Saturday, October 30, 2010

ವಂಶವನರುಹಿ ಕೊಂದನು..

.
ತನ್ನ ಹುಟ್ಟಿನ ಮಾಹಿತಿಯನ್ನು ಕೃಷ್ಣನಿಂದ ತಿಳಿದ ಸಂದರ್ಭವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯನ್ನು ವಿವರಿಸಿ,ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.
ಸಂಧಾನದ ಪ್ರಯತ್ನ ವಿಫಲವಾದ ಅನಂತರ,ಕೌರವನ ಸಭೆಯಿಂದ ಹೊರಟ ಕೃಷ್ಣ ಕರ್ಣನನ್ನು ಕರೆದು ರಥವೇರಿಸಿಕೊಳ್ಳುತ್ತಾನೆ."ಮೈದುನತನದ ಸರಸವನೆಸಗಿ ರಥದೊಳು ದನುಜರಿಪು ಕುಳ್ಳಿರಿಸಿದನು ಪೀಠದಲಿ".ಕರ್ಣನಿಗೆ ಭಯ, ವಿಸ್ಮಯ, ಗಾಬರಿ. " ಎನಗೆ ನಿಮ್ಮಡಿಗಳಲಿ ಸಮಸೇವನೆಯೇ ದೇವ ಮುರಾರಿಯಂಜುವೆ"  " ವಂಶವಿಹೀನನು ನಿಮ್ಮಡಿಗಳೊಡನೆ ಸಮಾನಿಸುವರೇ " ಎಂದಾಗ ಕೃಷ್ಣ ಅವನಿಗೆ ಅವನ ಜನ್ಮದ ವಿವರಣೆ ನೀಡುತ್ತಾನೆ."ಲಲನೆ ಪಡೆದೀಯೈದು ಮಂತ್ರಗಳಲಿ ಮೊದಲಿಗ ನೀನು". ನೀನು ಎಲ್ಲರಿಗೂ ಹಿರಿಯ.ನೀನೊಪ್ಪಿದರೆ ಈ ಯುದ್ಧವನ್ನು ತಪ್ಪಿಸಬಹುದು."ಪಾಂಡವರಲೈವರ ಮೊದಲಿಗನು ನೀನಿರಲು ಧರಣಿಯ ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು". ಅಷ್ಟೇ ಅಲ್ಲ ಅವನಿಗೆ ಪ್ರಲೋಭನೆ ಒಡ್ಡುತ್ತಾನೆ. "ನಿನಗೆ ಕಿಂಕರವೆರಡು ಸಂತತಿ" "ಎಡದ ಮೈಯಲಿ ಕೌರವೇಂದ್ರರ ಗಡಣ ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳುಪ್ಪುವ ಕಡು ವಿಲಾಸವ ಬಿಸುಟು ಕುರುಪತಿ ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ" ತಾನು ಕುಲವಿಹೀನ ಎಂಬ ಕೀಳರಿಮೆಯಿಂದ ಬಳಲುತ್ತಿದ್ದ ಕರ್ಣ ಈ ಆಹ್ವಾನವನ್ನು ಒಪ್ಪಿದ್ದರೆ ಆತನಿಗೆ ಕುಲವೂ ಸಿಗುತ್ತಿತ್ತು, ಅಧಿಕಾರವೂ ಸಿಗುತ್ತಿತ್ತು. ಆದರೆ ಹಾಗಾಗುವುದಿಲ್ಲ. ಕರ್ಣನ ಪ್ರತಿಕ್ರಿಯೆ ಗಮನಿಸಿ.ಕರ್ಣನ ಕಂಠ ಬಿಗಿಯಿತು. ಕಣ್ಣೀರು ಉಕ್ಕಿತು."ಕೊರಳಸೆರೆ ಹಿಗ್ಗಿದವು ದೃಗುಜಲ ಉರವಣಿಸಿ ಕಡು ನೊಂದನಕಟಾ ಕುರುಪತಿಗೆ ಕೇಡಾದುದೆಂದನು ಮನದೊಳಗೆ" ಸತ್ಕುಲಜಾತನಾದ ತನಗೆ ಇಲ್ಲಿಯವರೆಗೂ ಬಂದ ಕಷ್ಟಗಳ ನೆನದು ದುಃಖವಾದದ್ದಲ್ಲ,...