ಮತ್ತೆ ಬರೆಯುವತ್ತ....
ಜನವರಿ ತಿಂಗಳ ಅನಂತರ
ಏನನ್ನೂ ಬರೆಯಲಿಲ್ಲ. ನನ್ನ ಕಾವ್ಯಾರ್ಥ ಲೇಖನಕ್ಕೆ ಶ್ರೀಪಾದು ಬರೆದ ಪ್ರತಿಕ್ರಿಯೆಗೆ ಉತ್ತರ
ಕೊಡುವುದು ಉಳಿದಿದೆ. ತುಸು ದೀರ್ಘವಾದ ಉತ್ತರವೇ ಆಗುತ್ತದೆ. ಅದಕ್ಕೂ ಮುಂಚೆ ಯಾಕೆ ಏನನ್ನೂ
ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಸೂಕ್ತ.
ನಿವೃತ್ತಿಯ ಅನಂತರ
ನನ್ನ ಜೀವನದ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧವಾಗಿದ್ದವು. ಬೇರೆಯವರಿಗೆ ನನ್ನ ಕಾಲವನ್ನು
ನ್ಯಾಸವಾಗಿ ಇಟ್ಟಿರದ ಕಾರಣದಿಂದ ನನಗೆ ಅನಿಸಿದಂತೆ ಇರಲು ಸಾಧ್ಯವಾಗಿತ್ತು.ನಿರ್ದಿಷ್ಟ ಸಮಯದಲ್ಲಿ
ನಿರ್ದಿಷ್ಟವಾದ ಚಟುವಟಿಕೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದ ಸ್ವಂತದ
ಬದುಕು. ನನ್ನ ಪ್ರೀತಿಯ ಮಡದಿಯೂ ನನ್ನ ಈ ಶಿಸ್ತಿನ ಜೀವನಕ್ಕೆ ಭಂಗ ಬರದಂತೆ ಕಾಳಜಿ ವಹಿಸಿದ್ದರು.
ಆದರೆ ಇವೆಲ್ಲ
ಇದ್ದಕ್ಕಿದ್ದಂತೆ ಬದಲಾಗಿಹೋಯಿತು. ಯಾವುದೋ ಹೊತ್ತಿಗೆ ಏಳಬೇಕಾದ, ನಿದ್ದಿಸಬೇಕಾದ,ಊಟ ಸ್ನಾನ
ಮಾಡಬೇಕಾದ ಅನಿವಾರ್ಯತೆ ಬಂತು. ನಮ್ಮೆಲ್ಲರ ಚಟುವಟಿಕೆಗಳನ್ನು ನಿಯಂತ್ರಿಸುವ ಮೊಮ್ಮಗಳು ಬಂದಳು.
ತನ್ನಿಷ್ಟದಂತೆ ತಾನು ಇದ್ದಿದ್ದಲ್ಲದೆ ತನ್ನಿಷ್ಟದಂತೆ ನಾವೂ ಇರುವಂತೆ ಮಾಡಿದಳು. ನಮಗೆ ಪ್ರೀತಿಯ
ಸಿಟ್ಟು ತರಿಸಿದಳು. ಸಂಭ್ರಮ ಉಕ್ಕಿಸಿದಳು. ನಿಸ್ಸಹಾಯಕತೆಯಲ್ಲಿ ನಾವು ಗೊಂದಲಗೊಳ್ಳುವಂತೆ
ಮಾಡಿದಳು. ನಮ್ಮನ್ನು ಬೆರಗಿಗಿಕ್ಕಿದಳು.ಸಾಹಿತ್ಯ, ತತ್ವ ಇವೆಲ್ಲ ಅವಳ ಶುದ್ಧ ಮುಗ್ಧತೆಯೆದುರು
ಅಡಗಿ ಕೂತವು. ಇವೆಲ್ಲ ಈಗ ನೆನಪು. ಮೊನ್ನೆ ಬೆಂಗಳೂರಿಗೆ ಹೋದಳು.
ಈಗ ಮನೆಯಲ್ಲಿ ಮೌನ.
ಕುತೂಹಲ, ಸಂಭ್ರಮ ತರಿಸುವ ಸ್ವಾರಸ್ಯದ ಹೊಸ ಸಂಗತಿಗಳೂ ಇಲ್ಲ. ಮತ್ತೆ ನನ್ನ ಓದಿಗೆ ಮರಳಬೇಕು.
ಮೌನದಲ್ಲಿ ನನ್ನ ದನಿಗೆ ನಾನೇ ಕಿವಿಯಾಗಬೇಕು. ಆಗ ಮತ್ತೆ ಬರೆಯಲು ಏನಾದರೂ ತೋಚಬಹುದು.