Wednesday, July 28, 2010

ಸ್ವರ್ಗ-ನರಕ

ಸ್ವರ್ಗ-ನರಕ

ಮೂರನೆಯ ಕ್ರಾಸಿನ ಕೊನೆಯಲ್ಲಿ ಮುರುಕು ಗುಡಿಸಲಿದೆ.ಈ ಮುರುಕು ಗುಡಿಸಲು ಯಾರಿದ್ದು?ಗೊತ್ತಿಲ್ಲ. ಎಲ್ಲ ಮನುಷ್ಯರಿಗೂ ಚರಿತ್ರೆ ಇರುವುದಿಲ್ಲ.ಅಲ್ಲಿ ಈ ನಾಯಿಮರಿಯ ವಾಸ. ಅದಕ್ಕೆ ಅಪ್ಪ,ಅಮ್ಮ, ಅಣ್ಣ ಇತ್ಯಾದಿ ಯಾರೂ ಇಲ್ಲ. ಇದೇ ಕ್ರಾಸಿನ ಮತ್ತೊಂದು ತುದಿಯಲ್ಲಿ  "ಸರಕಾರಿ ಹೆಣ್ಣುಮಕ್ಕಳ ಕಿರಿಯ ಪ್ರಾಥಮಿಕ ಶಾಲೆ" ಇದೆ.ಬೆಳಗಿಂದ ಸಾಯಂಕಾಲದವರೆಗೂ ಈ ಮರಿಯೂ ಶಾಲೆಯ ಬಳಿ ಇರುತ್ತಿತ್ತು.ಕಾರಣ: ಪುಟ್ಟ ಹುಡುಗಿಯರು ಅದಕ್ಕೆ ಚೂರುಪಾರು ತಿಂಡಿ,ಬಿಸ್ಕತ್ ಇತ್ಯಾದಿ ಕೊಡುವುದು.ಭಾನುವಾರ ಮಾತ್ರ ಅದಕ್ಕೆ ಪರದಾಟ.ಶಾಲೆಗೆ ರಜಾ:ಮರಿಯ ಹಸಿವಿಗೆ ರಜಾ ಇಲ್ಲ.
ಇಂಥ ಒಂದು ಭಾನುವಾರ ಮರಿ ತನ್ನ ಕ್ಷೇತ್ರವಾದ ಎರಡನೆಯ ಕ್ರಾಸನ್ನು ದಾಟಿ ಮೂರನೆಯ ಕ್ರಾಸು ಸೇರಿತು. ಅಲ್ಲಿ ಪುಟ್ಟ ಮಕ್ಕಳ ಗುಂಪು ಕಾಣಬಹುದು ಎಂಬ ಆಸೆ. ಹಾಗೇ ಮುಂದುವರಿದು ಬರುತ್ತಿರುವಾಗ ದೊಡ್ಡದಾದ ಒಂದು ಮನೆ ಕಂಡಿತು. ಗೇಟಿನ ಹತ್ತಿರ ಒಂದು ಪುಟ್ಟ ಮನೆಯೂ ಅದರಲ್ಲಿ ಈ ಮರಿಗೆ ಅಶ್ಚರ್ಯ ಹುಟ್ಟಿಸುವಂತೆ ಒಂದು ನಾಯಿಮರಿಯೂ ಕಂಡಿತು.ಎಲಾ! ಈ ಮರಿಗೆ ತನ್ನದೇ ಆದ ಒಂದು ಸುಂದರವಾದ ಮನೆ ಉಂಟಲ್ಲ! ಜೊತೆಗೇ ಮೂಲೆಯಲ್ಲಿದ್ದ ಬಟ್ಟಲಲ್ಲಿ ತುಂಬಿಟ್ಟಿದ್ದ ಆಹಾರ! ಅದರೊಳಗಿದ್ದ ಮರಿ ಕಾಲು ಚಾಚಿ ಹಾಯಾಗಿ ಮಲಗಿತ್ತು.ಈ ಮರಿ ಅದನ್ನು ಅಸೂಯೆಯಿಂದ ನೋಡಿತು. "ಎಂತಹ ಭಾಗ್ಯ!ಬೇಕಾದಾಗ ಎದ್ದು ಆಹಾರ ತಿಂದು ಮಲಗಿದರಾಯಿತು.ತನಗೆ ಇಂತಹ ಭಾಗ್ಯ ಇಲ್ಲ."ಎಂದು ಚಿಂತಿಸಿತು ಮರಿ. ತನ್ನ ಬಗ್ಗೆ ತಾನೇ ಮರುಕಪಟ್ಟಿತು. ತುಸು ಹೊತ್ತು ಅಲ್ಲೇ ನೋಡಿ ತನಗೂ ಇಂತಹ ಮನೆ ಸಿಕ್ಕರೆ..ಅದೇ ಸ್ವರ್ಗ ಎಂದು ಅಂದುಕೊಂಡಿತು.ಮನಸ್ಸು ಉದಾಸಗೊಂಡಿತು. ಕಾಲೆಳೆಯುತ್ತಾ ನಿಧಾನವಾಗಿ ತನ್ನ ಮುರುಕು ಗುಡಿಸಲತ್ತ ನಡೆಯಿತು.ಅದಕ್ಕೆ ಈಗ ಆ ಗುಡಿಸಲು ನರಕದಂತೆ ಕಾಣತೊಡಗಿತು.
ಇತ್ತ ದೊಡ್ಡ ಮನೆಯ ಗೇಟಿನ ಬಳಿ ಇದ್ದ ಪುಟ್ಟ ಮನೆಯಲ್ಲಿ ಮಲಗಿದ್ದ ಮರಿ ಕೋರೆಗಣ್ಣಲ್ಲಿ ರಸ್ತೆಯಲ್ಲಿ ಬಂದು,ನಿಂತು ನೋಡಿ ಹೋದ ಮರಿಯನ್ನು ಗಮನಿಸಿತು.ಅದು ಅತ್ತ ಇತ್ತ ಓಡಾಡಿದ್ದು,ತನ್ನತ್ತ ನೋಡಿದ್ದು ಎಲ್ಲವನ್ನೂ ಗಮನಿಸಿತು."ಈ ಮನೆಯಲ್ಲಿ ಕೂಡಿ ಹಾಕಿರುವ ತನ್ನನ್ನು ನೋಡಿ ಆ ಮರಿ ಏನು ಅಂದುಕೊಂಡಿತೋ..ತನ್ನ ಬಗ್ಗೆ ಮರುಕ ಬಂದಿರಬಹುದು.. ಛೆ..ಆ ಮರಿಯದ್ದು ಎಂತಹ ಭಾಗ್ಯ! ಎಲ್ಲಿ ಬೇಕಾದರೂ ಹೋಗಬಹುಗು..ಏನು ಬೇಕಾದರೂ ತಿನ್ನಬಹುದು..ಎಂತಹ ಸ್ವಾತಂತ್ರ್ಯ! ತನಗಿಲ್ಲ..ಹಾಕಿದ್ದನ್ನು ಹಾಕಿದಾಗ ತಿನ್ನ ಬೇಕು..ಮನಸ್ಸು ಬಂದಾಗ ಕೂಗುವಂತೆಯೂ ಇಲ್ಲ....ಆ ಮರಿಯೇ ಪುಣ್ಯ ಮಾಡಿದೆ.. ಸ್ವರ್ಗದಲ್ಲಿದೆ.."ಎಂದು ಚಿಂತಿಸಿತು. ಮನಸ್ಸು ಉದಾಸವಾಯಿತು. ಆ ಮನೆ ಅದಕ್ಕೆ ನರಕದಂತೆ ಕಾಣತೊಡಗಿತು.