ಅಯ್ಯೋ.! ಕುರುಪತಿಗೆ ಕೇಡಾಯಿತಲ್ಲ! ಎಂದು.ಅಧಿಕಾರ ಸಿಗುತ್ತದೆ ಎಂಬ ಸಂತೋಷವಿಲ್ಲ. ಗೆಳೆಯನಿಗೆ ಅನ್ಯಾಯವಾಯಿತಲ್ಲ ಎಂಬುದು ಅವನ ಮೊದಲ ಪ್ರತಿಕ್ರಿಯೆ. ಕರ್ಣನಿಗೆ ಅವನ ವಂಶ ತಿಳಿದರೆ ಕೌರವನಿಗೆ ಹೇಗೆ ಅನ್ಯಾಯವಾಗುತ್ತದೆ? "ಕಾದಿ ಗೆಲುವೊಡೆ ಪಾಂಡು ಸುತರು ಸಹೋದರರು ಕೊಲಲಿಲ್ಲ ಕೊಲ್ಲದೆ ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ."  ವಂಶ ತಿಳಿದ ಅನಂತರ, ಸಹೋದರರಾದ ಪಾಂಡವರನ್ನು ಕೊಲ್ಲುವ ಹಾಗಿಲ್ಲ. ಕೊಲ್ಲದಿದ್ದರೆ ಕೌರವನಿಗೆ ಅವನಿ ಇಲ್ಲ. ಇಲ್ಲಿ "ಕೊಲ್ಲದೆ ಕಾದೆನಾದೊಡೆ" ಎಂಬ ಪ್ರಯೋಗ ಗಮನಿಸಬೇಕು.ಕಾದು ಎಂಬ ಪದಕ್ಕೆ ಕಾಳಗ ಮಾಡು ಎಂಬ ಅರ್ಥವಲ್ಲದೆ ಕಾಪಾಡು ಎಂಬ ಅರ್ಥವೂ ಇದೆ. ಆದ್ದರಿಂದ ಈ ಹೇಳಿಕೆಯನ್ನು ಪಾಂಡವರನ್ನು ಕೊಲ್ಲದೆ ಯುದ್ಧ ಮಾಡಿದರೆ ಎಂಬಂತೆಯೂ, ಹಾಗೆಯೇ ಪಾಂಡವರನ್ನು ಕೊಲ್ಲದೆ ರಕ್ಷಿಸಿದರೆ ಎಂಬಂತೆಯೂ ಅರ್ಥ ಮಾಡಬಹುದು. ಯಾವರೀತಿಯಲ್ಲಿ ಕರ್ಣ ವರ್ತಿಸಿದರೂ "ಕೌರವಂಗವನಿಯಲಿ ಹೊಗಲಿಲ್ಲ." ಕೌರವನಿಗೆ ಕೇಡಾಗುತ್ತದೆ ಎಂದು ಕರ್ಣನಿಗೆ ಅನ್ನಿಸಲು ಇದು ಕಾರಣ.
 ಕರ್ಣನ ಮುಂದಿನ ಪ್ರತಿಕ್ರಿಯೆ: "ತನ್ನ ವಂಶವನರುಹಿ ಕೊಂದನು". ವಂಶ ತಿಳಿಯಿತು ಎಂಬ ಸಂಭ್ರಮವಿಲ್ಲ, ಬದಲಿಗೆ ಆದದ್ದು ಚಿಂತೆ.  ವಂಶವನ್ನರುಹಿ ಯಾರನ್ನು ಕೊಂದ? ವಂಶ ತಿಳಿದರೆ ಕರ್ಣ ಯಾಕೆ ಸಾಯಬೇಕು? ಯಾಕೆಂದರೆ ಇನ್ನು ಮುಂದೆ ಕರ್ಣನಿಗೆ ಅರ್ಜುನ ವೈರಿಯಲ್ಲ,ತಮ್ಮ. "ವಿಜಯನಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ". ತಮ್ಮ ಎಂದು ತಿಳಿದೂ ಕರ್ಣ ಹೇಗೆ ಕೊಲ್ಲಬಲ್ಲ? ಹಾಗಂತ ತಾನು ಅರ್ಜುನನನ್ನು ಕೊಲ್ಲದಿದ್ದರೆ ಅರ್ಜುನ ಅಂತೂ ತನ್ನನ್ನು ಬಿಡುವವನಲ್ಲ. ಹಾಗಾಗಿ ಸಾವು ನಿಶ್ಚಿತ. ಕರ್ಣನ ಮಟ್ಟಿಗೆ ತನ್ನ ಹುಟ್ಟಿನ ಬಗೆಗಿನ ಅರಿವು ಸಾವಿನ ಕಾರಣವಾಗುತ್ತಿದೆ ಎಂಬ ಧ್ವನಿಯನ್ನು ತುಂಬಾ ಸರಳವಾದ "ವಂಶವನರುಹಿ ಕೊಂದನು" ಎಂಬ ಹೇಳಿಕೆಯ ಮೂಲಕ ಕುಮಾರವ್ಯಾಸ ಸೂಚಿಸುತ್ತಾನೆ.
