Sunday, November 1, 2009

ನಾಯಿ ಮತ್ತು ನರ.

ನನಗೆ ನಾಯಿಗಳೆಂದರೆ ತುಸು ಭಯ. ನಾಯಿಮರಿಗಳೆಂದರೂ ಭಯ. ಇಲ್ಲಿಯವರೆಗೂ ನಾಯಿಗಳಿಂದ ನಾನೇನೂ ಕಚ್ಚಿಸಿಕೊಂಡಿಲ್ಲ. ನನ್ನ ಮಗಳು ಸ್ವಾತಿ ಚಿಕ್ಕವಳಿದ್ದಾಗ ಒಮ್ಮೆ ನಾಯಿಮರಿ ಕಚ್ಚಿತ್ತು. ಅದಕ್ಕೇ ನನಗೂ ಹೆದರಿಕೆ ಉಳಿದಿರಬಹುದು. ಅವಳಿಗೇ ಅದು ಮರೆತಿದೆ,ನನಗ್ಯಾಕೆ ನೆನಪಲ್ಲುಳಿದಿದೆಯೋ ಗೊತ್ತಾಗ್ತಿಲ್ಲ. ಯಾವುದೇ ಸಾಕು ಪ್ರಾಣಿಗಳನ್ನು ಅನುಮಾನದಿಂದಲೇ ನೋಡುವ ನನ್ನ ಪತ್ನಿಯ ಸ್ವಭಾವ ನನ್ನ ಮೇಲೂ ತುಸು ಪರಿಣಾಮ ಬೀರಿರಬಹುದು.
ನಾಯಿಗಳ ಗುಣದ ಬಗ್ಗೆ ಅಪಾರ ಸಂಶೋಧನೆಗಳು ನಡೆದಿವೆ. ಅವುಗಳ ಅವಗುಣಗಳ ಬಗ್ಗೆ ಏನೂ ವಿವರಗಳಿಲ್ಲ. ನನಗೆ ಅವುಗಳ ಬಗ್ಗೆ ಇರುವ ಒಂದು ಮುಖ್ಯ ತಕರಾರೆಂದರೆ ಹಗಲಿಡೀ ಎಲ್ಲಾದರೂ ಮಲಗಿ ಹೊತ್ತು ಕಳೆವ ಅವು ರಾತ್ರಿ ಯಾಕೆ ಕೂಗುತ್ತ ,ಊಳಿಡುತ್ತ ತ್ರಾಸು ಕೊಡುತ್ತವೆ ಎಂಬುದು. ನಮ್ಮ ಬೀದಿಯಲ್ಲಿರುವ ಎರಡು ನಾಯಿಗಳ ಸ್ವಭಾವ ಅದು. ಎಲ್ಲ ನಾಯಿಗಳೂ ಹಾಗೇ ಮಾಡುತ್ತವಾ?ಗೊತ್ತಿಲ್ಲ. ಎರಡು ಅಗುಳು ಹಿಚುಕಿ ಅಕ್ಕಿ ಬೆಂದಿದೆಯಾ ಇಲ್ಲವಾ ಎಂಬುದನ್ನು ನೋಡಬಹುದಂತೆ. ಅದೇ ತರ್ಕ ಇಲ್ಲೂ ಅಳವಡಿಸಿ ಎಲ್ಲಾ ನಾಯಿಗಳೂ ಹಾಗೇ ಎಂದು ನಾನು ಅಭಿಪ್ರಾಯಪಡುತ್ತೇನೆ. ಹಾಗಾಗಿ ನಾಯಿಗಳೆಂದರೆ ನಾನು ತುಸು ದೂರ.ಯಾರದ್ದಾದರೂ ಮನೆಗೆ ಹೋದಾಗಲೂ, ಅವರ ಮನೆಯಲ್ಲಿ ಒಂದು ಬಡಕಲು ನಾಯಿ ಕಂಡರೂ ಗೇಟಿನ ಬಳಿಯೇ ನಿಂತು ಬೊಬ್ಬೆ ಹೊಡೆದು ಮನೆಯವರಿಂದ ರಕ್ಷಣೆಯ ಸಂಪೂರ್ಣ ಆಶ್ವಾಸನೆ ದೊರೆತ ಅನಂತರವೇ ಒಳಗೆ ಹೋಗುತ್ತಿದ್ದೆ.
ಇವತ್ತು ಮಾಡಲೇನಾದರೂ ಘನಂದಾರಿ ಕೆಲಸ ಉಂಟಾ ಎಂದು ಯೋಚಿಸುತ್ತ ಮನೆಯ ಚಿಟ್ಟೆಯ ಮೇಲೆ ಕೂತಿದ್ದೆ. ಕುಂಯ್ ಕುಂಯ್ ಎಂಬ ಸದ್ದು ನನ್ನ ಯೋಚನಾಕ್ರಮವನ್ನು ಭಂಗಿಸಿತು. ನೋಡುತ್ತೇನೆ-ಏನು ನೋಡುವುದು-ಒಂದು ನಾಯಿಮರಿ ಗೇಟಿನ ಸರಳುಗಳ ನಡುವೆ ತಲೆತೂರಿಸಿ ಒಳಬರಲು ಹವಣಿಸುತ್ತಿದೆ."ಅಪ್ಪ,ಅದಕ್ಕೆ ಒಂದು ಬಿಸ್ಕತ್ ಕೊಟ್ಟೆ" ಎಂದು ಮಗಳು ಹೇಳಿದಳು. ಭೂಕಂಪವೇ ಆದಂತಾಯಿತು! ಈ ಬಿಸ್ಕತ್ತನ್ನು ಈ ಮನೆಯ ಸದಸ್ಯನಾಗಲು ಆಹ್ವಾನ ಎಂದು ಅದು ಭಾವಿಸಿದಂತೆ ನನಗೆ ಕಂಡಿತು.ಮರಿ ಒಳ ಬಂದು ನಮ್ಮನೆ ಖಾಯಂ ಸದಸ್ಯನಾಗುವ ಎಲ್ಲ ಅಪಾಯಗಳು ಕಂಡವು. ಹಚ ಹಚ ಎಂದೆ. ಅದಕ್ಕೆ ಹಚ್ ಹಚ್ ಎಂದಂತೆ ಕೇಳಿತೋ ಏನೊ! ಹಚ್ ಕಂಪನಿಗೆ ಮುಂಚೆ ನಾಯಿಯೇ ಮಾಡೆಲ್ ಆಗಿತ್ತಲ್ಲ! ಅದು ಉತ್ಸಾಹದಿಂದ ಜೋರಾಗಿ ಬಾಲ ಅಲ್ಲಾಡಿಸುತ್ತಾ ತನ್ನ ಪ್ರಯತ್ನ ತೀವ್ರಗೊಳಿಸಿತು. ಎದ್ದು ಬಂದು ಸಣ್ಣ ಕೋಲು ತೆಗೆದುಕೊಂಡು ಅದನ್ನು ಓಡಿಸಿ ಭಯಂಕರ ಅಪಾಯದಿಂದ ಪಾರಾದ್ದಕ್ಕೆ ನೆಮ್ಮದಿಪಟ್ಟೆ.
ಮಾರನೆಯ ದಿನ ಅದೇ ಹೊತ್ತಿಗೆ ಮತ್ತೆ ಬಂದು ಮತ್ತೆ ಕುಂಯ್ಗುಟ್ಟುತ್ತಾ ಒಳಬರಲು ಪ್ರಯತ್ನ ಮಾಡತೊಡಗಿತು. ಮತ್ತೆ ಸಣ್ಣಕೋಲು. ನಾಲ್ಕಾರು ದಿನ ಇದು ನಡೆಯಿತು.ಇದೆಷ್ಟು ಅಭ್ಯಾಸವಾಯಿತೆಂದರೆ ಆ ಹೊತ್ತಿಗೆ ಸರಿಯಾಗಿ ನಾನು ಹೊರಗಡೆ ಬಂದು ನಿಲ್ಲುತ್ತಿದ್ದೆ.ನಾಯಿಮರಿ ಬಂದು ಬಾಲ ಅಲ್ಲಾಡಿಸುತ್ತಾ ನಾನು ಕೋಲು ತೆಗೆದುಕೊಂಡಕೂಡಲೇ ಓಡುತ್ತಿತ್ತು. ಇದನ್ನು ದಿನಾ ನೋಡುತ್ತಿದ್ದ ನನ್ನ ಪುಟ್ಟ ಮಗಳು ಒಂದಿನ "ಅಯ್ಯೋ ಅದು ಬಂದ್ರೆ ಏನಾಗುತ್ತಪ್ಪ ಬಿಡು"ಎಂದಳು. ಏನಾಗುತ್ತೆ ಎಂದು ನಂಗೂ ಗೊತ್ತಿರಲಿಲ್ಲ. ಆದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ನಿನಗೆ ಗೊತ್ತಾಗಲ್ಲ,ಸುಮ್ನಿರು ಅಂದೆ. "ನೀನು ಹೊಡೀತಿ ಅಂತ ಗೊತ್ತಿದ್ರು ದಿನಾ ಬರುತ್ತಲ್ಲ..ಬುದ್ಧಿ ಇಲ್ಲ.ಸ್ಟುಪಿಡ್ ಪಪ್ಪಿ"ಅಂತ ಅಂದಳು.
ಹತ್ತನೇ ದಿನವೋ ಹನ್ನೊಂದನೆಯ ದಿನವೋ ನಾಯಿಮರಿ ಬರಲಿಲ್ಲ. ಸ್ವಲ್ಪ ತಡವಾಗಿ ಬರಬಹುದು ಎಂದು ನಾನು ಭಾವಿಸಿದೆ.ಅರ್ಧ ಗಂಟೆ ಕಳೆದರೂ ಬರಲಿಲ್ಲ. ಗೇಟಿಗೊರಗಿ ನಿಂತು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದೆ. ಸುಳಿವಿಲ್ಲ."ನಾಯಿಮರಿ ನೋಡ್ತಿದೀಯಾ? ಎಂದು ಮಗಳು ಕೇಳಿದಳು." ಇಲ್ಲ ಅಂತ ನಾನು ಅಂದದ್ದು ಸುಳ್ಳು ಅಂತ ಅವಳಿಗೂ ಗೊತ್ತಾಗಿರಬಹುದು."ಮರಿಗೆ ಅಂತೂ ಬುದ್ಧಿ ಬಂದಿರಬೇಕು" ಅಂತ ಮಗಳು ಖುಷಿಪಟ್ಟು ಹೇಳಿ ಸ್ಕೂಲಿಗೆ ಹೋಗಿದ್ದಳು.ನಾನು ನಾಯಿಮರಿಯನ್ನು ಹೆದರಿಸಿ ಓಡಿಸುವುದು ಅವಳಿಗೆ ತುಸು ಬೇಸರದ ಸಂಗತಿಯಾಗಿತ್ತು ಅಂತ ಕಾಣಿಸುತ್ತೆ. ಎಲಾ!ಯಾಕೆ ಬರಲಿಲ್ಲ? ನನಗೆ ವಿಚಿತ್ರ ಚಡಪಡಿಕೆ ಶುರುವಾಯಿತು. ಯಾವುದಾದರೂ ಬೈಕಿಗೋ, ಕಾರಿಗೋ ಸಿಕ್ಕು ಫಡ್ಚ ಅಯ್ತಾ ಎಂಬ ಯೋಚನೆ ಬಂದು ದಿಗಿಲಾಯಿತು.ಗೇಟಿನ ಹತ್ತಿರ ನಿಂತು ಹಾಗೇ ನೋಡುತ್ತಿದ್ದಾಗ ಏನು ನೋಡುತ್ತಿದ್ದೀರಿ? ಎಂದು ನನ್ನಾಕೆ ಕೇಳಿದಾಗ ಏನಿಲ್ಲ ನಾಯಿಮರಿ ಎಂದೆ. "ಎಲ್ಲಿದೆ ನಾಯಿಮರಿ?" ಪ್ರಶ್ನೆ. "ಎಲ್ಲೂ ಇಲ್ಲ" ಉತ್ತರ. ಇಲ್ಲದ, ಬರದಿದ್ದ ನಾಯಿಮರಿಯನ್ನು ನಾನು ನೋಡುತ್ತಿರುವುದು ಹೇಗೆ ಎಂದು ನನ್ನಾಕೆಗೆ ತಿಳಿಯದೆ "ಏನೋ.." ಎಂದು ಒಳಗೆ ಹೋದಳು.ಅವತ್ತಿಡೀ ಮನಸ್ಸು ತುಸು ಮಂಕಾಗಿತ್ತು.ಕಾರಿನ ಚಕ್ರಕ್ಕೆ ಸಿಕ್ಕು ಅಪ್ಪಚ್ಚಿಯಾದ ಅದರ ಪುಟ್ಟ ದೇಹದ ಬಗ್ಗೆ ಕಲ್ಪನೆ ಬಂದಾಗ ಮನಸ್ಸಿಗೆ ಸಣ್ಣ ಕಂಪನ.ಸತ್ತಿರಲಿಕ್ಕಿಲ್ಲ ಎಂದು ನನ್ನ ನಾನೇ ನಂಬಿಸಿಕೊಳ್ಳುತ್ತಿದ್ದೆ. ದಿನವಿಡೀ ಕುಂಯ್..ಕುಂಯ್..ಸದ್ದು ಕೇಳೀತೇ ಎಂದು ಗೇಟಿನತ್ತಲೇ ಗಮನ. ಸದ್ದಿಲ್ಲ. ನಾಯಿಮರಿ ಬಂದಿತ್ತಾ ಅಪ್ಪಾ ಎಂದು ಮಗಳು ಶಾಲೆಯಿಂದ ಬಂದವಳು ಕೇಳಿದಳು. 'ಇಲ್ಲ. ನಿನಗ್ಯಾಕೆ ಬೇಸ್ರ ಅದು ಬರದಿದ್ರೆ?"ಅವಳನ್ನು ಸಮಧಾನಪಡಿಸುವಂತೆ ಹೇಳಿದೆ.ನನ್ಗೆ ಅದು ಒಂದು ವಿಷಯವೇ ಅಲ್ಲ ಎಂದು ನನಗೂ ನಂಬಿಸಿಕೊಳ್ಳಬೇಕಾಗಿತ್ತು. ಮಗಳು ಮುಂದೇನೂ ಮಾತಾಡಲಿಲ್ಲ. ಅವತ್ತು ಅವಳ ಚಟುವಟಿಕೆಯಲ್ಲಿ ಎಂದಿನ ಲವಲವಿಕೆ ಕಾಣಲಿಲ್ಲ.
ಇನ್ನೂ ಎರಡು ದಿನ ಕಳೆದರೂ ಮರಿ ಪತ್ತೆಯಿಲ್ಲ. ನನ್ನ ಮಗಳು ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ತುಸು ಸಪ್ಪೆ ಮುಖದಲ್ಲಿ ಸ್ಕೂಲಿಗೆ ಹೋಗುತ್ತಿದ್ದಳು. "ನಿನ್ನ ಕೋಲಿಗೆ ಹೆದರಿ ಬಂದಿಲ್ಲ."ಎಂದು ಹೇಳಿದಳು. ನನಗೆ ಏನುತ್ತರ ಕೊಡಬೇಕು ತಿಳಿಯದೆ ಅವಳನ್ನೇ ಸುಮ್ಮನೇ ನೋಡಿದೆ."ನೀನು ತಪ್ಪು ಮಾಡಿದೆ"ಎಂಬ ಭಾವನೆ ಅವಳ ನೋಟದಲ್ಲಿತ್ತೇ?
ನಾಲ್ಕನೆದಿನ "ಬಂತು" ಎಂಬ ಕೂಗು ಕೇಳಿ ಛಕ್ಕಂತ ಎದ್ದು ಹೊರಗೆ ಬಂದೆ. ನಾಯಿಮರಿ ಯಥಾಪ್ರಕಾರ ಬಾಲ ಅಲ್ಲಾಡಿಸುತ್ತ ನಿಂತಿತ್ತು. ಮಗಳ ಮುಖದಲ್ಲಿ ಮಂದಹಾಸ. ನಾನು ಒಳಗೆ ಹೋಗಿ ಎರಡು ಬಿಸ್ಕತ್ ತಂದೆ.ನಾನೊಂದು ಕೊಡ್ತೀನಿ ಎಂದು ಮಗಳು ಕೊಟ್ಟಳು. ಬಾಲ ಉದುರಿಹೋಗಬಹುದು ಎಂದು ನಮಗನಿಸುವಷ್ಟು ರಭಸದಲ್ಲಿ ಬಾಲ ಅಲ್ಲಾಡಿತು.
"ಅಪ್ಪ, ಅದಕ್ಕೆ ನೀನು ಹೊಡೀತೀಯ ಅನ್ನೋದು ನೆನಪಿಲ್ಲ. ಬಿಸ್ಕತ್ ಕೊಟ್ಟಿದ್ದು ನೆನಪಿದೆ.ಅದಕ್ಕೇ ಬಂತು"ಅಂದಳು.
ಬೆಚ್ಚಿದೆ.ಯಾವುದೋ ಊರಲ್ಲಿ ಯಾವಾಗಲೋ ಮಗಳಿಗೆ ನಾಯಿ ಕಚ್ಚಿದ ನೆನಪಲ್ಲಿ ಇದನ್ನು ನಾನು ಹೆದರಿಸುತ್ತಿದ್ದೆ. ತನ್ನನ್ನೇ ಹೆದರಿಸಿದರೂ ಇದು ಕೋಲನ್ನು ಮರೆತು ಮಗಳು ಕೊಟ್ಟ ಬಿಸ್ಕತ್ತನ್ನು ಮಾತ್ರ ನೆನಪಲ್ಲಿಟ್ಟುಕೊಂಡಿತ್ತು. ತಪ್ಪನ್ನು ಕ್ಷಮಿಸುವ ಮಾನವೀಯ ಗುಣ[?] ನನಗಿಂತ ಈ ನಾಯಿಮರಿಗೆ ಜಾಸ್ತಿ ಇದ್ದಂತಿತ್ತು! ಆ ಕ್ಷಣದಲ್ಲಿ ಆ ಮರಿ ಸಂತನ ಗುಣವುಳ್ಳ ನರನಂತೆಯೂ ನಾನು ಕ್ರೂರ ಪ್ರಾಣಿಯಂತೆಯೂ ನನಗೆ ಭಾಸವಾಯಿತು.

