ಭಾಗ ೧
ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ
ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ ಮಾತು
ಅಥವಾ ಊಹೆಗಳಿಗೂ ಮತ್ತು ವ್ಯಕ್ತಿಯ ಪ್ರತಿಕ್ರಿಯೆಗಳಿಗೂ ಇರುವ ಸಂಬಂಧದ ರೂಪ ಯಾವ ರೀತಿಯದು? ಘಟನೆಯ
ಮಹತ್ವ ಅಥವ ತೀವ್ರತೆ, ಅದು ಸಂಬಂಧಿಸಿದ ವ್ಯಕ್ತಿಯ ಮೇಲೆ ಮಾಡುವ ಪರಿಣಾಮದ ಆಧಾರದಲ್ಲಿಯೇ
ವ್ಯಕ್ತವಾಗುತ್ತದೆ. ಪರಿಣಾಮವನ್ನುಂಟುಮಾಡದ, ಪ್ರತಿಕ್ರಿಯೆಯನ್ನು ಹುಟ್ಟಿಸದ ಘಟನೆ
ಗಮನೀಯವಾಗುವುದಿಲ್ಲ. ಅಂದರೆ ವ್ಯಕ್ತಿಯ ವರ್ತನೆಯ ತೀವ್ರತೆಯ ಆಧಾರದಲ್ಲಿಯೇ ನಾವು ಆ ಘಟನೆಯನ್ನು
ವ್ಯಾಖ್ಯಾನಿಸಬಹುದೇ ಹೊರತು, ಆ ತೀವ್ರತೆಯನ್ನು ಬದಿಗಿಟ್ಟು ವ್ಯಾಖ್ಯಾನಿಸಲು ಆಗುವುದಿಲ್ಲ. ಈ
ವರ್ತನೆಯನ್ನು,ಹೊರ ಘಟನೆಯನ್ನು ವರ್ಣಿಸುವಷ್ಟು ಸುಲಭದಲ್ಲಿ ವರ್ಣಿಸಲು ಆಗುವುದಿಲ್ಲ. ವ್ಯಕ್ತಿ
ಯಾಕೆ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಾನೆ ಎಂಬುದಕ್ಕೆ ಕಾರಣಗಳನ್ನು ಹುಡುಕುವುದು
ಸುಲಭವಲ್ಲ. ಒಂದೇ ರೀತಿಯ ಪರಿಣಾಮ ಬೀರಬಹುದಾದ ಎರಡು ಘಟನೆಗಳಲ್ಲಿ ಪ್ರತಿಕ್ರಿಯೆ ಒಂದೇ
ರೀತಿಯದಾಗಿರದೆ ಭಿನ್ನವಾಗಿರಲು, ಘಟನೆಯನ್ನು ಅರ್ಥೈಸುವ ವ್ಯಕ್ತಿಯ ಗ್ರಹಿಕೆಯ ಸಂಕೀರ್ಣ
ಸ್ವರೂಪವೇ ಕಾರಣ. ಈ ರೀತಿಯ ಸಂಕೀರ್ಣ ವರ್ತನೆಯನ್ನು ವ್ಯಾಸ ಮತ್ತು ಕುಮಾರವ್ಯಾಸ ಚಿತ್ರಿಸಿದ
ಒಂದು ಸನ್ನಿವೇಶದ ಆಧಾರದಲ್ಲಿವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ.
ಕುರುಕ್ಷೇತ್ರ ಯುದ್ಧದ ಹದಿನೇಳನೆಯ ದಿವಸ. ಕರ್ಣನ ಸೇನಾಪತ್ಯ. ಆ ದಿನ ಧರ್ಮರಾಯ ಮತ್ತು
ಕರ್ಣನಿಗೆ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಅಂತಿಮವಾಗಿ ಧರ್ಮರಾಯ ಗಾಯಗೊಂಡು, ಪರಾಜಿತನಾಗುತ್ತಾನೆ.
ಕರ್ಣ ಅವನನ್ನು ಹೀಯಾಳಿಸಿ,ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಬಿಟ್ಟುಬಿಡುತ್ತಾನೆ.
ಕರ್ಣನ ಬಾಣಗಳ ಪೆಟ್ಟಿಂದ ಜರ್ಜರಿತನಾದ ಧರ್ಮರಾಯ ತನ್ನ ಬಿಡಾರಕ್ಕೆ ಮರಳುತ್ತಾನೆ.
ಧರ್ಮರಾಯನ ರಥ ಯುದ್ಧಮಧ್ಯದಲ್ಲಿ
ಬಿಡಾರದತ್ತ ತೆರಳುತ್ತಿರುವುದನ್ನು ಕಂಡ ಅರ್ಜುನನಿಗೆ ಧರ್ಮರಾಯನಿಗೆ ಏನೋ ಅಗಿದೆ ಎಂಬ
ಅನುಮಾನ ಬರುತ್ತದೆ. ಚಿಕಿತ್ಸೆಗಾಗಿ ಬಿಡಾರಕ್ಕೆ ಮರಳಿದ ಧರ್ಮರಾಯನನ್ನು ನೋಡಿ ಸಂತೈಸಲು
ಕೃಷ್ಣಾರ್ಜುನರು ರಣರಂಗದಿಂದ ಹೊರಡುತ್ತಾರೆ.
ಆಗಿನ ಅವನ ಸ್ಥಿತಿ ಮತ್ತು ಭಾವನೆಯ ಚಿತ್ರಣ ಹೀಗಿದೆ,
೧] …ಕಂಬನಿಗಳಾಲಿಯೊಳೀಡಿರಿದು
ಸೋರಿದವು ಸೊಂಪಡಗಿತು ಮುಖಾಂಬುಜದ..(ಸಂ-೧೪,ಪ-೧೦)
೨] “ಸೇನೆ ಮುರಿಯಲಿ
ಕೌರವನ ದುಮ್ಮಾನ ಹರಿಯಲಿ ನನಗೆ ಚಿತ್ತಗ್ಲಾನಿಯೆಳ್ಳೆನಿತಿಲ್ಲ ಕಟ್ಟಲಿ ಗುಡಿಯ ಗಜನಗರ ಆ
ನರೇಂದ್ರನ ಸಿರಿಮೊಗಕೆ ದುಮ್ಮಾನವೋ ಮೇಣ್ ಸುರಪುರಕೆ ಸಂಧಾನವೋ ನಾನರಿಯನಳ್ಳೆದೆಯಾದುದೆನಗೆಂದ ||
(ಸಂ-೧೪,ಪ-೧೧)
“ಧರಣಿಪತಿ ಸಪ್ರಾಣನೇ ಗಜಪುರದ ರಾಜ್ಯಕೆ
ನಿಲಿಸುವೆನು ಮೇಣ್ ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ ಅರೆಗಳಿಗೆ ಧರ್ಮಜನ
ಬಿಟ್ಟಾನಿರೆನು........” (ಪ-೧೨)
ಮೊದಲ ಚಿತ್ರಣ ಅವನ ದೈಹಿಕ ಸ್ಥಿತಿ.ಎರಡನೆಯದು ಅವನ ವೈಚಾರಿಕ ಪ್ರತಿಕ್ರಿಯೆಗಳು. ಅರ್ಜುನನಿಗೆ
ಧರ್ಮರಾಯನ ಬಗ್ಗೆ ಇರುವ ಪ್ರೀತಿ,ಗೌರವದ ತೀವ್ರತೆಯನ್ನು ಸೂಚಿಸುತ್ತವೆ. ಮತ್ತು ಅರ್ಜುನನ ಈ
ಪ್ರತಿಕ್ರಿಯೆಗಳ ಕಾರಣ ಅವನ ಊಹೆ. ಘಟನೆ ನಡೆದದ್ದು ಹೌದಾದರೂ, ಆ ಘಟನೆಯ ಅರಿವು ಅರ್ಜುನನಿಗೆ
ಇಲ್ಲ, ಆದರೆ ಊಹೆ ಮಾಡುತ್ತಿದ್ದಾನೆ. ಅವನ ಊಹೆಯೇ ಅವನ ಪ್ರತಿಕ್ರಿಯೆಗೆ ಕಾರಣವಾಗಿದೆ. ಈ ಊಹೆ
ಅವನಲ್ಲಿ ಹುಟ್ಟಿಸುವ ಪ್ರತಿಕ್ರಿಯೆ ನೇರವಾಗಿ ಅವನ ಮತ್ತು ಧರ್ಮರಾಯನ ಸಂಬಂಧದ ಮೇಲೆ
ನಿರ್ಧರಿತವಾಗಿದೆ. ಸಂಬಂಧ ಕೇವಲ ಅಣ್ಣ-ತಮ್ಮ ಎಂಬ ಸಂಬಂಧವಲ್ಲ, ಅವನಿಗೆ ಧರ್ಮರಾಯನ ಬಗ್ಗೆ ಇರುವ
ಬಂಧ.
***
ಬಿಡಾರದಲ್ಲಿರುವ ಧರ್ಮರಾಯನನ್ನು ಕಂಡಾಗ
ಅರ್ಜುನನ ಸ್ಥಿತಿ:
೧] ಕರಗಿತಂತಃಕರಣವಾಲಿಗಳೊರತೆಯನೆ
ಕಣ್ಣಾಲಿಯಲಿ ಕಾತರಿಸಿದವು ಜಲಬಿಂದುಗಳು .....(ಸಂ-೧೬,ಪ-೮)
ಅನುಮಾನಿಸಿದಾಗ ’ಈರಿಡಿದು ಸೋರಿದ’ ಕಂಬನಿಗಳ ಜೊತೆಗೆ ಈಗ ಅಂತಃಕರಣವೂ ಕರಗಿದೆ. ಆದರೆ ಈಗ
ಅವನ ಪ್ರತಿಕ್ರಿಯೆ ಇದಕ್ಕೂ ಮಿಕ್ಕಿ ಹೋಗುತ್ತಿಲ್ಲ. ಊಹಿಸಿದ ಸಂದರ್ಭದಲ್ಲಿ ಊಹೆಗೆ ಮಿತಿ
ಇರದಿದ್ದ ಕಾರಣ ಆತ ಆ ಮಾತುಗಳನ್ನು ಆಡಿದ್ದ. ಅವು, ಈಗಾಗಲೆ ಗಮನಿಸಿದಂತೆ ಸ್ಥಿತಿಯಿಂದ
ಪ್ರೇರಿತವಾಗಿರದೆ, ಊಹೆಯಿಂದ ಪ್ರೇರಿತವಾಗಿದ್ದವು. ಇಲ್ಲಿ ಸ್ಥಿತಿ ಅವನ ಎದುರಿದೆ. ಧರ್ಮರಾಯ
ಮರಣಿಸಿಲ್ಲ, ಘಾಯಗೊಂಡಿದ್ದಾನೆ, ಚಿಕಿತ್ಸೆ ನಡೆಯುತ್ತಿದೆ. ಆದ್ದರಿಂದ ಉಳಿದ ಯಾವ ರೀತಿಯ
ಪ್ರತಿಕ್ರಿಯೆಗಳಿಗೂ ಇಲ್ಲಿ ಪ್ರಚೋದನೆ ಇಲ್ಲ. ಅರ್ಜುನ “ಚೇಷ್ಟಾಪರಿಗತಿಯನಾರೈವುತಭಿಮುಖನಾಗಿ
ಕುಳ್ಳಿರ್ದ”(ಪ-೮).
