Friday, October 7, 2016

ಚಕ್ರವ್ಯೂಹ.

ವ್ಯಾಸರಲ್ಲಿ:
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ.ಈ ಚಕ್ರವ್ಯೂಹವನ್ನು ಭೇದಿಸುವ ತಂತ್ರವನ್ನು ಬಲ್ಲವರು ಆ ಕಾಲದಲ್ಲಿ ಕೃಷ್ಣ, ಅರ್ಜುನ,ಪ್ರದ್ಯುಮ್ನ ಮತ್ತು ಅಭಿಮನ್ಯು ಮಾತ್ರ. ಈ ನಾಲ್ವರಲ್ಲಿ ಅಭಿಮನ್ಯುವಿಗೆ ವ್ಯೂಹವನ್ನು ಪ್ರವೇಶಿಸುವ ತಂತ್ರ ಗೊತ್ತಿದೆ,ಅಲ್ಲಿಂದ ಪಾರಾಗಿ ಹೊರಬರುವ ತಂತ್ರ ತಿಳಿದಿಲ್ಲ.ಅದರ ಕಾರಣ, ಅಭಿಮನ್ಯು ಹೇಳುವ ಪ್ರಕಾರ, ಆತನಿಗೆ ಅರ್ಜುನ ಪ್ರವೇಶಿಸುವ ರೀತಿಯನ್ನು ಮಾತ್ರ ಕಲಿಸಿದ್ದು.(ಮೂಲಮಹಾಭಾರತ-ದ್ರೋಣಪರ್ವ-೩೫ನೆಯ ಅಧ್ಯಾಯ).
ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣರು ಯುದ್ಧಕ್ಕೆ ಆಹ್ವಾನಿಸುತ್ತಾರೆ.ಸಂಸಪ್ತಕರೊಡನೆ ಅರ್ಜುನ ಯುದ್ಧನಿರತನಾಗಿರುವ ಕಾರಣದಿಂದ ಧರ್ಮರಾಯ ಚಕ್ರವ್ಯೂಹವನ್ನು ಭೇದಿಸು ಎಂದು ಅಭಿಮನ್ಯುವನ್ನು ಕೇಳಿಕೊಳ್ಳುತ್ತಾನೆ. ಆತ ಅಭಿಮನ್ಯುವಿಗೆ ಹೇಳುವ ಮಾತು: “ಈ ವ್ಯೂಹವನ್ನು ಭೇದಿಸಿ ನೀವು ಪಾಂಡವಸೇನೆಯನ್ನು ನಾಶ ಮಾಡುತ್ತಿದ್ದ ದ್ರೋಣರನ್ನು ತಡೆಯಲಿಲ್ಲ ಎಂದು ಅರ್ಜುನ ವಾಪಸಾದ ಅನಂತರ ದೂಷಿಸಬಾರದು. ನಮಗ್ಯಾರಿಗೂ ಈ ವ್ಯೂಹವನ್ನು ಭೇದಿಸುವ ತಂತ್ರ ತಿಳಿದಿಲ್ಲ. ಆದ್ದರಿಂದ ನೀನು ಈ ದಿನ ಆ ವ್ಯೂಹವನ್ನು ಭೇದಿಸಬೇಕು.”
ತಾನು ಆ ವ್ಯೂಹವನ್ನು ಭೇದಿಸಬಲ್ಲೆ. ಚಕ್ರವ್ಯೂಹದ ಒಳಹೊಗುವ ತಂತ್ರವನ್ನು ತನ್ನ ತಂದೆ ಕಲಿಸಿದ್ದಾನೆ.ಆದರೆ ಅಲ್ಲಿ ಆಪತ್ತಿಗೆ ಸಿಲುಕಿದರೆ ಹೊರಬರುವ ತಂತ್ರ ನನಗೆ ಗೊತ್ತಿಲ್ಲವಾದುದರಿಂದ ಹೊರಬರುವುದು ನನಗೆ ಅಸಾಧ್ಯ ಎಂದು ಅಭಿಮನ್ಯು ಹೇಳುತ್ತಾನೆ. ಅವನು ಒಳಹೋಗಲು ಹಿಂಜರಿಕೆ ತೋರದಿದ್ದರೂ ಮುಂದಿನ ಅಪಾಯವನ್ನು ಸೂಕ್ಷ್ಮವಾಗಿ ಧರ್ಮರಾಯನಿಗೆ ಸೂಚಿಸುತ್ತಿದ್ದಾನೆ.
ಅದಕ್ಕೆ ಧರ್ಮರಾಯ ಸಮಾಧಾನ ನೀಡುತ್ತಾನೆ. “ನೀನು ಅದನ್ನು ಭೇದಿಸಿದಾಗ ನಿನ್ನ ಹಿಂದೆ ನಾವೂ ಬರುತ್ತೇವೆ.ಹಾಗೆ ಬಂದು ವ್ಯೂಹವನ್ನು ದ್ವಂಸಮಾಡುತ್ತೇವೆ.”ಭೀಮನೂ ಈ ಮಾತನ್ನು ಅನುಮೋದಿಸುತ್ತಾನೆ.
ಹಾಗೆ ಧರ್ಮರಾಯನಂದರೂ ಅಭಿಮನ್ಯುವಿಗೆ ಅವರು ತನ್ನ ಜೊತೆ ಪ್ರವೇಶಿಸಿಯಾರು ಎಂಬ ನಂಬಿಕೆ ಇಲ್ಲ. “ಕೋಪಗೊಂಡ ಪತಂಗ ಬೆಂಕಿಯತ್ತ ನುಗ್ಗುವಂತೆ ನಾನು ನುಗ್ಗುತ್ತೇನೆ” ಎಂಬ ಮಾತನ್ನಾಡುತ್ತಾನೆ. ಈ ಮಾತಲ್ಲಿ ತಾನು ಬದುಕುವುದಿಲ್ಲ ಎಂಬ ಅರ್ಥವನ್ನು ಆತ ಧ್ವನಿಸುತ್ತಾನೆ.ಆದರೆ ಧರ್ಮರಾಯ ಈ ಧ್ವನಿಯನ್ನು ಗ್ರಹಿಸುವುದಿಲ್ಲ ಅಥವ ಗ್ರಹಿಸಿದರೂ, ಆ ಸನ್ನಿವೇಶ ನಿರ್ಮಿಸಿದ್ದ ಅನಿವಾರ್ಯತೆಯಿಂದಾಗಿ ಅವನ ಅಭಿಪ್ರಾಯವನ್ನು ಕಡೆಗಣಿಸುತ್ತಾನೆ.ಯುದ್ಧಕ್ಕೆ ತೆರಳಲು ಅನುಮತಿ ನೀಡುತ್ತಾನೆ.
