Sunday, July 4, 2010

...????

ಬಹಳ ದಿನಗಳಿಂದ ಬರೆದಿಲ್ಲ. ಅಪರೂಪಕ್ಕೆ ನನ್ನ ಬ್ಲಾಗಿಗೆ ಬರುವವರಿಗೆ ನೆಮ್ಮದಿಯಾಗಿದೆ. ಎಲ್ಲ ಆರಾಮಾಗಿದ್ದಾರೆ ಎಂದು ಸುದ್ದಿ. ಅವರು ಆರಾಮಿಗಿರಬೇಕು ಎಂಬುದಕ್ಕಾಗಿ ನಾನು ಬರೆಯದೆ ಬಿಟ್ಟಿದ್ದಲ್ಲ. ನಾನು ಕನ್ನಡದಲ್ಲಿ ಟೈಪಿಸಿ ಬ್ಲಾಗಿಗೆ ಹಾಕಿದರೆ ಅಲ್ಲಿ ಅದು ಯಾವುದೋ ಅವತಾರದಲ್ಲಿ ಕಾಣಿಸುತ್ತೆ. ಹೇಗೆ ಸರಿ ಮಾಡುವುದು? ಇದಾದರೂ ಸರಿಯಾಗಿ ಕನ್ನಡದಂತೆಯೇ ಕಾಣಿಸುತ್ತ? ಹೇಳಿ.

Sunday, November 1, 2009

ನಾಯಿ ಮತ್ತು ನರ.