***
“ಹರಿಕರಾಬ್ಜಸ್ಪರ್ಷ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃಕರಣನಾದ”(ಪ-೧೦)ಧರ್ಮರಾಯನಿಗೆ ಎಚ್ಚರವಾಗುತ್ತದೆ. ಎದುರು ಕುಳಿತ
ಅರ್ಜುನನನ್ನು ಕಂಡ ಅವನ ಪ್ರತಿಕ್ರಿಯೆ ಏನು?
೧] ಹದುಳವೇ ಪಾರ್ಥಂಗೆ?(ಪ-೧೧)
ಪಾರ್ಥ ಕ್ಷೇಮವೇ ಎಂಬ ಅವನ
ಪ್ರಶ್ನೆಯಲ್ಲಿ ಕಾಳಜಿಯಿಲ್ಲ, ವ್ಯಂಗ್ಯವಿದೆ.ಇದು ಮುಂದಿನ ಅವನ ಮಾತುಗಳಿಂದ ಸ್ಪಷ್ಟವಾಗುತ್ತದೆ.
೨] “ಕರ್ಣಂಗೆ ಮಾಡಿದುಪಾಯವಾವುದು”
(ಪ-೧೨)
೩]“ಬೇರೆ ಸಮಸಪ್ತಕರೊಳೆಕ್ಕಟಿ ತೋರಿದೆ
ತೋರಿಸಿದೆ ನೀ ತೊಂಡಿನೋಲೆಯಕಾರತನವನು”[ಪ-೧೩]
೪]“ಸೂತತನಯನ ಗೆಲಿದು ಬಂದೆಯೋ
ದಿವಿಜನಗರಿಗೆ ಕಳುಹಿ ಬಂದೆಯೋ ಕಂಡು ಕೆಣಕದೆ ಬಂದೆಯೋ” [ಪ-೧೪]
೫] ...ಉಳುಹಿಬಿಡುವನೇ ಸಮರ ಮುಖದಲಿ
ಮಲೆತನಾದರೆ ಕರ್ಣನು....(ಪ-೧೪)
ಧರ್ಮರಾಯನ ಈ ಮಾತುಗಳ ಕಾರಣ ಏನು? ತಾನು ಯುದ್ಧದಲ್ಲಿ ಸೋತದ್ದು ಮತ್ತು ಆ ಸೋಲನ್ನು
ಅವಮಾನ ಎಂದು ಭಾವಿಸಿದ್ದು. ಅರ್ಜುನನನ್ನು ತನ್ನ ಸೋಲಿಗೆ ಜವಾಬ್ದಾರನನ್ನಾಗಿ ಮಾಡುವ ಅಗತ್ಯವೇ
ಇಲ್ಲ. ಆದರೆ ಧರ್ಮರಾಯ ತನ್ನ ಸೋಲಿನ ಕಾರಣವನ್ನು ಅರ್ಜುನನ ನಿಷ್ಕ್ರಿಯತೆ ಎಂಬಂತೆ
ಭಾವಿಸಿದ್ದಾನೆ. ತನ್ನನ್ನು ಕಾಪಾಡಲು ಆತ ಬರಲಿಲ್ಲ ಎಂಬುದು ಧರ್ಮರಾಯನಲ್ಲಿ, ಅರ್ಜುನನ ಬಗ್ಗೆ
ಸಿಟ್ಟು ಉಕ್ಕುವಂತೆ ಮಾಡಿದೆ. (ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ ಬಂದು...ಸಂ-೧೬,ಪ-೨೬).
ನಿರೀಕ್ಷೆಯ ಈ ವೈಫಲ್ಯ ಅವನ ಎಲ್ಲ ವರ್ತನೆಗಳನ್ನು ಪ್ರಚೋದಿಸುತ್ತಿದೆ. ಧರ್ಮರಾಯ ಕರ್ಣನ ವೀರತ್ವವನ್ನು
ಅರ್ಜುನನ ವೀರತ್ವದೊಡನೆ ಹೋಲಿಸುತ್ತಾ ಅರ್ಜುನನನ್ನು ಹೀಯಾಳಿಸುತ್ತಿದ್ದಾನೆ. ಎಲ್ಲೂ ತನ್ನ
ದೌರ್ಬಲ್ಯವನ್ನು ಹೇಳಿಕೊಳ್ಳುತ್ತಿಲ್ಲ. ಯುದ್ಧದಲ್ಲಿ ಸೋಲು ಮತ್ತು ಗೆಲವು ಸಹಜ ಎಂಬ ಅರಿವು
ಧರ್ಮರಾಯನಿಗೆ ಇದ್ದಿದ್ದರೆ ಈ ಮಾತುಗಳು ಬರುತ್ತಲೇ ಇರಲಿಲ್ಲ.ತನ್ನ ಸೋಲನ್ನು ಅವನು ಗ್ರಹಿಸಿದ
ರೀತಿ ಅವನ ವರ್ತನೆಗಳನ್ನು ಪ್ರಚೋದಿಸುತ್ತಿದೆ.
ಅರ್ಜುನ ಧರ್ಮರಾಯನ ಈ ಹೀಯಾಳಿಕೆಗಳಿಗೆ ವ್ಯಗ್ರನಾಗುವುದಿಲ್ಲ. ಧರ್ಮರಾಯನ ಎಲ್ಲ ಮಾತುಗಳು
ಆತನಿಗೆ ಹಳಹಳಿಕೆಗಳಂತೆ ಅನಿಸುತ್ತವೆ. ಅವನಿಗೆ ಕರ್ಣನನ್ನು ಎದುರಿಸಿ ಗೆಲ್ಲುವ ಆತ್ಮ
ವಿಶ್ವಾಸವಿದೆ. ಹಾಗಾಗಿ ಅವನು ತಾನು ಕರ್ಣನನ್ನು ಕೊಲ್ಲುತ್ತೇನೆ, ಚಿಂತೆ ಬಿಡು ಎಂದು
ಹೇಳುತ್ತಾನೆ. ಈ ಮಾತನ್ನು ಆಡಲು ಪ್ರಚೋದನೆ ತನ್ನ ಬಗ್ಗೆ ಇರುವ ಆತ್ಮವಿಶ್ವಾಸ ಮತ್ತು
ಧರ್ಮರಾಯನನ್ನು ಸಂತೈಸಲು ಬಯಸಿದ ಅವನ ಬಯಕೆ.
ಪ್ರತಿಕ್ರಿಯೆಗಳು ಸರಪಳಿಯ ಕೊಂಡಿಯಂತಿರುತ್ತವೆ. ಘಟನೆಗಳು
ಘಟನೆಗಳಿಗೆ, ಮಾತು ಮಾತಿಗೆ ಕಾರಣವಾಗುತ್ತಾ ಹೋಗುತ್ತದೆ. ಆದರೆ ಕೆಲವೊಮ್ಮೆ ಈ ಕೊಂಡಿ ತಪ್ಪಿದಾಗ
ವರ್ತನೆಗಳು ಅನಿರೀಕ್ಷಿತವಾದ ದಿಕ್ಕಗೆ ಪಲ್ಲಟಿಸುತ್ತವೆ. ಅರ್ಜುನ ನೀಡಿದ ಭರವಸೆ ಧರ್ಮರಾಯನಿಗೆ
ಸಮಾಧಾನ ತರಬೇಕಿತ್ತು. ಆದರೆ ಆತ ಈ ಕೊಂಡಿಯನ್ನು ಗ್ರಹಿಸಲು, ಒಪ್ಪಲು ಸಿದ್ಧನಿಲ್ಲ. ಆತನ ವರ್ತನೆ
ಈ ಹೊಸ ಕಾರಣದಿಂದ (ಅರ್ಜುನನ ಭರವಸೆ) ಪ್ರಚೋದಿತವಾಗುವ ಬದಲು, ಹಳೆಯ ಕಾರಣಗಳಲ್ಲಿಯೇ
ಉಳಿದುಬಿಟ್ಟಿದೆ.ಹಾಗಾಗಿ ಆತ ಅರ್ಜುನನ ಮಾತುಗಳನ್ನು ನಂಬದೆ, ಆಡುವ ಮಾತುಗಳು ಇನ್ನೂ
ಹರಿತವಾಗುತ್ತವೆ.
“ನಾಲಗೆಯ ನೆಣಗೊಬ್ಬು ಮಿಕ್ಕು
ಛಡಾಳಿಸಿದರೇನಹುದು ಕರ್ಣನ ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ..”[ಸಂ-೧೬,ಪ-೧೭]
“ನಿನಗೆ ಮಣಿವವನಲ್ಲ ರಾಧಾತನಯ”[ಪ-೧೮]
“ಕರ್ಣಜಯವತಿ ಸುಲಭವೇ
ನಿನ್ನಂದದವರಿಗೆ..”[ಪ-೧೯]
“ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ..[ಪ-೨೦]
“ನಿನ್ನ ಗಂಟಲ ಗಾಳ”[ಪ-೨೧]
ಈ ಎಲ್ಲ ಮಾತುಗಳ ಮೂಲಕ ಅರ್ಜುನನ ಶೌರ್ಯ ಮತ್ತು ಪ್ರಾಮಾಣಿಕತೆಯನ್ನು ಧರ್ಮರಾಯ
ಶಂಕಿಸುತ್ತಿದ್ದಾನೆ.ಧರ್ಮರಾಯನ ಈ ಎಲ್ಲ ಹೀಯಾಳಿಕೆಯ ಮಾತುಗಳನ್ನು ಅರ್ಜುನ ಸಮಾಧಾನದಿಂದಲೇ
ಸ್ವೀಕರಿಸುತ್ತಾನೆ. ಧರ್ಮರಾಯನನ್ನು ರಕ್ಷಿಸುವ ಉದ್ದೇಶದಿಂದ ಬರುತ್ತಿರುವಾಗ ಸುಶರ್ಮ, ಅಶ್ವತ್ಥಾಮ
ಅವರು ತನ್ನನ್ನು ಅಡ್ಡಗಟ್ಟಿದಾಗ, ಅವರನ್ನು ನಿವಾರಿಸಿ
ಬಂದ ಕಾರಣ ತಾನು ಬರುವುದು ತಡವಾಯಿತು ಎಂದು ವಿವರಿಸುತ್ತಾನೆ.
ಕೌರವರ ಜತೆ ಯುದ್ಧದಲ್ಲಿ ನಿರತನಾದ ಕಾರಣದಿಂದ ತಡವಾಯಿತು,ಇಲ್ಲವಾದರೆ ಅರ್ಜುನ ತನ್ನ
ಕಾಪಾಡಲು ಬಹಳ ಬೇಗ ಬರುತ್ತಿದ್ದ..ಆಹಾ ಎಂಬ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ. ತನಗೆ
ಅಭ್ಯಾಸವಾಗಿರುವ ವನವಾಸವೇ ಸಾಕು, ಸಿರಿಯೇ ಬೇಕು ಅನಿಸಿದರೆ ಸಂಧಿ ಮಾಡಿಕೊಂಡು ಬದುಕಿದರಾಯಿತು, ಧೃತರಾಷ್ಟ್ರನ
ಸೇವೆ ಮಾಡುತ್ತಾ ಇರಬಹುದು ಎಂದೂ ಉದ್ಗರಿಸುತ್ತಾನೆ.
“ಅರಳಿಚದೆ ಮಧುಮಾಸ ಮಾಣಲಿ ವರುಷ ಋತುವೇ
ಸಾಕು ಜಾತಿಗೆ ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ| ಸಿರಿಗೆ ಕಕ್ಕುಲಿತೆಯೇ ವಿಪಕ್ಷವ ಬೆರಸಿ
ಬದುಕುವೆವೈಸಲೇ ವರಗುರುವಲಾ ಧೃತರಾಷ್ಟ್ರನೂಣಯವೇನು ಹೇಳೆಂದ..[ಪ-೩೨]
ಮುಂದುವರೆದು “ಬರಿದೆ ಬಯಸಿದಡಹುದೆ
ರಾಜ್ಯದ ಹೊರಿಗೆಯನು ನಿಶ್ಯಂಕೆಯಲಿ ಹೊಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ ಇರಿದು ಮೇಣ್
ಕುಕ್ಕುರಿಸುವರೆ ರಾಧೇಯನಂತಿರಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ” [ಪ-೩೩] ಎಂದು
ತೀರ್ಮಾನಿಸುತ್ತಾನೆ.
ಧರ್ಮರಾಯನ ಈ ಎಲ್ಲ ಮಾತುಗಳು
ಅಭಿವ್ಯಕ್ತಿಸುವ ಭಾವಗಳನ್ನು ಗಮನಿಸಬೇಕು.
೧] ಬೇಸರ ಮತ್ತು ವಿಷಾದ-ಅರ್ಜುನನಿಗೆ
ತನ್ನನ್ನು ರಕ್ಷಿಸುವಲ್ಲಿ ತೀವ್ರತೆ ಇರಲಿಲ್ಲ (......ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ
ಬಂದು ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ...ಸಂ-೧೬,ಪ-೨೬)
೨] ನಿರಾಶೆ.[ಪ-೩೨]
೩] ಶಂಕೆ.[ಪ-೧೭,೧೮,೧೯,೨೦,೨೧]
೪] ನಿರೀಕ್ಷೆ-ಜಯದ ನಿರೀಕ್ಷೆ ಮತ್ತು ಆ
ನಿರೀಕ್ಷೆ ಈಡೇರಿಸುವ ವೀರರು ತಮ್ಮ ಪಕ್ಷದಲ್ಲಿಇಲ್ಲ ಎಂಬ ಸಂದೇಹ. ಅಂದರೆ ಭೀಮಾರ್ಜುನರ ಬಗ್ಗೆ
ಅನುಮಾನ.[ಪ-೩೩]
ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ.ಯುದ್ಧದಲ್ಲಿ ತಾನು ಸೋತ ಅನಂತರ ಕರ್ಣನನ್ನು ಯಾರಿಗೂ
ಸೋಲಿಸಲು ಆಗುವುದಿಲ್ಲ ಮತ್ತು ಆ ಕಾರಣದಿಂದ ತಮಗೆ ರಾಜ್ಯ ಸಿಗುವುದಿಲ್ಲ ಎಂಬ ಧರ್ಮರಾಯನ ಭಾವನೆ
ಅವನ ಈ ಎಲ್ಲ ವರ್ತನೆಗಳನ್ನು ಪ್ರಚೋದಿಸಿದೆ.ಕರ್ಣ ಅವನನ್ನು ಹೀಯಾಳಿಸಿದ್ದು,(
೧] ಕೌರವರಾಯನನು ಮರೆವೊಕ್ಕು ಬದುಕಾ (ಕ.ಪ, ಸಂ-೧೧,ಪ-೫೭)
೨] ನಿಮಗೀ ಕದನ ಕರ್ಕಶವಿದ್ಯೆಯೇಕೆಂದ..(ಪ-೫೯)
ಅಥವಾ ತಾಯಿಗೆ ಮಾತು ಕೊಟ್ಟಿರುವ ಕಾರಣಕ್ಕಾಗಿ ನಿನ್ನ ಕೊಲ್ಲುವುದಿಲ್ಲ(ಕೊಲುವೆಡವ್ವೆಗೆ
ಕೊಟ್ಟಮಾತಿಂಗಳುಕುವೆನು ನೀ ಹೋಗು...(ಸಂ-೧೧,ಪ-೬೧) ಎಂಬ ಕರ್ಣನ ಮಾತು ಧರ್ಮರಾಯನಲ್ಲಿ ಯಾವುದೇ
ಭಾವನೆಯನ್ನು ಅಥವ ಕುತೂಹಲವನ್ನು ಹುಟ್ಟಿಸಿಲ್ಲ.
ಅದೇ ಸಂದರ್ಭದಲ್ಲಿ ಅರ್ಜುನನಿಗೆ ಇರುವ
ಭಾವನೆಗಳು.
೧] ದುಃಖ ಮತ್ತು ಪ್ರೀತಿ-ಧರ್ಮರಾಯನ
ಸ್ಥಿತಿಯನ್ನು ಕಂಡು ದುಃಖ. ಅವನನ್ನು ಬಿಟ್ಟು ತಾನಿರಲಾರೆ ಎಂಬ ಅವನ ಮಾತು.(ಸಂ-೧೪,ಪ-೧೧,೧೨)
೨] ಅಸಹಾಯಕತೆ- ಸುಶರ್ಮ ಮತ್ತು
ಅಶ್ವತ್ಥಾಮ ತನ್ನನ್ನು ತಡೆದ ಕಾರಣ ತಾನು ಕಾಪಾಡಲು ಆಗಲಿಲ್ಲ.
೩] ಭರವಸೆ.-ಕರ್ಣನನ್ನು ಕೊಲ್ಲುತ್ತೇನೆ
.
ಪ್ರಸ್ತುತ ಸನ್ನಿವೇಶಕ್ಕೆ ತಕ್ಕುದಾಗಿರುವ ಪ್ರತಿಕ್ರಿಯೆ ಅರ್ಜುನನದು. ಅಣ್ಣನ ಮೇಲಿರುವ
ಪ್ರೀತಿ, ಗೌರವ ಅವನ ಈಗಿನ ಸ್ಥಿತಿಯನ್ನು ಕಂಡು ದುಃಖಿಸುವಂತೆ ಮಾಡಿದೆ. ನನ್ನನ್ನು ನೀನು
ಕಾಪಾಡಲಿಲ್ಲ ಎಂಬ ಅರೋಪಕ್ಕೆ ಅವನು ಕೊಡುವ ವಿವರಣೆ ಸತ್ಯ ಮತ್ತು ಸಹಜವಾದದ್ದು. ಕರ್ಣನ ವೀರತ್ವದ
ಬಗ್ಗೆ ಅವನಾಡಿದ ಯಾವ ಮಾತನ್ನೂ ನಿರಾಕರಿಸದೆ ತಾನು ಅವನನ್ನು ಕೊಲ್ಲುತ್ತೇನೆ ಎಂಬಷ್ಟೆ ಮಾತು ಕೂಡ
ಸಹಜವಾದ ಪ್ರತಿಕ್ರಿಯೆ.
ಆದರೆ ಈ ಅಭಿಪ್ರಾಯಗಳನ್ನು ಧರ್ಮರಾಯನ ವರ್ತನೆಗಳಿಗೆ ಅನ್ವಯಿಸುವುದು ಕಷ್ಟ. ಯುದ್ಧದಲ್ಲಿ
ಅಪಜಯವಾಗಬಾರದು, ಗಾಯವಾಗಬಾರದು ಎಂಬ ಅವನ ನಿರೀಕ್ಷೆ ತಪ್ಪು. ಯುದ್ಧದಲ್ಲಿ ತನ್ನನ್ನು ಅರ್ಜುನ
ಬಂದು ಕಾಪಾಡಬೇಕು ಎಂಬ ಅವನ ನಿರೀಕ್ಷೆಯೂ ತಪ್ಪು. ಅವೆಲ್ಲಕ್ಕಿಂತ ಮುಖ್ಯವಾಗಿ ಅವನ ಈ
ದುಃಸ್ಥಿತಿಗೆ ಅರ್ಜುನ ಕಾರಣ ಎಂಬ ಆಪಾದನೆ ಔಚಿತ್ಯ ಮೀರಿದ ಮಾತು. ಆದರೂ ಆತ ಆಡಿದ್ದನ್ನು
ಗಮನಿಸಿದರೆ ವರ್ತಮಾನದ ತಲ್ಲಣಗಳು ಮನುಷ್ಯನ ಒಳಗೆ ಸುಪ್ತವಾಗಿರುವ ಗುಣವನ್ನು ಅಥವ ಅವಗುಣವನ್ನು
ಹೇಗೆ ಪ್ರಕಟಪಡಿಸುತ್ತವೆ ಎಂಬುದರ ಸೂಚಕವಾಗುತ್ತದೆ. ಇದೇ ಧರ್ಮರಾಯ ತುಂಬಿದ ಸಭೆಯಲ್ಲಿ
ದ್ರೌಪದಿಗೆ ಅವಮಾನವಾಗುತ್ತಿದ್ದಾಗ ಮೌನಿಯಾಗಿದ್ದ, ಮಾತ್ರವಲ್ಲ ಭೀಮನನ್ನು ಸುಮ್ಮನಾಗಿರಿಸಿದ್ದ. ಆ
ಸ್ಥಿತಿ ಅವನ ವೈಯಕ್ತಿಕ ಅನುಭವವಾಗಿರದ ಕಾರಣ ಅವನು ಅದನ್ನು ಧರ್ಮದ ಹಿನ್ನೆಲೆಯಲ್ಲಿ ಶೋಧಿಸಲು
ಸಾಧ್ಯವಾಯಿತು. ಆ ಸಂದರ್ಭದಲ್ಲಿ ಧರ್ಮದ ಹಿನ್ನೆಲೆ ಅವನ ವರ್ತನೆಗಳನ್ನು ನಿಯಂತ್ರಿಸಿತು.ಇಲ್ಲಿ
ಅನುಭವ ವೈಯಕ್ತಿಕವಾದದ್ದು. ಅನುಭವ ವೈಯಕ್ತಿಕವಾಗಿರುವಾಗ ಪ್ರತಿಕ್ರಿಯೆಯೂ ನಿಯಮಗಳನ್ನು ಮೀರಿ
ವೈಯಕ್ತಿಕವಾಗಿಬಿಟ್ಟಿದೆ. ತಾನು ಅನುಭವಿಸುವಾಗ ನಿಯಮಪಾಲನೆಯನ್ನು ಉಲ್ಲಂಘಿಸುವುದು ಅವನ ಅರಿವನ್ನೂ ಮೀರಿ
ನಡೆದುಬಿಡಬಹುದು. ಅಥವಾ ಅಂತಹ ಸಂದರ್ಭಗಳಲ್ಲಿ ನಿಯಮಗಳನ್ನು ಅನ್ವಯಿಸಲು ಅಗತ್ಯವಿರುವ
ವಿವೇಚನಾಶಕ್ತಿ ಕುಂಠಿತವಾಗಬಹುದು. ಅಥವಾ ತನ್ನ ವಿಫಲತೆಯ ಕಾರಣಗಳನ್ನು ತನ್ನ ಹೊರತಾದ ಮತ್ತೊಂದರಲ್ಲಿ
ಹುಡುಕುವ ಸ್ವಭಾವ ಇರಬಹುದು.