Wednesday, September 30, 2009

ಒಂದು ಅನೀತಿ ಕತೆ.

ಪ್ರತಿನಿತ್ಯ ಸಾಯಂಕಾಲ,ಸೂರ್ಯ ಮುಳುಗುವುದು ತಪ್ಪಿದರೂ ತಪ್ಪಬಹುದು, ಆದರೆ ಆ ಹತ್ತು ಜನ ಊರ ಹೊರಗಿನ ಗಾಳಿ ಮರದ ಕೆಳಗಡೆ ಸೇರುವುದು ತಪ್ಪುವುದಿಲ್ಲ. ಅಲ್ಲಿ ಕೂತು ಇಡೀ ಪ್ರಪಂಚ ಸುತ್ತಾಡುತ್ತಾರೆ. ಹತ್ತು ಜನರೂ ಏಕಕಾಲಕ್ಕೆ ಹತ್ತು ವಿಷಯಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಯಾರಿಗೂ ತಮ್ಮ ಮಾತುಗಳನ್ನು ಬೇರೆಯವರು ಕೇಳಲೇಬೇಕು ಎಂಬ ಜರೂರತ್ತಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಎಲ್ಲ ಬಡ ಬಡ ಎದ್ದು ಹೊರಡುತ್ತಾರೆ.ಅವರವರ ತಾಪತ್ರಯಗಳು ಮತ್ತೆ ಬೆನ್ನೇರುತ್ತವೆ.
ಆ ದಿನವೂ ಹೀಗೇ ಸೇರಿದವರು ಮಾತಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಅಂದ.”ಅಲ್ಲ..ನಾವು ಯಾರಿಗೂ ಏನೂ ಕೆಟ್ಟದು ಮಾಡಿಲ್ಲ. ನಮ್ ಪಾಡಿಗೆ ನಾವಿದೀವಿ. ಅದ್ರೂ ನಮ್ಮನ್ನ ಪೋಲಿಹುಡುಗ್ರು ಅಂತಾರಲ್ಲ..” ಸಮಾಜದ ಬಗ್ಗೆಯೋ,ಪ್ರಪಂಚದ ಯಾವುದೋ ಸಮಸ್ಯೆಯ ಬಗ್ಗೆಯೋ ಆಗಿದ್ದರೆ ಉಳಿದ ಯಾರಿಗೂ ಇವನ ಮಾತು ಕೇಳುತ್ತಲೇ ಇರಲಿಲ್ಲವೇನೋ! ಅದ್ರೆ ಪೋಲಿಹುಡುಗ್ರು..ಬಹುವಚನ ಪ್ರಯೋಗ..”ಯಾರಯ್ಯ ಹಾಗಂದೋರು?” “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ?” “ಒದಿಯೋದು ಅಂದ್ರೆ ಒದಿಯೋದು ಅಲ್ಲಪ್ಪಾ…” ಏನೋ ವಿವರಣೆ ನೀಡತೊಡಗಿದ. ಇಷ್ಟು ದಿನಗಳಲ್ಲಿ ಎಂದೂ ಕಾಣದಿದ್ದ ಏಕತೆ ಇಂದು ಕಂಡಿತು. “ಅವ್ರು ಹೇಳೋದೆ ಸತ್ಯ ಇರ್ಬಹುದು. ನಾವು ಒಳ್ಳೇರು ಅನ್ನೋದಕ್ಕೆ ಏನ್ರಯ್ಯ ಸಾಕ್ಷಿ ಇದೆ?” ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ?” ಇನ್ಯಾರದೋ ತಕರಾರು. ಎಲ್ಲರೂ ತಾವು ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ಚಿಂತಿಸುತ್ತಾ ಮೌನವಾದರು.ಅವರಿಗೂ ನಿಜವಾಗಿ ಗೊತ್ತಾಗಲಿಲ್ಲ. ಯಾರನ್ನಾದರೂ ಕೇಳುವ ಅಂದರೆ, ಅವರು ನೀವು ಒಳ್ಳೇರಲ್ಲ ಕಣ್ರೋ ಎಂದರೆ?
ಅವರಲ್ಲೇ ಹಿರಿಯವನಾದವನು ಹೇಳಿದ. “ಒಂದ್ಕೆಲ್ಸ ಮಾಡುವಾ. ನಾವೀಗ ಹತ್ ಜನ ಇದೀವಿ. ನಮ್ ಗುಂಪಲ್ಲೇ ನಮ್ ನಮ್ಗೆ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ಸುತ್ತೆ ಅಂತ ಪರೀಕ್ಷೆ ಮಾಡೋಣ. ಒಂದ್ ಚೀಟೀಲಿ ಎಲ್ರೂ ಅವ್ರಿಗೆ ಈ ಗುಂಪಲ್ಲಿ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ನೊದನ್ನು ಬರೀಬೇಕು. ಗುಂಪಲ್ಲಿ ಅವ್ನೂ ಸೇರೋದ್ರಿಂದ ಅವ್ನಿಗೆ ಅವ್ನು ತಾನು ಒಳ್ಳೇನೋ ಒಳ್ಳೇನಲ್ವಾ ಅನ್ನೋದನ್ನೂ ಬರೀಬೇಕು.ಆಯ್ತಾ?” ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು.
ಒಬ್ಬ ಯೋಚಿಸಿದ: “ತಾನು ನಿಜವಾಗಿ ಅಷ್ಟು ಒಳ್ಳೇನಲ್ಲ. ಕೆಲವು ಕೆಟ್ಟ ಗುಣಗಳು ತನ್ನಲ್ಲಿವೆ. ಸರಿ..ಹಾಗಂತ ನನ್ನ ನಾನೇ ಕೆಟ್ಟವ ಅಂತ ಬರೆದ್ರೆ ಸರಿಯಾಗಲ್ಲ. ಆದ್ರಿಂದ ತಾನು ಒಳ್ಳೇನಂತಲೇ ಬರೀಬೇಕು. ಉಳಿದೋರಲ್ಲಿ ಕೆಟ್ ಗುಣಾನೂ ಇದೆ,ಒಳ್ಳೇ ಗುಣಾನೂ ಇದೆ. ಅದ್ರೆ ಅವ್ರನ್ನ ಒಳ್ಳೇರು ಅಂತ ನಾನು ಬರೆದ್ರೆ, ಅವ್ರು ನನ್ನ ಒಳ್ಳೇನು ಅಂತ ಬರೀದಿದ್ರೆ ನಂಗೆ ನನ್ ಓಟು ಮಾತ್ರ.ಒಟ್ಟಲ್ಲಿ ನಾನು ಕೆಟ್ಟೋನು ಅಂತ ಆಗ್ತೀನಲ್ಲ. ಆದ್ರಿಂದ ಅವ್ರೆಲ್ಲ ಕೆಟ್ಟೋರು ಅಂತ ಬರೀತೀನಿ” ಹಾಗೇ ಬರೆದ.
ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು.
ಗುಂಪಿಗೆ ಬಂದ ನೂರು ಓಟಲ್ಲಿ ಹತ್ರಲ್ಲಿ ಮಾತ್ರ ಒಳ್ಳೇರು ಅಂತ, ಉಳಿದ ತೊಂಬತ್ರಲ್ಲಿ ಕೆಟ್ಟೋರು ಅಂತ ಇತ್ತು.
ಎಲ್ರೂ ಬೆಪ್ಪಾಗಿ ಕೂತ್ರು.
(ಈ ಕತೆ ನೀತಿ ಏನು ಅಂತ ನಂಗೊತ್ತಿಲ್ಲ. ಆದ್ರೆ ಗುಂಪಲ್ಲಿ ಸುಮ್ನೆ ನಿಂತು ಮಾತು ಆಲ್ಸಿ. ಏನ್ ನೀತಿ ಅಂತ ನಿಮ್ಗಾದ್ರೂ ಹೊಳೀಬಹುದು.)