(ಕೌರವ ಮತ್ತು ಕರ್ಣ ಇವರದು ಬಹಳ ಆಪ್ತವಾದ ಸ್ನೇಹ ಎಂಬುದು ನಮಗೆ ಗೊತ್ತು.  ಸ್ನೇಹದ ತೀವ್ರತೆಯಿಂದಾಗಿಯೇ ಕರ್ಣನ ಮೊದಲ ಪ್ರತಿಕ್ರಿಯೆ " ಕುರುಪತಿಗೆ ಕೇಡಾದುದು".
 ಇವರಿಬ್ಬರ ಸ್ನೇಹದ ಬಗ್ಗೆ ಬೇರೆಯವರಿಗೂ ಯಾವ ಭಾವನೆಯಿತ್ತು ಎಂಬುದರ ಸೊಗಸಾದ ಚಿತ್ರಣ ಇಲ್ಲಿದೆ; ಕರ್ಣನ ಮರಣಾನಂತರ ಕೃಪ ಹೇಳುವ ಮಾತು:
"ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹು ವಿಕ್ರಮವ ||
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ || ---ಶಲ್ಯಪರ್ವ, ೧-೧೬.)
ಯಾರೇನು ಹೇಳಿದರೂ, ತಾನು ಯಾವ ವಂಶಜನಾದರೂ ಅರ್ಜುನನನ್ನು ಕೊಲ್ಲುತ್ತೇನೆ ಎಂದು ಕರ್ಣ ತೀರ್ಮಾನಿಸದೆ ತನ್ನ ಸಾವನ್ನು ಯಾಕೆ ನಿಶ್ಚಯಿಸಿದ? ಆತ ಕೃಷ್ಣನಿಗೆ ಹೇಳುವ ಮಾತನ್ನು ಗಮನಿಸಿ: "ಹಲವು ಮಾತೇನಖಿಳ ಜನಕೆನ್ನುಳಿವು ಸೊಗಸದು". ಕೌರವನನ್ನು ಹೊರತುಪಡಿಸಿ ಉಳಿದೆಲ್ಲರಿಂದಲೂ ಸದಾ ಅವಮಾನವನ್ನು ಅನುಭವಿಸುತ್ತಿದ್ದ,ಭರ್ತ್ಸನವನ್ನೇ ಕೇಳುತ್ತಿದ್ದ ಕರ್ಣನಿಗೆ ಅನ್ನಿಸಿತ್ತು: ಯಾರಿಗೂ ತನ್ನ ಬದುಕು ಇಷ್ಟವಿಲ್ಲ. ಹಾಗಾಗಿ ತನಗೂ ಬದುಕು ಬೇಡ. (ಉಳಿವು= ಬದುಕು, ಜೀವನ). ಕೃಷ್ಣ ವಂಶವನ್ನು ತಿಳಿಸಿದಾಗ ತಾನು ಬದುಕುವುದು ಕೃಷ್ಣನಿಗೂ ಇಷ್ಟವಿಲ್ಲ ಎಂದು ಕರ್ಣನಿಗೆ ಅನಿಸಿರಬೇಕು. ತನ್ನ ಸಾವು ಕೃಷ್ಣನ ಗುರಿಯಾಗಿರುವುದರಿಂದಲೇ "ವಂಶವನರುಹಿ ಕೊಂದನು". ಎಂದು ಕರ್ಣನಿಗೆ ಅನ್ನಿಸುತ್ತದೆ. ತನ್ನ ಸಾವನ್ನು ನಿಶ್ಚಯಿಸಿಕೊಂಡ ಬಳಿಕ ಕರ್ಣ ಕೃಷ್ಣನಿಗೆ ಭರವಸೆ ಕೊಡುತ್ತಾನೆ: "ಪತಿಯವಸರಕ್ಕೆ ಶರೀರವನು ನೂಕುವೆನು ನಿನ್ನಯ ವೀರರೈವರ ನೋಯಿಸೆನು "(ಕಾದಿ ಕೊಲುವೊಡೆ) ಪಾಂಡುಸುತರು ಸಹೋದರರು ಎಂಬ ಭಾವನೆ ,ತನ್ನ ಸಾವನ್ನು ನಿಶ್ಚಯಿಸಿದ ಅನಂತರ ಬದಲಾಗುತ್ತದೆ. "ನಿನ್ನಯ ವೀರರೈವರು" ಎನ್ನುತ್ತಾನೆ. ಆ ಐವರ ಮಾತ್ರ ನಿನ್ನವರು, ನಾನು ಅದೇ ವಂಶಜನಾದರೂ ನಿನ್ನವನಲ್ಲ ಎಂಬ ಧ್ವನಿಯನ್ನೂ ಗಮನಿಸಬಹುದು.