ಚಕ್ರವ್ಯೂಹದತ್ತ ರಥ ನಡೆಸು ಎಂದು ಸಾರಥಿಗೆ ಅಭಿಮನ್ಯು ಅದೇಶಿಸುತ್ತಾನೆ.ಸಾರಥಿ ವ್ಯಾವಹಾರಿಕವಾದ ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ.೧) ಅಸ್ತ್ರವಿದ್ಯೆಯಲ್ಲಿ ಶ್ರೇಷ್ಠರಾದ ದ್ರೋಣರ ಜೊತೆ ಯುದ್ಧಮಾಡುವುದರ ಬಗ್ಗೆ ಇನ್ನೊಮ್ಮೆ ವಿಚಾರಮಾಡು.೨) ನಿನಗೆ ಯುದ್ಧರಂಗದ ಅನುಭವ ಇಲ್ಲ.
“ದ್ರೋಣರು ತಮಗೆ ಸಮನಲ್ಲ, ಅಷ್ಟೇಕೆ ಇಂದ್ರ,ರುದ್ರ,ಶ್ರೀಕೃಷ್ಣ ಅಥವ ಅರ್ಜುನ ಯುದ್ಧಕ್ಕೆ ಬಂದರೂ ಮಣಿಸುತ್ತೇನೆ.ನೀನು ರಥ ಹರಿಸು” ಎಂದು ಮತ್ತೆ ಅದೇಶಿಸಿದಾಗ ಮನಸ್ಸಿಲ್ಲದಿದ್ದರೂ ಸಾರಥಿ ವ್ಯೂಹದತ್ತ ಒಯ್ಯುತ್ತಾನೆ.ಅಭಿಮನ್ಯು ಒಳಪ್ರವೇಶಿಸುತ್ತಾನೆ.ಆದರೆ ಪಾಂಡವಸೇನೆಯ ಉಳಿದ ಯಾರಿಗೂ ಅದನ್ನು ಪ್ರವೇಶಿಸಲು ಆಗುವುದಿಲ್ಲ.ಅಭಿಮನ್ಯು ಒಂಟಿಯಾಗುತ್ತಾನೆ.
ಕುಮಾರವ್ಯಾಸನಲ್ಲಿ:
(ದ್ರೋಣಪರ್ವ-ಸಂಧಿ ೪ )
೧]ಅರ್ಜುನನನ್ನು ಏಕಕಾಲಕ್ಕೆ ಸಮಸಪ್ತಕರು ಮತ್ತು ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣ ಇಬ್ಬರೂ ಯುದ್ಧಕ್ಕೆ ಆಹ್ವಾನಿಸುತ್ತಾರೆ.ಅರ್ಜುನ ನಾನು ಯಾರ ಜತೆ ಯುದ್ಧ ಮಾಡಲಿ ಎಂದು ಕೃಷ್ಣನನ್ನು ಕೇಳುತ್ತಾನೆ.ನಿನ್ನ ಮಗ ದ್ರೋಣರನ್ನೆದುರಿಸುತ್ತಾನೆ,ನೀನು ಸಮಸಪ್ತಕರನ್ನೆದುರಿಸು ಎಂಬ ಸಲಹೆಯನ್ನು ಕೃಷ್ಣ ನೀಡುತ್ತಾನೆ. ಹೀಗೆ ಸಲಹೆ ನೀಡಲು ಕೃಷ್ಣನಿಗೆ ಕಾರಣವಿದೆ.
ಅಳಿಯನೀ ಮೋಹರದೊಳಗಲ್ಲದೆ ಫಲುಗುಣನ ಮಗನಿವನು ಬಲುಗೈಯುಳುಹಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ…(-೨೭)
ಮಹಾಬಲಶಾಲಿಯಾದ ಅಭಿಮನ್ಯು ಈ ಯುದ್ಧದಲ್ಲಿ ಅಳಿಯಬೇಕು. ಅಭಿಮನ್ಯು ಬದುಕಿದರೆ ಕಲಿಯುಗ ಪ್ರಾರಂಭವಾಗುವುದಿಲ್ಲ.(ಯಾಕೆ ಪ್ರಾರಂಭವಾಗುವುದಿಲ್ಲ ಎಂಬುದು ಗೊತ್ತಿಲ್ಲ).ಅಭಿಮನ್ಯುವಿನ ಸಾವನ್ನು ಇಲ್ಲಿ ಕೃಷ್ಣ ನಿಶ್ಚೈಸುತ್ತಾನೆ.
೨] ಭೀಮನನ್ನೂ ಸೇರಿದಂತೆ ಪಾಂಡವಸೇನೆಗೆ ವ್ಯೂಹಭೇದನ ಅಸಾಧ್ಯವಾಗುತ್ತದೆ.(ಕಾದಲೆನ್ನಳವಲ್ಲ ಬಲ ದುರ್ಭೇದವಿದು ಶಿವಶಿವಯೆನುತ್ತ ವೃಕೋದರನು ಮರಳಿದನು...ಸಂ-೪,ಪ-೩೨.) ಚಕ್ರವ್ಯೂಹವನ್ನು ಹೇಗೆ ಭೇದಿಸುವುದು ಎಂಬ ಚಿಂತೆಯಲ್ಲಿರುವ ಧರ್ಮರಾಯನನ್ನು ಕಂಡ ಅಭಿಮನ್ಯು ತನಗೆ ಅಪ್ಪಣೆ ಕೊಡು ಎಂದು ಕೇಳುತ್ತಾನೆ.ಬಾಲಕನಾದ ಅವನನ್ನು ಕಳಿಸಲು ಧರ್ಮರಾಯನ ಮನಸ್ಸು ಒಪ್ಪುವುದಿಲ್ಲ. ವ್ಯೂಹಭೇದನದಲ್ಲಿ ಎದುರಾಗುವ ಕಷ್ಟವನ್ನು ವಿವರಿಸುತ್ತಾನೆ.ಆದರೆ ಅಭಿಮನ್ಯು ತನ್ನ ಪೌರುಷಕ್ಕೆ ಅದು ಸಮವಲ್ಲ ಎಂದು ಸಾಧಿಸಿದಾಗ ಧರ್ಮರಾಯ ಒಪ್ಪುತ್ತಾನೆ.ತಾವು ಅವನನ್ನು ಹಿಂಬಾಲಿಸುವ ಭರವಸೆ ನೀಡುತ್ತಾನೆ.ಇಲ್ಲಿಯೂ ಸಾರಥಿಯ ಸಂದೇಹವನ್ನು ತಳ್ಳಿಹಾಕಿದ ಅಭಿಮನ್ಯು ವ್ಯೂಹವನ್ನು ಪ್ರವೇಶಿಸುತ್ತಾನೆ.ಉಳಿದವರಿಗೆ ಪ್ರವೇಶಿಸಲು ಆಗದೆ ಅಭಿಮನ್ಯು ಒಂಟಿಯಾಗುತ್ತಾನೆ.
