Sunday, November 1, 2009

ನಾಯಿ ಮತ್ತು ನರ.

ನನಗೆ ನಾಯಿಗಳೆಂದರೆ ತುಸು ಭಯ. ನಾಯಿಮರಿಗಳೆಂದರೂ ಭಯ. ಇಲ್ಲಿಯವರೆಗೂ ನಾಯಿಗಳಿಂದ ನಾನೇನೂ ಕಚ್ಚಿಸಿಕೊಂಡಿಲ್ಲ. ನನ್ನ ಮಗಳು ಸ್ವಾತಿ ಚಿಕ್ಕವಳಿದ್ದಾಗ ಒಮ್ಮೆ ನಾಯಿಮರಿ ಕಚ್ಚಿತ್ತು. ಅದಕ್ಕೇ ನನಗೂ ಹೆದರಿಕೆ ಉಳಿದಿರಬಹುದು. ಅವಳಿಗೇ ಅದು ಮರೆತಿದೆ,ನನಗ್ಯಾಕೆ ನೆನಪಲ್ಲುಳಿದಿದೆಯೋ ಗೊತ್ತಾಗ್ತಿಲ್ಲ. ಯಾವುದೇ ಸಾಕು ಪ್ರಾಣಿಗಳನ್ನು ಅನುಮಾನದಿಂದಲೇ ನೋಡುವ ನನ್ನ ಪತ್ನಿಯ ಸ್ವಭಾವ ನನ್ನ ಮೇಲೂ ತುಸು ಪರಿಣಾಮ ಬೀರಿರಬಹುದು.
ನಾಯಿಗಳ ಗುಣದ ಬಗ್ಗೆ ಅಪಾರ ಸಂಶೋಧನೆಗಳು ನಡೆದಿವೆ. ಅವುಗಳ ಅವಗುಣಗಳ ಬಗ್ಗೆ ಏನೂ ವಿವರಗಳಿಲ್ಲ. ನನಗೆ ಅವುಗಳ ಬಗ್ಗೆ ಇರುವ ಒಂದು ಮುಖ್ಯ ತಕರಾರೆಂದರೆ ಹಗಲಿಡೀ ಎಲ್ಲಾದರೂ ಮಲಗಿ ಹೊತ್ತು ಕಳೆವ ಅವು ರಾತ್ರಿ ಯಾಕೆ ಕೂಗುತ್ತ ,ಊಳಿಡುತ್ತ ತ್ರಾಸು ಕೊಡುತ್ತವೆ ಎಂಬುದು. ನಮ್ಮ ಬೀದಿಯಲ್ಲಿರುವ ಎರಡು ನಾಯಿಗಳ ಸ್ವಭಾವ ಅದು. ಎಲ್ಲ ನಾಯಿಗಳೂ ಹಾಗೇ ಮಾಡುತ್ತವಾ?ಗೊತ್ತಿಲ್ಲ. ಎರಡು ಅಗುಳು ಹಿಚುಕಿ ಅಕ್ಕಿ ಬೆಂದಿದೆಯಾ ಇಲ್ಲವಾ ಎಂಬುದನ್ನು ನೋಡಬಹುದಂತೆ. ಅದೇ ತರ್ಕ ಇಲ್ಲೂ ಅಳವಡಿಸಿ ಎಲ್ಲಾ ನಾಯಿಗಳೂ ಹಾಗೇ ಎಂದು ನಾನು ಅಭಿಪ್ರಾಯಪಡುತ್ತೇನೆ. ಹಾಗಾಗಿ ನಾಯಿಗಳೆಂದರೆ ನಾನು ತುಸು ದೂರ.ಯಾರದ್ದಾದರೂ ಮನೆಗೆ ಹೋದಾಗಲೂ, ಅವರ ಮನೆಯಲ್ಲಿ ಒಂದು ಬಡಕಲು ನಾಯಿ ಕಂಡರೂ ಗೇಟಿನ ಬಳಿಯೇ ನಿಂತು ಬೊಬ್ಬೆ ಹೊಡೆದು ಮನೆಯವರಿಂದ ರಕ್ಷಣೆಯ ಸಂಪೂರ್ಣ ಆಶ್ವಾಸನೆ ದೊರೆತ ಅನಂತರವೇ ಒಳಗೆ ಹೋಗುತ್ತಿದ್ದೆ.
