Saturday, October 30, 2010

ವಂಶವನರುಹಿ ಕೊಂದನು..

.
ತನ್ನ ಹುಟ್ಟಿನ ಮಾಹಿತಿಯನ್ನು ಕೃಷ್ಣನಿಂದ ತಿಳಿದ ಸಂದರ್ಭವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯನ್ನು ವಿವರಿಸಿ,ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.
ಸಂಧಾನದ ಪ್ರಯತ್ನ ವಿಫಲವಾದ ಅನಂತರ,ಕೌರವನ ಸಭೆಯಿಂದ ಹೊರಟ ಕೃಷ್ಣ ಕರ್ಣನನ್ನು ಕರೆದು ರಥವೇರಿಸಿಕೊಳ್ಳುತ್ತಾನೆ."ಮೈದುನತನದ ಸರಸವನೆಸಗಿ ರಥದೊಳು ದನುಜರಿಪು ಕುಳ್ಳಿರಿಸಿದನು ಪೀಠದಲಿ".ಕರ್ಣನಿಗೆ ಭಯ, ವಿಸ್ಮಯ, ಗಾಬರಿ. " ಎನಗೆ ನಿಮ್ಮಡಿಗಳಲಿ ಸಮಸೇವನೆಯೇ ದೇವ ಮುರಾರಿಯಂಜುವೆ"  " ವಂಶವಿಹೀನನು ನಿಮ್ಮಡಿಗಳೊಡನೆ ಸಮಾನಿಸುವರೇ " ಎಂದಾಗ ಕೃಷ್ಣ ಅವನಿಗೆ ಅವನ ಜನ್ಮದ ವಿವರಣೆ ನೀಡುತ್ತಾನೆ."ಲಲನೆ ಪಡೆದೀಯೈದು ಮಂತ್ರಗಳಲಿ ಮೊದಲಿಗ ನೀನು". ನೀನು ಎಲ್ಲರಿಗೂ ಹಿರಿಯ.ನೀನೊಪ್ಪಿದರೆ ಈ ಯುದ್ಧವನ್ನು ತಪ್ಪಿಸಬಹುದು."ಪಾಂಡವರಲೈವರ ಮೊದಲಿಗನು ನೀನಿರಲು ಧರಣಿಯ ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು". ಅಷ್ಟೇ ಅಲ್ಲ ಅವನಿಗೆ ಪ್ರಲೋಭನೆ ಒಡ್ಡುತ್ತಾನೆ. "ನಿನಗೆ ಕಿಂಕರವೆರಡು ಸಂತತಿ" "ಎಡದ ಮೈಯಲಿ ಕೌರವೇಂದ್ರರ ಗಡಣ ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳುಪ್ಪುವ ಕಡು ವಿಲಾಸವ ಬಿಸುಟು ಕುರುಪತಿ ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ" ತಾನು ಕುಲವಿಹೀನ ಎಂಬ ಕೀಳರಿಮೆಯಿಂದ ಬಳಲುತ್ತಿದ್ದ ಕರ್ಣ ಈ ಆಹ್ವಾನವನ್ನು ಒಪ್ಪಿದ್ದರೆ ಆತನಿಗೆ ಕುಲವೂ ಸಿಗುತ್ತಿತ್ತು, ಅಧಿಕಾರವೂ ಸಿಗುತ್ತಿತ್ತು. ಆದರೆ ಹಾಗಾಗುವುದಿಲ್ಲ. ಕರ್ಣನ ಪ್ರತಿಕ್ರಿಯೆ ಗಮನಿಸಿ.ಕರ್ಣನ ಕಂಠ ಬಿಗಿಯಿತು. ಕಣ್ಣೀರು ಉಕ್ಕಿತು."ಕೊರಳಸೆರೆ ಹಿಗ್ಗಿದವು ದೃಗುಜಲ ಉರವಣಿಸಿ ಕಡು ನೊಂದನಕಟಾ ಕುರುಪತಿಗೆ ಕೇಡಾದುದೆಂದನು ಮನದೊಳಗೆ" ಸತ್ಕುಲಜಾತನಾದ ತನಗೆ ಇಲ್ಲಿಯವರೆಗೂ ಬಂದ ಕಷ್ಟಗಳ ನೆನದು ದುಃಖವಾದದ್ದಲ್ಲ,...