ಹೀಗೇ ಸುಮ್ಮನೆ ಸುರಪುರಕ್ಕೆ ಹೊರಟೆ. ಸುದ್ದಳ್ಳಿ ಈಗ ಸುರಪುರವಾಗಿಬಿಟ್ಟಿದೆ. ಹೆಸರಲ್ಲೂ ಹಳ್ಳಿತನವನ್ನುಳಿಸಿಕೊಂಡಿದ್ದ ಅದಕ್ಕೀಗ ಪುರವಾದ ಭಾಗ್ಯ. ಭರ್ಜರಿ ರೂಪಕವಾಗಿರುವ ಸುರಪುರ ಎಂಬ ಹೆಸರಿಗಿಂತ, ಸುದ್ದಳ್ಳಿ ಎಂಬ ಹೆಸರೇ ನನಗೆ ಹಿತವಾದ ಭಾವಕಂಪನವನ್ನುಂಟುಮಾಡುತ್ತದೆ. ತುಂಬ ವರ್ಷಗಳ ಹಿಂದೆ ಸುದ್ದಳ್ಳಿಗೆ ಹೋಗಿದ್ದೆ. ಯಾಕೆ ಎಂಬುದು ನೆನಪಿಗೆ ಬರುತ್ತಿಲ್ಲ. ಸುದ್ದಳ್ಳಿಗೆ ತಿರುಗುವ ಕ್ರಾಸಲ್ಲಿಳಿದು , ಅಲ್ಲಿಯವರೆಗೂ ನಡೆದಿದ್ದೆ. ಮಣ್ಣಿನ ರಸ್ತೆ. ಗದ್ದೆಗಳು. ಬ್ಯಾಣ. ಹಸಿರು ಹೊದ್ದ ಬೆಟ್ಟ. ಮೇಲಿಂದ ಬೀಳುತ್ತಿದ್ದ ತಣ್ಣನೆಯ ನೀರಿಗೆ ತಲೆ ಕೊಟ್ಟು ಮಿಂದು, ಭಕ್ತಿಯಿಂದ ಓಡಾಡಿ , ಶ್ರೀ ಸ್ವಾಮಿಯವರು ತಪಸ್ಸು ಮಾಡಿದ್ದ ಗುಹೆಯಲ್ಲಿ ಇಣುಕಿ ನೋಡಿದ್ದೆ. ಅಲ್ಲಿ ವರ್ಷಗಟ್ಟಲೆ ಸ್ವಾಮಿಯವರು ತಪಸ್ಸು ಮಾಡುತ್ತಿದ್ದರು ಎಂಬುದನ್ನು ಕೇಳಿ ವಿಸ್ಮಯವಾಗಿತ್ತೇ? ಆ ಗುಹೆಯಲ್ಲಿ ವರ್ಷವಿರಲಿ, ಒಂದು ದಿನ ಕಳೆದರೂ ಯಾರಿಗಾದರೂ ಸ್ವಾಮಿತ್ವ ಬರಬಹುದು ಅನಿಸಿತ್ತೋ ಏನೋ!
ಈಗ ಹೊರಟಿದ್ದು ನನ್ನ ಹಳೆಯ ಸ್ಕೂಟಿಯಲ್ಲಿ. ಆಗ ನಡೆದು ಹೋದಷ್ಟೇ ವೇಗವಾಗಿ ಈಗ ಬಹುಶಃ ನಾನು ಸ್ಕೂಟಿಯಲ್ಲಿ ಹೋಗುತ್ತೇನೆ. ಅದೇ ದಾರಿ. ಈಗ ಟಾರಾಗಿದೆ. ಅಲ್ಲಲ್ಲಿ ಕೀಳುತ್ತಲೂ ಇದೆ. ರಸ್ತೆಯ ಪಕ್ಕದ ಬ್ಯಾಣ, ಗದ್ದೆಗಳೆಲ್ಲ ಸೈಟುಗಳಾಗಿವೆ. ಸೈಟುಗಳಲ್ಲಿ ನಾನಾ ನಮೂನೆಯ ವಿನ್ಯಾಸದ, ಬಣ್ಣದ ಮನೆಗಳು. ಪ್ರತಿ ಮನೆಗೂ ಒಂದು ಚೆಂದದ ಹೆಸರು. ಇದೂ ಈಗ ಪುರವಾಗಿದೆ. (ಹಳ್ಳಿಗಳಲ್ಲಿ ಮನೆಗೆ ಹೆಸರಿರುವುದು ಕಡಿಮೆ. ಮನೆತನದ ಹೆಸರು ಅಥವಾ ಮನೆಯ ಯಜಮಾನನ ಹೆಸರೇ ಮನೆಯ ಹೆಸರು. ಮಠದಭಟ್ರಮನೆ. ಹರಿಭಟ್ರಮನೆ, ಮಂಕಾಳೆ ಮನೆ ಹೀಗೆ. ಪುರಗಳಲ್ಲಿ ಮನೆಯ ಹೆಸರಿಂದ ಯಜಮಾನನಿಗೆ ಗುರುತು. “ಓ! ನೀವು ಜಗತಿ ಮನೆಯವರಾ?” ನನ್ನಿಂದಾಗಿ ಮನೆಗೆ ಅಸ್ತಿತ್ವವಲ್ಲ, ಮನೆಯಿಂದಾಗಿ ನನಗೆ ಅಸ್ತಿತ್ವ.) ಮತ್ತೊಂದು ಬದಿಗೆ ಶಾಲೆ. ಒಂದು ಹಾಸ್ಟೆಲ್. ಕಾಡನ್ನು ಸವರಿ ನಿರ್ಮಿಸಿದ, ಅಲ್ಲಲ್ಲಿ ಪುಟ್ಟಪುಟ್ಟ ಗಿಡಗಳೂ ಇರುವ ಪಾರ್ಕ್. ಅಭಿವೃದ್ಧಿಯ ಸೂಚಕವಾದ ಹೆಲಿಪ್ಯಾಡ್. ಮತ್ತೆ ಊರು. ಮನೆಗೊಂದರಂತೆ ಸಾಲಾಗಿ ಅಂಗಡಿಗಳು. ಈ ಅಂಗಡಿಗಳ ಮುಂದೆ ಒಂದಿಷ್ಟು ಹುಡುಗರು ಗುಟ್ಕಾ ಜಗಿಯುತ್ತಾ, ಕೂತಿರುತ್ತಾರೆ. ಕೈಯಲ್ಲಿ ಮೊಬೈಲ್. ವಯಸ್ಸಾದ ಇವರ ಅಪ್ಪಂದಿರು, ಅಮ್ಮಂದಿರು ಗದ್ದೆಯಲ್ಲಿ ಬೆನ್ನು ಬಗ್ಗಿಸಿದ್ದಾರೆ. ಇದು ಎಲ್ಲ ಹಳ್ಳಿಗಳ ದುರಂತ. ಅಥವಾ ಪ್ರಗತಿ ಅಂತಲೂ ಅನ್ನಬಹುದು. ಇಲ್ಲಿ ತಿರುಗಿದರೆ ಇದೀಗ ಸುದ್ದಳ್ಳಿ, ಕ್ಷಮಿಸಿ, ಸುರಪುರ. ನನ್ನ ಸ್ಕೂಟಿ ೪೫ ಕಿ.ಗ್ರಾಂ. ಇರುವ ನನ್ನ ಭಾರ ಹೊರಲೂ ರಗಳೆ ಮಾಡುತ್ತ, ಕೂಗುತ್ತಾ ಅಂತೂ ಏರು ಹತ್ತಿತು. ನೋಡುತ್ತೇನೆ ಅಲ್ಲೊಂದು ಗೇಟು! ಆ ಗೇಟಿನ ಬಳಿ ಒಬ್ಬ ಮುದಿ ಪೋಲೀಸಪ್ಪ! ಕಳ್ಳರು , ಸುಳ್ಳರು, ಗೂಂಡಾಗಳು ಹಾಗಿರಲಿ, ಬಹುಷಃ ಬಡಕಲು ನಾಯಿಮರಿ ಕೂಡ ಹೆದರದ ಆಳ್ತನ. ಆದರೂ ಪೋಲೀಸರೆಂದರೆ ಪೋಲೀಸರೇ! ನೀವು ಅವರಿಗೆ ಹೆದರಿಯಾದರೂ ಗೌರವ ಕೊಡಬೇಕು! ಗೇಟಿನ ಈ ಕಡೆ ನನ್ನ ಸ್ಕೂಟಿ ನಿಲ್ಲಿಸಿದೆ. “ಸ್ಕೂಟಿ ಒಳಗೆ ಹೋಗುತ್ತೆ ಸಾರ್” ಅಂದ. ನನಗೆ ಖುಷಿಯಾಯಿತು. ಸ್ಕೂಟಿ ಒಳಗೆ ಒಯ್ಯಬಹುದು, ಅದಕ್ಕೂ ಮಿಗಿಲಾಗಿ ನನಗೆ ಸಾರ್ ಎಂದು ಅವನು ಕರೆದನಲ್ಲ! “ಮತ್ಯಾಕೆ ಗೇಟು?” “ ದೊಡ್ಡ ವಾಹನಗಳು ಹೋಗ್ಬಾರದು ಅಂತ.” “ಅವು ಯಾಕೆ ಹೋಗ್ಬಾರ್ದು?” “ ಏನೋ, ಉಗ್ರಗಾಮಿಗಳು ಬಂದ್ರೆ ಅಂತಿರ್ಬಹುದು.” ತಲೆ ಪೂರ್ಣ ಕೆಟ್ಟ ಉಗ್ರಗಾಮಿ ಮಾತ್ರ ಇಲ್ಲಿ ಬಂದಾನು. ತಾನು ಇಲ್ಲಿ ಡ್ಯೂಟಿ ಮಾಡುತ್ತಿರುವುದಕ್ಕೆ ಒಂದು ಗಂಭೀರ ಉದ್ದೇಶ ನೀಡಲು ಇವ್ನೇ ಹಾಗೆ ಆರೋಪಿಸಿರಬಹುದು. ಅರ್ಥವಿಲ್ಲದ ನಮ್ಮ ಎಷ್ಟೊ ಕೆಲಸಗಳಿಗೆ ಗಂಭೀರವಾದ ಹಿನ್ನೆಲೆಯೊಂದನ್ನು ಒದಗಿಸಿಕೊಂಡರೆ ಸ್ವಲ್ಪ ಸಮಾಧಾನ.