ಮೂಲದಲ್ಲಿ ಕೃಷ್ಣನ ತಂತ್ರದ ಸೂಚನೆ ಇಲ್ಲ.ಇದನ್ನು ಕುಮಾರವ್ಯಾಸ ಯಾಕೆ ತಂದ ಎಂಬುದು ತಿಳಿಯುವುದಿಲ್ಲ.ಅದರಿಂದ ಕಾವ್ಯದ ಅರ್ಥವ್ಯಾಪ್ತಿಯ ವಿಸ್ತಾರವಂತೂ ಆಗಿಲ್ಲ.ಮಹಾಭಾರತದ ಎಲ್ಲ ಮುಖ್ಯ ಘಟನೆಗಳಲ್ಲೂ ಕೃಷ್ಣನ ಕೈವಾಡವಿದೆ ಎಂಬುದನ್ನು ತೋರಿಸಲು ತಂದಿರಬಹುದು ಎಂದು ಊಹಿಸಬಹುದು.
ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ್ದಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳುತ್ತಾನೆ.ತಾವು ಉಳಿದ ಸೇನೆಯ ಜತೆ ಅವನನ್ನು ಹಿಂಬಾಲಿಸಿ ಕಾಪಾಡುತ್ತೇವೆ ಎಂಬ ಭರವಸೆಯನ್ನು ಧರ್ಮರಾಯ ಮತ್ತು ಭೀಮ ನೀಡುತ್ತಾರೆ. ಮೂಲದಲ್ಲಿ ಅಭಿಮನ್ಯುವಿನ  ಈ ವ್ಯಾವಹಾರಿಕ ಎಚ್ಚರ,ಅವನ ಪೌರುಷದ ಜೊತೆಗೇ ನಿರೂಪಿತವಾಗಿದೆ.
ಕುಮಾರವ್ಯಾಸನಲ್ಲಿ ತನ್ನ ವೀರತ್ವವನ್ನು ಘೋಷಿಸಿ ಅಭಿಮನ್ಯುವೇ ಧರ್ಮರಾಯನನ್ನು ವಿನಂತಿಸುತ್ತಾನೆ. ಮೊದಲಿಗೆ ಧರ್ಮರಾಯ ವಿರೋಧಿಸಿದರೂ ಅಭಿಮನ್ಯುವಿನ ಒತ್ತಾಯಕ್ಕೆ ಒಪ್ಪುತ್ತಾನೆ.ಮೂಲಕ್ಕಿಂತ ಹೆಚ್ಚಿನ ವಿವರದಲ್ಲಿ ಅಭಿಮನ್ಯುವಿನ ಶೌರ್ಯ ಚಿತ್ರಿತವಾಗಿದ್ದರೂ, ಮೂಲದಲ್ಲಿ ವ್ಯಕ್ತವಾಗುವ ವ್ಯಾವಹಾರಿಕ ಎಚ್ಚರ ಇಲ್ಲಿ ಕಂಡು ಬರುವುದಿಲ್ಲ. ಆ ಎಚ್ಚರ ಧರ್ಮರಾಯನಲ್ಲಿ ಇದೆ. ಆದರೆ ಅಷ್ಟೆಲ್ಲ ವಿರೋಧಿಸಿದ ಧರ್ಮರಾಯ ಕೊನೆಗೆ ಒಪ್ಪಲು ಏನು ಕಾರಣ ಎಂಬುದು ತಿಳಿಯುವುದಿಲ್ಲ.ವ್ಯೂಹಭೇದನ ಅನಿವಾರ್ಯವಾಗಿತ್ತು ಎಂಬುದು ಆತ ಒಪ್ಪಲು ಕಾರಣವಾದರೆ ಆ ಅನಿವಾರ್ಯತೆ ಅಭಿಮನ್ಯುವನ್ನು ಮೊದಲು ವಿರೋಧಿಸುವಾಗಲೂ ಇತ್ತು.
      ಮೊದಲು ಒಪ್ಪದ, ಅನಂತರ ಒಪ್ಪುವ ಧರ್ಮರಾಯನ ವರ್ತನೆಯ ನಡುವೆ ಅವನ ಅಭಿಪ್ರಾಯ ಬದಲಾಗಲು ಯಾವುದು ಕಾರಣ ಎಂಬ ಅಂಶ ಕುಮಾರವ್ಯಾಸನಲ್ಲಿ ಸ್ಪಷ್ಟವಾಗಿಲ್ಲ.ಈ ರೀತಿಯ ಗೊಂದಲ ಮೂಲದಲ್ಲಿ ಇಲ್ಲ.ಅಲ್ಲಿ ಧರ್ಮರಾಯ ವಿನಂತಿಸುತ್ತಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳಿ,ತನಗೊದಗಬಹುದಾದ ಆಪತ್ತಿನ ಬಗ್ಗೆ ಹೇಳಿದಾಗ ಧರ್ಮರಾಯ ಮತ್ತು ಭೀಮ ತಾವು ಬೆಂಬಲಕ್ಕೆ ಬರುವ ಭರವಸೆ ನೀಡುತ್ತಾರೆ.ಅಂದರೆ ಮೂಲದಲ್ಲಿ ಅಭಿಮನ್ಯುವಿಗೆ ತನ್ನ ಶಕ್ತಿ ಮತ್ತು ಮಿತಿ ಎರಡರ ಬಗ್ಗೆಯೂ ತಿಳಿವಳಿಕೆ ಇದೆ.ಹಾಗಾಗಿಯೇ ಧರ್ಮರಾಯ,ಭೀಮ ಇಬ್ಬರೂ ಬೆಂಬಲಿಸುವ ಭರವಸೆ ನೀಡಿದ ಅನಂತರ ವ್ಯೂಹಭೇದನಕ್ಕೆ ಒಪ್ಪುತ್ತಾನೆ.ಕುಮಾರವ್ಯಾಸನ ಅಭಿಮನ್ಯು ಅದರ ಅಗತ್ಯವೇ ಇಲ್ಲ ಎಂಬಂತೆ ಮಾತಾಡಿದ್ದಾನೆ.ಅಭಿಮನ್ಯು ವ್ಯಾಸರಲ್ಲಿ ವೀರ ಮತ್ತು ವಿವೇಕಿ ಎಂಬಂತೆ ಚಿತ್ರಿತವಾಗಿದ್ದರೆ ಕುಮಾರವ್ಯಾಸನಲ್ಲಿ ವೀರ ಎಂಬಂತೆ ಮಾತ್ರ ಚಿತ್ರಿತವಾಗಿದೆ.ಕುಮಾರವ್ಯಾಸನ ಅಭಿಮನ್ಯು ಒಂದು ಮಗ್ಗುಲನ್ನು ಕಳೆದುಕೊಂಡಿದ್ದಾನೆ.
