Wednesday, August 31, 2016

ಒಂದು ಪದ್ಯ.


ಕುಮಾರವ್ಯಾಸ ಮಹಾಕವಿ ರೂಪಕ ಚಕ್ರವರ್ತಿ.ರೂಪಕ,ಹೋಲಿಕೆಗಳ ಮೂಲಕ ಕಾವ್ಯವನ್ನು ಕಟ್ಟುವ ಅವನ ಸಾಮರ್ಥ್ಯ ಬೆರಗು ಹುಟ್ಟಿಸುತ್ತದೆ.ಕವಿಯೊಬ್ಬನ ಕಾವ್ಯಶಕ್ತಿಯನ್ನು ರೂಪಕ ನಿರ್ಮಾಣದಲ್ಲಿ ಮಾತ್ರ ಅಳೆಯದೆ ರೂಪಕರಹಿತವಾದ,ಹೋಲಿಕೆರಹಿತವಾದ ಚಿತ್ರಣಗಳಲ್ಲೂ ಗಮನಿಸಬೇಕು.ಅಲ್ಲಿ ಯಶಸ್ವಿಯಾಗುವ ಕವಿಯದು ನಿಜವಾದ ಸಾಧನೆ.
ಅಂತಹ ಒಂದು ಪದ್ಯದ ವಿಶ್ಲೇಷಣೆ ಈ ಲೇಖನದ ಆಶಯ.
ದ್ರೋಣ ಪರ್ವ,ಸಂಧಿ ೧೮,ಪದ್ಯ ೩೫
ಮುಂದೆಹೋಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನುನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ
ದ್ರೋಣಪರ್ವದ ಕೊನೆಯ ದಿನದ ಯುದ್ಧದಲ್ಲಿ ಭೀಮಾರ್ಜುನಸಹಿತ ಪಾಂಡವಸೇನೆ ದ್ರೋಣರನ್ನು ಮುತ್ತಿದಾಗ, ದ್ರೋಣರು ಮಾಡಿದ ಯುದ್ಧದ ಪರಿಣಾಮ ಇಲ್ಲಿ ಚಿತ್ರಿತವಾಗಿದೆ.
ಮುಂದೆಹೋಗುವತಿಬಳರು ಹಾರಿತು ಹಿಂದಣವರನು:ಎಲ್ಲರಿಗಿಂತ ಮುಂದೆ ಇದ್ದ ಯೋಧರು ದ್ರೋಣರ ಬಾಣದ ಘಾತದಿಂದ ಪಾರಾಗಲು ಅವರ ಹಿಂದೆ ಬರುತ್ತಿದ್ದವರ ಹಿಂದೆ ಹಾರಿದರು. ಹಾರಿದರು ಎಂಬ ಪದಪ್ರಯೋಗವನ್ನು ಗಮನಿಸಬೇಕು.ಅವರು ನಡೆದು ಅಥವ ಓಡಿ ಹಿಂದಾಗಲಿಲ್ಲ.ಅದಕ್ಕೆ ಅವಕಾಶವಿರಲಿಲ್ಲ.ಆದ್ದರಿಂದ ಹಾರಿ ಹಿಂದೆ ನಿಂತರು.
ಹಿಂದೆ ನಿಲುವರು ಮುಂದಣವರಾಸೆಯಲಿ:ಇಲ್ಲಿಯವರೆಗೂ ಹಿಂದೆ ಇದ್ದವರು ಈಗ ನೋಡಿದರೆ ದ್ರೋಣರ ಎದುರೇ ಬಂದುಬಿಟ್ಟಿದ್ದಾರೆ.ಹಾಗೆ ಮುಂದಾದವರು ಭಯಪಟ್ಟು ತಾವು ಹಿಂದೆ ಹೋದರೆ ಉಳಿಯಬಹುದು ಎಂಬಾಸೆಯಿಂದ ತಮ್ಮ ಹಿಂದೆ ಇದ್ದವರ ಹಿಂದೆ ಹೋಗಿ ನಿಂತರು.
ನಿಂದುದು ಪಾರ್ಥಪರಿಯಂತ: ಹೀಗೆ ಹಿಂದೆ ಹಿಂದೆ ಹೋಗುತ್ತ ಪಾರ್ಥ ನಿಂತಲ್ಲಿಯವರೆಗೂ ಹೋಗಿ,ಅವನ ಹಿಂದೆ ನಿಂತರು.ಹೀಗೆ ಇಡೀ ಸೈನ್ಯ ಪಾರ್ಥನ ಹಿಂದೆ ಅವನ ರಕ್ಷಣೆಯನ್ನು ನಿರೀಕ್ಷಿಸಿ ನಿಂತಿತು.ಆದರೆ...
ಅಂದು ಪಾರ್ಥನು ಕೃಷ್ಣಬಲದಲಿ ನಿಂದನು: ಅವತ್ತು ಪಾರ್ಥನು ಕೃಷ್ಣನ ಬಲವಿರುವ ಕಾರಣದಿಂದ ಅಲ್ಲಿ ನಿಂತನು.ಪಾರ್ಥನೂ ಕೂಡ ದ್ರೋಣರರೆದುರು ನಿಂತಿದ್ದು ಕೃಷ್ಣನ ಬಲದಿಂದ.ಇಲ್ಲವಾದರೆ ಅವನಿಗೂ ನಿಲ್ಲಲು ಆಗುತ್ತಿರಲಿಲ್ಲ.
ಈ ಪದ್ಯದ ಸೂಕ್ಷ್ಮವಾದ ಧ್ವನಿಯನ್ನು ಗುರುತಿಸಬೇಕು.ಪಾಂಡವ ಸೇನೆಯ ಯೋಧರಿಗೆ ಅರ್ಜುನ ತಮಗೆ ಆಶ್ರಯ ನೀಡಬಲ್ಲವ ಎಂಬ ನಂಬಿಕೆ ಇದೆ. ಅದರೆ ಅರ್ಜುನನಿಗೆ ಆ ಶಕ್ತಿ ಇರುವುದು ಕೃಷ್ಣನ ಅಭಯ,ರಕ್ಷಣೆ ಇರುವುದರಿಂದ. ಶಸ್ತ್ರಧಾರಿಗಳಾದವರು ಶಸ್ತ್ರಧಾರಿಯಾದವನ ಎದುರು ನಿಲ್ಲಲಾರದೆ,ಶಸ್ತ್ರವನ್ನು ಹಿಡಿಯದವನ ರಕ್ಷಣೆಯಲ್ಲಿ ನಿಲ್ಲುತ್ತಿದ್ದಾರೆ ಎಂಬುದನ್ನು ಚಿತ್ರಿಸುವ ಮೂಲಕ,ಕುಮಾರವ್ಯಾಸ ಕೃಷ್ಣನ ಸಾಮರ್ಥ್ಯವನ್ನು,ಯುದ್ಧರಂಗದಲ್ಲಿ ನಡೆದ ಸಹಜವಾದ ಒಂದು ಕ್ರಿಯೆಯ ವರ್ಣನೆಯ ಮೂಲಕ ಧ್ವನಿಸುತ್ತಿದ್ದಾನೆ.ಜೊತೆಗೆ ದ್ರೋಣನ ಅವತ್ತಿನ ಶೌರ್ಯ, ಅರ್ಜುನನನ್ನೂ ಸೇರಿದಂತೆ ಪಾಂಡವಸೈನ್ಯದ ಭೀತಿ, ಮತ್ತು ಅರ್ಜುನ ಸಹಿತ ಪಾಂಡವಸೇನೆಗಿರುವ ಕೃಷ್ಣನ ರಕ್ಷಣೆ ಈ ಮೂರೂ ಅಂಶಗಳು ಇಲ್ಲಿ  ವ್ಯಕ್ತವಾಗಿವೆ.ಇಲ್ಲಿ ಕುಮಾರವ್ಯಾಸ ತನ್ನ ಪ್ರಬಲ ಅಸ್ತ್ರವಾದ ರೂಪಕವನ್ನು ಬಳಸಿಲ್ಲ ಎಂಬುದೂ ಗಮನಾರ್ಹ.ಒಂದೂ ರೂಪಕ ಬಳಸದೆ ಆತ ಹುಟ್ಟಿಸುವ ಧ್ವನಿಶಕ್ತಿ ಅಪೂರ್ವವಾದದ್ದು.  