Thursday, September 10, 2009

ನಿಜ..ನಿಜ..ನಿಜ..

****ಎಲ್ಲೋ ಕೇಳಿದ ಮಾತು. ನಿಜಕ್ಕೆ ಮೂರು ಮುಖಗಳಂತೆ. ಮೊದಲನೆಯದು ನಾನು ಕಾಣುವ ಮುಖ. ಎರಡನೆಯದು ಉಳಿದವರೆಲ್ಲ ಕಾಣುವ ಮುಖ. ಸಧ್ಯಕ್ಕೆ ಈ ಎರಡು ಮುಖಗಳು ಸಾಕು;ಮೂರನೆಯ ಮುಖ ಆ ಮೇಲೆ ನೋಡೋಣ. ಯಾವುದೇ ಘಟನೆ ಆರಿಸಿಕೊಳ್ಳಿ. ಏನು ನಡೆದಿದೆ ಎಂಬುದರ ಬಗ್ಗೆ ನಿಮ್ಮ ಯೋಚನೆ ಖಚಿತಪಡಿಸಿಕೊಳ್ಳಿ. ಅದೇ ಘಟನೆಯ ಬಗ್ಗೆ ಬೇರೆ ಯಾರದಾದರೂ ಅಭಿಪ್ರಾಯ ಕೇಳಿ. ಒಂದು ಸಣ್ಣ ವ್ಯತ್ಯಾಸವಾದರೂ ಇರುತ್ತದೆ. ಅದು ಹಾಗಲ್ಲ ಮಾರಾಯಾ...ಎಂದು ನೀವು ನಿಜವನ್ನು ಅವನಿಗೆ ತಿಳಿಸಲು ಹೊರಡುತ್ತೀರಿ. ನೀವು ಹೇಳುವುದನ್ನು-ತಾಳ್ಮೆಯಿದ್ದರೆ-ಅವನು ಕೇಳಿ, ಅದು ಹಾಗಲ್ಲ ಮಾರಾಯಾ..ಎಂದು ತನ್ನ ನಿಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ.
****ಉದಾಹರಣೆಗೆ ದೇವರ ಬಗೆಗಿನ ಚರ್ಚೆಯನ್ನೇ ಗಮನಿಸಿ.[ದೇವರನ್ನು ನಾನು ಆರಿಸಿದ ಕಾರಣ ದೇವರು ನನ್ನ ಬಳಿ ಬಂದು ನಿಮ್ಮ ತಕರಾರಿನ ಮಧ್ಯೆ ನನ್ನ ತೂರಿಸಿದ್ದು ಯಾಕೆ ಎಂದು ಕೇಳುವುದಿಲ್ಲ. ಅಕಸ್ಮಾತ್ತಾಗಿ ಹಾಗೆ ಬಂದರೆ ಅನಾಯಾಸವಾಗಿ ದೇವರನ್ನು ಕಂಡಂತಾಯಿತಲ್ಲ!] ಜಗತ್ತಿಗೆಲ್ಲ ದೇವರು ಒಬ್ಬನೇ ಎಂದು ಎಲ್ಲ ಧರ್ಮಗಳೂ ಘೋಷಿಸುತ್ತವೆ. ನಿಜ. ಆದರೆ ಈ ದೇವರು ಯಾರು? ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು, ಕ್ರಿಶ್ಚಿಯನ್ನರಿಗೆ ಕ್ರಿಸ್ತ/ಶಿಲುಬೆ.ನಮ್ಮ ನಿಮ್ಮಂತವರಿಗೆ ಮನೆಯ ಮೂಲೆಯಲ್ಲಿರುವ ತಲೆತಲಾಂತರದಿಂದ ಪೂಜಿಸುತ್ತ ಬಂದಿರುವ ಒಂದಿಷ್ಟು ಮೂರ್ತಿಗಳು. ದೇವರು ಒಂದೇ ಎಂದು ಹೇಳುತ್ತಲೇ ಅವರವರ ದೇವರ ನಿಜದ ಬಗ್ಗೆ ಚರ್ಚೆ, ಯುದ್ಧ, ಹಿಂಸೆ ನಡೆಯುತ್ತೆ. ಹೌದಾ ಅಲ್ಲವಾ ನೀವೇ ಹೇಳಿ.
****ಮತ್ತೆ ನಿಜದ ಮೂರನೆಯ ಮುಖ : ನಾನು ನೋಡಿರದ, ನೀವೂ ನೋಡಿರದ, ಪ್ರಾಯಶಃ ನೋಡಲು ಹಂಬಲಿಸದ ನಿಜವಾದ "ನಿಜ"

Saturday, August 29, 2009

ಹೊತ್ತು ಹೋಗದೆ ಮಾತು.

