ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ.
ಅವರ ಬೆನ್ನಿಗೆ ಸದಾ ನಾಲ್ಕುಮಂದಿ;
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.
(ಗೋಪಲಕೃಷ್ಣ ಅಡಿಗ-ಸಮಗ್ರ ಕಾವ್ಯ-ಪುಟ ೨೬೪)
ಇತ್ತೀಚೆಗೆ ಕೊಂಡ ಅಡಿಗರ ಸಮಗ್ರ ಕಾವ್ಯ ಓದುತ್ತಿದ್ದೆ. ಅವರ ಕವನಗಳನ್ನು ನಾನು ಬಿ.ಎ. ಓದುತ್ತಿದ್ದ ಕಾಲದಿಂದಲೂ ಓದುತ್ತಿದ್ದೆ.ಅವರ ಧೋರಣೆಗಳು ಏನೇ ಇರಲಿ ಅವರ ಕವನಕಟ್ಟುವ ರೀತಿ ಒಂದು ವಿಸ್ಮಯ. ಕಲ್ಲು ಕೆತ್ತಿ ವಿಗ್ರಹ ನಿರ್ಮಿಸಿದಂತೆ. ಈಗ ಮತ್ತೆ ಅವರ ಭೂಮಿಗೀತ ಕವನದ ಈ ಸಾಲುಗಳನ್ನು ಓದುವಾಗ ಓಂದಿಷ್ಟು ಹೊಳೆಯಿತು. ಮುಂಚೆ ಏನು ಹೊಳೆದಿತ್ತು ಎಂದು ನನಗೇ ಕುತೂಹಲವಾಗಿ ನನ್ನ ಸಂಗ್ರಹದಲ್ಲಿದ್ದ ಅವರ ಭೂಮಿಗೀತ ಸಂಕಲನ ಹುಡುಕಿ ತೆಗೆದು ನೋಡಿದೆ. ಪುಣ್ಯಕ್ಕೆ ಅದರಲ್ಲಿ ನಾನು ಬರಕೊಂಡ ಟಿಪ್ಪಣಿಗಳಿದ್ದವು. ಅವನ್ನು ಮತ್ತೆ ಈಗಿನ ಒಂದಿಷ್ಟನ್ನು ಸೇರಿಸಿ ಬರೆಯುವ ಹುಮ್ಮಸ್ಸು ಬಂತು. ನಾನಿಲ್ಲಿ ಇಡೀ ಕವನದ ಬಗ್ಗೆ ಬರೆಯುತ್ತಿಲ್ಲ. ಬದಲಿಗೆ ಮೇಲಿನ ನಾಲ್ಕು ಸಾಲುಗಳನ್ನು ಓದಿದಾಗ ನನಗೆ ಅನಿಸಿದ್ದನ್ನು ಮಾತ್ರ ಬರೆಯುತ್ತಿದ್ದೇನೆ.
ಇಲ್ಲಿ ಮೂರು ಬಿಡಿ ನೋಟಗಳಿವೆ.1)"ನರ್ಸುಗಳು.........ಸದಾ ನಾಲ್ಕು ಮಂದಿ" 2)"ತೊಟ್ಟಿಲಂಗಡಿಯಲ್ಲಿ.........ಅಗ್ಗ" 3)"ಜಾತಕರ್ಮದಿ......ಪಾರಂಗತ" ಮೊದಲನೆಯದು ಕ್ರಿಯಾತ್ಮಕವಾಗಿರುವ ಒಂದು ಸನ್ನಿವೇಶ. ಇಲ್ಲಿ "ಒಳಹೊರಗೆ" ಎಂಬ ಪದ ಡಾಕ್ಟರ್ ಮತ್ತು ನರ್ಸುಗಳ ಓಡಾಟವನ್ನು ಸೂಚಿಸುತ್ತಿದೆ. ಹೆರಿಗೆಯ ಸಂದರ್ಭದಲ್ಲಿ ಓಡಾಟ ಅಂದರೆ ಒಂದು ಜೀವ ಹುಟ್ಟುತ್ತಿರುವ ಸೂಚನೆ. ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ಎಂಬುದು ಅವರ ಸಹಾಯಕರನ್ನು ಸೂಚಿಸುತ್ತದೆ.