ನನಗೆ ನಾಯಿಗಳೆಂದರೆ ತುಸು ಭಯ. ನಾಯಿಮರಿಗಳೆಂದರೂ ಭಯ. ಇಲ್ಲಿಯವರೆಗೂ ನಾಯಿಗಳಿಂದ ನಾನೇನೂ ಕಚ್ಚಿಸಿಕೊಂಡಿಲ್ಲ. ನನ್ನ ಮಗಳು ಸ್ವಾತಿ ಚಿಕ್ಕವಳಿದ್ದಾಗ ಒಮ್ಮೆ ನಾಯಿಮರಿ ಕಚ್ಚಿತ್ತು. ಅದಕ್ಕೇ ನನಗೂ ಹೆದರಿಕೆ ಉಳಿದಿರಬಹುದು. ಅವಳಿಗೇ ಅದು ಮರೆತಿದೆ,ನನಗ್ಯಾಕೆ ನೆನಪಲ್ಲುಳಿದಿದೆಯೋ ಗೊತ್ತಾಗ್ತಿಲ್ಲ. ಯಾವುದೇ ಸಾಕು ಪ್ರಾಣಿಗಳನ್ನು ಅನುಮಾನದಿಂದಲೇ ನೋಡುವ ನನ್ನ ಪತ್ನಿಯ ಸ್ವಭಾವ ನನ್ನ ಮೇಲೂ ತುಸು ಪರಿಣಾಮ ಬೀರಿರಬಹುದು.
ನಾಯಿಗಳ ಗುಣದ ಬಗ್ಗೆ ಅಪಾರ ಸಂಶೋಧನೆಗಳು ನಡೆದಿವೆ. ಅವುಗಳ ಅವಗುಣಗಳ ಬಗ್ಗೆ ಏನೂ ವಿವರಗಳಿಲ್ಲ. ನನಗೆ ಅವುಗಳ ಬಗ್ಗೆ ಇರುವ ಒಂದು ಮುಖ್ಯ ತಕರಾರೆಂದರೆ ಹಗಲಿಡೀ ಎಲ್ಲಾದರೂ ಮಲಗಿ ಹೊತ್ತು ಕಳೆವ ಅವು ರಾತ್ರಿ ಯಾಕೆ ಕೂಗುತ್ತ ,ಊಳಿಡುತ್ತ ತ್ರಾಸು ಕೊಡುತ್ತವೆ ಎಂಬುದು. ನಮ್ಮ ಬೀದಿಯಲ್ಲಿರುವ ಎರಡು ನಾಯಿಗಳ ಸ್ವಭಾವ ಅದು. ಎಲ್ಲ ನಾಯಿಗಳೂ ಹಾಗೇ ಮಾಡುತ್ತವಾ?ಗೊತ್ತಿಲ್ಲ. ಎರಡು ಅಗುಳು ಹಿಚುಕಿ ಅಕ್ಕಿ ಬೆಂದಿದೆಯಾ ಇಲ್ಲವಾ ಎಂಬುದನ್ನು ನೋಡಬಹುದಂತೆ. ಅದೇ ತರ್ಕ ಇಲ್ಲೂ ಅಳವಡಿಸಿ ಎಲ್ಲಾ ನಾಯಿಗಳೂ ಹಾಗೇ ಎಂದು ನಾನು ಅಭಿಪ್ರಾಯಪಡುತ್ತೇನೆ. ಹಾಗಾಗಿ ನಾಯಿಗಳೆಂದರೆ ನಾನು ತುಸು ದೂರ.ಯಾರದ್ದಾದರೂ ಮನೆಗೆ ಹೋದಾಗಲೂ, ಅವರ ಮನೆಯಲ್ಲಿ ಒಂದು ಬಡಕಲು ನಾಯಿ ಕಂಡರೂ ಗೇಟಿನ ಬಳಿಯೇ ನಿಂತು ಬೊಬ್ಬೆ ಹೊಡೆದು ಮನೆಯವರಿಂದ ರಕ್ಷಣೆಯ ಸಂಪೂರ್ಣ ಆಶ್ವಾಸನೆ ದೊರೆತ ಅನಂತರವೇ ಒಳಗೆ ಹೋಗುತ್ತಿದ್ದೆ.
