Saturday, September 4, 2010

ಕೌರವಶತನಾಮಾವಳಿ


 ತುಂಬಾ ವರ್ಷಗಳ ಹಿಂದಿನ ಘಟನೆ.ಸಾಗರದ ಸಮೀಪದ ಶಿರುವಂತೆಯಲ್ಲಿ ಒಂದು ತಾಳಮದ್ದಲೆ. ಶೇಣಿ,ಆನಂದ ಮಾಸ್ತರ,ದೇರಾಜೆ,ಸಾಮಗ ಮೊದಲಾದ ಆಗಿನ ಕಾಲದ ಘಟಾನುಘಟಿ ಅರ್ಥಧಾರಿಗಳು. ಪ್ರಸಂಗ ಸರಿಯಾಗಿ ನೆನಪಿಗೆ ಬರುತ್ತಿಲ್ಲ.ಶೇಣಿಯವರಿಗೆ ಪ್ರಶ್ನೆ ಕೇಳಿ ಎಲ್ಲರನ್ನೂ ಸೋಲಿಸುವ ತವಕ.  ಯಾವುದೋ ಸಂದರ್ಭದ ಸಂವಾದದಲ್ಲಿ ಅನಂದಮಾಸ್ತರರು "ನೂರು ಜನ ಕೌರವರು.."ಎಂದು ಹೇಳಿದ್ದೇ ತಡ ಶೇಣಿಯವರು,ಅನಂದಮಾಸ್ತರರನ್ನು ಸಿಕ್ಕಿಸಲು "ಯಾವ ನೂರು ಜನ? ಹೆಸರು ಗೊತ್ತ?"ಎಂಬ ಕೊಂಕು ಪ್ರಶ್ನೆಯನ್ನು ಎಸೆದರು.ಸಭೆ ಸ್ತಬ್ಧವಾಯಿತು. ಸ್ವತಃ ಧೃತರಾಷ್ಟ್ರನಿಗೂ,ಗಾಂಧಾರಿಗೂ ಬಹುಷಃ ತಮ್ಮ ನೂರು ಮಕ್ಕಳ ಹೆಸರು ಗೊತ್ತಿತ್ತೋ ಇಲ್ಲವೋ! ಅನಂದ ಮಾಸ್ತರರು ಅಳುಕಲಿಲ್ಲ.ಒಮ್ಮೆ ನಕ್ಕರು."ನೂರುಜನರ ಹೆಸರು ಬೇಕಾ? ಕೇಳಿ"ಎಂದವರೇ ದುರ್ಯೊಧನ,ಯುಯುತ್ಸು,ದುಶ್ಯಾಸನ....ಇತ್ಯಾದಿ ಶತ ನಾಮ ಪಠಿಸಿದರು.ಅನಂದಮಾಸ್ತರರ ಮಾತು ಬಲು ಚುರುಕು. ಅವರು ಮಾತನಾಡುವಾಗ ಒಂದು ಪದಕ್ಕೂ ಮತ್ತೊಂದು ಪದಕ್ಕೂ ಅಂತರ ತುಂಬಾ ಕಡಿಮೆ.ನೂರು ಕೌರವರ ಹೆಸರನ್ನು ಯಾವ ರಭಸದಲ್ಲಿ ಹೇಳಿದರೆಂದರೆ ಡಬ್ಬದಲ್ಲಿ ಕಲ್ಲು ಹಾಕಿ ಗಡಗಡ ಅಲ್ಲಾಡಿಸಿದಂತಾಯಿತು! ಶೇಣಿಯವರನ್ನೂ ಸೇರಿದಂತೆ ಯಾರಿಗೂ ಮೊದಲ ನಾಲ್ಕಾರು ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಏನು ಎಂಬುದು ತಿಳಿಯಲಿಲ್ಲ."ತಿಳಿಯತಲ್ಲ   ನೂರುಜನರ ಹೆಸರು" ಎಂದು ಶೇಣಿಯವರನ್ನು ಕೇಳಿ ತಮ್ಮ ಅರ್ಥ ಮುಂದುವರೆಸಿದರು.
ಯಾಕೋ ಇವತ್ತು ಆ ಘಟನೆ ನೆನಪಾಯಿತು.ನನಗೂ ಕುತೂಹಲ. ನೂರು ಕೌರವರ ಹೆಸರು ಏನಿರಬಹುದು?ನಮ್ಮ ಸ್ಥಳೀಯ ತಾಳಮದ್ದಲೆ ಕಲಾವಿದ ಗೊರಮನೆ ಮಂಜುನಾಥ ಅವರನ್ನು ವಿಚಾರಿಸಿದೆ. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸಿದ್ದೇನೆ.ನಮ್ಮ ತಲೆಯಲ್ಲಿ ನಾವು ತುಂಬಿಕೊಂಡಿರುವ,ನಮಗೆ ಬೇಕಿಲ್ಲದ ಮಾಹಿತಿಗಳ ಗುಂಡಿಗೆ ಇದನ್ನೂ ತುಂಬಿಸಿಕೊಳ್ಳೋಣ.