ಎರಡನೆಯ ಸಾಲು ಹುಟ್ಟಿನ ಅನಂತರ ಮಗುವನ್ನು ತೊಟ್ಟಿಲಲ್ಲಿ ಇಟ್ಟ ಸ್ಥಿತಿಯನ್ನು ಸೂಚಿಸುತ್ತದೆ. ಹಿಂದೆ ತೊಟ್ಟಿಲನ್ನು ಬೊಂಬಿನಿಂದ ಮಾಡುತ್ತಿದ್ದ ಕಾರಣ ಆ ಪದವನ್ನು ಬಳಸಲಾಗಿದೆ. ತೊಟ್ಟಿಲು ತಯಾರಿಸಲು ಬೊಂಬು ಬೇಕಾದ ಕಾರಣ ಅದರ ಸಂಗ್ರಹ ಸಾಕಷ್ಟು ತೊಟ್ಟಿಲಂಗಡಿಯಲ್ಲಿ ಇರುತ್ತದೆ.ಹಾಗಾಗಿ ಅಲ್ಲಿ ಅದು ಅಗ್ಗ. ಅಂದರೆ ಮಗುವಿಗೆ ಒಂದು ಗುರುತನ್ನು(identity) ಕೊಡುತ್ತಿರುವ ಸೂಚನೆ.
ಮೂರನೆಯ ಸಾಲು ನಾಮಕರಣದ ಕ್ರಿಯೆಯನ್ನು ಸೂಚಿಸುತ್ತಿದೆ. ಸಧ್ಯಕ್ಕೆ ನಾಮಕರಣ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಜಾತಕರ್ಮದಿ ನಿರತ ಎಂಬ ಹೇಳಿಕೆ ಸೂಚಿಸುತ್ತದೆ.ಇದು ವರ್ತಮಾನಕಾಲದ ಸೂಚಕ. ಹೀಗೆ ನಿರತನಾಗಿರುವ ಭಟ್ಟ ಸಾವಿನ ಅನಂತರದ ಕ್ರಿಯೆಯಲ್ಲೂ ಪಾರಂಗತನಿದ್ದಾನೆ ಎಂಬುದು ಹೇಳಿಕೆ.ಇದು ಮುಂದೆ ಬರುವ ಕಾಲದ ಅಥವಾ ಕ್ರಿಯೆಯ ಸೂಚಕ.
ಇದಷ್ಟೇ ಈ ಸಾಲುಗಳ ಧ್ವನಿಯಾಗಿದ್ದರೆ ತುಂಬಾ ಸರಳವಾದ ಹೇಳಿಕೆಯ ರೂಪದಲ್ಲೇ ಉಳಿದುಬಿಡುತ್ತಿತ್ತು. ಹುಟ್ಟನ್ನು ಸೂಚಿಸುವ ಹೆರಿಗೆಮನೆಯೊಳಹೊರಗಿನ ಡಾಕ್ಟರರ ಬೆನ್ನ ಹಿಂದಿನ ನಾಲ್ಕು ಮಂದಿ ಹೆಣಹೊರುವ ನಾಲ್ಕು ಮಂದಿಯ ಸಂಕೇತವಾಗುತ್ತಾರೆ. ಈ ಧ್ವನಿಯನ್ನು ಮುಂದಿನ ಸಾಲುಗಳು ಪುಷ್ಟೀಕರಿಸುತ್ತವೆ. ತೊಟ್ಟಿಲಂಗಡಿಯಲ್ಲಿ ಸಿಗುವ ಬೊಂಬು ಚಟ್ಟಕಟ್ಟಲೂ ಬಳಕೆಯಾಗುತ್ತದೆ. ನಾಮಕರಣ ಮಾಡುತ್ತಿರುವ ಭಟ್ಟ ಅಪರಕ್ರಿಯೆಯಲ್ಲೂ ಪಾರಂಗತ ಎಂದರೆ ಸಾವಿನ ಅನಂತರ ಗುರುತನ್ನು ಅಳಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಮೂರು ಸಾಲುಗಳು ಹುಟ್ಟು ಮತ್ತು ಸಾವಿನ ಸಂಬಂಧವನ್ನು ಅನಿವಾರ್ಯತೆಯನ್ನು ವಿವರಿಸುತ್ತವೆ.
