Friday, December 26, 2008

ದೇವರು ಮತ್ತು ನಂಬಿಕೆ.

ಈ ಕತೆ ಅಪ್ಪ ಹೇಳಿದ್ದು ಅಂತ ನನ್ನ ನೆನಪು. ಪಾಂಡವರು ಜೂಜಿನಲ್ಲಿ ಸೋತು, ಕರಾರಿನ ಪ್ರಕಾರ ವನವಾಸದಲ್ಲಿರುವಾಗ, ಪ್ರತಿದಿನ ಪೂಜೆ ಮಾಡುತ್ತಿದ್ದರಂತೆ. ಈ ಪೂಜಾ ಸಮಯದಲ್ಲಿ ಭೀಮ ಮಾತ್ರ ನಾಪತ್ತೆ. ಭೀಮನ ಈ ಚರ್ಯೆ ಧರ್ಮರಾಯನಿಗೆ ಸರಿ ಕಾಣಿಸದೆ “ನೀನು ಪೂಜೆ ಮಾಡ್ತಾ ಇಲ್ಲ. ಏನೇ ಕಷ್ಟ ಬಂದರೂ ದೇವರ ಮೇಲಿನ ನಂಬಿಕೆ ಬಿಡಬಾರದು, ಪೂಜೇನೂ ಬಿಡ್ಬಾರದು” ಎಂದು ಭೀಮನಿಗೆ ಭರ್ಜರಿ ಉಪದೇಶ ಮಾಡಿದ. “ನಾನೂ ದಿನಾ ಪೂಜೆ ಮಾಡ್ತೀನಲ್ಲ” ಎಂದು ಭೀಮ ಪ್ರತ್ಯುತ್ತರ ಕೊಟ್ಟ. ಉಳಿದೆಲ್ಲ ಪಾಂಡವರಿಗೂ ಎಲಾ! ಅನ್ನಿಸಿತು. “ಎಲ್ಲಿ? ಯಾವಾಗ ನಿನ್ನ ಪೂಜೆ?” ಬನ್ನಿ ತೋರಿಸ್ತೀನಿ ಎಂದು ಭೀಮ ತುಸು ದೂರದಲ್ಲಿದ್ದ ಒಂದು ಮರದ ಹತ್ತಿರ ಅವರನ್ನು ಕರೆದೊಯ್ದ. ಮರದ ಬುಡದಲ್ಲಿ ವಕ್ರ-ಪಕ್ರವಾಗಿದ್ದ ಒಂದು ಕಲ್ಲು. ಅದರ ಮೇಲೆ,ಅತ್ತಿತ್ತ ಒಂದಿಷ್ಟು ಸೊಪ್ಪಿನ ರಾಶಿ. “ನೋಡಿ. ದಿನಾ ಇಲ್ಲಿಗೆ ಬಂದು ಇಲ್ಲಷ್ಟು ಸೊಪ್ಪು ಏರಿಸಿ ಹೋಗ್ತೇನೆ. ಇದೇ ನನ್ನ ಪೂಜೆ.” ಭೀಮ ಹೇಳಿದ್ದು ಕೇಳಿ ಪಾಂಡವರು ಕಂಗಾಲಾದರು. “ ಇದ್ಯಾವ ಸೀಮೆ ಪೂಜೇನೋ? ಒಂದು ಶಿಸ್ತಿಲ್ಲ, ನೀತಿ, ನಿಯಮ ಇಲ್ಲ” ಎಂದು ಧರ್ಮರಾಯ ತಕರಾರು ಮಾಡಿದ. ಉಳಿದವರೂ ತಲೆಯಾಡಿಸಿ ಸಮ್ಮತಿ ಸೂಚಿಸಿದರು. “ನಿಂಗೆ ದೇವರ ಮೇಲೆ ನಂಬ್ಕೇನೇ ಇಲ್ಲ ಅಂತ ಕಾಣುತ್ತೆ” ಅಂತಲೂ ಧರ್ಮರಾಯ ಅಂದ. ಭೀಮನಿಗೆ ಯಥಾಪ್ರಕಾರ ರೇಗಿಹೋಯಿತು. ಕೂಡಲೇ ತನ್ನ ಗದೆ ಮೇಲೆಸೆದು, “ಓ ದೇವರೇ!ನನ್ನ ಪೂಜೆಯ ಬಗ್ಗೆ, ನನ್ನ ಭಕ್ತಿಯ ಬಗ್ಗೆ ನಿನಗೆ ನಂಬಿಕೆಯಿರದಿದ್ದರೆ ಮೇಲೆಸೆದ ಗದೆ ನನ್ನ ತಲೆ ಮೇಲೆ ಬಿದ್ದು ತಲೆಯೊಡೆದು ನಾನು ಸಾಯಲಿ” ಎಂದು ಘೋಷಿಸಿ ಗದೆಯ ಕೆಳಗೆ ನಿಂತ. ಉಳಿದ ಪಾಂಡವರು ದಿಗ್ಭ್ರಮೆಯಾಗುವಂತೆ,ಮೇಲೆಸೆದ ಗದೆ ಕೆಳಕ್ಕೆ ಬರದೆ ಅವನ ತಲೆಯ ಮೇಲೆ ನಿಂತುಬಿಟ್ಟಿತು.
***ಶ್ರೀಶಂ ಅವರ ದೇವರೆಂಬ ದೇವರು ಬ್ಲಾಗ್ ಲೇಖನ ಓದಿ ಈ ಕತೆ ನೆನಪಾಯಿತು. (http://shreeshum.blogspot.com/). ಕತೆಯ ನೀತಿ ನಿಮಗೆ ಹೊಳೆದಷ್ಟು.