ಕೌರವ ಸತ್ತು ತಾನುಳಿದರೂ ತನಗೆ ಆಪ್ತರಿಲ್ಲ. ಯಾಕೆಂದರೆ "ಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ." ಪಾಂಡವರು ತಮ್ಮಂದಿರು ಎಂದಾದರೂ ಕೌರವನಷ್ಟು ಆಪ್ತರಾಗಲು ಸಾಧ್ಯವಿಲ್ಲ. ಹುಟ್ಟಿನ ಸಂಬಂಧಕ್ಕಿಂತ ಒಡನಾಟದ ಸಂಬಂಧ ಹೆಚ್ಚು ಎಂಬುದನ್ನು ಕರ್ಣ ನಂಬುತ್ತಾನೆ. ಅತ್ತ ಪಾಂಡವರಿಗೂ ಆಪ್ತನಾಗದೆ ಇತ್ತ ಕೌರವನಿಗೂ ನ್ಯಾಯ ಕೊಡದೆ ಬದುಕುವ ಬದಲು ಸಾಯುವುದೇ ಲೇಸು ಎಂದು ಕರ್ಣ ತೀರ್ಮಾನಿಸುತ್ತಾನೆ."ಪತಿಯವಸರಕ್ಕೆ ಶರೀರವನು ನೂಕುವೆನು"ಎಂದು ತೀರ್ಮಾನಿಸುತ್ತಾನೆ.
***ಕುಮಾರವ್ಯಾಸ ಭಾರತವನ್ನು ಮತ್ತೆ ಮತ್ತೆ ಓದುತ್ತೇನೆ. ಆಗೆಲ್ಲ ನನಗೆ ಎದುರಾಗುವ ಅನೇಕ ಪ್ರಶ್ನೆಗಳಿವೆ.  ಯಾಕೆ ಕೃಷ್ಣ ಕರ್ಣನಿಗೆ ಅವನ ಕುಲವನ್ನು ತಿಳಿಸಿದ? ಅದೂ ಸಂಧಿಯ ಪ್ರಯತ್ನ ವಿಫಲವಾದ ಅನಂತರ?
ಕರ್ಣ ಅರ್ಜುನನನ್ನು ಕೊಲ್ಲಬಹುದು ಎಂಬ ಅನುಮಾನವಿತ್ತೇ? ಭೀಷ್ಮ,ದ್ರೋಣ ಇವರು ಕೌರವನ ಪಕ್ಷವಾದರೂ ಅವರ ಮನಸ್ಸು ಪಾಂಡವರ ಕಡೆಗೆ ಎಂಬುದು ತಿಳಿದಿತ್ತು. ಹಾಗಾಗಿ ಅವರನ್ನು ಗೆಲ್ಲುವ ಬಗ್ಗೆ ಅನುಮಾನವಿಲ್ಲ. ಆದರೆ ಕರ್ಣ ಹಾಗಲ್ಲ. ಅವನು ಪಕ್ಕಾ ಪಾಂಡವವಿರೋಧಿ. ಅವನನ್ನು ಈ ತಂತ್ರದಿಂದ ಮಾತ್ರ ಮಣಿಸಬಹುದು ಎಂದು ತರ್ಕಿಸಿದನೇ? ಅಥವಾ ಕೃಷ್ಣನಿಗೆ ಅರ್ಜುನನ ಶೌರ್ಯದ ಬಗ್ಗೆ ಅನುಮಾನವಿತ್ತೇ?(ಮಹಾಭಾರತದ ಯುದ್ಧದಲ್ಲಿ ಭೀಷ್ಮ,ದ್ರೋಣ, ಕರ್ಣ, ಜಯದ್ರಥ ಎಲ್ಲರನ್ನೂ ಅರ್ಜುನ ಗೆದ್ದದ್ದು ಕೃಷ್ಣನ ತಂತ್ರಗಾರಿಕೆಯಿಂದ ಎಂಬ ಅಂಶವನ್ನೂ ಗಮನಿಸಬಹುದು.) ಸಂಧಿಪ್ರಯತ್ನಕ್ಕಿಂತ ಮೊದಲೇ ಕರ್ಣನಿಗೆ ಅವನ ಕುಲ ತಿಳಿಸಿದರೆ, ಅಕಸ್ಮಾತ್ ಕರ್ಣ ಕೌರವನಿಗೆ ಪಾಂಡವರಿಗೆ ಐದು ಗ್ರಾಮಗಳನ್ನು ಕೊಟ್ಟುಬಿಡು ಎಂದು ಹೇಳಿದರೆ..ಕೌರವ ಹಾಗೇ ಮಾಡಿದರೆ....ಈ ಅನುಮಾನವೂ ಕೃಷ್ಣನಿಗೆ ಇತ್ತೇ? ಹಾಗಾಗಿ ಸಂಧಿಯ ಅನಂತರ, ಇನ್ನು ಯುದ್ಧ ತಪ್ಪಲಾರದು ಎಂದು ಖಾತ್ರಿಯಾದ ಅನಂತರವೇ ವಂಶ ತಿಳಿಸಿದನೇ?