ಇವತ್ತು ಮಾಡಲೇನಾದರೂ ಘನಂದಾರಿ ಕೆಲಸ ಉಂಟಾ ಎಂದು ಯೋಚಿಸುತ್ತ ಮನೆಯ ಚಿಟ್ಟೆಯ ಮೇಲೆ ಕೂತಿದ್ದೆ. ಕುಂಯ್ ಕುಂಯ್ ಎಂಬ ಸದ್ದು ನನ್ನ ಯೋಚನಾಕ್ರಮವನ್ನು ಭಂಗಿಸಿತು. ನೋಡುತ್ತೇನೆ-ಏನು ನೋಡುವುದು-ಒಂದು ನಾಯಿಮರಿ ಗೇಟಿನ ಸರಳುಗಳ ನಡುವೆ ತಲೆತೂರಿಸಿ ಒಳಬರಲು ಹವಣಿಸುತ್ತಿದೆ."ಅಪ್ಪ,ಅದಕ್ಕೆ ಒಂದು ಬಿಸ್ಕತ್ ಕೊಟ್ಟೆ" ಎಂದು ಮಗಳು ಹೇಳಿದಳು. ಭೂಕಂಪವೇ ಆದಂತಾಯಿತು! ಈ ಬಿಸ್ಕತ್ತನ್ನು ಈ ಮನೆಯ ಸದಸ್ಯನಾಗಲು ಆಹ್ವಾನ ಎಂದು ಅದು ಭಾವಿಸಿದಂತೆ ನನಗೆ ಕಂಡಿತು.ಮರಿ ಒಳ ಬಂದು ನಮ್ಮನೆ ಖಾಯಂ ಸದಸ್ಯನಾಗುವ ಎಲ್ಲ ಅಪಾಯಗಳು ಕಂಡವು. ಹಚ ಹಚ ಎಂದೆ. ಅದಕ್ಕೆ ಹಚ್ ಹಚ್ ಎಂದಂತೆ ಕೇಳಿತೋ ಏನೊ! ಹಚ್ ಕಂಪನಿಗೆ ಮುಂಚೆ ನಾಯಿಯೇ ಮಾಡೆಲ್ ಆಗಿತ್ತಲ್ಲ! ಅದು ಉತ್ಸಾಹದಿಂದ ಜೋರಾಗಿ ಬಾಲ ಅಲ್ಲಾಡಿಸುತ್ತಾ ತನ್ನ ಪ್ರಯತ್ನ ತೀವ್ರಗೊಳಿಸಿತು. ಎದ್ದು ಬಂದು ಸಣ್ಣ ಕೋಲು ತೆಗೆದುಕೊಂಡು ಅದನ್ನು ಓಡಿಸಿ ಭಯಂಕರ ಅಪಾಯದಿಂದ ಪಾರಾದ್ದಕ್ಕೆ ನೆಮ್ಮದಿಪಟ್ಟೆ.
ಮಾರನೆಯ ದಿನ ಅದೇ ಹೊತ್ತಿಗೆ ಮತ್ತೆ ಬಂದು ಮತ್ತೆ ಕುಂಯ್ಗುಟ್ಟುತ್ತಾ ಒಳಬರಲು ಪ್ರಯತ್ನ ಮಾಡತೊಡಗಿತು. ಮತ್ತೆ ಸಣ್ಣಕೋಲು. ನಾಲ್ಕಾರು ದಿನ ಇದು ನಡೆಯಿತು.ಇದೆಷ್ಟು ಅಭ್ಯಾಸವಾಯಿತೆಂದರೆ ಆ ಹೊತ್ತಿಗೆ ಸರಿಯಾಗಿ ನಾನು ಹೊರಗಡೆ ಬಂದು ನಿಲ್ಲುತ್ತಿದ್ದೆ.ನಾಯಿಮರಿ ಬಂದು ಬಾಲ ಅಲ್ಲಾಡಿಸುತ್ತಾ ನಾನು ಕೋಲು ತೆಗೆದುಕೊಂಡಕೂಡಲೇ ಓಡುತ್ತಿತ್ತು. ಇದನ್ನು ದಿನಾ ನೋಡುತ್ತಿದ್ದ ನನ್ನ ಪುಟ್ಟ ಮಗಳು ಒಂದಿನ "ಅಯ್ಯೋ ಅದು ಬಂದ್ರೆ ಏನಾಗುತ್ತಪ್ಪ ಬಿಡು"ಎಂದಳು. ಏನಾಗುತ್ತೆ ಎಂದು ನಂಗೂ ಗೊತ್ತಿರಲಿಲ್ಲ. ಆದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ನಿನಗೆ ಗೊತ್ತಾಗಲ್ಲ,ಸುಮ್ನಿರು ಅಂದೆ. "ನೀನು ಹೊಡೀತಿ ಅಂತ ಗೊತ್ತಿದ್ರು ದಿನಾ ಬರುತ್ತಲ್ಲ..ಬುದ್ಧಿ ಇಲ್ಲ.ಸ್ಟುಪಿಡ್ ಪಪ್ಪಿ"ಅಂತ ಅಂದಳು.
