Monday, March 24, 2014

ಏಕದಂತ.

                                                               


ಕೆಲವು ಸಲ ನನ್ನಲ್ಲಿ ಹುಟ್ಟುವ ಕುತೂಹಲಕ್ಕೆ ಕಾರಣವೇನು ಎಂಬುದು ನನಗೂ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಕಾರಣ ನಿಮಿತ್ತವಾಗುತ್ತದೆ. ನಿನ್ನೆ ಹಾಗೇ ಆಯಿತು. ಎಲ್ಲೋ ಹಾಕಿದ್ದ ಮೈಕಲ್ಲಿ ನಮ್ಮ ಗಣಪತಿಯ ಸ್ತೋತ್ರ. ಅದರಲ್ಲಿ ಬರುವ "ಏಕದಂತಾಯ" ಎಂಬುದನ್ನು ಕೇಳಿ ಎಲಾ! ಈ ಗಣಪ ಯಾಕೆ ಏಕದಂತನಾದ ಎಂಬ ಕುತೂಹಲ ಹುಟ್ಟಿತು. ಇಲ್ಲಿಯವರೆಗೂ ಗಣಪನ ಈ ಹೆಸರು ಕೇಳಿದ್ದರೂ ಈ ಕುತೂಹಲ ಬಂದಿರಲಿಲ್ಲ. ಗಣಪನಿಗೆ  ಆನೆಯ ತಲೆ ತರುವವರು ಒಂದೇ ದಂತ ಇರುವುದನ್ನು ಗಮನಿಸದೆ ತಂದರೇ? ಪಾರ್ವತಿಯಿಂದ ಬೈಸಿಕೊಳ್ಳುತ್ತಿದ್ದ ಈಶ್ವರ ಗಡಿಬಿಡಿಯಲ್ಲಿ ಗಮನಿಸದಿದ್ದರೂ ತಾಯಿ ಪಾರ್ವತಿ ಅದನ್ನು ಗಮನಿಸಿ ಈ ಮುಖ ಬೇಡ ಎಂದು ತಕರಾರು ಎತ್ತಬಹುದಿತ್ತಲ್ಲ. ಯಾಕೆ ಹೀಗಾಯಿತು? ಇದರ ಮೂಲ ಪತ್ತೆ ಹಚ್ಚಬೇಕು ಎಂಬ ಉತ್ಸಾಹ ಹುಟ್ಟಿತು. ನಮ್ಮ ಸ್ತೋತ್ರಮಾಲಿಕೆಗಳಲ್ಲಿ ಸಾಲಾಗಿ ನಾಮಾವಳಿ ಇರುತ್ತದೆಯೇ ಹೊರತು ವಿವರ ಇರುವುದು ಕಡಿಮೆ. ಸ್ಥಳೀಯ ಪಂಡಿತರೊಬ್ಬರನ್ನು ಕೇಳಿದಾಗ ಗಣಪ ಒಮ್ಮೆ ಬಿದ್ದಿದ್ದನಲ್ಲ..ನೋಡು ಚಂದ್ರ ನಕ್ಕು ಶಾಪ ಬಂತಲ್ಲ..ಆಗ ಮುರಿಯಿತು ಎಂದು ನಿಖರವಾಗಿ ಹೇಳಿದರು. ಇದ್ದರೂ ಇರಬಹುದು..ಬಿದ್ದು ಹಲ್ಲು ಮುರಿದುಕೊಂಡರೆ ನೋಡುವವರು ನಕ್ಕರದು ತಪ್ಪಲ್ಲ. ಅಂತೂ ಅವತ್ತಿಂದ ಗಣಪನಿಗೆ ಮತ್ತೊಂದು ಹೆಸರು ಬಂದಂತಾಯಿತು
(ಅಲ್ಲಿಯವರೆಗೆ ಅವನ ನಾಮಾವಳಿಯಲ್ಲಿ ೯೯೯ "ನಾಮ"ಗಳು ಮಾತ್ರ ಇದ್ದವೇ?)