ಇನ್ನೂ ಗಮನಿಸಬೇಕಾದ ಅಂಶವೆಂದರೆ ಈ ಮೂರೂಸಾಲುಗಳು ಹುಟ್ಟುಸಾವಿನ ಅನಿವಾರ್ಯತೆಯನ್ನು ಕವನದಲ್ಲಿ ಬೆಳೆಸುವರೀತಿ. ಮೊದಲ ಸಾಲಿನಲ್ಲಿ ಮಗು ಹುಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಹುಟ್ಟಿದ ಅಥವಾ ಇನ್ನೀಗ ಹುಟ್ಟಲಿರುವ ಸೂಚನೆ ಇದೆ. ಹಾಗೆ "ನಾಲ್ಕು ಮಂದಿ" ಎಂಬ ಪದಬಳಕೆ ಈಗಾಗಲೆ ಸತ್ತಿರುವ ಅಥವಾ ಇನ್ನೀಗ ಸಾಯಲಿರುವ ವ್ಯಕ್ತಿಯ ಸೂಚನೆ ನೀಡುತ್ತದೆ. ಮುಂದಿನ ಸಾಲು ಮಗು ಹುಟ್ಟಿದೆ ಎಂಬುದನ್ನು ಸೂಚಿಸುತ್ತದೆ. ತೊಟ್ಟಿಲು ಬಂದಿದೆ. ಹಾಗೆಯೇ ಚಟ್ಟ ಕಟ್ಟಲು ಬಳಸುವ ಬೊಂಬು ವ್ಯಕ್ತಿ ಸತ್ತ ಸಂಕೇತ. "ತೊಟ್ಟಿಲ" ಪದ ಬಳಕೆಯ ಮೂಲಕ ಹುಟ್ಟಿದ್ದು ನಿಖರವಾದಂತೆ ಸತ್ತಿದ್ದು ಕೂಡ ನಿಖರವಾಗಿದೆ. ಇಲ್ಲವಾದರೆ ಬೊಂಬಿನ ಅಗತ್ಯವಿಲ್ಲ. ಮೂರನೆಯ ಸಾಲಿನಲ್ಲಿ ನಾಮಕರಣ. ಇದು ಇನ್ನೂ ತುಸು ಮುಂದಿನ ಹಂತ. ಹಾಗೆಯೇ ಸಾವಿನ ಅನಂತರದ ಮುಂದಿನ ಕ್ರಿಯೆಯಾದ ಅಪರ ಕ್ರಿಯೆಯ ಸೂಚನೆ "ಅಪರ ಕ್ರಿಯೆಯಲ್ಲೂ ಪಾರಂಗತ" ಎಂಬ ಹೇಳಿಕೆಯಲ್ಲಿದೆ. ಅಂದರೆ ಹುಟ್ಟಿನ ಅನಂತರದ ಮೂರು ಘಟನೆಗಳು ಮತ್ತು ಸಾವಿಗೆ ಸಂಬಧಿಸಿದ ಮೂರು ಘಟನೆಗಳನ್ನು ಒಟ್ಟಿಗಿಡುವ ಮೂಲಕ ಹುಟ್ಟಿನಿಂದ ಸಾವಿನತ್ತದ ಚಲನೆಯನ್ನು ಸೂಚಿಸುವ ಪರಿ ಸಮರ್ಥವಾಗಿ ಮೂಡಿಬಂದಿದೆ.
ಅಡಿಗರ ಬಹಳಷ್ಟು ಕವನಗಳು ಒಂದು ಸ್ಥಿತಿಯ ಚಿತ್ರಣವಷ್ಟೇ ಅಲ್ಲ.ಅವು ತಮ್ಮೊಳಗೇ ಬೆಳೆಯುವ ಕುಸುರಿ ಕೆಲಸ. ಕ್ಷಣವನ್ನು ಕ್ಯಾಮರದಲ್ಲಿ ಸೆರೆಹಿಡಿವ ರೀತಿಯದಲ್ಲ. ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿಯನ್ನು ಮಾಡುವ ಅಥವಾ ಚಿತ್ರಕಾರ ಒಂದೊಂದೇ ಗೆರೆಗಳನ್ನು ಎಳೆಯುತ್ತ ಬಣ್ಣ ತುಂಬತ್ತಾ ಚಿತ್ರವಾಗಿಸುವ ರೀತಿ. ಕವನದ ಈ ಚಲನಶೀಲತೆಯನ್ನು ಗ್ರಹಿಸದಿದ್ದಲ್ಲಿ ಕವನದ ಧ್ವನಿಯನ್ನು ಗ್ರಹಿಸುವುದೂ ಕಷ್ಟವಾಗುತ್ತದೆ.