Saturday, July 31, 2010

ಹೀಗೊಂದು ಕಥಾನಕ.......

ಮಹಾರಾಜರು ತಮ್ಮ ಕೈಗಳನ್ನು ಹಿಂದೆ ಕಟ್ಟಿಕೊಂಡು ಅರಮನೆಯ ಮೊಗಸಾಲೆಯಲ್ಲಿ ಚಿಂತಾಕ್ರಾಂತರಾಗಿ ಅಡ್ಡಾಡುತ್ತಿದ್ದರು. ಅವರ ಹಿಂದೆ, ಕೈಗಳನ್ನು ಮುಂದೆ ಕಟ್ಟಿಕೊಂಡು, ತುಸು ಬಾಗಿ, ವಿಧೇಯತೆಯಿಂದ ಮುಖ್ಯಮಂತ್ರಿಯೂ ಅಡ್ಡಾಡುತ್ತಿದ್ದರು. ಮಹಾರಾಜರು ಯಾಕೆ ಈ ರೀತಿ ಹಿಂದೆ-ಮುಂದೆ ಅಡ್ಡಾಡುತ್ತಿದ್ದಾರೆ ಎಂಬುದು ಅವರ ಚಿಂತೆಯಾಗಿತ್ತು. ಕೊನೆಗೂ ತಡೆಯಲಾಗದೆ "ಮಹಾರಾಜರು ಏನೋ ಮಹತ್ತರವಾದ ಚಿಂತೆಯಲ್ಲಿರುವಂತಿದೆ.ವಿಷಯ ಏನೆಂದು ಹೇಳಿದರೆ ನಾನೂ ಅದರ ಬಗ್ಗೆ ಚಿಂತೆ ಮಾಡಬಹುದು" ಎಂದು ವಿನಂತಿಸಿದರು. ಹ್ಮಂ..ಹ್ಮಂ.."ಎಂದು ಮಹಾರಾಜರು ಹೊರಡಿಸಿದ ಧ್ವನಿಯ ಅರ್ಥ ಏನಿರಬಹುದು ಎಂಬುದು ಮಂತ್ರಿಗಳಿಗೆ ತಿಳಿಯಲಿಲ್ಲ. ಚಿಂತೆ ಮಾಡುತ್ತಿರುವಾಗ ಮಧ್ಯೆ ಯಾರಾದರೂ ಮಾತಾಡುವುದು ಮಹಾರಾಜರಿಗೆ ಹಿಡಿಸುತ್ತಿರಲಿಲ್ಲ. ಆದರೆ ಇವ ಬರೀ ಮುಖ್ಯ ಮಂತ್ರಿಯಲ್ಲ,ಖಾಸ ಹೆಂಡತಿಯ ತಮ್ಮ. ಹಾಗಾಗಿ ಗದರದೆ ಸುಮ್ಮನಾದರು.

"ಅಲ್ಲಯ್ಯಾ..ಹೀಗಾದರೆ ಏನು ಗತಿ?" ಇನ್ನೂ ಎರಡು ಬಾರಿ ಅತ್ತಿತ್ತ ಓಡಾಡಿದ ಅನಂತರ ಮಹಾರಾಜರು ಉದ್ಗರಿಸಿದರು. ಮಂತ್ರಿಗೆ ಏನು ವಿಷಯ ಎಂಬುದು ತಿಳಿಯಲಿಲ್ಲ. ವಿಷಯವನ್ನು ಸಂಪೂರ್ಣ ತಿಳಿಯುವ ಆಸೆಯಿಂದ "ಯಾವುದು ಹೇಗಾದರೆ ಯಾವ ಗತಿ?" ಎಂದು ಕೇಳಿದರು.

"ಬೆಲೆಗಳೆಲ್ಲ ಏರುತ್ತಿವೆಯಂತೆ.."

"ಯಾವುದರ ಬೆಲೆ?"

"ಇನ್ನ್ಯಾವುದಯ್ಯಾ..ದವಸ ಧಾನ್ಯ, ಬೇಳೆ ಕಾಳುಗಳು,ತರಕಾರಿ..."