ಹತ್ತನೇ ದಿನವೋ ಹನ್ನೊಂದನೆಯ ದಿನವೋ ನಾಯಿಮರಿ ಬರಲಿಲ್ಲ. ಸ್ವಲ್ಪ ತಡವಾಗಿ ಬರಬಹುದು ಎಂದು ನಾನು ಭಾವಿಸಿದೆ.ಅರ್ಧ ಗಂಟೆ ಕಳೆದರೂ ಬರಲಿಲ್ಲ. ಗೇಟಿಗೊರಗಿ ನಿಂತು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದೆ. ಸುಳಿವಿಲ್ಲ."ನಾಯಿಮರಿ ನೋಡ್ತಿದೀಯಾ? ಎಂದು ಮಗಳು ಕೇಳಿದಳು." ಇಲ್ಲ ಅಂತ ನಾನು ಅಂದದ್ದು ಸುಳ್ಳು ಅಂತ ಅವಳಿಗೂ ಗೊತ್ತಾಗಿರಬಹುದು."ಮರಿಗೆ ಅಂತೂ ಬುದ್ಧಿ ಬಂದಿರಬೇಕು" ಅಂತ ಮಗಳು ಖುಷಿಪಟ್ಟು ಹೇಳಿ ಸ್ಕೂಲಿಗೆ ಹೋಗಿದ್ದಳು.ನಾನು ನಾಯಿಮರಿಯನ್ನು ಹೆದರಿಸಿ ಓಡಿಸುವುದು ಅವಳಿಗೆ ತುಸು ಬೇಸರದ ಸಂಗತಿಯಾಗಿತ್ತು ಅಂತ ಕಾಣಿಸುತ್ತೆ. ಎಲಾ!ಯಾಕೆ ಬರಲಿಲ್ಲ? ನನಗೆ ವಿಚಿತ್ರ ಚಡಪಡಿಕೆ ಶುರುವಾಯಿತು. ಯಾವುದಾದರೂ ಬೈಕಿಗೋ, ಕಾರಿಗೋ ಸಿಕ್ಕು ಫಡ್ಚ ಅಯ್ತಾ ಎಂಬ ಯೋಚನೆ ಬಂದು ದಿಗಿಲಾಯಿತು.ಗೇಟಿನ ಹತ್ತಿರ ನಿಂತು ಹಾಗೇ ನೋಡುತ್ತಿದ್ದಾಗ ಏನು ನೋಡುತ್ತಿದ್ದೀರಿ? ಎಂದು ನನ್ನಾಕೆ ಕೇಳಿದಾಗ ಏನಿಲ್ಲ ನಾಯಿಮರಿ ಎಂದೆ. "ಎಲ್ಲಿದೆ ನಾಯಿಮರಿ?" ಪ್ರಶ್ನೆ. "ಎಲ್ಲೂ ಇಲ್ಲ" ಉತ್ತರ. ಇಲ್ಲದ, ಬರದಿದ್ದ ನಾಯಿಮರಿಯನ್ನು ನಾನು ನೋಡುತ್ತಿರುವುದು ಹೇಗೆ ಎಂದು ನನ್ನಾಕೆಗೆ ತಿಳಿಯದೆ "ಏನೋ.." ಎಂದು ಒಳಗೆ ಹೋದಳು.ಅವತ್ತಿಡೀ ಮನಸ್ಸು ತುಸು ಮಂಕಾಗಿತ್ತು.ಕಾರಿನ ಚಕ್ರಕ್ಕೆ ಸಿಕ್ಕು ಅಪ್ಪಚ್ಚಿಯಾದ ಅದರ ಪುಟ್ಟ ದೇಹದ ಬಗ್ಗೆ ಕಲ್ಪನೆ ಬಂದಾಗ ಮನಸ್ಸಿಗೆ ಸಣ್ಣ ಕಂಪನ.ಸತ್ತಿರಲಿಕ್ಕಿಲ್ಲ ಎಂದು ನನ್ನ ನಾನೇ ನಂಬಿಸಿಕೊಳ್ಳುತ್ತಿದ್ದೆ. ದಿನವಿಡೀ ಕುಂಯ್..ಕುಂಯ್..ಸದ್ದು ಕೇಳೀತೇ ಎಂದು ಗೇಟಿನತ್ತಲೇ ಗಮನ. ಸದ್ದಿಲ್ಲ. ನಾಯಿಮರಿ ಬಂದಿತ್ತಾ ಅಪ್ಪಾ ಎಂದು ಮಗಳು ಶಾಲೆಯಿಂದ ಬಂದವಳು ಕೇಳಿದಳು. 'ಇಲ್ಲ. ನಿನಗ್ಯಾಕೆ ಬೇಸ್ರ ಅದು ಬರದಿದ್ರೆ?"ಅವಳನ್ನು ಸಮಧಾನಪಡಿಸುವಂತೆ ಹೇಳಿದೆ.ನನ್ಗೆ ಅದು ಒಂದು ವಿಷಯವೇ ಅಲ್ಲ ಎಂದು ನನಗೂ ನಂಬಿಸಿಕೊಳ್ಳಬೇಕಾಗಿತ್ತು. ಮಗಳು ಮುಂದೇನೂ ಮಾತಾಡಲಿಲ್ಲ. ಅವತ್ತು ಅವಳ ಚಟುವಟಿಕೆಯಲ್ಲಿ ಎಂದಿನ ಲವಲವಿಕೆ ಕಾಣಲಿಲ್ಲ.