ತುಸು ಮುಂದೆ ಹೋದಾಗ ದೊಡ್ಡದೊಂದು ಕಟ್ಟಡ ಕಂಡಿತು. ಎಡಪಕ್ಕದಲ್ಲಿ ಮತ್ತೊಂದು ದೊಡ್ಡ ಕಟ್ಟಡ. ತಲೆ ಎತ್ತಿ ನೋಡಿದರೆ ಅಲ್ಲೂ ಒಂದು ಕಟ್ಟಡ. ಎಲಾ ! ಇದ್ಯಾವ ಊರಪ್ಪ? ಇಲ್ಲೇ ಎಲ್ಲೋ ಸುದ್ದಳ್ಳಿ ಇತ್ತಲ್ಲ! ಎಲ್ಲಿ ಬಂದೆ ನಾನು? ಅತ್ತಿತ್ತ ನೋಡಿದೆ. ಶ್ರೀ ಕ್ಷೇತ್ರ ಸುರಪುರ ಎಂಬ ಫಲಕ ಕಂಡಿತು. ಇಲ್ಲಿ ಉಗಳಬಾರದು, ತಂಬಾಕು ಬಳಕೆ ನಿಷೇಧಿಸಿದೆ, ಚಪ್ಪಲಿ ಇಲ್ಲೇ ಬಿಡಿ , ಕೊಳದಲ್ಲಿ ಬಟ್ಟೆ ತೊಳೆಯಬಾರದು ಇತ್ಯಾದಿ ನಾನಾ ಸೂಚಕಗಳು ಕಂಡು ಇದೇ ಸುದ್ದಳ್ಳಿ ಎಂಬುದು ಖಚಿತವಾಯಿತು. ನಮಗೀಗ ಏನನ್ನಾದರೂ ಮಾಡಲು ಸೂಚನೆ ಬೇಕು, ಮಾಡದಿರಲೂ! ಹಿಂದಿನ ಬಾರಿ ಬಂದಿದ್ದಾಗ ನನ್ನೂ ಸೇರಿದಂತೆ ನಾಕೇ ಜನರಿದ್ದೆವು. ಈ ರೀತಿಯ ಬೋರ್ಡುಗಳಿರಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಹೊಂಡ. ಸುರಿವ ನೀರಿನ ಧಾರೆ. ಸೀದಾ ಕೊಳದ ಹತ್ತಿರ ಹೋಗಿದ್ದೆ. ಮೇಲಿಂದ ಸುರಿಯುತ್ತಿದ್ದ ನೀರಿನ ಧಾರೆಗೆ ತಲೆಯೊಡ್ಡಿ ಮಿಂದಿದ್ದೆ. ಈಗ ಆ ಜಾಗದಲ್ಲಿ ಸಣ್ಣದೊಂದು ಮರೆ ನಿರ್ಮಾಣವಾಗಿತ್ತು. ಅಲ್ಲಿ ಮೀಯಲು ಒಂದು ಕ್ಯೂ ಇತ್ತು. ತರಾವರಿ ವಾಹನಗಳು ನಿಂತಿದ್ದವು. ತರಾವರಿ ಜನಗಳ ಸಮೂಹ. ಹಳೆಯ ಅಜ್ಜಿಯಿಂದ ಹಿಡಿದು ಮೊಳಕಾಲವರೆಗೆ ಮಾತ್ರ ಬರುವ ಬಿಗಿ ಚಡ್ಡಿ ಹಾಕಿದ ನವ ತರುಣಿಯರವರೆಗಿನ ವಿಭಿನ್ನ ಸಂಸ್ಕೃತಿಗಳ ಸಂಗಮ. ಈ ಕಟ್ಟಡದ ಹೊರಗೆ ದೊಡ್ಡದಾದ ಬೋರ್ಡೊಂದರಲ್ಲಿ “ಇಲ್ಲಿ ಸ್ವಾಮಿಗಳ ಪ್ರವಚನ ಪುಸ್ತಕಗಳಿಗೆ, ಭಜನೆಯ ಕ್ಯಸೆಟ್ಗಳಿಗೆ, ಫೋಟೋಗಳಿಗೆ, ತೀರ್ಥಕ್ಕಾಗಿ ವಿಚಾರಿಸಿ” ಎಂದು ಬರೆದಿತ್ತು. ಮತ್ತೊಂದು