ಅಯ್ಯೋ.! ಕುರುಪತಿಗೆ ಕೇಡಾಯಿತಲ್ಲ! ಎಂದು.ಅಧಿಕಾರ ಸಿಗುತ್ತದೆ ಎಂಬ ಸಂತೋಷವಿಲ್ಲ. ಗೆಳೆಯನಿಗೆ ಅನ್ಯಾಯವಾಯಿತಲ್ಲ ಎಂಬುದು ಅವನ ಮೊದಲ ಪ್ರತಿಕ್ರಿಯೆ. ಕರ್ಣನಿಗೆ ಅವನ ವಂಶ ತಿಳಿದರೆ ಕೌರವನಿಗೆ ಹೇಗೆ ಅನ್ಯಾಯವಾಗುತ್ತದೆ? "ಕಾದಿ ಗೆಲುವೊಡೆ ಪಾಂಡು ಸುತರು ಸಹೋದರರು ಕೊಲಲಿಲ್ಲ ಕೊಲ್ಲದೆ ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ."  ವಂಶ ತಿಳಿದ ಅನಂತರ, ಸಹೋದರರಾದ ಪಾಂಡವರನ್ನು ಕೊಲ್ಲುವ ಹಾಗಿಲ್ಲ. ಕೊಲ್ಲದಿದ್ದರೆ ಕೌರವನಿಗೆ ಅವನಿ ಇಲ್ಲ. ಇಲ್ಲಿ "ಕೊಲ್ಲದೆ ಕಾದೆನಾದೊಡೆ" ಎಂಬ ಪ್ರಯೋಗ ಗಮನಿಸಬೇಕು.ಕಾದು ಎಂಬ ಪದಕ್ಕೆ ಕಾಳಗ ಮಾಡು ಎಂಬ ಅರ್ಥವಲ್ಲದೆ ಕಾಪಾಡು ಎಂಬ ಅರ್ಥವೂ ಇದೆ. ಆದ್ದರಿಂದ ಈ ಹೇಳಿಕೆಯನ್ನು ಪಾಂಡವರನ್ನು ಕೊಲ್ಲದೆ ಯುದ್ಧ ಮಾಡಿದರೆ ಎಂಬಂತೆಯೂ, ಹಾಗೆಯೇ ಪಾಂಡವರನ್ನು ಕೊಲ್ಲದೆ ರಕ್ಷಿಸಿದರೆ ಎಂಬಂತೆಯೂ ಅರ್ಥ ಮಾಡಬಹುದು. ಯಾವರೀತಿಯಲ್ಲಿ ಕರ್ಣ ವರ್ತಿಸಿದರೂ "ಕೌರವಂಗವನಿಯಲಿ ಹೊಗಲಿಲ್ಲ." ಕೌರವನಿಗೆ ಕೇಡಾಗುತ್ತದೆ ಎಂದು ಕರ್ಣನಿಗೆ ಅನ್ನಿಸಲು ಇದು ಕಾರಣ.
 ಕರ್ಣನ ಮುಂದಿನ ಪ್ರತಿಕ್ರಿಯೆ: "ತನ್ನ ವಂಶವನರುಹಿ ಕೊಂದನು". ವಂಶ ತಿಳಿಯಿತು ಎಂಬ ಸಂಭ್ರಮವಿಲ್ಲ, ಬದಲಿಗೆ ಆದದ್ದು ಚಿಂತೆ.  ವಂಶವನ್ನರುಹಿ ಯಾರನ್ನು ಕೊಂದ? ವಂಶ ತಿಳಿದರೆ ಕರ್ಣ ಯಾಕೆ ಸಾಯಬೇಕು? ಯಾಕೆಂದರೆ ಇನ್ನು ಮುಂದೆ ಕರ್ಣನಿಗೆ ಅರ್ಜುನ ವೈರಿಯಲ್ಲ,ತಮ್ಮ. "ವಿಜಯನಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ". ತಮ್ಮ ಎಂದು ತಿಳಿದೂ ಕರ್ಣ ಹೇಗೆ ಕೊಲ್ಲಬಲ್ಲ? ಹಾಗಂತ ತಾನು ಅರ್ಜುನನನ್ನು ಕೊಲ್ಲದಿದ್ದರೆ ಅರ್ಜುನ ಅಂತೂ ತನ್ನನ್ನು ಬಿಡುವವನಲ್ಲ. ಹಾಗಾಗಿ ಸಾವು ನಿಶ್ಚಿತ. ಕರ್ಣನ ಮಟ್ಟಿಗೆ ತನ್ನ ಹುಟ್ಟಿನ ಬಗೆಗಿನ ಅರಿವು ಸಾವಿನ ಕಾರಣವಾಗುತ್ತಿದೆ ಎಂಬ ಧ್ವನಿಯನ್ನು ತುಂಬಾ ಸರಳವಾದ "ವಂಶವನರುಹಿ ಕೊಂದನು" ಎಂಬ ಹೇಳಿಕೆಯ ಮೂಲಕ ಕುಮಾರವ್ಯಾಸ ಸೂಚಿಸುತ್ತಾನೆ.