ಇವತ್ತು ಮಾಡಲೇನಾದರೂ ಘನಂದಾರಿ ಕೆಲಸ ಉಂಟಾ ಎಂದು ಯೋಚಿಸುತ್ತ ಮನೆಯ ಚಿಟ್ಟೆಯ ಮೇಲೆ ಕೂತಿದ್ದೆ. ಕುಂಯ್ ಕುಂಯ್ ಎಂಬ ಸದ್ದು ನನ್ನ ಯೋಚನಾಕ್ರಮವನ್ನು ಭಂಗಿಸಿತು. ನೋಡುತ್ತೇನೆ-ಏನು ನೋಡುವುದು-ಒಂದು ನಾಯಿಮರಿ ಗೇಟಿನ ಸರಳುಗಳ ನಡುವೆ ತಲೆತೂರಿಸಿ ಒಳಬರಲು ಹವಣಿಸುತ್ತಿದೆ."ಅಪ್ಪ,ಅದಕ್ಕೆ ಒಂದು ಬಿಸ್ಕತ್ ಕೊಟ್ಟೆ" ಎಂದು ಮಗಳು ಹೇಳಿದಳು. ಭೂಕಂಪವೇ ಆದಂತಾಯಿತು! ಈ ಬಿಸ್ಕತ್ತನ್ನು ಈ ಮನೆಯ ಸದಸ್ಯನಾಗಲು ಆಹ್ವಾನ ಎಂದು ಅದು ಭಾವಿಸಿದಂತೆ ನನಗೆ ಕಂಡಿತು.ಮರಿ ಒಳ ಬಂದು ನಮ್ಮನೆ ಖಾಯಂ ಸದಸ್ಯನಾಗುವ ಎಲ್ಲ ಅಪಾಯಗಳು ಕಂಡವು. ಹಚ ಹಚ ಎಂದೆ. ಅದಕ್ಕೆ ಹಚ್ ಹಚ್ ಎಂದಂತೆ ಕೇಳಿತೋ ಏನೊ! ಹಚ್ ಕಂಪನಿಗೆ ಮುಂಚೆ ನಾಯಿಯೇ ಮಾಡೆಲ್ ಆಗಿತ್ತಲ್ಲ! ಅದು ಉತ್ಸಾಹದಿಂದ ಜೋರಾಗಿ ಬಾಲ ಅಲ್ಲಾಡಿಸುತ್ತಾ ತನ್ನ ಪ್ರಯತ್ನ ತೀವ್ರಗೊಳಿಸಿತು. ಎದ್ದು ಬಂದು ಸಣ್ಣ ಕೋಲು ತೆಗೆದುಕೊಂಡು ಅದನ್ನು ಓಡಿಸಿ ಭಯಂಕರ ಅಪಾಯದಿಂದ ಪಾರಾದ್ದಕ್ಕೆ ನೆಮ್ಮದಿಪಟ್ಟೆ.
ಮಾರನೆಯ ದಿನ ಅದೇ ಹೊತ್ತಿಗೆ ಮತ್ತೆ ಬಂದು ಮತ್ತೆ ಕುಂಯ್ಗುಟ್ಟುತ್ತಾ ಒಳಬರಲು ಪ್ರಯತ್ನ ಮಾಡತೊಡಗಿತು. ಮತ್ತೆ ಸಣ್ಣಕೋಲು. ನಾಲ್ಕಾರು ದಿನ ಇದು ನಡೆಯಿತು.ಇದೆಷ್ಟು ಅಭ್ಯಾಸವಾಯಿತೆಂದರೆ ಆ ಹೊತ್ತಿಗೆ ಸರಿಯಾಗಿ ನಾನು ಹೊರಗಡೆ ಬಂದು ನಿಲ್ಲುತ್ತಿದ್ದೆ.ನಾಯಿಮರಿ ಬಂದು ಬಾಲ ಅಲ್ಲಾಡಿಸುತ್ತಾ ನಾನು ಕೋಲು ತೆಗೆದುಕೊಂಡಕೂಡಲೇ ಓಡುತ್ತಿತ್ತು. ಇದನ್ನು ದಿನಾ ನೋಡುತ್ತಿದ್ದ ನನ್ನ ಪುಟ್ಟ ಮಗಳು ಒಂದಿನ "ಅಯ್ಯೋ ಅದು ಬಂದ್ರೆ ಏನಾಗುತ್ತಪ್ಪ ಬಿಡು"ಎಂದಳು. ಏನಾಗುತ್ತೆ ಎಂದು ನಂಗೂ ಗೊತ್ತಿರಲಿಲ್ಲ. ಆದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ನಿನಗೆ ಗೊತ್ತಾಗಲ್ಲ,ಸುಮ್ನಿರು ಅಂದೆ. "ನೀನು ಹೊಡೀತಿ ಅಂತ ಗೊತ್ತಿದ್ರು ದಿನಾ ಬರುತ್ತಲ್ಲ..ಬುದ್ಧಿ ಇಲ್ಲ.ಸ್ಟುಪಿಡ್ ಪಪ್ಪಿ"ಅಂತ ಅಂದಳು.
