Thursday, November 1, 2012



ಮತ್ತೆ ಬರೆಯುವತ್ತ....


ಜನವರಿ ತಿಂಗಳ ಅನಂತರ ಏನನ್ನೂ ಬರೆಯಲಿಲ್ಲ. ನನ್ನ ಕಾವ್ಯಾರ್ಥ ಲೇಖನಕ್ಕೆ ಶ್ರೀಪಾದು ಬರೆದ ಪ್ರತಿಕ್ರಿಯೆಗೆ ಉತ್ತರ ಕೊಡುವುದು ಉಳಿದಿದೆ. ತುಸು ದೀರ್ಘವಾದ ಉತ್ತರವೇ ಆಗುತ್ತದೆ. ಅದಕ್ಕೂ ಮುಂಚೆ ಯಾಕೆ ಏನನ್ನೂ ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಸೂಕ್ತ.

ನಿವೃತ್ತಿಯ ಅನಂತರ ನನ್ನ ಜೀವನದ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧವಾಗಿದ್ದವು. ಬೇರೆಯವರಿಗೆ ನನ್ನ ಕಾಲವನ್ನು ನ್ಯಾಸವಾಗಿ ಇಟ್ಟಿರದ ಕಾರಣದಿಂದ ನನಗೆ ಅನಿಸಿದಂತೆ ಇರಲು ಸಾಧ್ಯವಾಗಿತ್ತು.ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟವಾದ ಚಟುವಟಿಕೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದ ಸ್ವಂತದ ಬದುಕು. ನನ್ನ ಪ್ರೀತಿಯ ಮಡದಿಯೂ ನನ್ನ ಈ ಶಿಸ್ತಿನ ಜೀವನಕ್ಕೆ ಭಂಗ ಬರದಂತೆ ಕಾಳಜಿ ವಹಿಸಿದ್ದರು.

ಆದರೆ ಇವೆಲ್ಲ ಇದ್ದಕ್ಕಿದ್ದಂತೆ ಬದಲಾಗಿಹೋಯಿತು. ಯಾವುದೋ ಹೊತ್ತಿಗೆ ಏಳಬೇಕಾದ, ನಿದ್ದಿಸಬೇಕಾದ,ಊಟ ಸ್ನಾನ ಮಾಡಬೇಕಾದ ಅನಿವಾರ್ಯತೆ ಬಂತು. ನಮ್ಮೆಲ್ಲರ ಚಟುವಟಿಕೆಗಳನ್ನು ನಿಯಂತ್ರಿಸುವ ಮೊಮ್ಮಗಳು ಬಂದಳು. ತನ್ನಿಷ್ಟದಂತೆ ತಾನು ಇದ್ದಿದ್ದಲ್ಲದೆ ತನ್ನಿಷ್ಟದಂತೆ ನಾವೂ ಇರುವಂತೆ ಮಾಡಿದಳು. ನಮಗೆ ಪ್ರೀತಿಯ ಸಿಟ್ಟು ತರಿಸಿದಳು. ಸಂಭ್ರಮ ಉಕ್ಕಿಸಿದಳು. ನಿಸ್ಸಹಾಯಕತೆಯಲ್ಲಿ ನಾವು ಗೊಂದಲಗೊಳ್ಳುವಂತೆ ಮಾಡಿದಳು. ನಮ್ಮನ್ನು ಬೆರಗಿಗಿಕ್ಕಿದಳು.ಸಾಹಿತ್ಯ, ತತ್ವ ಇವೆಲ್ಲ ಅವಳ ಶುದ್ಧ ಮುಗ್ಧತೆಯೆದುರು ಅಡಗಿ ಕೂತವು. ಇವೆಲ್ಲ ಈಗ ನೆನಪು. ಮೊನ್ನೆ ಬೆಂಗಳೂರಿಗೆ ಹೋದಳು.

ಈಗ ಮನೆಯಲ್ಲಿ ಮೌನ. ಕುತೂಹಲ, ಸಂಭ್ರಮ ತರಿಸುವ ಸ್ವಾರಸ್ಯದ ಹೊಸ ಸಂಗತಿಗಳೂ ಇಲ್ಲ. ಮತ್ತೆ ನನ್ನ ಓದಿಗೆ ಮರಳಬೇಕು. ಮೌನದಲ್ಲಿ ನನ್ನ ದನಿಗೆ ನಾನೇ ಕಿವಿಯಾಗಬೇಕು. ಆಗ ಮತ್ತೆ ಬರೆಯಲು ಏನಾದರೂ ತೋಚಬಹುದು.