. ಸಲಹೆಗಳಿರುವುದು ಬೇರೆಯವರಿಗೆ ಕೊಡಲೇ ಹೊರತು ಸ್ವಂತದ ಉಪಯೋಗಕ್ಕಲ್ಲ.

. ನೀವು ಕಡ ಕೇಳುವ ಹಿಂದಿನದಿನದವರೆಗೂ ನಿಮ್ಮ ಸ್ನೇಹಿತನ ಬಳಿ ಸಾಕಷ್ಟು ಹಣವಿರುತ್ತದೆ.

. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಮಾನವೀಯಧರ್ಮ ಎಂದು ಯಾರಾದರೂ ಹೇಳಿದರೆ, ಅವರು ಕಷ್ಟದಲ್ಲಿದ್ದಾರೆ ಎಂದರ್ಥ.

. ದೇವರಿಗೆ ಭಕ್ತ ಏನು ಕೊಟ್ಟರೂ ಸಾಕು;ಕೊಡದಿದ್ದರೂ ಅಡ್ಡಿಲ್ಲ.ಅರ್ಚಕರಿಗೆ ಮಾತ್ರ ಭಕ್ತರು ಕೊಡಲೇಬೇಕು. ಭಕ್ತರು ಕೊಡುವಷ್ಟೂ ಅವರಿಗೆ ಬೇಕು.

. ಅಪ್ರಾಮಾಣಿಕರಾಗುವ ಅವಕಾಶ ಸಿಗುವವರೆಗೂ ಎಲ್ಲರೂ ಪ್ರಾಮಾಣಿಕರೇ. ಹಾಗೆ ಅವಕಾಶವಿದ್ದಾಗಲೂ

ಪ್ರಾಮಾಣಿಕನಾಗಿದ್ದವನನ್ನು ಹಿಂದೆಲ್ಲ ಯೋಗ್ಯ, ಮಹಾನುಭಾವ ಇತ್ಯಾದಿ ಗುರುತಿಸುತ್ತಿದ್ದರು. ಈಗ ದಡ್ಡ, ವ್ಯಾವಹಾರಿಕ ತಿಳುವಳಿಕೆ ಇಲ್ಲದವನು ಎನ್ನುತ್ತಾರೆ.

. ಒಗ್ಗಟ್ಟಿಂದ ಕೆಲಸ ಮಾಡಿದರೆ ಎಲ್ಲರ ಕೆಲಸವೂ ಸುಲಭ ಎಂದು ಗುಂಪಿನಲ್ಲಿರುವ ಎಲ್ಲರಿಗೂ ಗೊತ್ತು. ಒಗ್ಗಟ್ಟಾಗಲು ಒಬ್ಬ ನಾಯಕ ಬೇಕು ಎಂಬುದರ ಬಗ್ಗೆಯೂ ಯಾರ ತಕರಾರೂ ಇಲ್ಲ. ತಕರಾರಿರುವುದು ನಾಯಕ ಯಾರಾಗಬೇಕು ಎಂಬುದರ ಬಗ್ಗೆ.

Tuesday, June 30, 2009

ನಾಲ್ಕು ಸುದ್ದಿಗಳು.

*****ಸುದ್ದಿ ಒಂದು: ಜಾರ್ಖಂಡ್ ನ ಪಲಾಮೌ ಜಿಲ್ಲೆಯ ಚತ್ರಾಪುರ ಬ್ಲಾಕ್ ನ ಸಾವಿರಕ್ಕೂ ಹೆಚ್ಚು ರೈತರು ಸತತ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ರಾಷ್ರಪತಿಗಳ ಅನುಮತಿ ಕೋರಿದ್ದಾರೆ.
*****ಸುದ್ದಿ ಎರಡು: ನಮ್ಮ ಸಂಸತ್ ಭವನ, ಪ್ರಧಾನಿ ನಿವಾಸ ಮತ್ತು ರಾಷ್ರಪತಿಗಳ ನಿವಾಸದ ಒಟ್ಟು ವಿದ್ಯುತ್ ಖರ್ಚು ವರ್ಷಕ್ಕೆ ಸುಮಾರು ೧೪ ಕೋಟಿ ರೂಪಾಯಿಗಳು.
*****ಸುದ್ದಿ ಮೂರು: ಗುಜರಾತಿನ ಮುಖ್ಯಮಂತ್ರಿ ಮೋದಿಯವರ ಪ್ರತಿತಿಂಗಳ ವಿಮಾನಯಾನದ ಖರ್ಚು ಸುಮಾರು ೨೭ ಲಕ್ಷ ರೂಪಾಯಿಗಳು.
*****ಸುದ್ದಿ ನಾಲ್ಕು: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ತಮ್ಮ ಹಾಗೂ ತಮ್ಮ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶದ ಎಲ್ಲಡೆ ಸ್ಥಾಪಿಸಲು ನಿರ್ಧರಿಸಿ, ಇದಕ್ಕಾಗಿ ಸರಕಾರೀ ಬಾಬತ್ತಿನಲ್ಲಿ ಎರಡು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ.
*****ಇವನ್ನು ಓದಿದೆ.ಯಾವ ರೀತಿಯ ಪ್ರತಿಕ್ರಿಯೆ ತೋರಿಸಬೇಕು ತಿಳೀತಿಲ್ಲ.

Tuesday, April 14, 2009

ಎರಡು ಪುಟ್ಟ ಕತೆಗಳು.