ಬೋರ್ಡಿನಲ್ಲಿ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂದಿತ್ತು. ಕಳೆದುಹೋದರೆ ಎಂಬ ಭಯದಿಂದ ಚಪ್ಪಲಿಯನ್ನು ಸ್ಕೂಟಿಯ ಬಾಕ್ಸಲ್ಲಿಟ್ಟು ಮೆಟ್ಟಿಲು ಏರತೊಡಗಿದೆ. ವಕ್ರ-ಪಕ್ರವಾಗಿದ್ದ ಮೆಟ್ಟಿಲುಗಳ ಬದಲು ನೀಟಾಗಿ ಸಿಮೆಂಟ್ ಮಾಡಿದ್ದ ಮೆಟ್ಟಿಲುಗಳು. ಎರಡೂ ಪಕ್ಕದಲ್ಲಿ ಕಬ್ಬಿಣದ ಸರಳು. ಹಿಂದಿನ ಬಾರಿಯಂತೆ ಈ ಬಾರಿಯೂ ಒಂದೇ ಬಾರಿ ಪೂರ್ಣ ಹತ್ತಿಬಿಡಬೇಕು ಎಂಬ ಹುಮ್ಮಸ್ಸು, ಒಂದೈವತ್ತು ಮೆಟ್ಟಿಲು ಹತ್ತುವಷ್ಟಕ್ಕೆ ಮಾಯವಾಯಿತು. ಒಂದೇ ಬಾರಿಗೆ ಹತ್ತುವ ಬದಲು ನಿಂತು ಸುತ್ತ-ಮುತ್ತ ನೋಡಿದರೆ ಒಳ್ಳೆಯದು ಎಂದು ಸಮರ್ಥಿಸಿಕೊಂಡೆ. ನನ್ನಂತೆ ಎಲ್ಲರೂ. ದಪ್ಪನೆಯ ಅಜ್ಜಿಯೊಬ್ಬಳು ‘ದೇವರ ದರ್ಶನಕ್ಕೆ ಬನ್ನಿ ಅಂದ್ರೆ ಬರಲ್ಲ. ಇವ್ರಿಗೆ ಯಾವಾಗ ಬುದ್ಧಿ ಬರುತ್ತೋ’ ಎಂದು ಗೊಣಗುಟ್ಟುತ್ತಾ ಬಂದಳು. ಬರದವ ಗಂಡನೇ ಇರಬೇಕು! ಸ್ವಲ್ಪ ಶಾಂತಿ ಬಯಸಿ ಆತ ಕೆಳಗೇ ಉಳಿದಿರಬಹುದು! ಹುಡುಗಿಯರಿಬ್ಬರು ಯಾವುದೋ ನಟನನ್ನು ಪ್ರಶಂಸಿಸುತ್ತಾ ಬಂದರು. ನಾನೂ ಮತ್ತೆ ಹತ್ತಲು ಶುರು ಮಾಡಿದೆ. ಅಂತೂ ಗುಡಿ ತಲುಪಿದೆ. ದೇವರ ದರ್ಶನ ನಿಜವಾಗಿಯೂ ಕಷ್ಟಸಾಧ್ಯ. ಮತ್ತೆ ಬೋರ್ಡು. “ಪುರುಷರು ಅಂಗಿಯನ್ನು ಕಳಚಿ ಒಳಬರಬೇಕು.” ಪುಣ್ಯ! ಬರೀ ‘ಅಂಗಿ’ ಅಂತ ಇರಲಿಲ್ಲ. ಇದ್ದಿದ್ದರೆ ಪ್ಯಾಂಟ್ ಟೀ ಶರ್ಟ್ ಹಾಕಿದ್ದ ಹುಡುಗಿಯರಿಗೆ ಪ್ರವೇಶವೇ ಇರಲಿಲ್ಲ. ಯಾಕೀ ನಿಯಮ ಎಂಬುದು ನನಗೆ ಅರ್ಥವಾಗಿಲ್ಲ. ಅಂಗಿ ಹಾಕಿದ್ದರೆ ಭಕ್ತಿ ಬರಲ್ಲವೇ? ದೇವರಿಗೂ ಅಂಗಿಗೂ ವೈರವೇ? ನನ್ನ ಹಿಂದೆ ಬಂದ ಕರಿಯ ಟೊಣಪನೊಬ್ಬ ಬಡಬಡ ಅಂಗಿ ಬಿಚ್ಚಿ ಒಳನುಗ್ಗಿ ಉದ್ದಕ್ಕೆ ಮಲಗಿ ನಮಸ್ಕರಿಸಿದ. ಅವನ ಜನಿವಾರ ಕಪ್ಪುಬಣ್ಣಕ್ಕೆ ತಿರುಗಿತ್ತು. ಕಪ್ಪು ದಾರದಿಂದಲೇ ಮಾಡಿದಂತಿದ್ದ ಜನಿವಾರ. ಆ ಕ್ಷಣದಲ್ಲಿ ನನಗದು ಭಾರತದ ಧಾರ್ಮಿಕತೆಗೆ ಸಂಕೇತದಂತೆ ಕಂಡಿತು. ಹಿಂದಿನ ಸಾರಿ ಬಂದಿದ್ದಾಗ ಈ ಕಟ್ಟಡ ಇರಲಿಲ್ಲ. ಇಲ್ಲೆಲ್ಲೋ ಸ್ವಾಮಿಗಳು ತಪಸ್ಸು ಮಾಡಿದ ಗುಹೆ ಇತ್ತಲ್ಲ.. ಪಕ್ಕವೇ ಕಂಡಿತು. ಇಬ್ಬರು ಅದರ ಮುಂದೆ ಕೂತು ಧ್ಯಾನವಶರಾಗಿದ್ದರು. ನಾನು ಇಣುಕಿ ನೋಡಿದೆ. ಒಂದು ಪೋಟೋ. ನೀಟಾಗಿ ಸಿಮೆಂಟ್ ಮಾಡಿದ ನೆಲ. ಅಲ್ಲಿ ಮುಂಚೆ ಸಿಮೆಂಟ್ ಇರಲಿಲ್ಲ. ಅದರೊಳಗೆ ಕೂತು ವರ್ಷಗಟ್ಟಲೇ ತಪಸ್ಸು ಮಾಡಿರುವ ಸ್ವಾಮಿಗಳ ಬಗ್ಗೆ ಗೌರವ ಉಕ್ಕಿತು. ಏನೇನೂ ಇರದಿದ್ದ ಇಲ್ಲಿಗೆ ಬಂದು ಕೂರಲು ಏನು ಕಾರಣವಿರಬಹುದು? ಜಗತ್ತಿನ ಬಗ್ಗೆ ನಿರಾಸಕ್ತಿ? ಅಥವಾ ತನ್ನ ತಾನು ತಿಳಿಯುವ ಕುತೂಹಲ? ಪಕ್ಕ ನಿಂತಿದ್ದ ಬಿಳಿಯ ಪಂಚೆ ಉಟ್ಟು ಬಿಳಿಯ ಶಲ್ಯ ಹೊದ್ದಿದ್ದ ಹುಡುಗನನ್ನು ಕೇಳಿದೆ. ಪಿಳಿಪಿಳಿ ಕಣ್ಣುಬಿಡುತ್ತಾ ನನ್ನನ್ನು ನೋಡಿದ. ಅವನಿಗೇನು ಗೊತ್ತು? ಅವನು ಅಲ್ಲಿ ಸಂಸ್ಕೃತ, ವೇದ ಕಲಿಯಲು ಬಂದವ. ಪಕ್ಕದಲ್ಲಿ ನಿಂತ ತುಸು ವಯಸ್ಸಾದವರು ‘ದೇವರ ಪ್ರೇರಣೆಯಿಂದ’ ಅಂದರು.
ನನಗದರಲ್ಲಿ ನಂಬಿಕೆ ಬರಲಿಲ್ಲ. ಈಗಿನ ಇರುವಿಕೆಯ ಬಗೆಗಿನ ಅತೃಪ್ತಿ, ಜೊತೆಗೇ ತನ್ನನ್ನು ತಾನು ಅರಿಯುವ ಹಂಬಲ ಆ ಪ್ರೇರಣೆ ಇರಬಹುದು ಎಂಬ ಅನುಮಾನ ನನಗೆ. ನಾವೇ ಹಾಗೆ. ದೊಡ್ಡವರು ನಡೆದ ಹಾದಿಯ ಬಗ್ಗೆ ಚಿಂತಿಸದೆ, ಅವರ ಸಾಧನೆಯನ್ನು ಭಜಿಸುತ್ತಾ, ಅವರ ಫೋಟೋ ಪೂಜಿಸುವ ಮಿತಿಗಿಳಿಯುತ್ತೇವೆ.