ಇನ್ನೊಂದು ಅಂಶವನ್ನೂ ಗಮನಿಸಬಹುದು. ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ ಕಾರಣ ಅವನ ಮರಣದ ಜವಾಬ್ದಾರಿಯನ್ನು ಧರ್ಮರಾಯ ಹೊರಬೇಕಾಗಿದೆ. ಕುಮಾರವ್ಯಾಸನಲ್ಲಿ ಅಭಿಮನ್ಯುವೇ ತನ್ನ ಮರಣಕ್ಕೆ ಜವಾಬ್ದಾರನಾಗುತ್ತಾನೆ.ಹಾಗಾಗಿ ವ್ಯಾಸರಲ್ಲಿ ಧರ್ಮರಾಯನನ್ನು ಕಾಡುವಪಾಪಪ್ರಜ್ಞೆಕುಮಾರವ್ಯಾಸನಲ್ಲಿ ಕಾಡಬೇಕಿಲ್ಲ.
ವ್ಯಾಸರಲ್ಲಿ ಚಕ್ರವ್ಯೂಹದೊಳಗೆ..
೧] ಅಭಿಮನ್ಯುವಿನ ಯುದ್ಧದ ಬಿರುಸಿನಿಂದ ಎಲ್ಲರೂ ಬಸವಳಿದಾಗ ಕರ್ಣ ದ್ರೋಣರ ಬಳಿ ಹೋಗಿ ತನಗೆ ಇವನ ಜೊತೆ ಯುದ್ಧ ಮಾಡಲು ಆಗುತ್ತಿಲ್ಲ, ಇವನನ್ನು ನಿಯಂತ್ರಿಸುವುದು ಹೇಗೆ ಎಂದು ಕೇಳುತ್ತಾನೆ. ಕೈಯಲ್ಲಿ ಬಿಲ್ಲು ಇರುವವರೆಗೆ ಅವನನ್ನು ನಿಯಂತ್ರಿಸಲು ಆಗದು.ಸಾಧ್ಯವಾದರೆ ಬಿಲ್ಲನ್ನು ಕತ್ತರಿಸು.ಬೇಕಿದ್ದರೆ ಹಿಂದಿನಿಂದ ಅವನ ಮೇಲೆ ದಾಳಿ ಮಾಡು ಎಂದು ದ್ರೋಣರು ಅನ್ನುತ್ತಾರೆ. ಕುಮಾರವ್ಯಾಸಲ್ಲಿ ಇರುವಂತೆ ನಾವೆಲ್ಲಾ ಸೇರಿ ಅವನ ಮೇಲೆ ಒಟ್ಟಿಗೇ ಯುದ್ಧ ಮಾಡುವ ಎಂದು ದ್ರೋಣರು ಹೇಳಿಲ್ಲ.ಕರ್ಣ ಬಿಲ್ಲನ್ನು ಕತ್ತರಿಸುತ್ತಾನೆ. ಆದರೆ ಆತ ಹಿಂದಿನಿಂದ ಕತ್ತರಿಸಿದ ಎಂಬ ಸೂಚನೆ ವ್ಯಾಸರಲ್ಲಿ ಇಲ್ಲ.ಆದ್ದರಿಂದ ಕರ್ಣ ಎದುರಿಗೆ ನಿಂತೇ ಬಿಲ್ಲು ಕತ್ತರಿಸಿದ್ದಾನೆ ಎಂದು ಭಾವಿಸಬೇಕಾಗುತ್ತದೆ.
(ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಗಮನಿಸಬಹುದು.೧] ಅಭಿಮನ್ಯು ’ಹಿಂದಿನಿಂದ ಕತ್ತರಿಸಿದೆಯಲ್ಲ ಕರ್ಣ’  ಎಂಬ ಮಾತನ್ನು ಆಡಿಲ್ಲ.೨] ಕರ್ಣವಧೆಯ ಸಂದರ್ಭದಲ್ಲಿ, ಕರ್ಣ ಮಾಡಿದ ಅನ್ಯಾಯವನ್ನು ಪಟ್ಟಿ ಮಾಡುವಾಗ ಹಿಂದಿನಿಂದ ಬಿಲ್ಲು ಕತ್ತರಿಸಿದೆ ಎಂದು ಕೃಷ್ಣ ಆಪಾದಿಸಿಲ್ಲ,ಬದಲಿಗೆ ನೀವು ಆರು ಜನ ಒಬ್ಬನನ್ನು ಕೊಂದದ್ದು ಧರ್ಮವೇ ಎಂದು ಕೇಳುತ್ತಾನೆ.
ಯದಾಭಿಮನ್ಯುಂ ಬಹವೋ ಯುದ್ಧೇ ಜಘ್ನುರ್ಮಹಾರಥಾಃ|
ಪರಿವಾರ್ಯ ರಣೇ ಬಾಲಂ ಕ್ವ ತೇ ಧರ್ಮಸ್ತದಾ ಗತಃ || ಕ.ಪ-ಅಧ್ಯಾಯ ೧೯,ಶ್ಲೋ-೧೧. ಯುದ್ಧದಲ್ಲಿ ಏಕಾಕಿಯಾಗಿದ್ದ ಬಾಲನಾದ ಅಭಿಮನ್ಯುವನ್ನು ಅನೇಕ ಮಹಾರಥರು ಸುತ್ತುವರಿದು ಸಂಹಾರಮಾಡಿದರು.ಆ ಸಮಯದಲ್ಲಿ ನಿನ್ನ ಧರ್ಮವು ಎಲ್ಲಿ ಹೋಗಿತ್ತು?)
೩] ಕರ್ಣ ಅಭಿಮನ್ಯುವಿನ ಕೈಯನ್ನು ಕತ್ತರಿಸುವುದು ವ್ಯಾಸರಲ್ಲಿ ಇಲ್ಲ.ಇದು ವಾಸ್ತವಿಕವಾದ ಚಿತ್ರಣ ಅನಿಸುತ್ತದೆ. ಕೈ ಇಲ್ಲದ ಅಭಿಮನ್ಯು ರಥದ ಚಕ್ರ ಹಿಡಿದು ಯುದ್ಧ ಮಾಡುವುದು ಅವಾಸ್ತವಿಕ ಅನಿಸುತ್ತದೆ. ವ್ಯಾಸರಲ್ಲಿ ಕೊನೆಗೆ ಅಭಿಮನ್ಯು ಮತ್ತು ದುಶ್ಯಾಸನನ ಮಗ ಗದಾಯುದ್ಧ ಮಾಡುತ್ತಾರೆ.ಇಬ್ಬರೂ ಪೆಟ್ಟಾಗಿ ನೆಲಕ್ಕುರುಳುತ್ತಾರೆ. ದುಶ್ಯಾಸನನ ಮಗ ಅಭಿಮನ್ಯುವಿಗಿಂತ ಮೊದಲು ಮೇಲೆದ್ದು ಅಭಿಮನ್ಯುವಿನ ತಲೆಗೆ ಗದೆಯಿಂದ ಪೆಟ್ಟು ಕೊಡುತ್ತಾನೆ.ಅಭಿಮನ್ಯು ಸಾಯುತ್ತಾನೆ. (ದುಶ್ಯಾಸನನ ಮಗನೂ ಸತ್ತದ್ದು ವ್ಯಾಸರಲ್ಲಿ ಇಲ್ಲ.)ಈ ವಿವರಣೆ ಸಹಜವಾಗಿದೆ.ಕುಮಾರವ್ಯಾಸನ ಚಿತ್ರಣದಂತೆ ಅತಿ ರಂಜಿತವಾಗಿಲ್ಲ.