ಒಂದು.
***ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.ಅವಳ ಕಣ್ಣಲ್ಲಿ ಅವನ ಚಿತ್ರ,ಅವನ ಕಣ್ಣಲ್ಲಿ ಅವಳ ಚಿತ್ರ.ಅವನ ಕಡೆಯಿಂದ ಬೀಸುವ ಗಾಳಿ ಅವಳಿಗೆ, ಅವಳ ಕಡೆಯಿಂದ ಬೀಸುವ ಗಾಳಿ ಅವನಿಗೆ ಮಧುರ ಪುಳಕ ನೀಡುತ್ತಿತ್ತು.ಹಕ್ಕಿಗಳು ಅವರಿಗಾಗಿ ಹಾಡುತ್ತಿದ್ದವು. ಮರಗಳು ಅವರಿಗಾಗಿ ಚಿಗುರಿ ಹೂ ಬಿಡುತ್ತಿದ್ದವು.ಅವರ ಪ್ರೀತಿಯ ಸಲ್ಲಾಪ ಕಂಡು ಚಂದ್ರ ಮೋಡದ ಮರೆಯಲ್ಲಿ ಅಡಗುತ್ತಿದ್ದ.ಸೂರ್ಯ ಕೆಂಪಾಗುತ್ತಿದ್ದ. ತಾರೆಗಳು ಕಣ್ಣು ಮಿಟುಕಿಸುತ್ತಿದ್ದವು.ಅವರು ಸುಖದಿಂದ ಇದ್ದರು ಅನ್ನುವುದಕ್ಕಿಂತ ಸುಖವೇ ಅವರಲ್ಲಿ ಸುಖವಾಗಿತ್ತು ಅಂದರೇ ಚೆನ್ನ.
***ಎಲ್ಲ ಸುಖಕ್ಕೂ ಅಂತ್ಯ ಇದೆ; ಇರಲೇಬೇಕು.
***ಅವರು ಮದುವೆಯಾದರು.
%%%%%%%%%%%%%%%%%%%%
ಎರಡು.
ಪ್ರೀತಿಸಿ ಮದುವೆಯಾದವರು ಅವರು. ಸುಖವಾಗಿ ಹದಿನೈದು ವರ್ಷ ಕಳೆದಿದ್ದಾರೆ. ಒಂದು ಜಗಳವಿಲ್ಲ, ವಾದವಿಲ್ಲ. ಅವನ ಪ್ರಪಂಚದಲ್ಲಿ ಅವಳು ಮಾತ್ರ; ಅವಳ ಪ್ರಪಂಚದಲ್ಲಿ ಅವನು ಮಾತ್ರ. ಎಲ್ಲರಿಗೂ ಇದೊಂದು ವಿಸ್ಮಯವಾಗಿತ್ತು. ಒಂದಿನ ಹೆಂಡತಿ ಅವನ ಆಫೀಸಿಗೆ ಹೋದಳು. ಮೇಜಿನ ಮೇಲೆ ಒಂದಿಷ್ಟು ಕಾಗದಗಳನ್ನು ಹರಡಿಕೊಂಡು ಅವನು ಕೂತಿದ್ದ. ಅವನೆದುರು ೪೦-೪೫ರ ಹೆಂಗಸೊಬ್ಬಳು ಬಾಗಿ ಏನನ್ನೋ ವಿವರಿಸುತ್ತಿದ್ದಳು. ಗಂಡಸರೆದುರು ಹಾಗೆ ಬಾಗಿ ನಿಲ್ಲುವುದು ಸರಿಯಲ್ಲ.
ಆ ರಾತ್ರಿ ಆಕೆ ಕೇಳಿದಳು: ಆ ಮೋಹಿನಿ ಯಾರು? ಇವ್ನಿಗೆ ಏನೂ ಹೊಳೆಯಲಿಲ್ಲ. "ಯಾವ ಮೋಹಿನಿ?"" ಅದೇ ಇವತ್ತು ಅಫೀಸಲ್ಲಿ.ನಿಮ್ಮೆದುರು ನಿಂತು ಬಾಗಿ ವೈಯಾರ ಮಾಡ್ತಿದ್ಲಲ್ಲ..ಅವಳು." ಅವನೆದುರು ಯಾರೂ ವೈಯಾರ ಮಾಡುತ್ತಿರಲಿಲ್ಲ. ಇವನಿಗೆ ತನ್ನ ಹೆಂಡತಿಯನ್ನು ಬಿಟ್ಟು ಪ್ರಪಂಚದಲ್ಲಿ ಬೇರೆ ಹೆಂಗಸರು ಇರುತ್ತಾರೆ ಎಂಬುದೂ ಗೊತ್ತಿಲ್ಲ ಎಂದು ಅಫೀಸಿನವರು ಆಡಿಕೊಳ್ಳುತ್ತಿದ್ದರು.
"ಯಾರೂ ಇಲ್ವಲ್ಲ. ಎಲ್ಲ ಬಂದು ವಿಚಾರಿಸ್ತಾರೆ. ವೈಯಾರ ಯಾಕೆ ಮಾಡ್ತಾರೆ?"
"ನಂಗೊತ್ತು. ನಿಮ್ಗೆ ನನ್ ಕಂಡ್ರೆ ಮೊದ್ಲಿನಷ್ಟು ಪ್ರೀತಿ ಇಲ್ಲ. ಆ ಮೋಹಿನಿ ಹಿಂದೆ ಬಿದ್ದಿದೀರ."
ಅವನಿಗೆ ಗಾಬರಿಯಾಯಿತು."ಹಾಗೇನಿಲ್ಲ ಮಾರಾಯ್ತಿ.ಯಾಕನುಮಾನ?" ಹೆಂಡತಿಯ ಅನುಮಾನ ಬೆಳೆಯತೊಡಗಿತು. ಅವನ ಎಲ್ಲ ಚರ್ಯೆಗಳನ್ನೂ ಅವಳ ಜತೆ ತಳಕು ಹಾಕತೊಡಗಿದಳು.ಪದೇ ಪದೇ ನೀವು ನನ್ನ ಪ್ರೀತಿಸ್ತಾಇಲ್ಲ, ಅವಳನ್ನ ಪ್ರೀತಿಸ್ತಿದೀರಿ ಎಂದು ಹೇಳತೊಡಗಿದಳು. ಹೆಂಡತಿಯ ಮಾತು ಅವನಿಗೆ ಪರಮ ಸತ್ಯ. ಇದನ್ನೂ ನಂಬಿದ.
****ಅವಳನ್ನೇ ಮದುವೆಯಾದ.