(ಕೌರವ ಮತ್ತು ಕರ್ಣ ಇವರದು ಬಹಳ ಆಪ್ತವಾದ ಸ್ನೇಹ ಎಂಬುದು ನಮಗೆ ಗೊತ್ತು.  ಸ್ನೇಹದ ತೀವ್ರತೆಯಿಂದಾಗಿಯೇ ಕರ್ಣನ ಮೊದಲ ಪ್ರತಿಕ್ರಿಯೆ " ಕುರುಪತಿಗೆ ಕೇಡಾದುದು".
 ಇವರಿಬ್ಬರ ಸ್ನೇಹದ ಬಗ್ಗೆ ಬೇರೆಯವರಿಗೂ ಯಾವ ಭಾವನೆಯಿತ್ತು ಎಂಬುದರ ಸೊಗಸಾದ ಚಿತ್ರಣ ಇಲ್ಲಿದೆ; ಕರ್ಣನ ಮರಣಾನಂತರ ಕೃಪ ಹೇಳುವ ಮಾತು:
"ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹು ವಿಕ್ರಮವ ||
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ || ---ಶಲ್ಯಪರ್ವ, ೧-೧೬.)
ಯಾರೇನು ಹೇಳಿದರೂ, ತಾನು ಯಾವ ವಂಶಜನಾದರೂ ಅರ್ಜುನನನ್ನು ಕೊಲ್ಲುತ್ತೇನೆ ಎಂದು ಕರ್ಣ ತೀರ್ಮಾನಿಸದೆ ತನ್ನ ಸಾವನ್ನು ಯಾಕೆ ನಿಶ್ಚಯಿಸಿದ? ಆತ ಕೃಷ್ಣನಿಗೆ ಹೇಳುವ ಮಾತನ್ನು ಗಮನಿಸಿ: "ಹಲವು ಮಾತೇನಖಿಳ ಜನಕೆನ್ನುಳಿವು ಸೊಗಸದು". ಕೌರವನನ್ನು ಹೊರತುಪಡಿಸಿ ಉಳಿದೆಲ್ಲರಿಂದಲೂ ಸದಾ ಅವಮಾನವನ್ನು ಅನುಭವಿಸುತ್ತಿದ್ದ,ಭರ್ತ್ಸನವನ್ನೇ ಕೇಳುತ್ತಿದ್ದ ಕರ್ಣನಿಗೆ ಅನ್ನಿಸಿತ್ತು: ಯಾರಿಗೂ ತನ್ನ ಬದುಕು ಇಷ್ಟವಿಲ್ಲ. ಹಾಗಾಗಿ ತನಗೂ ಬದುಕು ಬೇಡ. (ಉಳಿವು= ಬದುಕು, ಜೀವನ). ಕೃಷ್ಣ ವಂಶವನ್ನು ತಿಳಿಸಿದಾಗ ತಾನು ಬದುಕುವುದು ಕೃಷ್ಣನಿಗೂ ಇಷ್ಟವಿಲ್ಲ ಎಂದು ಕರ್ಣನಿಗೆ ಅನಿಸಿರಬೇಕು. ತನ್ನ ಸಾವು ಕೃಷ್ಣನ ಗುರಿಯಾಗಿರುವುದರಿಂದಲೇ "ವಂಶವನರುಹಿ ಕೊಂದನು". ಎಂದು ಕರ್ಣನಿಗೆ ಅನ್ನಿಸುತ್ತದೆ. ತನ್ನ ಸಾವನ್ನು ನಿಶ್ಚಯಿಸಿಕೊಂಡ ಬಳಿಕ ಕರ್ಣ ಕೃಷ್ಣನಿಗೆ ಭರವಸೆ ಕೊಡುತ್ತಾನೆ: "ಪತಿಯವಸರಕ್ಕೆ ಶರೀರವನು ನೂಕುವೆನು ನಿನ್ನಯ ವೀರರೈವರ ನೋಯಿಸೆನು "(ಕಾದಿ ಕೊಲುವೊಡೆ) ಪಾಂಡುಸುತರು ಸಹೋದರರು ಎಂಬ ಭಾವನೆ ,ತನ್ನ ಸಾವನ್ನು ನಿಶ್ಚಯಿಸಿದ ಅನಂತರ ಬದಲಾಗುತ್ತದೆ. "ನಿನ್ನಯ ವೀರರೈವರು" ಎನ್ನುತ್ತಾನೆ. ಆ ಐವರ ಮಾತ್ರ ನಿನ್ನವರು, ನಾನು ಅದೇ ವಂಶಜನಾದರೂ ನಿನ್ನವನಲ್ಲ ಎಂಬ ಧ್ವನಿಯನ್ನೂ ಗಮನಿಸಬಹುದು.ಕೌರವ ಸತ್ತು ತಾನುಳಿದರೂ ತನಗೆ ಆಪ್ತರಿಲ್ಲ. ಯಾಕೆಂದರೆ "ಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ." ಪಾಂಡವರು ತಮ್ಮಂದಿರು ಎಂದಾದರೂ ಕೌರವನಷ್ಟು ಆಪ್ತರಾಗಲು ಸಾಧ್ಯವಿಲ್ಲ. ಹುಟ್ಟಿನ ಸಂಬಂಧಕ್ಕಿಂತ ಒಡನಾಟದ ಸಂಬಂಧ ಹೆಚ್ಚು ಎಂಬುದನ್ನು ಕರ್ಣ ನಂಬುತ್ತಾನೆ. ಅತ್ತ ಪಾಂಡವರಿಗೂ ಆಪ್ತನಾಗದೆ ಇತ್ತ ಕೌರವನಿಗೂ ನ್ಯಾಯ ಕೊಡದೆ ಬದುಕುವ ಬದಲು ಸಾಯುವುದೇ ಲೇಸು ಎಂದು ಕರ್ಣ ತೀರ್ಮಾನಿಸುತ್ತಾನೆ."ಪತಿಯವಸರಕ್ಕೆ ಶರೀರವನು ನೂಕುವೆನು"ಎಂದು ತೀರ್ಮಾನಿಸುತ್ತಾನೆ.
***ಕುಮಾರವ್ಯಾಸ ಭಾರತವನ್ನು ಮತ್ತೆ ಮತ್ತೆ ಓದುತ್ತೇನೆ. ಆಗೆಲ್ಲ ನನಗೆ ಎದುರಾಗುವ ಅನೇಕ ಪ್ರಶ್ನೆಗಳಿವೆ.  ಯಾಕೆ ಕೃಷ್ಣ ಕರ್ಣನಿಗೆ ಅವನ ಕುಲವನ್ನು ತಿಳಿಸಿದ? ಅದೂ ಸಂಧಿಯ ಪ್ರಯತ್ನ ವಿಫಲವಾದ ಅನಂತರ?
