Thursday, December 18, 2008

ಇರುವೆ ಮತ್ತು ಇರುವಿಕೆ..

ಮಾಡಲು ಬೇರೇನೂ ತೋಚದಿದ್ದರೆ ಲ್ಯಾಪ್ ಟ್ಯಾಪ್ ಎದಿರು ಕೂತು ಏನಾದರೂ ಬರೆಯಲು ಯತ್ನಿಸುವುದು ಇತ್ತೀಚಿನ ಹವ್ಯಾಸ. ನನ್ನ ಬರವಣಿಗೆಗೆ ಸಮನಾದ ಬರವಣಿಗೆ ಯಾರದ್ದೂ ಇಲ್ಲ ಎಂಬ, ಎಲ್ಲ ಬರಹಗಾರರಿಗೂ ಇರುವ ಹಮ್ಮು ನನಗೂ ಇದೆ. ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಇವತ್ತು ಹಾಗೆ ಟೀಕೆ ಮಾಡೋಣವೇ ಅಥವಾ ಒಂದು ಲೇಖನ ಬರೆಯುವುದೇ ಎಂಬ ಗೊಂದಲದಲ್ಲಿ ಲ್ಯಾಪ್ ಟ್ಯಾಪ್ ನ ಸ್ಕ್ರೀನ್ ನೋಡುತ್ತಾ ಕೂತಿದ್ದೆ. ಪುಟ್ಟದೊಂದು ಇರುವೆ ಅಲ್ಲಿ ಹರಿದಾಡುತ್ತಿತ್ತು. ಮೇಲೆ, ಕೆಳಗೆ, ಹಿಂದೆ ಮುಂದೆ. ಅದರ ಉದ್ದೇಶ ಏನು ಎಂಬುದು ಹೊಳೆಯಲಿಲ್ಲ. ನನಗೆ ತಿಳಿದಂತೆ ಇರುವೆಗಳು ಆಹಾರ ಸಂಗ್ರಹಕ್ಕಾಗಿ ಮಾತ್ರ ಓಡಾಟ ಮಾಡುತ್ತವೆ. ನಮ್ಮ ಹಾಗೆ ಸಿನಿಮಾ ನೋಡಲು, ಪೇಟೆ ತಿರುಗಲು ಅವು ಹೋಗುವುದಿಲ್ಲ ಅಂತ ನನ್ನ ನಂಬಿಕೆ. ಹಾಗಾದರೆ ಇದಕ್ಕೆ ಇಲ್ಲೇನು ಕೆಲಸ? ಹೋಗಲಿ, ತಾನು ಇರುವುದು ಲ್ಯಾಪ್ ಟ್ಯಾಪ್ ನ ಸ್ಕ್ರೀನ್ ಮೇಲೆ ಎಂಬುದಾದರೂ ಇದಕ್ಕೆ ಗೊತ್ತ? ಲ್ಯಾಪ್ ಟ್ಯಾಪ್ ಅಂದರೆ ಗೊತ್ತ? ನನಗೆ ವಿಚಿತ್ರವಾದ ಯೋಚನೆಗಳು ಬರತೊಡಗಿದವು. ಅದೆಲ್ಲ ಹಾಳಾಗಲಿ, ಅದಕ್ಕೆ ತಾನು ಇದ್ದೇನೆ ಎಂಬುದಾದರೂ ಗೊತ್ತ? ತಾನು ಹುಟ್ಟಿದ್ದೇನೆ, ಬದುಕುತ್ತಿದ್ದೇನೆ, ಸಾಯುತ್ತೇನೆ ಎಂಬುದೆಲ್ಲ ಗೊತ್ತ? ಬಹುಷಃ ಮನುಷ್ಯನನ್ನು ಬಿಟ್ಟರೆ, ಬೇರಾವ ಜೀವ ಜಾತಿಗಳೂ ತಮ್ಮ ಹುಟ್ಟು , ಬದುಕು, ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತೋರುತ್ತೆ. ಇವೆಲ್ಲ ಒಂದಕ್ಕೊಂದು ಸಂಬಂಧವಿರುವ, ಆದರೆ ಬೇರೆಬೇರೆಯಾದ ಸ್ಥಿತಿಗಳು ಎಂದು ಅವಕ್ಕೆ ತಿಳಿದಿಲ್ಲವೇನೋ! ಹಾಗಾಗಿ ಅವು ನಿರಾತಂಕದಲ್ಲಿ ಬದುಕುತ್ತವೆ. ನಮಗೋ..ಹುಟ್ಟಿದ ಮೇಲೆ ಬದುಕಬೇಕು ಎಂಬ ಚಿಂತೆ. ಹೀಗೇ ಬದುಕಬೇಕು ಎಂಬ ಚಿಂತೆ. ನನ್ನವರೂ ಹೀಗೇ ಬದುಕಬೇಕು, ನನಗಾಗದವರು ಹಾಗೆ ಬದುಕಬೇಕು ಎಂಬ ಚಿಂತೆ. ಆಮೇಲೆ ಅಯ್ಯೋ ಸಾಯಬೇಕಲ್ಲ ಎಂಬ ಚಿಂತೆ. ಹೇಗೆ ಸಾಯುತ್ತೇವೊ ಎಂಬ ಚಿಂತೆ. ಸತ್ತಮೇಲೆ ಏನಾಗುತ್ತಪ್ಪ ಎಂಬ ಚಿಂತೆ. ನನಗೆ ತಲೆ ಕೆಟ್ಟು ಹೋಯಿತು. ಅಲ್ಲಾ! ಈ ಇರುವೆಯ ಹಾಗೆ ಸುಮ್ಮನೆ ಹುಟ್ಟಿ, ಸುಮ್ಮನೆ ಬದುಕಿ, ಸುಮ್ಮನೆ ಸಾಯಲು ಏನು ಧಾಡಿ? ನನ್ನ ಇರುವಿಕೆಗೂ ಈ ಇರುವೆಗೂ ಯಾಕೆ ವ್ಯತ್ಯಾಸ?