ತಾನು ಮತ್ತೆ ವನವಾಸಕ್ಕೆ ಹೋಗಲು ಸಿದ್ಧ ಅಥವ ಧೃತರಾಷ್ಟ್ರನ ಸೇವೆ ಮಾಡುತ್ತಾ
ಇರುತ್ತೇನೆ. ನಿನಗೆ ಯುದ್ಧದಲ್ಲಿ ಗೆಲ್ಲುವ ಆಸೆ ಇದ್ದರೆ ನಿನ್ನ ಗಾಂಡಿವವನ್ನು ಕೃಷ್ಣನಿಗೆ
ಕೊಟ್ಟು ನೀನು ಅವನ ಸಾರಥಿಯಾಗು ಎಂಬ ಅತಿ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ.(ಬವರ
ಗೆಲುವರೆ ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀ.......ಸಂ-೧೬,ಪ-೩೪)
***
ಈ ಮಾತನ್ನು ಕೇಳಿದ ಅರ್ಜುನ ಕತ್ತಿಯನ್ನು ಹಿಡಿದು ಧರ್ಮರಾಯನನ್ನು ಕೊಲ್ಲಲು
ಹೊರಡುತ್ತಾನೆ.ತನ್ನ ಗಾಂಡಿವದ ಬಗ್ಗೆ ಅವಹೇಳನೆಯ ಮಾತನ್ನು ಆಡಿದವರನ್ನು ಕೊಲ್ಲುತ್ತೇನೆ ಎಂಬುದು
ಅವನು ತಾನಾಗಿಯೇ ಮಾಡಿಕೊಂಡ ಶಪಥ.
“........ಮೇಲುಮೇಲುಬ್ಬೇಳ್ವ ರೋಷಜ್ವಾಲೆ
ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು ......(ಸಂ-೧೭,ಪ-೧)
ಮುಖದಲ್ಲಿ ಸಿಟ್ಟು ಉಕ್ಕಿತು. ಕಣ್ಣು
ಸಿಟ್ಟಿಂದ ಕಾದವು. ಧರ್ಮರಾಯನ ರಥ ಬಿಡಾರಕ್ಕೆ ಮರಳುವುದು ಕಂಡಾಗ, ಅವನಿಗೇನಾಯಿತೋ ಎಂಬ ಶಂಕೆ
ಹುಟ್ಟಿದ್ದಾಗ, ಸೊಂಪಡಗಿದ್ದ ಮುಖ ಮತ್ತು ನೀರು ತುಂಬಿದ್ದ ಕಣ್ಣುಗಳೇ ಈಗ ಸಂಪೂರ್ಣ ಭಿನ್ನ
ಭಾವವನ್ನು ಪ್ರಕಟಿಸುತ್ತಿವೆ. ಅಣ್ಣನಿಲ್ಲದೆ ತಾನು ಬದುಕಿರಲಾರೆ ಎಂದ ಅರ್ಜುನ ಈಗ ಅಣ್ಣನನ್ನು
ಉಳಿಸುವುದಿಲ್ಲ ಎಂದು ಹೊರಟಿದ್ದಾನೆ. ತನ್ನ ಬಗ್ಗೆ ಆಡಿದ ಎಲ್ಲ ಅವಹೇಳನವನ್ನೂ ಸಂಯಮದಿಂದ
ಸ್ವೀಕರಿಸಿದ್ದ ಅರ್ಜುನ ಗಾಂಡಿವದ ಬಗ್ಗೆ ಆಡಿದ ಮಾತಿಗೆ ವ್ಯಗ್ರನಾಗಿದ್ದಾನೆ.
ಅರ್ಜುನನ ಈ ವರ್ತನೆ ಧರ್ಮರಾಯ ಅವನನ್ನು ಹೀಯಾಳಿಸಿದ್ದಕ್ಕೆ ಅಥವ ಕರ್ಣನನ್ನು
ಹೊಗಳಿದ್ದಕ್ಕೆ ಅಲ್ಲ. ಧರ್ಮರಾಯನ ಆ ಮಾತುಗಳಿಗೆ ಅರ್ಜುನ ಸ್ವಾಭಾವಿಕವಾದ ನೆಲೆಯಲ್ಲಿ
ಪ್ರತಿಕ್ರಿಯೆ ತೋರಿಸಿದ್ದಾನೆ. ಆದರೆ ಇಲ್ಲಿ ಆತ ವ್ಯಗ್ರನಾಗಲು ಕಾರಣ ಗಾಂಡೀವ ಹಿಡಿಯಲು ತಾನು
ಯೋಗ್ಯನಲ್ಲ ಎಂಬ ಧರ್ಮರಾಯನ ಮಾತು. ಇಲ್ಲಿ ಅವನ ವರ್ತನೆ ಬದಲಾಗಲು ಅವನ ತನಗೆ ತಾನೇ ಮಾಡಿಕೊಂಡಿರುವ
ಶಪಥ. ಅಂದರೆ ಧರ್ಮರಾಯನ ಮಾತುಗಳಿಗಿಂತ, ತನ್ನ ಶಪಥಕ್ಕೆ ಆದ ಅವಹೇಳನ ಅವನ ವರ್ತನೆಯನ್ನು
ಪ್ರಚೋದಿಸಿದೆ.
ಹೀಗೆ ಬದಲಾದ ಅರ್ಜುನ ಒರೆಯಿಂದ ತನ್ನ ಕತ್ತಿಯನ್ನು ತೆಗೆದು “ರೌದ್ರಸ್ಥಾಯಿಭಾವದ
ಭಾರದಲಿ” ಧರ್ಮರಾಯನತ್ತ ನಡೆದ. ಗಾಬರಿಗೊಂಡ ದ್ರೌಪದಿ ಅಡ್ಡಬರುತ್ತಾಳೆ. ಉಳಿದವರು
ಶೋಕಿತರಾಗುತ್ತಾರೆ. ಕೃಷ್ಣ ಅರ್ಜುನನನ್ನು ಹಿಡಿದುಕೊಳ್ಳುತ್ತಾನೆ. ಅವನನ್ನು ತಡೆಯಬೇಡಿ, ಆತನ
ರಾಜಕಾರ್ಯವನ್ನು ಕೆಡಿಸಬೇಡಿ, ತನ್ನ ಕಣ್ಣೀರಿನಿಂದಲೇ ತನ್ನನ್ನು ಅವನಿಗೆ ಧಾರೆಯೆರೆದೆ ಎಂದು
ಧರ್ಮರಾಯ ಉದ್ಗರಿಸುತ್ತಾನೆ. ಅರ್ಜುನ ತನ್ನನ್ನು ಕೊಲ್ಲಲು ಹೊರಟಿದ್ದಾನೆ ಎಂಬುದು ಧರ್ಮರಾಯನಿಗೆ
ಹೊಳೆದಿದೆ. ಆದರೆ ಈಗಲೂ ತನ್ನ ತಪ್ಪೇನು ಎಂಬುದು ಹೊಳೆದಿಲ್ಲ. ಅಥವಾ ಅರ್ಜುನನ ಈ ಪ್ರತಿಕ್ರಿಯೆಗೆ
ಕಾರಣವನ್ನು ತಿಳಿಯುವ ವ್ಯವಧಾನವಿಲ್ಲ. ನಿನ್ನ ಈ ವರ್ತನೆಗೆ ಕಾರಣವೇನು ಎಂದು ಕೃಷ್ಣ
ಅರ್ಜುನನನ್ನು ವಿಚಾರಿಸಿದಾಗ, ನಿನಗೆ ಗಾಂಡೀವವೇತಕೆ ಎಂದು ಅವಹೇಳನ ಮಾಡಿದವರನ್ನು ನಾನು
ಉಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ, ಈಗ ಈ ಅರಸ ಆ ನ್ಯಾಯವಲ್ಲದ ಮಾತನ್ನು ಆಡಿದ್ದು
ನೀವೆಲ್ಲ ಕೇಳಿದಿರಿ, ಅದು ಸರಿಯೇ ಕೃಷ್ಣ ನೀನು ಹೇಳು
ಎಂದು ಅರ್ಜುನ ಉತ್ತರಿಸುತ್ತಾನೆ. ಅವನ ಆ ಮಾತನ್ನು ಕೇಳಿದ ಧರ್ಮರಾಯ ತಮ್ಮನ ಭಾಷೆ
ಉಳಿಯಲಿ, ತನಗೆ ರಾಜ್ಯ, ಶರೀರ ಎರಡರ ಮೇಲೂ ಆಸೆಯಿಲ್ಲ ಎಂದು ಉತ್ತರಿಸುತ್ತಾನೆ.(ಸಂ-೧೭,ಪ-೧೦
....ಲೇಸುಲೇಸಿದು ತಮ್ಮನಾಡಿದ ಭಾಷೆ ಬಾಹಿರವಾಗಬೇಡ ವಿನಾಶಕಾನಂಜೆನು.........ಆಶೆಯೆನಗೀ
ರಾಜ್ಯದಲಿ ಮೇಣೀ ಶರೀರದಲಿಲ್ಲ......) ಅರ್ಜುನ ಪ್ರಶ್ನೆ ಕೇಳಿದ್ದು ಕೃಷ್ಣನಿಗೆ, ಉತ್ತರ
ಕೊಟ್ಟಿದ್ದು ಧರ್ಮರಾಯ. ಆ ಉತ್ತರವೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಉತ್ತರವಲ್ಲ, ಇನ್ನಷ್ಟು
ಹದಗೆಡಿಸುವ ಉತ್ತರ. ಈ ಸಮಸ್ಯೆಗೆ ವ್ಯಾವಹಾರಿಕವಾದ ಉತ್ತರವಿಲ್ಲ ಎಂಬುದನ್ನು ಗ್ರಹಿಸಿದ ಕೃಷ್ಣ,
ಧರ್ಮರಾಯನನ್ನು ಸುಮ್ಮನಿರೆಂದು ಗದರಿಸಿ (ಪ-೧೧....ಮರುಳೆ ಮೋನದೊಳಿರು) ಅರ್ಜುನನಿಗೆ,
ಅಣ್ಣನನ್ನು ಕೊಲ್ಲಬಯಸುವ ಅವನ ಕ್ರಿಯೆ ಧರ್ಮವಲ್ಲ ಎಂದು ವಿವರಿಸುತ್ತಾನೆ. ವೈಯಕ್ತಿಕ ನೆಲೆಯಲ್ಲಿ
ಹುಟ್ಟಿದ ಸಂಘರ್ಷವನ್ನು ಧರ್ಮದ ನೆಲೆಯಲ್ಲಿ ವಿವರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ
ತಂತ್ರಗಾರಿಕೆ ಕೃಷ್ಣನದು.
