ಈ ದ್ವಂದ್ವ ನಮ್ಮ ತಲೆಮಾರಿನ ಟ್ರೇಡ್ ಮಾರ್ಕ್!
***** ವ್ಯವಸ್ಥೆ, ಸಂಪ್ರದಾಯ ರೂಪಿಸಿದ ನಿಯಮಗಳನ್ನು ಮೀರಿ ಬದುಕುವ ಧೈರ್ಯವಿಲ್ಲ. ಅವುಗಳನ್ನು ಶ್ರದ್ಧೆಯಿಂದ ಪಾಲಿಸುವ ಉತ್ಸಾಹವೂ ಇಲ್ಲ. ವಿಜ್ನಾನ ಕೊಟ್ಟ ಅಪಾರ ತಿಳಿವಳಿಕೆಯ ಕಾರಣದಿಂದಾಗಿ ನಮ್ಮ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಲ್ಲ. ಯಾಕೆ ದೇವರಿಗೆ ಪೂಜೆ ಮಾಡಬೇಕು? ಯಾಕೆ ಗಾಯತ್ರಿ ಮಂತ್ರ ಜಪಿಸಬೇಕು? ಗೋಪೂಜೆ ಮಾಡಿದರೆ ಏನುಪಯೋಗ? ಶ್ರಾದ್ಧ ಮಾದುವುದರಿಂದ ನಿಜವಾಗಿಯೂ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತಾ? ಅಂತಹ ಒಂದು ಆತ್ಮ ಉಂಟಾ? ಒಟ್ಟಲ್ಲಿ ನಮ್ಮ ಹಿಂದಿನ ತಲೆಮಾರು ಶ್ರದ್ಧೆಯಿಂದ ಆಚರಿಸುತ್ತಿದ್ದ ಎಲ್ಲವೂ ನಿರರ್ಥಕ ಎಂಬುದು ನಮ್ಮ ಅಭಿಪ್ರಾಯ. ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿ ಮಲಗುವವರೆಗಿನ ನಮ್ಮೆಲ್ಲ ಕ್ರಿಯೆಗಳಲ್ಲೂ ಈ ಭಾವನೆ ತುಂಬಿಕೊಂಡಿದೆ. ಹಾಗಂತ ವಿಜ್ನಾನ ಹೇಳುವುದನ್ನು ಪೂರ್ಣ ನಂಬಿ, ಅವುಗಳನ್ನು ಬಿಟ್ಟುಬಿಡುವ ಧೈರ್ಯವೂ ಇಲ್ಲ. ಹಾಗಾಗಿ ವೈಚಾರಿಕವಾಗಿ ವಿರೋಧಿಸುತ್ತಾ, ಆದರೆ ಪಾಲಿಸುತ್ತಾ ಬದುಕುವ ದ್ವಂದ್ವ. ನನಗವುಗಳ ಬಗ್ಗೆ ಶ್ರದ್ಧೆಯಿಲ್ಲವಾದರೂ, ನನಗೆ ಶ್ರದ್ಧೆಯಿಲ್ಲ ಎಂಬುದು ನಂಬುವವರಿಗೆ ಗೊತ್ತಾಗಬಾರದು. ಹಾಗೆ ಗೊತ್ತಾದರೆ ಅವರ ಲೆಕ್ಕದಲ್ಲಿ ನನ್ನ ಬೆಲೆ ತುಸು ಇಳಿದುಬಿಟ್ಟರೆ? ಆತಂಕ. ನನಗೆ ಶ್ರದ್ಧೆಯಿಲ್ಲ ಎಂಬುದು ನಂಬದವರಿಗೆ ಗೊತ್ತಾಗಬೇಕು. ಇಲ್ಲವಾದರೆ ಅವರೆದುರು ನನ್ನ ಗೌರವ ಕಡಿಮೆಯಾದರೆ? ಆತಂಕ.ಹಾಗಾಗಿ ನನ್ನ ತೃಪ್ತಿಗಾಗಿ ನನ್ನೊಳಗೇ ವಿರೋಧಿಸುತ್ತಾ, ಬೇರೆಯವರ ತೃಪ್ತಿಯ ನೆವದಲ್ಲಿ ಆಚರಿಸುತ್ತಾ.... , ಬದುಕು ಸಿಗುರೆದ್ದಿದೆ.