೧.ದುರ್ಯೋಧನ ೨.ಯುಯುತ್ಸು ೩.ದುಶ್ಯಾಸನ ೪.ದುಸ್ಸಹ ೫.ದುಶ್ಯಲ ೬.ಜಲಸಂಧ ೭.ಸಮ ೮.ಸಹ ೯.ವಿಂದ ೧೦.ಅನುವಿಂದ ೧೧.ದುರ್ಧರ್ಷ ೧೨.ಸುಬಾಹು ೧೩.ದುಷ್ಟ್ರಧರ್ಷಣ ೧೪.ದುರ್ಮರ್ಷಣ ೧೫.ದುರ್ಮುಖ ೧೬.ದುಷ್ಕರ್ಣ ೧೭.ಕರ್ಣ ೧೮.ವಿವಿಶಂತಿ ೧೯.ವಿಕರ್ಣ ೨೦.ಶಲ ೨೧.ಸತ್ವ ೨೨.ಸುಲೋಚನ ೨೩.ಚಿತ್ರ ೨೪.ಉಪಚಿತ್ರ ೨೫.ಚಿತ್ರಾಕ್ಷ ೨೬.ಚಾರುಚಿತ್ರ ಶರಾಸನ ೨೭.ದುರ್ಮದ ೨೮.ದುರ್ವಿಗಾಹ ೨೯.ವಿವಿತ್ಸು ೩೦.ವಿಕಟಾನನ ೩೧.ಊರ್ಣನಾಭ ೩೨.ಸುನಾಭ ೩೩.ನಂದ ೩೪.ಉಪನಂದ ೩೫.ಚಿತ್ರಬಾಣ ೩೬.ಚಿತ್ರವರ್ಮ ೩೭.ಸುವರ್ಮ ೩೮.ದುರ್ವಿರೋಚನ ೩೯.ಅಯೋಬಾಹು ೪೦.ಚಿತ್ರಾಂಗ ೪೧.ಚಿತ್ರಕುಂಡಲ ೪೨.ಭೀಮವೇಗ ೪೩.ಭೀಮಬಲ ೪೪.ಬಲಾಕಿ ೪೫.ಬಲವರ್ಧನ ೪೬.ಉಗ್ರಾಯುಧ ೪೭.ಸುಷೇಣ ೪೮.ಕುಂಡೋದರ ೪೯.ಮಹೋದರ ೫೦.ಚಿತ್ರಾಯುಧ ೫೧.ನಿಷಂಗೀ ೫೨.ಪಾಶೀ ೫೩.ವೃಂದಾರಕ ೫೪.ದೃಢವರ್ಮ ೫೫.ದೃಢಕ್ಷತ್ರ ೫೬. ಸೋಮಕೀರ್ತಿ ೫೭.ಅನೂದರ ೫೮. ದೃಢಸಂಧ ೫೯. ಜರಾಸಂಧ ೬೦. ಸತ್ಯಸಂಧ ೬೧.ಸದಃಸುವಾಕ್ ೬೨.ಉಗ್ರಶ್ರವಸ ೬೩.ಉಗ್ರಸೇನ ೬೪.ಸೇನಾನೀ ೬೫.ದುಷ್ಪರಾಜಯ ೬೬.ಅಪರಾಜಿತ ೬೭.ಪಂಡಿತಕ ೬೮.ವಿಶಾಲಾಕ್ಷ ೬೯.ದುರಾಧರ ೭೦.ದೃಢಹಸ್ತ ೭೧.ಸುಹಸ್ತ ೭೨.ವಾತವೇಗ ೭೩.ಸುವರ್ಚಸ ೭೪.ಆದಿತ್ಯಕೇತು ೭೫.ಬಹ್ವಾಶೀ ೭೬.ನಾಗದತ್ತ ೭೭.ಅಗ್ರಯಾಯೀ ೭೮.ಕವಚೀ ೭೯.ಕ್ರಥನ ೮೦.ದಂಡೀ ೮೧.ದಂಡಧಾರ ೮೨.ಧನುರ್ಗ್ರಹ ೮೩.ಉಗ್ರ ೮೪.ಭೀಮರಥ ೮೫.ವೀರಬಾಹು ೮೬.ಅಲೋಲುಪ ೮೭.ಅಭಯ ೮೮.ರೌದ್ರಕರ್ಮಾ ೮೯.ದ್ರುಢರಥಾಶ್ರಯ ೯೦.ಅನಾಧೃಷ್ಯ ೯೧.ಕುಂಡಭೇದೀ ೯೨.ವಿರಾವೀ ೯೩.ಪ್ರಮಥ ೯೪.ಪ್ರಮಾಥೀ ೯೫.ದೀರ್ಘರೋಮ ೯೬.ದೀರ್ಘಬಾಹು ೯೭.ವ್ಯೂಢೋರು ೯೮.ಕನಕಧ್ವಜ ೯೯.ಕುಂಡಾಶೀ ೧೦೦.ವಿರಸಜ .
ನೂರೊಂದನೆಯವಳು ದುಶ್ಯಲಾ. 
(ನೋಡಿ:ವ್ಯಾಸಭಾರತದ ಆದಿಪರ್ವ-೧೧೭ನೆಯ ಅಧ್ಯಾಯ.)
 