ಮಂತ್ರಿಗಳಿಗೆ ವಿಷಯ ಇಷ್ಟೇನಾ ಅನಿಸಿತು. ವಾಸ್ತವದಲ್ಲಿ ಅವಕ್ಕೆಲ್ಲ "ಬೆಲೆ" ಎಂಬುದೊಂದು ಇರುತ್ತದೆ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವೆಲ್ಲವೂ ಸಹಜವಾಗಿ,ಸುಲಭವಾಗಿ, ಸುಮ್ಮನೆ ಸಿಗುವ ವಸ್ತುಗಳು ಎಂದು ಭಾವಿಸಿದ್ದರು.ಬೆಲೆ ಏರಿದರೆ ಮಹಾರಾಜರಿಗೆ ಯಾಕೆ ಚಿಂತೆಯಾಗಬೇಕು? ಅದು ಸರಿ,ಮಹಾರಾಜರಿಗೆ ಅದರ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು? ಮಂತ್ರಿಯಾದ ತನಗೆ ತಾನೇ ಎಲ್ಲವೂ ಮೊದಲು ತಿಳಿಯಬೇಕಾದದ್ದು? ಮಂತ್ರಿಗೆ ಈ ಚಿಂತೆ ಶುರುವಾಯಿತು.

"ಯಾರು ನಿಮಗೆ ಈ ವಿಷಯ ಹೇಳಿ ತೊಂದರೆ ಕೊಟ್ಟವರು? ಈ ಕ್ಷಣದಲ್ಲಿ ಅವರ ಶಿರಚ್ಛೇದನ ಮಾಡಿಸುತ್ತೇನೆ"

"ಮಹಾರಾಣಿ"

ಉತ್ತರ ಕೇಳಿ ಮಂತ್ರಿಗಳು ತಣ್ಣಗಾದರು. ಮಹಾರಾಣಿಯವರ ಶಿರಚ್ಛೇದ ಮಾಡಿಸುವುದೇ?ಮಾಡಿದರೆ ತನ್ನ ಕತ್ತಿನ ಮೇಲೆ ಏನುಳಿಯುತ್ತದೆ?

"ಅವರಿಗೆ ಹೇಗೆ ಗೊತ್ತಾಯಿತು?"

"ಅಡುಗೆ ಮಾಡುವವಳು"

"ಸರಿ.ಸಮಸ್ಯೆ ಬಗೆಹರಿಯಿತಲ್ಲ..ಅವಳ ಶಿರಚ್ಛೇದ ಮಾಡಿದರಾಯಿತು ಅನಂತರ ಬೆಲೆಗಳು ಏರಿದರೆ ಯಾರಿಗೂ ತಿಳಿಯುವುದಿಲ್ಲ ತಾನೇ?" ಅಂದರು.

ಮಹಾರಾಜರಿಗೆ ಕನಿಕರ ಬಂತು.ಮಂತ್ರಿಯಿಂದ ಬೇರೇನು ಉತ್ತರ ಸಾಧ್ಯ?ಬೆಳಗಿಂದ ಚಿಂತಿಸುತ್ತಿದ್ದ ಅವರಿಗೇ ಇನ್ನೂ ಉತ್ತರ ಹೊಳೆದಿರಲಿಲ್ಲ.

"ಹಾಗಲ್ಲಯ್ಯಾ..ಬೆಲೆಗಳು ಏರಿ ಬಡವರಿಗೆ ತುಂಬಾ ತೊಂದರೆ ಆಗುತ್ತಿದೆಯಂತೆ.ಅವರಿಗೆಲ್ಲ ಒಬ್ಬ ನಾಯಕ ಹುಟ್ಟಿಕೊಂಡಿದ್ದಾನಂತೆ.ಅವರು ಧರಣಿ,ರಾಸ್ತಾ ರೋಕೋ ಮಾಡುತ್ತಾರಂತೆ..ಅವರೆಲ್ಲ ಒಂದಾಗಿ ನಿಂತರೆ ನನ್ನ ಮಗನ ಪಟ್ಟಾಭಿಷೇಕಕ್ಕೆ ಜನರೆಲ್ಲಯ್ಯಾ ಇರುತ್ತಾರೆ?"

ಸಮಸ್ಯೆ ನಿಜವಾಗಲೂ ಗಂಭೀರವಾಗಿದೆ. ಎಷ್ಟು ಯೋಚಿಸಿದರೂ ಮಂತ್ರಿಗಳಿಗೆ ಬೆಲೆ ಏರಿದ್ದು, ಅಡುಗೆಯವಳು ಮಹಾರಾಣಿಗೆ ಯಾಕೆ ಹೇಳಿದ್ದು..ಮಹಾರಾಣಿಯವರು ಮಹಾರಾಜರಿಗೆ ಯಾಕೆ ಹೇಳಿದ್ದು..ಬೆಲೆ ಏರಿದರೆ ಜನರು ಯಾಕೆ ಒಟ್ಟಾಗಬೇಕು ಎಂಬುದು ತಿಳಿಯಲಿಲ್ಲ. ಒಂದು ಉಪಾಯ ಹೊಳೆಯಿತು.

