Sunday, March 8, 2009

ಜಗದೊಳಗೆ ನಾವೋ..ನಮ್ಮೊಳಗೆ ಜಗವೋ..

ಒಂದು ಕತೆ ಹೇಳುತ್ತೇನೆ. ಕೇಳಿ. ಒಬ್ಬ ರಾಜ. ಈ ರಾಜ ಒಂದಿನ ಒಡ್ಡೋಲಗ ಮುಗಿಸಿ, ಅಷ್ಟಕ್ಕೇ ಸುಸ್ತಾಗಿ ಅರಮನೆ ಸೇರಿ, ಪುಷ್ಕಳವಾಗಿ ಉಂಡು ಮಲಗಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಲ್ಲಿ ಅವನೊಬ್ಬ ಭಿಕಾರಿಯಾಗಿದ್ದ. ಊಟಕ್ಕಿಲ್ಲ. ಪಾಪ. ಆದಿನ ಯಾರದೋ ಮದುವೆಯಲ್ಲಿ ಅವನಿಗೂ ಹೊಟ್ಟೆತುಂಬ ಊಟ ಸಿಕ್ಕಿತು. ಉಂಡು ಮಲಗಿದ. ಹಾಗೆ ಮಲಗಿದವನಿಗೆ ಕನಸು. ಈ ಕನಸಲ್ಲಿ ಅವನು ರಾಜನಾಗಿಬಿಟ್ಟಿದ್ದಾನೆ!
ಅಷ್ಟರಲ್ಲಿ ರಾಜನಿಗೆ ಎಚ್ಚರವಾಯಿತು. ಎಂಥ ಕನಸಪ್ಪ ಎನ್ನುತ್ತಾ ಎದ್ದು ಕೂತ.
*********
ನಾವು ಕಾಣುತ್ತಿರುವ, ಅನುಭವಿಸುತ್ತಿರುವ ಜಗತ್ತು ‘ನಿಜ’ವಾಗಿಯೂ ಇದೆಯೇ ? ಅಥವಾ ಅದನ್ನು, ನಾವು ಅನುಭವಿಸುವ ಕಾರಣದಿಂದಾಗಿ ‘ಇದೆ’ ಎಂದು ನಾವು ನಂಬಿದ್ದೇವೆಯೇ ? ಇನ್ನೂ ಸರಳವಾಗಿ ಹೇಳುವುದಾದರೆ, ಪ್ರಜ್ನೆ ಮತ್ತು ಜಗತ್ತು ಎಂಬ ಎರಡು ಅಸ್ತಿತ್ವಗಳು ಇವೆಯೇ? ನಾವು ಬದುಕಿದ್ದೇವೆ ಎಂಬುದಕ್ಕೆ ಹೇಗೆ ಯಾವ ಸಾಕ್ಷಿಗಳೂ ನಮಗೆ ಬೇಕಿಲ್ಲವೋ, ಹಾಗೆ ನಮಗೆ ಪ್ರಜ್ನೆ ಇದೆ ಎಂಬುದಕ್ಕೆ ಬೇರೆ ಯಾವ ಸಾಕ್ಷಿಯೂ ಬೇಕಿಲ್ಲ.ಪ್ರಜ್ನೆಗೆ ಪ್ರಜ್ನೆಯೇ ಸಾಕ್ಷಿ.ಆದರೆ ಬೇರೆಯವರಿಗೂ ನನ್ನಂತೆ ಪ್ರಜ್ನೆ ಇದೆ ಎಂದು ನಾನು ನಂಬಬಹುದೇ ಹೊರತು, ಅವರ ಪ್ರಜ್ನೆಯನ್ನು ನಾನು ‘ಅನುಭವಿಸಲು’ ಸಾಧ್ಯವಿಲ್ಲ. ಗಮನಿಸಿ. ನೀವು, ನಿಮ್ಮ ಗೆಳೆಯ ಜತೆಯಾಗಿ ಕೂತು, ಒಂದು ಕೆಂಪು ಗುಲಾಬಿಯನ್ನು ನೋಡುತ್ತಿದ್ದೀರಿ. ಅದರ ಸೌಂದರ್ಯವನ್ನು ಇಬ್ಬರೂ ಗ್ರಹಿಸುತ್ತಿದ್ದೀರಿ. ಇದು ಸಹಜ, ಸಾಧ್ಯ. ಆದರೆ ಇದೇ ಸಂದರ್ಭದಲ್ಲಿ ನಿಮಗೆ, ನಿಮ್ಮ ಗೆಳೆಯನ ಗುಲಾಬಿ ಹೂವನ್ನು ಗ್ರಹಿಸುತ್ತಿರುವ ‘ಪ್ರಜ್ನೆ’ ‘ಗ್ರಹಿಕೆ’ಯಾಗಲಾರದು. ನಿಮ್ಮ ಗೆಳೆಯನಿಗೂ ಅಷ್ಟೆ. ಯಾಕೆ? ಹೂ ಇಬ್ಬರ ಗ್ರಹಿಕೆಗೂ ‘ವಸ್ತು’ವಾದಂತೆ ಪ್ರಜ್ನೆ ಯಾಕೆ ಆಗುವುದಿಲ್ಲ ?

