Sunday, January 25, 2009

ಹುಟ್ಟು ಸಾವಿನ ಚಕ್ರ ೨

ಜೀವನ ವೃತ್ತವಾಗಿರದಿದ್ದರೆ ತುಂಬ ಸರಳವಾಗಿರುತ್ತಿತ್ತು. ಕಾಲ, ದೇಶದ ಒಂದು ಬಿಂದು: ಹುಟ್ಟು. ಈ ಬಿಂದುವಿನಿಂದ ಹೊರಟ ರೇಖೆ ಯಾವ ದಿಕ್ಕಿಗಾದರೂ ಚಲಿಸಲಿ. ಹೇಗಾದರೂ ಹೋಗಲಿ. ಕೊನೆಗೊಂದು ಕಡೆ ನಿಲ್ಲಬೇಕು. ಹುಟ್ಟಿನಿಂದ ಹೊರಟ ರೇಖೆಯ ಕೊನೆಯ ಬಿಂದು ಅದು: ಸಾವು.ಮೊದಲ ಬಿಂದುವಿನ ಹಿಂದೆ ಏನೂ ಇಲ್ಲ; ಕೊನೆಯ ಬಿಂದುವಿನ ಮುಂದೆ ಏನೂ ಇಲ್ಲ. ಈ ಎರಡು ಬಿಂದುಗಳ ನಡುವೆ ಮಾತ್ರ ನಮ್ಮ ಬದುಕು. ನಾವು ಬದುಕುತ್ತಿರುವ ಮೂಲ ಕಾರಣ ನಾವು ಹುಟ್ಟಿರುವುದು; ನಾವು ಸಾಯುವ ಮೂಲ ಕಾರಣವೂ ಅದೇ. ಹುಟ್ಟಿಲ್ಲದೆ ಜೀವನವಿಲ್ಲ, ಸಾವೂ ಇಲ್ಲ. ನಾವು ಹುಟ್ಟಿರದಿದ್ದರೆ ಬದುಕುವ ಅಗತ್ಯವಿರಲಿಲ್ಲ, ಸಾಯುತ್ತಲೂ ಇರಲಿಲ್ಲ ಎಂಬುದನ್ನು ಹೇಳಲು ವಿಶೇಷವಾದ ಪಾಂಡಿತ್ಯ ಬೇಕಾಗಿಲ್ಲ. ಲ್ಯಾಪ್-ಟ್ಯಾಪ್ ಮೇಲೆ ಹರಿದಾಡುವ ಇರುವೆಗೆ ಅದು ಗೊತ್ತಿರದಿದ್ದರೂ ನಮಗೆ, ನರಮನುಷ್ಯರಿಗೆಲ್ಲ ಗೊತ್ತು.
ಬದುಕು ಎಂದರೆ ಏನು? ಸರಳವಾಗಿ, ಬದುಕೆಂದರೆ ನಿರಂತರ ನಡೆಯುವ ಚಟುವಟಿಕೆಗಳ ಒಟ್ಟು ಮೊತ್ತ ಅನ್ನಬಹುದು. ಈ ನಿರಂತರತೆಯಲ್ಲಿ ಒಂದು ಚಟುವಟಿಕೆ ಕಾರಣ; ಮತ್ತೊಂದು ಕಾರ್ಯ. ಹಿಂದಿನ ಕಾರ್ಯ ಮುಂದಿನದರ ಕಾರಣ. ಈಗಿನ ಕಾರ್ಯ ಮುಂದಿನದರ ಕಾರಣ. ಏಕಕಾಲಕ್ಕೆ ಒಂದು ಘಟನೆ ಕಾರ್ಯವೂ ಆಗಿ, ಕಾರಣವೂ ಆಗಿರುತ್ತದೆ. ಬದುಕು ಕಾರಣ ಕಾರ್ಯಗಳ ನಿರಂತರ ಸರಪಳಿ. ಕಾರ್ಯವೆಂದು ನೋಡಿದರೆ ಕಾರ್ಯ; ಕಾರಣವೆಂದು ನೋಡಿದರೆ ಕಾರಣ. (ಇದು ಬೆಳಕಿನ ಗುಣದ ತರಹ. ಅಲೆಯೇ ಎಂದು ನೋಡಿದರೆ ಅಲೆ; ಕಣವೇ ಎಂದು ನೋಡಿದರೆ ಕಣ.) ಹುಟ್ಟಿನಿಂದ ಸಾವವರೆಗಿನ ಬದುಕಲ್ಲಿ ನಡೆವ ಎಲ್ಲ ಘಟನೆಗಳಿಗೆ ಕಾರಣಗಳುಂಟೇ? ಇದು ತೊಡಕಿನ ಪ್ರಶ್ನೆ. ಕಾರಣಗಳಿಲ್ಲ ಅನ್ನುವ ಹಾಗಿಲ್ಲ. ಯಾಕೆಂದರೆ ಕಾರಣವಿಲ್ಲದೆ ಯಾವ ಕಾರ್ಯವೂ ಇಲ್ಲ ಎಂಬುದನ್ನು ವಿಜ್ನಾನ ಕೂಡ ಹೇಳುತ್ತೆ. ನಮ್ಮ ವೇದಗಳನ್ನು, ಉಪನಿಷತ್ ಗಳನ್ನು ಮೂಢನಂಬಿಕೆ ಎಂದು ಹೀಗೆಳೆಯಬಹುದು, ವಿಜ್ನಾನದ ಬಗ್ಗೆ ಹಾಗೆ ಹೇಳಬಹುದೇ? ಹಾಗಾಗಿಯಾದರೂ ಕಾರಣಗಳಿವೆ ಎಂದು ನಂಬಬೇಕಾಗಿದೆ. ಇದನ್ನು ಒಪ್ಪಿದರೆ ಮತ್ತೊಂದು ತೊಡಕು ಎದುರಾಗುತ್ತದೆ. ಒಬ್ಬನ ಬದುಕಲ್ಲಿ ಸಂಭವಿಸುವ ಎಲ್ಲ ಕಾರ್ಯಗಳಿಗೂ ಕಾರಣವನ್ನು ಎಲ್ಲಿ ಹುಡುಕುವುದು? ಉದಾಹರಣೆಗೆ, ನಿನ್ನೆ ರಾತ್ರಿ ನನಗೆ ನಿದ್ದೆ ಬರದಿರುವ ಕಾರಣ ಏನು? ಇಂದು ಹಗಲು ನಿದ್ದೆ ಬಂದ ಕಾರಣ ಏನು? ಬೆಳಗ್ಗೆ ಎಂದಿನಂತೆ ಟೀ ಕುಡಿವ ಬದಲು ಕಾಫಿ ಕುಡಿದಿದ್ದರ ಕಾರಣ ಏನು? ಇವೆಲ್ಲ ಹಾಳಾಗಲಿ ಈ ಕಾರಣಗಳನ್ನು ಹುಡುಕುತ್ತಾ ಕೂತಿದ್ದೇನಲ್ಲ ಇದರ ಕಾರಣ ಏನು? (ಮುಂದುವರಿಯುವುದು)

Friday, January 23, 2009

ಸಿಗುರೆದ್ದ ಬದುಕು

ದ್ವಂದ್ವ ನಮ್ಮ ತಲೆಮಾರಿನ ಟ್ರೇಡ್ ಮಾರ್ಕ್!
***** ವ್ಯವಸ್ಥೆ, ಸಂಪ್ರದಾಯ ರೂಪಿಸಿದ ನಿಯಮಗಳನ್ನು ಮೀರಿ ಬದುಕುವ ಧೈರ್ಯವಿಲ್ಲ. ಅವುಗಳನ್ನು ಶ್ರದ್ಧೆಯಿಂದ ಪಾಲಿಸುವ ಉತ್ಸಾಹವೂ ಇಲ್ಲ. ವಿಜ್ನಾನ ಕೊಟ್ಟ ಅಪಾರ ತಿಳಿವಳಿಕೆಯ ಕಾರಣದಿಂದಾಗಿ ನಮ್ಮ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಲ್ಲ. ಯಾಕೆ ದೇವರಿಗೆ ಪೂಜೆ ಮಾಡಬೇಕು? ಯಾಕೆ ಗಾಯತ್ರಿ ಮಂತ್ರ ಜಪಿಸಬೇಕು? ಗೋಪೂಜೆ ಮಾಡಿದರೆ ಏನುಪಯೋಗ? ಶ್ರಾದ್ಧ ಮಾದುವುದರಿಂದ ನಿಜವಾಗಿಯೂ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತಾ? ಅಂತಹ ಒಂದು ಆತ್ಮ ಉಂಟಾ? ಒಟ್ಟಲ್ಲಿ ನಮ್ಮ ಹಿಂದಿನ ತಲೆಮಾರು ಶ್ರದ್ಧೆಯಿಂದ ಆಚರಿಸುತ್ತಿದ್ದ ಎಲ್ಲವೂ ನಿರರ್ಥಕ ಎಂಬುದು ನಮ್ಮ ಅಭಿಪ್ರಾಯ. ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿ ಮಲಗುವವರೆಗಿನ ನಮ್ಮೆಲ್ಲ ಕ್ರಿಯೆಗಳಲ್ಲೂ ಈ ಭಾವನೆ ತುಂಬಿಕೊಂಡಿದೆ. ಹಾಗಂತ ವಿಜ್ನಾನ ಹೇಳುವುದನ್ನು ಪೂರ್ಣ ನಂಬಿ, ಅವುಗಳನ್ನು ಬಿಟ್ಟುಬಿಡುವ ಧೈರ್‍ಯವೂ ಇಲ್ಲ. ಹಾಗಾಗಿ ವೈಚಾರಿಕವಾಗಿ ವಿರೋಧಿಸುತ್ತಾ, ಆದರೆ ಪಾಲಿಸುತ್ತಾ ಬದುಕುವ ದ್ವಂದ್ವ. ನನಗವುಗಳ ಬಗ್ಗೆ ಶ್ರದ್ಧೆಯಿಲ್ಲವಾದರೂ, ನನಗೆ ಶ್ರದ್ಧೆಯಿಲ್ಲ ಎಂಬುದು ನಂಬುವವರಿಗೆ ಗೊತ್ತಾಗಬಾರದು. ಹಾಗೆ ಗೊತ್ತಾದರೆ ಅವರ ಲೆಕ್ಕದಲ್ಲಿ ನನ್ನ ಬೆಲೆ ತುಸು ಇಳಿದುಬಿಟ್ಟರೆ? ಆತಂಕ. ನನಗೆ ಶ್ರದ್ಧೆಯಿಲ್ಲ ಎಂಬುದು ನಂಬದವರಿಗೆ ಗೊತ್ತಾಗಬೇಕು. ಇಲ್ಲವಾದರೆ ಅವರೆದುರು ನನ್ನ ಗೌರವ ಕಡಿಮೆಯಾದರೆ? ಆತಂಕ.ಹಾಗಾಗಿ ನನ್ನ ತೃಪ್ತಿಗಾಗಿ ನನ್ನೊಳಗೇ ವಿರೋಧಿಸುತ್ತಾ, ಬೇರೆಯವರ ತೃಪ್ತಿಯ ನೆವದಲ್ಲಿ ಆಚರಿಸುತ್ತಾ.... , ಬದುಕು ಸಿಗುರೆದ್ದಿದೆ.
*****ಇವಿಷ್ಟೇ ಅಲ್ಲ. ನಮ್ಮ ದೈನಂದಿನ ವ್ಯವಹಾರದಲ್ಲೂ ಈ ದ್ವಂದ್ವ ಹುಟ್ಟಿಸಿದ ಗೊಂದಲವಿದೆ. ಸರಕಾರೀ ಆಫೀಸಿನ ಲಂಚಗುಳಿಗಳ ಬಗ್ಗೆ ಎಲ್ಲರೆದುರೂ ಕೂಗಾಡುತ್ತೇನೆ. ಕ್ರಾಂತಿಯಾಗಬೇಕು ಎಂದು ಬೊಬ್ಬಿರಿಯುತ್ತೇನೆ. ನನ್ನ ಮಗಳ ಲೈಸೆನ್ಸ್ ಪಡೆಯಲು ಮಧ್ಯವರ್ತಿಯ ಮೂಲಕ ಲಂಚಕೊಡುತ್ತೇನೆ. ಮುನ್ಸಿಪಾಲಿಟಿಯವರು ಊರನ್ನು ಚೊಕ್ಕಟವಾಗಿಡುತ್ತಿಲ್ಲ ಎಂದು ಟೀಕೆ ಮಾಡುತ್ತೇನೆ. ನನ್ನ ಮನೆಯ ಕಸ ಗುಟ್ಟಾಗಿ ಬೀದಿಯಲ್ಲಿ ಸುರಿದು ಬರುತ್ತೇನೆ. ಒಂದು ಭರ್ಜರಿ ಯುದ್ಧ ಮಾಡಿ ಪಾಕೀಸ್ತಾನವನ್ನು ಇಲ್ಲ ಅನಿಸಿಬಿಡಬೇಕು ಎಂದು ಕ್ಯಾಂಟೀನಲ್ಲಿ ಕುಳಿತು ಗಂಭೀರವಾಗಿ ಹೇಳುತ್ತೇನೆ. ಆದರೆ ಸೈನ್ಯಕ್ಕೆ ನಾನಾಗಲೀ, ನನ್ನ ಮಕ್ಕಳಾಗಲೀ ಸೇರುತ್ತಾರೆ ಎಂದರೆ ಕಂಗಾಲಾಗುತ್ತೇನೆ. ನನಗೆ ಯಾರೂ ಕೋಟಿ ರೂಪಾಯಿ ಲಂಚ ಕೊಡಲ್ಲ ಅಂತ ಗೊತ್ತಿರುವದರಿಂದ ಕೋಟಿ ಲಂಚ ಕೊಟ್ಟರೂ ಮುಟ್ಟುವುದಿಲ್ಲ ಎಂದು ನನ್ನ ಪ್ರಾಮಾಣಿಕತೆಯಯನ್ನು ಜಾಹೀರು ಮಾಡುತ್ತೇನೆ. ನನ್ನ ಖಾಸ ಮುಖಕ್ಕೂ, ಎಲ್ಲರೆದುರು ತೆರೆದಿಡುವ ನನ್ನ ಮುಖಕ್ಕೂ ಸಂಬಂಧವೇ ಇಲ್ಲ.ನನ್ನನ್ನು ನಾನೇ ವಿರೋಧಿಸುತ್ತಾ..... ಬದುಕು ಸಿಗುರೆದ್ದಿದೆ.