Sunday, January 15, 2012

ಕಾವ್ಯಾರ್ಥ..



     ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ. ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು. ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ. ಕಾರಣ ಗೊತ್ತಿಲ್ಲ.ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ,ನವ್ಯ ಬುದ್ಧಿಜೀವಿಗಳಿಗೇ ಹಾಗೆ ಎಂದು ನನ್ನನ್ನು ಬುದ್ಧಿಜೀವಿಗಳ ಗುಂಪಿಗೆ ಸೇರಿಸಿದ. ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ.
     ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ. ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂಬ ಮಾತು ತುಂಬಾ ಹಿಂದಿನಿಂದಲೂ ಇದೆ.ನಾನು ಎಮ್... ಓದುತ್ತಿದ್ದಾಗಲೂ ನನ್ನ ಕೆಲ ಅಧ್ಯಾಪಕರು ಹಾಗೇ ಹೇಳುತ್ತಿದ್ದರು. ಆಗೆಲ್ಲ ನಾನು ಮತ್ತು ದೇವನೂರು ಮಹಾದೇವ ನವ್ಯ ಕಾವ್ಯವನ್ನು ಸಮರ್ಥಿಸುವುದೇ ನಮ್ಮ ಜೀವನದ ಪರಮ ಗುರಿ ಎಂಬ ರೀತಿಯಲ್ಲಿ ನವ್ಯಕಾವ್ಯದ ಪರ ವಕಾಲತ್ತು ವಹಿಸುತ್ತಿದ್ದೆವು.ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಕಾವ್ಯಅಥವಾ ಸಾಹಿತ್ಯ ಅರ್ಥವಾಗುವುದು ಅಂದರೇನು?
     ಸಾಹಿತಿ ಬರೆದದ್ದು ನಮ್ಮ ಸಂವೇದನೆಯನ್ನು ತಾಗುವುದು ಎಂಬುದನ್ನು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ?ಸಾಹಿತಿಯ ಕಾಣ್ಕೆ,ದರ್ಶನ ಅಥವಾ ಅನುಭವ ಇವು ನಮಗೆ ಗ್ರಾಹ್ಯವಾಗುವುದು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ? ಇವೆರೆಡೂ ಹೇಳಿಕೆಗಳನ್ನು ಈ ಲೇಖನದ ಮಟ್ಟಿಗೆ ಒಪ್ಪಿ ಮುಂದುವರೆಯುತ್ತೇನೆ.
     ಸಾಹಿತ್ಯದ ಮಾಧ್ಯಮ ಭಾಷೆ. ನಮ್ಮ ದಿನಬಳಕೆಯ ಸಂವಹನದ ಮಾಧ್ಯಮವೂ ಭಾಷೆ.ದಿನಬಳಕೆಯಲ್ಲಿ ಭಾಷೆ ಹೆಚ್ಚು  ವಾಚ್ಯವಾಗಿಯೂ,ಸಾಹಿತ್ಯದ ಬಳಕೆಯಲ್ಲಿ ಹೆಚ್ಚು ಧ್ವನ್ಯಾತ್ಮಕವಾಗಿಯೂ ಕೆಲಸ ಮಾಡುತ್ತದೆ.ವಾಚ್ಯಾರ್ಥಕ್ಕೆ ಸಂಬಂಧಿಸಿದಂತೆ ಭಾಷೆಯ ಈ ಎರಡು ರೀತಿಯ ಬಳಕೆಯಲ್ಲು ವ್ಯತ್ಯಾಸವಿಲ್ಲ. ಸಹಜವಾದ ಮಾತಿಗಿರುವಂತೆ ಸಾಹಿತ್ಯದ ಭಾಷೆಗೂ ವಾಚ್ಯಾರ್ಥವಿರಲೇಬೇಕು,ಇರುತ್ತದೆ. ಹಾಗಾದರೆ ಮಾತು ಸಾಹಿತ್ಯವಾಗಲು ಈ ವಾಚ್ಯಾರ್ಥವನ್ನು ಮೀರಿದ ಮತ್ತೊಂದು ಅರ್ಥ ಸ್ಫುರಿಸಬೇಕು. ಅಂದರೆ, ಸಾಹಿತ್ಯ ಅರ್ಥವಾಗುವುದು ಅಂದರೆ ಈ ವಾಚ್ಯಾರ್ಥ ಮತ್ತು ಅದನ್ನು ಮೀರಿದ ಮತ್ತೊಂದು ಅರ್ಥ ಎರಡೂ ಅರ್ಥವಾಗುವುದು.ಒಂದೆರೆಡು ಉದಾಹರಣೆಯ ಮೂಲಕ ನನ್ನ ಹೇಳಿಕೆಯನ್ನು ವಿಸ್ತರಿಸುತ್ತೇನೆ.