8 comments:

V.R.BHAT said...

ಮೃತ್ಯುಂಜಯ ಹೋಸಮನೆಯವ್ರೇ, ಬಹಳ ಉಪಯುಕ್ತ ಮಾಹಿತಿ, ನಾನು ಬಜ್ ನಲ್ಲಿ ನಿಮ್ಮ ಬ್ಲಾಗ್ ಹೆಸರು ಹಾಕುತ್ತೇನೆ, ಬಹಳ ಜನ ಓದಲಿ ಆಗದೇ ?ಇದುವರೆಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳದ, ಆದರೆ ಜ್ಞಾನಕ್ಕಾಗಿ ಬೇಕಾದ, ಪ್ರಾಮಾಣಿಕ ಮತ್ತು ಅದ್ಬುತ ಪ್ರಯತ್ನ, ನಿಮಗೂ ನಿಮ್ಮ ಲೇಖನಿಗೂ ಒಮ್ಮೆ ನಮಸ್ಕಾರ

ಸೀತಾರಾಮ. ಕೆ. / SITARAM.K said...

ಉಪಯುಕ್ತ ಮಾಹಿತಿ. ಹಿಂದೆ ಯಾವುದೋ ಮಗು ಕೇಳಿದಾಗ ತಬ್ಬಿಬ್ಬಾಗಿ ಗೊತ್ತಿಲ್ಲ ಎಂದಿದ್ದೆ. ದುರ್ಯೋಧನ, ದುಷ್ಯಾಶನ,ಯುಯುತ್ಸು ಮತ್ತು ದುಃಶೀಲೆ ಅಷ್ಟೇ ಗೊತ್ತಿತ್ತು.

mshebbar said...

EDUCATIVE-mshebbar

Manjunatha Kollegala said...

"ನಮ್ಮ ತಲೆಯಲ್ಲಿ ನಾವು ತುಂಬಿಕೊಂಡಿರುವ,ನಮಗೆ ಬೇಕಿಲ್ಲದ ಮಾಹಿತಿಗಳ ಗುಂಡಿಗೆ ಇದನ್ನೂ ತುಂಬಿಸಿಕೊಳ್ಳೋಣ" - ಬಹಳ ತಮಾಷೆಯಾಗಿ ಹೇಳಿದಿರಿ. ಮಹಾಭಾರತದ ಕತೆಯ ಓಟದಲ್ಲೂ ಕೇವಲ ನಾಮಮಾತ್ರವಾಗಿ ಮಾತ್ರ ಬರುವ ಇವರು "ಕೌರವ"ರ ದುಷ್ಟತನದಲ್ಲೂ ಸಮಷ್ಟಿಯಾಗಿ ನಿಲ್ಲುವುದಿಲ್ಲ, ಒಂದುರೀತಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲವೆಂಬ ಗುಂಪು. ಈ ಅಣ್ಣತಮ್ಮದಿರಲ್ಲೆಲ್ಲಾ ದುಷ್ಟಾತಿದುಷ್ಟರಾಗಿ ಮೆರೆಯುವವರು ದೊಡ್ಡವರಿಬ್ಬರೇ. ಆದರೂ ಹೆಸರಿನ ಪಟ್ಟಿಯಿದ್ದರೆ ಚೆನ್ನ, ಅಲ್ಲ? ಮಾಹಿತಿಗೆ ಧನ್ಯವಾದಗಳು. ಸ್ವಾರಸ್ಯವಾದ ಲೇಖನ

Anonymous said...

ಉತ್ತಮ ಮಾಹಿತಿ ಸರ್..����

ಮಹಾಭಾರತದಲ್ಲಿ ಸೌಮಿತ್ರಿ ಎಂದರೆ ಯಾರು?

Unknown said...

ನಿಮ್ಮ ಪ್ರಯತ್ನಕ್ಕೆ ನಮ್ಮ ಅಭಿನಂದನೆಗಳು ,,, ಇನ್ನೂ ಈ ರೀತಿಯ ಹಲವಾರು ಕೌತುಕದ ವಿಚಾರಗಳನ್ನು ಹೊರಗೆಡವಿ

Unknown said...

ತುಂಬಾ ಉಪಯುಕ್ತವಾದ ಮಾಹಿತಿ ಗುರುಗಳೆ ಇಂತಹ ವಿಶಯದಲ್ಲಿ ನನಗೆತುಂಬಾ ಆಸಕ್ತಿ

Unknown said...

ಭಾಗಶಃ ಸೌಮಿತ್ರಿ ಅಂದರೆ ಲಕ್ಷ್ಮಣ