*****ನಮಗೆ, ಮಧ್ಯಮವರ್ಗದ ನಮಗೆ, ಸದಾ ಪರರ ಕಣ್ಣಲ್ಲಿ ಹೊಳೆವ ಬಯಕೆ. ಹಾಗೆ ಮಾಡಿದರೆ ಅವರು ಏನಾದರೂ ಅಂದರೆ? ಹೀಗೆ ಮಾಡಿದರೆ ಇವರು ಏನಾದರೂ ಅಂದರೆ? ಈ ಲೆಕ್ಕಾಚಾರದಲ್ಲಿ ನಾವೇನು ಮಾಡಬೇಕೆಂದು ತಿಳಿಯದ ಗೊಂದಲ. ಸದಾ ಮುಖವಾಡದ ಭಾರ. ಬೇರೆ ಯಾರಿಗೂ ತ್ರಾಸು ಕೊಡದ ನಮ್ಮ ನಿಜವನ್ನು ನಾವು ಬದುಕಲು ಏನಡ್ಡಿ? ನಾವು ಹಾಗೆ ಬದುಕುತ್ತಿಲ್ಲ...... ಬದುಕು ಸಿಗುರೆದ್ದಿದೆ.

Saturday, January 17, 2009

ಕುಮಾರವ್ಯಾಸ ಭಾರತದ ಒಂದು ಪ್ರಸಂಗ

***ಮನಸ್ಸು ಖಿನ್ನವಾದ ಹೊತ್ತಲ್ಲಿ ಕುಮಾರವ್ಯಾಸ ಭಾರತವನ್ನು ಅಥವಾ ಅಡಿಗರ ಕವನಗಳನ್ನು ಓದುವುದು ನನ್ನ ಹವ್ಯಾಸ. ಆ
ಓದು ಮನಸ್ಸಿಗೆ ವಿಚಿತ್ರವಾದ ನೆಮ್ಮದಿ ನೀಡುತ್ತೆ. ನನಗಾದ ಖುಷಿಯನ್ನು ಯಾರಿಗಾದರೂ ಹೇಳುವಾ ಅನ್ಸುತ್ತೆ. ಯಾರಿಗೆ?