ಇನ್ನೂ ಎರಡು ದಿನ ಕಳೆದರೂ ಮರಿ ಪತ್ತೆಯಿಲ್ಲ. ನನ್ನ ಮಗಳು ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ತುಸು ಸಪ್ಪೆ ಮುಖದಲ್ಲಿ ಸ್ಕೂಲಿಗೆ ಹೋಗುತ್ತಿದ್ದಳು. "ನಿನ್ನ ಕೋಲಿಗೆ ಹೆದರಿ ಬಂದಿಲ್ಲ."ಎಂದು ಹೇಳಿದಳು. ನನಗೆ ಏನುತ್ತರ ಕೊಡಬೇಕು ತಿಳಿಯದೆ ಅವಳನ್ನೇ ಸುಮ್ಮನೇ ನೋಡಿದೆ."ನೀನು ತಪ್ಪು ಮಾಡಿದೆ"ಎಂಬ ಭಾವನೆ ಅವಳ ನೋಟದಲ್ಲಿತ್ತೇ?
ನಾಲ್ಕನೆದಿನ "ಬಂತು" ಎಂಬ ಕೂಗು ಕೇಳಿ ಛಕ್ಕಂತ ಎದ್ದು ಹೊರಗೆ ಬಂದೆ. ನಾಯಿಮರಿ ಯಥಾಪ್ರಕಾರ ಬಾಲ ಅಲ್ಲಾಡಿಸುತ್ತ ನಿಂತಿತ್ತು. ಮಗಳ ಮುಖದಲ್ಲಿ ಮಂದಹಾಸ. ನಾನು ಒಳಗೆ ಹೋಗಿ ಎರಡು ಬಿಸ್ಕತ್ ತಂದೆ.ನಾನೊಂದು ಕೊಡ್ತೀನಿ ಎಂದು ಮಗಳು ಕೊಟ್ಟಳು. ಬಾಲ ಉದುರಿಹೋಗಬಹುದು ಎಂದು ನಮಗನಿಸುವಷ್ಟು ರಭಸದಲ್ಲಿ ಬಾಲ ಅಲ್ಲಾಡಿತು.
"ಅಪ್ಪ, ಅದಕ್ಕೆ ನೀನು ಹೊಡೀತೀಯ ಅನ್ನೋದು ನೆನಪಿಲ್ಲ. ಬಿಸ್ಕತ್ ಕೊಟ್ಟಿದ್ದು ನೆನಪಿದೆ.ಅದಕ್ಕೇ ಬಂತು"ಅಂದಳು.
ಬೆಚ್ಚಿದೆ.ಯಾವುದೋ ಊರಲ್ಲಿ ಯಾವಾಗಲೋ ಮಗಳಿಗೆ ನಾಯಿ ಕಚ್ಚಿದ ನೆನಪಲ್ಲಿ ಇದನ್ನು ನಾನು ಹೆದರಿಸುತ್ತಿದ್ದೆ. ತನ್ನನ್ನೇ ಹೆದರಿಸಿದರೂ ಇದು ಕೋಲನ್ನು ಮರೆತು ಮಗಳು ಕೊಟ್ಟ ಬಿಸ್ಕತ್ತನ್ನು ಮಾತ್ರ ನೆನಪಲ್ಲಿಟ್ಟುಕೊಂಡಿತ್ತು. ತಪ್ಪನ್ನು ಕ್ಷಮಿಸುವ ಮಾನವೀಯ ಗುಣ[?] ನನಗಿಂತ ಈ ನಾಯಿಮರಿಗೆ ಜಾಸ್ತಿ ಇದ್ದಂತಿತ್ತು! ಆ ಕ್ಷಣದಲ್ಲಿ ಆ ಮರಿ ಸಂತನ ಗುಣವುಳ್ಳ ನರನಂತೆಯೂ ನಾನು ಕ್ರೂರ ಪ್ರಾಣಿಯಂತೆಯೂ ನನಗೆ ಭಾಸವಾಯಿತು.