ಕುಮಾರವ್ಯಾಸನಲ್ಲಿ ಚಕ್ರವ್ಯೂಹದೊಳಗೆ....
ಒಳಹೊಕ್ಕ ಅಭಿಮನ್ಯು ಭೀಕರವಾಗಿ ಯುದ್ಧಮಾಡಿ ಕೌರವ ಪಕ್ಷದ ಎಲ್ಲ ಅತಿರಥ,ಮಹಾರಥರನ್ನು ಸೋಲಿಸುತ್ತಾನೆ.ದ್ರೋಣ, ಶಲ್ಯ,ಕರ್ಣ,ಅಶ್ವತ್ಥಾಮ,ದುರ್ಯೋಧನ ಇತ್ಯಾದಿಯಾಗಿ ಯಾರಿಗೂ ಅವನ ಸಮನಾಗಿ ಯುದ್ಧ ಮಾಡಲು ಆಗುವುದಿಲ್ಲ.ಹತಾಶನಾದ ದುರ್ಯೋಧನ ಎಲ್ಲರನ್ನು ಹೀಯಾಳಿಸುತ್ತಾನೆ. ಆಗ ದ್ರೋಣರು ಒಬ್ಬರಿಂದ ಇವನನ್ನು ಸಂಹರಿಸಲು ಆಗುವುದಿಲ್ಲ.ನಾವು ಆರು ಜನಸೇರಿ ಏಕಕಾಲದಲ್ಲಿ ಯುದ್ಧ ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹಾಗಿದ್ದೂ ಅಭಿಮನ್ಯುವನ್ನು ಸೋಲಿಸಲು ಆಗುವುದಿಲ್ಲ.ಆಗ ಕರ್ಣನನ್ನು ಕರೆದು ನೀನು ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸು ಎಂದು ಸೂಚಿಸುತ್ತಾರೆ.(.........ಇದಿರೊಳಾನಿಹೆ ಶಲ್ಯನೆಡವಂಕದಲಿ ಬಲದಲಿ ಕೃಪನಪರಭಾಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ||ದ್ರೋ.ಪ.ಸಂ-೬,ಪ-೨೮).ಇದು ಯುದ್ಧನೀತಿಯಲ್ಲ ಎಂಬುದು ದ್ರೋಣನಿಗೆ ಗೊತ್ತು.ಕರ್ಣನೂ ಈ ಸಲಹೆಯನ್ನು ಒಪ್ಪದಿರಬಹುದು ಎಂಬ ಅನುಮಾನವಿದೆ. ಇದು ಸ್ವಾಮಿಕಾರ್ಯ,ಕೌರವನ ಉಳಿವಿಗೆ ಅನಿವಾರ್ಯ ಎಂಬ ಮಾತನಾಡಿ ಕರ್ಣನನ್ನು ಭಾವನಾತ್ಮಕವಾಗಿ ಬಂಧಿಸುತ್ತಾನೆ.(.....ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು ರೂಪುದೋರದೆ ಬಂದು ಸುಭಟನ ಚಾಪವನು ಖಂಡಿಸುವುದಿದು ಕುರುಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ||ಪ-೨೯).
    
***
ದ್ರೋಣ ಅಪರಭಾಗದಿಂದ ಬಂದು ಬಿಲ್ಲನ್ನು ಖಂಡಿಸಲು ಕರ್ಣನನ್ನು ಆಯಲು ಈ ಕಾರಣಗಳು ಇವೆ ಎಂದು ಊಹಿಸಬಹುದು.
೧] ಕ್ಷತ್ರಿಯ ಶಲ್ಯ ಮತ್ತು ಬ್ರಾಹ್ಮಣ ಕೃಪ ದ್ರೋಣರ ಸಲಹೆಯನ್ನು ಅನೀತಿ ಎಂದು ತಿರಸ್ಕರಿಸಬಹುದು. ಉಚ್ಚಕುಲದ ಅವರಿಗೆ ನೀತಿಯಲ್ಲದ ಕೆಲಸ ಸೂಚಿಸುವುದು ಸರಿಯಲ್ಲ.  ಮತ್ತು ಅವರು ಯಾರೂ ಮನಃಪೂರ್ವಕವಾಗಿ ದುರ್ಯೋಧನನ ಪಕ್ಷದಲ್ಲಿ ಇದ್ದವರಲ್ಲ.
೨] ಸ್ವಾಮಿನಿಷ್ಠೆ ಮತ್ತು ಕೌರವನ ಉಳಿವಿನ ಬಗ್ಗೆ ಕರ್ಣನಿಗೆ ಇರುವ ಭಾವನೆ ಉಳಿದವರಿಗೆ ಇಲ್ಲ.ಅವರಿಗೆ ಇರುವುದು ಋಣಪ್ರಜ್ಞೆ ಮಾತ್ರ.ಹಾಗಾಗಿ ನಾವು ಯುದ್ಧ ಮಾಡುತ್ತೇವೆ,ಆದರೆ ನೀತಿ ರಹಿತವಾಗಿ ಅಲ್ಲ ಎಂದು ಅವರು ಹೇಳಿದರೆ ಅದನ್ನು ತಪ್ಪು ಅನ್ನುವಂತಿಲ್ಲ.ಅದಲ್ಲದೆ ಅವರನ್ನು ಸ್ವಾಮಿನಿಷ್ಠತೆಯ ಹೆಸರಲ್ಲಿ ಪ್ರೇರೇಪಿಸಲು ಆಗುವುದಿಲ್ಲ.
೩] ಕರ್ಣನ ಜಾತಿಯ ಹಿನ್ನೆಲೆಯೂ ದ್ರೋಣರ ಮನಸ್ಸಲ್ಲಿ ಇತ್ತೇ?ತಾವು ಮತ್ತು ಕೃಪ ಬ್ರಾಹ್ಮಣರು,ಶಲ್ಯ ಕ್ಷತ್ರಿಯ.ತಾವು ಅನೀತಿಯ ಮಾರ್ಗ ಅವಲಂಬಿಸುವುದು ತಪ್ಪು,ಆದರೆ ಸೂತಕುಲಜನಾದ ಕರ್ಣ ಹಾಗೆ ಮಾಡುವುದು ತಪ್ಪಲ್ಲ ಎಂಬ ಭಾವನೆಯೂ ಇರಬಹುದು.
೪] ಹಿಂದಿನಿಂದ ಬಿಲ್ಲನ್ನು ಕಾತರಿಸುವುದೂ ಕೂಡ ಸಾಮಾನ್ಯ ಯೋಧರಿಗೆ ಅಸಾಧ್ಯವಾದುದರಿಂದ ದ್ರೋಣರು ಕರ್ಣನನ್ನು ಆಯ್ಕೆ ಮಾಡಿದರು ಎಂಬ ಮಾತೂ ಇದೆ. ಇದನ್ನು ಒಪ್ಪುವುದು ಕಷ್ಟ.ಕೃಪ,ಶಲ್ಯರು ಮಹಾ ಯೋಧರೇ.ಸ್ವತಃ ದ್ರೋಣರೂ ಮಹಾ ಯೋಧರೇ. ಹಾಗಿರುವಾಗ ಕರ್ಣನ್ನು ಆಯ್ಕೆ ಮಾಡಲು ಅವನ ಕುಲವೇ ಕಾರಣವಾಗಿರಬಹುದು ಎಂಬುದು ಹೆಚ್ಚು ಸಹಜವಾಗಿದೆ.
***
ಕರ್ಣ ಹಿಂಜರಿಯುತ್ತಾನೆ. ಅವನು ಬಿಲ್ಲನ್ನು ಖಂಡಿಸುತ್ತಾನೆ ಎಂಬ ಭರವಸೆಯಿಂದ ಎದುರಾದ ಶಲ್ಯ,ಕೃಪರು ಮತ್ತೆ ಪೆಟ್ಟು ತಿಂದು ಕರ್ಣನನ್ನು ದೂಷಿಸುತ್ತಾರೆ. ಕರ್ಣನ ದ್ವಂದ್ವ ಮನಸ್ಥಿತಿ ಹಿಂಜರಿಕೆಗೆ ಕಾರಣ. ಅಭಿಮನ್ಯು ತನ್ನ ಮಗನ ಸಮಾನ ಎಂಬ ಭಾವ ಇದೆ.ಹಾಗಂತ ಈತನನ್ನು ಕೊಲ್ಲದಿದ್ದರೆ ಒಡೆಯ ಕೌರವನಿಗೆ ಉಳಿವಿಲ್ಲ.ಹಿಂದಿನಿಂದ ಬಿಲ್ಲನ್ನು ಕತ್ತರಿಸುವ ಅನೀತಿಗೆ ಕರ್ಣನ ಮನಸ್ಸು ಇಲ್ಲಿ ಅಳುಕುತ್ತಿಲ್ಲ, ಮಗ ಎಂಬ ಮಮಕಾರ ಬಲಿತರೆ ಕೌರವ ಉಳಿಯಲಾರ ಎಂಬ ಬೌದ್ಧಿಕ ತಿಳಿವಳಿಕೆಯೇ ಭಾವಕ್ಕಿಂತ ಪ್ರಬಲವಾಗಿ ಆತ ಅಪರಭಾಗದಿಂದ ಬಿಲ್ಲನ್ನು ಕತ್ತರಿಸುತ್ತಾನೆ. ಮಗನ ಉಳಿವಿಗಿಂತ ಮಿತ್ರನ ಉಳಿವಿಗೆ ಮನಸ್ಸು ಮಾಡುತ್ತಾನೆ.ಅಭಿಮನ್ಯು ಅವನನ್ನು ವ್ಯಂಗ್ಯವಾಗಿ ಚುಚ್ಚುತ್ತಾನೆ.(ಆವ ಶರಸಂಧಾನ ಲಾಘವದಾವ ಪರಿ......ಸಂ-೬,ಪ-೩೪)
ಅಭಿಮನ್ಯು ಖಡ್ಗದಿಂದ ಯುದ್ಧ ಶುರುಮಾಡುತ್ತಾನೆ.ಕರ್ಣ ಆಗ ಅವನ ಕರವೆರಡನ್ನು ಕತ್ತರಿಸುತ್ತಾನೆ. ಮೊಂಡುಕೈಯಿಂದ ಚಕ್ರವನ್ನು ಹಿಡಿದು ಅಭಿಮನ್ಯು ಯುದ್ಧವನ್ನು ಮುಂದುವರಿಸುತ್ತಾನೆ.ದುಶ್ಯಾಸನನ ಮಗ ಎದುರಾಗುತ್ತಾನೆ.ಇಬ್ಬರೂ ಯುದ್ಧದಲ್ಲಿ ಮಡಿಯುತ್ತಾರೆ.
ನೀತಿಯುದ್ಧದ ನಿಯಮ ಇಲ್ಲಿ ಮೀರಿದಂತೆ ಕುಮಾರವ್ಯಾಸ ಚಿತ್ರಿಸಿದ್ದಾನೆ.ಆರುಜನ ರಥಿಕರು ಒಬ್ಬನ ಬಳಿ ಯುದ್ಧ ಮಾಡುವುದು,ಕರ್ಣ ಹಿಂದಿನಿಂದ ಬಾಣ ಬಿಡುವುದು ಇವು ನಿಯಮಗಳಲ್ಲ.ಅಭಿಮನ್ಯುವಿನ ವೀರತ್ವವನ್ನು ಅತಿಕರಿಸುವ ಉತ್ಸಾಹದಲ್ಲಿ ಕುಮಾರವ್ಯಾಸ ಕರ್ಣನ ಘನತೆಯನ್ನು ಕುಗ್ಗಿಸಿದ್ದಾನೆ. ಈ ಮಾತು ವ್ಯಾಸರು ಚಿತ್ರಿಸಿದ ರೀತಿಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.
***
***
ಕುಮಾರವ್ಯಾಸ ಅಭಿಮನ್ಯುವಿನ ವೀರತ್ವ ಚಿತ್ರಿಸುತ್ತಾನೆ,ಅವನ ವಿವೇಕವನ್ನು ಚಿತ್ರಿಸಿಲ್ಲ. ಅವನ ವೀರತ್ವ ಚಿತ್ರಿಸುವಾಗ ತನ್ನನ್ನು ತಾನೇ ಮರೆತಂತೆ ತೋರುತ್ತದೆ.ವ್ಯಾಸರು ಆ ರೀತಿಯಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ.ಅವರ ಅಭಿಮನ್ಯು ವೀರ ಮತ್ತು ವಿವೇಕಿ.ವ್ಯಾಸರಲ್ಲಿ ಅಭಿಮನ್ಯುವಿನ ಸಾವಲ್ಲಿ ಧರ್ಮರಾಯ ಮತ್ತು ಭೀಮರ ಪಾಲೂ ಇದೆ. ಕುಮಾರವ್ಯಾಸನಲ್ಲಿ ಅಭಿಮನ್ಯು ತನ್ನ ಸಾವಿಗೆ ತಾನೇ ಜವಾಬ್ದಾರ.
***
ಇಲ್ಲಿ ವ್ಯಾಸರ ಚಿತ್ರಣವನ್ನು ವಿವರಿಸಲು ಭಾರತ ದರ್ಶನ ಮುದ್ರಣಾಲಯದವರ ಅನುವಾದವನ್ನು ಆಧರಿಸಲಾಗಿದೆ.
ದ್ರೋಣ ಪರ್ವ,೩೩ ನೆಯ ಅಧ್ಯಾಯದಿಂದ ೪೯ನೆಯ ಅಧ್ಯಾಯದವರೆಗೆ.