6 comments:

sunaath said...

ಕೃಷ್ಣಕಾರಸ್ಥಾನದ ಪರಿಯನ್ನು ಹಾಗು ಕರ್ಣನ ಮಾನಸಿಕ ಆಂದೋಲನವನ್ನು ಎಳಎಳೆಯಾಗಿ ಹಿಂಜಿ ತೋರಿಸಿದ್ದೀರಿ. ಕುಮಾರವ್ಯಾಸ ಭಾರತದಲ್ಲಿಯ ಸ್ವಾರಸ್ಯದ ಪ್ರಸಂಗಗಳನ್ನು ಇದೇ ರೀತಿಯಾಗಿ ನಮಗೆ ತೋರಿಸಿ ಕೊಡಲು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.

Shiv said...

ಮೃತುಂಜಯ ಸರ್,

ಮಹಾಭಾರತದ ಮಹಾನ್ ದುರಂತನಾಯಕ ಕರ್ಣನ ಮನದಾಳದ ಮಾತುಗಳು ಕುಮಾರವ್ಯಾಸ ವಿವರಿಸಿದ ರೀತಿ ಅಪೂರ್ವವಾದದ್ದು.

ಕೃಷ್ಣ ಯಾಕೆ ಹಾಗೆ ಮಾಡಿದ ಎನ್ನುವುದು ಸಂಕಷ್ಟದ ಪ್ರಶ್ನೆ..ಬಹುಷಃ ಆ ಮುರಾರಿಗೂ ಅನಿಸಿರಬಹುದು ಯುದ್ದ ಭೂಮಿಯಲ್ಲಿ ಕರ್ಣನನ್ನು ಮಣಿಸುವುದು ಅಸಾಧ್ಯವೆಂದು. ಆದ್ದರಿಂದಲೇ ಮೊದಲೇ ಮಾನಸಿಕವಾಗಿ ಕೊಂದುಬಿಟ್ಟರಬಹುದು..