ಕರ್ಣ ಅರ್ಜುನನನ್ನು ಕೊಲ್ಲಬಹುದು ಎಂಬ ಅನುಮಾನವಿತ್ತೇ? ಭೀಷ್ಮ,ದ್ರೋಣ ಇವರು ಕೌರವನ ಪಕ್ಷವಾದರೂ ಅವರ ಮನಸ್ಸು ಪಾಂಡವರ ಕಡೆಗೆ ಎಂಬುದು ತಿಳಿದಿತ್ತು. ಹಾಗಾಗಿ ಅವರನ್ನು ಗೆಲ್ಲುವ ಬಗ್ಗೆ ಅನುಮಾನವಿಲ್ಲ. ಆದರೆ ಕರ್ಣ ಹಾಗಲ್ಲ. ಅವನು ಪಕ್ಕಾ ಪಾಂಡವವಿರೋಧಿ. ಅವನನ್ನು ಈ ತಂತ್ರದಿಂದ ಮಾತ್ರ ಮಣಿಸಬಹುದು ಎಂದು ತರ್ಕಿಸಿದನೇ? ಅಥವಾ ಕೃಷ್ಣನಿಗೆ ಅರ್ಜುನನ ಶೌರ್ಯದ ಬಗ್ಗೆ ಅನುಮಾನವಿತ್ತೇ?(ಮಹಾಭಾರತದ ಯುದ್ಧದಲ್ಲಿ ಭೀಷ್ಮ,ದ್ರೋಣ, ಕರ್ಣ, ಜಯದ್ರಥ ಎಲ್ಲರನ್ನೂ ಅರ್ಜುನ ಗೆದ್ದದ್ದು ಕೃಷ್ಣನ ತಂತ್ರಗಾರಿಕೆಯಿಂದ ಎಂಬ ಅಂಶವನ್ನೂ ಗಮನಿಸಬಹುದು.) ಸಂಧಿಪ್ರಯತ್ನಕ್ಕಿಂತ ಮೊದಲೇ ಕರ್ಣನಿಗೆ ಅವನ ಕುಲ ತಿಳಿಸಿದರೆ, ಅಕಸ್ಮಾತ್ ಕರ್ಣ ಕೌರವನಿಗೆ ಪಾಂಡವರಿಗೆ ಐದು ಗ್ರಾಮಗಳನ್ನು ಕೊಟ್ಟುಬಿಡು ಎಂದು ಹೇಳಿದರೆ..ಕೌರವ ಹಾಗೇ ಮಾಡಿದರೆ....ಈ ಅನುಮಾನವೂ ಕೃಷ್ಣನಿಗೆ ಇತ್ತೇ? ಹಾಗಾಗಿ ಸಂಧಿಯ ಅನಂತರ, ಇನ್ನು ಯುದ್ಧ ತಪ್ಪಲಾರದು ಎಂದು ಖಾತ್ರಿಯಾದ ಅನಂತರವೇ ವಂಶ ತಿಳಿಸಿದನೇ?

Saturday, October 23, 2010

ಕಾಲ ಪರಿಮಾಣ.

ಕಾಲ ಅಭೌತಿಕವಾದದ್ದು. ಅದು ಅನುಭವಾತೀತ. ಕಾಲದಲ್ಲಿ ನಾವು ಬೇರೆಲ್ಲವನ್ನೂ ಅನುಭವಿಸಬಹುದೇ ಹೊರತು ಕಾಲವನ್ನೇ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ.ಇಡೀ ಜಗತ್ತಿನ ಅಸ್ತಿತ್ವ ಕಾಲ ಮತ್ತು ದೇಶದ(Time and Space) ನೆಯ್ಗೆಯಲ್ಲಿದೆ. ದೇಶವನ್ನು  ಉದ್ದ, ಅಗಲ, ಎತ್ತರ ಎಂಬ ಮೂರು ಆಯಾಮಗಳ ಮೂಲಕ ಗ್ರಹಿಸಿ ಅಳೆಯಬಹುದಾದಂತೆ, ಏಕಮುಖೀ ಚಲನೆಯುಳ್ಳ, ನಾಲ್ಕನೆಯ ಆಯಾಮವಾದ ಕಾಲವನ್ನು ನೇರವಾಗಿ ಅಳೆಯಲಾರೆವು. ನಡೆಯುತ್ತಿರುವ ಒಂದು ಘಟನೆಯನ್ನು, ಅಥವಾ ಎರಡು ಘಟನೆಗಳ ನಡುವಿನ ಅಂತರವನ್ನು ಗ್ರಹಿಸಲು ಕಾಲವನ್ನು ಬಳಸಬಹುದೇ ಹೊರತು ನೇರವಾಗಿ ಕಾಲವನ್ನು-ದೇಶವನ್ನು ಅಳೆಯುವಂತೆ- ಅಳೆಯಲು ಸಾಧ್ಯವಿಲ್ಲ. ದೇಶಕ್ಕಿರುವಂತೆ ಕಾಲಕ್ಕೆ ಪೂರ್ವಸ್ಥಿತಿ ಇಲ್ಲ. ಉದಾಹರಣೆಗೆ, ಐದು ನಿಮಿಷದಿಂದಲೂ ಪೂಜೆ ನಡೀತಿದೆ ಅನ್ನುವಾಗ, ಗ್ರಹಿಕೆಗೆ ಸಿಗುವುದು ನಡೆಯುತ್ತಿರುವ ಪೂಜೆಯೇ ಹೊರತು ಕಾಲವಲ್ಲ. ಆದರೆ ಕಾಲದ ಮೂಲಕವಾಗಿ ಆರಂಭ, ಅಂತ್ಯ ಮತ್ತು ಚಲನೆಯನ್ನು ನಾವು ಅಳೆಯುತ್ತೇವೆ. ಹಾಗಾಗಿ ಕಾಲ ಒಂದು ಮಾಪಕವಾಗಿ ಅಗತ್ಯವಿದೆ.