7 comments:

sunaath said...

ಪ್ರಿಯ ಮೃತ್ಯಂಜಯ ಹೊಸಮನೆಯವರೆ,
ವ್ಯಾಸ ಮತ್ತು ಕುಮಾರವ್ಯಾಸರ ವರ್ಣನೆಗಳ ವ್ಯತ್ಯಾಸಗಳನ್ನು ಸೊಗಸಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು.
ಬಹುಶಃ ನೀವು ‘ಪದಾರ್ಥ ಚಿಂತಾಮಣಿ’ ಹಾಗು ‘ವಾಗರ್ಥ’ ಎನ್ನುವ facebook ಗುಂಪುಗಳ ಸದಸ್ಯರಾಗಿದ್ದಂತೆ ತೋರುವುದಿಲ್ಲ. ಈ ಗುಂಪುಗಳಿಗೆ ನೀವು ಸದಸ್ಯರಾದರೆ ಹಾಗು ನಿಮ್ಮ ಅಭಿಪ್ರಾಯಗಳನ್ನು ನೀಡುತ್ತಲಿದ್ದರೆ, ಈ ಗುಂಪುಗಳ ಇತರ ಸದಸ್ಯರಿಗೆ ಬಹಳಷ್ಟು ಪ್ರಯೋಜನವಾಗುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಈಗಾಗಲೇ ನೀವು ಸದಸ್ಯರಾಗಿಲ್ಲದಿದ್ದರೆ, ಈಗಲಾದರೂ ಸದಸ್ಯರಾಗಿರಿ ಎಂದು ನಿಮ್ಮನ್ನು ವಿನಂತಿಸುತ್ತೇನೆ. ನಿಮ್ಮನ್ನು ಈ ಗುಂಪುಗಳಿಗೆ ಪರಿಚಯಿಸುವ ಸುಸಂದರ್ಭ ನನ್ನದಾಗಲಿ. ದಯವಿಟ್ಟು ನನ್ನ ಈ-ವಿಳಾಸಕ್ಕೆ ಉತ್ತರ ಬರೆಯಿರಿ:
sunaath@gmail.com
ವಂದನೆಗಳು,
-ಸುನಾಥ