Wednesday, September 30, 2009

ಒಂದು ಅನೀತಿ ಕತೆ.

ಪ್ರತಿನಿತ್ಯ ಸಾಯಂಕಾಲ,ಸೂರ್ಯ ಮುಳುಗುವುದು ತಪ್ಪಿದರೂ ತಪ್ಪಬಹುದು, ಆದರೆ ಆ ಹತ್ತು ಜನ ಊರ ಹೊರಗಿನ ಗಾಳಿ ಮರದ ಕೆಳಗಡೆ ಸೇರುವುದು ತಪ್ಪುವುದಿಲ್ಲ. ಅಲ್ಲಿ ಕೂತು ಇಡೀ ಪ್ರಪಂಚ ಸುತ್ತಾಡುತ್ತಾರೆ. ಹತ್ತು ಜನರೂ ಏಕಕಾಲಕ್ಕೆ ಹತ್ತು ವಿಷಯಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಯಾರಿಗೂ ತಮ್ಮ ಮಾತುಗಳನ್ನು ಬೇರೆಯವರು ಕೇಳಲೇಬೇಕು ಎಂಬ ಜರೂರತ್ತಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಎಲ್ಲ ಬಡ ಬಡ ಎದ್ದು ಹೊರಡುತ್ತಾರೆ.ಅವರವರ ತಾಪತ್ರಯಗಳು ಮತ್ತೆ ಬೆನ್ನೇರುತ್ತವೆ.
ಆ ದಿನವೂ ಹೀಗೇ ಸೇರಿದವರು ಮಾತಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಅಂದ.”ಅಲ್ಲ..ನಾವು ಯಾರಿಗೂ ಏನೂ ಕೆಟ್ಟದು ಮಾಡಿಲ್ಲ. ನಮ್ ಪಾಡಿಗೆ ನಾವಿದೀವಿ. ಅದ್ರೂ ನಮ್ಮನ್ನ ಪೋಲಿಹುಡುಗ್ರು ಅಂತಾರಲ್ಲ..” ಸಮಾಜದ ಬಗ್ಗೆಯೋ,ಪ್ರಪಂಚದ ಯಾವುದೋ ಸಮಸ್ಯೆಯ ಬಗ್ಗೆಯೋ ಆಗಿದ್ದರೆ ಉಳಿದ ಯಾರಿಗೂ ಇವನ ಮಾತು ಕೇಳುತ್ತಲೇ ಇರಲಿಲ್ಲವೇನೋ! ಅದ್ರೆ ಪೋಲಿಹುಡುಗ್ರು..ಬಹುವಚನ ಪ್ರಯೋಗ..”ಯಾರಯ್ಯ ಹಾಗಂದೋರು?” “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ?” “ಒದಿಯೋದು ಅಂದ್ರೆ ಒದಿಯೋದು ಅಲ್ಲಪ್ಪಾ…” ಏನೋ ವಿವರಣೆ ನೀಡತೊಡಗಿದ. ಇಷ್ಟು ದಿನಗಳಲ್ಲಿ ಎಂದೂ ಕಾಣದಿದ್ದ ಏಕತೆ ಇಂದು ಕಂಡಿತು. “ಅವ್ರು ಹೇಳೋದೆ ಸತ್ಯ ಇರ್ಬಹುದು. ನಾವು ಒಳ್ಳೇರು ಅನ್ನೋದಕ್ಕೆ ಏನ್ರಯ್ಯ ಸಾಕ್ಷಿ ಇದೆ?” ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ?” ಇನ್ಯಾರದೋ ತಕರಾರು. ಎಲ್ಲರೂ ತಾವು ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ಚಿಂತಿಸುತ್ತಾ ಮೌನವಾದರು.ಅವರಿಗೂ ನಿಜವಾಗಿ ಗೊತ್ತಾಗಲಿಲ್ಲ. ಯಾರನ್ನಾದರೂ ಕೇಳುವ ಅಂದರೆ, ಅವರು ನೀವು ಒಳ್ಳೇರಲ್ಲ ಕಣ್ರೋ ಎಂದರೆ?
ಅವರಲ್ಲೇ ಹಿರಿಯವನಾದವನು ಹೇಳಿದ. “ಒಂದ್ಕೆಲ್ಸ ಮಾಡುವಾ. ನಾವೀಗ ಹತ್ ಜನ ಇದೀವಿ. ನಮ್ ಗುಂಪಲ್ಲೇ ನಮ್ ನಮ್ಗೆ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ಸುತ್ತೆ ಅಂತ ಪರೀಕ್ಷೆ ಮಾಡೋಣ. ಒಂದ್ ಚೀಟೀಲಿ ಎಲ್ರೂ ಅವ್ರಿಗೆ ಈ ಗುಂಪಲ್ಲಿ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ನೊದನ್ನು ಬರೀಬೇಕು. ಗುಂಪಲ್ಲಿ ಅವ್ನೂ ಸೇರೋದ್ರಿಂದ ಅವ್ನಿಗೆ ಅವ್ನು ತಾನು ಒಳ್ಳೇನೋ ಒಳ್ಳೇನಲ್ವಾ ಅನ್ನೋದನ್ನೂ ಬರೀಬೇಕು.ಆಯ್ತಾ?” ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು.
ಒಬ್ಬ ಯೋಚಿಸಿದ: “ತಾನು ನಿಜವಾಗಿ ಅಷ್ಟು ಒಳ್ಳೇನಲ್ಲ. ಕೆಲವು ಕೆಟ್ಟ ಗುಣಗಳು ತನ್ನಲ್ಲಿವೆ. ಸರಿ..ಹಾಗಂತ ನನ್ನ ನಾನೇ ಕೆಟ್ಟವ ಅಂತ ಬರೆದ್ರೆ ಸರಿಯಾಗಲ್ಲ. ಆದ್ರಿಂದ ತಾನು ಒಳ್ಳೇನಂತಲೇ ಬರೀಬೇಕು. ಉಳಿದೋರಲ್ಲಿ ಕೆಟ್ ಗುಣಾನೂ ಇದೆ,ಒಳ್ಳೇ ಗುಣಾನೂ ಇದೆ. ಅದ್ರೆ ಅವ್ರನ್ನ ಒಳ್ಳೇರು ಅಂತ ನಾನು ಬರೆದ್ರೆ, ಅವ್ರು ನನ್ನ ಒಳ್ಳೇನು ಅಂತ ಬರೀದಿದ್ರೆ ನಂಗೆ ನನ್ ಓಟು ಮಾತ್ರ.ಒಟ್ಟಲ್ಲಿ ನಾನು ಕೆಟ್ಟೋನು ಅಂತ ಆಗ್ತೀನಲ್ಲ. ಆದ್ರಿಂದ ಅವ್ರೆಲ್ಲ ಕೆಟ್ಟೋರು ಅಂತ ಬರೀತೀನಿ” ಹಾಗೇ ಬರೆದ.
ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು.
ಗುಂಪಿಗೆ ಬಂದ ನೂರು ಓಟಲ್ಲಿ ಹತ್ರಲ್ಲಿ ಮಾತ್ರ ಒಳ್ಳೇರು ಅಂತ, ಉಳಿದ ತೊಂಬತ್ರಲ್ಲಿ ಕೆಟ್ಟೋರು ಅಂತ ಇತ್ತು.
ಎಲ್ರೂ ಬೆಪ್ಪಾಗಿ ಕೂತ್ರು.
(ಈ ಕತೆ ನೀತಿ ಏನು ಅಂತ ನಂಗೊತ್ತಿಲ್ಲ. ಆದ್ರೆ ಗುಂಪಲ್ಲಿ ಸುಮ್ನೆ ನಿಂತು ಮಾತು ಆಲ್ಸಿ. ಏನ್ ನೀತಿ ಅಂತ ನಿಮ್ಗಾದ್ರೂ ಹೊಳೀಬಹುದು.)