     "ಗಂಗೆಯಲಿ ತೇಲಿ ಬಂದನು ಕರ್ಣ,ರಾಧೇಯ,ಸಾಯಿಸಿಲಕಲ್ಲದೇ ಬರಳು ಕುಂತಿ". ಅಡಿಗರ ಭೂಮಿಗೀತ ಕವನದ ಒಂದು ಸಾಲು ಇದು.ಕರ್ಣ ಕುಂತಿಯ ಕತೆ ಗೊತ್ತಿರುವ ನಮಗೆ ಇದರ ವಾಚ್ಯಾರ್ಥ ಸುಲಭವಾಗಿ ಹೊಳೆಯುತ್ತದೆ. ಹುಟ್ಟಿದ ಕೂಡಲೇ ಗಂಗೆಯಲ್ಲಿ ಕರ್ಣನನ್ನು ತೇಲಿಬಿಟ್ಟ ಕುಂತಿ ಮತ್ತವನನ್ನು ಭೇಟಿಯಾಗುವುದು ಅವನ ಬಳಿ ಮಾತು ಪಡೆಯಲು. ಹೀಗೆ ಕುಂತಿ ಪಡೆದ ಮಾತು ಕರ್ಣನ ಸಾವಿಗೂ ಕಾರಣವಾಗುತ್ತದೆ.
     ಕುಂತಿ ತನ್ನ ಮಗನ ಪ್ರಾಣವನ್ನೇ ತನ್ನುಳಿದ ಮಕ್ಕಳ ಉಳಿವಿಗಾಗಿ ಕೇಳುವುದು ಹೇಗೆ ಸಾಧ್ಯ? ಇದು ಸೂಕ್ಷ್ಮವಾಗಿ ತಾಯ್ತನವನ್ನು ಅಗೌರವಿಸಿದಂತಲ್ಲವೇ? ಅದ್ದರಿಂದ  ರಾಧೇಯ ಎಂಬ ಪದಪ್ರಯೋಗ ಮಾಡುವ ಮೂಲಕ ತೇಲಿಬಿಟ್ಟಾಗ ಕರ್ಣನಾಗಿದ್ದವ ಮತ್ತೆ ಕುಂತಿ ಕಂಡಾಗ  ರಾಧೆಯ ಮಗ ರಾಧೇಯನಾಗಿದ್ದ, ಆತ ಕೌಂತೇಯ ಆಗಿರಲೇ ಇಲ್ಲ,ಆದ್ದರಿಂದ ಕುಂತಿಗೆ ನೈತಿಕ ಸಂಕಟ ಎದುರಾಗಲಿಲ್ಲ ಅಥವಾ ಎದುರಾದರೂ ತನ್ನ ಮಗ ಎಂದು ಒಪ್ಪಿ ಬಿಡುವಷ್ಟು ಪ್ರಬಲವಾಗಿರಲಿಲ್ಲ ಎಂಬೆಲ್ಲ ಧ್ವನಿ ಹುಟ್ಟಿಸುತ್ತಾರೆ. ಗಂಗೆಯಲಿ ತೇಲಿ ಬಂದನು ಕರ್ಣ ಸಾಯಿಸಿಲಿಕಲ್ಲದೇ ಬರಳು ಕುಂತಿ ಎಂದು ಬರೆದಿದ್ದರೆ ವಾಚ್ಯಾರ್ಥದಲ್ಲಿ ಬಹಳ ಬದಲಾವಣೆಯೇನೂ ಆಗುತ್ತಿರಲಿಲ್ಲ. ಮಗನನ್ನೇ ಸಾಯಿಸಲು ಬರುವ ಕುಂತಿ ಎಂಬುದು ತುಸು ಕಾವ್ಯದ ಓಟಕ್ಕೆ ಧಕ್ಕೆ ತರುತ್ತಿತ್ತು. ಈಗ