ಮೃತ್ಯುಂಜಯ ಹೊಸಮನೆ. said...

ಪ್ರಿಯ ಸುನಾಥ್,
ನಮಸ್ಕಾರಗಳು.ನನ್ನೆಲ್ಲ ಲೇಖನಗಳ ಬಗ್ಗೆ ನೀವು ತೋರುತ್ತಿರುವ ಅಭಿಮಾನಕ್ಕೆ ಋಣಿ. ನಾನು ಫೇಸ್ ಬುಕ್ ಖಾತಾದಾರನಲ್ಲ.ನೀವು ಸೂಚಿಸಿದವುಗಳನ್ನು ನೋಡಿ ಅನಂತರ ನಿಮ್ಮನ್ನ ಸಂಪರ್ಕಿಸುತ್ತೇನೆ. ಅದೀತೆ?

sunaath said...

ಎಸ್, ಸsರ್!

raghupathi said...

ವಿವರಣೆ ತುಂಬಾ ಚೆನ್ನಾಗಿದೆ..ಆದರೆ ಚಕ್ರವ್ಯೂಹ ಬಗ್ಗೆ ಕೃಷ್ಣ ಗರ್ಭಸ್ತ ಶಿಶುವಿಗೆ ತಿಳಿಸಿದ್ದೆನ್ನುವ ಬಹು ಪ್ರಚಾರಿತ ಕತೆ ಎಲ್ಲಿಂದ ಬಂದಿದ್ದು..?

raghupathi said...

ವಿವರಣೆ ತುಂಬಾ ಚೆನ್ನಾಗಿದೆ..ಆದರೆ ಚಕ್ರವ್ಯೂಹ ಬಗ್ಗೆ ಕೃಷ್ಣ ಗರ್ಭಸ್ತ ಶಿಶುವಿಗೆ ತಿಳಿಸಿದ್ದೆನ್ನುವ ಬಹು ಪ್ರಚಾರಿತ ಕತೆ ಎಲ್ಲಿಂದ ಬಂದಿದ್ದು..?

ಮೃತ್ಯುಂಜಯ ಹೊಸಮನೆ.. said...

ಅದರ ಮೂಲ ಯಾವುದು ಎಂಬುದು ಗೊತ್ತಿಲ್ಲ..ಭಾಗವತದಲ್ಲಿ ಇರಬಹುದ? ಅಥವಾ ಭಾರತದ ಮತ್ತಾವುದೋ ಪಾಠಾಂತರದಲ್ಲಿರಬಹುದೇನೋ..ನಾನು ಆ ಕತೆ ಕೇಳಿದ್ದೇನೆ..

henrysmith said...

yaa agree that above information and good information sharing blog

Latest Karnataka News