*****ಇವಿಷ್ಟೇ ಅಲ್ಲ. ನಮ್ಮ ದೈನಂದಿನ ವ್ಯವಹಾರದಲ್ಲೂ ಈ ದ್ವಂದ್ವ ಹುಟ್ಟಿಸಿದ ಗೊಂದಲವಿದೆ. ಸರಕಾರೀ ಆಫೀಸಿನ ಲಂಚಗುಳಿಗಳ ಬಗ್ಗೆ ಎಲ್ಲರೆದುರೂ ಕೂಗಾಡುತ್ತೇನೆ. ಕ್ರಾಂತಿಯಾಗಬೇಕು ಎಂದು ಬೊಬ್ಬಿರಿಯುತ್ತೇನೆ. ನನ್ನ ಮಗಳ ಲೈಸೆನ್ಸ್ ಪಡೆಯಲು ಮಧ್ಯವರ್ತಿಯ ಮೂಲಕ ಲಂಚಕೊಡುತ್ತೇನೆ. ಮುನ್ಸಿಪಾಲಿಟಿಯವರು ಊರನ್ನು ಚೊಕ್ಕಟವಾಗಿಡುತ್ತಿಲ್ಲ ಎಂದು ಟೀಕೆ ಮಾಡುತ್ತೇನೆ. ನನ್ನ ಮನೆಯ ಕಸ ಗುಟ್ಟಾಗಿ ಬೀದಿಯಲ್ಲಿ ಸುರಿದು ಬರುತ್ತೇನೆ. ಒಂದು ಭರ್ಜರಿ ಯುದ್ಧ ಮಾಡಿ ಪಾಕೀಸ್ತಾನವನ್ನು ಇಲ್ಲ ಅನಿಸಿಬಿಡಬೇಕು ಎಂದು ಕ್ಯಾಂಟೀನಲ್ಲಿ ಕುಳಿತು ಗಂಭೀರವಾಗಿ ಹೇಳುತ್ತೇನೆ. ಆದರೆ ಸೈನ್ಯಕ್ಕೆ ನಾನಾಗಲೀ, ನನ್ನ ಮಕ್ಕಳಾಗಲೀ ಸೇರುತ್ತಾರೆ ಎಂದರೆ ಕಂಗಾಲಾಗುತ್ತೇನೆ. ನನಗೆ ಯಾರೂ ಕೋಟಿ ರೂಪಾಯಿ ಲಂಚ ಕೊಡಲ್ಲ ಅಂತ ಗೊತ್ತಿರುವದರಿಂದ ಕೋಟಿ ಲಂಚ ಕೊಟ್ಟರೂ ಮುಟ್ಟುವುದಿಲ್ಲ ಎಂದು ನನ್ನ ಪ್ರಾಮಾಣಿಕತೆಯಯನ್ನು ಜಾಹೀರು ಮಾಡುತ್ತೇನೆ. ನನ್ನ ಖಾಸ ಮುಖಕ್ಕೂ, ಎಲ್ಲರೆದುರು ತೆರೆದಿಡುವ ನನ್ನ ಮುಖಕ್ಕೂ ಸಂಬಂಧವೇ ಇಲ್ಲ.ನನ್ನನ್ನು ನಾನೇ ವಿರೋಧಿಸುತ್ತಾ..... ಬದುಕು ಸಿಗುರೆದ್ದಿದೆ.
*****ನಮಗೆ, ಮಧ್ಯಮವರ್ಗದ ನಮಗೆ, ಸದಾ ಪರರ ಕಣ್ಣಲ್ಲಿ ಹೊಳೆವ ಬಯಕೆ. ಹಾಗೆ ಮಾಡಿದರೆ ಅವರು ಏನಾದರೂ ಅಂದರೆ? ಹೀಗೆ ಮಾಡಿದರೆ ಇವರು ಏನಾದರೂ ಅಂದರೆ? ಈ ಲೆಕ್ಕಾಚಾರದಲ್ಲಿ ನಾವೇನು ಮಾಡಬೇಕೆಂದು ತಿಳಿಯದ ಗೊಂದಲ. ಸದಾ ಮುಖವಾಡದ ಭಾರ. ಬೇರೆ ಯಾರಿಗೂ ತ್ರಾಸು ಕೊಡದ ನಮ್ಮ ನಿಜವನ್ನು ನಾವು ಬದುಕಲು ಏನಡ್ಡಿ? ನಾವು ಹಾಗೆ ಬದುಕುತ್ತಿಲ್ಲ...... ಬದುಕು ಸಿಗುರೆದ್ದಿದೆ.
1 comment:
ದ್ವಂದ .... ಹೌದು ಈಗಿನ ತಲೆಮಾರಿನಲ್ಲಿರುವುದಮ್ತು ಸತ್ಯ... ಹಾಗೆಯೇ ವೈಜ್ನಕಿವಾಗಿ ಸ್ಸ್ಗಲಿ ಅಥವಾ ಶಾಸ್ತ್ರದಂತೆ ಅಗ್ಗಲಿ ಒಂದನ್ನು ಅನುಸರಿಸಿ ತನ್ನದೇ ಮಾರ್ಗದಲ್ಲಿ ಹೋಗುವವರ ಬಗ್ಗೆ ನಮಗೆ ಒಳಗಿಂದ ಅಭಿಮಾನ ಇದ್ದಲ್ಲೂ ಥರಿಸಳಗದಷ್ಟು ದ್ವಂದ ....!!! ಕಾರಣ ನಮ್ಮೊಳಗಿನ ಭಯವೂ...ಹೌದು....ಅಲ್ಲವೇ?
Post a Comment