ಅನುಭವ ಅಂದರೆ ಏನು? ನಮಗೆ ಅನುಭವ ಹೇಗೆ ಆಗುತ್ತದೆ? ಮೇಲಿನ ಉದಾಹರಣೆಯನ್ನೇ ನೋಡೋಣ. ನೀವು ಕೂತಿರುವಾಗ, ಗುಲಾಬಿಯ ಮೇಲೆ ಬೆಳಕು ಬಿದ್ದು, ಪ್ರತಿಫಲಿಸಿ, ನಿಮ್ಮ ಕಣ್ಣನ್ನು ತಲುಪಿ, ಅಲ್ಲಿಂದ ನರಗಳ ಸಂವೇದನೆಯ ಮೂಲಕ ಮಿದುಳನ್ನು ತಲುಪುವುದು. ಹೀಗೆ ಬಂದ ಮಾಹಿತಿಗಳನ್ನು ಮಿದುಳು ಸಂಯೋಜಿಸಿ,ಅದಕ್ಕನುಗುಣವಾಗಿ ಒಳಗೆ , ಹೊರಗೆ ಇರುವುದರ ಬಿಂಬಕಲ್ಪನೆ ಮಾಡಿಕೊಳ್ಳುತ್ತದೆ. ಅನಂತರ ಪ್ರಜ್ನೆ ತನ್ನ ಹಳೆಯ ಕೋಶಗಳನ್ನೆಲ್ಲ ಜಾಲಾಡಿ,--ಚುನಾವಣೆ ಬಂದಾಗ ನೀವು ಗುರುತು ಪತ್ರಕ್ಕಾಗಿ ಕಪಾಟನ್ನೆಲ್ಲ ಜಾಲಾಡುವಂತೆ-- ಈಗ ಕಾಣುತ್ತಿರುವುದಕ್ಕೆ ಸಾಮ್ಯತೆ ಇರುವ, ನೆನಪಲ್ಲಿ ದಾಖಲಾಗಿರುವ ಗುಲಾಬಿಯ ಬಿಂಬದ ಜತೆ ತುಲನೆ ಮಾಡಿ, ಇದು ಗುಲಾಬಿ ಹೂ ಎಂದು ತಿಳಿಯುತ್ತದೆ. ಮಿದುಳು ತಿಳಿಯುವುದೆಂದರೆ ನೀವು ತಿಳಿಯುವುದು ಎಂದರ್ಥ. [ಈ ರೀತಿಯ ಮಾಹಿತಿಗಳನ್ನು ಮಿದುಳಿಗೆ ನಿರಂತರವಾಗಿ ಸರಬರಾಜು ಮಾಡುವ ಐದು ಅಂಗಗಳಿವೆ. ಇವೇ ಪಂಚ ಜ್ನಾನೇಂದ್ರಿಯಗಳು:ಕಿವಿ, ಚರ್ಮ. ಕಣ್ಣು,ಮೂಗು ಮತ್ತು ನಾಲಗೆ. ಶಬ್ದ, ಸ್ಪರ್ಷ, ನೋಟ, ಗಂಧ ಮತ್ತು ರುಚಿ ಇವು ಕ್ರಮವಾಗಿ ಇವುಗಳ ಗುಣಗಳು. ಆಕಾಶ, ವಾಯು, ಅಗ್ನಿ, ನೀರು, ಮತ್ತು ಪೃಥ್ವಿ ಇವು ತತ್ವಗಳು. ಈ ಐದು ತತ್ವಗಳಿಂದ ಆಗಿರುವುದೇ ಪ್ರ-ಪಂಚ.] ದಾಖಲೆಯಲ್ಲಿ ಏನೂ ಇರದಿದ್ದರೆ ಹೊಸದೊಂದು ಕಡತ ದಾಖಲಾಗುತ್ತದೆ. ಹೊಸ ಸ್ಕೀಮ್ ಬಂದಾಗ ಸರಕಾರಿ ಕಚೇರಿಯಲ್ಲಿ ಹೊಸ ಕಡತ ಇಡುವಂತೆ ! ಇವಿಷ್ಟೂ ಅಪಾರ ವೇಗದಲ್ಲಿ ನಡೆವ ಕ್ರಿಯೆ. ಇಷ್ಟು ಕೆಲಸ ನಡೆವಾಗ, ನಮ್ಮ ಮಿದುಳು ಸರಿಯಿದ್ದರೆ ಯಾವುದೇ ಅವ್ಯವಸ್ಥೆ ಆಗುವುದಿಲ್ಲ; ಗುರುತುಪತ್ರ ಹುಡುಕುವಾಗ ನಿಮ್ಮ ಕಪಾಟು ಆಗುವಂತೆ ! ಇನ್ನು ಮುಂದೆ ಗುಲಾಬಿಯ ಬಗ್ಗೆ ಬರುವ ಮಾಹಿತಿಗಳೆಲ್ಲ ಈ ಕಡತಕ್ಕೆ ರವಾನೆಯಾಗುತ್ತವೆ. ಹೀಗೆ ರವಾನೆಯಾದ ಮಾಹಿತಿಗಳ ಮುಖಾಂತರ ಗುಲಾಬಿಗೆ ಸಂಬಂಧಪಟ್ಟ ಎಲ್ಲ ಅನುಭವಗಳು ನಮಗೆ ಆಗುತ್ತವೆ. ಸೇಬು ತಿನ್ನುವಾಗ ಸೇಬು ನಮ್ಮ ಕೈಗೆ ಭೌತಿಕವಾಗಿ ಬರುವಂತೆ , ಮಿದುಳಿಗೆ ಭೌತಿಕವಾಗಿ ಏನೂ ಬಂದಿಲ್ಲ ಎಂಬುದನ್ನು ಗಮನಿಸಿ.ನರಗಳ ಮೂಲಕ ಒಂದಿಷ್ಟು ‘ಸಂವೇದನೆ’ಗಳು ಮಾತ್ರ ಮಿದುಳನ್ನು ತಲುಪಿವೆ.ಅಷ್ಟೆ.
ಇಲ್ಲಿಯವರೆಗೆ ಹೇಳಿದ್ದನ್ನೆಲ್ಲ ಸೂತ್ರ ರೂಪದಲ್ಲಿ ಸಂಗ್ರಹಿಸುವಾ.
೧.ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಮ್ಮ ಕಣ್ಣನ್ನು ತಲುಪುತ್ತದೆ.
೨.ಪ್ರಚೋದಿತಗೊಂಡ ನರಗಳು ಮಿದುಳಿಗೆ ಮಾಹಿತಿಗಳನ್ನು ರವಾನಿಸುತ್ತವೆ. ಈ ಮಾಹಿತಿಗೂ ಹೊರಗಿನ ವಸ್ತುವಿಗೂ ಭೌತಿಕವಾದ ಸಂಬಂಧವಿಲ್ಲ.
