ. ಇನ್ನೊಂದು ಮಂತ್ರ ಏನಾಯಿತು ಎಂದು ಪಾಂಡುವೂ ಕೇಳುವುದಿಲ್ಲ!
೨)ಯುದ್ಧದ ಅನಂತರ ಕುರುಕ್ಷೇತ್ರದರ್ಶನದ ವೇಳೆಯಲ್ಲಿ ಕುಂತಿ ಕರ್ಣನ ಶವದ ಮೇಲೆ ಬಿದ್ದು ಹೊರಳಾಡುತ್ತಾಳೆ.“ಮಾಯಾವಿ ಮಧುಸೂದನನೆ ಮರೆಯಿಸಿ ಕೊಂದನ್” ಎನ್ನುತ್ತಾಳೆ. ತನ್ನ ತಪ್ಪನ್ನು ಕೃಷ್ಣನ ಮೇಲೆ ಹೊರಿಸುತ್ತಾಳೆ.
    

  

Tuesday, January 4, 2011

ಒಂದು ತುತ್ತು ಅನ್ನ.

        ಅಲ್ಲಿಯವರೆಗೂ ಸಣ್ಣದಾಗಿ ಹನಕುತ್ತಿದ್ದ ಮಳೆ ಶ್ರೀಧರನ ಅಂಗಡಿ ಹೊಗುವ ಹೊತ್ತಿಗೆ ಜೋರಾಗಿ ರಪರಪ ಬಾರಿಸತೊಡಗಿತು.  ಸಾಯಂಕಾಲ ಇಳಿವ ಹೊತ್ತಿಗೇ ಮಳೆಯ ಮೋಡಗಳು ದಟ್ಟೈಸಿದ್ದ ಕಾರಣದಿಂದಾಗಿ ಅಂಗಡಿಯ ಬದಿ ಯಾರೂ ತಲೆ ಹಾಕಿರಲಿಲ್ಲ. ಏನೂ ಮಾಡಲು ತೋಚದೆ ಬೆಳಗಿಂದ ಓದುತ್ತಿದ್ದ ಪೇಪರನ್ನೇ ಮತ್ತೆ ಮಗುಚುತ್ತಿದ್ದ ಶ್ರೀಧರ ಬಾ ಮಾರಾಯ ಬಾ ಕತೆ ಹೊಡೆಯುವಾ.. ಮಳೆ ಜೋರೇ ಹೊಡೀತದೆ ಕಾಣ್ಸ್ತದೆ..ಅಂದ. ಒಳಹೊಕ್ಕು ಅದೂ ಇದೂ ಮಾತಾಡುತ್ತಾ ಕೂತೆವು. ಎಲ್ಲೆಲ್ಲೋ ಹೊರಳಾಡುತ್ತಾ ಮಾತು ಈರುಳ್ಳಿ, ತರಕಾರಿಯ ಏರುತ್ತಿರುವ ದರಗಳ ಬಳಿ ಬಂದು ನಿಂತಿತು. ಪುಣ್ಯಕ್ಕೆ ಅಕ್ಕಿ ದರ ಈ ರಭಸದಲ್ಲಿ ಏರಿಲ್ಲ ನೋಡು..ಇಲ್ದಿದ್ರೆ ಒಂದು ತುತ್ತು ಊಟಕ್ಕೂ ಒದ್ದಾಟ ಆಗ್ತಿತ್ತು ಅಲ್ವಾ? ಅಂದ. ತಟ್ಟನೆ ಏನೋ ಹೊಳೆಯಿತು. ಏ ! ೫ ಗ್ರಾಂ ಅಕ್ಕಿ ತೂಗೋ ಅಂದೆ. ಏನೋ ಬಂಗಾರ ತೂಗ್ಸೋ ಹಾಗೆ ಅಕ್ಕಿ ತೂಕ ಮಾಡು ಅಂತೀಯಲ್ಲ ಅಂದ. ತೂಗು ಅಂದೆ. ಎಲ್ಲೋ ಮೂಲೆಯಲ್ಲಿ ಬೆಲೆ ಕಳಕೊಂಡು ಬಿದ್ದಿದ್ದ ೫ ಗ್ರಾಂ.ಕಲ್ಲನ್ನು ಹುಡುಕಿ ತೆಗೆದ. ತೂಗಿದ.
      ಈಗ ಕಾಳುಗಳನ್ನು ಎಣಿಸಿದೆವು. ೫ ಗ್ರಾಂ ಅಭಿಲಾಷಾ ಅಕ್ಕಿಯಲ್ಲಿ ನುಚ್ಚು ಕಳೆದು ೧೩೨ ಕಾಳುಗಳಿದ್ದವು. ಇದು ಒಂದು ತುತ್ತು ಆಗಬಹುದು ಎಂದು ನಾವು ತೀರ್ಮಾನಿಸಿದೆವು. ಲೆಕ್ಕ ಶುರುವಾಯಿತು. ಭಾರತದ ಜನಸಂಖ್ಯೆ ೧೧೫ ಕೋಟಿ. ದಿನಕ್ಕೊಂದು ಊಟದಂತೆ ಲೆಕ್ಕ ಹಿಡಿದರೂ ೧೧೫ ಕೋಟಿ ಊಟವಾಯಿತು. ಪ್ರತಿ ಊಟಕ್ಕೆ ಒಂದು ತುತ್ತು ಅಂದರೆ ಗ್ರಾಂ ಲೆಕ್ಕದಲ್ಲಿ ೧೧೫೦೦೦೦೦೦೦*೫=೫೭೫೦೦೦೦೦೦೦ ಗ್ರಾಂ=೫೭೫೦೦೦೦ ಕಿ.ಗ್ರಾಂ ಆದಂತಾಯಿತು. ಅಂದರೆ ೫೭೫೦೦ ಕ್ವಿಂಟಾಲ್. ಅಭಿಲಾಷಾ ಅಕ್ಕಿ ಒಂದು ಕ್ವಿಂಟಾಲ್ ಗೆ ರೂ.೧೮೫೦/-.೫೭೫೦೦ ಕ್ವಿಂ.ಗೆ ರೂ.೧೦,೬೩,೭೫,೦೦೦/- ಆದಂತಾಯಿತು.  ಪ್ರತಿಯೊಬ್ಬರೂ ಒಂದು ತುತ್ತು ಅನ್ನವನ್ನು ವ್ಯರ್ಥಮಾಡಿದರೆ ಆಗುವ ನಷ್ಟ ಇದು.
     ಸುರಿವ ಮಳೆ ನೋಡುತ್ತಾ ಈಗಷ್ಟೆ ಮುಗಿಸಿದ ಲೆಕ್ಕ ಹುಟ್ಟಿಸಿದ ಗಾಬರಿಯನ್ನು ಗ್ರಹಿಸುತ್ತಾ ಕೂತೆವು. ಮಾತು ಹಿಂಚಿತು.