ರಾಧೇಯ ಎಂಬುದರ ಮೂಲಕವಾಗಿ  ಆತ ಕುಂತಿಯ ಮಗ ಆಗಿರಲಿಲ್ಲ, ರಾಧೆಯ ಮಗನಾಗಿದ್ದ,ಆದ್ದರಿಂದ ಪ್ರಾಣ ಪಡೆವ ಮಾತು ಪಡೆಯಲು ಕುಂತಿಗೆ ಹಿಂಸೆಯಾಗಲಿಲ್ಲ ಎಂಬ ಅರ್ಥ ಧ್ವನಿಸುವಂತೆ ಮಾಡುತ್ತಾರೆ. ಇಡೀ ಭೂಮಿಗೀತ ಕವನದ ಕೇಂದ್ರವಾಗಿರುವ ಪರಕೀಯತೆಯ ಹಿನ್ನೆಲೆಯಲ್ಲಿ ಇದರ ಅರ್ಥ ಇನ್ನಷ್ಟು ವಿಸ್ತಾರ ಪಡೆಯುತ್ತದೆ. (ರಾಧೆಯ ಮಗನಾಗಿದ್ದ ಕರ್ಣನಿಗೆ ಕುಂತಿ ಪರಕೀಯಳಾಗಿದ್ದಳು. ತಾನು ಕುಂತಿಯ ಮಗ ಎಂದು ತಿಳಿದ ಕ್ಷಣದಿಂದ ಅವನು ರಾಧೆಗೂ ಪರಕೀಯನಾಗಿಬಿಡುತ್ತಾನೆ.)
ಭಾಷೆ ವಿವರಗಳನ್ನು ಚಿತ್ರಿಸುವಾಗ ಅರ್ಥವಾಗುವುದು ಸುಲಭ. ಭಾಷೆಯನ್ನು ನಾವು ದಿನನಿತ್ಯ ಹಾಗೆಯೇ ಬಳಸುತ್ತೇವೆ. ವಿವರಗಳ ಮೂಲಕ ಸನ್ನಿವೇಶವನ್ನು ಕಟ್ಟುವುದು ಗದ್ಯದ ಸಹಜತೆ,ಸ್ವರೂಪ. ವಿವರಗಳೇ ಇಲ್ಲದ ಕಥೆ ಕಾದಂಬರಿಗಳು ಇರುವುದು ಬಲು ಅಪರೂಪ.(ಇದ್ದರೂ ಅವು ಮತ್ತೆಅರ್ಥವಾಗದ ನವ್ಯಕಥೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ.)ಯಾವುದೇ ವಿವರಣೆಯ ವಾಚ್ಯಾರ್ಥ ಸುಲಭವಾಗಿ ಆಗುವುದರಿಂದ ನಮಗೆ ಅದು ಅರ್ಥವಾಯಿತು ಅನಿಸುತ್ತದೆ. ಈ ರೀತಿಯ ವಿವರಣಾತ್ಮಕ ಚಿತ್ರಣದ ಮೂಲಕವಾಗಿ ಮತ್ತೊಂದನ್ನು ಧ್ವನಿಸುತ್ತಿರುವುದು ನಮಗೆ ಅರ್ಥವಾಗದಿದ್ದರೂ ವಿವರಣಾತ್ಮಕವಾದ ಚಿತ್ರಣ ಅರ್ಥವಾಗಿರುವ ಕಾರಣ ಅದು ಅರ್ಥವಾಯಿತು ಎಂದು ಭಾವಿಸುತ್ತೇವೆ. ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ ಮೊದಲಾದ ಕಾದಂಬರಿಗಳ ಧ್ವನ್ಯಾರ್ಥ ಅರ್ಥವಾಗದವರಿಗೂ ಅವುಗಳ ವಾಚ್ಯಾರ್ಥ ಅರ್ಥವಾಗುವುದರಿಂದ ಓದಲು ತೊಂದರೆಯಾಗುವುದಿಲ್ಲ. ಬೇಂದ್ರೆಯವರ ಬೆಳಗು ಕವನದ ಧ್ವನಿಸೂಕ್ಷ್ಮತೆ ಗ್ರಹಿಕೆಯಾಗದಿದ್ದರೂ ಆ ಕವನಗ ಸೊಗಸಾದ ವಾಚ್ಯಾರ್ಥದ ಕಾರಣ ಅರ್ಥವೇ ಆಗುತ್ತಿಲ್ಲ ಎಂದು ಅನಿಸುವುದಿಲ್ಲ. 