ಅರ್ಜುನನಲ್ಲಿ ಇದು ಒಂದು ಬಿಕ್ಕಟ್ಟನ್ನು ಹುಟ್ಟಿಸುತ್ತದೆ. ಪ್ರತಿಜ್ಞೆ
ಈಡೇರಿಸದಿರುವುದು ವೈಯಕ್ತಿಕ ನೆಲೆಯಲ್ಲಿ ಅವಮಾನದ ಸಂಗತಿ, ಸ್ವಧರ್ಮವಲ್ಲ. ಕೃಷ್ಣ ಹೇಳುತ್ತಾನೆ
ಪ್ರತಿಜ್ಞೆ ಈಡೇರಿಸುವುದು ಅಧರ್ಮದ ಕಾರ್ಯ. ಈ ಬಿಕ್ಕಟ್ಟನ್ನು, ಬಿಕ್ಕಟ್ಟು ಹುಟ್ಟಲು ಕಾರಣವಾದ
ಕೃಷ್ಣನೇ ಪರಿಹರಿಸಬೇಕು. ಅರ್ಜುನ ಹಾಗಿದ್ದರೆ ತನ್ನ ಪ್ರತಿಜ್ಞೆ ನೆರವೇರಬೇಕು, ಅಣ್ಣ ಸಾಯಲೂ
ಬಾರದ ಆ ಉಪಾಯವನ್ನು ನೀನೇ ಹೇಳು ಎಂದು ವಿನಂತಿಸುತ್ತಾನೆ.
“ಆವ ಪರಿಯಲಿ ತನ್ನ ಸತ್ಯದ ಠಾವು
ನಿಲುವುದು ರಾಯನುಪಹತಿ ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ” (ಸಂ-೧೭,ಪ-೨೫)
ಈ ಪ್ರಶ್ನೆ ಕೃಷ್ಣನಲ್ಲೂ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಗಾಂಡಿವವನ್ನು ತ್ಯಜಿಸು
ಎಂದವರನ್ನು ಕೊಲ್ಲುತ್ತೇನೆ ಎಂಬ ಅರ್ಜುನನ ಪ್ರತಿಜ್ಞೆ ಭಂಗವಾಗುವ ಹಾಗಿಲ್ಲ. ಹಾಗಂತ ಅದು ಪ್ರಸ್ತುತ
ಸನ್ನಿವೇಶದಲ್ಲಿ ನೆರವೇರಲೂಬಾರದು. ಪ್ರತಿಜ್ಞೆ ಭಂಗವಾಗುವುದು ಸರಿ ಎಂದು ಕೃಷ್ಣ ಹೇಳುವಂತಿಲ್ಲ, ಪ್ರತಿಜ್ಞೆ
ನೆರವೇರಲಿ ಎಂದೂ ಹೇಳುವಂತಿಲ್ಲ.ಇದು ಕೃಷ್ಣನ ಸಮಸ್ಯೆ. ಗಮನಿಸಬೇಕಾದ ಅಂಶವೆಂದರೆ ಧರ್ಮರಾಯನಿಗೆ ಈ
ಬಿಕ್ಕಟ್ಟು ತಟ್ಟಿಯೇ ಇಲ್ಲ. ಅರ್ಜುನನ ಮನಸ್ಸಿನ ತಾಕಲಾಟಕ್ಕೆ ಆತ ಸಂಪೂರ್ಣ
ಸಂವೇದನಾಶೀಲರಹಿತನಾಗಿದ್ದಾನೆ. ಅವನ ವರ್ತನೆಗಳನ್ನು ಈಗಲೂ ಸಧ್ಯದ ಸನ್ನಿವೇಶದ ಬದಲು ಹಿಂದೆ ನಡೆದ
ಘಟನೆಯೇ ನಿಯಂತ್ರಿಸುತ್ತಿದೆ. ತನ್ನನ್ನು ಕೊಂದು
ಅರ್ಜುನ ತನ್ನ ಭಾಷೆಯನ್ನುಳಿಸಿಕೊಳ್ಳಲಿ ಎಂದು ಬಿಡುತ್ತಾನೆ.
ವ್ಯಾವಹಾರಿಕವಾಗಿ ಬಗೆಹರಿಸಲಾರದ ಸಮಸ್ಯೆ ಇದು
ಎಂದರಿತ ಕೃಷ್ಣ, ಅದನ್ನು ಪರಿಹರಿಸಲು, ಮಾನವಂತನಾದ ಧರ್ಮರಾಯನನ್ನು ನೀನು ಅವಹೇಳನ ಮಾಡು, ಅದು
ಸಾವಿಗೆ ಸಮಾನ ಎಂದು ಅರ್ಜುನನಿಗೆ ಸೂಚಿಸುತ್ತಾನೆ.
“.....ಲೋಗರ ಹಳಿವುದೇ ವಧೆ....”(ಪ-೨೬)
ಅವನ ಸಲಹೆಯನುಸಾರವಾಗಿ ಅರ್ಜುನ
ಧರ್ಮರಾಯನನ್ನು ಹೀಯಾಳಿಸುತ್ತಾನೆ.
೧] ನೆಲನ ಕೊಂಡರು ನಿನ್ನ ಮೋರೆಯ ಬಲುಹು
ಕಂಡೇ ಕೌರವರು (ಸಂ-೧೭,ಪ-೨೮)
೨] ನಿನ್ನ ಜೂಜಿನ ವಿಲಗದಲಿ ಸಂಪನ್ನ
ರಾಜ್ಯವ ಬಿಸುಟು ನಿನ್ನಯ ಬೆನ್ನಲಿ ಅಡವಿಯಲಾಡಿದೆವು (ಪ-೨೯)
೩] ರಣದ ಘಾರಾಘಾರಿಯಾರೋಗಣೆಯ
ಮನೆಯಲ್ಲ..(ಪ-೩೦)
೪]ಒಂದು ತೂರಂಬಿನಲಿ ಗಡ ನೀನಿಂದು ಜೀವವ
ಜಾರಿಸುವೆ ಸುಡಲಿಂದುಕುಲಕಂಟಕರಿನಿರಿದರೆ ದೋಷವೇನೆಂದ(ಪ-೩೨)
ಅರ್ಜುನನ ಈ ಮಾತುಗಳು ತುಂಬಾ ಕುತೂಹಲಕಾರಿಯಾಗಿವೆ. ಆತ ಧರ್ಮರಾಯ ಮಾಡದೇ ಇರುವುದನ್ನು ಹೇಳಿ
ಹೀಯಾಳಿಸುತ್ತಿಲ್ಲ, ಆತನಿಂದ ಘಟಿಸಿದ್ದನ್ನೇ ಹೇಳುತ್ತಿದ್ದಾನೆ. ಆ ಘಟನೆಗಳು ನಡೆದಾಗ, ಅವು
ತಪ್ಪು ಎಂದು ಹೇಳಿರದಿದ್ದ ಅರ್ಜುನ ಈಗ ಅವು ತಪ್ಪು ಎಂದು ಘೋಷಿಸುತ್ತಿದ್ದಾನೆ. ಆತ ಇಲ್ಲಿ
ಹೇಳುತ್ತಿರುವುದು ಧರ್ಮರಾಯನ ದೌರ್ಬಲ್ಯಗಳನ್ನು ಮತ್ತು ಆ ದೌರ್ಬಲ್ಯಗಳು ಹುಟ್ಟಿಸಿದ ಪರಿಣಾಮಗಳನ್ನು.
ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿ ಧರ್ಮರಾಯನ ಬಗ್ಗೆ ಈ ಅಭಿಪ್ರಾಯಗಳು ಹುದುಗಿದ್ದವು. ಅಣ್ಣ
ದೇವರ ಸಮಾನ ಎಂಬ ಸಾಮಾಜಿಕ ಮತ್ತು ಧಾರ್ಮಿಕವಾಗಿರಬಹುದಾದ ನಂಬಿಕೆಯಿಂದ ಆತ ಸುಮ್ಮನಿದ್ದನೇ ಹೊರತು
ಧರ್ಮರಾಯನ ವರ್ತನೆಗಳನ್ನು ಪೂರ್ಣ ಮನಸ್ಸಿಂದ ಒಪ್ಪಿ ಬೆಂಬಲಿಸಿ ಅಲ್ಲ ಎಂಬ ಅನುಮಾನ ಬರುತ್ತದೆ.
ಅಣ್ಣನ ಕೈಗಳನ್ನು ಸುಟ್ಟುಬಿಡುತ್ತೇನೆ ಎಂದು ದ್ಯೂತದ ಸಮಯದಲ್ಲಿ ಎದ್ದು ನಿಂತಿದ್ದ ಭೀಮನನ್ನು
ನಿಯಂತ್ರಿಸಿದ್ದ ಅರ್ಜುನ, ಇವತ್ತು ಕುಲಕಂಟಕರನಿರಿದರೆ ದೋಷವೇನು ಎಂದು ಪ್ರಶ್ನಿಸುತ್ತಾನೆ. ಅಲ್ಲಿ
ಕೈಯನ್ನು ಸುಡುವುದು ಅಧರ್ಮವಾಗಿತ್ತು. ಇಲ್ಲಿ ಧರ್ಮರಾಯ ಕುಲಕಂಟಕ ಮತ್ತು ಅವನನ್ನು ಕೊಲ್ಲುವುದು
ತಪ್ಪಲ್ಲ. ಈ ಕೊನೆಯ ಮಾತು ಧರ್ಮರಾಯನ ದೋಷವನ್ನು ಹೇಳುವ ಮಾತಲ್ಲ. ಕೃಷ್ಣ ಹೇಳಿದ್ದು ಅವನನ್ನು
ಹೀಯಾಳಿಸು ಎಂದು. ಆದರೆ ಈ ಕೊನೆಯ ಮಾತಲ್ಲಿ ಅರ್ಜುನ ತಾನು ಮಾಡಲು ಹೊರಟಿದ್ದ ತನ್ನ ಕೃತ್ಯದ
ಸಮರ್ಥನೆ ಮಾಡಿಕೊಂಡ ಮತ್ತು ಧರ್ಮರಾಯನನ್ನು ಕೊಂದರೆ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು
ವ್ಯಕ್ತಪಡಿಸಿದ. ಧರ್ಮರಾಯನನ್ನು ’ಇಂದುಕುಲಕಂಟಕ’ ಎಂದು ಎಂದದ್ದು ಮಾತ್ರವಲ್ಲದೆ ಅವನನ್ನು
ಕೊಲ್ಲುವುದು ದೋಷವಲ್ಲ ಎಂದೇ ಅನ್ನುತ್ತಾನೆ. ಇದು ಹೀಯಾಳಿಕೆಯ ಗಡಿಯನ್ನು ದಾಟಿ ತೀರ್ಮಾನದ
ರೂಪವನ್ನು ಪಡೆದಿದೆ.
ಈ ಮಾತು ಅತ್ಯಂತ ವಿಚಿತ್ರವಾಗಿ ಅರ್ಜುನ ಮತ್ತು ಧರ್ಮರಾಯ ಇಬ್ಬರ ಮೇಲೂ ಪರಿಣಾಮ
ಬೀರುತ್ತದೆ. ಕೃಷ್ಣ ತಮ್ಮ ದೈವ, ರಕ್ಷಕ, ಹಿತೈಷಿ ಮತ್ತು ಕೃಷ್ಣನ ಸಲಹೆಯಂತೆ ಆಡಿದ ಮಾತುಗಳಿವು
ಎಂಬ ಅರಿವು ಇಬ್ಬರಿಗೂ ಇರುವುದರಿಂದ ಪ್ರಸಂಗ ಅಲ್ಲಿಗೇ
ಮುಗಿಯಬೇಕಿತ್ತು. ಹಾಗಾಗುವುದಿಲ್ಲ.