Thursday, September 10, 2009

ನಿಜ..ನಿಜ..ನಿಜ..

****ಎಲ್ಲೋ ಕೇಳಿದ ಮಾತು. ನಿಜಕ್ಕೆ ಮೂರು ಮುಖಗಳಂತೆ. ಮೊದಲನೆಯದು ನಾನು ಕಾಣುವ ಮುಖ. ಎರಡನೆಯದು ಉಳಿದವರೆಲ್ಲ ಕಾಣುವ ಮುಖ. ಸಧ್ಯಕ್ಕೆ ಈ ಎರಡು ಮುಖಗಳು ಸಾಕು;ಮೂರನೆಯ ಮುಖ ಆ ಮೇಲೆ ನೋಡೋಣ. ಯಾವುದೇ ಘಟನೆ ಆರಿಸಿಕೊಳ್ಳಿ. ಏನು ನಡೆದಿದೆ ಎಂಬುದರ ಬಗ್ಗೆ ನಿಮ್ಮ ಯೋಚನೆ ಖಚಿತಪಡಿಸಿಕೊಳ್ಳಿ. ಅದೇ ಘಟನೆಯ ಬಗ್ಗೆ ಬೇರೆ ಯಾರದಾದರೂ ಅಭಿಪ್ರಾಯ ಕೇಳಿ. ಒಂದು ಸಣ್ಣ ವ್ಯತ್ಯಾಸವಾದರೂ ಇರುತ್ತದೆ. ಅದು ಹಾಗಲ್ಲ ಮಾರಾಯಾ...ಎಂದು ನೀವು ನಿಜವನ್ನು ಅವನಿಗೆ ತಿಳಿಸಲು ಹೊರಡುತ್ತೀರಿ. ನೀವು ಹೇಳುವುದನ್ನು-ತಾಳ್ಮೆಯಿದ್ದರೆ-ಅವನು ಕೇಳಿ, ಅದು ಹಾಗಲ್ಲ ಮಾರಾಯಾ..ಎಂದು ತನ್ನ ನಿಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ.
****ಉದಾಹರಣೆಗೆ ದೇವರ ಬಗೆಗಿನ ಚರ್ಚೆಯನ್ನೇ ಗಮನಿಸಿ.[ದೇವರನ್ನು ನಾನು ಆರಿಸಿದ ಕಾರಣ ದೇವರು ನನ್ನ ಬಳಿ ಬಂದು ನಿಮ್ಮ ತಕರಾರಿನ ಮಧ್ಯೆ ನನ್ನ ತೂರಿಸಿದ್ದು ಯಾಕೆ ಎಂದು ಕೇಳುವುದಿಲ್ಲ. ಅಕಸ್ಮಾತ್ತಾಗಿ ಹಾಗೆ ಬಂದರೆ ಅನಾಯಾಸವಾಗಿ ದೇವರನ್ನು ಕಂಡಂತಾಯಿತಲ್ಲ!] ಜಗತ್ತಿಗೆಲ್ಲ ದೇವರು ಒಬ್ಬನೇ ಎಂದು ಎಲ್ಲ ಧರ್ಮಗಳೂ ಘೋಷಿಸುತ್ತವೆ. ನಿಜ. ಆದರೆ ಈ ದೇವರು ಯಾರು? ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು, ಕ್ರಿಶ್ಚಿಯನ್ನರಿಗೆ ಕ್ರಿಸ್ತ/ಶಿಲುಬೆ.ನಮ್ಮ ನಿಮ್ಮಂತವರಿಗೆ ಮನೆಯ ಮೂಲೆಯಲ್ಲಿರುವ ತಲೆತಲಾಂತರದಿಂದ ಪೂಜಿಸುತ್ತ ಬಂದಿರುವ ಒಂದಿಷ್ಟು ಮೂರ್ತಿಗಳು. ದೇವರು ಒಂದೇ ಎಂದು ಹೇಳುತ್ತಲೇ ಅವರವರ ದೇವರ ನಿಜದ ಬಗ್ಗೆ ಚರ್ಚೆ, ಯುದ್ಧ, ಹಿಂಸೆ ನಡೆಯುತ್ತೆ. ಹೌದಾ ಅಲ್ಲವಾ ನೀವೇ ಹೇಳಿ.
****ಮತ್ತೆ ನಿಜದ ಮೂರನೆಯ ಮುಖ : ನಾನು ನೋಡಿರದ, ನೀವೂ ನೋಡಿರದ, ಪ್ರಾಯಶಃ ನೋಡಲು ಹಂಬಲಿಸದ ನಿಜವಾದ "ನಿಜ"