4 comments:

Unknown said...

ನೀತಿಗಾಗಿ ಕಥೆಯೋ ಕಥೆಯಿಂದ ನೀತಿಯೋ ಎಂಬುದೇ ಒಂದು ಮಿಲಿಯನ್ ಡಾಲರ್ ಪ್ರಶ್ನೆ. ಆದರೂ ಮಜ ಇದೆ ನೀತಿ ಕತೆಗಳಲ್ಲಿ

ಡಿ.ಎಸ್.ರಾಮಸ್ವಾಮಿ said...

ನಿಮ್ಮ ಬರಹಗಳನ್ನು ನೋಡಿ/ಓದಿ ಖುಷಿಯಾಯ್ತು. ನಮ್ಮ epicಗಳಿಂದ ಅದ್ಭುತವಾದುವುಗಳನ್ನೆಲ್ಲ ಹೆಕ್ಕಿ ತಂದು ಇಲ್ಲೆ ತೋರಿಸಿ.ಹಾಗೇ ಸುಮ್ಮನೆ ಬ್ಲಾಗ್ ಬರಹ ಈ ಬ್ಲಾಗಿಗೂ ಹೊಂದುತ್ತಿದೆಯಾದ್ದರಿಂದ ಈ ಎರಡೂ ಬ್ಲಾಗುಗಳ ಹಿಂದಿನ ಚೇತನ ಒಂದೇ ಅನ್ನಿಸುತ್ತಿದೆ.

ShruBhanu said...

ನೀತಿ ಕಥೆ ಚನ್ನಾಗಿದ್ದು. ಮೂರ್ತಿ ಪೂಜೆ ಮೇಲೋ ನಂಬಿಕೆಯಲ್ಲೇ ಲೋಕ ನಿಂತಿದೆಯೋ ಬಲ್ಲವರಾರಯ್ಯ? ಆದ್ರೂ ಅದೆಲ್ಲ ಅವ್ರಾವ್ರ ನಂಬಿಕೆ ಅಂತಾನೆ ಹೆಳ್ತು!!!!

ಮನಸ್ವಿ said...

ನೀತಿ ಕಥೆ ಇಷ್ಟವಾಯಿತು...ಬೀಮನ ಗದೆ ತನ್ನ ಯಜಮಾನನ ತಲೆ ಓಡೆದೀತೆ!.. ಅಂದಮಾತ್ರಕ್ಕೆ ಆತನಿಗೆ ದೇವರಲ್ಲಿ ನಂಬಿಕೆಯಿಲ್ಲವೇ.. ದೇವರಿಗೆ ನಂಬಿಕೆ ಇಲ್ಲವೇನೋ ಬೀಮನ ಮೇಲೆ, ಸಕ್ಕತ್ತಾಗಿದೆ ನೀತಿ ಕಥೆ...
ಬೆಂಕಿಕಡ್ಡಿ ಬ್ಲಾಗರ್ ತಿಳಿಸಿದ "ಹಾಗೇ ಸುಮ್ಮನೆ ಬ್ಲಾಗ್ ಬರಹ ಈ ಬ್ಲಾಗಿಗೂ ಹೊಂದುತ್ತಿದೆಯಾದ್ದರಿಂದ ಈ ಎರಡೂ ಬ್ಲಾಗುಗಳ ಹಿಂದಿನ ಚೇತನ ಒಂದೇ ಅನ್ನಿಸುತ್ತಿದೆ" ಎಂದು ಹೇಳಿದ್ದಾರೆ ನನಗೆ ಅರ್ಥವಾಗಲಿಲ್ಲ.. ನಿನಗೇನಾದರು ಅರ್ಥವಾಯಿತಾ ಮುತ್ತಣ್ಣ.. ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.