***ದುಶ್ಯಾಸನನನ್ನು ಭೀಮ ಕೊಂದಿದ್ದಾನೆ ಅಂತ ನಮಗೆಲ್ಲ ಗೊತ್ತು. ಕೊಂದು ತನ್ನ ಪ್ರತಿಜ್ನೆಯನ್ನು ನೆರವೇರಿಸಿದ ಎಂಬುದೂ ಗೊತ್ತು. ಕರ್ಣ ಸೇನಾಪತಿಯಾಗಿರುವಾಗ ಇದು ನಡೆಯಿತು ಎಂಬುದು ಕೆಲವರಿಗಾದರೂ ಗೊತ್ತಿರಬಹುದು. ಈ ಸನ್ನಿವೇಶದ ಬಗ್ಗೆ ಈ ಬರೆಹ. ( ಈ ಸೂಚನೆ ನೀಡಿದ ಕಾರಣ: ಈ ತರಹದ ಲೇಖನ ಓದಲು ಬಯಸದವರು ಕೂಡಲೇ ಬೇರೆ ಕಡೆ ತಿರುಗಬಹುದು. )
***ಯುದ್ಧದ ಸಂದರ್ಭ. ಭೀಮ ದುಶ್ಯಾಸನನ್ನು ಕಂಡು ಯುದ್ಧಕ್ಕೆ ಆಹ್ವಾನಿಸುತ್ತಾನೆ. “ನೀ ಕಳೆದುಕೊಳು ಧನುವ ನಮ್ಮ ವಿವೇಕವನು ದಳ ನೋಡುತಿರಲಿ ನಿರಾಕುಳಲೆಚ್ಚಾಡುವೆವು ನಿಲ್ಲೆಂದನಾ ಭೀಮ” “ ನೋಡುತಿರಲೀ ಬಲವೆರಡು ಹೋಗಾಡು ನಮ್ಮನು ಮೇಣು ನಿನ್ನನು ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ” ಈ ಕರೆಯನ್ನು ಮನ್ನಿಸಿದ ದುಶ್ಯಾಸನ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಮೊದಲು ಬಿಲ್ಲು ಬಾಣಗಳನ್ನು, ಅನಂತರ ಖಡ್ಗವನ್ನು, ಅನಂತರ ಗದೆಯನ್ನು ಬಳಸಿ ಸರಿಸಮವಾಗಿ ಕಾದಾಡುತ್ತಾರೆ. “ಸಾಕಿದೇತಕೆ ಮಲ್ಲಶ್ರಮದಲಿ ನೂಕಿ ನೋಡುವೆವಿನ್ನು ಕೈದುಗಳೇಕೆ ದೃಢಮುಷ್ಟೀ ಪ್ರಹಾರ ಪ್ರಕಟ ಸತ್ವರಿಗೆ” ಎಂದು ಭೀಮ ಮಲ್ಲಯುದ್ಧಕ್ಕೆ ಕರೆಯುತ್ತಾನೆ. ಮಲ್ಲಯುದ್ಧದಲ್ಲಿ ದುಶ್ಯಾಸನನ ಶಕ್ತಿ ಕುಂದತೊಡಗುತ್ತದೆ. ಈ ವರ್ಣನೆಯನ್ನು ಓದಿ.
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡು ಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಯಾಸನನು ಬಳಿಕ.
ಈಗ ದುಶ್ಯಾಸನನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಭೀಮ , ಅವನಿಗೆ ಹಿಂದಿನ ಘಟನೆಗಳನ್ನು ನೆನಪಿಸುತ್ತಾ ಮೂದಲಿಸುತ್ತಾನೆ. “ಹಿಂದೆ ಜೂಜಿನಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು” “ ಹಿಂದೆ ಕಿಚ್ಚಿನ ತುತ್ತು ವಿಷದುಬ್ಬಟೆಗಳನು ನೆನೆ” ಇತ್ಯಾದಿ. ಅನಂತರ ಭೀಮ ಕೌರವ ಸೇನೆಯಲ್ಲಿದ್ದ ಒಬ್ಬೊಬ್ಬರನ್ನೇ ಕರೆದು ಇವನನ್ನು ಬಿಡಿಸಿಕೊಳ್ಳಿ ಎಂದು ಮೂದಲಿಸುತ್ತಾನೆ. ದುಶ್ಯಾಸನನ ರಕ್ತ ಕುಡಿದು, ಇದರ ರುಚಿ ನೋಡಬನ್ನಿ ಎಂದು ಕರೆಯುತ್ತಾನೆ.
“ಆಡಿದುದು ಹುಸಿಯಲ್ಲ ನೀ ಸವಿ ನೋಡು ಕರ್ಣನರೇಂದ್ರ ಕೌರವ ನೋಡು ಸವಿಯನು ಶಕುನಿ ಕೃತವರ್ಮ ಗುರುಸುತರು ನೋಡಿರೈ ಹೇವರಿಸುವರೆ ಕೈ ಮಾಡಿರೈ ನಿಮ್ಮಾತನಳಿವನು ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ.”