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Manjunatha Kollegala said...

ಪಾತ್ರಪೋಷಣೆಯ ಧೋರಣೆಯಲ್ಲಿ ಬಹುಪಾಲು ವ್ಯಾಸರನ್ನೇ ಅನುಸರಿಸುವ ಕುಮಾರವ್ಯಾಸ, ರನ್ನ-ಪಂಪರಂತೆ ಯಾವುದೋ ಒಂದುಪಾತ್ರವನ್ನು ವೈಭವೀಕರಿಸಹೋಗುವುದಿಲ್ಲ. ಆದರೆ ಯಾವುದೇ ಪಾತ್ರಕ್ಕೂ ಅನ್ಯಾಯ ಮಾಡದೇ ಪಾತ್ರವೊಂದು ಸ್ವತಃಸತ್ವದಿಂದ ಬೆಳಗುವಂತೆ ಚಿತ್ರಿಸುವುದು ಕುಮಾರವ್ಯಾಸನ ಸಿದ್ಧಿ; ಅದು ಭೀಷ್ಮನಿರಬಹುದು, ಅರ್ಜುನನಿರಬಹುದು ಅಥವ ದುರ್ಯೋಧನನಿರಬಹುದು, ಕರ್ಣನಿರಬಹುದು. ಮಹಾವೀರನಾದ ಕರ್ಣನ ನಿಷ್ಠುರ ಸ್ವಾಮಿನಿಷ್ಠೆ ಕೃಷ್ಣನಿಗೆ ತಿಳಿಯದ್ದೇನಲ್ಲ. ಆದ್ದರಿಂದ ಅವನ ಜನ್ಮವೃತ್ತಾಂತವನ್ನು ಸಂಧಿಯಮೊದಲೇ ತಿಳಿಸಿದ್ದರೂ ಕರ್ಣನ ನಿಲುವಿನಲ್ಲಿ ಬದಲಾವಣೆಯಾಗುತ್ತಿದ್ದಂತೇನೂ ಕಾಣದು. ಬದಲಿಗೆ ಇಡೀ ಪ್ರಸಂಗದ ಹದ ಹೇಗೆ ಕೆಟ್ಟುಹೋಗುವುದೋ ನೋಡಿ. ಅಪ್ರತಿಮ ಸ್ವಾಮಿನಿಷ್ಠನಾದ ಕರ್ಣನಿಗೆ ತನ್ನ ಜನ್ಮವೃತ್ತಾಂತ ಮೊದಲೇ ತಿಳಿದಿದ್ದರೆ ಅದನ್ನವನು ದುರ್ಯೋಧನಿಗೆ ತಿಳಿಸದೇ ಬಿಡುತ್ತಿರಲಿಲ್ಲ. ಕರ್ಣನೇ ಸ್ವತಃ ಯುದ್ಧವನ್ನು ನಿಲ್ಲಿಸುವಂತೆ ಸೂಚಿಸದಿದ್ದರೂ, ಜನ್ಮದಿಂದ ಪಾಂಡವರ ಅಣ್ಣನಾದ ಕರ್ಣನ ನಿಷ್ಠೆ ದುರ್ಯೋಧನನ ದೃಷ್ಟಿಯಲ್ಲಿ ಶಂಕೆಗೀಡಾಗುತ್ತಿತ್ತು. ಕರ್ಣನೇನೋ ನಿಷ್ಠನಾದರೂ ದುರ್ಯೋಧನನಿಗೆ ಕರ್ಣನಬಗ್ಗೆ ಅಷ್ಟೇ ನಿಷ್ಠೆಯಿದ್ದಂತೆ ಕಾಣದು. ಸ್ವಂತ ನೆರಳನ್ನೇ ನಂಬದ ದುರ್ಯೋಧನಿಗೆ ಕರ್ಣನ ಅಪ್ರತಿಮ ನಿಷ್ಠೆಯನ್ನು ಕಣ್ಮುಚ್ಚಿ ನಂಬಲು ಒಂದೇ ಕಾರಣ ಕರ್ಣನ ವ್ಯಕ್ತಿತ್ವ ಮತ್ತು ಅವನು ಅನಾಥನೆಂಬುದು. ಈಗ ಅವನು ಪಾಂಡವರ ಅಣ್ಣನೆಂದು ತಿಳಿದರೆ (ಅದು ಕರ್ಣನಿಗೂ ತಿಳಿದಿರುವುದು ತಿಳಿದರೆ), ಕರ್ಣನ ಮೇಲಿನ ದುರ್ಯೋಧನನ ನಂಬಿಕೆ ಹಾಗೇ ಉಳಿಯುತ್ತದೆಯೇ ಎಂಬುದು ಅನುಮಾನ. ಹಾಗೊಂದುವೇಳೆ ಅದು ನಾಶವಾದರೆ, ದುರ್ಯೋಧನ ಮತ್ತಾರನ್ನಾದರೂ ನೆಚ್ಚಿ ಯುದ್ಧಹೂಡುತ್ತಿದ್ದನೇ, ಅನುಮಾನ. ಆದರೆ ಕೃಷ್ಣನ ಕಾರ್ಯತಂತ್ರವೆಂದರೆ ಕೌರವರನ್ನು ಯುದ್ಧದಲ್ಲಿ ಕಟ್ಟುವುದು, ಸಕಲತಂತ್ರಗಳನ್ನೂ ಬಳಸಿ ಅವನ ಬಲಗಳನ್ನು ಕತ್ತರಿಸುವುದು ಮತ್ತು ಕೊನೆಗೆ ಯುದ್ಧದಲ್ಲಿ ಅವರನ್ನು ನಿಶ್ಶೇಷಗೊಳಿಸುವುದು ಇಷ್ಟೇ. ಅದಿಲ್ಲದಿದ್ದರೆ ರಾಜತಂತ್ರನಿಪುಣನಾದ ಕೃಷ್ಣ ಸಂಧಿಯನ್ನು ಸ್ಥಿರಗೊಳಿಸುವುದು ಕಷ್ಟವಿತ್ತೇ? ಆದರೆ ಸಂಧಿಯ ಮಾತುಕತೆಯುದ್ದಕ್ಕೂ ಅವನು ಶಾಂತಿಯ ಹೆಸರಿನಲ್ಲಿ ಯುದ್ಧವನ್ನೇ ಪ್ರೇರೇಪಿಸುವುದನ್ನು ಕಾಣುತ್ತೇವೆ. ಆದ್ದರಿಂದ ವಿಫಲ ಸಂಧಿಯ ನಂತರ ಕರ್ಣನ ಜನ್ಮವೃತ್ತಾಂತವನ್ನು ಅರುಹುವ ಕೃಷ್ಣನ ಉದ್ದೇಶ ಕರ್ಣನನ್ನು ಉದ್ಧರಿಸುವುದಕ್ಕಿಂತ "ಕೌರವೇಂದ್ರನ ಕೊಲ್ಲು"ವುದೇ ಆಗಿದೆ. ಅದನ್ನು ಚತುರಮತಿಯಾದ ಕರ್ಣ ತಕ್ಷಣ ಗ್ರಹಿಸಿಯೂಬಿಡುತ್ತಾನೆ. ಅದಕ್ಕನುಗುಣವಾಗಿಯೇ ಮುಂದೆ ತಾಯಿಯಾದ ಕುಂತಿ ದುಃಸ್ಸಾಧ್ಯವಾದ ವರಗಳನ್ನು ಕೇಳುವುದರ ಮೂಲಕ ಕರ್ಣನ ಬಲವನ್ನೇ ಹೀರಿಬಿಡುತ್ತಾಳೆ.