ಕಾಲವನ್ನು ವಿವಿಧ ನಾಗರೀಕತೆಗಳು ವಿವಿಧ ರೀತಿಯಲ್ಲಿ ಅಳೆದಿವೆ. ವೇದದಲ್ಲಿ ಕಾಲವನ್ನು ಅದರ ಅತಿ ಸೂಕ್ಷ್ಮತೆಯಿಂದ ಪ್ರಾರಂಭಿಸಿ, ಅದರ ಅತಿ ಸ್ಥೂಲದವರೆಗೂ ಗುರುತಿಸಿದ್ದಾರೆ.
ಅಣು, ಪರಮಾಣು ಮತ್ತು ತ್ರಸರೇಣು ಎಂಬ ಕಾಲದ ಅಳತೆಯ ಮೊದಲ ಮೂರು ಕಲ್ಪನೆಗಳ ನಿರ್ದಿಷ್ಟ ವಿವರಣೆ ಸಿಗುತ್ತಿಲ್ಲ. ಎರಡು ಅಣುಗಳು ಸೇರಿ ಒಂದು ಪರಮಾಣು, ಇಂತಹ ಮೂರು ಪರಮಾಣು ಸೇರಿದರೆ ಒಂದು ತ್ರಸರೇಣು ಎಂಬ ವಿವರವಿದೆ. ಆದರೆ ಒಂದು ಅಣುವಿನಷ್ಟು ಕಾಲ ಎಂದರೆಷ್ಟು ಎಂಬ ವಿವರ ಸಿಗುವುದಿಲ್ಲ. ಇಂತಹ ೩ ತ್ರಸರೇಣು ಒಂದು ತ್ರುಟಿಗೆ ಸಮ. ಇದು  ೧/೧೬೫೭.೫ ಸೆಕಂಡುಗಳಿಗೆ ಸಮ. ಆದುದರಿಂದ ನಮ್ಮ ಕಾಲ ಗಣನೆಯನ್ನು ಇಲ್ಲಿಂದ ಪ್ರಾರಂಭಿಸಬಹುದು.
೧) ೩ ತ್ರಸರೇಣು = ೧ ತ್ರುಟಿ.
೨) ೧೦೦ ತ್ರುಟಿ  = ೧ ವೇಧಾ
೩) ೩ ವೇಧಾ   = ೧ ಲವ
೪) ೩ ಲವಗಳು = ಒಂದು ನಿಮೇಷ.(=ಒಮ್ಮೆ ಕಣ್ಣು ಮುಚ್ಚಿ ತೆರೆಯಲು ತಗುಲುವ ಕಾಲ.)
೫) ೩ ನಿಮೇಷಗಳು = ೧ ಕ್ಷಣ.
೬) ೫ ಕ್ಷಣಗಳು = ೧ ಕಷ್ಟಸ್( ಸರಿಸುಮಾರು ೮ ಸೆಕೆಂಡುಗಳು.)
೭) ೧೫ ಕಷ್ಟಸ್ = ೧ ಲಘು
೮) ೧೫ ಲಘುಗಳು = ೧ ದಂಡ ಅಥವಾ ೧ ನಾಡಿಕಾ
೯) ೨ ನಾಡಿಕಾಗಳು = ೧ ಮುಹೂರ್ತ
೧೦) ೬/೭ ಮುಹೂರ್ತಗಳು = ೧ ಯಾಮ ಅಥವಾ ಪ್ರಹರ
೧೧) ೪ ಯಾಮಗಳು+ ೪ ಯಾಮಗಳು = ೧ ಹಗಲು + ೧ ರಾತ್ರಿ =ಒಂದುದಿನ.