ಭೀಮನ ರೌದ್ರಕ್ಕೆ ಹೆದರಿ ಎಲ್ಲರೂ ಸುಮ್ಮನೆ ನಿಲ್ಲುತ್ತಾರೆ. “ಮೋನದಲಿ ಮನವಳುಕಿ ಯೋಗಧ್ಯಾನಪರರಾದಂತೆ ಚಿತ್ತಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ” ಕೌರವರ ಪೈಕಿ ಯಾರೂ ಬರದಿದ್ದಾಗ ಭೀಮನ ರೌದ್ರಕ್ಕೆ ತನ್ನವರೇ ಗುರಿಯಾಗುತ್ತಾರೆ. “ ಮರಣ ನೆರೆಹೊರೆಯಾಯ್ತು ನಿನ್ನಯ ಹರಣವೆನ್ನಂಗೈಯಲಿದೆ ನಿಮ್ಮರಸನನು ಕರೆಸೆಲೆವೋ ಕಾದಿಸು ನಿನ್ನ ರಕ್ಷಿಸಲಿ ಅರಿಬಲದೊಳಿದಿರಿಲ್ಲ ನಿಜಮೋಹರದೊಳಗೆ ಮಿಡುಕುಳ್ಳ ವೀರರು ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ”
ಧೃಷ್ಟದ್ಯುಮ್ನ, ಸಾತ್ಯಕಿ ಅವರಿವರಿರಲಿ, ಕೊನೆಗೆ ಕೃಷ್ಣನನ್ನೂ ಕರೆದು ಬಿಡಿಸಿಕೋ ಎನ್ನುತ್ತಾನೆ. ಯಾರಿಗೂ ಧೈರ್ಯವಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುತ್ತಾರೆ. ಮದವೇರಿದ ಭೀಮನ ಮುಂದಿನ ವರ್ತನೆಯನ್ನು ನೋಡಿ.
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ
ಅವರಿವರಿರಲಿ, ಅರ್ಜುನನನ್ನೇ ಕೆಣಕಿ, ದುಶ್ಯಾಸನ ಅಹಿತನಾದರೂ ಬಿಡಿಸಿಕೋ ಎಂದು ಕರೆಯುತ್ತಾನೆ. ತನ್ನ ಶೌರ್ಯದ ಬಗ್ಗೆ ಅಪಾರ ಅಭಿಮಾನವಿರುವ ಅರ್ಜುನನಿಗೆ ಈ ಅಹ್ವಾನವನ್ನು ನಿರಾಕರಿಸುವುದು ಅವಮಾನ ಅನಿಸುತ್ತದೆ. ಅವನ ಸೂಕ್ಷ್ಮ ಅಹಂಕಾರ ಜಾಗೃತವಾಗುತ್ತದೆ. “ಅಹುದಹುದು ತಪ್ಪೇನು ತಪ್ಪೇನಹಿತ ದುಶ್ಯಾಸನನ ಸಲಹುವೆನಹಿತಬಲವೆನಗನಿಲಸುತನೆನುತ” ರಥವಿಳಿದು ಬೀಮನ ಜತೆ ಯುದ್ಧಕ್ಕೆ ಹೊರಡುತ್ತಾನೆ. ಕೃಷ್ಣ ಕಂಗಾಲಾಗಿ, ಅರ್ಜುನನ ಬಿಲ್ಲನ್ನು ಹಿಡಿದು “ಸಾಕು ಸಾಕು. ನೀನು ಸಾಹಸಿ ಹೌದು. ಭೀಮನನ್ನು ಎದುರಿಸುವ ಶಕ್ತಿ ನಿನಗಿದೆ. ಆದರೆ “ನಿರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ ಸಹಜವಿದು ಸಾಕ್ಷಾದುಮಾಪತಿಯಹ ಕಣಾ ಪವನಜನ ನೋಡಲು ಬಹಡೆ ನೋಡು” ಎಂದು ಎಚ್ಚರಿಸುತ್ತಾನೆ. ಅರ್ಜುನ ಕೃಷ್ಣನ ಸಲಹೆ ಮನ್ನಿಸಿ ಸುಮ್ಮನುಳಿಯುತ್ತಾನೆ. ಮುಂದೆ ದುಶ್ಯಾಸನನನ್ನು ಕೊಂದು ತನ್ನ ಪ್ರತಿಜ್ನೆಯನ್ನು ಈಡೇರಿಸುವ ಚಿತ್ರಣವಿದೆ. (ಕುತೂಹಲಿಗರು ಕುಮಾರವ್ಯಾಸ ಭಾರತದ ಕರ್ಣಪರ್ವದ ೧೯ನೆಯ ಸಂಧಿಯನ್ನು ಓದಬಹುದು. )
*****
ಭಾಷೆಯ ಬಳಕೆಯಲ್ಲಿ, ಭಾವಾಭಿವ್ಯಕ್ತಿಯಲ್ಲಿ, ಪಾತ್ರಗಳ ಚಿತ್ರಣದಲ್ಲಿ,ರೂಪಕ ಸೃಷ್ಟಿಯಲ್ಲಿ ಕುಮಾರವ್ಯಾಸನ ಸಮಸಾಟಿ ಪ್ರಾಯಶಃ ಯಾರೂ ಇಲ್ಲ. ಗದ್ಯದ ವಿವರಣೆಗೆ ಸಿಗದ ಕಾವ್ಯ ಅವನದು. ಇಲ್ಲಿ ಒಂದು ಮಾತು ಸೇರಿಸುವುದು ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ. ನನಗೆ ತಿಳಿದಂತೆ ಕುಮಾರವ್ಯಾಸನ ಅನಂತರ ಮಹಾಭಾರತದ ಕತೆಯನ್ನು ಆಧರಿಸಿ ಕೃತಿರಚನೆ ಮಾಡಿರುವುದು ಶ್ರೀ. ಎಸ್.ಎಲ್.ಭೈರಪ್ಪನವರು. (ಪರ್ವ ಕಾದಂಬರಿ). ಭೈರಪ್ಪನವರ ಪ್ರಯತ್ನ ಎಷ್ಟು ಪೇಲವ ಎಂಬುದು ಕುಮಾರವ್ಯಾಸನ ಜೊತೆ ಹೋಲಿಸಿದಾಗ ತಿಳಿಯುತ್ತದೆ .