ನಾನು ಹೊರಡುವಾಗ ಅಲ್ಲಿಂದ ತೀರ್ಥ ತನ್ನಿ ಎಂದು ನನ್ನಾಕೆ ಹೇಳಿದ್ದಳು. ಅಲ್ಲಿ ವಿಚಾರಿಸಿದೆ. ಒಂದು ಬಾಟಲಿಗೆ ಇಪ್ಪತ್ತು ರೂ. ತೆತ್ತೆ. ವಿಚಿತ್ರ. ಎಲ್ಲಿಂದಲೋ ಹರಿದು ಬರುವ ನೀರು. ಯಾರೋ ಎಲ್ಲ ಲೌಕಿಕ ಸುಖಗಳನ್ನು ತ್ಯಜಿಸಿ , ಇಲ್ಲಿ ಬಂದು ಇದಕ್ಕೊಂದು ಅಲೌಕಿಕತೆ ಇತ್ತರು. ಏನೇನೂ ಪ್ರಯತ್ನ ಪಡದವರು ಇದನ್ನು ಇಪ್ಪತ್ತು ರೂ.ಗೆ ಮಾರುತ್ತಾ ವ್ಯವಹಾರ ನಡೆಸುತ್ತಾರೆ. ಸ್ವಾಮಿಗಳೇ ಇದ್ದಿದ್ದರೆ ಇದನ್ನು ಒಪ್ಪುತ್ತಿದ್ದರಾ? ನನಗನುಮಾನ. ನೀರಿನ ,ಅಲ್ಲ, ತೀರ್ಥದ ಬಾಟಲಿ ಕೈಯಲ್ಲಿ ಹಿಡಿದು ಗುಡಿಯ ಪಕ್ಕದ ಕಾಲು ದಾರಿಯಲ್ಲಿ ಕಾಡಿನತ್ತ ಹೊರಟೆ. ಕಡಿದಾದ ದಾರಿ. ಇಲ್ಲಿ ಮೆಟ್ಟಲಿಲ್ಲ. ದಟ್ಟ ನೆರಳು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಲು ದಾರಿಯೂ ಮಾಯವಾಯಿತು. ಈಗ ನಡೆದದ್ದೇ ದಾರಿ. ಹಾಗೇ ಮರಕ್ಕೊರಗಿ ಕೂತೆ. ಮೌನ. ಮೌನವೆಂದರೆ ಮಾನವಜನ್ಯ ಸದ್ದುಗಳಿಲ್ಲ. ಪ್ರಕೃತಿ ಎಲೆಗಳ ಅಲ್ಲಾಟದಲ್ಲಿ, ಹಕ್ಕಿಗಳ ಕೂಗಲ್ಲಿ, ಮಾತಾಡುತ್ತಿತ್ತು. ಪ್ರಕೃತಿಯ ಈ ಮಾತನ್ನರಿಯಲು ನಮಗೆ ಸಿದ್ಧಿಯಾಗಿರಬೇಕು. ಸಾಧನೆ ಬೇಕು. ಮಾತುಗಳಿಗಿರುವಂತೆ ಇಲ್ಲಿ ಅರ್ಥಪರಂಪರೆ ಇಲ್ಲ. ನಾವು ಗ್ರಹಿಸಿದಂತೆ ಅರ್ಥ;ಗ್ರಹಿಸಿದಷ್ಟು ಅರ್ಥ. ಇದೇ ಹಿತ ಅನಿಸಿತು. ಗಂಟೆ, ಮಂತ್ರ, ಭಜನೆ ಎಲ್ಲಕ್ಕೂ ಅತೀತವಾದ ಏನೋ ಒಂದು ನನ್ನ ಸುತ್ತಲೂ ಇತ್ತು. ಮುಂಚೆ ಹೊರಗೆಲ್ಲೋ ಕೇಳಿದ ಹಕ್ಕಿಯ ಕೂಗು ನಿಧಾನವಾಗಿ ನನ್ನೊಳಗಿಂದಲೇ ಬರುತ್ತಿರುವ ಅನುಭವ. ಮಂಪರು? ನಿದ್ದೆ? ಹಾಗಿರುತ್ತಾ ಎಷ್ಟು ಹೊತ್ತಾಗಿತ್ತೋ! ಯಾರೋ ವಯಸ್ಸಾದವರು-ನನ್ನ ಹಾಗೆಯೇ ಬಂದವರಿರಬಹುದು-“ಇಲ್ಲಿ ಕಾಡು ಕೋಣದ ಕಾಟ ಜಾಸ್ತಿ,ಹುಷಾರು” ಅಂದರು. ಆ ಕ್ಷಣದಲ್ಲಿ ಮತ್ತೆ ನನ್ನ ಹಿಂದಿನ ಜಗತ್ತು ಪ್ರತ್ಯಕ್ಷವಾಯಿತು. ಭಯವಾಗಿ ಎದ್ದು ಇಳಿಯತೊಡಗಿದೆ. ಕೆಳಗೆ ಜನರ ಗದ್ದಲ ನಡೆದೇ ಇತ್ತು. ಬಂದವರಿಗೆ ಬಂದ ಸಂಭ್ರಮ. ಹೊರಟವರಿಗೆ ಹೊರಟ ಸಂಭ್ರಮ. ಅಲ್ಲಿಯೇ ಇರುವವರು ಮಾತ್ರ ಯಾವಾಗಿನಿಂದಲೂ ಹಾಗೇ ಇರುವಂತೆ ಕಂಡಿತು.