ಆದರೆ ನಮ್ಮ ಪಂಡಿತರು ಸುಮ್ಮನೆ ಬುರುಡೆ ಬಿಟ್ಟರು ಎಂಬುದು ಮೊನ್ನೆ ಬ್ರಹ್ಮಾಂಡ ಪುರಾಣ ಓದುತ್ತಿದ್ದಾಗ ತಿಳಿಯಿತು. ಅಲ್ಲಿದೆ ಗಣಪ ಏಕದಂತನಾದ ಕಾರಣ.  ನೀವೂ ತಿಳಿದುಕೊಳ್ಳಿ.
ಈಶ್ವರನಿಂದ ವರಪಡೆದು ಕ್ಷತ್ರಿಯ ಕುಲ ಸಂಹರಿದ ಪರಶುರಾಮ ಒಮ್ಮೆ ಈಶ್ವರನ ದರ್ಶನಕ್ಕೆಂದು ಕೈಲಾಸಕ್ಕೆ ಆಗಮಿಸಿದ. ಅವೇಳೆ. ಈಶ್ವರ ಆ ಸಮಯದಲ್ಲಿ ಪಾರ್ವತಿಯೊಂದಿಗೆ ಸಲ್ಲಾಪದಲ್ಲಿದ್ದ. ತಾಯಿ ಸ್ನಾನಕ್ಕೆ ಹೋದಾಗ ಕಾಯುತ್ತ ನಿಂತಂತೆ ಗಣಪ ಈಗಲೂ ಹೊರಗೆ ಕಾವಲು ನಿಂತಿದ್ದ.(ಭಕ್ತರನ್ನು ಕಾಯುವುದು ಇಲ್ಲಿಂದಲೇ ಕಲಿತಿರಬೇಕು.) ತನ್ನ ಕರ್ತವ್ಯಪರತೆಯನ್ನು ಮೆರೆದು ಪರಶುರಾಮನನ್ನು ತಡೆದ. ಈಗ ಈಶ್ವರನ ಭೇಟಿ ಸಾಧ್ಯವಿಲ್ಲ.ನಿಮಗೆ ಬೇರೆ ಸಮಯ ನಿಗದಿ ಮಾಡಿಕೊಡಲಾಗುವುದು.ಕಾಯಿರಿ. ಎಂದು ಪರಶುರಾಮನ ಕೋರಿಕೆಯನ್ನು ನಿರಾಕರಿಸಿದ. ಪರಶುರಾಮ ಪದೇಪದೇ ವಿನಂತಿಸಿದರೂ ಗಣಪ ತಲೆ(ಸೊಂಡಿಲು?) ಅಲ್ಲಾಡಿಸಿ ನಿರಾಕರಿಸಿದ. ಬಂತು ನೋಡಿ ಪರಶುರಾಮನಿಗೆ ಭಯಂಕರ ಸಿಟ್ಟು! ಆತ ತನ್ನ ಆಯುಧವಾದ ಪರಶುವನ್ನು ಗಣಪನ ಮೇಲೆ ಪ್ರಯೋಗಿಸಲು ತಯಾರಾದ. ಅವನು ಪ್ರಯೋಗಿಸುತ್ತಾನೆ ಎಂಬುದು ಗಣಪನಿಗೆ ಮುಂಚೆಯೇ ತಿಳಿದು ಗಣಪನನ್ನು ಅನಾಮತ್ತಾಗಿ ಸೊಂಡಿಲಿಂದ ಎತ್ತಿ ಮೇಲಿನ ಏಳು+ವೈಕುಂಠ+ಗೋಲೋಕವನ್ನೂ ಮತ್ತು ಕೆಳಗಿನ ಏಳು ಲೋಕವನ್ನೂ ತೋರಿಸಿಬಿಟ್ಟ. ಪರಶುರಾಮನಿಗೆ ಒಂದೆಡೆ ಖುಷಿ ಮತ್ತೊಂದೆಡೆ ದುಃಖ. ನಿರಾಯಾಸವಾಗಿ ಎಲ್ಲ ಲೋಕಗಳನ್ನೂ ನೋಡಿದ ಖುಷಿ. ಆಯುಧ ಪ್ರಯೋಗಕ್ಕಿಂತ ಮುಂಚೆಯೇ ಸೋತದ್ದಕ್ಕೆ ಬೇಸರ. ಆದರೂ ಬುದ್ಧಿ ಕಲಿಯದ ಪರಶುರಾಮ ಆತ ಸೊಂಡಿಲಿಂದ ಇಳಿಸಿದ ಕೂಡಲೇ ಪರಶುವನ್ನು ಪ್ರಯೋಗಿಸಿಯೇ ಬಿಟ್ಟ. ಈಶ್ವರನಿಂದ ಪ್ರಾಸಾದಿತವಾದ ಈ ಪರಶುವನ್ನು ನಿರಾಕರಿಸುವುದು ಅಥವಾ ಗೆಲ್ಲುವುದು ಈಶ್ವರನಿಗೆ(ಅಪ್ಪನಿಗೆ) ಮಾಡುವ ಅವಮಾನ ಎಂಬ ವಿನೀತ ಭಾವದಿಂದ ಗಣಪ ಅದನ್ನು ತನ್ನ ಕುಂಭದ ಎಡಭಾಗದಿಂದ ತಡೆದ. ಘಾತವಾಯಿತು ನೋಡಿ. ಗಣಪನ ಎಡದಂತ ಮುರಿದುಬಿತ್ತು. ಹೀಗೆ ಗಣಪ ಏಕದಂತನಾದ.
(ಈ ಕತೆ ಇನ್ನೂ ಇದೆ. ಆದರೆ ಗಣಪ ಹೊಸದಂತ ಕಟ್ಟಿಸಿಕೊಳ್ಳಲಿಲ್ಲವಾದ್ದರಿಂದ ಕತೆಯನ್ನು ವಿಸ್ತರಿಸುವ ಅಗತ್ಯವಿಲ್ಲ.)
(ಆಸಕ್ತರ ಗಮನಕ್ಕೆ:ಮೇಲಿನ ಏಳು ಲೋಕಗಳು-ಭೂ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ
                         ಕೆಳಗಿನ ಏಳು ಲೋಕಗಳು-ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ.)