Sunday, January 4, 2009

ಹುಟ್ಟು ಸಾವಿನ ಚಕ್ರ

ಕನಸು ಕಾಣುವ ಮನಸ್ಸು ಇರುವವರೆಗೂ, ಇರುವವರಿಗೂ ಸಾವಿನ ಭಯವಿಲ್ಲ. ಸಾವೆಂದರೆ ನಮ್ಮದೆಂದು ನಾವು ನಂಬಿದ ಎಲ್ಲವನ್ನೂ ನಿಸ್ಸಹಾಯಕತೆಯ ಒಂದು ಕ್ಷಣದಲ್ಲಿ, ಅರ್ಘ್ಯ ಬಿಡುವಂತೆ ಬಿಡುವ ಕ್ರಿಯೆ. ಇಷ್ಟು ದಿನ ನನ್ನದಾಗಿದೆ ಎಂದು ನಂಬಿದ್ದೆಲ್ಲವನ್ನು ಮೊಗೆದಲ್ಲಿಗೇ ಬಿಡುವ ಪ್ರಕ್ರಿಯೆ.
*********************
ಹುಟ್ಟಿನಿಂದ ಆರಂಭವಾಗುವ ನಮ್ಮ ಜೀವನ ಸಾವಿನಲ್ಲಿ ಮುಕ್ತಾಯ ಕಾಣುತ್ತದೆ. ಈ ನಡುವಿನ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ: ಬೇಕಾದ್ದು; ಬೇಡವಾದ್ದು. ನಮ್ಮ ನಿಯಂತ್ರಣಕ್ಕೊಳಪಟ್ಟಿದ್ದು: ನಿಯಂತ್ರಣಕ್ಕತೀತವಾದದ್ದು. ಇವೆಲ್ಲವನ್ನೂ ಖುಷಿಯಿಂದಲೋ, ಸಂಕಟದಿಂದಲೋ ಅನುಭವಿಸಬೇಕು. ಅನಿವಾರ್ಯ. ಇವನ್ನೆಲ್ಲ ಅನುಭವಿಸುವವರು ಸಂಸಾರಿಗಳಂತೆ. ಅನುಭವಗಳಿಗೆ ನಿರ್ಲಿಪ್ತತೆಯಲ್ಲಿ ಒಡ್ಡಿಕೊಳ್ಳುವವರು ಸಂತರಂತೆ; ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವವರು ಸಿದ್ಧಪುರುಷರಂತೆ. ನಾವು ಇನ್ನೂ ಸಂಸಾರಿಗಳೇ. ನಮ್ಮ ನಿಮ್ಮ ಸಂಕಟಪರಿಹಾರಕ್ಕೆ ಹೋಮ ಹವನಾದಿಗಳಿವೆ, ಪೂಜೆ ಪುನಸ್ಕಾರಗಳಿವೆ. ಇವೆಲ್ಲ ಬೇಡ ಅಂದರೆ ಮನಸ್ಸನ್ನು ಹದಗೊಳಿಸಲು ಆಧುನಿಕ ಗುರುಗಳಿದ್ದಾರೆ. ವಾರವೋ, ತಿಂಗಳೋ ಅಲ್ಲಿದ್ದು, ಎರಡು ಮೂರು ಸಾವಿರ ಹುಡಿ ಹಾರಿಸಿ ಬಂದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುವಂತೆ ಮಾಡುವವರವರು. ಹಾಗಂತ ಅವರು ಹೇಳಿಕೊಳ್ಳುತ್ತಾರೆ. ಸರಿ, ಶಾಂತಿಯೇನೋ ಸಿಕ್ಕೇಬಿಟ್ಟಿತು ಎಂದು ಕೊಳ್ಳುವಾ. ಅದರೆ ಸಾವು? ಸಾವನ್ನೂ ಪರಿಹರಿಸಲು ಸಾಧ್ಯವೇ? ಹೋಗಲಿ ಸಾವಿನ ಭಯವನ್ನು ಪರಿಹರಿಸಲು ಸಾಧ್ಯವೇ? ಸಾವೆಂದರೆ ಏನು? ಅದರ ಭಯದಿಂದ ಬಿಡುಗಡೆ ಹೇಗೆ?