6 comments:

Unknown said...

ಇರುವೆ ಯ ಮೂಲಕ ನಮ್ಮ ಮಿದುಳಿಗೂ ಇರುವೆ ಬಿಟ್ಟ ಬಿಟ್ಟಿ ಬರಹಕ್ಕೆ ಧನ್ಯವಾದ ಅಂತ ಹೇಳಿದರೂ ಹೆಚ್ಚೆ.ಕಾರಣ ಇರುವೆಯಂತೆ ಇರಲು ಆಗಲಿಲ್ಲವಲ್ಲ ಅಂತ

ಮಾವೆಂಸ said...

ಇರುವೆಯಂತೆ ತನ್ನ ಪಾಡಿಗೆ ತಾನಿರುವ ಗುಣ ಓ.ಕೆ. ಆದರೆ ನಮ್ಮ ಬದುಕೂ ಇರುವೆಯಂತಾದರೆ ಮಾನವ ಜನ್ಮ ಕೇಳದೆ, ಇಲ್ಲಿ ನೀನೇಕೆ ಇರುವೆ? ಹೊಸ ಹೊಳಹನ್ನು ತೆರೆಯಲು ಪ್ರಯತ್ನಿಸಿರುವ ನಿಮ್ಮ ಬರಹ, ಬ್ಲಾಗ್ ಕುತೂಹಲ ಮೂಡಿಸಿರುವುದು ಮಾತ್ರ ನಿಜ.
-ಮಾವೆಂಸ

ಮನಸ್ವಿ said...

ಇರುವೆಯ ಇರುವಿಕೆಯ ಬಗ್ಗೆ ಹೇಳುತ್ತಾ ಹೇಳುತ್ತಾ ಅನೇಕರಿಗೆ ಕಟ್ಟಿರುವೆ ಕಚ್ಚಿಸುವ ಪ್ರಯತ್ನ ನೆಡೆದಿದೆ.