೧೨) ೧೫ ದಿನಗಳು = ೧ ಪಕ್ಷ
೧೩) ೨ ಪಕ್ಷಗಳು = ೧ ಮಾಸ
೧೪) ೨ ಮಾಸಗಳು = ೧ ಋತು
೧೫) ೩ ಋತುಗಳು = ೧ ಆಯನ
೧೬) ೨ ಆಯನಗಳು = ೧ ವರ್ಷ/ ಸಂವತ್ಸರ.
೧೭) ೪೩೨೦೦೦ ವರ್ಷಗಳು = ೧ ಚರಣ ಅಥವಾ ಪಾದ
೧೮) ೧೦ ಚರಣ = ೧ ಮಹಾಯುಗ =೪೩೨೦೦೦೦ ವರ್ಷಗಳು.
[ ಟಿಪ್ಪಣಿ: ೧ ಮಹಾಯುಗದಲ್ಲಿ ೪ ಯುಗಗಳಿವೆ.ಒಂದು ಪಾದದ ಕಲಿಯುಗ(೪೩೨೦೦೦ ವರ್ಷಗಳು) +ಎರಡು ಪಾದಗಳ ದ್ವಾಪರ ಯುಗ (೮೬೪೦೦೦ ವರ್ಷಗಳು) +ಮೂರು ಪಾದಗಳ ತ್ರೇತಾಯುಗ (೧೨೯೬೦೦೦ ವರ್ಷಗಳು) +ನಾಲ್ಕು ಪಾದಗಳ ಕೃತಯುಗ (೧೭೨೮೦೦೦ ವರ್ಷಗಳು.)]
ಇಲ್ಲಿಯವರೆಗಿನ ಕಾಲದ ವಿಭಾಗವನ್ನು ಸೂಕ್ಷ್ಮದ ಗುಂಪಿಗೆ ಸೇರಿಸಬಹುದು.೪೩೨೦೦೦೦ ವರ್ಷಗಳು ಹ್ಯಾಗೆ ಸೂಕ್ಷ್ಮ ಮಾರಾಯರೆ?ನಿಮಗೆ ಏನಾಗಿದೆ ಎಂದು ಕೇಳಬೇಡಿ. ಇನ್ನೂ ಮುಂದೆ ಹೋಗುವಾ.ಬನ್ನಿ.
 ೧೦೦೦ ಮಹಾಯುಗಗಳು = ೧ ಕಲ್ಪ = ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ರಾತ್ರಿ ಕೂಡ ೧ ಕಲ್ಪಕ್ಕೆ ಸಮ.
೬೦ ಕಲ್ಪಗಳು = ಬ್ರಹ್ಮನ ಒಂದು ತಿಂಗಳು.
೧೨ ತಿಂಗಳು =ಬ್ರಹ್ಮನ ಒಂದು ವರ್ಷ
೧೦೦ ವರ್ಷಗಳು= ಬ್ರಹ್ಮನ ಆಯುಷ್ಯ.ಇದನ್ನು ಪರ ಅಥವಾ ಮಹಾಕಲ್ಪ ಎಂದೂ ಕರೆಯುತ್ತಾರೆ. ಇದು ೩೧೧೦೪೦೦೦೦೦೦೦೦೦೦ ಮಾನವ ವರ್ಷಗಳಿಗೆ ಸಮ.
ಒಂದು ಮಹಾಯುಗ ಇದರ ೧.೮೮೮೯ % ಗೆ ಸಮವಾಗುವುದರಿಂದ ಅದನ್ನು ಕಾಲವಿಭಾಗದಲ್ಲಿ ಸೂಕ್ಷ್ಮಕ್ಕೆ ಸೇರಿಸಿದ್ದು!
ಉತ್ಸಾಹಿಗಳು ಬ್ರಹ್ಮನ ಆಯುಷ್ಯದಲ್ಲಿ ಎಷ್ಟು ತ್ರುಟಿಗಳಿವೆ ಎಂದು ಲೆಕ್ಕ ಹಾಕಲು ಪ್ರಯತ್ನಿಸಬಹುದು. ಆ ಬ್ರಹ್ಮನು ಅವರಿಗೆ ಒಳ್ಳೆಯದು ಮಾಡಲಿ.