Wednesday, April 1, 2009

ಕೊತ್ತಂಬರಿ ಕಟ್ಟು ಮತ್ತು ಮಸಾಲೆ ದೋಸೆ

***ತರಕಾರಿ ಅಂಗಡಿಯಿಂದ ಹೊರಬರುವಾಗ , ಅಲ್ಲೇ ಮರದ ಕೆಳಗೆ ಕೊತ್ತಂಬರಿ ಕಟ್ಟುಗಳ ಗುಡ್ಡೆಯ ಹಿಂದೆ ಕೂತ ಸರಿಸುಮಾರು ಎಪ್ಪತ್ತರ ವಯಸ್ಸಿನ ಆ ಮುದುಕಿಯ ಹತ್ತಿರ ಎರಡು ಕಟ್ಟು ತಗೊಳ್ತಿದ್ದೆ. ಅದು ಲಾಗಾಯ್ತಿನಿಂದ ಬಂದ ಅಭ್ಯಾಸ. ಈ ಊರಿಗೆ ನಾನು ಬಂದು ನಾಲ್ಕು ವರ್ಷಗಳಾಗಿವೆ. ಅವತ್ತಿಂದಲೂ ಅವಳು ಹೀಗೇ, ಇಲ್ಲಿ, ಕೊತ್ತಂಬರಿ ಕಟ್ಟುಗಳ ರಾಶಿಯ ಹಿಂದೆ, ಒಂದು ಚೌಕಳಿ ಸೀರೆ ಉಟ್ಟು ಕೂತಿರುತ್ತಾಳೆ. ಅವಳನ್ನು ಕಂಡು ನನಗೆ ಯಾಕೆ ಪಾಪ! ಅನ್ನಿಸ್ತು ಅಂತ ಗೊತ್ತಿಲ್ಲ. ನನ್ನ ಕಂಡಕೂಡಲೇ ಎರಡು ಕಟ್ಟು ಆರಿಸುತ್ತ, ನಾನು ಕೇಳ್ದಿದ್ರೂ, ಅವಳಾಗಿಯೇ ರೇಟು ಏರೋಗಿದೆ ಅಯ್ಯಾವ್ರೇ ಎಂದೋ, ಈಗ ಸ್ವಲ್ಪ ಸಸ್ತಾ ಆಗಿದೆ ಎಂದೋ ಗೊಣಗುಟ್ಟುತ್ತಿದ್ದಳು. ಅಲ್ಲಮ್ಮಾ, ಒಂದು ಕಟ್ಟು ಮಾರಾಟ ಆದ್ರೆ ನಿಂಗೆ ಏನು ಲಾಭ ಬರುತ್ತೆ ಎಂದು ಒಮ್ಮೆ ಕುತೂಹಲದಿಂದ ಕೇಳಿದ್ದೆ. ಇಪ್ಪತ್ತು ಪೈಸೆ ಎಂದಿದ್ದ್ಲು. ಸುಮ್ಮನೆ ಲೆಕ್ಕ ಹಾಕಿ ನೋಡಿದೆ. ಇನ್ನೂರು ಕಟ್ಟು ವ್ಯಾಪಾರವಾದ್ರೂ ಅವ್ಳಿಗೆ ಆಗೋ ಲಾಭ ಬರೀ ಇಪ್ಪತ್ತು ರೂಪಾಯಿ. ಅಷ್ಟಕ್ಕಾಗಿ ಮಳೆ, ಬಿಸ್ಲು, ಚಳಿ ಅಂತ ನೋಡ್ದೆ, ದಿನವಿಡಿ ಕೂರೋದು ಊಹಿಸಿಯೇ ನಂಗೆ ಮರುಕ ಬಂದಿತ್ತು. ಹಾಗಾಗಿ ತರಕಾರಿ ಜತೆ ಎರಡು ಕಟ್ಟು ನಾನು ಯಾವಾಗ್ಲೂ ತಗೊಳ್ಳೋದಾಗಿತ್ತು. ನಂಗೆ ಕೊತ್ತಂಬರಿ ಸೊಪ್ಪು ಬೇಕಿತ್ತೋ ಇಲ್ವೋ ಎಂಬುದನ್ನ ನಾನು ಎಂದೂ ಯೋಚ್ನೇನೆ ಮಾಡ್ತಿರ್ಲಿಲ್ಲ. ನನ್ನ ಹೆಂಡತಿಗೆ ಈ ಕಟ್ಟು ಬಾಡದಂತೆ ಇಡುವ ಚಿರಿಪಿರಿ. ಒಂದೇ ತನ್ನಿ, ಸಾಕು ಎಂದು ಪ್ರತಿ ಬಾರಿಯೂ ಅವಳು ಹೇಳ್ತಿದ್ಲು. ಸರಿ ಅಂತಿದ್ದೆ.
****ಇವತ್ತು ಅವ್ಳ ಗುಡ್ದೆ ಹತ್ರ ಹೋದೆ. ಅಲ್ಲಿ ಒಬ್ಬಾಕೆ, ಭರ್ಜರಿ ಸೀರೆ ಉಟ್ಟು ಕೊತ್ತಂಬರಿ ಸೊಪ್ಪು ಆರಿಸ್ತಾ ಇದ್ಲು. ಅವ್ರ ವ್ಯಾಪಾರ ಮುಗೀಲಿ ಅಂತ ನಾನು ಸುಮ್ಮನೆ ನಿಂತೆ. ಅವರ ಮಾತುಕತೆ ಕಿವಿಗೆ ಬೀಳತೊಡಗಿತು.
“ಹ್ಯಾಗಮ್ಮ ಕಟ್ಟಿಗೆ?” “ಐದ್ರೂಪಾಯ್ಗೆ ಮೂರ್ ಕಟ್ಟು.” “ಏನೇ ಇದು..ಈ ರೇಟು. ಮನಸ್ಸಿಗೆ ಬಂದ ರೇಟ್ ಹೇಳ್ತಿದೀಯಾ.” “ಅಯ್ಯಯ್ಯೋ..ನಂಗೇ ನೂರ್ ಕಟ್ಟಿಗೆ ನೂರೈವತ್ ರೂಪಾಯ್ ಬಿದ್ದಿದೆ, ನೀವೇ ಹೇಳಿ.ಯಾವ ರೇಟಿಗೆ ಕೊಡ್ಳಿ ಅಂತ.” “ಅಯ್ಯೋ.. ನಂಗೆಲ್ಲ ಗೊತ್ತಿದೆ..ಸುಮ್ನೆ ಐದ್ರೂಪಾಯ್ಗೆ ನಾಕ್ ಕಟ್ಟು ಕೊಡು.” “ಬರಲ್ಲವ್ವ.. ಹೊಟ್ಟೆ ಮ್ಯಾಲೆ ಹೊಡೀಬೇಡಿ” “ಏನೂ ಆಗಲ್ಲ..ತಗೋ..ನಾವು ದಿನಾ ತಗೋಳರಲ್ವಾ..” ಭರ್ಜರಿ ಸೀರೆಯ ಹೆಂಗಸು ನಾಲ್ಕು ಕಟ್ಟು ಚೀಲಕ್ಕೆ ತುಂಬಿಸುತ್ತ ಐದು ರೂಪಾಯಿ ಹಾಕಿ, ಬರಲ್ಲವ್ವ…ಬರಲ್ಲವ್ವ..ಎಂಬ ಮುದುಕಿಯ ಮಾತು ಅವ್ಳಿಗೇ ಬಿಟ್ಟು ಹೊರಟೇ ಹೋದ್ಲು. ಅವಳ ಕೈಯಲ್ಲಿರುವ ಕಟ್ಟನ್ನು ಈ ಮುದುಕಿಗೆ ಕಸಿಯಲು ಸಾಧ್ಯವೇ? “ನೋಡೀ ಅಯ್ಯಾ..ಈ ಥರಾ ಮಾಡಿದ್ರೆ ನಾವು ಹ್ಯಾಗೆ ಬದುಕೋದು..ನಿಮಗೂ ಮೂರ್ ಕಟ್ಟು ಕೊಡ್ಲಾ?” “ಬೇಡಮ್ಮ..ಎರಡೇ ಸಾಕು” “ಎರ್ಡ್ ಕಟ್ಟಾದ್ರೆ ನಾಕ್ರುಪಾಯ್ ಅಗ್ತದೆಯಲ್ಲಾ ಸಾಮಿ…” “ಆಗ್ಲಿ ಬಿಡು..ತಗೊಂಡು ಹೋದ್ರೆ ಮನೇಲಿ ಸುಮ್ನೆ ದಂಡ ಆಗುತ್ತೆ.” ಮುದುಕೀ ಹತ್ರ ಚೌಕಾಶಿ ಮಾಡ್ತಿದ್ದ ಸುಮಾರು ಜನ್ರನ್ನ ನಾನು ನೋಡಿದ್ರೂ, ಈ ಹೆಂಗ್ಸಿನ ನೆನಪು ಯಾಕೋ ಉಳೀತು. ಹಾಗೆ ಉಳೀಲಿಕ್ಕೆ ಅವ್ರುಟ್ಟಿದ್ದ ಭರ್ಜರಿ ಸೀರೇನೇ ಕಾರಣ ಇರ್ಬಹುದು. ಇದಾದ ಅನಂತರ, ಪ್ರತಿಬಾರಿ ಕಟ್ಟು ಕೊಳ್ಳುವಾಗಲೂ ಭರ್ಜರಿ ಸೀರೆಯ ನೆನಪೂ, ಮುದುಕಿಯ ದೀನ ದನಿಯೂ ನೆನಪಾಗುತ್ತಿತ್ತು. ಕೆಲವೊಮ್ಮೆ ಸಣ್ಣ ಘಟನೆ ಕೂಡ ಯಾಕೆ ನೆನಪಲ್ಲಿ ಉಳೀತದೆ ಅನ್ನೋದಕ್ಕೆ ತಾರ್ಕಿಕವಾದ ಯಾವ ಕಾರಣವೂ ಇರಲ್ಲವೇನೋ.