3 comments:

sunaath said...

ಮನವನರಳಿಸುವ, ಸಾಹಿತ್ಯಸುಖವನ್ನು ಹಾಗು ಭಾಷಾಸುಖವನ್ನು ನೀಡುವ ನಿಮ್ಮ ವಿಶ್ಲೇಷಣೆಗಾಗಿ ತಲೆದೂಗುತ್ತೇನೆ. ಧನ್ಯವಾದಗಳು. ಕುಮಾರವ್ಯಾಸನಲ್ಲಿ ನನಗೆ ತಿಳಿಯಲಾರದ ವಿಶೇಷತೆಗಳನ್ನು ನೀವು ತಿಳಿಸುತ್ತಿದ್ದೀರಿ. ದಯವಿಟ್ಟು ಇನ್ನಷ್ಟು ಪದ್ಯಗಳ ವ್ಯಾಖ್ಯೆಯನ್ನು ನೀಡಿರಿ.

ಮೃತ್ಯುಂಜಯ ಹೊಸಮನೆ said...

ಪ್ರಿಯ ಸುನಾಥ್,ನಮಸ್ಕಾರಗಳು. ನಿಮ್ಮಉತ್ತೇಜಕ ನುಡಿಗಳಿಗೆ ಕೃತಜ್ಞ.ಆಸೆ ನನಗೂ ಇದೆ.ಅನುಕೂಲವೂ ಆಗಬಹುದು.ನೋಡೋಣ.

prabhamani nagaraja said...

ಕುಮಾರವ್ಯಾಸ ಒಂದೂ ರೂಪಕ ಬಳಸದೆ ಹುಟ್ಟಿಸುವ ಧ್ವನಿಶಕ್ತಿಯ ಬಗ್ಗೆ ಬಹಳ ಸಮರ್ಥವಾಗಿ ವ್ಯಾಖ್ಯಾನಿಸಿದ್ದೀರಿ ಸರ್. ನಮ್ಮ ಸೋದರತ್ತೆ ಆಗಾಗ ರಾಗವಾಗಿ ಓದುತ್ತಿದ್ದ ಕುಮಾರವ್ಯಾಸ ಭಾರತ ಕೇಳಿದ್ದೆ.ಈಗ ಓದಿ ಬಹಳ ಸ೦ತಸವಾಯಿತು. ಮು೦ದಿನ ಬರಹಕ್ಕಾಗಿ ಕಾಯುತ್ತೇನೆ.