(ಅಡಿ ಟಿಪ್ಪಣಿ: ಇದಲ್ಲದೆ ಈ ಕಾಲದಲ್ಲಿ ಒಳವಿಭಾಗಗಳಾಗಿ ಮನ್ವಂತರ, ಸಂಧ್ಯ,ಸಂಧ್ಯಾಂಶಗಳಿವೆ. ಕೋರಿಕೆ ಬಂದರೆ ಅದರ ಬಗ್ಗೆ ಬರೆದರಾಯಿತು.ಸಧ್ಯಕ್ಕಿಷ್ಟು ಸಾಕು.)
(ಆಧಾರ;೧. "ಪುರಾಣ ನಾಮ ಚೂಡಾಮಣಿ" ೨. " A Concise Encyclopaedia of Hinduism")

Wednesday, October 20, 2010

ಮತ್ತೆ ಅಕ್ಷೌಹಿಣಿ..

 ಮಹಾಭಾರತದ ಯುದ್ಧದಲ್ಲಿ ಉತ್ತರ ಭಾರತದ ಎಲ್ಲ ರಾಜರ ಸೈನ್ಯವೂ ಸೇರಿ ೧೮ ಅಕ್ಷೌಹಿಣಿ ಆಗಿತ್ತು.(ನನ್ನ ಹಿಂದಿನ ಲೇಖನದಲ್ಲಿ ಅಕ್ಷೋಹಿಣಿ ಎಂದು ತಪ್ಪಾಗಿ ಬರೆದಿದ್ದೆ. ಅದು ಅಕ್ಷೌಹಿಣಿ ಎಂದಾಗಬೇಕು.ತಪ್ಪಿಗೆ ಕ್ಷಮೆ ಕೋರುತ್ತೇನೆ.) ಒಂದು ಅಕ್ಷೌಹಿಣಿ ಅಂದರೆ ಲೆಕ್ಕ ಗೊತ್ತಾಯಿತು.ಸರಿ.ಆದರೆ ಎಷ್ಟೊ ಪುಟುಗೋಸಿ ರಾಜರ ಬಳಿ ಅಕ್ಷೌಹಿಣಿ ಸೈನ್ಯ ಇರದಿದ್ದರೆ ಹ್ಯಾಗೆ ಎಣಿಕೆ ಎಂಬ ಅನುಮಾನ ಬಂತು. ಈ ಅನುಮಾನಗಳೇ ಹಾಗೆ.ಹನುಮಂತನ ಬಾಲದ ತರಹ.ಬಟ್ಟೆ ತೋರಿದಷ್ಟೂ ಬೆಳೆಯುತ್ತದೆ! ಅದಕ್ಕೂ ಉತ್ತರ ಸಿಕ್ಕಿತು!
ಕುತೂಹಲವಿದ್ದರೆ ಮುಂದೆ ಓದಿ.
೧ ರಥ + ೧ ಆನೆ + ೩ ಕುದುರೆ + ೫ ಕಾಲಾಳು = ೧ ಪತ್ತಿ
೩ ಪತ್ತಿ = ೧ ಸೇನಾಮುಖ.
೩ ಸೇನಾಮುಖ = ೧ ಗುಲ್ಮ
೩ ಗುಲ್ಮ = ೧ ಗಣ
೩ ಗಣ =೧ ವಾಹಿನಿ
೩ ವಾಹಿನಿ =೧ ಪೃತನಾ
೩ ಪೃತನಾ = ೧ ಚಮೂ
೩ ಚಮೂ = ೧ ಅನೀಕಿನಿ
 ೧೦ ಅನೀಕಿನಿ = ೧ ಅಕ್ಷೌಹಿಣಿ.
ಸರಿ. ಆದರೆ ಈಗ ಮತ್ತೊಂದು ಅನುಮಾನ ಶುರುವಾಗಿದೆ. ಒಂದು ವೇಳೆ ಒಬ್ಬ ಚಿಲ್ರೆ ರಾಜನ ಸೈನ್ಯದಲ್ಲಿ ೫ ರಥ, ೮ ಆನೆ, ೧೫ ಕುದುರೆ ಮತ್ತು ೫೦೦ ಕಾಲಾಳುಗಳಿದ್ದರೆ ಅದನ್ನು ಏನೆಂದು ಕರಿಯೋದು?