ಮನುಷ್ಯನ ಸಂವೇದನೆ ಯಾವ ರೀತಿಯಲ್ಲಿ ಯಾವಾಗ ವರ್ತಿಸುತ್ತದೆ ಎಂಬುದು ಅನೂಹ್ಯ. ಹೀಗೆ
ಮಾಡು ಎಂಬ ಸಲಹೆ ಕೃಷ್ಣನದು. ಕ್ರಿಯೆ, (ಹೀಯಾಳಿಸುವುದು) ಕೃಷ್ಣನ ಸಲಹೆಯನ್ನು ಪಾಲಿಸಿದೆ. ಆದರೆ
ಕ್ರಿಯೆಯ ಪರಿಣಾಮ ವೈಯಕ್ತಿಕವಾದದ್ದು, ಅದರ ಮೇಲೆ ಸಲಹೆ ನೀಡಿದವನ ನಿಯಂತ್ರಣವಿಲ್ಲ. ಪ್ರತಿಕ್ರಿಯೆ
ಹೀಗೇ ಇರಲಿ ಎಂದು ಕೃಷ್ಣ ನಿಯಮಿಸುವಂತಿಲ್ಲ. ಅದು ಧರ್ಮರಾಯ ಮತ್ತು ಅರ್ಜುನ ಅವರಿಬ್ಬರ ಸಂವೇದನೆಯ
ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿದೆ.
ಅಂತೆಯೇ ಆಗಿದೆ.
ಅರ್ಜುನ: ಒರೆಯಿಂದ ಕತ್ತಿಯನ್ನು ಮತ್ತೆ ಎಳೆದು ತನ್ನನ್ನು ಕೊಂದುಕೊಳ್ಳಲು
ಹೊರಡುವುದು.(ಸಂ-೧೭,ಪ-೩೩).ಧರ್ಮರಾಯನನ್ನು ಕೊಂದ ಬಳಿಕ ತನಗೂ ಬದುಕು ಬೇಡ ಎಂಬುದು ಅವನು ಈ
ಕೃತ್ಯಕ್ಕೆ ನೀಡುವ ಸಮರ್ಥನೆ.(ಪ-೩೪)
ಇದನ್ನು ತಡೆಯುವ ಕೃಷ್ಣ ಆತ್ಮಹತ್ಯೆ ಮಹಾಪಾಪ ಎಂದು ಅರ್ಜುನನಿಗೆ ಹೇಳಿ, ತನ್ನನ್ನು ತಾನೇ
ಹೊಗಳಿಕೊಳ್ಳುವುದು ಸಾವಿಗೆ ಸಮಾನ, ನಿನ್ನ ನೀನೆ
ಹೊಗಳಿಕೊಂಡು ನಿನ್ನನ್ನು ಕೊಂದುಕೋ ಎಂಬ ಸಲಹೆ ನೀಡುತ್ತಾನೆ. ಪರರನ್ನು ತೆಗಳುವುದು ಪರರನ್ನು ಕೊಂದಂತಾದರೆ,
ತನ್ನ ಬಗ್ಗೆಯೇ ತನ್ನ ಹೊಗಳಿಕೆ ತನ್ನನ್ನು ಕೊಂದುಕೊಂಡಂತೆ.(...ನಿನ್ನಗ್ಗಳಿಕೆಗಳ ನೀನಾಡಿ
ನಿನ್ನನೇ ಕೊಂದುಕೊಳ್ಳೆಂದ|| ಪ-೩೫). ಅರ್ಜುನ ಹಾಗೆಯೇ ಮಾಡುತ್ತಾನೆ.
ಧರ್ಮರಾಯ: ಇವನ ಪ್ರತಿಕ್ರಿಯೆ ಮಾತ್ರ
ಸಂಪೂರ್ಣವಾಗಿ ಅನಿರೀಕ್ಷಿತವಾದದ್ದು.
೧) ಕೃಷ್ಣನಿಕ್ಕಿದ ಗಂಟಿನಲಿ ಸಿಲುಕದಿರು
ತನ್ನಯ ಗಂಟಲಿದೆ ಶಸ್ತ್ರೌಘವಿದೆ(ಪ-೩೯)
೨) ಇರಿದ ಕರ್ಣನೇ ಸಾಲದೇ ಪೆಣನಿರಿದು
ಪಗೆಯೇಕೆ..(ಪ-೪೧)
ಕೃಷ್ಣನ ಮಾತಿನಲ್ಲಿ ಸಿಕ್ಕಿಕೊಳ್ಳಬೇಡ, ತನ್ನನ್ನು ಕೊಲ್ಲು, ಈಗಾಗಲೇ ಕರ್ಣನಿಂದ
ಕೊಲ್ಲಲ್ಪಟ್ಟಿರುವ ತಾನು ಹೆಣಕ್ಕೆ ಸಮಾನ, ಯುದ್ಧದಲ್ಲಿ ಗೆದ್ದರೆ ಭೀಮನನ್ನು ಅರಸನನ್ನಾಗಿ ಮಾಡು,
ನಕುಲ ಸಹದೇವರನ್ನು ಪಾಲಿಸು ಇತ್ಯಾದಿ ವಿನಂತಿಸಿಕೊಂಡ ಧರ್ಮರಾಯ ಎದ್ದು ಕಾಡಿಗೆ ಹೊರಡುತ್ತಾನೆ. ಅವನನ್ನು
ದ್ರೌಪದಿ,ನಕುಲ,ಸಹದೇವರು ಉಳಿದವರು ಅನುಸರಿಸುತ್ತಾರೆ.
ಕುಲಕಂಟಕ ಎಂಬ ಅರ್ಜುನನ ಮಾತು ಧರ್ಮರಾಯನನ್ನು ಇನ್ನಷ್ಟು ಘಾತಿಸುತ್ತದೆ. ಅದು ಅವನ
ದೌರ್ಬಲ್ಯಗಳ ಬಗ್ಗೆ ಹೇಳಿದ ಮಾತಾಗದೆ ಅವನ ಮಟ್ಟಿಗೆ ಅವನ ವ್ಯಕ್ತಿತ್ವವನ್ನು ಅಳೆದ
ಮಾತಾಗುತ್ತದೆ. ಆ ಹಿನ್ನೆಲೆಯಲ್ಲಿ ಅರ್ಜುನನ ಮಾತನ್ನು ಗ್ರಹಿಸಿದ ಆತ ಅರಮನೆಯಿಂದ ಕಾಡಿನತ್ತ
ಹೊರಡುತ್ತಾನೆ. ಅನಂತರ ಅರ್ಜುನ ಹೋಗಿ ಅವನ ಕಾಲು ಹಿಡಿದು ಕ್ಷಮೆ ಕೋರುತ್ತಾನೆ. ಕೃಷ್ಣನೂ
ಪಾರ್ಥನನ್ನು ಕ್ಷಮಿಸು ಎಂದು ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯ ಒಪ್ಪಿ ಪ್ರಕರಣ
ಸುಖಾಂತ್ಯವಾಗುತ್ತದೆ. ಹೀಗೆ ಒಪ್ಪುವಾಗಲೂ ಧರ್ಮರಾಯ ತಾನಾಡಿದ ಅನುಚಿತವಾದ ಮಾತಿಗೆ ಪಶ್ಚಾತಾಪ
ವ್ಯಕ್ತಪಡಿಸುವುದಿಲ್ಲ. ಆತ ಅದರ ಕಾರಣ ದ್ವಾಪರ ಮತ್ತು ಕಲಿ ಸಂಧಿಸುತ್ತಿರುವ ಸಮಯದಲ್ಲಿ ಕಲಿಯ
ಪ್ರಭಾವ ದ್ವಾಪರದ ಮೇಲೂ ಆಗುತ್ತಿರುವುದೇ ಈ ಮಾತಿನ ಯುದ್ಧಕ್ಕೆ ಕಾರಣ ಎಂದು ಅರ್ಥೈಸುತ್ತಾನೆ.
“ಹಿಂಗದಿನ್ನೂ ದ್ವಾಪರದ ಸರ್ವಾಂಗವೀ
ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡಸೋಹಿನಲಿ ಸಂಗಡಿಸಿತಧೋರತ್ತರದ ಸಮರಂಗ....”
ಸನ್ನಿವೇಶವನ್ನು ಅರ್ಥೈಸುವ ವಿಧಾನ ಮತ್ತು ಒಂದು ಅನುಚಿತವಾದ ಮಾತು ಹುಟ್ಟಿಸಬಹುದಾದ
ಅನರ್ಥ ಪರಂಪರೆ ಯಾವ ಮಟ್ಟದ್ದಾಗಬಹುದು ಎಂಬುದು ಇಲ್ಲಿ ವ್ಯಕ್ತವಾಗಿದೆ. ಹರಿಗೆ ಕೊಡು ಗಾಂಡಿವವ
ಎಂಬ ಅನುಚಿತ ಮಾತು ಧರ್ಮರಾಯನದು. ಆ ಮಾತಿನಿಂದ ಬೆಳೆದ ಸನ್ನಿವೇಶದ ಅಂತ್ಯದಲ್ಲಿ ಅರ್ಜುನನೇ
ಧರ್ಮರಾಯನ ಕಾಲು ಹಿಡಿದು ಕ್ಷಮೆ ಕೇಳುವ ಹಂತ ತಲುಪಿದೆ. ತನ್ನ ಅನುಚಿತ ಮಾತಿಗೆ ಧರ್ಮರಾಯನ
ಪ್ರತಿಕ್ರಿಯೆ ಏನು? ಆತ ಅಂತಹ ಮಾತಾಡಿದ್ದಕ್ಕೆ ಪಶಾತ್ತಾಪ ಕೂಡ ಪಡುವುದಿಲ್ಲ. ತನ್ನ
ಶತಾಪರಾಧವನ್ನು ಮನ್ನಿಸು ಎಂದು ಅರ್ಜುನನೇ ಕಾಲಿಗೆ ಬೀಳುತ್ತಾನೆ.
ಕುಮಾರವ್ಯಾಸ ನಿರ್ವಹಿಸಿದ ರೀತಿಯನ್ನು ಗಮನಿಸಿದರೆ ಎಲ್ಲ ತಪ್ಪೂ ಅರ್ಜುನನದು ಎಂಬಂತೆ
ಭಾಸವಾಗುತ್ತದೆ. ಸಲಹೆ ಕೊಟ್ಟ ಕೃಷ್ಣನಿಗೂ, ಧರ್ಮರಾಯನ ಕಾಡಿನತ್ತ ಹೊರಟು ನಿಂತಾಗ ಅವನ ತೀರ್ಮಾನವನ್ನು ನಿಯಂತ್ರಿಸಲಾಗಲಿಲ್ಲ. ಅರ್ಜುನ ಕಾಲಿಗೆ
ಬಿದ್ದು ತನ್ನದು ತಪ್ಪಾಯಿತು ಎಂದ ಅನಂತರ ಧರ್ಮರಾಯ ತುಸು ಮೃದುವಾದಾಗ, ಕೃಷ್ಣ ಅರಮನೆಗೆ ಮರಳು
ಎಂದು ಸೂಚಿಸುತ್ತಾನೆ.