6 comments:
ಸುದ್ದಳ್ಳಿ-ಸುರಪುರ ಎಂದು ಸ್ಪಷ್ಟವಾಗಿದ್ದರೂ..ನಾನೇಕೆ ಓದುತ್ತಾ ಓದುತ್ತಾ ವದ್ದಳ್ಳಿ-ವರದಪುರಕ್ಕೆ ಹೋದೆ ಎಂದು ತಿಳಿಯಲಿಲ್ಲ. ಮಾಯವಾದ ಕಾಲುಹಾದಿಯಲ್ಲಿ ದೊರಕಿತಲ್ಲ ನೆಮ್ಮದಿ ಅದು ಬೇಕು ಎಲ್ಲರಿಗೂ..!ನಾನು ಅಲ್ಲಿಗೆ ಖಂಡಿತ ಹೋಗಬಾರದು ಅಂದುಕೊಂಡಿದ್ದೇನೆ. ಕಾರಣ ನನಗೆ ಹಳೆಯದೇ ನೆನಪಿದೆ ಅದೇ ಉಳಿಯಲಿ ಶಾಶ್ವತ.
ಹತ್ತು ನಿಮಿಷ ಪ್ರಪಂಚ ಮರೆಸಿದ್ದಕ್ಕೆ ತ್ಯಾಂಕ್ಸ್
ಬರಿಯ ಚನ್ನಾಗಿದೆ ಎಂದು ಬರೆದರೆ ಸಾಲುವುದಿಲ್ಲವಿದಕ್ಕೆ.. ತುಂಬಾ ಚನ್ನಾಗಿದೆ ಎಂದು ಹೇಳಲೇ ಬೇಕಾಗಿದೆ.. ನೀವು ಮೊನ್ನೆ ಸಿಕ್ಕಾಗ ನಿನ್ನ ಚನ್ನಾಗಿದೆ ಎನ್ನುವ ಒಂದು ಸಾಲು ಇಲ್ಲವೆ ಇಲ್ಲ ಎಂದು ಕಾಲೆಳೆದಿದ್ದಿರಿ.. ಅದಕ್ಕೆ ಇಷ್ಟೊಂದು ದೀರ್ಘವಾಗಿ ಕಮೆಂಟಿದ್ದೇನೆ!