********
ಜೀವನವನ್ನು ಸರಳ ರೇಖೆಗೆ ಹೋಲಿಸಿದರೆ, ಅರಂಭದ ಬಿಂದು ಹುಟ್ಟು. ಕೊನೆಯ ಬಿಂದು ಸಾವು. ಹುಟ್ಟಿನ ಹಿಂದೆ ಏನು? ಸಾವಿನ ಮುಂದೆ ಏನು? ಗೊತ್ತಿಲ್ಲ. ಗೊತ್ತಿರುವವರು ಇರಬಹುದು. ಅದೂ ಗೊತ್ತಿಲ್ಲ. ನಾವು ಊಹಿಸಬಹುದು. ಇದನ್ನು ಊಹಿಸಲು ಸರಳ ಉಪಾಯ ಒಂದಿದೆ. ಜೀವನವನ್ನು ಸರಳರೇಖೆಯಲ್ಲ, ವೃತ್ತ ಎಂದು ಕಲ್ಪಿಸಿಕೊಳ್ಳೋಣ. ಹುಟ್ಟಿನ ಬಿಂದುವಿನಿಂದ ಹೊರಟು ರೇಖೆಯನ್ನು ವಕ್ರವಾಗಿಸುತ್ತಾ, ವೃತ್ತವಾಗಿಸುತ್ತ ಬರೋಣ. ವೃತ್ತ ಪೂರ್ಣವಾಗಲು ರೇಖೆ ಹೊರಟ ಬಿಂದುವಿಗೇ ಬಂದು ಸೇರಬೇಕು. ವೃತ್ತ ಪೂರ್‍ಣವಾದರೆ ಬದುಕು ಪೂರ್ಣವಾದಂತೆ ತಾನೇ? ಅಂದರೆ ಹುಟ್ಟು ಮತ್ತು ಸಾವು ಒಂದೇ ಬಿಂದುವಿನಲ್ಲಿದೆ; ಹುಟ್ಟೇ ಸಾವಾಗಿದೆ ಅನ್ನಿ ಅಥವಾ ಸಾವೇ ಹುಟ್ಟಾಗಿದೆ ಅನ್ನಿ. ಈ ವೃತ್ತದ ಪರಿಧಿರೇಖೆಯ ಮೇಲೆ ನಾವು ಎಲ್ಲಿ ನಿಂತು ನೋಡಿದರೂ ನಮ್ಮ ಮುಂದೆ ಹಿಂದೆ ಸಾವಿದೆ; ಹುಟ್ಟಿದೆ. ಹಾಗೇ ನಿರಂತರ ಜೀವನವಿದೆ. ನೋಡಿದರೆ ಹುಟ್ಟು ಮತ್ತು ಸಾವಿನ ನಡುವೆ ಸಂಭವಿಸುವ ಘಟನೆಗಳು ಜೀವನವಾಗುವ ಬದಲು, ಕಾಲದ ನಿರಂತರೆತೆಯಲ್ಲಿ ಹುಟ್ಟು ಮತ್ತು ಸಾವು ಕೂಡ ಜೀವನದ ಘಟನೆಗಳಾಗಿವೆ. ಅಂದರೆ ಯಾವುದೋ ಮೂಲಸತ್ ನಿರಂತರ ಹುಟ್ಟುತ್ತ, ಸಾಯುತ್ತ ಚಕ್ರವಾಗಿದೆ. ಹುಟ್ಟಿ ಸಾಯುವುದು ಯಾವುದು? ಈ ಮೂಲ ಸತ್ ಏನು? ಹುಟ್ಟಿ ಸಾಯುವ ನಮ್ಮ ದೇಹದ ಮೂಲಕವಾಗಿಯೇ ಹೇಗೆ ಹುಟ್ಟದ ಸಾಯದ ಮೂಲ ಸತ್ ಅನ್ನು ಪಡೆಯುವುದು?.........(ಮುಂದುವರಿಯುವುದು)