ಇದನ್ನು ಇನ್ನೊಂದುರೀತಿ ನೋಡಬಹುದು. ಹಾಗೇನಾದರೂ ಅವನ ಜನ್ಮವೃತ್ತಾಂತವನ್ನು ಮೊದಲೇ ತಿಳಿಸಿ, ದುರ್ಯೋಧನ ಯುದ್ಧದಿಂದ ಹಿಂದೆಗೆದಿದ್ದರೆ, ಕರ್ಣನ ಪಾತ್ರ ಇಷ್ಟು ಉಜ್ವಲವಾಗಿ ಬೆಳಗುತ್ತಿರಲಿಲ್ಲ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಅಲ್ಲವೇ ಒಬ್ಬನ ವ್ಯಕ್ತಿತ್ವದ ಪರಿಚಯವಾಗುದು. ಅದಲ್ಲದೇ ಪರಮಪುರುಷನಾದ ಕೃಷ್ಣ ಈ ರೀತಿ ಕಪಟಾನುಸಂಧಾನ ಹೂಡುವ ಹಿನ್ನೆಲೆಯಲ್ಲಿ ಕೇವಲ ಅನಾಥನಾದ, ಕೌರವನ ಬಂದಳಿಕೆಯಾದ, ಜಗತ್ತಿನ ಯಾರಿಗೂ ಬೇಡವಾದ ಕರ್ಣನ ವ್ಯಕ್ತಿತ್ವದ ಔನ್ನತ್ಯ ಮತ್ತಷ್ಟು ಉಜ್ವಲವಾಗಿ ಬೆಳಗುತ್ತದೆ. ಜನ್ಮವೃತ್ತಾಂತವನ್ನು ತಡವಾಗಿ ಅರುಹುವಲ್ಲಿ ಇದು ಬಹುಶಃ ವ್ಯಾಸರ (ಮತ್ತು ಕುಮಾರವ್ಯಾಸನ) ಉದ್ದೇಶ.