ಕಮೆಂಟ್ ಬರೆಯೋದು ಅಂದ್ರೆ ಕೆಲವರು ಟೀಕೆ ಮಾಡಲು ಮಾತ್ರ ಇರುವ ವ್ಯವಸ್ಥೆ ಅಂತ ತಿಳ್ಕೊಂಡಿದಾರೋ ಏನೋ ನನಗೆ ಗೊತ್ತಿಲ್ಲ.
ಕೆಲವೇ ಸಾಲುಗಳಲ್ಲಿ ಅದೆಷ್ಟು ಅರ್ಥಗಳು ಹೊರಹೊಮ್ಮಿದೆ, ನಿಜವಾಗಲೂ ತುಂಬಾ ಚನ್ನಾಗಿ ಬರೆದಿದ್ದೀಯ ಮುತ್ತಣ್ಣ... ಮುಂದಿನ ಲೇಖನ ಪೂರ್ಣಗೊಳಿಸಿ ಅಪ್ಲೋಡ್ ಮಾಡು.. ಕಾಯುತ್ತಾ "ಇರುವೆ" ಕಚ್ಚಲು, ಅಲ್ಲಲ್ಲ ಓದಲು ;) ನಾನೊಂತರಾ ಮಳ್ಳೆರದಂತಾಗಲು ಇಚ್ಚಿಸುತ್ತೇನೆ.. ಗುಳುಗುಳು ಆಗ್ಬೇಕು ನಾನು ಓಡಾಡಿದರೆ, ಆದ್ರೆ ಒಂದು ಪುಟ್ಟ ಬೇಜಾರು ಏನಪ್ಪಾ ಅಂದ್ರೆ ಕಟ್ಟಿರುವೆ ತರಹ ಉರಿ ಉರಿಯಾಗೋ ಹಂಗೆ ಕಚ್ಚೋಕೆ ಬರೋಲ್ಲ ಏನ್ಮಾಡ್ಲಿ ;D

ಮೃತ್ಯುಂಜಯ ಹೊಸಮನೆ said...

ನನ್ನ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳಿಗೆ ಮರುಪ್ರತಿಕ್ರಿಯೆ ತೋರಿಸುವ ಅಭ್ಯಾಸ ಕಡಿಮೆ. ಅದರೆ ಈ ಲೇಖನದ ಪನ್ ಗುಣ ಗುರುತಿಸಿದ್ದಕ್ಕೆ ಒಂದು ಥ್ಯಾಂಕ್ಸ್ ಮೂವರಿಗೂ ಹೇಳಬೇಕು. ಶ್ರೀ. ಮಾವೆಂಸ ಅವರಿಗೆ : ಇರುವೆಯಂತಹ ಜೀವನ ಆಗದಿದ್ದರೂ ಇರುವಂತಹ ಜೀವನವಾಗಬೇಕು ! ಮನಸ್ವಿಗೆ : ಇನ್ನೂ ಮಳ್ಳಿರುವೆ ಆಗ್ಬೇಕು ಅಂತಾ ಇದೀಯಲ್ಲೋ! ಈಗಾಗ್ಲೇ ಆಗೀದೀಯಾ ಅಂತ ನಾನು ತಿಳ್ದಿದೀನಲ್ಲೋ! ರಾಘುಗೆ: ನಿಂಗೆ ಏನೂ ಹೇಳಲ್ಲಪ್ಪ!

Lakshmi Shashidhar Chaitanya said...

alla...ondhe sarti ishtondh prashne keLbiTTiddEeralla...question paper thara ! last question maatra...sikkaapatte lilting aagide. excellent use of figure of speech ! baraha odi khushiyaaytu sir !

ಮೃತ್ಯುಂಜಯ ಹೊಸಮನೆ said...

ಲಕ್ಷ್ಮಿ.ಎಸ್. ಅವರಿಗೆ, ನನ್ನ ಕಿರು ಲೇಖನ ಕುರಿತ ನಿಮ್ಮ ಪ್ರತಿಕ್ರಿಯಗಿಂತ ,ನಿಮ್ಮ ಹವ್ಯಾಸ ವಿಸ್ಮಯ ತರಿಸಿದೆ. ತತ್ವಶಾಸ್ತ್ರ, ರಾಮಾಯಣ, ಮಹಾಭಾರತದ ಬಗೆಗಿನ ಆಸಕ್ತಿ, ನಿಮ್ಮ ವಯಸ್ಸಿನವರಲ್ಲಿ ಅಪರೂಪ. ಮತ್ತೆ ಪ್ರತಿಕ್ರಿಯೆಗೂ ಒಂದು ಧನ್ಯವಾದ. ಅದ್ರೆ ಸಾರ್ ಯಾಕೆ?