೩.ಮಿದುಳು ಈ ಮಾಹಿತಿಗಳನ್ನು ಸಂಗ್ರಹಿಸಿ , ಸಂಯೋಜಿಸಿದಾಗ ಹೊರಗಿನ ವಸ್ತುವಿನ ‘ಗ್ರಹಿಕೆ’ ನಮಗಾಗುತ್ತದೆ.
ಬೆಳಕೆಂದರೆ ‘ಫೋಟಾನ್’ ಎಂದು ಕರೆಯಲ್ಪಡುವ , ಅಲೆಯ ರೂಪದ ಕಣಗಳು. ಮಾಹಿತಿಗಳು ವಿದ್ಯುತ್ ತರಂಗಗಳ/ರಾಸಾಯನಿಕ ಸಂವಾಹಕಗಳ ಮೂಲಕ ಮಿದುಳಿಗೆ ತಲುಪುತ್ತವೆ. ಆದ್ದರಿಂದ ಇವೆರಡು ಪ್ರಕ್ರಿಯೆಗಳನ್ನು ವೈಜ್ನಾನಿಕವಾಗಿ ವಿವರಿಸಲು ಸಾಧ್ಯ.
ಆದರೆ ಮಿದುಳು ಈ ಮಾಹಿತಿಗಳನ್ನು ಸಂಗ್ರಹಿಸುವ/ಸಂಯೋಜಿಸುವ ವಿಧಾನ ತಿಳಿದಿಲ್ಲ. ನಮಗೆ ಎರಡು ಮಿದುಳು ಇದ್ದಿದ್ದರೆ, ಒಂದು ಮಿದುಳು ಮಾಡುವ ಕೆಲಸವನ್ನು ಮತ್ತೊಂದು ಮಿದುಳಿನ ಮೂಲಕ ನೋಡಿ ತಿಳಿಯಬಹುದಿತ್ತು! ಅಂಥ ಎರಡನೆಯ ಮಿದುಳು ತಯಾರಾಗುವವರೆಗೂ ಈ ಬಗ್ಗೆ ನಮಗೇನೂ ತಿಳಿಯುವುದಿಲ್ಲ.
ಪಂಚ ಜ್ನಾನೇಂದ್ರಿಯಗಳ ಮೂಲಕ ಈ ವಿಧಾನದ ಮೂಲಕವೇ ನಮಗೆ ‘ಗ್ರಹಿಕೆ’ ಅಗುತ್ತದೆ. ಈ ಹಂತಗಳಲ್ಲಿ ಯಾವುದೇ ಒಂದು ಕೊಂಡಿ ಕಳಚಿದರೂ ನಮಗೆ ವಸ್ತುವಿನ ‘ಗ್ರಹಿಕೆ’ ಆಗುವುದಿಲ್ಲ. ಬೆಂಕಿಯ ಬಿಸಿ ನಮಗೆ ಸ್ಪರ್ಷದ ಮೂಲಕ ತಿಳಿಯುತ್ತದೆ. ಬೆಂಕಿ ಸುಡುತ್ತದೆ ಎಂಬ ಮಾಹಿತಿ ನೆನಪಿನ ರೂಪದಲ್ಲಿ ಮಿದುಳಿನಲ್ಲಿ ಇರದಿದ್ದರೆ, ಬೆಂಕಿ ಬಿಸಿಯಿರುವುದು ಪ್ರತಿ ಬಾರಿಯೂ ಸುಟ್ಟುಕೊಂಡ ಅನಂತರವೇ ನಮಗೆ ತಿಳಿಯುತ್ತಿತ್ತು !
********
ಜಗತ್ತು ಹೇಗೆ ನಮ್ಮ ,ಗ್ರಹಿಕೆಗೆ ಬರುತ್ತದೆ ಎಂಬುದರ ಸ್ಥೂಲ ಅರಿವು ನಮಗೆ ಈಗ ಅಗಿದೆ. ಈಗ ಇನ್ನೊಂದು ಕತೆ ಹೇಳುವ ಸಮಯ ಬಂದಿದೆ.
(ಮುಂದುವರಿಯುವುದು)