ಸೊಗಸಾದ ಬರಹ. ಧನ್ಯವಾದಗಳು

V.R.BHAT said...

ನಾನು ಹೇಳಬೇಕಾಗಿದ್ದನ್ನು ಮಂಜುನಾಥ್ ಹೇಳಿದ್ದಾರೆ, ಮತ್ತದೇ ಕಥೆ ಹೇಳಿದರೆ ಸುಮ್ಮನೇ ಜಾಗ ಮತ್ತು ಕಾಲದ ದುರುಪಯೋಗ, ಬರಹ ಬಹಳ ಚೆನ್ನಾಗಿದೆ,ಅಡಿಗೆ ರುಚಿಕಟ್ಟಾಗಿದೆ.

Mruthyunjaya Hosamane said...

ಪ್ರಿಯ ಶ್ರೀ ಮಂಜುನಾಥ ಮತ್ತು ಶ್ರೀ ವಿ.ಆರ್.ಭಟ್,
ನಿಮ್ಮ ವಿವರಣೆ ಹೊಸ ದಿಕ್ಕಲ್ಲಿ ಯೋಚಿಸುವಂತೆ ಮಾಡಿದೆ. ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

ಸರ್,

ಹಾಗೆ ನೋಡ ಹೋದರೆ ‘ಕರ್ಣ’ನ ಹುಟ್ಟೇ ಒಂದು ದುರಂತ. ಅರಿಯದ ಮುಗ್ಧ ಕನ್ಯೆ ಕುಂತಿಯಿಂದಾದ ಅಪರಾಧವಲ್ಲದ ಅಪರಾಧ! ತದನಂತರದ ಅವನ ಬದುಕೆಲ್ಲಾ ದುರಂತದ ಸರಮಾಲೆಯೇ ಸರಿ. ಸೂತಪುತ್ರನೆಂಬ ಬಿರುದು, ಗುರು ಮುನಿಯಿಂದ ಶಾಪ, ಕೌರವನ ಸಹವಾಸ, ಕೃಷ್ಣನಿಂದ ನಿಜ ತಿಳಿಯುವಿಕೆ. ಅಂತಿಮದಲ್ಲಿ ತಮ್ಮನಿಂದ ಹತನಾಗುವ ಅಭಾಗ್ಯ! ಮೂಲದಲ್ಲಿ ಕರ್ಣನಿಗೆ ಎಲ್ಲವುದರ ಅರಿವಿತ್ತು. ಆದರೆ ವಿಧಿ ಇದಮಿತ್ತಂ ಎಂದು ಬರೆದಾದ ಮೇಲೆ ಎಲ್ಲವೂ ಹಾಗೇ ನಡೆಯಬೇಕೆಂದು ಸುಮ್ಮನಿದ್ದ. ಕುಮಾರವ್ಯಾಸದಲ್ಲಿ ಸ್ವಲ್ಪ ಬದಲಾಗಿದೆ ಅಷ್ಟೇ.

ಉತ್ತಮ, ಚಿಂತನಶೀಲ ಬರಹ.