3 comments:

ಪ್ರಗತಿ ಹೆಗಡೆ said...

ಕಥೆ ಚೆನ್ನಾಗಿದೆ... ನಮ್ಮಲ್ಲಿ ಒಂದು ಗಾದೆ ಇದೆ: '' ಅಜ್ಜ ತಿನ್ನೋ ರೊಟ್ಟಿ ಸಿಹಿ'' ಅಂತ, ಹಾಗಾಯ್ತು ನಾಯಿಮರಿ ಕಥೆ... ಇರುವುದೆಲ್ಲವ ಬಿಟ್ಟು ಇರದದುರೆಡೆ ತುಡಿವುದೇ ಜೀವನ ಅಂತಾರಲ್ಲ ಹಾಗೆ...

ಮೃತ್ಯುಂಜಯ ಹೊಸಮನೆ said...

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?" ಅಡಿಗರದ್ದು ಹೇಳಿಕೆ ಅಥವಾ ತೀರ್ಮಾನವಲ್ಲ, ಅನುಮಾನ. ಆತ್ಮ ಮನಸ್ಸಿನ ಚರ್ಯೆಗಳನ್ನು ಶೋಧಿಸುತ್ತ ಕೇಳುವ ರೀತಿಯಲ್ಲಿ ಕವನ ಬೆಳೆಯುವುದನ್ನು ನೀವು ಗಮನಿಸಿರಬಹುದು.ಒಂದು ಪ್ರಶ್ನಾರ್ಥಕ ಚಿಹ್ನೆ ಕೂಡ ಇಷ್ಟು ಧ್ವನಿ ಹುಟ್ಟಿಸುತ್ತದಲ್ಲ ಎಂಬುದೇ ನನ್ನ ಬೆರಗು.

ದಿನಕರ ಮೊಗೇರ said...

nimma baravaNige tumbaa ishtavaaytu sir..... heege bareyuttaa iri.... dhanyavaada...

nanna blog manege banni...