"ಸ್ವಾಮೀ, ಇದರ ಕಾರಣ ತಿಳಿಯಲು ನಾವೊಂದು ಸಮಿತಿ ಮಾಡುವಾ.ಅವರು ಅದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ಕೊಟ್ಟ ಕೂಡಲೇ ಮುಂದಿನ ಕ್ರಮ ತೆಗೆದುಕೊಂಡರಾಯಿತು."

ಮಹಾರಾಜರಿಗೂ ಇದು ಒಳ್ಳೇ ಉಪಾಯ ಅನಿಸಿತು. ಅಷ್ಟಕ್ಕೂ ಎಲ್ಲ ಸಮಸ್ಯೆಗಳಿಗೂ ತಾವೇ ಚಿಂತಿಸುತ್ತ ಕೂತರೆ ರಾಜ್ಯಭಾರ ಮಾಡುವುದು ಹೇಗೆ?ಕೂಡಲೇ ಒಂದು ಸಮಿತಿ ಮಾಡುವ ಜವಾಬ್ದಾರಿಯನ್ನು ಮಂತ್ರಿಗೇ ವಹಿಸಿ,ಬೆಲೆ ಏರಿಕೆಯ ಕಾರಣವನ್ನು ಒಂದು ವಾರದಲ್ಲಿ ತಮಗೆ ತಿಳಿಸಲು ಸೂಚಿಸಿದರು.

ಅದರಂತೆ ಒಂದು ಸಮಿತಿ ರಚನೆಯಾಯಿತು. ಸಮಿತಿಗೆ ಈ ಕೆಳಕಂಡ ವಿಚಾರಗಳ ಬಗ್ಗೆ ವರದಿ ಕೊಡಲು ಸೂಚಿಸಲಾಯಿತು.

೧.ಅಡುಗೆಯವಳಿಗೆ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು?

೨.ಅವಳು ಅದನ್ನು ಮಹಾರಾಣಿಯವರಿಗೆ ತಿಳಿಸಲು ಕಾರಣಗಳೇನು?

೩.ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

Wednesday, July 28, 2010

ಸ್ವರ್ಗ-ನರಕ

ಸ್ವರ್ಗ-ನರಕ

ಮೂರನೆಯ ಕ್ರಾಸಿನ ಕೊನೆಯಲ್ಲಿ ಮುರುಕು ಗುಡಿಸಲಿದೆ.ಈ ಮುರುಕು ಗುಡಿಸಲು ಯಾರಿದ್ದು?ಗೊತ್ತಿಲ್ಲ. ಎಲ್ಲ ಮನುಷ್ಯರಿಗೂ ಚರಿತ್ರೆ ಇರುವುದಿಲ್ಲ.ಅಲ್ಲಿ ಈ ನಾಯಿಮರಿಯ ವಾಸ. ಅದಕ್ಕೆ ಅಪ್ಪ,ಅಮ್ಮ, ಅಣ್ಣ ಇತ್ಯಾದಿ ಯಾರೂ ಇಲ್ಲ. ಇದೇ ಕ್ರಾಸಿನ ಮತ್ತೊಂದು ತುದಿಯಲ್ಲಿ  "ಸರಕಾರಿ ಹೆಣ್ಣುಮಕ್ಕಳ ಕಿರಿಯ ಪ್ರಾಥಮಿಕ ಶಾಲೆ" ಇದೆ.ಬೆಳಗಿಂದ ಸಾಯಂಕಾಲದವರೆಗೂ ಈ ಮರಿಯೂ ಶಾಲೆಯ ಬಳಿ ಇರುತ್ತಿತ್ತು.ಕಾರಣ: ಪುಟ್ಟ ಹುಡುಗಿಯರು ಅದಕ್ಕೆ ಚೂರುಪಾರು ತಿಂಡಿ,ಬಿಸ್ಕತ್ ಇತ್ಯಾದಿ ಕೊಡುವುದು.ಭಾನುವಾರ ಮಾತ್ರ ಅದಕ್ಕೆ ಪರದಾಟ.ಶಾಲೆಗೆ ರಜಾ:ಮರಿಯ ಹಸಿವಿಗೆ ರಜಾ ಇಲ್ಲ.
ಇಂಥ ಒಂದು ಭಾನುವಾರ ಮರಿ ತನ್ನ ಕ್ಷೇತ್ರವಾದ ಎರಡನೆಯ ಕ್ರಾಸನ್ನು ದಾಟಿ ಮೂರನೆಯ ಕ್ರಾಸು ಸೇರಿತು. ಅಲ್ಲಿ ಪುಟ್ಟ ಮಕ್ಕಳ ಗುಂಪು ಕಾಣಬಹುದು ಎಂಬ ಆಸೆ. ಹಾಗೇ ಮುಂದುವರಿದು ಬರುತ್ತಿರುವಾಗ ದೊಡ್ಡದಾದ ಒಂದು ಮನೆ ಕಂಡಿತು. ಗೇಟಿನ ಹತ್ತಿರ ಒಂದು ಪುಟ್ಟ ಮನೆಯೂ ಅದರಲ್ಲಿ ಈ ಮರಿಗೆ ಅಶ್ಚರ್ಯ ಹುಟ್ಟಿಸುವಂತೆ ಒಂದು ನಾಯಿಮರಿಯೂ ಕಂಡಿತು.ಎಲಾ! ಈ ಮರಿಗೆ ತನ್ನದೇ ಆದ ಒಂದು ಸುಂದರವಾದ ಮನೆ ಉಂಟಲ್ಲ! ಜೊತೆಗೇ ಮೂಲೆಯಲ್ಲಿದ್ದ ಬಟ್ಟಲಲ್ಲಿ ತುಂಬಿಟ್ಟಿದ್ದ ಆಹಾರ! ಅದರೊಳಗಿದ್ದ ಮರಿ ಕಾಲು ಚಾಚಿ ಹಾಯಾಗಿ ಮಲಗಿತ್ತು.ಈ ಮರಿ ಅದನ್ನು ಅಸೂಯೆಯಿಂದ ನೋಡಿತು. "ಎಂತಹ ಭಾಗ್ಯ!ಬೇಕಾದಾಗ ಎದ್ದು ಆಹಾರ ತಿಂದು ಮಲಗಿದರಾಯಿತು.ತನಗೆ ಇಂತಹ ಭಾಗ್ಯ ಇಲ್ಲ."ಎಂದು ಚಿಂತಿಸಿತು ಮರಿ. ತನ್ನ ಬಗ್ಗೆ ತಾನೇ ಮರುಕಪಟ್ಟಿತು. ತುಸು ಹೊತ್ತು ಅಲ್ಲೇ ನೋಡಿ ತನಗೂ ಇಂತಹ ಮನೆ ಸಿಕ್ಕರೆ..ಅದೇ ಸ್ವರ್ಗ ಎಂದು ಅಂದುಕೊಂಡಿತು.ಮನಸ್ಸು ಉದಾಸಗೊಂಡಿತು. ಕಾಲೆಳೆಯುತ್ತಾ ನಿಧಾನವಾಗಿ ತನ್ನ ಮುರುಕು ಗುಡಿಸಲತ್ತ ನಡೆಯಿತು.ಅದಕ್ಕೆ ಈಗ ಆ ಗುಡಿಸಲು ನರಕದಂತೆ ಕಾಣತೊಡಗಿತು.
ಇತ್ತ ದೊಡ್ಡ ಮನೆಯ ಗೇಟಿನ ಬಳಿ ಇದ್ದ ಪುಟ್ಟ ಮನೆಯಲ್ಲಿ ಮಲಗಿದ್ದ ಮರಿ ಕೋರೆಗಣ್ಣಲ್ಲಿ ರಸ್ತೆಯಲ್ಲಿ ಬಂದು,ನಿಂತು ನೋಡಿ ಹೋದ ಮರಿಯನ್ನು ಗಮನಿಸಿತು.ಅದು ಅತ್ತ ಇತ್ತ ಓಡಾಡಿದ್ದು,ತನ್ನತ್ತ ನೋಡಿದ್ದು ಎಲ್ಲವನ್ನೂ ಗಮನಿಸಿತು."ಈ ಮನೆಯಲ್ಲಿ ಕೂಡಿ ಹಾಕಿರುವ ತನ್ನನ್ನು ನೋಡಿ ಆ ಮರಿ ಏನು ಅಂದುಕೊಂಡಿತೋ..ತನ್ನ ಬಗ್ಗೆ ಮರುಕ ಬಂದಿರಬಹುದು.. ಛೆ..ಆ ಮರಿಯದ್ದು ಎಂತಹ ಭಾಗ್ಯ! ಎಲ್ಲಿ ಬೇಕಾದರೂ ಹೋಗಬಹುಗು..ಏನು ಬೇಕಾದರೂ ತಿನ್ನಬಹುದು..ಎಂತಹ ಸ್ವಾತಂತ್ರ್ಯ! ತನಗಿಲ್ಲ..ಹಾಕಿದ್ದನ್ನು ಹಾಕಿದಾಗ ತಿನ್ನ ಬೇಕು..ಮನಸ್ಸು ಬಂದಾಗ ಕೂಗುವಂತೆಯೂ ಇಲ್ಲ....ಆ ಮರಿಯೇ ಪುಣ್ಯ ಮಾಡಿದೆ.. ಸ್ವರ್ಗದಲ್ಲಿದೆ.."ಎಂದು ಚಿಂತಿಸಿತು. ಮನಸ್ಸು ಉದಾಸವಾಯಿತು. ಆ ಮನೆ ಅದಕ್ಕೆ ನರಕದಂತೆ ಕಾಣತೊಡಗಿತು.