ಆದರೆ ನವ್ಯಕಾವ್ಯ ವಿವರಣೆಯನ್ನು ಮುಖ್ಯವಾಗಿಸಿಕೊಳ್ಳದೆ ಹೆಚ್ಚು ರೂಪಕವಾಗಿ, ರೂಪಕಗಳ ನಡುವಿನ ಸಂಬಂಧದ ಮೂಲಕವಾಗಿ ಅರ್ಥ ಕಟ್ಟುವ ವಿಧಾನ ಬಳಸಿದ್ದರಿಂದ ಅರ್ಥವಾಗುವುದು ಕಷ್ಟವಾಯಿತು. ಮೊದಲಿಗೆ ರೂಪಕ ಅರ್ಥವಾಗಬೇಕು.ಅನಂತರ ಒಂದು ರೂಪಕ ಮತ್ತೊಂದು ರೂಪಕದೊಡನೆ ಪಡೆಯುವ ಸಂಬಂಧ ಅರ್ಥವಾಗಬೇಕು.ಅನಂತರ ಈ ರೀತಿಯ ಸಂಬಂಧ ಸೃಷ್ಟಿಸುವ ಧ್ವನಿ ಅರ್ಥವಾಗಬೇಕು. ಇವಿಷ್ಟು ತುಂಬಾ ಸರಳವಾಗಿ ಸಹಜವಾಗಿ ಆಗಬೇಕು. ತಾರ್ಕಿಕ ಬೆಳವಣಿಗೆ ಸಾಹಿತ್ಯ ಅರ್ಥವಾಗುವಲ್ಲಿ ಸಹಕಾರಿ. ನವ್ಯಕಾವ್ಯದಲ್ಲಿ ಈ ರೀತಿಯ ಸಹಜ ತಾರ್ಕಿಕ ಬೆಳವಣಿಗೆ ಇರದೆ ರೂಪಕಗಳ,ಅಥವಾ ವಿವರಣೆಗಳ ಅತಾರ್ಕಿಕ ಜೋಡಣೆಯ ಮೂಲಕ ತಾರ್ಕಿಕ ಅರ್ಥ ಹೊರಡಿಸುವ ಕಸಬುದಾರಿಕೆಯ ಕಾರಣದಿಂದ ಅರ್ಥವಾಗುವುದು ಕಷ್ಟ ಅನಿಸಬಹುದು. ಮೂರು ಉದಾಹರಣೆಗಳು:
೧. ಬಾನಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
    ಹತ್ತಿಬಿಲ್ಲಿನ ಕಸದ ಕತ್ತಲೆಯಲಿ
    ಗಂಟೆ ಎಷ್ಟೆಂದು ಕೇಳಿದರೇನ ಹೇಳಲಿ
    ಎಷ್ಟೊಂದು ಗಡಿಯಾರ ಅಂಗಡಿಯಲಿ.
೨. ಕಾಡು ಮರಗಳ ಮಧ್ಯೆ ಮನೆ
    ಸಿಮೆಂಟು ಬಿರುಕಿನಲ್ಲಿ ಹುಲ್ಲು
    ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ
    ಸೊಪ್ಪು.
೩. ಡಾಕ್ಟರರು ನರ್ಸುಗಳು ಹೆರಿಗೆ ಮನೆಯೊಳಹೊರಗೆ
    ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
    ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
    ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಕ್ರಿಯೆಯಲ್ಲಿ       
    ಪಾರಂಗತ
(ನನ್ನ ನೆನಪನ್ನು ನಂಬಿ ಈ ಸಾಲುಗಳನ್ನು ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಮತ್ತು ಸರಿಮಾಡಿಕೊಂಡು ಓದಿ)