ಇಡೀ ಸನ್ನಿವೇಶದಲ್ಲಿ ಧರ್ಮರಾಯನ ವರ್ತನೆಯೂ ಸಂಯಮ ಮೀರಿದ್ದಾದರೂ, ಅನುಚಿತವಾಗಿದ್ದರೂ
ತಪ್ಪೆಲ್ಲ ಅರ್ಜುನನದು ಎಂಬಂತೆ ಕುಮಾರವ್ಯಾಸನಲ್ಲಿ ಚಿತ್ರಿತವಾಗಿದೆ.
***
ಭಾಗ -೨
ವ್ಯಾಸರಲ್ಲಿ ಧರ್ಮರಾಯನ ವರ್ತನೆ ಮತ್ತು ಆತ ಅರ್ಜುನನ ಮೇಲೆ ಮಾಡುವ ಆರೋಪ ತುಸು ಬೇರೆ
ರೀತಿಯದು.ಅವುಗಳನ್ನು ಹೀಗೆ ಸಂಗ್ರಹಿಸಬಹುದು.
೧] ಸೂತಪುತ್ರನಾದ ಕರ್ಣನಿಂದ ತಾನು
ಪರಾಜಿತನಾದದ್ದು ತನಗೆ ಅವಮಾನಕರವಾಗಿದೆ. ದ್ರೋಣ ಮತ್ತು ಭೀಷ್ಮ ಅವರು ತನ್ನನ್ನು ಈ ರೀತಿ
ಅವಮಾನಿಸಿರಲಿಲ್ಲ.
೨] ಯುದ್ಧಮಾಡಲು ತಾನು ಅಶಕ್ತ ಎಂಬ
ರೀತಿಯಲ್ಲಿ ಕರ್ಣ ತನ್ನ ಬಗ್ಗೆ ವರ್ತಿಸಿದ್ದು.
ಈ ಎರಡು ಮಾತುಗಳಲ್ಲಿ ವ್ಯಕ್ತವಾಗುವ
ಸೂಕ್ಷ್ಮಗಳನ್ನು ಗಮನಿಸಬೇಕು. ೧] ಯುದ್ಧದಲ್ಲಿ ಸೋಲು-ಗೆಲುವು ಸಹಜ ಎಂಬುದನ್ನು ಧರ್ಮರಾಯ
ಸ್ವೀಕರಿಸಿಲ್ಲ.
೨] ಸೂತನಿಂದ ತಾನು ಸೋಲಿಸಲ್ಪಟ್ಟೆ ಎಂಬ
ಕೀಳರಿಮೆ ಮತ್ತು ತನ್ನನ್ನು ಅಶಕ್ತ ಎಂದು ಕರ್ಣ ಬಿಟ್ಟುಬಿಟ್ಟಿದ್ದು ತನಗಾದ ಅವಮಾನ ಎಂಬ ಭಾವನೆ.
ಧರ್ಮರಾಯ ಅರ್ಜುನನ ಬಗ್ಗೆ ಎತ್ತುವ
ಆಕ್ಷೇಪಗಳು ಹೀಗಿವೆ.
೧] ನನಗೆ ವನವಾಸದ ಸಮಯದಲ್ಲಿ ಕರ್ಣನ
ಬಗ್ಗೆ ತುಂಬಾ ಭಯವಿತ್ತು.ನೀನು ಯಾವಾಗಲೂ ಕರ್ಣನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಿದ್ದೆ.ನಿನ್ನ
ಆ ಭರವಸೆಯನ್ನು ನಂಬಿ ನಾನು ಯುದ್ಧಕ್ಕೆ ಸಿದ್ಧನಾದೆ. ಈಗ ನೀನು ರಣರಂಗದಲ್ಲಿ ಭೀಮನನ್ನು ಬಿಟ್ಟು
ಕರ್ಣನಿಗೆ ಹೆದರಿ ಬಂದೆ.
೩] ನಿನಗೆ ಸಾಮರ್ಥ್ಯವಿಲ್ಲದಿದ್ದರೆ
ಕೇಶವನಿಗೆ ಗಾಂಡಿವ ಕೊಟ್ಟು ಸಾರಥಿಯಾಗು. ನಿನಗೆ, ನಿನ್ನ ಶಕ್ತಿಗೆ, ನಿನ್ನ ಧನುಸ್ಸಿಗೆ, ರಥಕ್ಕೆ
ಧಿಕ್ಕಾರವಿರಲಿ.
ಕುಮಾರವ್ಯಾಸನಲ್ಲಿ ಧರ್ಮರಾಯನ ಆಕ್ಷೇಪ ಅರ್ಜುನ ತನ್ನನ್ನು ಕಾಪಾಡಲಿಲ್ಲ ಎಂಬುದು. ವ್ಯಾಸರಲ್ಲಿ
ಅರ್ಜುನ ತಾನಿತ್ತ ಭರವಸೆಯನ್ನು ಈಡೇರಿಸದ ಕಾರಣ ಈ ಸ್ಥಿತಿ ಬಂದಿದೆ ಎಂಬುದು.
೩] ವ್ಯಾಸರಲ್ಲಿ ಕೃಷ್ಣ ಧರ್ಮರಾಯನ
ತಪ್ಪನ್ನೂ ಎತ್ತಿ ತೋರಿಸುತ್ತಾನೆ. ಅರ್ಜುನನ ಪ್ರತಿಜ್ಞೆ ತಿಳಿದಿದ್ದೂ ನೀನು ಗಾಂಡಿವವನ್ನು
ಅವಮಾನಿಸಿದ್ದು ತಪ್ಪು ಎಂಬುದು ಅವನ ಅಭಿಪ್ರಾಯ.
೪] ಅರ್ಜುನನ ಪ್ರತಿಜ್ಞೆ ಭಂಗವಾಗಬಾರದು
ಮತ್ತು ನೀನು ಹತನಾಗಬಾರದು ಎಂಬ ಉದ್ದೇಶದಿಂದ ನಾವು ಮಾಡಿದ ಈ ಕೃತ್ಯವನ್ನು ಕ್ಷಮಿಸು ಎಂದು ಕೃಷ್ಣ
ಧರ್ಮರಾಯನ ಪಾದಗಳಿಗೆ ಅರ್ಜುನನ ಜೊತೆ ನಮಸ್ಕರಿಸುತ್ತಾನೆ.
೫] ಧರ್ಮರಾಯ ತಾನು ಗಾಂಡಿವವನ್ನು
ಹಳಿದದ್ದು ತಪ್ಪು, ಆ ನನ್ನ ಅಪರಾಧವನ್ನು ಕ್ಷಮಿಸಿ ಎಂದು ವಿನಂತಿಸುವುದು.
***
ಕುಮಾರವ್ಯಾಸನಲ್ಲಿ ಎಲ್ಲವೂ ಅರ್ಜುನನ ತಪ್ಪು ಎಂಬಂತೆ ಚಿತ್ರಿಸಲ್ಪಟ್ಟಿದೆ. ವ್ಯಾಸರಲ್ಲಿ
ಹೀಗಿಲ್ಲ. ಧರ್ಮರಾಯ ಮತ್ತು ಕೃಷ್ಣ ಇವರೂ ಕೂಡ ತಮ್ಮ ವರ್ತನೆಗೆ ಕ್ಷಮೆ ಕೋರುವ ಮೂಲಕ
ಸನ್ನಿವೇಶಕ್ಕೆ ಒಂದು ಪೂರ್ಣರೂಪದ ಚೌಕಟ್ಟನ್ನು ಹಾಕುತ್ತಾರೆ. ಕುಮಾರವ್ಯಾಸನಲ್ಲಿ ಧರ್ಮರಾಯನಿಗೆ
ಕಡೆಗೂ ತನ್ನ ತಪ್ಪಿನ ಅರಿವಾಗುವುದಿಲ್ಲ ಮತ್ತು ಕೃಷ್ಣ ಅದನ್ನು ಸೂಚಿಸುವುದೂ ಇಲ್ಲ. ಸಮಸ್ಯೆಯ
ಹುಟ್ಟಿಗೆ ಕಾರಣವಾದ ಧರ್ಮರಾಯ ಅದರ ಪರಿಹಾರಕ್ಕೆ ಏನೂ ಪ್ರಯತ್ನಪಡದಿರುವಂತೆ ಚಿತ್ರಣವಿದೆ. ಬಿಕ್ಕಟ್ಟನ್ನು
ಬಗೆಹರಿಸಲು ಅರ್ಜುನನಿಗೆ ಇರುವ ಕಳಕಳಿಯ ಒಂದಂಶವೂ ಧರ್ಮರಾಯನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ
ಮಟ್ಟಿಗೆ ಧರ್ಮರಾಯನ ವ್ಯಕ್ತಿತ್ವ ಮುಕ್ಕಾಗುತ್ತದೆ.
***
ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳಿಕೊಳ್ಳಬಹುದು. ದ್ಯೂತದ ಸಂದರ್ಭದಲ್ಲಿ ದ್ರೌಪದಿಗೆ
ಅವಮಾನವಾಗುವಾಗ ಧರ್ಮರಾಯ ತಾನೂ ಸುಮ್ಮನಿದ್ದು, ಭೀಮನನ್ನೂ ಸುಮ್ಮನಿರಿಸುತ್ತಾನೆ. (ಸಭಾಪರ್ವ,ಸಂಧಿ-೧೫,ಪದ್ಯ-೯೩).
ಅರ್ಜುನನೂ ಧರ್ಮರಾಯನ ಕೈಸುಡುವ ಪ್ರಸ್ತಾಪ ಬೇಡ ಎಂದು ಸಮಾಧಾನಿಸುತ್ತಾನೆ.(ಸಭಾಪರ್ವ,ಸಂಧಿ-೧೫,ಪದ್ಯ-೯೦).
ಅಲ್ಲಿ ಆಗುತ್ತಿರುವ ಅವಮಾನ ಧರ್ಮರಾಯನಿಗೂ ಅಲ್ಲ, ಅರ್ಜುನನಿಗೂ ಅಲ್ಲ. ಆದ್ದರಿಂದ ಅದನ್ನು
ವೈಯಕ್ತಿಕ ನೆಲೆಯಿಂದ ದೂರವಿಟ್ಟು ಧರ್ಮದ ನೆಲೆಯಲ್ಲಿ ಗ್ರಹಿಸಲು ಇಬ್ಬರಿಗೂ ಸಾಧ್ಯವಾಗಿದೆ. ಇಲ್ಲಿ
ಅವಮಾನ ತನಗೇ ಆಗಿರುವ ಕಾರಣ ಧರ್ಮರಾಯನ ವರ್ತನೆಯನ್ನು ನಿಯಂತ್ರಿಸುತ್ತಿರುವ ಸಂಗತಿ ಧರ್ಮದ ಪರಿಕಲ್ಪನೆಯಲ್ಲ,
ವೈಯಕ್ತಿಕ ಅವಮಾನದ ಭಾವನೆ. ಪರರ ಬಿಕ್ಕಟ್ಟನ್ನು ಧರ್ಮದ ಮೂಲಕ ಗ್ರಹಿಸುವಷ್ಟು ಸರಳವಾಗಿ ತಮ್ಮ
ಬಿಕ್ಕಟ್ಟನ್ನು ಗ್ರಹಿಸಲು ಆಗುವುದಿಲ್ಲ ಎಂಬುದಕ್ಕೆ ಈ ಪ್ರಸಂಗ ದೃಷ್ಟಾಂತವಾಗಿದೆ. ಭೀಮ ದ್ರೌಪದಿಯ ಅವಮಾನವನ್ನು ತಮಗಾದ
ಅವಮಾನ ಎಂದೇ ಆ ಸಂದರ್ಭದಲ್ಲಿ ಭಾವಿಸಿದ್ದ. ಆತನಿಗೆ ದ್ರೌಪದಿಗೆ ಆಗುತ್ತಿರುವ ಅವಮಾನವನ್ನು ನೋಡಿ
ಸುಮ್ಮನಿರುವುದು ಅಧರ್ಮ ಅನಿಸಿದರೆ, ಧರ್ಮರಾಯನಿಗೆ ಧರ್ಮದ ಕಾರಣದಿಂದ ಸುಮ್ಮನಿರಲೇಬೇಕಾಗಿದೆ
ಅನಿಸಿತ್ತು. ವರ್ತನೆಯಲ್ಲಿ ಕಂಡುಬರುವ ಈ ವ್ಯತ್ಯಾಸಕ್ಕೆ ಸನ್ನಿವೇಶವನ್ನು ಗ್ರಹಿಸುವ ರೀತಿ
ಕಾರಣ.