ಹೌದು ಸುರಪುರದಲ್ಲಿ ಇಲ್ಲಿ ಸಿಗರೇಟು ಸೇದಬಾರದು ಎಂಬ ಬೋರ್ಡ್ ಹಾಕಿಲ್ಲವೇ? ಸುದ್ದಳ್ಳಿಯ ರಸ್ತೆ ಪಕ್ಕದ ಮನೆಗಳಲ್ಲಿ.. ತೀರ್ಥದ ಕ್ಯಾನುಗಳು ನೇತು ಹಾಕಿದ್ದಾರೆ.. ಅವರಿಗೆ ಬರ್ಜರಿ ವ್ಯಾಪಾರವಾಗುತ್ತಿದೆಯಂತೆ, ತೀರ್ಥವನ್ನು ಕುಡಿದರೆ ಯಾವುದೇ ಕಾಯಿಲೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ ಅನ್ನುವುದೇ ಇದಕ್ಕೆ ಕಾರಣವಂತೆ, ಹಲವು ತಿಂಗಳ ಹಿಂದಿನ ತನಕವೂ ಸುದ್ದಳ್ಳಿ, ಸುರಪುರ ಪ್ರಶಾಂತವಾಗಿತ್ತು, ಸುರಪುರದ ದೇವಸ್ಥಾನದ ಆಡಳಿತ ಮಂಡಳಿಯ ವ್ಯಾಪಾರಿ ಮನೋಬಾವನೆಯ ಕಾಣದ ಕೈಯೊಂದು ಟಿ.ವಿ-19 ಎನ್ನುವ ಖಾಸಗಿ ಚಾನೆಲೊಂದರ ಮೂಲಕ ಜನರಿಗೆ ಇಲ್ಲಿ ಪವಾಡ ನೆಡೆಯುತ್ತದೆ ಎನ್ನುವ "ಹಾಗೂ ಉಂಟೇ" ಎನ್ನುವ ನಾರದ ಸ್ವಾಮಿ ಎನ್ನುವ ವರದಿಗಾರನ ಮೂಲಕ ಸಚಿತ್ರ ವಿವರಣೆಯೊಂದನ್ನು ಟಿವಿಯಲ್ಲಿ ಸತತವಾಗಿ ಮೂರುದಿನಗಳು ತೋರಿಸುವ ಮೂಲಕ ದಿಡೀರ್ ಭಕ್ತರನ್ನು ಹುಟ್ಟು ಹಾಕಿದೆ, ಮುಂಚಿನಿಂದಲೂ ಸುದ್ದಳ್ಳಿಗೆ ನೆಡೆದುಕೊಳ್ಳುತ್ತಿದ್ದವರಿಗೆ ಇದರಿಂದ ತುಂಬಾ ಬೇರಸರವಾಗಿದೆಯಂತೆ, ಸುರಪುರಕ್ಕೆ ಹೋಗುವ ಮನಸ್ಸು ಬರುತ್ತಿಲ್ಲ...
ಅಂಗಿ ಬಿಚ್ಚಲೇ ಬೇಕೆನ್ನುವ ಕಟ್ಟುಪಾಡುಗಳು ಮುಂಚಿನಿಂದಲೂ ನೆಡೆದು ಬಂದಿದೆ.. ಬಹುಶಃ ಬೇಸಿಗೆಯಲ್ಲಿ ಸೆಕೆ ತಾಳಲಾರದೇ ಯಾರೋ ಭಕ್ತ ಅಂಗಿ ಕಳಚಿ ಅಡ್ಡಬಿದ್ದು ನಮಸ್ಕರಿಸಿದ್ದನ್ನು ನೋಡಿ ಅದನ್ನೇ ಸಂಪ್ರದಾಯ ಮಾಡಿಬಿಟ್ಟಿದ್ದಾರಾ?
ಅಂದಹಾಗೆ.. ಕೇರಳದ ಕೆಲವು ದೇವಸ್ಥಾನಗಳಲ್ಲಿ ಎಲ್ಲ ಮಹಿಳೆಯರು ಅಂದರೆ ಮಲೆಯಾಳಿಗಳಲ್ಲದವರೂ ಅವರಂತೆಯೇ ಲಂಗ ಬ್ಲೌಸ್ ನಲ್ಲಿ ದೇವಸ್ಥಾನದೊಳಗೆ ಪ್ರವೇಶ ಮಾಡಬೇಕೆಂದು ಯಾರೋ ಹೇಳಿದ ನೆನಪು, ಸತ್ಯವೋ ಸುಳ್ಳೊ ಎನ್ನುವಲ್ಲಿ ಅನುಮಾನವಿದೆ! ನಿಜವೇ?
ಶ್ರೀ ಶಂ
ಅವರೇ ಹಾಗೆಲ್ಲ ಸುದ್ದಳ್ಳಿಯನ್ನು ವದ್ದಳ್ಳಿಯೆಂದು ಕಲ್ಪಿಸಿಕೊಳ್ಳಬಾರದು! ಅದೇ ಬೇರೆ ಇದೇ ಬೇರೆ!
he shreesham, manasvi---sullu sulle hogalidare rauravanaraka kaadide!
Satyavantarige kaala alla antiro? nanu hangella sumne yarannu hogalodilla kanri.. nijwaglu channagide.
ವ್ಹಾ! 'ನಮಗೀಗ ಏನನ್ನಾದರೂ ಮಾಡಲು ಸೂಚನೆ ಬೇಕು, ಮಾಡದಿರಲೂ!' ಈ ವಾಕ್ಯ ನಮ್ಮ ಇಡೀ ವ್ಯವಸ್ಥೆಗೆ ಬರೆದ ಭಾಷ್ಯ! ಭೇಷ್!
Post a Comment