Saturday, August 29, 2009

ಹೊತ್ತು ಹೋಗದೆ ಮಾತು.

. ಸಲಹೆಗಳಿರುವುದು ಬೇರೆಯವರಿಗೆ ಕೊಡಲೇ ಹೊರತು ಸ್ವಂತದ ಉಪಯೋಗಕ್ಕಲ್ಲ.

. ನೀವು ಕಡ ಕೇಳುವ ಹಿಂದಿನದಿನದವರೆಗೂ ನಿಮ್ಮ ಸ್ನೇಹಿತನ ಬಳಿ ಸಾಕಷ್ಟು ಹಣವಿರುತ್ತದೆ.

. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಮಾನವೀಯಧರ್ಮ ಎಂದು ಯಾರಾದರೂ ಹೇಳಿದರೆ, ಅವರು ಕಷ್ಟದಲ್ಲಿದ್ದಾರೆ ಎಂದರ್ಥ.

. ದೇವರಿಗೆ ಭಕ್ತ ಏನು ಕೊಟ್ಟರೂ ಸಾಕು;ಕೊಡದಿದ್ದರೂ ಅಡ್ಡಿಲ್ಲ.ಅರ್ಚಕರಿಗೆ ಮಾತ್ರ ಭಕ್ತರು ಕೊಡಲೇಬೇಕು. ಭಕ್ತರು ಕೊಡುವಷ್ಟೂ ಅವರಿಗೆ ಬೇಕು.

. ಅಪ್ರಾಮಾಣಿಕರಾಗುವ ಅವಕಾಶ ಸಿಗುವವರೆಗೂ ಎಲ್ಲರೂ ಪ್ರಾಮಾಣಿಕರೇ. ಹಾಗೆ ಅವಕಾಶವಿದ್ದಾಗಲೂ

ಪ್ರಾಮಾಣಿಕನಾಗಿದ್ದವನನ್ನು ಹಿಂದೆಲ್ಲ ಯೋಗ್ಯ, ಮಹಾನುಭಾವ ಇತ್ಯಾದಿ ಗುರುತಿಸುತ್ತಿದ್ದರು. ಈಗ ದಡ್ಡ, ವ್ಯಾವಹಾರಿಕ ತಿಳುವಳಿಕೆ ಇಲ್ಲದವನು ಎನ್ನುತ್ತಾರೆ.

. ಒಗ್ಗಟ್ಟಿಂದ ಕೆಲಸ ಮಾಡಿದರೆ ಎಲ್ಲರ ಕೆಲಸವೂ ಸುಲಭ ಎಂದು ಗುಂಪಿನಲ್ಲಿರುವ ಎಲ್ಲರಿಗೂ ಗೊತ್ತು. ಒಗ್ಗಟ್ಟಾಗಲು ಒಬ್ಬ ನಾಯಕ ಬೇಕು ಎಂಬುದರ ಬಗ್ಗೆಯೂ ಯಾರ ತಕರಾರೂ ಇಲ್ಲ. ತಕರಾರಿರುವುದು ನಾಯಕ ಯಾರಾಗಬೇಕು ಎಂಬುದರ ಬಗ್ಗೆ.