2 comments:
ಒಂದು ಸನ್ನಿವೇಶವನ್ನು ಎಷ್ಟು ಎಳೆಎಳೆಯಾಗಿ, ಹಿಂಜಿ ಹಿಂಜಿ, ಅದರಲ್ಲಿ ಅಡಗಿರುವ ಮನೋವೈಜ್ಞಾನಿಕ ಸತ್ಯಗಳನ್ನು, ಅದರಂತೆ ವೈಯಕ್ತಿಕ ತಪ್ಪು ಭಾವನೆಗಳನ್ನು ಬಿಡಿಸಿ ನಮ್ಮೆದುರಿಗೆ ಇಟ್ಟಿದ್ದೀರಿ. ಇದು ನಿಜವಾಗಿಯೂ ಕಾವ್ಯವನ್ನು ಅರ್ಥೈಸಿಕೊಳ್ಳುವ ರೀತಿ. ನನಗೆ ಈ ಸನ್ನಿವೇಶವನ್ನು ತಿಳಿಯಾಗಿ ತಿಳಿಸಿದ್ದಕ್ಕಾಗಿ ನಿಮಗೆ ಋಣಿಯಾಗಿದ್ದೇನೆ.
ಇಲ್ಲಿ ಇನ್ನೊಂದು ಮಾತಿದೆ: ದ್ರೌಪದಿಯ ವಸ್ತ್ರಾಪಹರಣವಾಗುವ ಸಂದರ್ಭದಲ್ಲಿ ಧರ್ಮರಾಯನು ಮೌನ ವಹಿಸಿದ್ದಕ್ಕೆ ತಾವು ‘ಅದು ವೈಯಕ್ತಿಕ ಅನುಭವ ಆಗಿರಲಿಲ್ಲ’ ಎನ್ನುವ ಕಾರಣವನ್ನು ತೋರಿಸಿದ್ದೀರಿ. ಇದು ನಿಜವೇ ಹೌದು. ಅಲ್ಲದೆ ಇಲ್ಲಿ ಮತ್ತೊಂದು ಕಾರಣವೂ ಇದ್ದಿರಬಹುದು ಎಂದು ನನಗೆ ಭಾಸವಾಗುತ್ತದೆ. ಮಹಾಭಾರತದ ಕಾಲವನ್ನು ಗಮನಿಸಿರಿ. ದುರ್ದೈವದಿಂದ ಆ ಸಮಯದಲ್ಲಿ ದಾಸ, ದಾಸಿಯರಿಗೆ ಅಂದರೆ ಗುಲಾಮರಿಗೆ ಯಾವ ಅಧಿಕಾರವೂ ಇರಲಿಲ್ಲ ಅರ್ಥಾತ್ ತಮ್ಮ ದೇಹದ ಮೇಲೆ ಸಹ ಅವರಿಗೆ ತಮ್ಮ ಅಧಿಕಾರವಿರಲಿಲ್ಲ. ದಾಸನ(=ದಾಸಿಯ)ದೇಹವು ಸಂಪೂರ್ಣವಾಗಿ ಒಡೆಯನ ಸ್ವಾಮಿತ್ವದಲ್ಲಿತ್ತು. ತುಂಬಿದ ಸಭೆಯಲ್ಲಿ ದಾಸಿಯನ್ನು ಬತ್ತಲೆಗೊಳಿಸುವುದು (ಎಷ್ಟೇ ಅನಾಗರಿಕವೆಂದು ನಮಗೀಗ ಅನಿಸಿದರೂ ಸಹ) ಆ ಕಾಲದಲ್ಲಿ ಬಹುಶಃ ಅದು accepted ಆದಂತಹ ನೀತಿ(!) ನಿಯಮವಾಗಿರಬಹುದು. ಇದೇ ಕಾರಣದಿಂದ ಭೀಷ್ಮ, ದ್ರೋಣರೂ ಸಹ ದ್ರೌಪದಿಯನ್ನು ದುಶ್ಸಾಸನನು ಬತ್ತಲೆಗೊಳಿಸುವಾಗ, ಭೀಷ್ಮಾದಿಗಳು ಸುಮ್ಮನಿದ್ದದ್ದು. ದ್ರೌಪದಿಯು ತಾನು ಪುಷ್ಪವತಿಯಾಗಿದ್ದೇನೆ ಎಂದು ಹೇಳಿದಾಗ, ‘ಇಲ್ಲಿ ಫಲವತಿಯಾಗು ಬಾ’ ಎಂದು ದುರ್ಯೋಧನನು ತೊಡೆ ತಟ್ಟಿಕೊಂದಿದ್ದು, ಆ ಸಮಯದಲ್ಲಿ ದಾಸಿಯರ ದಯನೀಯ ಪರಿಸ್ಥಿತಿಯನ್ನೇ ತೋರಿಸುತ್ತದೆ. ಅದಲ್ಲದೆ, ರಾಜಕುಮಾರಿಯೊಬ್ಬಳು ಮದುವೆಯಾಗಿ ಬಂದಾಗ, ಅವಳ ಜೊತೆಗೆ ಬಂದು ಅನೇಕ ದಾಸಿಯರು ವರಮಹಾಶಯನ ಭೋಗವಸುಗಳೇ ಆಗಿಬಿಡುತ್ತಿದ್ದರು ಎನ್ನುವುದು ಅಂಗೀಕೃತವಾದ ಸಂಗತಿಯೇ ಆಗಿದೆ. ಆದುದರಿಂದ ಧರ್ಮರಾಯನು ಮೌನ ವಹಿಸಿದ್ದಕ್ಕೆ ‘ವೈಯಕ್ತಿಕ ಅವಮಾನವಾಗಿರಲಿಲ್ಲ’ ಎನ್ನುವದರ ಜೊತೆಗೆ, ಈ ‘ಸಾಮಾಜಿಕ ನೀತಿ’ಯೂ ಕಾರಣವಾಗಿರಬಹುದು ಎಂದು ನನಗೆ ಅನಿಸುತ್ತದೆ.
ಪ್ರಿಯ ಸುನಾಥ್,
ನಮಸ್ಕಾರಗಳು. ನಾನು ಯುಧಿಷ್ಟಿರನ ಧರ್ಮಸಂಬಂಧಿತ ಅಸಹಾಯಕತೆಯ ಬಗ್ಗೆ ಮಾತಾಡುತ್ತಿಲ್ಲ. ಆತ ಅಲ್ಲಿ ಪ್ರತಿಕ್ರಿಯೆ ತೋರಿಸದಿರುವುದು ಧರ್ಮಬದ್ಧತೆಯ ಕಾರಣದಿಂದ ಇರಬಹುದು, ಅಥವಾ ಇದೆ ಎಂದೇ ಒಪ್ಪೋಣ. ಆದರೆ ಅನಂತರವೂ ಆತ ದ್ರೌಪದಿಯ ಜೊತೆ ತಾನು ಅವಳನ್ನು ಪಣವಾಗಿಟ್ಟಿದ್ದರ ಬಗ್ಗೆ ಮಾತಾಡಿಲ್ಲ ಎಂಬುದನ್ನು ಗಮನಿಸಬೇಕು. ತಾನು ಹಾಗೆ ಮಾಡಿದ್ದರ ಬಗ್ಗೆ ಆತನಿಗೆ ಅಪರಾಧೀಭಾವ ಬಂದಂತಿಲ್ಲ. ಹಾಗೆ ಬರದಿರಲು ಕಾರಣ ವಸ್ತ್ರಾಪಹರಣ ಅವನ ವೈಯಕ್ತಿಕ ಅಪಮಾನವಾಗಿರದಿದ್ದುದೇ ಎಂಬುದು ನನ್ನ ಮಾತಾಗಿತ್ತು.
ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು.ದ್ರೌಪದಿ ಮೊದಲಬಾರಿ ಸಭೆಗೆ ಬಾರದಿದ್ದಾಗ ಧರ್ಮರಾಯ, ನೀನು ಜೊರಾಗಿ ಅಳುತ್ತ ಧೃತರಾಷ್ಟ್ರನ ಅರಮನೆಯತ್ತ ಹೋಗು ಎಂಬ ಸಂದೇಶವನ್ನು ದೂತನ ಮೂಲಕ ದ್ರೌಪದಿಗೆ ಕಳಿಸುತ್ತಾನೆ. ಈ ವರ್ತನೆಯ ಕಾರಣ ಏನಿರಬಹುದು?
ದಾಸ್ಯತ್ವದ ನಿಯಮಗಳ ಬಗ್ಗೆ ನನ್ನ ತಕರಾರು ಇಲ್ಲ. ಅದರ ನಿಯಮಗಳ ಬಗ್ಗೆ ಆ ಸನ್ನಿವೇಶದಲ್ಲಿ ಕರ್ಣ ಮಾತಾಡಿದ್ದಾನೆ.
ಮತ್ತೆ ಇಲ್ಲಿ ಫಲವತಿಯಾಗು ಎಂದು ಹೇಳಿದ್ದು ದುರ್ಯೋಧನನಲ್ಲ, ದುಶ್ಯಾಸನ. ರಾಜಸಭೆಯಲ್ಲಿ ಅಲ್ಲ, ದ್ರೌಪದಿಯ ಅರಮನೆಯಲ್ಲಿ. ಅವಳನ್ನು ಕರೆದೊಯ್ಯಲು ದುಶ್ಯಾಸನ ಬಂದಾಗ ಆಕೆ ತಾನು ರಜಸ್ವಲೆ ಎಂದು ಹೇಳಿದಾಗ ದುಶ್ಯಾಸನ ಆಡಿದ ಮಾತು:
“.........ಪುಷ್ಪವತಿಯಾಗಿಲ್ಲಿ ಫಲವಾತಿಯಾಗು ನಡೆ ಕುರುರಾಜ ಭವನದಲಿ..”(ಸಭಾಪರ್ವ, ಸಂಧಿ ೧೫, ಪದ್ಯ ೬೫)
Post a Comment