ಹತ್ತನೇ ದಿನವೋ ಹನ್ನೊಂದನೆಯ ದಿನವೋ ನಾಯಿಮರಿ ಬರಲಿಲ್ಲ. ಸ್ವಲ್ಪ ತಡವಾಗಿ ಬರಬಹುದು ಎಂದು ನಾನು ಭಾವಿಸಿದೆ.ಅರ್ಧ ಗಂಟೆ ಕಳೆದರೂ ಬರಲಿಲ್ಲ. ಗೇಟಿಗೊರಗಿ ನಿಂತು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದೆ. ಸುಳಿವಿಲ್ಲ."ನಾಯಿಮರಿ ನೋಡ್ತಿದೀಯಾ? ಎಂದು ಮಗಳು ಕೇಳಿದಳು." ಇಲ್ಲ ಅಂತ ನಾನು ಅಂದದ್ದು ಸುಳ್ಳು ಅಂತ ಅವಳಿಗೂ ಗೊತ್ತಾಗಿರಬಹುದು."ಮರಿಗೆ ಅಂತೂ ಬುದ್ಧಿ ಬಂದಿರಬೇಕು" ಅಂತ ಮಗಳು ಖುಷಿಪಟ್ಟು ಹೇಳಿ ಸ್ಕೂಲಿಗೆ ಹೋಗಿದ್ದಳು.ನಾನು ನಾಯಿಮರಿಯನ್ನು ಹೆದರಿಸಿ ಓಡಿಸುವುದು ಅವಳಿಗೆ ತುಸು ಬೇಸರದ ಸಂಗತಿಯಾಗಿತ್ತು ಅಂತ ಕಾಣಿಸುತ್ತೆ. ಎಲಾ!ಯಾಕೆ ಬರಲಿಲ್ಲ? ನನಗೆ ವಿಚಿತ್ರ ಚಡಪಡಿಕೆ ಶುರುವಾಯಿತು. ಯಾವುದಾದರೂ ಬೈಕಿಗೋ, ಕಾರಿಗೋ ಸಿಕ್ಕು ಫಡ್ಚ ಅಯ್ತಾ ಎಂಬ ಯೋಚನೆ ಬಂದು ದಿಗಿಲಾಯಿತು.ಗೇಟಿನ ಹತ್ತಿರ ನಿಂತು ಹಾಗೇ ನೋಡುತ್ತಿದ್ದಾಗ ಏನು ನೋಡುತ್ತಿದ್ದೀರಿ? ಎಂದು ನನ್ನಾಕೆ ಕೇಳಿದಾಗ ಏನಿಲ್ಲ ನಾಯಿಮರಿ ಎಂದೆ. "ಎಲ್ಲಿದೆ ನಾಯಿಮರಿ?" ಪ್ರಶ್ನೆ. "ಎಲ್ಲೂ ಇಲ್ಲ" ಉತ್ತರ. ಇಲ್ಲದ, ಬರದಿದ್ದ ನಾಯಿಮರಿಯನ್ನು ನಾನು ನೋಡುತ್ತಿರುವುದು ಹೇಗೆ ಎಂದು ನನ್ನಾಕೆಗೆ ತಿಳಿಯದೆ "ಏನೋ.." ಎಂದು ಒಳಗೆ ಹೋದಳು.ಅವತ್ತಿಡೀ ಮನಸ್ಸು ತುಸು ಮಂಕಾಗಿತ್ತು.ಕಾರಿನ ಚಕ್ರಕ್ಕೆ ಸಿಕ್ಕು ಅಪ್ಪಚ್ಚಿಯಾದ ಅದರ ಪುಟ್ಟ ದೇಹದ ಬಗ್ಗೆ ಕಲ್ಪನೆ ಬಂದಾಗ ಮನಸ್ಸಿಗೆ ಸಣ್ಣ ಕಂಪನ.ಸತ್ತಿರಲಿಕ್ಕಿಲ್ಲ ಎಂದು ನನ್ನ ನಾನೇ ನಂಬಿಸಿಕೊಳ್ಳುತ್ತಿದ್ದೆ. ದಿನವಿಡೀ ಕುಂಯ್..ಕುಂಯ್..ಸದ್ದು ಕೇಳೀತೇ ಎಂದು ಗೇಟಿನತ್ತಲೇ ಗಮನ. ಸದ್ದಿಲ್ಲ. ನಾಯಿಮರಿ ಬಂದಿತ್ತಾ ಅಪ್ಪಾ ಎಂದು ಮಗಳು ಶಾಲೆಯಿಂದ ಬಂದವಳು ಕೇಳಿದಳು. 'ಇಲ್ಲ. ನಿನಗ್ಯಾಕೆ ಬೇಸ್ರ ಅದು ಬರದಿದ್ರೆ?"ಅವಳನ್ನು ಸಮಧಾನಪಡಿಸುವಂತೆ ಹೇಳಿದೆ.ನನ್ಗೆ ಅದು ಒಂದು ವಿಷಯವೇ ಅಲ್ಲ ಎಂದು ನನಗೂ ನಂಬಿಸಿಕೊಳ್ಳಬೇಕಾಗಿತ್ತು. ಮಗಳು ಮುಂದೇನೂ ಮಾತಾಡಲಿಲ್ಲ. ಅವತ್ತು ಅವಳ ಚಟುವಟಿಕೆಯಲ್ಲಿ ಎಂದಿನ ಲವಲವಿಕೆ ಕಾಣಲಿಲ್ಲ.