Tuesday, July 27, 2010

ಬೇರು





ಬೇರು ಊರದಿರೆ ಮಣ್ಣಲ್ಲಿ ಚಿಗುರೀತೆ ಕೊಂಬೆ
ಬಿಟ್ಟೀತೆ ಹೂವು,ಕಾಯಿ, ಹಣ್ಣು
ಹೀರದಿರೆ ಬೇರು ಮಣ್ಣನಿನೊಳಗಿನ ಸಾರ
ಆಗುವುದು ಗಿಡವು ಮಣ್ಣಲ್ಲಿ ಮಣ್ಣು.

ಕೆಲರು ನೋಡುವರು ಹೂವನ್ನ,ಕೆಲರು ಕಾಯನ್ನ
ಎಲ್ಲರಿಗೂ ಬೇಕು  ಹಣ್ಣು
ಮಣ್ಣಿನೊಳಗಡೆ ಬಗೆದು ನೋಡುವವರಾರು
ಬೇಕದಕೆ ಸೂಕ್ಷ್ಮ ಕಣ್ಣು.

ಹೂವಾಗುವುದು ಸಹಜ,ಕಾಯಾಗುವುದು ಸಹಜ
ಮಾಗಿದರೆ ಸಹಜ ಹಣ್ಣು
ಬಂದು ಮುತ್ತುವುವು ಎಷ್ಟೆಲ್ಲ ಜೀವಗಳು
ಮರ ಬೋಳಾಗುವುದೂ ಸಹಜವೆನ್ನು

ಹೂವಾಗು ನೀ ಗೆಳೆಯ ಕಾಯಾಗು ಹಣ್ಣಾಗು
ನಡೆದಿರಲಿ ಜೀವದಾನ
ಮರೆಯದಿರು ಎಂದೆಂದೂ ಬೇರನ್ನ,ಮಣ್ಣನ್ನ
ಅದಕ್ಕೂ ಇರಲಿ ಸ್ಥಾನಮಾನ.

Friday, July 23, 2010

ಕಂಬಳಿ ಕೊಪ್ಪೆ

ಚಿಕ್ಕವನಿದ್ದಾಗ ಶಾಲೆ ಎಂದರೆ
ಬಳಪ,ಪೆನ್ಸಿಲ್ ತುಂಡು,ಸಂಪಿಗೆ ಹಣ್ಣು
ಸದಾ ತೆರೆದ ಕಣ್ಣು.

ಮಳೆಗಾಲದಲ್ಲಿ ನೀರ ಬುಗ್ಗೆ
ಅಂಗಿಚಡ್ಡಿ ಸದಾ ಒದ್ದೆ
[ಹುಡಿಗೀರ ಲಂಗವೂ]

ಆಗ ಕೊಡೆಗಾಗಿ ಹಠ
ಕೊಡೆ ಕೊಡೆ ಎಂದಪ್ಪನ ಮೇಲೆ ಸಿಟ್ಟು
ಕಳೆಯುತ್ತಿದ್ದೆ ನಾಲ್ಕು ದಿನ ಮಾತು ಬಿಟ್ಟು

ಕಡೆಗೆ ಅಪ್ಪ ಕರಿಕಂಬಳಿ ಕೊಪ್ಪೆ ಮಾಡಿ ಕೊಟ್ಟರು
ಹೊದ್ದರೆ ಬೆಚ್ಚಗಿನಪ್ಪುಗೆ.
ಅತ್ತಿತ್ತ ನೋಟವಿಲ್ಲ. ಎದುರು ಮಾತ್ರ ಕಾಂಬ ರಸ್ತೆ.
ನೇರ ಶಾಲೆಗೆ.