****
ಆ ದಿನ ಪೇಟೆ ಕೆಲಸ ಮುಗಿಸಿ ಮನೆಗೆ ಹೊರಡಲೆಂದು ನನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವಾಗ, ನನ್ನ ಬೆನ್ನಿಗೆ ಒಂದು ಗುದ್ದು ಬಿತ್ತು. ಅದರ ಜೊತೆ “ಏನೋ..ನೀನಿಲ್ಲಿ?” ಎಂಬ ಅಶ್ಚರ್ಯಮಿಶ್ರಿತ ಪ್ರಶ್ನೆ. ಯಾರಪ್ಪಾ ಎಂದು ತಿರುಗಿ ನೋಡಿದರೆ ವಿಮಲ ತನ್ನ ದಂತಪಂಕ್ತಿಯನ್ನು ಪೂರ್ಣ ಪ್ರದರ್ಶಿಸುತ್ತ ನಿಂತಿದ್ದಳು. “ಏನೇ..ನೀನಿಲ್ಲಿ” ಎಂದು ನಾನೂ ಚಕಿತನಾಗಿ ಕೇಳಿದೆ. ವಿಮಲ ನನ್ಗೆ ದೂರದ ಸಂಬಂಧಿ. ಹ್ಯಾಗೆ ಅನ್ನೋದು ನಂಗೂ ಗೊತ್ತಿಲ್ಲ. ಒಟ್ಟಿಗೇ ಓದುತ್ತ ಇದ್ದ ಕಾರಣ ನೆಂಟಸ್ತನಕ್ಕಿಂತ ಬಳಕೆಯ ಸಲಿಗೆ ಜಾಸ್ತಿ ಇತ್ತು. ಅವಳನ್ನು ಕಾಣದೆ ಆರೆಂಟು ವರ್ಷಗಳೆ ಆಗಿದ್ದವು. “ಆ ಸಂಘ ಈ ಸಂಘ ಅಂತ ಓಡಾಡ್ತಾ, ಏನೇನೋ ಚಟುವಟಿಕೆ ಮಾಡ್ತಾಳಪ್ಪಾ” ಅಂತ ಕೆಲವರು ಮೆಚ್ಚುಗೆಯಲ್ಲಿ,ಕೆಲವರು ವ್ಯಂಗದಲ್ಲಿ ಹೇಳೋದು ಕೇಳಿದ್ದೆ. ನೀನು ಜಯ ತಾನೇ? ಅಂತ ಅವಳು, ನೀನು ವಿಮ್ಲ ತಾನೇ ಅಂತ ನಾನೂ ಕೇಳಿ ಪರಸ್ಪರರ ಪರಿಚಯ ಪಕ್ಕಾ ಮಾಡಿಕೊಂಡೆವು. ಧಿಡೀರಂತ ಹೀಗೆ ರಸ್ತೆಯಲ್ಲಿ ಕಂಡವಳ ಜತೆ ಏನು ಮಾತಾಡುವುದು ಎಂಬುದೇ ತೋಚಲಿಲ್ಲ. ಏಳು ಮನೆಗೆ ಹೋಗೋಣ ಅಂದೆ. ಇವತ್ತಿಲ್ಲ ಮಾರಾಯಾ..ಈಗ ನಾನು ಅರ್ಜೆಂಟಾಗಿ ಶಿಮೊಗ್ಗ ಹೊರಟೀದೀನಿ…ಏಳು..ಜ್ಯೂಸ್ ಕುಡೀಯೂವಾ..ಇಬ್ಬರೂ ಹೋಟೆಲ್ ಹೊಕ್ಕು ಮಹಡಿಯೇರಿ ಕೂತೆವು. ಆಗ ಮತ್ತೆ ಆಕೆ ಕಂಡಳು.
ಅದೇ ಭರ್ಜರಿ ಸೀರೆಯುಟ್ಟ, ಮುದುಕಿಯ ಜತೆ ಚೌಕಾಶಿ ಮಾಡಿದ್ದ ಹೆಂಗಸು. ಇವತ್ತು ಅವಳೆದುರು ಬಿಗಿ ಉಡುಪು ತೊಟ್ಟ ತರುಣಿಯೂ ಕೂತಿದ್ಲು. ಮಗಳಿರಬಹುದೇ? ಅವರ ಎದುರಲ್ಲಿ ಮಸಾಲೆ ದೋಸೆ. ತರುಣಿ “ಅಯ್ಯೋ..ಏನೇನೂ ಚೆನಾಗಿಲ್ಲ..ನಂಗ್ಬೇಡಮ್ಮ” ಅಂತ ಅರ್ಧಕ್ಕಿಂತ ಜಾಸ್ತಿ ದೋಸೆಯಿದ್ದ ಪ್ಲೇಟನ್ನು ಬದಿಗೆ ಸರಿಸುತ್ತ ಹೇಳಿದಳು. “ಅಯ್ಯೋ..ಬೇಡಾಂದ್ರೆ ಬಿಡು..ಹೋಗ್ಲಿ..ಐಸ್ ಕ್ರೀಂ ಅದ್ರೂ ತಗೋ..” ಐಸ್ ಕ್ರೀಂ ಬಂತು. ಅದ್ರಲ್ಲಿ ಅರ್ಧ ಉಳೀತು. “ಯಾಕೇ?” “ಅಯ್ಯೋ..ಚೆನಾಗಿಲ್ಲ..ಬೇಡಮ್ಮ” “ಸರಿ ಬಿಡು..ಇಷ್ಟ ಇಲ್ದಿದ್ರೆ ತಿನ್ಬಾರ್ದು.” ನಾನು ಅವರ ಮಾತು ಕೇಳುತ್ತ ಕೂತೆ. ನಾವು ಜ್ಯೂಸ್ ಕುಡಿಯುತ್ತಿರುವಾಗ ಅವರಿಬ್ಬರೂ ಎದ್ದು ಹೋದರು. “ಏನೋ..ಗುರ್ತ್ನೋರಾ?” ನಾನು ಅವರನ್ನೇ ನೋಡ್ತಾ ಕೂತಿದ್ದು ಕಂಡು ವಿಮ್ಲ ಕೇಳಿದ್ಲು. “ಅಲ್ಲ..” ನಾನು ಸಂಕ್ಷಿಪ್ತವಾಗಿ ಕೊತ್ತಂಬರಿ ಕಟ್ಟಿನ ವ್ಯಾಪಾರದ ಸುದ್ದಿ ಹೇಳಿದೆ. ವಿಮಲ ಅವರತ್ತ ನೋಡಿ ಹಣ ಜಾಸ್ತಿ..ವಿವೇಕ ಕಡಿಮೆ.. ಅಂತದ್ಲು.
** ಐಸ್ ಕ್ರೀಂ ಕರಗತೊಡಗಿತ್ತು. ಅರ್ಧ ಉಳಿದಿದ್ದ ದೋಸೆ ನನಗೆ ಮುದುಕಿಯ ಸುಕ್ಕುಗಟ್ಟಿದ ಮುಖದಂತೆ ಕಂಡಿತು. ಪ್ಲೇಟಲ್ಲುಳಿದಿದ್ದ ಪಲ್ಯದಲ್ಲಿ ಕೊತ್ತಂಬರಿ ಸೊಪ್ಪಿನ ಚೂರೂ ಕಂಡಿತು. ವಿಮಲಳಿಗೆ ಹೇಗೆ ಕಂಡೀತೋ..ತಿಳೀಲಿಲ್ಲ.