ಇನ್ನೂ ಎರಡು ದಿನ ಕಳೆದರೂ ಮರಿ ಪತ್ತೆಯಿಲ್ಲ. ನನ್ನ ಮಗಳು ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ತುಸು ಸಪ್ಪೆ ಮುಖದಲ್ಲಿ ಸ್ಕೂಲಿಗೆ ಹೋಗುತ್ತಿದ್ದಳು. "ನಿನ್ನ ಕೋಲಿಗೆ ಹೆದರಿ ಬಂದಿಲ್ಲ."ಎಂದು ಹೇಳಿದಳು. ನನಗೆ ಏನುತ್ತರ ಕೊಡಬೇಕು ತಿಳಿಯದೆ ಅವಳನ್ನೇ ಸುಮ್ಮನೇ ನೋಡಿದೆ."ನೀನು ತಪ್ಪು ಮಾಡಿದೆ"ಎಂಬ ಭಾವನೆ ಅವಳ ನೋಟದಲ್ಲಿತ್ತೇ?
ನಾಲ್ಕನೆದಿನ "ಬಂತು" ಎಂಬ ಕೂಗು ಕೇಳಿ ಛಕ್ಕಂತ ಎದ್ದು ಹೊರಗೆ ಬಂದೆ. ನಾಯಿಮರಿ ಯಥಾಪ್ರಕಾರ ಬಾಲ ಅಲ್ಲಾಡಿಸುತ್ತ ನಿಂತಿತ್ತು. ಮಗಳ ಮುಖದಲ್ಲಿ ಮಂದಹಾಸ. ನಾನು ಒಳಗೆ ಹೋಗಿ ಎರಡು ಬಿಸ್ಕತ್ ತಂದೆ.ನಾನೊಂದು ಕೊಡ್ತೀನಿ ಎಂದು ಮಗಳು ಕೊಟ್ಟಳು. ಬಾಲ ಉದುರಿಹೋಗಬಹುದು ಎಂದು ನಮಗನಿಸುವಷ್ಟು ರಭಸದಲ್ಲಿ ಬಾಲ ಅಲ್ಲಾಡಿತು.
"ಅಪ್ಪ, ಅದಕ್ಕೆ ನೀನು ಹೊಡೀತೀಯ ಅನ್ನೋದು ನೆನಪಿಲ್ಲ. ಬಿಸ್ಕತ್ ಕೊಟ್ಟಿದ್ದು ನೆನಪಿದೆ.ಅದಕ್ಕೇ ಬಂತು"ಅಂದಳು.
ಬೆಚ್ಚಿದೆ.ಯಾವುದೋ ಊರಲ್ಲಿ ಯಾವಾಗಲೋ ಮಗಳಿಗೆ ನಾಯಿ ಕಚ್ಚಿದ ನೆನಪಲ್ಲಿ ಇದನ್ನು ನಾನು ಹೆದರಿಸುತ್ತಿದ್ದೆ. ತನ್ನನ್ನೇ ಹೆದರಿಸಿದರೂ ಇದು ಕೋಲನ್ನು ಮರೆತು ಮಗಳು ಕೊಟ್ಟ ಬಿಸ್ಕತ್ತನ್ನು ಮಾತ್ರ ನೆನಪಲ್ಲಿಟ್ಟುಕೊಂಡಿತ್ತು. ತಪ್ಪನ್ನು ಕ್ಷಮಿಸುವ ಮಾನವೀಯ ಗುಣ[?] ನನಗಿಂತ ಈ ನಾಯಿಮರಿಗೆ ಜಾಸ್ತಿ ಇದ್ದಂತಿತ್ತು! ಆ ಕ್ಷಣದಲ್ಲಿ ಆ ಮರಿ ಸಂತನ ಗುಣವುಳ್ಳ ನರನಂತೆಯೂ ನಾನು ಕ್ರೂರ ಪ್ರಾಣಿಯಂತೆಯೂ ನನಗೆ ಭಾಸವಾಯಿತು.