ಮಗಳಿಗೆ ಹೇಳಿದರೆ ನಕ್ಕು ಹೇಳಿದಳು
ಅಪ್ಪ ಈಗಿನ ಕಾಲವೇ ಬೇರೆ
ಈಗೆಲ್ಲ ಬಣ್ಣದ ಕೊಡೆಗಳ ಲೀಲೆ
ಸುತ್ತಮುತ್ತೆಲ್ಲ ಕಾಣುವ ಹಾಗೆ
[ನಾನೂ ಎಲ್ಲರಿಗೂ ಕಾಣಬೇಕು ಹಾಗೇ]

ನನಗೆ ನಾನು ಖರೀದಿಸಿದ ಕೊಡೆಗಿಂತ
ಅಪ್ಪ ಕೊಟ್ಟ ಕರಿಕಂಬಳಿ ಸುಖ
ಒಂಟಿಯಾಗಿ, ಗುಟ್ಟಾಗಿ ಹೊದ್ದು ಕೂರುತ್ತೇನೆ
ನಾನೇ ಆಗ ನನ್ನ ಮುಖ.

Thursday, July 8, 2010

ನಮಸ್ಕಾರ

ಬೇದೂರು ಅದಿತ್ಯನಿಗೆ ಒಂದು ನಮಸ್ಕಾರ ಹೇಳಬೇಕು. ಕಾರಣ ಇಷ್ಟೆ: ನನ್ನ ಬರಹಪ್ಯಾಡ್ನಲ್ಲಿ ಏನೇ ಬರೆದರೂ ಬರೀ ಚೌಕ ಬರತೊಡಗಿತು. ಬಹುಷಃ ನನ್ನ ಲೇಖನಗಳನ್ನು ಪದಕ್ಕಿಳಿಸುವ ಅಗತ್ಯವಿಲ್ಲ ಎಂದು ಗಣಕವೆ ವಿಮರ್ಶಿಸಿರಬಹುದು. ನನ್ನ ಓದುಗರು ನೆಮ್ಮದಿಯಿಂದ ಇದ್ದರು. ಅದಿತ್ಯನಿಗೆ  ಹೀಗಾಗುತ್ತೆ ಮಾರಾಯಾ ಅಂದ ಕೂಡಲೆ ಸರಿಮಾಡಿಕೊಟ್ಟ. ಅದಕ್ಕಾಗಿ ನನ್ನ ನಮಸ್ಕಾರ ಅವನಿಗೆ. ಅವನ ಈ ಅತ್ಯುತ್ಸಾಹದ ಕೆಲಸದಿಂದ ನಿಮಗೆ ಆಗುವ ನೆಮ್ಮದಿ ಭಂಗಕ್ಕೆ ಅವನನ್ನೇ ದೂರಬಹುದು!

Sunday, July 4, 2010

...????

ಬಹಳ ದಿನಗಳಿಂದ ಬರೆದಿಲ್ಲ. ಅಪರೂಪಕ್ಕೆ ನನ್ನ ಬ್ಲಾಗಿಗೆ ಬರುವವರಿಗೆ ನೆಮ್ಮದಿಯಾಗಿದೆ. ಎಲ್ಲ ಆರಾಮಾಗಿದ್ದಾರೆ ಎಂದು ಸುದ್ದಿ. ಅವರು ಆರಾಮಿಗಿರಬೇಕು ಎಂಬುದಕ್ಕಾಗಿ ನಾನು ಬರೆಯದೆ ಬಿಟ್ಟಿದ್ದಲ್ಲ. ನಾನು ಕನ್ನಡದಲ್ಲಿ ಟೈಪಿಸಿ ಬ್ಲಾಗಿಗೆ ಹಾಕಿದರೆ ಅಲ್ಲಿ ಅದು ಯಾವುದೋ ಅವತಾರದಲ್ಲಿ ಕಾಣಿಸುತ್ತೆ. ಹೇಗೆ ಸರಿ ಮಾಡುವುದು? ಇದಾದರೂ ಸರಿಯಾಗಿ ಕನ್ನಡದಂತೆಯೇ ಕಾಣಿಸುತ್ತ? ಹೇಳಿ.