9 comments:

Gowtham said...

ಸಖತ್ತಾಗಿ ಬರದ್ದೆ.

Aditya Bedur said...
This comment has been removed by the author.
Aditya Bedur said...

ನಿಜ, ನಮ್ಮ ಮನೆಯಲ್ಲು ಸುಮಾರು ೩೦ ವರ್ಷಗಳಿಂದ ನಾಯಿ ಸಾಕಿದ್ದೇವೆ, ಸಾಕಿದ್ದೇವೆ ಅನ್ನುವುದಕ್ಕಿಂತ ಅದು ನಮ್ಮ ಮನೆಯ ಖಾಯಂ ಸದಸ್ಯತ್ವ ಪಡೆದಿದೆ ಎಂದರೂ ತಪ್ಪಾಗಲಾರದು, ನಾಯಿಯ ಬಗ್ಗೆ ಬರೆದದ್ದು ಓದಿ ಸಂತೋಷವಾಯಿತು..


ನಾಯಿಗಳು ಎಂದೂ ಸುಮ್ಮನೆ ಕಚ್ಚಕ್ಕೆ ಬರದಿಲ್ಲೆ.. ಅದಕ್ಕೆ ಅಪಾಯ ಆಗ್ತು ಅನ್ಸಿದ್ರೆ ಕಚ್ತು ಅಸ್ಟೆ.. ಈಗ ಹದಿನಾಲ್ಕು ಇಂಜೆಕ್ಷನ್ ಎಲ್ಲಾ ತಗಳದು ಬ್ಯಾಡದ ಒಂದೇ ಇಂಜೆಕ್ಷನ್ ಬೈಂದು, ಹೆದ್ರಡ!.

Unknown said...

ಸಖತ್ತಾಗಿ ಬರದ್ದೆ.
Nandu ade matu

ShruBhanu said...

hummm nange nenapiddu...mattondu naayi katenenapatu..(2 naayi marigaLiddu)..naija vaage baindu..

ಗೌತಮ್ ಹೆಗಡೆ said...

cholo barde:)

ಶ್ರೀನಿಧಿ.ಡಿ.ಎಸ್ said...

ಹಮ್.. ಚೆನ್ನಾಗಿದೆ..

ತೇಜಸ್ವಿನಿ ಹೆಗಡೆ said...

ತುಂಬಾ ಇಷ್ಟವಾಯಿತು ಸರ್ ನಿಮ್ಮ ಬರಹ. ನಂಗೂ ನಾಯಿ ಅಂದ್ರೆ ರಾಶಿ ಭಯ :) ನನ್ನವರು ಅತಿ ನಂಬಿಗಸ್ಥ ಪ್ರಾಣಿ ಅಂದರೂ ಈ ವರೆಗೂ ನಾಯಿಯ ನೆರಳೂ ಮನೆಯ ಹತ್ತಿರ ಬರಲು ಬಿಟ್ಟಿಲ್ಲ! ಅದೇಕೋ ಎಂತೋ ಅತೀವ ಭಯ ಕಾಡುತ್ತಲೇ ಇರುತ್ತದೆ. ಹಾಗೆಂದು ನಾಯ ಪ್ರತಿ ದ್ವೇಷವಿಲ್ಲ. ಪುಟ್ಟ ಮರಿಗಳು ಕಾರನ್ನು ಹಾಯುವಾಗ, ನಾಯಿ ವಾಹನಗಳಿಗೆ ಅಡ್ಡ ಬಂದು ಸತ್ತಿರುವುದನ್ನು ನೋಡುವಾಗ ತುಂಬಾ ಸಂಕಟವಾಗುತ್ತದೆ. ಕೊನೆಯಲ್ಲಿ ನೀವು ಹೇಳಿದ ಸಾಲುಗಳು ಅಕ್ಷರಶಃ ನಿಜ. ಬಲು ಅರ್ಥವತ್ತಾಗಿದೆ.

Manjunatha Kollegala said...

ಸೊಗಸಾದ ಲಹರಿ. ಕೊನೆ ಭಾಗ ಮನಕಲಕುವಂತಿತ್ತು.